ಇತ್ತೀಚೆಗೆ ಯಾರ ಫೇಸ್ಬುಕ್ ವಾಲ್, ಇನ್ಸ್ಟಾ ಪ್ರೊಫೈಲ್ ಅಥವಾ ವಾಟ್ಸಾಪ್ ಸ್ಟೇಟಸ್ ನೋಡಿದರೂ ಅಲ್ಲಿ ಎಂಬತ್ತರ ದಶಕವನ್ನು ರಿಪ್ಲಿಕೇಟ್ ಮಾಡಿದಂತಹ ಫೋಟೊಗಳು ರಾರಾಜಿಸುತ್ತಿವೆ. ಇದು ಸದ್ಯದ ಟ್ರೆಂಡು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಎನ್ನುವುದು ಅಕಸ್ಮಾತು ವಿದ್ಯಮಾನಗಳಲ್ಲ. ತುಂಬಾ ವ್ಯವಹಾರಿಕವಾಗಿ, ನಿರ್ದಿಷ್ಟ ಉದ್ದೇಶಗಳೊಂದಿಗೆ, ಲಾಭದ ಪಕ್ಕಾ ಲೆಕ್ಕಾಚಾರವಿಟ್ಟುಕೊಂಡು manipulate ಮಾಡಲಾಗುವ ಕಾರ್ಪೊರೇಟ್ ಸರಕುಗಳು!
ನಮ್ಮ ಅಂಗೈನಲ್ಲಿರುವ ಮೊಬೈಲ್ನಲ್ಲಿ ಪುಕ್ಕಟೆಯಾಗಿ, ತುಂಬಾ ಸುಲಭವಾಗಿ, ಅಷ್ಟೇ ಮುದವಾಗಿ ಲಭ್ಯವಾಗುವ ಈ ಟ್ರೆಂಡ್ಗಳನ್ನು ಶ್ರಮವಿಲ್ಲದೆ ಅನುಸರಿಸುವ compulsion ಅನ್ನು ನಮ್ಮೊಳಗೆ ಹುಟ್ಟುಹಾಕುವುದೇ ಅವುಗಳ ನಿಜವಾದ ಗೆಲುವು. ಆ ಮೂಲಕ ಜನರನ್ನು ವಿವೇಚನೆಯಿಲ್ಲದ ಕುರಿಮಂದೆಯಂತೆ (Herd Mentality) ಪರಿವರ್ತಿಸುತ್ತವೆ. ಇದರಿಂದ ಕಾರ್ಪೊರೇಟ್ ಜಗತ್ತಿಗೆ ಏನು ಲಾಭ? ಖರ್ಚಿಲ್ಲದೆ, ಶ್ರಮವಿಲ್ಲದೆ ಖುಷಿ ಸಿಗುವುದಾದರೆ ಈ ಟ್ರೆಂಡುಗಳಿಂದ ನಮಗೇನು ನಷ್ಟ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ನಾವು ಸೈಕಾಲಜಿಯ ಆಯಾಮದಿಂದ ಇದನ್ನು ನೋಡಬೇಕಾಗುತ್ತದೆ.

