ಬಂಡವಾಳಶಾಹಿ ಮಾಲೀಕರನ್ನು ಎದುರುಹಾಕಿಕೊಂಡು ಬಡಪಾಯಿ ಕಾರ್ಮಿಕರ ಸಂಘಟನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಕಳೆದ ಸಂಚಿಕೆಯಲ್ಲಿ ಮಾಲೀಕರ ಗೂಂಡಾಗಳಿಂದ ಕಾರ್ಮಿಕ ನಾಯಕರ ಮೇಲೆ ಎಂತಹ ಹಲ್ಲೆಗಳು ನಡೆದವು ಎಂಬುದನ್ನು ವಿವರಿಸಿದ್ದೆ. ಈ ಸಂಚಿಕೆಯಲ್ಲಿ ಕಾರ್ಮಿಕ-ಕಮ್ಯುನಿಷ್ಟ್ ಚಳವಳಿಯ ಏಳು-ಬೀಳಿನ ಕಥನ ಶುರು ಮಾಡುವುದಕ್ಕು ಮೊದಲು, ಕಾರ್ಮಿಕ ಐಕ್ಯತೆಯನ್ನು ಒಡೆಯುವ ಮಾಲೀಕ ವರ್ಗ ಇನ್ನೊಂದು ನಿದರ್ಶನವನ್ನು ಹೇಳಿಬಿಡುತ್ತೇನೆ. ಮೊದಲು ಕಾರ್ಮಿಕ ನಾಯಕರನ್ನು ಹೆದರಿಸಲು ನೋಡಿದರು. ಅದಕ್ಕೆ ಜಗ್ಗದಿದ್ದಾಗ, ಕಾರ್ಮಿಕ ನಾಯಕತ್ವದಲ್ಲೇ ಪರ್ಯಾಯ ಆಯ್ಕೆಗಳನ್ನು ಸೃಷ್ಟಿಸಿ ಕಾರ್ಮಿಕರನ್ನು ಗೊಂದಲಗಳಿಸಲು ನೋಡಿದ ಉದಾಹರಣೆ ಇದು.
ದಾವಣಗೆರೆಯಲ್ಲಿ ಕಾರ್ಮಿಕ ಸಂಘಟನೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿತ್ತು. ಹತ್ತಾರು ಹತ್ತಿ ಗಿರಣಿಗಳು, ಜಿನ್ನಿಂಗ್ ಮಿಲ್ಗಳು ಮತ್ತು ಅವುಗಳನ್ನು ಅವಲಂಬಿಸಿದ್ದ ಸಾವಿರಾರು ಕಾರ್ಮಿಕರ ನಡುವೆ AITUC ತನ್ನ ಸಂಘಟನಾ ವ್ಯಾಪ್ತಿಯನ್ನು ವಿಸ್ತರಿಸುತ್ತಿತ್ತು. ಕಾರ್ಮಿಕರ ಹಕ್ಕುಗಳಿಗಾಗಿ ನಡೆಯುತ್ತಿದ್ದ ಹೋರಾಟ ಕೇವಲ ವೇತನ, ಕೆಲಸದ ಅವಧಿ ಅಥವಾ ಉದ್ಯೋಗ ಭದ್ರತೆಯ ಪ್ರಶ್ನೆಯಾಗಿರಲಿಲ್ಲ. ಅದು ಕ್ರಮೇಣ ನಗರದ ಸಾಮಾಜಿಕ ಮತ್ತು ರಾಜಕೀಯ ಶಕ್ತಿಸಮೀಕರಣವನ್ನೇ ಬದಲಿಸುವ ಚಳವಳಿಯಾಗಿ ಬೆಳೆಯುತ್ತಿತ್ತು.
