ಓಡುವ ಶೈಲಿ ನೋಡಿದರೆ ವೇಗದ ಬೌಲರ್. ಆದರೆ ಓಡುತ್ತ ಬಂದವನು ವಿಕೆಟ್ ಬಳಿ ಕ್ಷಣಕಾಲ ನಿಂತು, ಕೈಯನ್ನು ಒಂದು ಸುತ್ತು ತಿರುಗಿಸಿ, ನಂತರ ತನಗೆ ತೋಚಿದಂತೆ ಎಸೆಯುತ್ತಿದ್ದ. ಅವನು ಎಸೆದ ಒಂದೇಒಂದು ಚೆಂಡು ಸಹಾ ಬ್ಯಾಟಿಂಗ್ ಮಾಡುತ್ತಿದ್ದ ಹುಡುಗಿಯ ಸಮೀಪಕ್ಕೂ ಸುಳಿಯಲಿಲ್ಲ. “ಸರಿಯಾಗಿ ಬಾಲ್ ಹಾಕೋ” ಎಂಬ ಹುಡುಗಿಯ ಆಕ್ಷೇಪಣೆಗೆ, “ಬಾಲು ಸ್ವಿಂಗ್ ಆಗ್ತಿದ್ದಾವೆ ಕಣೆ..!” ಎಂಬ ಅವನ ಸಮರ್ಥನೆ. ಇದ್ಯಾವುದರ ಎಬಿಸಿಡಿ ಗೊತ್ತಿಲ್ಲದ ಪುಟ್ಟ ಹುಡುಗಿ ಎತ್ತಲಾಗದ ಬ್ಯಾಟನ್ನು ಹೇಗೋ ಕಷ್ಟದಲ್ಲಿ ಬೀಸಿ ಒಂದು ರನ್ನಾದರೂ ಗಳಿಸಿಬಿಡಬೇಕು ಎಂಬ ಛಲದಲ್ಲಿದ್ದಳು. ಕೀಪಿಂಗ್ ನಿಂತಿದ್ದ ಮತ್ತೋರ್ವ ಪುಟ್ಟ ಹುಡುಗನಿಗೆ ಗಾಡಿಗಳ ಸಂದಿಯಿಂದ ಚೆಂಡು ಹೆಕ್ಕುವುದೇ ಕೆಲಸವಾಗಿತ್ತು. ಮಕ್ಕಳಿಗೆ ಆಟವಾಡುವುದಕ್ಕಿಂತ ಆಗಾಗ ಬರುವ ದ್ವಿಚಕ್ರ ವಾಹನಗಳಿಗೆ ಅನುವು ಮಾಡಿಕೊಡಲು ವಿಕೆಟ್‌ಗಳನ್ನು ಬದಿಗೆ ಎತ್ತಿಡುವುದೇ ದೊಡ್ಡ ಕೆಲಸ. ಜೊತೆಗೆ ಆಗಾಗ ಓಡಾಡುವ ಪಾದಚಾರಿಗಳು ಪಿಚ್ ದಾಟುವುದನ್ನೇ ಕಾದು ಆಟ ಮುಂದುವರಿಸಬೇಕಿತ್ತು. ಚಿತ್ತದಿಂದ ಮಕ್ಕಳು ಎಂಬುದನ್ನು ಹೊರಗಿಟ್ಟು ಆಲಿಸಿದರೆ ಆಟಕ್ಕಿಂತ ಕಿರುಚಾಟವೇ ಹೆಚ್ಚಿತ್ತು. ಭಾನುವಾರದ ಬೆಳಗಿನ ಜಾವ ಬಾಲ್ಕನಿಗೆ ಬಂದು ನಿಂತವನಿಗೆ ಮಕ್ಕಳ ಆ ಗಲ್ಲಿ ಕ್ರಿಕೆಟ್ ಕಣ್ಣಿಗೆ ಬಿದ್ದು, ಅವರ ಗಲಿಬಿಲಿ ಆಟವನ್ನು ನೋಡುತ್ತಾ ನಿಂತಿದ್ದೆ.