ಸೋಷಿಯಲ್ ಮೀಡಿಯಾ ಪರಿಭಾಷೆಯಲ್ಲಿ ಟ್ರೆಂಡಿಂಗ್ ಎಂದರೆ ಅತ್ಯಲ್ಪ ಕಾಲಾವಧಿಯಲ್ಲಿ ಒಂದು ಪೋಸ್ಟ್ ಅಥವಾ ವೀಡಿಯೊ ಹೆಚ್ಚು ಜನರನ್ನು ತಲುಪಿ, ಬಳಸಲ್ಪಡುವುದು ಎಂದರ್ಥ. ಕೆಲವೊಂದು ಸಲ, ಕಂಟೆಂಟ್ನ ಕಾರಣಕ್ಕೆ ಜೈವಿಕವಾಗಿ, ಬಾಹ್ಯ ಪ್ರಭಾವವಿಲ್ಲದೆ ಕೆಲ ಪೋಸ್ಟ್ಗಳು ವೈರಲ್ ಎನಿಸಿಕೊಳ್ಳುತ್ತವೆ. ಅದರಲ್ಲಿ ಯಾವ ಸಮಸ್ಯೆ ಇಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ನೀವು boost ಎಂಬ ಪದ ಕೇಳಿರುತ್ತೀರಿ. ಅಂದರೆ, ನೀವು ಹಣ ಕೊಟ್ಟರೆ ನಮ್ಮ ಪೋಸ್ಟ್ನ reach ಅನ್ನು ಡಿಜಿಟಲ್ ಪ್ಲ್ಯಾಟ್ಫಾರಂಗಳು ಹೆಚ್ಚಿಸುತ್ತವೆ. ಇದರರ್ಥ, ಒಂದು ಪೋಸ್ಟ್ನ ರೀಚ್ ನಿಯಂತ್ರಿಸುವ ಅಸ್ತ್ರ ಅವರ ಬಳಿ ಇರುತ್ತೆ. ಹೀಗೆ ದುಡ್ಡಿಗೆ ತಕ್ಕಂತೆ ಪೋಸ್ಟ್ನ ವೈರಾಲಿಟಿಯನ್ನು ನಿಯಂತ್ರಿಸಲು ಸಾಧ್ಯ ಎನ್ನುವುದಾದರೆ, ಬಹುದೊಡ್ಡ ಹೂಡಿಕೆಯ ಪ್ರತ್ಯಕ್ಷ/ಪರೋಕ್ಷ ಲಾಭಕ್ಕಾಗಿ, ಅಜೈವಿಕವಾಗಿ ಇಂತಹ ಟ್ರೆಂಡಿಂಗ್ಗಳನ್ನು ಸೃಷ್ಟಿಸುವ ಅವಕಾಶವೂ ಅವರ ಬಳಿ ಇದೆ ಎಂದಾಯಿತಲ್ಲವೇ.
ಕಂಟೆಂಟ್ ಕಾರಣಕ್ಕೆ ತಮ್ಮಷ್ಟಕ್ಕೆ ತಾವೇ ವೈರಲ್ ಆಗುವ ಪೋಸ್ಟ್ಗಳಿಗೆ ನಿರ್ದಿಷ್ಟ ಭೌಗೋಳಿಕತೆಯ, ಭಾಷೆಯ ಅಥವಾ ನಿರ್ದಿಷ್ಟ ಗ್ರಾಹಕ ಸಮುದಾಯಗಳ ನಡುವೆ ಸೀಮಿತ ವೈರಾಲಿಟಿಯ ಅವಕಾಶ ಮಾತ್ರ ಇರುತ್ತೆ. ಆದರೆ ಉದ್ದೇಶಪೂರ್ವಕವಾಗಿ, ಕರಾರುವಾಕ್ಕು ಪರಿಣಾಮದ ನಿರೀಕ್ಷೆಯಲ್ಲಿ ಅಜೈವಿಕವಾಗಿ ಹುಟ್ಟುಹಾಕಲಾಗುವ ಟ್ರೆಂಡಿಂಗ್ಗಳಿಗೆ ಯಾವ ಮಿತಿಯೂ ಇರುವುದಿಲ್ಲ. ಕ್ಷಣಾರ್ಧದಲ್ಲಿ ವ್ಯಾಪಿಸಿಬಿಡುತ್ತವೆ. ಯಾಕೆಂದರೆ, ನಾವು ಬೂಸ್ಟಿಂಗ್ಗಾಗಿ ಕೊಡುವ ಐನೂರು ಅಥವಾ ಸಾವಿರ ರೂಪಾಯಿಗೆ ನಿರ್ಬಂಧಗಳ ಸಣ್ಣ ಸಡಿಲಿಕೆ ನೀಡುವ ಕಂಪನಿಗಳು, ಬಿಲಿಯನ್ ಗಟ್ಟಲೇ ಪರೋಕ್ಷ ಲಾಭದ ನಿರೀಕ್ಷೆಯ ಇಂತಹ ಟ್ರೆಂಡಿಂಗ್ ಎಂಬ ಹುಚ್ಚುಕುದುರೆಗಳ ಎಲ್ಲಾ ಲಗಾಮುಗಳನ್ನು ಒಮ್ಮೆಲೇ ಕತ್ತರಿಸಿ ಅಖಾಡಕ್ಕಿಳಿಸಿರುತ್ತಾರೆ.