ದಾವಣಗೆರೆಗೆ ಹೊಂದಿಕೊಂಡಂತಿರುವ ಹರಿಹರವೂ ಕಾರ್ಖಾನೆಗಳ ನೆಲ. ಅಲ್ಲಿನ ಕಿರ್ಲೋಸ್ಕರ್ ಕಂಪನಿಯಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಾವಣಗೆರೆಯ ಕಾರ್ಮಿಕ ನಾಯಕತ್ವಗಳ ಪ್ರಭಾವ ಇಲ್ಲಿಗೂ ವ್ಯಾಪಿಸಿದರೆ ಕಾರ್ಮಿಕರು ಸಂಘಟಿತರಾಗಬಹುದೆಂದು ಅಂದಾಜಿಸಿದ ಆಡಳಿತ ವರ್ಗ ಒಂದು ಉಪಾಯ ರೂಪಿಸಿತು. ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವ ಶಿವಾನಂದಸ್ವಾಮಿಯ ನೇತೃತ್ವದಲ್ಲಿ ಪರ್ಯಾಯ ಕಾರ್ಮಿಕ ಸಂಘಟನೆಯನ್ನು ಪ್ರೋತ್ಸಾಹಿಸಿದರು. ಈ ಪರ್ಯಾಯ ನಾಯಕತ್ವದ ಸಂಘಟನಾ ಕಾರ್ಯವೈಖರಿ ಮತ್ತು ಕಾರ್ಮಿಕ ಹೋರಾಟಗಳ ಬಗೆಗಿನ ನಿಲುವುಗಳು ಎಡಪಂಥೀಯ ಕಾರ್ಮಿಕ ಚಳವಳಿಯ ಸಾಂಪ್ರದಾಯಿಕ ಸ್ವರೂಪಕ್ಕಿಂತ ಭಿನ್ನವಾಗಿದ್ದವು ಎಂಬ ಅಭಿಪ್ರಾಯವೂ ಆಗಿನ ಕಾರ್ಮಿಕ ವಲಯದಲ್ಲಿತ್ತು. ಕಾರ್ಮಿಕರ ಹಕ್ಕುಗಳಿಗಾಗಿ ಮಾಲೀಕರನ್ನು ಎದುರುಹಾಕಿಕೊಳ್ಳುವ ಹೋರಾಟದ ಬದಲು, ಮಾಲೀಕರೊಂದಿಗೆ ಸಂಘರ್ಷವಿಲ್ಲದ ಸಂಬಂಧಕ್ಕೆ ಆದ್ಯತೆ ನೀಡುವ ಸಂಘಟನೆಯಾಗಿ ಅದು ಗುರುತಿಸಿಕೊಂಡಿತ್ತು.
ಗಿರಣಿ ಮಾಲೀಕರ ವಲಯದಲ್ಲೂ ಶಿವಾನಂದಸ್ವಾಮಿ ಅವರನ್ನು ಪ್ರಬಲ ಎಡಪಂಥೀಯ ಕಾರ್ಮಿಕ ನಾಯಕನಾಗಿ ಗುರುತಿಸಲಾಗುತ್ತಿರಲಿಲ್ಲ. ಆದರೂ AITUCಗೆ ಪರ್ಯಾಯವಾಗಿ ಮತ್ತೊಂದು ಕಾರ್ಮಿಕ ಸಂಘಟನೆ ಅಸ್ತಿತ್ವದಲ್ಲಿರುವುದು ಕೆಲವು ಕೈಗಾರಿಕಾ ವಲಯಗಳಿಗೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಾನಂದಸ್ವಾಮಿ ನೇತೃತ್ವದ ಸಂಘಟನೆಗೆ ದಾವಣಗೆರೆಯ ಕೆಲವು ಗಿರಣಿ ಮತ್ತು ಜಿನ್ನಿಂಗ್ ಮಿಲ್ಗಳ ವಲಯದಿಂದ ಬೆಂಬಲ ದೊರೆಯುತ್ತಿತ್ತು.

ಶಿವಾನಂದ ಸ್ವಾಮಿ ಮತ್ತು ಕಾರ್ಮಿಕ ಮಾಲೀಕರ ನಡುವಿನ ಅವಿನಾಭಾವ ಸಂಬಂಧಕ್ಕೆ ಅಲ್ಲಿನ ಕಾರ್ಮಿಕರು ‘ಕೈಚೀಟಿ ವ್ಯವಸ್ಥೆ’ಯನ್ನು ನೆನಪು ಮಾಡಿಕೊಳ್ಳುತ್ತಾರೆ. ತನಗೆ ಬೇಕಾದವರನ್ನು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಶಿವಾನಂದ ಸ್ವಾಮಿ ಶಿಫಾರಸ್ಸು ಮಾಡಿದ ‘ಕೈ ಚೀಟಿ’ ಬರೆದು ಕಳಿಸುತ್ತಿದ್ದರು. ಆ ಚೀಟಿ ತಂದ ವ್ಯಕ್ತಿಗಳಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಲಾಗುತ್ತಿತ್ತು. ಆ ಮೂಲಕ ಶಿವಾನಂದ ಸ್ವಾಮಿಯ ಕಾರ್ಖಾನೆಯ ಕಾರ್ಮಿಕರೆಲ್ಲ ಶಿವಾನಂದ ಸ್ವಾಮಿಯ ಪ್ರಭಾವದಲ್ಲೆ ಇರುವಂತೆ ನೋಡಿಕೊಳ್ಳುವುದು ಲೆಕ್ಕಾಚಾರ. ಇಂತಹ ವ್ಯವಸ್ಥೆಯಿಂದ ಉದ್ಯೋಗ ಪಡೆದ ಕಾರ್ಮಿಕರು ನಂತರದ ದಿನಗಳಲ್ಲಿ AITUC ಸಂಘಟನೆಯ ಚಟುವಟಿಕೆಗಳಿಗೆ ಪ್ರತಿರೋಧ ಒಡ್ಡುವ ಸಾಧ್ಯತೆಯೂ ಇತ್ತು ಎಂಬುದು ಆಗಿನ ಕಾರ್ಮಿಕ ರಾಜಕಾರಣದ ಕುರಿತಾಗಿರುವ ಮಾತು. ಹೀಗಾಗಿ, ದಾವಣಗೆರೆಯ ಕಾರ್ಮಿಕ ಸಂಘಟನೆಗಳ ನಡುವಿನ ಸಂಘರ್ಷ ಕೇವಲ ಸಿದ್ಧಾಂತದ ಭಿನ್ನಾಭಿಪ್ರಾಯಕ್ಕೆ ಸೀಮಿತವಾಗಿರಲಿಲ್ಲ; ಅದರ ಹಿಂದೆ ಕಾರ್ಮಿಕರ ಮೇಲಿನ ಪ್ರಭಾವ, ಉದ್ಯೋಗದ ಅವಕಾಶಗಳು ಮತ್ತು ಮಾಲೀಕತ್ವದ ಹಿತಾಸಕ್ತಿಗಳೂ ಕೆಲಸ ಮಾಡುತ್ತಿದ್ದವು. ಆದರೆ AITUC ಎದುರಿಸುತ್ತಿದ್ದ ಸವಾಲುಗಳು ಇದಕ್ಕಿಂತಲೂ ದೊಡ್ಡದಾಗಿದ್ದವು.
ದಾವಣಗೆರೆಯಲ್ಲಿ ದಶಕಗಳಿಂದ ಅಸಂಘಟಿತರಾಗಿ ದುಡಿಯುತ್ತಿದ್ದ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಒಂದೇ ವೇದಿಕೆಯಡಿ ತರುವುದು ಸುಲಭದ ಕೆಲಸವಾಗಿರಲಿಲ್ಲ. ಕಾರ್ಖಾನೆ ಮಾಲೀಕರ ಪ್ರಭಾವ, ಕಾರ್ಮಿಕರ ಮೇಲಿನ ಶೋಷಣೆ, ಉದ್ಯೋಗ ಕಳೆದುಕೊಳ್ಳುವ ಭೀತಿ ಮತ್ತು ಪೊಲೀಸ್ ವ್ಯವಸ್ಥೆಯ ಒತ್ತಡಗಳ ನಡುವೆ ಸಂಘಟನೆ ಕಟ್ಟಬೇಕಿತ್ತು. ಈ ಹೋರಾಟದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕರು ತೀವ್ರ ಬೆಲೆ ತೆರಬೇಕಾಯಿತು.