ಅಷ್ಟರಲ್ಲಿ ಕಣ್ಣುಜ್ಜುತ್ತ, ತಲೆಕೆರೆದುಕೊಳ್ಳುತ್ತ ಚಡ್ಡಿ-ಬನಿಯಾನ್‌ನಲ್ಲೇ ಹೊರಗೆ ಬಂದ ಪಕ್ಕದ ಮನೆಯ ಮಾಲೀಕರು, “ಇದೇನು ಗ್ರೌಂಡೇನ್ರೋ, ಆಡುವ ಟೈಂ ಏನ್ರೋ, ಬೇರೆ ಕಡೆ ಹೋಗಿ ಆಡೋಗ್ರೋ” ಎಂದು ಮಕ್ಕಳನ್ನು ಗದರಿಸತೊಡಗಿದರು. ಕಿವಿಗೆ ಹಾಕಿಕೊಳ್ಳದೆ ಆಟ ಮುಂದುವರಿಸುವ ಇರಾದೆಯಲ್ಲಿದ್ದ ಮಕ್ಕಳಿಗೆ, “ಯಾರ ಮಗ್ನೋ ನೀನು?” ಎಂಬ ವಿಚಾರಣೆ ಅಲ್ಲಿಂದ ಕಾಲ್ಕೀಳುವಂತೆ ಮಾಡಿತ್ತು. “ಈಗಿನ್ ಮಕ್ಳಿಗೆ ಹೊತ್ತುಗೊತ್ತು ಗೊತ್ತಿಲ್ಲ, ಎಲ್ಲಿ ಆಡ್ಬೇಕು ಅನ್ನದು ಗೊತ್ತಿಲ್ಲ..” ಎಂದು ಗೊಣಗುತ್ತ ಒಳಗೆ ಹೋದರು. ಕಿರುಚಾಟಗಳು ನಿಂತಿದ್ದರಿಂದ ನನಗೂ ಕೊಂಚ ಸಮಾಧಾನವೆನಿಸಿತು. ಆದರೆ ವಾರಕ್ಕೊಂದು ದಿನವಾದರೂ ಹಗಲು-ರಾತ್ರಿಯೆನ್ನದೆ ತಮ್ಮ ಮನೆಯಲ್ಲಾಗುವ ಕೌಟುಂಬಿಕ ಕಲಹದ ರಂಪರಾಮಾಯಣದಿಂದ ಸುತ್ತಮುತ್ತಲಿನವರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬುದರ ಕಿಂಚಿತ್ತು ಯೋಚನೆಯಿಲ್ಲದವನಿಗೆ ಮಕ್ಕಳ ಆಟ ಹರಟೆಯೆನಿಸಿದ್ದು ನನಗೆ ವಿಚಿತ್ರವೆನಿಸಿತ್ತು.

ನಗರದ ಮಕ್ಕಳ ಕೈಯಲ್ಲಿ ಚೆನ್ನಾಗಿರುವ ಬ್ಯಾಟ್, ಬಾಲ್, ವಿಕೆಟ್, ಹ್ಯಾಂಡ್ ಗ್ಲವ್ಸ್ ಎಲ್ಲವೂ ಇದೆ. ಆದರೆ ಆಟವಾಡುವುದಕ್ಕೆ ಸರಿಯಾದ ಮೈದಾನವೇ ಇಲ್ಲ. ನಗರದಲ್ಲಿರುವ ಹೆಚ್ಚಿನ ಸುಸಜ್ಜಿತ ಮೈದಾನಗಳೆಲ್ಲವೂ ಫೀಸು ಕಟ್ಟುವವರ ಮಕ್ಕಳಿಗೆ ಮೀಸಲಾಗಿವೆ. ಇರುವ ಕೆಲವೇ ಕೆಲವು ಸರ್ಕಾರಿ ಮೈದಾನಗಳ ಪೈಕಿ ಒಂದಷ್ಟು ಅಂಕಲ್ಲುಗಳ ಸೊತ್ತಾಗಿವೆ, ಇನ್ನೊಂದಷ್ಟು ತರಬೇತಿ ಕೇಂದ್ರಗಳಾಗಿವೆ. ಇನ್ನೂ ಕೆಲವು ಡ್ರೈವಿಂಗ್ ಕಲಿಯುವ ತಾಣಗಳಾಗಿವೆ. ಇಂತಹ ಪರಿಸ್ಥಿತಿಯ ನಡುವೆ ಮಧ್ಯಮ ವರ್ಗದ ಹಾಗೂ ಬಡವರ ಮಕ್ಕಳು ಆಟವಾಡುವ ಜಾಗಕ್ಕಾಗಿ ಬೀದಿ ಬೀದಿ ಅಲೆಯುತ್ತಿವೆ. ಮಕ್ಕಳಿಗೆ ಪಾಠದಷ್ಟೇ ಆಟವೂ ಮುಖ್ಯ ಎಂಬುದನ್ನು ಮನಗಾಣದ ಪೋಷಕರು, ತಮ್ಮ ವರ್ಚಸ್ಸಿಗೆ, ದುಡಿದು ಶ್ರೀಮಂತರಾಗಬೇಕೆಂಬ ಹಂಬಲಕ್ಕೆ ಬೆಲೆ ತೆರುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಆಟದ ಮೈದಾನ ಇದೆಯೇ, ಬಾಡಿಗೆ ಮನೆ ಮಾಡುವಾಗ ಸುತ್ತಮುತ್ತ ಮಕ್ಕಳಿಗೆ ಆಟವಾಡುವಷ್ಟು ಜಾಗವಿದೆಯೇ ಎಂದು ಯೋಚಿಸಲು ಆಸ್ಪದವನ್ನೂ ಕೊಡದಷ್ಟು ಅನಿವಾರ್ಯತೆಗಳು, ಆರ್ಥಿಕ ಸಂದಿಗ್ಧತೆಗಳು ಪೋಷಕರ ಮೇಲೆ ಒಟ್ಟಿಕೊಂಡಿವೆ. ಈ ಕೊರಗು ನೀಗಿಸಲು ಮಕ್ಕಳ ಕೈಗೆ ಮೊಬೈಲ್ ಬಂದು ಕೂತಿದೆ.
