ಎಚ್‌ಡಿಕೆ-ಬಿವೈವಿ ಕಟ್ಟಿಹಾಕಲು ಡಿ ಕೆ ಶಿವಕುಮಾರ್ ರಿಸ್ಕಿ ಗೇಮ್‌ ಪ್ಲ್ಯಾನ್?

ಸಿಎಂ ಡಿ ಕೆ ಶಿವಕುಮಾರ್‍‌ ಬಹುದೊಡ್ಡ ಸಾಹಸವೊಂದಕ್ಕೆ ಕೈಹಾಕಿರುವ ಸುದ್ದಿಗಳು ಕೇಳಿಬರ್‍ತಿವೆ. ಇನ್‌ಫ್ಯಾಕ್ಟ್‌, ಅಂತದ್ದ್ಯಾವುದಾದರು `ಡೈರೆಕ್ಟ್‌ ಆಕ್ಷನ್‌’ ತೆಗೆದುಕೊಳ್ಳಲೇಬೇಕಾದ ಸಂದಿಗ್ಧತೆಯಲ್ಲಿ ಅವರಿರುವುದು ಸತ್ಯ. ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ತಾವು ಮುಖ್ಯಮಂತ್ರಿಯಾದ ನಂತರ ಬಹಳಷ್ಟು ಹೊಣೆಗಳು ಅವರ ಹೆಗಲೇರಿಕೊಂಡಿವೆ. 2028ರ ಚುನಾವಣೆಯಲ್ಲಿ ಗೆದ್ದು ತೋರಿಸಿ, ಹೈಕಮಾಂಡ್‌ ಮುಂದೆ ತಮ್ಮ ಸಾಮರ್ಥ್ಯ ಉಳಿಸಿಕೊಳ್ಳಬೇಕಾದ್ದು ಅವುಗಳಲ್ಲಿ ಪ್ರಧಾನವಾದದ್ದು. ಅದು ಅಷ್ಟು ಸುಲಭವಿಲ್ಲವೆಂಬುದು ಅವರಿಗೂ ಗೊತ್ತು. ಯಾಕೆಂದರೆ, ಸಿದ್ದರಾಮಯ್ಯನವರ ಪದಚ್ಯುತಿಯಿಂದಾಗಿ ಅಹಿಂದ ಒಂದಷ್ಟು ಓಟ್‌ಗಳು ಅಸಮಧಾನಕ್ಕೆ ತುತ್ತಾಗಲಿದೆ ಎಂಬುದನ್ನು ಅನುಭವಿ ರಾಜಕಾರಣಿಯಾದ ಅವರೂ ಅಂದಾಜಿಸಿರುತ್ತಾರೆ; ಹೈಕಮಾಂಡ್‌ ಕೂಡಾ ಆಲೋಚಿಸಿರುತ್ತೆ. ಅದನ್ನು ಮ್ಯಾನೇಜ್‌ ಮಾಡುವ ಆಕ್ಷನ್‌ ಪ್ಲ್ಯಾನ್‌ ಅನ್ನು ಹೈಕಮಾಂಡ್ ಮುಂದಿಟ್ಟೇ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಸಿದ್ದರು ಎನ್ನಲಾಗ್ತಿದೆ. ಅದರ ಒಂದು ಸ್ಯಾಂಪಲ್ಲನ್ನು ಈಗಾಗಲೇ ಎಂ ಎಲ್‌ ಸಿ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್‍‌ ತೋರಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಶಾಸಕರಿಂದ ಅಡ್ಡಮತದಾನ ಮಾಡಿ, ಮೈತ್ರಿ ಪಕ್ಷಗಳಿಗೆ ಭರ್ಜರಿ ಮುಖಭಂಗ ಮಾಡಿದ್ದರು. ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದ್ದಾರೆ ಅನ್ನೋದು ಲೇಟೆಸ್ಟ್‌ ಸುದ್ದಿ.