ಪಂಪಾಪತಿಯವರ ಬಂಧನ, ಕಾರ್ಮಿಕರ ಮೇಲಿನ ಹಲ್ಲೆಗಳು, ಹೋರಾಟಗಳಲ್ಲಿ ಹರಿದ ರಕ್ತ ಮತ್ತು ಹೆಗ್ಗಪ್ಪನ ಹತ್ಯೆ ಪ್ರಕರಣದಲ್ಲಿ ತಿಪ್ಪೇಸ್ವಾಮಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಇವೆಲ್ಲವೂ ದಾವಣಗೆರೆಯ ಕಾರ್ಮಿಕ ಚಳವಳಿಯ ಕರಾಳ ಅಧ್ಯಾಯಗಳಾಗಿ ಉಳಿದಿವೆ. ಪಂಪಾಪತಿಯವರು ಕೂಡ ಹೋರಾಟದ ಸಂದರ್ಭದಲ್ಲಿ ತೀವ್ರ ಪೊಲೀಸ್ ಹಿಂಸೆ ಮತ್ತು ಚಿತ್ರಹಿಂಸೆಯನ್ನು ಎದುರಿಸಿದ್ದರು. ಇಂತಹ ಘಟನೆಗಳು ಕಾರ್ಮಿಕ ಸಂಘಟನೆ ಕಟ್ಟುವ ಕೆಲಸ ಎಷ್ಟು ಅಪಾಯಕಾರಿ ಮತ್ತು ಸಂಕಷ್ಟಪೂರ್ಣವಾಗಿತ್ತು ಎಂಬುದನ್ನು ತೋರಿಸುತ್ತವೆ.
ಆದರೆ ಈ ಹೋರಾಟದ ಆರಂಭಿಕ ಹಂತದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಮತ್ತೊಂದು ಕೊರತೆಯೂ ಇತ್ತು. ಕಾರ್ಮಿಕ ಸಂಘಟನೆಯ ಅನುಭವವಿದ್ದರೂ, ಕಮ್ಯುನಿಸ್ಟ್ ಸಿದ್ಧಾಂತವನ್ನು ಆಳವಾಗಿ ಅಧ್ಯಯನ ಮಾಡಿದ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಚಳವಳಿಗಳ ಇತಿಹಾಸದ ಅರಿವಿರುವ ನಾಯಕರ ಸಂಖ್ಯೆ ಸೀಮಿತವಾಗಿತ್ತು.
ಪಂಪಾಪತಿ, ಸುರೇಶ್, ಶೇಕ್ರಪ್ಪ ಸೇರಿದಂತೆ ಸ್ಥಳೀಯ ನಾಯಕರು ಸಂಘಟನಾ ಸಾಮರ್ಥ್ಯ ಮತ್ತು ಹೋರಾಟದ ಮನೋಭಾವದಿಂದ ಕಾರ್ಮಿಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಷ್ಯಾದ ಕಾರ್ಮಿಕ ಕ್ರಾಂತಿ, ಚೀನಾದ ಮಾವೋ ನೇತೃತ್ವದ ಕ್ರಾಂತಿ, ಲಾಂಗ್ ಮಾರ್ಚ್, ಫ್ರೆಂಚ್ ಕ್ರಾಂತಿಯಂತಹ ಜಾಗತಿಕ ರಾಜಕೀಯ ವಿದ್ಯಮಾನಗಳ ಸೈದ್ಧಾಂತಿಕ ಪರಿಚಯ ಸ್ಥಳೀಯ ನಾಯಕತ್ವದಲ್ಲಿ ಅಷ್ಟಾಗಿ ಬೆಳೆದಿರಲಿಲ್ಲ. ಆದರೂ ಅವರಲ್ಲಿದ್ದ ಸಂಘಟನಾ ಚಾತುರ್ಯ, ಕಾರ್ಮಿಕರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಗುಣ ಮತ್ತು ಹೋರಾಟದ ಛಲವನ್ನು ಕಡೆಗಣಿಸುವಂತಿರಲಿಲ್ಲ.