ಇದರಿಂದ ನಮಗೇನು ನಷ್ಟ? ಎನ್ನುವ ಪ್ರಶ್ನೆಯಲ್ಲಿ, ಇದರಿಂದ ಅವರಿಗೇನು ಲಾಭ? ಎಂಬುದಕ್ಕೂ ಉತ್ತರವಿದೆ. ಇದು ಕೇವಲ ಟೆಕ್ನಾಲಜಿಯ ಆಟವಲ್ಲ, ಸೈಕಾಲಜಿಯ ಗೇಮ್ ಕೂಡಾ ಹೌದು.
ಡೊಪಮೈನ್ ಲೂಪ್
ಗ್ರಾಹಕರ ಮೆದುಳಿನ ಯೋಚನಾ ಶಕ್ತಿಯನ್ನು ಟಾರ್ಗೆಟ್ ಮಾಡಿಕೊಳ್ಳುವ ಈ ಟ್ರೆಂಡಿಂಗ್ಗಳು ನಮ್ಮನ್ನು ನಿಧಾನಕ್ಕೆ ತರ್ಕಹೀನರನ್ನಾಗಿಸಿ, ಅವರ ಕೈಗೊಂಬೆಯಾಗಿಸುತ್ತವೆ. ‘ಡೊಪಮೈನ್ ಲೂಪ್’ ಎಂಬ ಸೈಕಾಲಜಿಯ ಚಕ್ರ ಬಳಸಿ ಇದನ್ನು ಸಾಧಿಸುತ್ತವೆ. ನಮಗೆ ಇದ್ದಕ್ಕಿದ್ದಂತೆ ಖುಷಿಯಾದಾಗ, ಸಂತೃಪ್ತಿಯಾದಾಗ (Instant Gratification) ನಮ್ಮ ಮೆದುಳಿನಲ್ಲಿ ಡೊಪಮೈನ್ ಎನ್ನುವ ನ್ಯೂರೋಟ್ರಾನ್ಸ್ಮಿಟರ್ ಬಿಡುಗಡೆಯಾಗುತ್ತದೆ. ಅದು ನಮಗೆ ಆಹ್ಲಾದಕಾರ ಭಾವನೆ ತರುವ ರಾಸಾಯನಿಕ. ಹಾಗಾಗಿ ಇದನ್ನು ರಿವಾರ್ಡ್ ಕೆಮಿಕಲ್ (ಆನಂದದಾಯಕ ರಾಸಾಯನಿಕ) ಅಂತಲೂ ಕರೆಯಲಾಗುತ್ತೆ. ಡಿಜಿಟಲ್ ಟ್ರೆಂಡಿಂಗ್ಗಳ ಪ್ರಧಾನ ಗುರಿ ಈ ಡೊಪಮೈನ್!