ಹೌದು, ವಿಧಾನಸೌಧದ ಪಡಸಾಲೆಯಿಂದ ಹೊರಬರುತ್ತಿರುವ ಮಾಹಿತಿಗಳ ಪ್ರಕಾರ ಬಿಜೆಪಿ-ಜೆಡಿಎಸ್‌ ಪಕ್ಷದಲ್ಲಿರುವ ಅತೃಪ್ತರಿಗೆ ಗಾಳ ಹಾಕಿ ದೊಡ್ಡ ಸಂಖ್ಯೆಯಲ್ಲಿ ಪಕ್ಷಾಂತರಕ್ಕೆ ವೇದಿಕೆ ಸಿದ್ದಮಾಡಲಾಗಿದೆ ಎನ್ನಲಾಗ್ತಿದೆ. ಮುಖ್ಯವಾಗಿ ಜೆಡಿಎಸ್‌ ಪಕ್ಷದಿಂದ ಹಲವು ಹಾಲಿ ಶಾಸಕರನ್ನೆ ಸೆಳೆಯಲು ಡಿಕೆ ಯೋಜನೆ ರೂಪಿಸಿದ್ದಾರಂತೆ. ಇನ್‌ಫ್ಯಾಕ್ಟ್‌, ಸಿದ್ದರಾಮಯ್ಯನವರ ಪದತ್ಯಾಗದಿಂದ ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ಈ ರೀತಿಯಲ್ಲಿ ಸರಿದೂಗಿಸಲು ಮೊದಲೆ ಪ್ಲ್ಯಾನ್‌ ಮಾಡಿಕೊಂಡಿದ್ದ ಡಿ.ಕೆ. ಅದಕ್ಕಾಗಿ ಇನ್ನಷ್ಟು ಕಾಯುವ ಇರಾದೆಯಲ್ಲಿದ್ದರು. ಆದರೆ ಯಾವಾಗ ಎಚ್‌ ಡಿ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್‌ ಮತ್ತು ನೈಸ್‌ ಪ್ರಕರಣಗಳನ್ನಿಟ್ಟುಕೊಂಡು ನಿರಂತರ ದಾಳಿಗೆ ಮುಂದಾದರೊ ಆಗ, ಶುಭಸ್ಯ ಶೀಘ್ರಂ ಅಂತ ಈ ಆಪರೇಷನ್‌ ತಂತ್ರವನ್ನು ಈಗಲೇ ಶುರು ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ.

ಜೆಡಿಎಸ್‌ ಬುಡಕ್ಕೆ ‘ಕೈ’

ಕುಮಾರಸ್ವಾಮಿ ರಾಷ್ಟ್ರ ರಾಜಕಾರಣದಿಂದ ರಾಜ್ಯಕ್ಕೆ ಮರಳುತ್ತಾರೆ ಎನ್ನುವ ಮಾತು ಅವರ ಆಪ್ತ ವಲಯದಿಂದ ಕೇಳಿಬರುತ್ತಿದೆ. ಆದರೆ ಅವರು ಕೇಂದ್ರ ಸಚಿವರಾಗಿದ್ದ ಅವಧಿಯಲ್ಲೂ ರಾಜ್ಯ ರಾಜಕಾರಣದಿಂದ ಸಂಪೂರ್ಣ ದೂರವಾಗಿರಲಿಲ್ಲ. ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಚಟುವಟಿಕೆಗಳ ವಿರುದ್ಧ ನಿರಂತರ ದಾಳಿ ನಡೆಸುತ್ತಲೇ ಬಂದಿದ್ದಾರೆ. ಆದರೆ ರಾಜಕೀಯದಲ್ಲಿ ಒಂದು ಹಂತದವರೆಗೆ ಎದುರಾಳಿಯ ಪ್ರಹಾರಗಳನ್ನು ಸಹಿಸಿಕೊಳ್ಳುವ ಶಿವಕುಮಾರ್, ಆ ಪ್ರಹಾರಗಳು ತಮ್ಮ ರಾಜಕೀಯ ಬುಡವನ್ನೇ ಅಲ್ಲಾಡಿಸತೊಡಗಿದಾಗ ಖಡಕ್‌ ಪ್ರತಿತಂತ್ರ ಹೆಣೆಯುವ ರಾಜಕಾರಣಿ ಎಂಬುದು ಅವರ ಹಿಂದಿನ ರಾಜಕೀಯ ನಡೆಗಳಿಂದ ಸಾಬೀತಾಗಿದೆ. ಅದರ ಭಾಗವೇ ಈ ಸಾಮೂಹಿಕ ಪಕ್ಷಾಂತರದ ಶಾಕ್‌ ಟ್ರೀಟ್‌ಮೆಂಟ್‌! ಕುಮಾರಸ್ವಾಮಿಯವರ ಜೆಡಿಎಸ್‌ ಬಳಿ ಈಗ ಇರುವುದು ಕೇವಲ ಹದಿನೆಂಟು ಶಾಸಕರು ಮಾತ್ರ. ಅವರಲ್ಲೂ ದೊಡ್ಡ ಸಂಖ್ಯೆಯ ಶಾಸಕರನ್ನು ಕಾಂಗ್ರೆಸ್‌ನತ್ತ ವಲಸೆ ಬರುವಂತೆ ಮಾಡಿದರೆ, ಅವರು ತಣ್ಣಗಾಗ್ತಾರೆ ಅನ್ನೋದು ಇದರ ಹಿಂದಿನ ಲೆಕ್ಕಾಚಾರ.

ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಒಂದು ಹೆಜ್ಜೆ ಪಕ್ಷದಿಂದ ಆಚೆ ಇಟ್ಟಾಗಿದೆ. ಕಾಂಗ್ರೆಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಂ ಎಲ್‌ ಸಿ ಚುನಾವಣೆಯಲ್ಲೂ ಅವರು ಜೆಡಿಎಸ್‌ ಶಾಸಕರ ಜೊತೆ ಬರದೆ, ಪ್ರತ್ಯೇಕವಾಗಿ ಬಂದು ಮತಚಲಾಯಿಸಿ, ಆತ್ಮಸಾಕ್ಷಿಗೆ ತಕ್ಕಂತೆ ಓಟು ಮಾಡಿದ್ದೇನೆ ಎಂದಿದ್ದರು. ಇತ್ತೀಚೆಗೆ ನಡೆದ ಸಹಕಾರ ಮಹಾಮಂಡಳ ಅಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ನಂತರ, ಡಿ ಕೆ ಶಿವಕುಮಾರ್‍‌ ಮತ್ತು ಸಿದ್ದರಾಮಯ್ಯನವರು ನನ್ನ ಆಯ್ಕೆಗೆ ಸಹಕರಿಸಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈಗ ಅವರ ಮೂಲಕ, ಅವರ ಮಗ ಜಿ ಡಿ ಹರೀಶ್‌ ಮತ್ತು ಇನ್ನೂ ಕೆಲವರನ್ನು ಪಕ್ಷಕ್ಕೆ ಸೆಳೆಯಲು ಡಿ ಕೆ ಶಿವಕುಮಾರ್‍‌ ಮುಂದಾಗಿರೋದು ಲೇಟೆಸ್ಟ್‌ ಸುದ್ದಿ! ತಮ್ಮ ತಂದೆ ಪಕ್ಷದಿಂದ ದೂರ ಉಳಿದರೂ, ಕುಮಾರಸ್ವಾಮಿಯವರ ಜೊತೆಗೇ ಗುರುತಿಸಿಕೊಳ್ಳುತ್ತಿದ್ದ, ಹುಣಸೂರಿನ ಹಾಲಿ ಶಾಸಕನೂ ಆದ ಹರೀಶ್‌ ಗೌಡ, ಕೊನೆಗೆ ತಂದೆಯ ಮಾತು ಮತ್ತು ಡಿಕೆ ಮನವೊಲಿಕೆಗೆ ಕರಗಿದರೂ ಅಚ್ಚರಿಯಿಲ್ಲ.

ಕುಟುಂಬ ರಾಜಕಾರಣದ ಮುಂದುವರಿಕೆಯಾಗಿ ನಿಖಿಲ್‌ಗೆ ಪಕ್ಷದ ಹೊಣೆಗಾರಿಕೆ ನೀಡಿದ್ದು ಮತ್ತು ಇತ್ತೀಚೆಗೆ ಪಕ್ಷಕ್ಕೆ ಬಂದ ಜಾಹ್ನವಿ ಎಂಬ ಟಿವಿ ಕಾರ್ಯಕ್ರಮ ನಿರೂಪಕಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿರುವುದು ಪಕ್ಷದ ಹಲವು ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಅದೇ ಈಗ ಡಿ.ಕೆ. ಶಿವಕುಮಾರ್‍‌ ತಂತ್ರದ ಅಡಿಪಾಯ ಎನ್ನಲಾಗ್ತಿದೆ.

ಹಸ್ತದತ್ತ ಬಿಜೆಪಿ ನಾಯಕರು?

