ಜಗತ್ತಿನ ಸರ್ವಾಧಿಕಾರಿಗಳ ಆಡಳಿತದಲ್ಲಿ ಹಾದಿತಪ್ಪಿದ ಚುನಾವಣಾ ಆಯೋಗಗಳ ಚರಿತ್ರೆ

2024ರ ಜುಲೈ 8ರ ರಾತ್ರಿ. ತೈಲ ಸಂಪದ್ಭರಿತ ವೆನಿಜುವೆಲಾ ದೇಶದ ಜನ, ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಉತ್ಸುಕರಾಗಿ ಕಾಯುತ್ತಿದ್ದರು. ಫಲಿತಾಂಶವೆಂದರೆ ಯಾರು ಗೆದ್ದರು, ಯಾರು ಸೋತರು ಎಂಬ ಘೋಷಣೆ ಮಾತ್ರ ಆಗಿರುವುದಿಲ್ಲ. ಎಲ್ಲರಿಗೂ ಲಭ್ಯವಾಗುವಂತಹ ನಿಖರ ಅಂಕಿಅಂಶಗಳ ವಿವರವಾದ ಮಾಹಿತಿಗಳು ಇರಬೇಕಾಗುತ್ತದೆ. ವೆನಿಜುವೆಲಾದ ಜನ ಹೀಗೆ ನಿರೀಕ್ಷೆಯಿಂದ ಕಾಯುತ್ತಿರುವಾಗ ಒಬ್ಬ ವ್ಯಕ್ತಿಯ ಮುಖ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಎಲ್ವಿಸ್‌ ಅಮೊರೊಸೊ!

ಈತ ವೆನಿಜುವೆಲಾ ಚುನಾವಣಾ ಉಸ್ತುವಾರಿಯ ಹೊಣೆ ಹೊತ್ತ ನ್ಯಾಷನಲ್‌ ಎಲೆಕ್ಟೋರಲ್‌ ಕೌನ್ಸಿಲ್‌ (ಎನ್‌ಇಸಿ) ನ ಅಧ್ಯಕ್ಷ. ಹಾಗೆ ಕಾಣಿಸಿಕೊಳ್ಳುವ ಆತ, “ಚುನಾವಣೆಯಲ್ಲಿ 51.2% ಮತ ಪಡೆದಿರುವ ನಿಕೋಲಸ್‌ ಮಡುರೋ ಅವರು, 44.2% ಮತ ಪಡೆದಿರುವ ವಿರೋಧ ಪಕ್ಷದ ಎಡ್ಮೊಂಡೊ ಗೊನ್ಸಾಲೆಸ್‌ ಅವರನ್ನು ಮಣಿಸಿ, ಸತತ ಮೂರನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ” ಎಂದು ಘೋಷಿಸುತ್ತಾನೆ! ಮತಗಟ್ಟೆವಾರು ವಿವರಗಳಿಲ್ಲ, ಫಲಿತಾಂಶವನ್ನು ವೆರಿಫೈ ಮಾಡಲು ಬೇಕಾದ ಆನ್‌ಲೈನ್‌ ದಾಖಲೆಗಳಿಲ್ಲ, ದಾಖಲಾದ ಮತಗಳು-ಶೇಕಡಾವಾರು ಮತಗಳ ಉಲ್ಲೇಖವಿಲ್ಲ; ಏಕಾಏಕಿ ವಿಜಯದ ಘೋಷಣೆ! ಎನ್‌ಇಸಿಯ ಆಹ್ವಾನದಂತೆ ಬಾಹ್ಯ ಚುನಾವಣಾ ವೀಕ್ಷಕರಾಗಿ ಭಾಗವಹಿಸಿದ್ದ Carter Centre ಮತ್ತು ಅಮೆರಿಕೆಯ ಆರ್ಗನೈಸೇಷನ್‌ ಆಫ್‌ ಅಮೆರಿಕನ್‌ ಸ್ಟೇಟ್ಸ್‌ (ಒಎಎಸ್‌) ಸ್ವತಂತ್ರ ಸಂಸ್ಥೆಗಳೂ ಇಂಥಾ ಫಲಿತಾಂಶ ಕಂಡು ದಂಗಾದವು. ಘೋಷಿತ ಫಲಿತಾಂಶವನ್ನು ಕ್ರಾಸ್‌ವೆರಿಫೈ ಮಾಡಿಕೊಳ್ಳುವ ದಾಖಲೆಗಳನ್ನು ಅವುಗಳಿಗು ಸಹಾ ನೀಡಿರಲಿಲ್ಲ. ಈ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಎಂಬ ಅಭಿಪ್ರಾಯವನ್ನು  ಆ ವೀಕ್ಷಕ ಸಂಸ್ಥೆಗಳು ಹೊರಹಾಕಿದವು.