ಈಗಿನ ಉದಾಹರಣೆಯನ್ನೇ ಗಮನಿಸಿ, ಕೇವಲ ಎರಡು ಮೂರು ನಿಮಿಷದಲ್ಲಿ ಯಾವುದೇ ಶ್ರಮವಿಲ್ಲದೆ, ನಮ್ಮ ಕ್ರಿಯಾಶೀಲತೆಯೂ ಖರ್ಚಾಗದೆ ಎಂಬತ್ತರ nostalgiaಗೆ ಕೊಂಡೊಯ್ದ ನಿಮ್ಮ ಒಂದು ಫೋಟೊ ತಯಾರಾಗುತ್ತದೆಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಆ ಖುಷಿ ಬರುವುದೇ ಡೊಪಮೈನ್ ಸ್ರವಿಕೆಯಿಂದ. ಶ್ರಮವಿಲ್ಲದೆ, ಖರ್ಚಿಲ್ಲದೆ ಸುಲಭಕ್ಕೆ ಸಿಕ್ಕ ಇಂತಹ ಖುಷಿಯನ್ನು ಮತ್ತೆ ಹೊಂದಲು ನಮ್ಮ ಮೆದುಳು ಹಾತೊರೆಯುತ್ತದೆ. ಒಂದು ಫೋಟೊ ಜನರೇಟ್ ಮಾಡಿದವರು, ಮತ್ತೊಂದು ಮಾಡುತ್ತೇವೆ, ಇನ್ನೊಂದು ಮಾಡುತ್ತೇವೆ, ಮಾಡುತ್ತಲೇ ಸಾಗುತ್ತವೆ. ಪ್ರತಿ ಬಾರಿ ಡೊಪಮೈನ್ ಸ್ರವಿಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಇದನ್ನು ಡೋಪಮೈನ್ ಲೂಪ್ ಎಂದು ಕರೆಯಲಾಗುತ್ತೆ. ಅದರರ್ಥ ನಾವು addict ಆಗುತ್ತಾ ಹೋಗುತ್ತೇವೆ. ಒಂದು ರೀಲ್ ನೋಡಿ ಕೆಳಗಿಡೋಣ ಎಂದು ಕೈಗೆತ್ತಿಕೊಳ್ಳುವ ಮೊಬೈಲ್ ಅನ್ನು ಸ್ಕ್ರೋಲ್ ಮಾಡುತ್ತಾ ಹೊತ್ತು ಕಳೆದದ್ದೇ ಗೊತ್ತಾಗುವುದಿಲ್ಲವಲ್ಲಾ, ಅದು ಈ ಡೊಪಮೈನ್ನ ಸ್ರವಿಕೆಯ ಪ್ರಭಾವ. ಅಂದಹಾಗೆ, ಮಾದಕದ್ರವ್ಯಗಳು ಕೂಡಾ ಅದನ್ನು ಸೇವಿಸುವವರಿಗೆ ಖುಷಿ ತಂದುಕೊಂಡುವುದು ಈ ಡೊಪಮೈನ್ ಅನ್ನು ಯರ್ರಾಬಿರ್ರಿ ಸ್ರವಿಸುವ ಮೂಲಕ. ಆರಂಭವದಲ್ಲಿ ಖುಷಿ ಎನಿಸಿದರೂ, ಡ್ರಗ್ಗಳಿಗೆ ದಾಸರಾದ ನಂತರ ಡೊಪಮೈನ್ ಸ್ರವಿಕೆಯ ನಿರಂತರ ಉನ್ಮಾದಕ್ಕಾಗಿ ತಮ್ಮ ಆರೋಗ್ಯವನ್ನೇ ಬಲಿಕೊಡುತ್ತಾರೆ.

ನಮ್ಮ ಮೆದುಳಿನ ಡೊಪಮೈನ್ ಸ್ರವಿಕೆ ಮೇಲಿನ ಕಂಪನಿಗಳ ನಿಯಂತ್ರಣ ಇಷ್ಟಕ್ಕೇ ಕೊನೆಗೊಳ್ಳುವುದಿಲ್ಲ. ಇಮೇಜ್ ಜನರೇಟ್ ಮಾಡಿ ಅಥವಾ ಒಂದು ಟ್ರೆಂಡಿಂಗ್ ಡ್ಯಾನ್ಸ್ನ ವಿಡಿಯೊ ಮಾಡಿಕೊಂಡು ಸುಮ್ಮನಾಗುತ್ತೇವೆಯೇ? ಕೊಂದ ಪಾಪ ತಿಂದು