ದಿನಗಳು ಕಳೆದಂತೆ ಪಂಪಾಪತಿ ಮತ್ತು ಸುರೇಶ್ ಶೇಕ್ರಪ್ಪ ಅವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರು ಒಂದೇ ವೇದಿಕೆಗೆ ಬರತೊಡಗಿದರು. ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ ಮತ್ತು ಹಲ್ಲೆಗಳ ಸುದ್ದಿಗಳು ದಾವಣಗೆರೆಯ ಗಡಿಯನ್ನು ದಾಟಿ ಹೊರಜಗತ್ತಿನ ಗಮನ ಸೆಳೆಯತೊಡಗಿದವು. ಇದೇ ಸಂದರ್ಭದಲ್ಲಿ ಮುಂಬೈ, ಪುಣೆ ಸೇರಿದಂತೆ ಪ್ರಮುಖ ನಗರಗಳಲ್ಲಿ ನಡೆಯುತ್ತಿದ್ದ ಬೃಹತ್ ಕಾರ್ಮಿಕ ಮುಷ್ಕರಗಳು ಮತ್ತು ಹೋರಾಟಗಳು ಸ್ಥಳೀಯ ಕಾರ್ಮಿಕ ನಾಯಕರಿಗೂ ಸ್ಫೂರ್ತಿಯಾಗಿದ್ದವು. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಆಗಲೇ ಕಾರ್ಮಿಕ ಸಂಘಟನೆ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿದ್ದ ಕಮ್ಯುನಿಸ್ಟ್ ನಾಯಕತ್ವ ದಾವಣಗೆರೆಯ ಬೆಳವಣಿಗೆಗಳತ್ತ ಗಮನ ಹರಿಸಿತು. ಅಲ್ಲಿನ ಸ್ಥಳೀಯ ಹೋರಾಟಗಾರರೊಂದಿಗೆ ಸಂಪರ್ಕ ಬೆಳೆಸುವ ಮೂಲಕ ಅಸಂಘಟಿತ ಕಾರ್ಮಿಕರ ಹೋರಾಟಕ್ಕೆ ಅಧಿಕೃತ ಸಂಘಟನಾ ಮತ್ತು ರಾಜಕೀಯ ಬೆಂಬಲ ದೊರೆಯುವಂತಾಯಿತು.
ಇಲ್ಲಿಂದ ದಾವಣಗೆರೆಯ ಕಾರ್ಮಿಕ ಚಳವಳಿಗೆ ಹೊಸ ತಿರುವು ಸಿಕ್ಕಿತು. ಕೇವಲ ಸ್ಥಳೀಯ ನಾಯಕರ ಸಂಘಟನಾ ಸಾಮರ್ಥ್ಯವನ್ನು ಅವಲಂಬಿಸಿದ್ದ ಹೋರಾಟಕ್ಕೆ ಕಮ್ಯುನಿಸ್ಟ್ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶನವೂ ಸೇರ್ಪಡೆಯಾಯಿತು. ಕಾರ್ಮಿಕ ಸಂಘಟನೆಗೆ ಒಂದು ರಾಜಕೀಯ ನೆಲೆ ಮತ್ತು ರಾಷ್ಟ್ರಮಟ್ಟದ ಸಂಪರ್ಕ ದೊರೆಯಿತು. ಇದರ ಪರಿಣಾಮವಾಗಿ AITUC ಸಂಘಟನೆಗೆ ಆನೆಬಲ ಬಂದಂತಾಯಿತು.

ಆಗಿನ್ನೂ ಅಖಂಡವಾಗಿದ್ದ ಕಮ್ಯುನಿಸ್ಟ್ ಪಕ್ಷದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡವು. ಕೊನೆಗೆ 1964ರ ನವೆಂಬರ್ 7ರಂದು ಪಕ್ಷ ವಿಭಜನೆಗೊಂಡು CPI ಮತ್ತು CPI(M) ಎಂಬ ಎರಡು ಪ್ರತ್ಯೇಕ ರಾಜಕೀಯ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.ಆದರೆ ಈ ವಿಭಜನೆಯ ವೇಳೆಗೆ ದಾವಣಗೆರೆಯಲ್ಲಿ ಪಂಪಾಪತಿಯವರ ನೇತೃತ್ವದ ಕಾರ್ಮಿಕ ಸಂಘಟನೆ ಸಾಕಷ್ಟು ಬಲಿಷ್ಠವಾಗಿತ್ತು. ಸ್ಥಳೀಯ ಕಾರ್ಮಿಕ ಸಂಘಟನೆಯ ಬಹುಪಾಲು ನಾಯಕರು ಮತ್ತು ಕಾರ್ಯಕರ್ತರು CPI ಜೊತೆ ಗುರುತಿಸಿಕೊಂಡರು. ಹತ್ತಾರು ಮಿಲ್ಲುಗಳ ಸಾವಿರಾರು ಕಾರ್ಮಿಕರು ಮತ್ತು ಪಕ್ಷದ ಕಾರ್ಯಕರ್ತರು AITUC ಸಂಘಟನೆಯೊಂದಿಗೆ ಮುಂದುವರಿದರು.
ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಮತ್ತು ಮೈಸೂರು ಕಿರ್ಲೋಸ್ಕರ್ ಕಂಪನಿಗಳಲ್ಲಿ ಮಾತ್ರ CPI(M)ಗೆ ಸಂಬಂಧಿಸಿದ ಸಂಘಟನೆಗಳೂ ಪ್ರಭಾವ ಹೊಂದಿದ್ದವು. ಹೀಗಾಗಿ, ಎರಡು ಕಮ್ಯುನಿಸ್ಟ್ ಪಕ್ಷಗಳ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದರೂ, ದಾವಣಗೆರೆಯ ಕೈಗಾರಿಕಾ ಕಾರ್ಮಿಕ ವಲಯದಲ್ಲಿ CPI ಮತ್ತು AITUC ಪ್ರಾಬಲ್ಯವನ್ನು ಉಳಿಸಿಕೊಂಡವು.
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ CPI ಕೇಂದ್ರ ಕಚೇರಿಯಿಂದ ದಾವಣಗೆರೆಯ ಪಕ್ಷದ ಚಟುವಟಿಕೆಗಳಿಗೆ ಮಾರ್ಗದರ್ಶನ ಮತ್ತು ಸಂಘಟನಾ ನಿರ್ದೇಶನಗಳು ಬರತೊಡಗಿದವು. ಪಕ್ಷದ ಸಂಘಟನೆಯನ್ನು ಬಲಪಡಿಸಲು ಪೂರ್ಣಾವಧಿಯ ಕಾರ್ಯಕರ್ತರ ಅಗತ್ಯವೂ ಹೆಚ್ಚಾಯಿತು. ಆಗ ಸರ್ಕಾರಿ ಉದ್ಯೋಗದಲ್ಲಿದ್ದ ಆನಂದತೀರ್ಥ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಮ್ಯುನಿಸ್ಟ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಲು ಮುಂದಾದರು. ದಾವಣಗೆರೆಯಲ್ಲಿ ಪಕ್ಷದ ಕಾರ್ಮಿಕ ಸಂಘಟನೆಯ ಹೊಣೆಯನ್ನು ಅವರು ವಹಿಸಿಕೊಂಡರು. ಸ್ಥಳೀಯ ಹೋರಾಟಗಾರರ ಅನುಭವಕ್ಕೆ ಪಕ್ಷದ ಸಂಘಟನಾ ಶಿಸ್ತು ಮತ್ತು ಸೈದ್ಧಾಂತಿಕ ಮಾರ್ಗದರ್ಶನ ಸೇರ್ಪಡೆಯಾಗುವುದರೊಂದಿಗೆ ದಾವಣಗೆರೆಯ ಕಾರ್ಮಿಕ ಚಳವಳಿ ಮತ್ತಷ್ಟು ವ್ಯವಸ್ಥಿತ ರೂಪ ಪಡೆದುಕೊಂಡಿತು.
ಕಾರ್ಮಿಕ ಸಂಘಟನೆಯಿಂದ ಚುನಾವಣಾ ರಾಜಕಾರಣದತ್ತ
ಕಾರ್ಮಿಕ ಸಂಘಟನೆಯನ್ನು ಭದ್ರಪಡಿಸಿಕೊಂಡ ನಂತರ ಕಮ್ಯುನಿಸ್ಟ್ ಪಕ್ಷದ ಗಮನ ಸಹಜವಾಗಿಯೇ ಚುನಾವಣಾ ರಾಜಕಾರಣದತ್ತ ಹರಿಯತೊಡಗಿತು. ಕಾರ್ಖಾನೆಗಳ ಒಳಗೆ ಕಾರ್ಮಿಕರನ್ನು ಒಗ್ಗೂಡಿಸಿದ್ದ ಪಕ್ಷಕ್ಕೆ ಈಗ ನಗರದ ರಾಜಕೀಯ ಅಧಿಕಾರದ ರಚನೆಯಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸುವ ಆಸಕ್ತಿ ಮೂಡಿತ್ತು.