ಅಲ್ಲಿ ಚುನಾವಣೆ ನಡೆದಿತ್ತು. ಜನ ಮತ ಚಲಾಯಿಸಿದ್ದರು. ಮತಗಟ್ಟೆಗಳಲ್ಲಿ ಎಣಿಕೆಯೂ ಆಗಿತ್ತು. ಆದಾಗ್ಯೂ ಚುನಾವಣಾ ವ್ಯವಸ್ಥೆ ಅನುಮಾನಗಳಿಗೆ ತುತ್ತಾಯ್ತು. ಯಾಕೆಂದರೆ, ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯಲ್ಲಿ ಮಡುರೋ ಸರ್ಕಾರ ಪ್ರಭಾವ ಬೀರಿತ್ತು. ಸರ್ಕಾರದ ಪರ ಒಲವಿರುವ ವ್ಯಕ್ತಿಗಳನ್ನು ಎನ್‌.ಇ.ಸಿ.ಯ ರೆಕ್ಟರ್‍‌ (ಆಯುಕ್ತರು) ಆಗಿ ನೇಮಕ ಮಾಡಲಾಗಿತ್ತು. ಐದು ಸದಸ್ಯರ ಆ ಆಯೋಗದ ಅಧ್ಯಕ್ಷನಾಗಿದ್ದ ಎಲ್ವಿಸ್‌ ಅಮೊರೊಸೊ ಕೂಡಾ ಮಡುರೊ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದವನು. ಮಡುರೋ ನೇತೃತ್ವದ United Socialist Party of Venezuela (PSUV) ಪಕ್ಷದ ಸಕ್ರಿಯ ಕಾರ್ಯಕರ್ತ. ಮಡುರೋ ಸರ್ಕಾರ ಈತನನ್ನು 2018ರಲ್ಲಿ ಕಾಂಪ್ಟ್ರೋಲರ್ ಜನರಲ್‌ ಆಗಿ ನೇಮಿಸಿತ್ತು. ಮಡುರೋ ಸರ್ಕಾರಕ್ಕೆ ಅನುಕೂಲ ಮಾಡಿಕೊಡಲೆಂದು ವಿರೋಧ ಪಕ್ಷಗಳ ವಿರುದ್ಧ ಕಾನೂನುಬಾಹಿರ ಕ್ರಮ ಕೈಗೊಂಡ ಕಾರಣಕ್ಕೆ, ಕೆನಡಾ ಮತ್ತು ಯುರೋಪಿಯನ್‌ ಯೂನಿಯನ್‌ ಒಕ್ಕೂಟಗಳು ತಮ್ಮ ದೇಶಕ್ಕೆ ಬರದಂತೆ 2020ರಲ್ಲಿ ನಿರ್ಬಂಧ ವಿಧಿಸಿದ್ದ ವ್ಯಕ್ತಿ ಈತ. ಸಾಲದ್ದಕ್ಕೆ ಇವನ ಮಗ ಎಲ್ವಿಸ್‌ ಜೂನಿಯರ್‍‌, ವೆನಿಜುವೆಲಾ ಸಚಿವ ಮಂಡಳಿಯ ಶಾಶ್ವತ ಕಾರ್ಯದರ್ಶಿಯೂ ಹೌದು. ಇಷ್ಟೆಲ್ಲ ರಾಜಕೀಯ ನಂಟಿರುವ ವ್ಯಕ್ತಿಯನ್ನು ಮಡುರೊ 2023ರ ಆಗಸ್ಟ್‌ನಲ್ಲಿ ಚುನಾವಣಾ ಆಯೋಗದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದ!

ಹಾಗಾಗಿ, ಅವತ್ತು ಎಲ್ವಿಸ್‌ ಟಿವಿ ಪರದೆಗಳ ಮೇಲೆ ಪ್ರತ್ಯಕ್ಷನಾಗಿ, ಸೂಕ್ತ ಅಂಕಿಅಂಶ ಕೊಡದೆ `ಮಡುರೋ ವಿಜಯಿ’ ಎಂದು ಘೋಷಿಸಿದಾಗ ಚುನಾವಣಾ ಆಯೋಗದ ವಿರುದ್ಧ ಜನ ಸಂಶಯ ವ್ಯಕ್ತಪಡಿಸಿದರು. ಪ್ರತಿಭಟನೆಗಳು ಭುಗಿಲೆದ್ದವು. ವೆನಿಜುವೆಲಾದ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಅಮೆರಿಕಾಗೆ ಇಷ್ಟು ಸಾಕಾಯ್ತು. ಚುನಾವಣಾ ವ್ಯವಸ್ಥೆಗಳನ್ನು ಹಾಳುಗೆಡವುವ ಮೂಲಕ ಮಡುರೋ ಸರ್ವಾಧಿಕಾರಿಯಾಗಿ ಬೆಳೆಯುತ್ತಿದ್ದಾನೆ ಎಂದು ಆರೋಪಿಸಿ, ಸೂಕ್ತ ಸಮಯಕ್ಕಾಗಿ ಕಾದಿದ್ದ ಟ್ರಂಪ್‌ನ ಸೇನೆ ಮಡುರೋನನ್ನು ರಾತ್ರೋರಾತ್ರಿ ಅಪಹರಿಸಿ ಕೊಂಡೊಯ್ದು ತನ್ನ ದೇಶದಲ್ಲಿ ಸೆರೆಯಾಳಾಗಿ ಇರಿಸಿಕೊಂಡಿದೆ.

ಇವತ್ತು ನಮ್ಮ ದೇಶದಲ್ಲಿ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದೆ, ಬಿಜೆಪಿಗೆ ಪೂರಕವಾಗಿ ಎಸ್‌ಐಆರ್‍‌ ನಡೆಸುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಚರಿತ್ರೆಯಲ್ಲಿ ದಾಖಲಾಗಿಹೋದ ಇಂತಹ ಹಲವು ಘಟನೆಗಳು ಮುಖ್ಯವಾಗುತ್ತವೆ. ಯಾಕೆಂದರೆ ಚುನಾವಣಾ ಆಯೋಗಗಳ ಮೇಲೆ ಆರೋಪ ಮಾಡುವುದೆಂದರೆ, ದೇಶದ್ರೋಹದ ಕೆಲಸ; ಪ್ರಜಾಪ್ರಭುತ್ವದ ಮೇಲಿನ ದಾಳಿ ಅಂತೆಲ್ಲಾ ವಾದಿಸುವ ಕೆಲವರು, ಪ್ರತಿಭಟನಾಕಾರರ ಬದ್ಧತೆಯನ್ನು ಪ್ರಶ್ನೆಗೊಡ್ಡುತ್ತಿದ್ದಾರೆ. ಆ ಮೂಲಕ ಆಯೋಗದ ಮೇಲಿನ ಆರೋಪಗಳಿಗೆ ಸಮರ್ಥನೆ ಉತ್ಪಾದಿಸಲು ಯತ್ನಿಸುತ್ತಿದ್ದಾರೆ. ಅಂತವರಿಗೆ ಈ ಉದಾಹರಣೆಗಳೆ ಉತ್ತರ!  ವೆನಿಜುವೆಲಾ ಮಾತ್ರವಲ್ಲದೆ ಪೆರು, ಜಿಂಬಾಬ್ವೆ, ಬೆಲಾರಸ್‌ನಲ್ಲಿ ನಡೆದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸರ್ವಾಧಿಕಾರಿ ಆಡಳಿತಗಳು ಹೇಗೆಲ್ಲಾ ಚುನಾವಣಾ ಆಯೋಗಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿವೆ, ಮತ್ತು ಅದರಿಂದ ಆ ದೇಶಗಳು ಅನುಭವಿಸಿದ ದುರಂತ ಎಂತದ್ದು ಎಂಬುದು ಅರ್ಥವಾಗುತ್ತದೆ.