ಈ ಪಟ್ಟಿಯಲ್ಲಿ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರಮುಖ ಹೆಸರು. 2019ರಲ್ಲಿ ಪಕ್ಷೇತರರಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ನಂತರ ಬಿಜೆಪಿಯೊಂದಿಗೆ ಗುರುತಿಸಿಕೊಂಡರು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯನ್ನು ಮುಂದಿಟ್ಟುಕೊಂಡು ಮಂಡ್ಯವನ್ನು ಕುಮಾರಸ್ವಾಮಿಯವರು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಅದು ಸುಮಲತಾ ಅವರ ರಾಜಕೀಯ ಜೀವನಕ್ಕೆ ದೊಡ್ಡ ಏಟು ಕೊಟ್ಟಿತು. ಅಷ್ಟಾದರೂ ಅವರು ಅನಿವಾರ್ಯವಾಗಿ ಬಿಜೆಪಿಯಲ್ಲಿ ಉಳಿದಿದ್ದಾರೆ. ಈಗ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಮೂಲಕ, ತಾವು ಸಂಸದರಾಗಿರುವ ಮಂಡ್ಯದಲ್ಲೆ ಕುಮಾರಸ್ವಾಮಿಯವರಿಗೆ ದೊಡ್ಡ ಶಾಕ್‌ ಕೊಡುವುದು ಡಿ ಕೆ ಶಿವಕುಮಾರ್‍‌ ಅವರ ಗುರಿ! ಸುಮಲತಾ ಅವರನ್ನು ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿಸುವುದಲ್ಲದೆ, ಅವರ ಮಗ ಅಭಿಷೇಕ್‌ ಅವರನ್ನು ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಜೆಡಿಎಸ್‌ ಅಸ್ತಿತ್ವಕ್ಕೆ ಏಟು ಕೊಡುವುದು ಇದರ ಉದ್ದೇಶ. ಮಂಡ್ಯದಲ್ಲಿ ಡಿ ಕೆ ಸೋದರರ ಪ್ರಭಾವ ಮೇಲುಗೈ ಸಾಧಿಸಿದರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದೂ ಸುಲಭವಾಗಲಿದೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ತಮ್ಮ ಬಾವ ಡಾ.ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಮಂಜುನಾಥ್‌ ಅವರಿಗಿದ್ದ `ಹೃದಯವಂತ’ ಇಮೇಜು ಬಳಸಿಕೊಂಡು ಡಿ.ಕೆ. ಸುರೇಶ್ ಅವರನ್ನು ಸೋಲಿಸುವಲ್ಲೂ ಕುಮಾರಸ್ವಾಮಿ ಯಶಸ್ವಿಯಾಗಿದ್ದರು. ಈಗ ಸುಮಲತಾ ಅವರನ್ನು ಕಾಂಗ್ರೆಸ್‌ಗೆ ಸೆಳೆದರೆ, ಅಕ್ಕಪಕ್ಕದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಕುಮಾರಸ್ವಾಮಿಯವರ ಪ್ರಭಾವ ಕುಗ್ಗಲಿದೆ.

ಕುಮಾರಸ್ವಾಮಿಯವರಿಗೆ ಹೇಗೆ ಅವರ ಸ್ವಕ್ಷೇತ್ರದಲ್ಲಿ ಶಾಕ್‌ ಕೊಡಲು ಯೋಚಿಸಿದ್ದಾರೋ, ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಅವರ ಸ್ವಂತ ಶಿಕಾರಿಪುರದಲ್ಲಿ ಚೆಕ್‌ಮೇಟ್‌ ಇಡಲೂ ಡಿ ಕೆ ಶಿವಕುಮಾರ್‍‌ ಯೋಜಿಸಿದ್ದಾರೆ. ಅದಕ್ಕಾಗಿ, ಸದ್ಯ ಬಿಜೆಪಿಯಲ್ಲಿದ್ದರೂ ವಿಜಯೇಂದ್ರ ವಿರುದ್ಧದ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿರುವ ಕುಮಾರ್‍‌ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಯೋಜನೆ ತಯಾರಾಗಿದೆಯಂತೆ. 2028ರ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ವಿರುದ್ಧ ಕುಮಾರ್‍‌ ಬಂಗಾರಪ್ಪ ಅವರನ್ನು ಕಣಕ್ಕಿಳಿಸಿ, ಪ್ರಬಲ ಸ್ಪರ್ಧೆ ಒಡ್ಡಿದರೆ ವಿಜಯೇಂದ್ರ ರಾಜ್ಯ ಪ್ರವಾಸ ಬಿಟ್ಟು ಶಿಕಾರಿಪುರಕ್ಕೆ ಸೀಮಿತವಾಗಬೇಕಾಗುತ್ತದೆ. ಇದು ಬಿಜೆಪಿಯ ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ. ಅದರಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ. ಕಾಂಗ್ರೆಸ್‌ ಸೇರಲು ಕುಮಾರ್‍‌ ಬಂಗಾರಪ್ಪ ಸಹ ಉತ್ಸುಕರಾಗಿದ್ದಾರಂತೆ. ದಾಯಾದಿ ಕಲಹದ ಕಾರಣಕ್ಕೆ ಅವರ ವಿರುದ್ಧ ಸಿಟ್ಟಾಗಿದ್ದ ಸೋದರ ಸಚಿವ ಮಧು ಬಂಗಾರಪ್ಪ ಅವರನ್ನೂ ಕನ್ವಿನ್ಸ್‌ ಮಾಡುವಲ್ಲಿ ಡಿ ಕೆ ಶಿವಕುಮಾರ್‍‌ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ.