ಆದರೆ ದಾವಣಗೆರೆಯ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ದಾವಣಗೆರೆಯ ರಾಜಕೀಯವನ್ನು ಪ್ರಭಾವಿಸಬೇಕಾದರೆ ಇಲ್ಲಿನ ಜಾತಿ ಸಮೀಕರಣ, ಆರ್ಥಿಕ ಪ್ರಾಬಲ್ಯ ಮತ್ತು ಸ್ಥಳೀಯ ಶ್ರೀಮಂತ ವರ್ಗಗಳ ಪ್ರಭಾವವನ್ನು ಮೊದಲು ನಿಭಾಯಿಸಬೇಕಿತ್ತು.
ದಾವಣಗೆರೆ ಮೂಲತಃ ವ್ಯಾಪಾರ, ಕೈಗಾರಿಕೆ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯಿಂದ ಶ್ರೀಮಂತಿಕೆಯನ್ನು ಗಳಿಸಿದ್ದ ನಗರ. ಅದರಲ್ಲೂ ಲಿಂಗಾಯತ ಸಮುದಾಯದ ಪ್ರಭಾವಿ ವ್ಯಾಪಾರಿ ವರ್ಗ, ವಿಶೇಷವಾಗಿ ಬಣಜಿಗ ಲಿಂಗಾಯತರ ಆರ್ಥಿಕ ಹಿಡಿತ ನಗರದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿತ್ತು. ದಾವಣಗೆರೆಯ ಜೀವನಾಡಿಯಾಗಿದ್ದ ಹತ್ತಿ ವ್ಯಾಪಾರ, ಸಾಂಬಾರ್ ವ್ಯಾಪಾರ ಮತ್ತು ಏಷ್ಯಾದಲ್ಲೇ ಪ್ರಸಿದ್ಧಿ ಪಡೆದಿದ್ದ ಕೃಷಿ ಉತ್ಪನ್ನ ಮಾರಾಟ ಚಟುವಟಿಕೆಗಳಲ್ಲಿ ಈ ವ್ಯಾಪಾರಿ ವರ್ಗದ ಪ್ರಭಾವ ಎದ್ದು ಕಾಣುತ್ತಿತ್ತು.
ಇನ್ನೊಂದೆಡೆ, ಸಾಧು ಲಿಂಗಾಯತರು ಮತ್ತು ಬಣಜಿಗ ಲಿಂಗಾಯತರ ನಡುವಿನ ಸಾಮಾಜಿಕ ಹಾಗೂ ರಾಜಕೀಯ ಪ್ರಾಬಲ್ಯದ ಪೈಪೋಟಿಯೂ ನಗರದ ರಾಜಕಾರಣದ ಮೇಲೆ ಪರಿಣಾಮ ಬೀರುತ್ತಿತ್ತು. ಈ ಎರಡು ಪ್ರಬಲ ಲಿಂಗಾಯತ ಪಂಗಡಗಳ ರಾಜಕೀಯ ಪ್ರತಿನಿಧಿಗಳಾಗಿ ಹರಿಹರದ ಗಾಂಜೀವೀರಪ್ಪ ಮತ್ತು ದಾವಣಗೆರೆಯ ಸಿದ್ದವೀರಪ್ಪ ಮುಂಚೂಣಿಯಲ್ಲಿದ್ದರು. ಇಬ್ಬರೂ ವೃತ್ತಿಯಲ್ಲಿ ವಕೀಲರಾಗಿದ್ದು, ಇಬ್ಬರ ರಾಜಕೀಯ ಪ್ರಭಾವದ ಕೇಂದ್ರವೂ ಹರಿಹರ ವಿಧಾನಸಭಾ ಕ್ಷೇತ್ರವಾಗಿತ್ತು. ಆದರೆ ಅವರ ಸಾಮಾಜಿಕ ಹಿನ್ನೆಲೆ ಮತ್ತು ಪ್ರತಿನಿಧಿಸುತ್ತಿದ್ದ ಸಮುದಾಯಗಳ ನೆಲೆಗಳು ವಿಭಿನ್ನವಾಗಿದ್ದವು.