ಸರ್ವಾಧಿಕಾರಿ ಆಡಳಿತಕ್ಕೆ ಅತ್ಯುತ್ತಮ ನಿದರ್ಶನ ಜರ್ಮನಿಯ ಹಿಟ್ಲರ್. ಎಲ್ಲವನ್ನು ಬಲಪ್ರಯೋಗ ಮತ್ತು ಪ್ರೊಪೆಗೆಂಡಾದ ಮೂಲಕ ಸಾಧಿಸುತ್ತೇನೆ ಎಂದು ಹೊರಟ ಆತ ಆ ಧೋರಣೆಯಿಂದಲೆ ಕುಸಿದುಹೋದ. ಕಮ್ಯುನಿಷ್ಟರು, ಸೋಷಿಯಲಿಸ್ಟರು ಹಾಗೂ ಡೆಮಾಕ್ರೆಟ್‌ ಮೊದಲಾದ ರಾಜಕೀಯ ವಿರೋಧಿಗಳ ಮೇಲೆ ನೇರ ದಾಳಿಗೆ ಮುಂದಾದ ಆತ ಅವರನ್ನು ಬಂಧಿಸಿ, ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಮಾಡಿ ತನ್ನ ಅಧಿಕಾರ ವಿಸ್ತರಿಸಿಕೊಳ್ಳುತ್ತಾ ಬಂದ. ಇದು ಅವನನ್ನು ಬಹುಬೇಗ ಜಗತ್ತಿನ ಮುಂದೆ ‘ಖಳ’ನನ್ನಾಗಿ ಚಿತ್ರಿಸಿತು. ಇವತ್ತಿಗೂ ಆ ಚೌಕಟ್ಟಿನಿಂದ ಹೊರಬರಲು ಹಿಟ್ಲರ್‍‌ ಎಂಬ ಛಾಯೆಗೆ ಸಾಧ್ಯವಾಗಿಲ್ಲ. ಇದರಿಂದ ಪಾಠ ಕಲಿತ ಇತ್ತೀಚಿನ ಸರ್ವಾಧಿಕಾರಿ ಆಡಳಿತಗಳು ಹಿಟ್ಲರ್ ಮಾಡಿದ ತಪ್ಪನ್ನು ಮಾಡದೆ, ಜಾಣತನದಿಂದ ತಮ್ಮ ಕಾರ್ಯಸಾಧಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಚುನಾವಣಾ ನಿರ್ವಹಣಾ ಸಂಸ್ಥೆಗಳನ್ನು  ತಮ್ಮ ಕೈವಶ ಮಾಡಿಕೊಳ್ಳುವುದು ಅಂತವುಗಳಲ್ಲಿ ಒಂದು. ವೆನಿಜುವೆಲಾದಲ್ಲಿ ಮಡುರೋ ಮಾಡಿದ್ದು ಅದನ್ನೆ!

ಪೆರುವಿನ ಪ್ಯುಜಿಮೊರಿ ಕಥೆ!

ಪೆರು ದೇಶದ ಚುನಾವಣಾ ವ್ಯವಸ್ಥೆಯ ಕಥೆ ವೆನಿಜುವೆಲ್ಲಾಕ್ಕಿಂತ ಧಾರುಣವಾಗಿದೆ. 1990ರಲ್ಲಿ ಅಧಿಕಾರಕ್ಕೇರಿ ಹತ್ತು ವರ್ಷಗಳ ಕಾಲ ಪೆರುವನ್ನು ಆಳಿದ ಅಲ್ಬರ್ಟೊ ಫ್ಯುಜಿಮೊರಿ, ಅಲ್ಲಿನ ಚುನಾವಣಾ ವ್ಯವಸ್ಥೆಯನ್ನು ಹೀಗೆಯೇ ಧ್ವಂಸ ಮಾಡಿದ್ದ. ಪೆರುವಿನ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ಗರಿಷ್ಠ ಎರಡು ಅವಧಿಗೆ ಮಾತ್ರ ಅಧ್ಯಕ್ಷನಾಗಬಹುದು. ಸತತ ಮೂರನೇ ಬಾರಿಗೆ ಸ್ಪರ್ಧಿಸುವಂತಿಲ್ಲ. ಅದರ ಪ್ರಕಾರ 2000ನೇ ಇಸವಿಗೆ ಫ್ಯುಜಿಮೊರಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಿತ್ತು. ಆದರೆ, ಅಧಿಕಾರದ ಮೋಹಕ್ಕೆ ತುತ್ತಾಗಿದ್ದ ಆತ ಇನ್ನೊಂದು ಅವಧಿಗೆ ಸ್ಪರ್ಧಿಸಲು ಮುಂದಾದ. ವಿರೋಧಿಗಳು ಕಾನೂನಿನ ನಿರ್ಬಂಧವನ್ನು ಮುಂದೊಡ್ಡಿದರು. ಇಂತಹ ಸಂದರ್ಭ ಬರುತ್ತೆಂಬುದನ್ನು ಮೊದಲೆ ಅಂದಾಜಿಸಿದ್ದ ಆತ ನ್ಯಾಷನಲ್‌ ಆಫೀಸ್ ಆಫ್‌ ಎಲೆಕ್ಟೊರಲ್‌ ಪ್ರೋಸೆಸ್‌ (ಒ.ಎನ್‌.ಪಿ.ಇ) ಮತ್ತು ನ್ಯಾಷನಲ್‌ ಜ್ಯೂರಿ ಆಫ್‌ ಎಲೆಕ್ಷನ್‌ (ಜೆಎನ್‌ಇ) ಸಂಸ್ಥೆಗಳಿಗೆ ಕ್ರಮವಾಗಿ ಜೋಸ್‌ ಪೋರ್ಟಿಲೊ ಕ್ಯಾಂಪ್‌ಬೆಲ್‌ ಹಾಗೂ ಅಲಿಪಿಯೊ ಮೋಂಟೆಸ್‌ ಡಿ ಒಕಾ ಎಂಬ ಇಬ್ಬರು ಚೇಲಾಗಳನ್ನು ಅಧ್ಯಕ್ಷರಾಗಿ ತಂದು ಕೂರಿಸಿದ್ದ. ಈ ಸಂಸ್ಥೆಗಳ ಪ್ರಧಾನ ಕೆಲಸ ಚುನಾವಣಾ ಸ್ಪರ್ಧೆಯ ಅಭ್ಯರ್ಥಿಗಳ ಅರ್ಹತೆ ನಿರ್ಧರಿಸುವುದು ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ನಡೆಸುವುದು. 1992ರಲ್ಲಿ ಪ್ಯುಜಿಮೊರಿ ತನ್ನದೇ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ತಾನೇ ನಡೆಸಿದ್ದ ಸ್ವಯಂ-ಬಂಡಾಯವನ್ನು ಸಮರ್ಥನೆಗೆ ಬಳಸಿಕೊಂಡ ಈ ಈರ್ವರು, ಆ ಬಂಡಾಯಕ್ಕು ಮೊದಲೇ ನಡೆದಿದ್ದ ಚುನಾವಣೆಯ ಅವಧಿಯನ್ನು ಪರಿಗಣಿಸಲಾಗದು ಎಂದು ವಾದಿಸಿದರು. ಹಾಗಾಗಿ 2000ರ ಚುನಾವಣೆಯಲ್ಲಿ ಪ್ಯುಜಿಮೊರಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬಹುದೆಂದು ಅನುಮತಿ ಕೊಟ್ಟರು.