ಇದು ವಿಜಯೇಂದ್ರ ಪಾಲಿಗೆ ದೊಡ್ಡ ಕಂಟಕವಾಗಲಿದೆ. ಯಾಕೆಂದರೆ, 2023ರ ಅಸೆಂಬ್ಲಿ ಚುನಾವಣೆಯಲ್ಲೆ ಬಿ ವೈ ವಿಜಯೇಂದ್ರ ಬಹುಪಾಲು ಸೋತುಗೆದ್ದಂತವರು. ಕಾಂಗ್ರೆಸ್ ಒಂದೊಮ್ಮೆ ಟಿಕೆಟನ್ನು ಎಸ್‌ ಪಿ ನಾಗರಾಜಗೌಡರಿಗೆ ನೀಡಿದ್ದರೆ ವಿಜಯೇಂದ್ರ ಸೋಲಿನ ರುಚಿ ಕಾಣಬೇಕಿತ್ತು. ಅದೇನು ಆಶ್ಚರ್ಯವೋ ಏನೊ, ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ ಗೋಣಿ ಮಾಲತೇಶ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ಈ ಕೈ ಅಭ್ಯರ್ಥಿ ಗಳಿಸಿದ್ದು ಕೇವಲ ಎಂಟು ಸಾವಿರ ಮತ ಮಾತ್ರ! ಟಿಕೆಟ್‌ ಕೈತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗರಾಜಗೌಡ 70 ಸಾವಿರ ಮತ ಪಡೆದು ಸಖತ್‌ ಪೈಪೋಟಿ ಕೊಟ್ಟರು. 81 ಸಾವಿರ ಮತ ಪಡೆದ ವಿಜಯೇಂದ್ರ ಕೇವಲ 11 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ಇರುವ ಈ ಓಟುಗಳ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್‍‌, ಬಂಗಾರಪ್ಪನವರ ಮಗ ಎಂಬ ಟ್ರಂಪ್‌ ಕಾರ್ಡ್‌ ಬಳಿಸಿ ಕುಮಾರ್‍‌ ಬಂಗಾರಪ್ಪನವರನ್ನು ಕಣಕ್ಕಿಳಿಸಿದರೆ ವಿಜಯೇಂದ್ರ ಪರಿಸ್ಥಿತಿ ನಿಜಕ್ಕೂ ಚಿಂತಾಜನಕವಾಗಲಿದೆ.

