ದೇಶವು ಜೆನ್-ಜಿಗಳ ಪ್ರತಿಭಟನೆ, ಗ್ಯಾನೇಶ್ ಕುಮಾರ್ ರಾಜೀನಾಮೆಯ ಆಕ್ರೋಶದಲ್ಲಿ ಮುಳುಗಿಹೋಗಿರುವ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣ `ಸ್ಟಿಂಗ್ ಆಪರೇಷನ್’ ಚರ್ಚೆಯಲ್ಲಿ ತಲ್ಲೀನಗೊಂಡಿದೆ. ಮೊನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಸಿಎಂ ಡಿಕೆ ಶಿವಕುಮಾರ್ ತಮ್ಮ ಸಚಿವರಿಗೆ ಹೇಳಿದ್ದಾರೆನ್ನಲಾದ ಒಂದು `ಕಿವಿ’ಮಾತು ಈ ಚರ್ಚೆಯ ಕೇಂದ್ರ. ‘ಕೆಲವು ಸಚಿವರನ್ನು ಟಾರ್ಗೆಟ್ ಮಾಡಿ, ಉತ್ತರ ಭಾರತದವರಿಂದ ಸ್ಟಿಂಗ್ ಆಪರೇಷನ್ ಮಾಡಿಸಲು ವಿರೋಧಿಗಳು ಪ್ಲ್ಯಾನ್ ಹಾಕ್ಕೊಂಡಿದಾರೆ, ಯಾವುದಕ್ಕೂ ನಿಮ್ಮ ಹುಷಾರಲ್ಲಿ ನೀವು ಇರಿ’ ಅಂತ ಡಿಕೆಶಿ ಹೇಳಿದ್ದಾರೆನ್ನುವುದು ಸಾರಾಂಶ. ಗಾಳಿ ಸುದ್ದಿಯಂತೆ ಹಬ್ಬಿದ ಈ ಸಂಗತಿಯನ್ನು ಹಿರಿಯ ಸಚಿವ ಸತೀಶ್ ಜಾರಕಿಹೊಳಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೌದೆನ್ನುವ ಅರ್ಥದಲ್ಲಿ ಖಾತರಿ ಮಾಡಿದ್ದಾರೆ.
ಸಿಎಂ ಸೇರಿದಂತೆ ಕೆಲವು ಟಾರ್ಗೆಟೆಡ್ ಸಚಿವರ ವಿರುದ್ಧ ನಿಜಕ್ಕೂ ಸ್ಟಿಂಗ್ ಕಾರ್ಯಾಚರಣೆಯ ಪ್ರಯತ್ನ ನಡೆದಿತ್ತೇ? ಯಾವ ಬಗೆಯ ಸ್ಟಿಂಗ್? ಭ್ರಷ್ಟಾಚಾರದ್ದೋ? ವ್ಯಭಿಚಾರದ್ದೋ? ಸ್ಟಿಂಗ್ ಯೋಜನೆಯ ಸೂತ್ರಧಾರ ಯಾರು?….. ಸದ್ಯಕ್ಕೆ ಗಿರಕಿ ಹೊಡೆಯುತ್ತಿರುವ ಪ್ರಶ್ನೆಗಳು ಇವು. ರಾಜಕಾರಣದಲ್ಲಿ ಯಾವ ಪ್ರಶ್ನೆಗಳಿಗು ಉತ್ತರ ನೇರಾನೇರಾ ಸಿಗಲಾರವು. ಆದರೆ ಆಜುಬಾಜಿನ ಘಟನಾವಳಿಗಳನ್ನು ಒಂದಕ್ಕೊಂದು ಪೋಣಿಸುತ್ತಾ ಸಾಗಿದಂತೆ ಒಂದಷ್ಟು ಒಳಹುಗಳು ತೆರೆದುಕೊಳ್ಳುತ್ತವೆ. ಸ್ಟಿಂಗ್ ಆಪರೇಷನ್ ವಿಚಾರದಲ್ಲು ಅಂತದ್ದೆ ಕೆಲವು ಒಳಹುಗಳಿವೆ. Connecting the dots ರೀತಿ ನೋಡಿದಾಗ, ಒಟ್ಟಾರೆಯಾಗಿ ಈ ವಿದ್ಯಮಾನದಲ್ಲಿ ಡಿ ಕೆ ಶಿವಕುಮಾರ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದುರುಳಿಸಿದ್ದರೆ; ಎಚ್ಡಿಕೆ ಮತ್ತೊಂದು ಸಂಕಟವನ್ನು ಮೈಮೇಲೆ ಎಳೆದುಕೊಂಡಂತೆ ಕಾಣಿಸುತ್ತೆ.