ಪ್ಯುಜಿಮೊರಿಯನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದ ಇವರು ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಿದರು. ಮತದಾರರ ನೋಂದಣಿ ಪಟ್ಟಿಯನ್ನು ಮ್ಯಾನ್ಯುಪುಲೇಟ್‌ ಮಾಡಲಾಯ್ತು, ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ದೂರದರ್ಶನಗಳಲ್ಲಿ ಪ್ರಚಾರ ಮಾಡದಂತೆ ಅನಗತ್ಯ ನಿರ್ಬಂಧ ಹೇರಲಾಯ್ತು, ಮತ ಎಣಿಕೆಯ ಸಾಫ್ಟ್‌ವೇರ್‍‌ಗಳಲ್ಲಿ ಗೊಂದಲ ಸೃಷ್ಟಿಸಲಾಯ್ತು, ವಿರೋಧ ಪಕ್ಷಗಳ ನಾಯಕರನ್ನು ಬೆದರಿಸಲಾಯ್ತು ಮತ್ತು ಹಣದ ಆಮಿಷ ಒಡ್ಡಲಾಯ್ತು. ಚುನಾವಣಾ ಆಯೋಗ ಇದ್ಯಾವುದನ್ನು ನಿಯಂತ್ರಿಸಲು ಮುಂದಾಗಲಿಲ್ಲ. ಚುನಾವಣಾ ವೀಕ್ಷಕರಾಗಿ ಭಾಗವಹಿಸಿದ್ದ ವಿದೇಶಿ ಸ್ವತಂತ್ರ ಸಂಸ್ಥೆಗಳು ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ದೂರಿದವು. ಇಂಥಾ ಯಾವ ಆರೋಪವನ್ನೂ ಲೆಕ್ಕಿಸದೆ ಚುನಾವಣೆ ಮುಗಿಸಿ, ಫಲಿತಾಂಶವನ್ನು ಪ್ರಕಟಿಸುವ ಚುನಾವಣಾ ಮುಖ್ಯಸ್ಥ ಪೋರ್ಟಿಲೊ, ‘ಪ್ಯುಜಿಮೊರಿ ಮತ್ತು ಎದುರಾಳಿ ಅಲೆಜೆಂಡ್ರಾ ಟೊಲೆಡೊ ನಡುವೆ ಹೆಚ್ಚೂಕಮ್ಮಿ ಸಮಬಲದ ಫಲಿತಾಂಶ ಬಂದಿರೋದರಿಂದ ಎರಡನೇ ಸುತ್ತಿನ ಚುನಾವಣೆ ನಡೆಯಬೇಕು’ ಎನ್ನುತ್ತಾನೆ. ಜನ ಅದನ್ನು ಒಪ್ಪಲ್ಲ. ವಿರೋಧ ಪಕ್ಷದ ಅಲೆಜೆಂಡ್ರಾ ಟೊಲೆಡೊ, ಚುನಾವಣಾ ಸಂಸ್ಥೆ ಪ್ಯುಜಿಮೊರಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿ, ಚುನಾವಣೆಯನ್ನು ಬಹಿಷ್ಕರಿಸುತ್ತಾನೆ. ಪ್ಯುಜಿಮೊರಿಗೆ ಅಷ್ಟು ಸಾಕಾಯ್ತು. ವಿರೋಧಿಯೆ ಇಲ್ಲದೆ ಚುನಾವಣೆ ನಡೆಸಿ, ತನ್ನನ್ನು ವಿಜಯಿ ಎಂದು ಘೋಷಿಸಿಕೊಳ್ತಾನೆ.