ಹಾಸನಕ್ಕೂ ಕಣ್ಣು

ಇನ್ನೊಂದೆಡೆ ದೇವೇಗೌಡರ ಕುಟುಂಬದ ಕರ್ಮಭೂಮಿಯಾದ ಹಾಸನವನ್ನು ಡಿ ಕೆ ಶಿವಕುಮಾರ್‍‌ ತಮ್ಮ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಗಾಳ ಹಾಕಿರುವುದು ಬಿಜೆಪಿಯ ಪ್ರೀತಂ ಗೌಡಗೆ! ದೇವೇಗೌಡರ ಫ್ಯಾಮಿಲಿ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದ ಪ್ರೀತಂ ಗೌಡ ಹಾಸನದಲ್ಲಿ ಬಿಜೆಪಿಯನ್ನು ಕಟ್ಟಲು ಸಾಕಷ್ಟು ಶ್ರಮ ಹಾಕಿದ್ದಾರೆ. ಹಾಸನದಲ್ಲಿ ಗೆದ್ದು ಶಾಸಕರಾಗುವ ಮೂಲಕ ತಮ್ಮ ಪ್ರಾಬಲ್ಯವನ್ನು ಸಾಬೀತು ಮಾಡಿದ್ದರು. ಆದರೆ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಯಾದ ನಂತರ, ಪ್ರೀತಂ ಗೌಡರನ್ನು ಹಾಸನ ರಾಜಕಾರಣದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ. ಪ್ರಜ್ವಲ್‌ ರೇವಣ್ಣನ ಲೈಂಗಿಕ ಹಗರಣದ ಪೆನ್‌ಡ್ರೈವ್‌ಗಳನ್ನು ಜಾಹೀರುಗೊಳಿಸಿದ್ದೆ ಪ್ರೀತಂ ಗೌಡ ಎನ್ನುವ ಗುಮಾನಿ ದೇವೇಗೌಡರ ಕುಟುಂಬ ಸದಸ್ಯರಿಗೆ ಇರುವುದು, ಅವರ ನಡುವಿನ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಮೈತ್ರಿ ಪಕ್ಷಗಳು ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆ ಸಮಯದಲ್ಲಿ ಪ್ರೀತಂ ಗೌಡ ಕಾಣಿಸಿಕೊಂಡಾಗ ಮಾರಾಮಾರಿ ನಡೆದಿದ್ದು ಇದಕ್ಕೆ ಸಾಕ್ಷಿ.