ಹೀಗೆ ಹೇಳಲು ಕಾರಣವಿದೆ. ‘ಕೇಂದ್ರ ಸಚಿವರೊಬ್ಬರು ಈ ಸ್ಟಿಂಗ್ ಕಾರ್ಯಾಚರಣೆಯ ಹಿಂದಿದ್ದಾರೆ’ ಎನ್ನುವ ನೆರೇಟಿವಿಟಿಯನ್ನು ವ್ಯವಸ್ಥಿತವಾಗಿ ಹರಿಬಿಡಲಾಗುತ್ತಿದೆ. ಅದರಲ್ಲೂ ಡಿಕೆಶಿಯವರ ಪರಮಾಪ್ತ ಎನಿಸಿಕೊಂಡ ಮಂಡ್ಯ ಶಾಸಕ ಗಣಿಗ ರವಿ, ಪೆನ್ಡ್ರೈವ್ ಪ್ರದರ್ಶಿಸುವ ಮೂಲಕ ಪರೋಕ್ಷವಾಗಿ ಆ ಕೇಂದ್ರ ಸಚಿವ ಎಚ್ಡಿಕೆ ಎನ್ನುವ ಸಂದೇಶ ರವಾನಿಸಿದ್ದಾರೆ. ಇದು ಸುಳ್ಳೋ? ನಿಜವೋ? ಗೊತ್ತಿಲ್ಲ. ಆದರೆ ಕಳೆದ ತಿಂಗಳು, ವಿದೇಶ ಪ್ರವಾಸಕ್ಕೆ ಹೊರಡುವ ಮುನ್ನ ಕುಮಾರಸ್ವಾಮಿಯವರು ‘ಪ್ರವಾಸದಿಂದ ಮರಳಿದ ಬಳಿಕ ದೇಶವೆ ಬೆಚ್ಚಿ ಬೀಳುವ ಸುದ್ದಿ ನೀಡ್ತೀನಿ’ ಎಂದಿದ್ದು ನೆನಪಿರಬಹುದು. ಹಾಗಾದರೆ, ಆ ಬೆಚ್ಚಿಬೀಳುವ ಸುದ್ದಿ ಕಾಂಗ್ರೆಸ್ ನಾಯಕರ ವಿರುದ್ದ ನಡೆಸಲಾಗಿದ್ದ ಇದೇ ಸ್ಟಿಂಗ್ ಕಾರ್ಯಾಚರಣೆಯಾಗಿತ್ತಾ? ಸಿಎಂ ಡಿಕೆಶಿ ವಿರುದ್ಧ ನಡೆಸಲಾಗಿದ್ದ ಆ ಸ್ಟಿಂಗ್ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲವೇ? ಈ ಪ್ರಶ್ನೆಗಳು ಇಲ್ಲಿ ಯಾಕೆ ಮುಖ್ಯವಾಗ್ತವೆ ಅಂದ್ರೆ, ವಿದೇಶದಿಂದ ಬಂದ ಕುಮಾರಸ್ವಾಮಿಯವರು ಅಂತಹ ಯಾವುದೇ ಸ್ಪೋಟಕ ಸುದ್ದಿ ಹೊರಹಾಕಲಿಲ್ಲ. ಕೆಲ ದಿನಗಳ ನಂತರ ಅವರು ಪತ್ರಿಕಾಗೋಷ್ಠಿ ನಡೆಸಿದ್ದು ಕೂಡಾ ಇಪ್ಪತ್ತು ವರ್ಷಗಳಷ್ಟು ಹಳೆಯ ನೈಸ್ ಹಗರಣದ ಬಗ್ಗೆ; ಬಿಡುಗಡೆ ಮಾಡಿದ್ದು ಸಹಾ, ಖಾಸಗಿ ಟಿವಿ ಚಾನೆಲ್ನಲ್ಲಿ ಡಿಕೆ ಶಿವಕುಮಾರ್ ಆನ್-ಏರ್ ಮಾತಾಡಿದ್ದ ವಿಡಿಯೊವೊಂದರ ಆಡಿಯೋ ಕ್ಲಿಪ್! ಇವ್ಯಾವುವೂ ಸ್ಪೋಟಕ ಸುದ್ದಿಗಳಾಗಿರಲಿಲ್ಲ. ತನ್ನ ಮೇಲೆ ಯಾವ ಅಪವಾದವೂ ಬರದಂತೆ ತಾನು ಇಂಡಿಯಾದಲ್ಲಿ ಇಲ್ಲದ ಸಮಯದಲ್ಲಿ ಸ್ಟಿಂಗ್ ಆಪರೇಷನ್ ನಡೆಸಲು, ಎಚ್ಡಿಕೆ ವಿದೇಶ ಪ್ರವಾಸಕ್ಕೆ ತೆರಳಿದ್ದರೇ? ಎಂಬ ಅನುಮಾನ ಇಲ್ಲಿ ಮೂಡುತ್ತೆ.

ಅಕಸ್ಮಾತ್ ಎಚ್ಡಿಕೆಯವರೇ ಈ ಯೋಜನೆ ರೂಪಿಸಿದ್ದರು ಅಂತಿಟ್ಟುಕೊಳ್ಳಿ, ಆಗ ಇಂತದ್ದೊಂದು ಮುನ್ನೆಚ್ಚರಿಕೆಯನ್ನು ಅವರು ತೆಗೆದುಕೊಳ್ಳಲೇಬೇಕಿತ್ತು. ಯಾಕೆಂದರೆ, ಡಿಕೆಶಿ ಕೇವಲ ಕಾಂಗ್ರೆಸ್ ನಾಯಕ ಮಾತ್ರ ಅಲ್ಲ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಲೀಡರ್ ಕೂಡಾ ಹೌದು. ತಮ್ಮದೇ ಸಮುದಾಯದ ನಾಯಕ ಸಿಎಂ ಆಗಿರುವಾಗ, ಅದೇ ಸಮುದಾಯದ ಎಚ್ಡಿಕೆ ಸರ್ಕಾರಕ್ಕೆ ಉಪಟಳ ನೀಡುತ್ತಿರುವುದರ ಬಗ್ಗೆ ಈಗಾಗಲೇ ಸಮುದಾಯದ ಮುಖಂಡರು, ಮಠಾಧಿಪತಿಗಳಿಂದ ಅಪಸ್ವರ ಕೇಳಿಬರುತ್ತಿದೆ ಎನ್ನಲಾಗ್ತಿದೆ. ಇಂತಹ ಸಮಯದಲ್ಲಿ ಡಿಕೆಶಿ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿದ ಅಪವಾದ ಎಚ್ಡಿಕೆಯವರ ಮೇಲೆ ಬಂದರೆ, ಅದನ್ನು ಡಿಕೆಶಿ ವಿಕ್ಟಿಮ್ ಕಾರ್ಡ್ ಆಗಿ ಬಳಸುವ ಮತ್ತು ಒಕ್ಕಲಿಗ ವೋಟ್ ಬ್ಯಾಂಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅಪಾಯವೂ ಇರುತ್ತಿತ್ತು. ಹಾಗಾಗಿ ಮುನ್ನೆಚ್ಚರಿಕೆಯ ಭಾಗವಾಗಿ, ಸ್ಟಿಂಗ್ ಆಪರೇಷನ್ನಿಗೆ ಎಲ್ಲಾ ವ್ಯವಸ್ಥೆ ಮಾಡಿಟ್ಟು ಅವರು ವಿದೇಶಕ್ಕೆ ತೆರಳಿದ್ದರಾ? ಎಂಬ ಅನುಮಾನ ಇಲ್ಲಿ ಕಾಡುತ್ತೆ.