ಅದೇ ಸಮಯಕ್ಕೆ ಸರಿಯಾಗಿ ಆತನ ನಂಬಿಕಸ್ಥ, National Intelligence Service (SIN) ಗುಪ್ತಚರ ಮಂತ್ರಿಯಾಗಿದ್ದ ವ್ಲಾಡಿಮಿರೊ ಮಾಂಟೆಸಿನೋಸ್‌ನ ಅಕ್ರಮಗಳ ವಿಡಿಯೊ ಟೇಪ್‌ಗಳು ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತವೆ. ವಿರೋಧ ಪಕ್ಷಗಳ ನಾಯಕರು, ಸುಪ್ರೀಂ ಕೋರ್ಟ್‌ ಜಡ್ಜ್‌ಗಳು, ಚುನಾವಣಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಇತರೆ ಅಧಿಕಾರಿಗಳಿಗೆ ಆತ ಲಂಚ ನೀಡಿ ಆಮಿಷವೊಡ್ಡುತ್ತಿದ್ದ ದೃಶ್ಯಗಳ ಅವು. ವಿಪರ್ಯಾಸವೆಂದರೆ, ಮುಂದೆ ಇವರು ತಮ್ಮ ವಿರುದ್ಧ ತಿರುಗಿಬೀಳದಿರಲೆಂದು ಸ್ವತಃ ವ್ಯಾಡಿಮಿರೊ ಆ ಟೇಪುಗಳನ್ನು ಚಿತ್ರೀಕರಿಸಿಕೊಂಡಿದ್ದ. ಅದೇಗೊ ಅವು ಮೀಡಿಯಾ ಕೈತಲುಪಿ ಜಗಜ್ಜಾಹೀರಾಗುತ್ತವೆ. `ವ್ಲಾಡಿ ವಿಡಿಯೋಸ್’ ಎಂದು ಕರೆಯಲಾಗುವ ಸರಣಿ ಟೇಪುಗಳು ಹೊರಬಂದ ನಂತರ ಜನ ರೊಚ್ಚಿಗೆದ್ದು ಬೀದಿಗಿಳಿಯುತ್ತಾರೆ. ಬೇರೆ ದಾರಿಯಿಲ್ಲದೆ ಜಪಾನ್‌ಗೆ ಪಲಾಯನ ಮಾಡುವ ಅಧ್ಯಕ್ಷ ಪ್ಯುಜಿಮೊರಿ ಅಲ್ಲಿಂದಲೆ ರಾಜೀನಾಮೆ ಕಳುಹಿಸುತ್ತಾನೆ. ಆದರೆ ಪೆರುವಿನ ಸಂಸತ್ತು ಅದನ್ನು ಅಂಗೀಕರಿಸದೆ, ಅವನನ್ನು ವಜಾ ಮಾಡಿ, ತನಿಖೆಗೆ ಆದೇಶಿಸುತ್ತದೆ. ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು 2007ರಲ್ಲಿ ಚಿಲಿಯಲ್ಲಿ ಬಂಧಿಸಿ ಕರೆತರಲಾಗುತ್ತೆ. ವಿಚಾರಣೆಯಲ್ಲಿ ಆತ ತಪ್ಪಿತಸ್ಥನೆಂದು ಸಾಬೀತಾದ ನಂತರ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2024ರಲ್ಲಿ ಆತ ಸತ್ತುಹೋದ.

ಜಿಂಬಾಬ್ವೆಯ ಮುಗಾಬೆ!

ಜಿಂಬಾಬ್ವೆಯ ಕಥೆ ಇದಕ್ಕಿಂತ ಭಿನ್ನವಲ್ಲ. ಸತತ 28 ವರ್ಷಗಳ ಕಾಲ ಆ ದೇಶವನ್ನು ಆಳಿದ ರಾಬರ್ಟ್‌ ಮುಗಾಬೆ, 2008ರಲ್ಲಿ ಭಾರೀ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗುತ್ತೆ. ಆದರೆ ಚುನಾವಣೆಯಲ್ಲಿ ಸೋಲೊಪ್ಪಿಕೊಳ್ಳಲು ಆತ ಬಯಸುವುದಿಲ್ಲ. ಹಾಗಾಗಿ ಅಲ್ಲಿನ ಚುನಾವಣಾ ನಿಯಂತ್ರಣ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಚಿವೀಶೆಯನ್ನು ತನ್ನ ಕೈವಶ ಮಾಡಿಕೊಳ್ತಾನೆ. ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಹೊರತಾಗಿಯೂ ಮುಗಾಬೆಗೆ ತೀವ್ರ ಹಿನ್ನಡೆಯಾಗುತ್ತದೆ. ಎದುರಾಳಿ ಪಕ್ಷದ ಮಾರ್ಗನ್‌ ಸ್ವಾಂಗಿರಾಯ್‌ ಮುನ್ನಡೆ ಸಾಧಿಸುತ್ತಿರುವುದು ಬೂತ್‌ ಮಟ್ಟದ ಫಲಿತಾಂಶಗಳಿಂದ ಸಾಬೀತಾಗುತ್ತೆ. ಆಗ ಚುನಾವಣಾ ಮುಖ್ಯಸ್ಥ ಚಿವೇಶಿ ತನ್ನ ಆಟ ಶುರು ಮಾಡ್ತಾನೆ. ನಿಗದಿತ ಸಮಯಕ್ಕೆ ಫಲಿತಾಂಶ ಪ್ರಕಟಿಸದೆ ವಿಳಂಬ ಮಾಡ್ತಾನೆ. ಜನರಿಂದ ಒತ್ತಡ ಹೆಚ್ಚಾದಾಗ, “ಈ ಚುನಾವಣೆ ಸ್ವಲ್ಪ ತ್ರಾಸದಾಯಕವಾಗಿತ್ತು. ಸ್ಥಳೀಯ ಮಟ್ಟದ ಫಲಿತಾಂಶಗಳನ್ನು ಕಲೆಹಾಕಲು ವಿಳಂಬವಾಗುತ್ತಿದೆ. ಹಾಗಾಗಿ ಫಲಿತಾಂಶ ತಡವಾಗುತ್ತಿದೆ” ಎಂಬ ಸಬೂಬು ಹೇಳ್ತಾನೆ. ನಿಜ ಹೇಳಬೇಕೆಂದರೆ, ಸ್ಥಳೀಯ ಫಲಿತಾಂಶಗಳು ಆಯಾ ಪ್ರಾಂತ್ಯವಾರು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಕಟವಾಗಿರುತ್ತವೆ. ಅವುಗಳಲ್ಲೆಲ್ಲ ಎದುರಾಳಿ ಮಾರ್ಗನ್‌ ಮುಂದಿದ್ದ. ಅವುಗಳನ್ನು ಕ್ರೋಢೀಕರಿಸಿ ಪ್ರಕಟಿಸುವುದಷ್ಟೆ ಚಿವೇಶಿಯ ಕೆಲಸ. ಹದಿನೈದು ದಿನಗಳಾದರೂ ಫಲಿತಾಂಶವನ್ನು ಪ್ರಕಟಿಸುವುದಿಲ್ಲ. ಜನ ಮತ್ತು ವಿರೋಧ ಪಕ್ಷಗಳು ಬೀದಿ ಹೋರಾಟಕ್ಕೆ ಮುಂದಾಗ್ತವೆ. ಆಫ್ರಿಕಾ ಖಂಡದ ಮಾನವಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿ, ಫಲಿತಾಂಶವನ್ನು ಬಿಡುಗಡೆ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಒತ್ತಡ ಹೇರುತ್ತದೆ.