ಹೀಗಾಗಿ, ದಾವಣಗೆರೆಯ ರಾಜಕೀಯ ಕೇವಲ ಪಕ್ಷಗಳ ನಡುವಿನ ಸ್ಪರ್ಧೆಯಾಗಿರಲಿಲ್ಲ. ಅದು ಜಾತಿ ಪ್ರಾಬಲ್ಯ, ವ್ಯಾಪಾರೀ ಶ್ರೀಮಂತಿಕೆ, ಕೈಗಾರಿಕಾ ಮಾಲೀಕತ್ವ ಮತ್ತು ಕಾರ್ಮಿಕ ಶಕ್ತಿಗಳ ನಡುವಿನ ಸಂಕೀರ್ಣ ರಾಜಕೀಯ ಸಮೀಕರಣವಾಗಿತ್ತು.
ಒಂದು ಕಡೆ ಹತ್ತಾರು ಕಾರ್ಖಾನೆಗಳು ಮತ್ತು ಸಾವಿರಾರು ಕಾರ್ಮಿಕರಿದ್ದ ಕೈಗಾರಿಕಾ ನಗರ. ಮತ್ತೊಂದು ಕಡೆ ವ್ಯಾಪಾರ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೂಲಕ ಆರ್ಥಿಕ ಪ್ರಾಬಲ್ಯ ಸಾಧಿಸಿದ್ದ ಪ್ರಭಾವಿ ಲಿಂಗಾಯತ ಸಮುದಾಯಗಳು. ಇಂತಹ ಸಾಮಾಜಿಕ-ರಾಜಕೀಯ ಪರಿಸರದಲ್ಲಿ ಕಮ್ಯುನಿಸ್ಟ್ ಪಕ್ಷ ತನ್ನ ಚುನಾವಣಾ ರಾಜಕಾರಣದ ಹೊಸ ಪ್ರಯೋಗಕ್ಕೆ ಸಿದ್ಧವಾಗುತ್ತಿತ್ತು.
ಕಾರ್ಮಿಕರ ಒಗ್ಗಟ್ಟನ್ನು ಮತಗಳ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವೇ? ಜಾತಿ ಮತ್ತು ಶ್ರೀಮಂತಿಕೆಯ ಪ್ರಾಬಲ್ಯವಿದ್ದ ದಾವಣಗೆರೆಯಲ್ಲಿ ವರ್ಗ ರಾಜಕಾರಣಕ್ಕೆ ನೆಲೆ ಕಲ್ಪಿಸಲು ಸಾಧ್ಯವೇ? ಈ ಪ್ರಶ್ನೆಗಳೊಂದಿಗೆ ಕಮ್ಯುನಿಸ್ಟ್ ಪಕ್ಷ ದಾವಣಗೆರೆಯ ಸ್ಥಳೀಯ ನಗರಸಭೆ ಚುನಾವಣಾ ಕಣಕ್ಕೆ ಇಳಿಯುವ ಆಲೋಚನೆ ಮಾಡಿತು.
ದಾವಣಗೆರೆಯ ರಾಜಕೀಯ ಇತಿಹಾಸದಲ್ಲಿ ಇದು ಮತ್ತೊಂದು ಮಹತ್ವದ ಅಧ್ಯಾಯಕ್ಕೆ ನಾಂದಿಯಾಗಲಿತ್ತು.
(ಮುಂದುವರೆಯುವುದು)

ಲೇಖಕರು ಹಿರಿಯ ಪತ್ರಕರ್ತರು ಮತ್ತು ಕಾದಂಬರಿಕಾರರು. ಲಂಕೇಶ್ ಪತ್ರಿಕೆಯಲ್ಲಿ ಗುರುತಿಸಿಕೊಂಡ ಅವರು ನಂತರ ದಾವಣಗೆರೆಯಿಂದ ತಮ್ಮದೇ ಸಂಪಾದಕತ್ವದಲ್ಲಿ ಪ್ರಜಾಕೂಗು ಎಂಬ ಸ್ವತಂತ್ರ ಪತ್ರಿಕೆಯನ್ನು ಹೊರತರುತ್ತಿದ್ದರು. ದಂಗೆಯೆದ್ದವರು, ಗರ್ಭಗುಡಿ, ಮುಖ ಮತ್ತು ಮುಖವಾಡಗಳು, ಮೌನದ ಸನ್ನಿಧಿಯಲ್ಲಿ, ಮತ್ತೊಂದು ನೋಟೀಸು, ಪ್ರತಿಕ್ರಿಯೆ ಇವರ ಪ್ರಮುಖ ಕೃತಿಗಳು.