ಮೈತ್ರಿಯ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ನಾಯಕರು ದೇವೇಗೌಡರ ಕುಟುಂಬದ ಬಗ್ಗೆ ಸಾಫ್ಟ್ ಕಾರ್ನರ್‍‌ ತಳೆದಿರುವುದು ಪ್ರೀತಂ ಗೌಡರ ಕೈಕಟ್ಟಿ ಹಾಕಿದಂತೆ ಮಾಡಿದೆ. ಯಾಕೆಂದರೆ ಅವರು ಹಾಸನ ಮತ್ತು ಹೊಳೆನರಸೀಪುರದಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇ ದೇವೇಗೌಡರ ಫ್ಯಾಮಿಲಿ ರಾಜಕಾರಣದ ವಿರುದ್ಧ. ಈಗ ಅವರು ಅಸಮಾಧಾನಕ್ಕೀಡಾಗಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡ ಡಿ ಕೆ ಶಿವಕುಮಾರ್‍‌ ಅವರನ್ನು ಕಾಂಗ್ರೆಸ್‌ಗೆ ಸೆಳೆದು ಜೆಡಿಎಸ್‌ಗೆ ಕರ್ಮಭೂಮಿಯಲ್ಲೆ ಪೈಪೋಟಿ ಕೊಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇನ್ನು ಎಸ್‌ ಟಿ ಸೋಮಶೇಖರ್‍‌ ಮತ್ತು ಶಿವರಾಂ ಹೆಬ್ಬಾರ್‍‌ ಅದಾಗಲೇ ಬಿಜೆಪಿಯಿಂದ ಉಚ್ಛಾಟಿತರಾಗಿ ಕಾಂಗ್ರೆಸ್‌ ಜೊತೆ ಬಹಿರಂಗವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರನ್ನು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳುವುದು ಡಿ ಕೆ ಶಿವಕುಮಾರ್‍‌ ಅವರ ಪ್ಲ್ಯಾನ್‌. ಕೆಲವು ಹಾಲಿ ಶಾಸಕರು ಪಕ್ಷಾಂತರ ಮಾಡಿದರೆ, ಅವರ ಶಾಸಕ ಸ್ಥಾನ ರದ್ದಾಗಿ ಉಪಚುನಾವಣೆ ಎದುರಾಗಬಹುದು. 2028ಕ್ಕೂ ಮೊದಲು ಆ ಮಿನಿ ಸಮರವನ್ನು ಮುಖಾಮುಖಿಯಾಗಿ, ಸರ್ಕಾರದ ಪ್ರಭಾವ ಬಳಸಿಕೊಂಡು ಗೆದ್ದುಬರುವ ಮೂಲಕ ತನ್ನ ವರ್ಚಸ್ಸು ವೃದ್ಧಿಸಿಕೊಳ್ಳುವುದು; ಹೈಕಮಾಂಡ್‌ ನಾಯಕರಲ್ಲಿ ವಿಶ್ವಾಸ ಮೂಡಿಸಿ, 2028ಕ್ಕೂ ತನ್ನನ್ನೇ ಸಿಎಂ ಅಭ್ಯರ್ಥಿಯಾಗುವಂತೆ ಮನವೊಲಿಸುವುದು; ಉಪಚುನಾವಣೆಗಳ ಸೋಲಿನ ಮೂಲಕ ವಿರೋಧ ಪಕ್ಷಗಳಲ್ಲಿ 2028ರ ಚುನಾವಣೆ ಬಗ್ಗೆ ಭೀತಿ ಹುಟ್ಟುವಂತೆ ಮಾಡಿ, ಅಧೀರಗೊಳಿಸುವುದು ಡಿ ಕೆ ಶಿವಕುಮಾರ್‍‌ ಅವರ ತಂತ್ರ! ಸಿದ್ದರಾಮಯ್ಯನವರ ಪದಚ್ಯುತಿಯಿಂದಾಗಿ ಕಾಂಗ್ರೆಸ್‌ ಪಾಳೆಯದಲ್ಲಿ ಆವರಿಸಿರುವ ಗೊಂದಲ ಮತ್ತು ಎಚ್‌ ಡಿ ಕುಮಾರಸ್ವಾಮಿಯವರ ನಿರಂತರ ಉಪಟಳಗಳನ್ನು ನಿಭಾಯಿಸಬೇಕೆಂದರೆ, ಈಗ ತಾನು ಇಂತದ್ದೊಂದು ರಿಸ್ಕ್‌ಗೆ ಸಿದ್ದವಾಗಲೇಬೇಕೆಂದು ಡಿ ಕೆ ಶಿವಕುಮಾರ್‍‌ ನಿರ್ಧರಿಸಿದ್ದಾರೆ ಎನ್ನುವುದು ಸುದ್ದಿ. ರಾಷ್ಟ್ರಮಟ್ಟದಲ್ಲೂ ರಕ್ಷಣಾತ್ಮಕ ಶೈಲಿಯಲ್ಲಿ ಕಳೆದುಹೋಗಿರುವ ಕಾಂಗ್ರೆಸ್‌ಗೆ, ಡಿ ಕೆ ಶಿವಕುಮಾರ್‍‌ ಅವರ ಈ ಅಟ್ಯಾಕಿಂಗ್‌ ಶೈಲಿ ಕರ್ನಾಟಕ ಕಾರ್ಯಕರ್ತರ ಮಟ್ಟಿಗೆ ದೊಡ್ಡ ಶಕ್ತಿ ಎಂದರೂ ತಪ್ಪಲ್ಲ.  ಒಟ್ಟಿನಲ್ಲಿ 2028 ಸನಿಹವಾದಂತೆ ತಾನು ರಂಗೇರಲಿದ್ದೇನೆ ಎಂಬ ಹಲವು ಸುಳಿವುಗಳನ್ನು ಡಿ ಕೆ ಶಿವಕುಮಾರ್‍‌ ರವಾನಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ ಪಾಳೆಯದಲ್ಲಿ ಚಿಂತೆಗೆ ಕಾರಣವಾಗಿರೋದೆ ಈ ಸಂಗತಿ. ಯಾಕೆಂದರೆ ಆ ಎರಡೂ ಪಕ್ಷಗಳಲ್ಲಿ ಡಿಕೆಶಿಯವರನ್ನು ಮುಖಾಮುಖಿಯಾಗುವಂತಹ ನಾಯಕತ್ವಗಳ ಕೊರತೆ ಎದ್ದುಕಾಣುತ್ತಿದೆ.

One thought on “ಎಚ್‌ಡಿಕೆ-ಬಿವೈವಿ ಕಟ್ಟಿಹಾಕಲು ಡಿ ಕೆ ಶಿವಕುಮಾರ್ ರಿಸ್ಕಿ ಗೇಮ್‌ ಪ್ಲ್ಯಾನ್?”

  1. ಉತ್ತಮ ವಾದ ವಿಶ್ಲೇಷಣೆ, ಸರಿಯಾದ ಊಹೆ, ಸೂಕ್ತ ಸಂಶೋಧನೆ. ಷಣ್ಮುಖ ಅವರ ಬರಹದ ಮೊನಚು ಪರಿಚಿತವಾಗಿದೆ.

Leave a Reply

Your email address will not be published. Required fields are marked *