ಆಗ ಫಲಿತಾಂಶವನ್ನು ಪ್ರಕಟಿಸುವ ಚಿವೇಶಿ, ‘ಮುಗಾಬೆ 43.2% ಮತ ಗಳಿಸಿದ್ದರೆ, ಎದುರಾಳಿ ಮಾರ್ಗನ್‌ 47.9% ಮತ ಗಳಿಸಿದ್ದಾರೆ. ಅಂತರ ತುಂಬಾ ಕಡಿಮೆ ಇರುವುದರಿಂದ ಯಾರನ್ನೂ ವಿಜಯಿ ಎಂದು ಘೋಷಿಸಲು ಸಾಧ್ಯವಿಲ್ಲ. ಎರಡನೇ ಸುತ್ತಿನ ಚುನಾವಣೆ ನಡೆಯಬೇಕು’ ಎನ್ನುತ್ತಾನೆ. ಆದರೆ ಸ್ಥಳೀಯ ಬೂತ್‌ ಮಟ್ಟದ ಪ್ರಕಟಿತ ಫಲಿತಾಂಶದ ಪ್ರಕಾರ ಮಾರ್ಗನ್‌ ನಿಚ್ಛಳ ಗೆಲುವು ಸಾಧಿಸಿರುವುದಾಗಿ ವಿರೋಧ ಪಕ್ಷಗಳು ಚುನಾವಣಾ ಸಂಸ್ಥೆಯ ಘೋಷಣೆ ವಿರುದ್ಧ ಹೋರಾಟಕ್ಕಿಳಿಯುತ್ತವೆ. ಮಿಲಿಟರಿ ಬಲ ಬಳಸಿಕೊಂಡು ಪ್ರತಿಭಟನಾಕಾರರನ್ನು ಹತ್ತಿಕ್ಕಲಾಗುತ್ತೆ. ಎದುರಾಳಿ ಅಭ್ಯರ್ಥಿ ಮಾರ್ಗನ್‌, ಇಂಥಾ ಅನ್ಯಾಯಕಾರಿ ಚುನಾವಣಾ ಪ್ರಕ್ರಿಯೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಹಿಂದೆ ಸರಿಯುತ್ತಾನೆ. ವಿರೋಧ ಪಕ್ಷದ ಅಭ್ಯರ್ಥಿಯ ಅನುಪಸ್ಥಿತಿಯಲ್ಲೂ ನಿರಾತಂಕವಾಗಿ ಎಲೆಕ್ಷನ್‌ ನಡೆಸುವ ಚುನಾವಣಾ ಸಂಸ್ಥೆಯ ಮುಖ್ಯಸ್ಥ ಚಿವೇಶಿ, ‘ಅಧ್ಯಕ್ಷ ಮುಗಾಬೆ ಗೆದ್ದಿದ್ದಾರೆ’ ಎಂದು ಘೋಷಿಸುತ್ತಾನೆ. ಜನ ಪ್ರತಿಭಟನೆಗೆ ಮುಂದಾಗ್ತಾರೆ. ಸುದೀರ್ಘ ಮಾತುಕತೆಯ ನಂತರ ಒಂದು ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗುತ್ತೆ. ಅದರಲ್ಲಿ ಮುಗಾಬೆ ಅಧ್ಯಕ್ಷನಾಗಿದ್ದರೆ, ವಿರೋಧ ಪಕ್ಷದ ಅಭ್ಯರ್ಥಿಯನ್ನು ಪ್ರಧಾನಿಯಾಗಿ ನೇಮಕ ಮಾಡಲಾಗುತ್ತೆ.

ಬೆಲಾರಸ್‌ನ ಲ್ಯುಕಶೆಂಕೋ!