‘ನನ್ನ ವಿರುದ್ಧವೇ ಸ್ಟಿಂಗ್ ಕಾರ್ಯಾಚರಣೆಗೆ ಮುಂದಾಗಿದ್ದರು. ನಾನೇಗೋ ಬಚಾವಾಗಿದ್ದೇನೆ. ಇನ್ನು ನಿಮ್ಮ ಹುಷಾರಲ್ಲಿ ನೀವು ಇರಿ’ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ ಎಂದು ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಇದರರ್ಥ ಬೇರೆ ಸಚಿವರಿಗಿಂತ ಮೊದಲ ಟಾರ್ಗೆಟ್ ಡಿಕೆಶಿಯವರೇ ಆಗಿದ್ದರು ಎಂದಾಯಿತು. ಹಾಗಾದರೆ, ಅದೃಷ್ಟವಶಾತ್ ಡಿಕೆಶಿ ಆ ಬಲೆಯಿಂದ ಬಚಾವಾಗಿದ್ದರಿಂದಾಗಿ, ವಿದೇಶದಿಂದ ಮರಳಿದ ಎಚ್ಡಿಕೆ ಬಳಿ ಯಾವುದೇ ಸ್ಪೋಟಕ ಸುದ್ದಿ ಲಭ್ಯವಿಲ್ಲದೆ ಸುಮ್ಮನಾದರೇ? ಈಗಾಗಲೇ ಹೇಳಿದಂತೆ ರಾಜಕಾರಣದ ಇಂತಹ ಪ್ರಶ್ನೆಗಳಿಗೆ ನೇರಾನೇರಾ ಉತ್ತರಗಳು ಸಿಗುವುದು ಕಷ್ಟ. ಯಾಕೆಂದರೆ, ಎಚ್ಡಿಕೆ ವಿದೇಶದಿಂದ ಮರಳುವ ಮೊದಲೇ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿರುವ ಮತ್ತು ಅದರಲ್ಲಿ ಅಶ್ಲೀಲ ವಿಡಿಯೊಗಳಿರುವ ಸುದ್ದಿ ಮೀಡಿಯಾಗಳಲ್ಲಿ ಚರ್ಚೆಯಾಗುವಂತೆ ನೋಡಿಕೊಂಡಿದ್ದು ಕೂಡಾ ಎಚ್ಡಿಕೆಯವರು ಸುಮ್ಮನಾಗಲು ಒಂದು ಕಾರಣ ಎನ್ನಲಾಗುತ್ತೆ. ಕಾರಣ ಯಾವುದೇ ಇರಲಿ, ಆದರೆ ಒಂದಂತೂ ಸತ್ಯ; ವಿದೇಶದಿಂದ ವಾಪಾಸಾದ ಕುಮಾರಸ್ವಾಮಿಯವರು ಸ್ಪೋಟಕ ಸುದ್ದಿ ನೀಡದೆ ಸೈಲೆಂಟಾಗುಳಿದಿದ್ದರು!