ಮಕ್ಕಳ ಬಾಲ್ಯವನ್ನು ಕಸಿಯುತ್ತಿರುವ ಈ ಕ್ರೂರ ಜಗತ್ತಿನ ಮುಂದೆ ಅನಗತ್ಯ ಸ್ಪರ್ಧಾತ್ಮಕ ಜಗತ್ತಿಗೆ ಸಿಲುಕಿರುವ ನಮ್ಮಂತ ಹುಡುಗರ ಯೌವನ ದಿನವೂ ಲ್ಯಾಪ್‌ಟಾಪಿನ ಮುಂದೆ ಅವಸಾನ ಹೊಂದುತ್ತಿರುವುದು ಲೆಕ್ಕವೇ ಅಲ್ಲ ಎಂದೆನಿಸುತ್ತದೆ. ಕಣ್ಣು ಹಾಯಿಸಿದಷ್ಟು ದೊಡ್ಡ ಮೈದಾನದುದ್ದಕ್ಕೂ ಜೂಟಾಟ, ಕಣ್ಣಮುಚ್ಚಾಲೆಯಿಂದ ಹಿಡಿದು ಕೋಕೋ, ಕಬ್ಬಡಿ, ಕ್ರಿಕೆಟ್, ಫುಟ್ಬಾಲ್ ಆಟಗಳನ್ನು ನಮಗೆ ತೋಚಿದಂತೆ ಆಡುತ್ತ ಮೈಮರೆಯುತ್ತಿದ್ದ ಬಾಲ್ಯ ಸದಾ ಚಿರಸ್ಥಾಯಿ. ರಾಮಸೋಮಭೀಮ, ಲಗೋರಿಯಂತಹ ಆಟಗಳಿಗಿಳಿದರೆ ವಾಪಸಾಗಲು ಅಮ್ಮಂದಿರು ಅಥವಾ ಮೇಷ್ಟ್ರುಗಳು ಕೋಲು ಹಿಡಿದು ಮೈದಾನಕ್ಕೆ ನುಗ್ಗಬೇಕಿತ್ತು. ಆಟದ ಬಯಲೆಂದರೆ ಮೊಬೈಲಿನ ಸ್ಕ್ರೀನ್ ಎಂಬಾಂತಿಗಿರುವ ಈ ಕಾಲಘಟ್ಟದಲ್ಲಿ ‘ಹಕ್ಕಿಗೆ ಬೇಕು ಬಾನು, ಚಿಗರೆಗೆ ಬೇಕು ಕಾನು..’ ಎಂಬ ಸಾಲುಗಳೇ ಅನರ್ಥವೆನಿಸುತ್ತವೆಯೇನೋ. ಮೈದಾನದಲ್ಲಿ ಮನಸೋ ಇಚ್ಛೆ ಕುಣಿದಾಡಿ ದಣಿಯದ, ಬಿದ್ದು ಮಂಡಿ, ಮೊಣಕೈ ತರಚದ ಬಾಲ್ಯ ನಿಜಕ್ಕೂ ಬಾಲ್ಯವೇ ಅಲ್ಲ. ಈಗೀಗ ಮಕ್ಕಳೆಂದರೆ ಬಾಲ್ಯದಲ್ಲೇ ಸೆರೆಮನೆ ಸೇರಿದ ಕೈದಿಗಳಂತಾಗಿರುವುದು ವಿಪರ್ಯಾಸ. ಒಂದೋ ಹಾಡುವುದು, ನರ್ತಿಸುವುದು, ಸಿನಿಮಾ ಡೈಲಾಗ್ ಹೇಳುವುದು, ಕಣ್ಣಿಗೆ ದಣಿವಾಗುವ ವರೆಗೆ ಆನ್ ಲೈನ್ ಗೇಮ್ ಆಡುವುದಷ್ಟೇ ಬಾಲ್ಯ ಎಂಬಂತಾಗಿದೆ. ಒಂದರ್ಥದಲ್ಲಿ ಮಕ್ಕಳ ಬಾಲ್ಯ ಬರೀ ಇನ್ಸ್‌ಟಾಗ್ರಾಂ ರೀಲ್ಸ್‌ನ ಸರಕಾಗಿದೆ. ಇದೇ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ, ವಿವೇಚನಾ ಶಕ್ತಿ ಬೆಳೆಸಿಕೊಂಡಾಗ ತಮ್ಮ ಅಮೂಲ್ಯ ಬಾಲ್ಯವನ್ನು ಕಸಿದುಕೊಂಡಕ್ಕಾಗಿ ಯಾರನ್ನು ಶಪಿಸಬೇಕು? ಈ ಪ್ರಶ್ನೆಗೆ ಉತ್ತರವನ್ನು ನಾವು ಈಗಲೇ ಹುಡುಕಬೇಕಾಗಿದೆ.