ಬೆಲಾರಸ್‌ ದೇಶದಲ್ಲಿ ಆಗಿದ್ದು ಇನ್ನೂ ವಿಚಿತ್ರ. ಸತತ 26 ವರ್ಷಗಳ ಕಾಲ ಅಧ್ಯಕ್ಷನಾಗಿದ್ದ ಅಲೆಕ್ಸಾಂಡರ್‍‌ ಲ್ಯುಕಶೆಂಕೋ ಪ್ರತಿಸ್ಪರ್ಧಿಗಲೇ ಇಲ್ಲದ ವಾತಾವರಣ ಸೃಷ್ಟಿಸಿಕೊಂಡಿದ್ದ. ಆದರೆ 2020ರ ಚುನಾವಣೆಯಲ್ಲಿ ಅವನಿಗೆ ದೊಡ್ಡ ಪ್ರತಿರೋಧ ಎದುರಾಗುತ್ತೆ. ವಿರೋಧ ಪಕ್ಷಗಳ ಅಭ್ಯರ್ಥಿಯಾದ ಸ್ವಿಯಾಟ್ಲಾನ ಸಿಖನೋವಂಸ್ಕಾಯ ಎಂಬ ಹೆಣ್ಣಮಗಳಿಗೆ ಜನ ಬೆಂಬಲಿಸಲು ಆರಂಭಿಸುತ್ತಾರೆ. ಆಗ ಅಧ್ಯಕ್ಷ ಲ್ಯುಕಶಂಕೋ ಪರವಾಗಿ ಅಖಾಡಕ್ಕಿಳಿಯುವುದು ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷೆ ಲಿಡ್ಜಿಯಾ ಯಾರ್ಮೊಂಶೈನಾ. ಈಕೆ ಲ್ಯುಕಂಶಕೋನ ನಂಬಿಕಸ್ಥ ಅನುಯಾಯಿ. ಪ್ರೆಸಿಡೆಂಟ್ ಲ್ಯುಕಶಂಕೋನಾ ಕೃಪಾಕಟಾಕ್ಷೆಯಿಂದ 1990ರಿಂದ ಸತತ 20 ವರ್ಷಗಳ ಕಾಲ ಚುನಾವಣಾ ಆಯೋಗದ ಅಧ್ಯಕ್ಷೆಯಾಗಿದ್ದಾಕೆ. ಬೆಲಾರಸ್‌ನಲ್ಲಿ ಚುನಾವಣೆಯನ್ನು ನಿಯಂತ್ರಿಸಲು ಮೂರು ಹಂತಗಳಿರುತ್ತವೆ. ಮತಗಟ್ಟೆಗಳ ಮಟ್ಟದಲ್ಲಿ ಚುನಾವಣೆಯನ್ನು ನಡೆಸುವುದು, ಮತಪೆಟ್ಟಿಗೆ/ಎವಿಎಂಗಳನ್ನು ಸಂರಕ್ಷಿಸಿ ಸ್ಟ್ರಾಂಗ್‌ ರೂಮಿನಲ್ಲಿಡುವುದು, ಮತ ಎಣಿಕೆ ಮಾಡುವುದು Precinct Election Commissions (PECs)ಗಳ ಹೊಣೆ. ನಮ್ಮಲ್ಲಿ ಬೂತ್‌ಮಟ್ಟದ ಅಧಿಕಾರಿಗಳಿದ್ದಂತೆ. ಇದಕ್ಕಿಂತ ಮೇಲೆ Territorial Election Commissions (TECs)ಗಳು ಇರುತ್ತವೆ. ಪಿಇಸಿ ಮತ್ತು ಕೇಂದ್ರ ಚುನಾವಣಾ ಆಯೋಗದ ನಡುವಿನ ಅತಿಮುಖ್ಯ ಸಂಪರ್ಕ ಕೊಂಡಿಗಳು ಈ ಟಿ.ಇ.ಸಿ.ಗಳು! ಅಂದರೆ ಜಿಲ್ಲಾ ಮಟ್ಟದ ಸಮಿತಿಗಳಿದ್ದಂತೆ. ಪ್ರತಿ ಟಿ.ಇ.ಸಿ.ಯು 10-15 ಸದಸ್ಯರನ್ನು ಹೊಂದಿರುತ್ತವೆ. ಚುನಾವಣೆಗಳು ನಡೆಯುವುದಕ್ಕು ಮುನ್ನ ಎಲ್ಲಾ ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ತಮ್ಮ ಪರವಾಗಿ ಅಭ್ಯರ್ಥಿಗಳನ್ನು ಟಿ.ಇ.ಸಿ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡುತ್ತವೆ. ಕೇಂದ್ರ ಚುನಾವಣಾ ಆಯೋಗ ಮತ್ತು ಪ್ರಾದೇಶಿಕ ಸರ್ಕಾರಗಳ ಸಮಾಲೋಚನೆಯಲ್ಲಿ ಪಾರದರ್ಶಕವಾಗಿ, ಎಲ್ಲರಿಗೂ ಸಮಾನ ಅವಕಾಶ ಕೊಟ್ಟು ಟಿಇಸಿ ಸದಸ್ಯರನ್ನು ನೇಮಕ ಮಾಡಬೇಕು. ಆದರೆ 2020ರಲ್ಲಿ ಯಾವಾಗ ತಾನು ಸೋಲುತ್ತೇನೆ ಎಂಬ ಭೀತಿ ಪ್ರೆಸಿಡೆಂಟ್‌ ಲ್ಯುಕಶಂಕೋಗೆ ಕಾಡಲಾರಂಭಿಸಿತೊ, ಆಗ ಈ ಟಿಇಸಿ ಸದಸ್ಯರ ಆಯ್ಕೆಯಲ್ಲಿ ಆಯೋಗದ ಅಧ್ಯಕ್ಷೆ ಲಿಡ್ಜಿಯಾ ಯಾರ್ಮೊಂಶೈನಾ ಮೂಲಕ ಆಟ ಶುರು ಮಾಡಿದ. ವಿರೋಧ ಪಕ್ಷಗಳಿಂದ ನಾಮನಿರ್ದೇಶಿತರಾದವರನ್ನು ಹೊರಗಿಟ್ಟು ಕೇವಲ ತನ್ನ ಬೆಂಬಲಿಗರನ್ನಷ್ಟೆ ಟಿ.ಇ.ಸಿ ಮತ್ತು ಪಿ.ಇ.ಸಿ.ಗಳಲ್ಲಿ ಆಯ್ಕೆಯಾಗುವಂತೆ ನೋಡಿಕೊಂಡ. ಅಮೆರಿಕಾದ ಸ್ಟೇಟ್ಸ್‌ ಡಿಪಾರ್ಟ್‌ಮೆಂಟ್‌ನ ವರದಿ ಪ್ರಕಾರ  ಟಿಇಸಿ ಸದಸ್ಯತ್ವಕ್ಕೆ ವಿರೋಧ ಪಕ್ಷಗಳಿಂದ ನಾಮನಿರ್ದೇಶನಗೊಂಡಿದ್ದ 25 ಜನರಲ್ಲಿ ಆಯ್ಕೆಯಾಗಿದ್ದು ಕೇವಲ ಇಬ್ಬರು ಮಾತ್ರ! ಇನ್ನು ಪಿಇಸಿ ಆಯ್ಕೆಯಲ್ಲೂ ವಿರೋಧ ಪಕ್ಷದಿಂದ ನಾಮನಿರ್ದೇಶನಗೊಂಡಿದ್ದ 545 ಸದಸ್ಯರ ಪೈಕಿ ಕೇವಲ 25 ಜನರನ್ನು ಮಾತ್ರ  ಆಯ್ಕೆ ಮಾಡಲಾಗಿತ್ತು.