ಈ ಹಂತದಲ್ಲಿ ಇಂಟರೆಸ್ಟಿಂಗ್ ಅನ್ನಿಸುವುದು ಡಿ ಕೆ ಶಿವಕುಮಾರ್ ಅವರ ರಾಜಕೀಯ ತಂತ್ರ. ಇದನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದಿತ್ತು. ಆದರೆ ಒಂದೇ ಕಲ್ಲಿಗೆ ಎರಡು ಹಕ್ಕಿ ಉರುಳಿಸಲು ದಾಳವಾಗಿ ಬಳಸಿಕೊಂಡಿದ್ದಾರೆ! ಮೊದಲನೆಯದ್ದು, ತಮ್ಮ ಶಾಸಕರು ಮತ್ತು ಸಚಿವರ ನಡುವೆ `ಸ್ಟಿಂಗ್’ ಎಂಬ ಭೀತಿಯನ್ನು ಹುಟ್ಟುಹಾಕಿ, ಅವರಿಗೆ ತನ್ನ ರಕ್ಷಣೆಯ ಅಗತ್ಯವನ್ನು ಅರ್ಥ ಮಾಡಿಸುವ `ಬಿಸಿ’ಯನ್ನು ರವಾನಿಸಿದ್ದಾರೆ. ತಮ್ಮ ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಸಿದ್ದರಾಮಯ್ಯನವರಿಗೆ ಇದ್ದಂತೆ ಭರಪೂರ ಬೆಂಬಲ ತನಗಿಲ್ಲ ಎಂಬುದು ಡಿಕೆಶಿಯವರಿಗೆ ತಿಳಿಯದ ಸಂಗತಿಯಲ್ಲ. ಅದರಲ್ಲೂ, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮುಖ್ಯಮಂತ್ರಿ ಹುದ್ದೆಗೇರಿದ ನಂತರ ಬಹಳಷ್ಟು ಮಂದಿಗೆ ಅಸಮಾಧಾನಗಳು ಹೊಗೆಯಾಡುತ್ತಿವೆ. ಇಂಥಾ ಪರಿಸ್ಥಿತಿಯಲ್ಲಿ ತನ್ನ ನಾಯಕತ್ವದ ವಿರುದ್ಧ ಯಾವ ಕ್ಷಣದಲ್ಲಾದರೂ ಆಂತರಿಕ ಭಿನ್ನಮತಗಳು ಹುಟ್ಟಿಕೊಳ್ಳಬಹುದು; ಅದಕ್ಕೆ ಆಸ್ಪದ ಕೊಡಬಾರದೆಂದರೆ, ತನ್ನಿಂದ ಅವರಿಗೆ ಸಿಗಬಹುದಾದ ರಕ್ಷಣೆಯ ಅಥವಾ ತನ್ನಿಂದಲೇ ಅವರಿಗೆ ಆಗಬಹುದಾದ ಅಪಾಯವನ್ನು ಮನಗಾಣಿಸುವುದು ಮಾತ್ರ ಅವರ ಮುಂದಿರುವ ಆಯ್ಕೆ. ಇತ್ತೀಚೆಗೆ ಸದನದಲ್ಲಿ `ಇಬ್ಬರ ಹೆಂಡಿರ ಪಟ್ಟಿ’ಯ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದು ಕೂಡಾ ಈ ಬಗೆಯ ರಾಜಕೀಯ ಪ್ರಕ್ಷುಬ್ಧತೆಯನ್ನು ಸೃಷ್ಟಿಸುವ ಭಾಗ ಎನ್ನಲಾಗ್ತಿದೆ.

ಈಗ ತನ್ನ ವಿರುದ್ಧ ನಡೆದಿರಬಹುದಾದ ಸ್ಟಿಂಗ್ ಆಪರೇಷನ್ ಅನ್ನು ಗುಪ್ತವಾಗಿಡಬಹುದಾದ ಅವಕಾಶ ಇದ್ದಾಗ್ಯೂ, `ಕಿವಿಮಾತಿ’ನ ರೂಪದಲ್ಲಿ ಸಚಿವರುಗಳಿಗೆ ಭೀತಿಯನ್ನು ವರ್ಗಾಯಿಸಿದ್ದಾರೆ. ಅಂತಹ ಸಂದರ್ಭ ತಮಗೆ ಎದುರಾದರೆ, ತಮ್ಮ ರಕ್ಷಣೆಗೆ ಒಬ್ಬ ನಾಯಕ ಬೇಕಲ್ಲವೇ? ಸದ್ಯಕ್ಕೆ ಡಿಕೆಶಿ ಸಿಎಂ ಆಗಿರೋದ್ರಿಂದ ಅವರ ಬಲ ಬೇಕೇಬೇಕು ಎಂಬ ಇಷ್ಟು ಭೀತಿ ಸಚಿವರಲ್ಲಿ ಮೂಡಿದರೂ ಡಿಕೆಶಿ ಗೆದ್ದಂತೆ! ಭಯದ ಮೂಲಕ ವಿಶ್ವಾಸ ಗಳಿಸಿ, ನಾಯಕತ್ವವನ್ನು ಸುದೀರ್ಘಕಾಲ ಗಟ್ಟಿಗೊಳಿಸಿಕೊಳ್ಳಲು ಸಾಧ್ಯವೇ? ಅಥವಾ ಅಂತಹ ರಾಜಕಾರಣದ ಪರಿಣಾಮ ಸಾಧುವೇ? ಎನ್ನುವುದು ಬೇರೆಯ ಚರ್ಚೆ. ಆದರೆ, ಇವತ್ತಿನ ಅಧಿಕಾರ ಕೇಂದ್ರಿತ ರಾಜಕಾರಣದ ಭಾಗವಾಗಿ ಅವರು ಉರುಳಿಸಿದ ಈ ರಾಜಕೀಯ ದಾಳ ಕುತೂಹಲಕಾರಿಯಂತೂ ಹೌದು.