ಯುರೋಪ್‌ ಒಕ್ಕೂಟ ರಾಷ್ಟ್ರಗಳಲ್ಲಿ ಚುನಾವಣೆಗಳೂ ಸೇರಿದಂತೆ ಒಟ್ಟಾರೆ ಪ್ರಜಾಪ್ರಭುತ್ವ ರಕ್ಷಣೆ, ಪರಸ್ಪರ ಸಹಕಾರದ ಮೇಲ್ವಿಚಾರಣೆಗಾಗಿ Organization for Security and Co‑operation in Europe (OSCE) ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳಲಾಗಿದೆ. ಇದರ ಒಂದು ವಿಭಾಗವಾದ OSCE Office for Democratic Institutions and Human Rights (ODIHR)ನ ಪ್ರಧಾನ ಕಾರ್ಯ ತನ್ನ ಒಕ್ಕೂಟ ರಾಷ್ಟ್ರಗಳಲ್ಲಿ ಪಾರದರ್ಶಕ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳುವುದು. ಸಾಮಾನ್ಯವಾಗಿ ಒಕ್ಕೂಟದ ಯಾವುದೇ ದೇಶದಲ್ಲಿ ಚುನಾವಣೆ ಶುರುವಾದರೆ, ಆರಂಭಿಕ ಪ್ರಕ್ರಿಯೆಯಿಂದಲೆ ODIHRನ ವೀಕ್ಷಕರನ್ನು ಆಯಾ ದೇಶಗಳು ಅಹ್ವಾನಿಸುತ್ತವೆ. ಆದರೆ ಬೆಲಾರಸ್‌ನಲ್ಲಿ ಚುನಾವಣೆಯ ಅತಿಮುಖ್ಯ ಘಟ್ಟವಾದ TEC ಮತ್ತು PECಗಳ ಸದಸ್ಯರ ಆಯ್ಕೆ ಸಂದರ್ಭದಲ್ಲಿ ODIHR ವೀಕ್ಷಕರಿಗೆ ಆಹ್ವಾನ ನೀಡಲಾಗಿರಲಿಲ್ಲ. ತಮಗೆ ಬೇಕಾದವರನ್ನು ಚುನಾವಣಾ ಸಮಿತಿಗಳ ಸದಸ್ಯರಾಗಿ ಆಯ್ಕೆ ಮಾಡಿಕೊಂಡ ಮೇಲೆ, ಅಲ್ಲಿ ಪಾರದರ್ಶಕತೆ ಚುನಾವಣೆ ನಡೆಯಲು ಸಾಧ್ಯವಿಲ್ಲ, ಹಾಗಾಗಿ ನಮ್ಮ ODIHR ವೀಕ್ಷಕರನ್ನು ಬಾಕಿ ಪ್ರಕ್ರಿಯೆಗೆ ಕಳುಹಿಸಿಕೊಡಲಾಗುವುದಿಲ್ಲ ಎಂದು ಅದರ ನಿರ್ದೇಶಕಿ ಇಂಗೀಜೋರನ್‌ ಸೋಲ್ರನ್‌ ಘೋಷಿಸಿದ್ದಳು.

ಬಾಹ್ಯ ವೀಕ್ಷಕರಿಲ್ಲದೆಯೂ ಚುನಾವಣೆ ನಡೆಸುವ ಆಯೋಗದ ಅಧ್ಯಕ್ಷೆ ಲಿಡ್ಜಿಯಾ ಯಾರ್ಮೊಂಶೈನಾ ಅಂತಿಮವಾಗಿ ಶೇ.80ರಷ್ಟು ಭರ್ಜರಿ ಮತ ಪಡೆದು ಅಧ್ಯಕ್ಷ ಅಲೆಕ್ಸಾಂಡರ್ ಲ್ಯುಕಶೆಂಕೋ ಮರು ಆಯ್ಕೆಯಾಗಿದ್ದಾರೆ ಎಂದು ಫಲಿತಾಂಶ ಪ್ರಕಟಿಸುತ್ತಾಳೆ. ಜನ ಆ ಫಲಿತಾಂಶವನ್ನು ಒಪ್ಪುವುದಿಲ್ಲ. ಬೀದಿಗಿಳಿಯುತ್ತಾರೆ. ಪ್ರೆಸಿಡೆಂಟ್‌ ಲ್ಯುಕಶಂಕೋ ಮಿಲಿಟರಿ ಬಲಪ್ರಯೋಗದ ಮೂಲಕ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗುತ್ತಾನೆ. ಪಾರದರ್ಶಕ ಚುನಾವಣಾ ನೀತಿಗಳನ್ನು ಗಾಳಿಗೆ ತೂರಿ ಅಧ್ಯಕ್ಷ ಲ್ಯುಕಶೆಂಕೊ ಪರವಾಗಿ ಅಕ್ರಮ ಎಸಗಿದ್ದಕ್ಕಾಗಿ ಚುನಾವಣಾ ಆಯೋಗದ ಅಧ್ಯಕ್ಷೆ ಲಿಡ್ಜಿಯಾ ಯಾರ್ಮೊಂಶೈನಾಗೆ ಯುರೋಪಿಯನ್‌ ಒಕ್ಕೂಟ ಬಹಿಷ್ಕಾರ ಹಾಕುತ್ತದೆ. Unfortunately, ಇಷ್ಟೆಲ್ಲ ಆದರು ಕೂಡಾ ಲ್ಯುಕಶಂಕೋ ಇವತ್ತಿಗೂ ಬೆಲಾರಸ್‌ನ ಅಧ್ಯಕ್ಷನಾಗಿ ಮುಂದುವರೆದಿದ್ದಾನೆ. ಅಂದರೆ ಸತತ 30 ವರ್ಷಗಳಿಂದ ಅವನೇ ಅಧ್ಯಕ್ಷ! ಆದರೆ, ಆತನಿಗೆ ಸಹಕರಿಸಿದ ಚುನಾವಣಾ ಆಯೋಗದ ಅಧ್ಯಕ್ಷೆಯನ್ನು 2021ರಲ್ಲಿ ಹುದ್ದೆಯಿಂದ ಕೆಳಗಿಳಿಸಿ ಜನರ ವಿರೋಧವನ್ನು ಮ್ಯಾನೇಜ್‌ ಮಾಡಲಾಯ್ತು.

ಯಾವುದೇ ಪ್ರಜಾತಾಂತ್ರಿಕ ದೇಶದ ಚುನಾವಣಾ ಆಯೋಗಗಳು ಆ ದೇಶದ ಪ್ರಜಾಪ್ರಭುತ್ವದ ಅಡಿಪಾಯಗಳು. ಆ ಅಡಿಪಾಯಗಳಲ್ಲೆ ಬಿರುಕುಬಿಟ್ಟಾಗ ಎಂತೆಂಥಾ ಸರ್ವಾಧಿಕಾರಿಗಳು ಅವತರಿಸುತ್ತಾರೆ; ಅಥವಾ ಸರ್ವಾಧಿಕಾರಿಗಳು ಅಧಿಕಾರದ ಹಪಾಹಪಿಗೆ ಬಿದ್ದಾಗ ಆ ಅಡಿಪಾಯಗಳಲ್ಲಿ ಎಂತೆಂಥಾ ಬಿರುಕು ಮೂಡಿಸುತ್ತಾರೆ ಎಂಬುದಕ್ಕೆ ಈ ಉದಾಹರಣೆಗಳು ಸಾಕ್ಷಿ.

* ಗಿರೀಶ್ ತಾಳಿಕಟ್ಟೆ

Leave a Reply

Your email address will not be published. Required fields are marked *