ಇನ್ನು ಎರಡನೆಯದ್ದು, ತನ್ನ ಸರ್ಕಾರಕ್ಕೆ ವಿಪರೀತ ಉಪಟಳ ನೀಡುತ್ತಿದ್ದ ಕುಮಾರಸ್ವಾಮಿಯವರನ್ನು ಈ ಸ್ಟಿಂಗ್ ಆಪರೇಷನ್ ಬಳಸಿಕೊಂಡು ತಬ್ಬಿಬ್ಬುಗೊಳಿಸುವಲ್ಲೂ ಡಿಕೆಶಿ ಯಶಸ್ವಿಯಾಗಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಖಾಸಗಿಯಾಗಿ ನೀಡಿದರು ಎನ್ನಲಾದ ಈ ‘ಕಿವಿಮಾತಿ’ನ ಸಂಗತಿಯನ್ನು ಗೌಪ್ಯವಾಗಿಯೂ ಇಡಬಹುದಿತ್ತು. ಆದರೆ ಬೇಕಂತಲೇ ಅದು ಮೀಡಿಯಾದವರ ಕಿವಿಗೆ ಬಿದ್ದು ಚರ್ಚೆಯಾಗುವಂತೆ ನೋಡಿಕೊಳ್ಳಲಾಯ್ತು. ಮಾಧ್ಯಮದವರ ಪ್ರಶ್ನೆಗೆ ಸಚಿವರುಗಳೂ ಪೂರಕವಾಗಿ ಪ್ರತಿಕ್ರಿಯಿಸಿ ಬೆಂಕಿಗೆ ತುಪ್ಪ ಸುರಿದರು. ಈ ಚರ್ಚೆ ವಿಪರೀತ ಉತ್ತುಂಗಕ್ಕೆ ತಲುಪಿದ ನಂತರ ಅದರ ದಿಕ್ಕನ್ನು ಕುಮಾರಸ್ವಾಮಿಯವರತ್ತ ತಿರುಗಿಸಲಾಯ್ತು!
ಎಚ್ಡಿಕೆ ಈ ಸ್ಟಿಂಗ್ ಮಾಡಿಸಿದ್ದರೋ, ಇಲ್ಲವೋ? ಬೇರೆಯ ಸಂಗತಿ. ಆದರೆ ಮೊದಲೇ ಹೇಳಿದಂತೆ, ಒಕ್ಕಲಿಗ ಸಮುದಾಯದ ಸಿಎಂಗೆ ಉಪಟಳ ನೀಡುತ್ತಿರುವ ತಮ್ಮ ವಿರುದ್ಧ ಸಮುದಾಯದಲ್ಲಿ `ವಿಕ್ಟಿಮ್ ಕಾರ್ಡ್’ ಪ್ಲೇ ಮಾಡಲಾಗುತ್ತಿರುವ ಈ ಸಂದರ್ಭದಲ್ಲಿ ಸ್ಟಿಂಗ್ ಆಪರೇಷನ್ನ ಆರೋಪ ತನ್ನ ಕಡೆ ತಿರುಗುತ್ತಿದ್ದಂತೆಯೇ ಕುಮಾರಸ್ವಾಮಿ ದಿಗಿಲುಬಿದ್ದರು! ದಿಗಿಲುಬೀಳಲೇಬೇಕಿತ್ತು! ಇಷ್ಟು ದಿನ ಅವರು ಜಗ್ಗಾಡುತ್ತಿದ್ದ ಬಿಡದಿ ಟೌನ್ಶಿಪ್, ನೈಸ್ ಮೊದಲಾದ ಗಂಭೀರ ಪ್ರಕರಣಗಳನ್ನು ಕೈಬಿಟ್ಟು ಸ್ಟಿಂಗ್ ಆಪರೇಷನ್ನ ಅಪಖ್ಯಾತಿಯಿಂದ ಪಾರಾಗಲು ಹೆಣಗಾಡುತ್ತಿದ್ದಾರೆ. ವಿರೋಧಿಗಳ ರಿಯಾಕ್ಷನ್ ಸೈಕಾಲಜಿಯನ್ನು ನಿಯಂತ್ರಿಸುವುದು ಕೂಡಾ ಒಂದು ರೀತಿಯ ಜಾಣ ತಂತ್ರಗಾರಿಕೆ. ಮೀಡಿಯಾಗಳು ಸ್ಟಿಂಗ್ ಚರ್ಚೆಗಿಳಿದವು; ವಿರೋಧ ಪಕ್ಷಗಳು ಕೂಡಾ ತಮ್ಮ ಇಶ್ಯೂಗಳನ್ನು ಬದಿಗಿಟ್ಟು ‘ಸ್ಟಿಂಗ್’ ಚರ್ಚೆಯ ಬಲೆಗೆ ಬಿದ್ದವು. ಈ ಚರ್ಚೆ ಹೇಗೆ ಸಾಗಿದರೂ ಅದರಿಂದ ಡಿಕೆಶಿ ನೇತೃತ್ವದ ಸರ್ಕಾರಕ್ಕಂತೂ ನಷ್ಟವಿಲ್ಲ. ತನಗೆ ನಷ್ಟವಿಲ್ಲದ ಚರ್ಚೆಯ ಹಿಂದೆ ವಿರೋಧ ಪಕ್ಷಗಳನ್ನೂ, ಮೀಡಿಯಾಗಳನ್ನೂ ಬೀಳುವಂತೆ ಮಾಡುವುದನ್ನೆ `ಡೈವರ್ಟ್ ಪೊಲಿಟಿಕ್ಸ್’ ಎನ್ನಲಾಗುತ್ತೆ. ಈ ತಂತ್ರದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ನಿಸ್ಸೀಮರು. ಆದರೆ ಈಗ ಕಾಂಗ್ರೆಸ್ನ ಡಿಕೆ ಶಿವಕುಮಾರ್ ಅದೇ ತಂತ್ರ ಬಳಸಿ ವಿರೋಧಿಗಳಿಗೆ ತಿರುಗುಬಾಣ ಬೀಡುತ್ತಿರೋದು ರೋಚಕವಾಗಿದೆ! ಅಷ್ಟಿಲ್ಲದೆ, ಕೈ ಕಾರ್ಯಕರ್ತರ ನಡುವೆ ಡಿಕೆಶಿ ಕುರಿತು ‘ಕಾಂಗ್ರೆಸ್ನ ಅಮಿತ್ ಶಾ’ ಎಂಬ ಅಭಿಪ್ರಾಯ ಉತ್ಪಾದನೆಯಾಗಲು ಸಾಧ್ಯವಿತ್ತೆ!
- ಮಾಚಯ್ಯ ಎಂ ಹಿಪ್ಪರಿಗಿ

ಹವ್ಯಾಸಿ ಬರವಣಿಗೆ ಮೂಲಕ ಪತ್ರಿಕೋದ್ಯಮ ಮತ್ತು ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯವರೆಗೆ ವಿಸ್ತರಿಸಿಕೊಂಡಿರುವ ಲೇಖಕರು ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಷಯಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಡುವಂತವರು. ಹಲವು ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ವೆಬ್ ಆವೃತ್ತಿಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದ್ದು, ತಮ್ಮ ಮೊನಚು ಬರವಣಿಗೆ ಶೈಲಿ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಓದುಗರ ಗಮನ ಸೆಳೆದಿದ್ದಾರೆ.