ಕಳೆದುಕೊಳ್ಳು ಎಂಬ ಗಾದೆಯಂತೆ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇವೆ, ಟ್ರೆಂಡಿಂಗ್ ಹ್ಯಾಷ್ಟ್ಯಾಗ್ ಸಮೇತ. ಆಗ ಕಂಪನಿಗಳು ನಾವು ಬೂಸ್ಟ್ ಮಾಡಿಸದೆಯೇ, ಅಂತಹ ನಮ್ಮ ಪೋಸ್ಟ್ಗಳ ರೀಚ್ ನಿರ್ಬಂಧ ಸಡಿಲಿಸಿ, ಹೆಚ್ಚೆಚ್ಚು ಲೈಕ್, ಕಮೆಂಟ್ಗಳು ಬರುವಂತೆ ಮಾಡುತ್ತವೆ. ಅಚಾನಕ್ಕಾಗಿ ಅಷ್ಟೊಂದು ಲೈಕ್ ಸಿಕ್ಕಿದ್ದು ನೋಡಿ ಖುಷಿಯಾಗುತ್ತೇವೆ. ಅರ್ಥಾತ್ ಡೋಪಮೈನ್ ಸ್ರವಿಕೆಯನ್ನು ಲೈಕ್ಗಳ ಮೂಲಕ ಪ್ರಚೋದಿಸಲಾಗಿರುತ್ತೆ. ಮತ್ತೆ ಆ ಟ್ರೆಂಡ್ನ ಹೊಸ ಪೋಸ್ಟ್ ಮಾಡಲು ಮುಂದಾಗುತ್ತೇವೆ. ಚಕ್ರ ಪುನರಾವರ್ತನೆಯಾಗುತ್ತಲೇ ಸಾಗುತ್ತದೆ. ಬೇರೆಯವರ ಇಂತಹ ಟ್ರೆಂಡಿಂಗ್ ಪೋಸ್ಟ್ಗಳಿಗೆ ಹೆಚ್ಚೆಚ್ಚು ಲೈಕ್ ಬರುತ್ತಿರೋದನ್ನು ನೋಡಿದ ಇತರರು ಕೂಡಾ, ತಾವೂ ಅದನ್ನು ಫಾಲೋ ಮಾಡಲು ಮುಂದಾಗುತ್ತಾರೆ. ಅವರೂ ಈ ಡೊಪಮೈನ್ ಲೂಪ್ನ ಜಾಲಕ್ಕೆ ಸಿಲುಕುತ್ತಾರೆ.
ಇಷ್ಟೆಲ್ಲ ಟ್ರೆಂಡ್ ಆಗುತ್ತಿರುವ ಪ್ಯಾಟರ್ನ್ ಅನ್ನು ನಾನು ಫಾಲೋ ಮಾಡದಿದ್ದರೆ ಇತರರ ದೃಷ್ಟಿಯಲ್ಲಿ ತಾನು ಔಟ್ಡೇಟೆಡ್ ಅಥವಾ ವಿಚಿತ್ರ ಪ್ರಾಣಿ ಎನಿಸಿಕೊಂಡುಬಿಡುವೆನೇನೊ ಎಂಬ ಮಾನಸಿಕ ತುಡಿತವನ್ನು ಇವು ನಮ್ಮಲ್ಲಿ ಹುಟ್ಟುಹಾಕುತ್ತವೆ. ಇದನ್ನು FOMO (fear of missing out) ಎಂದು ಕರೆಯಲಾಗುತ್ತೆ. ಅದರಿಂದ ತಪ್ಪಿಸಿಕೊಂಡು, ತಾನೂ ಪ್ರವಾಹದ ಭಾಗವಾಗಲು ಟ್ರೆಂಡ್ನ ಫಾಲೋ ಮಾಡಲು ಮುಂದಾಗುತ್ತೇವೆ.
ವಿವೇಚನೆಗೆ ಅಪಾಯ!
ಸರಿ, ಇದರಲ್ಲೇನು ಸಮಸ್ಯೆ ಅಂತೀರಾ? ಅಸಲಿ ಸಮಸ್ಯೆ ಇರೋದೆ ಇಲ್ಲಿ. ನಮ್ಮ ಖುಷಿ ಹಾಗೂ ಆಲೋಚನೆಯನ್ನು ಬೇರೊಬ್ಬರ ನಿಯಂತ್ರಣಕ್ಕೆ ಒಪ್ಪಿಸುತ್ತಾ ಹೋದರೆ, ನಮ್ಮಲ್ಲಿ ಸ್ವಂತ ವಿವೇಚನಾ ಸಾಮರ್ಥ್ಯ ಉಳಿಯುವುದೇ? ಡೊಪಮೈನ್ನ ಸ್ರವಿಕೆಯ ಖುಷಿಗಾಗಿ ಮಾದಕದ್ರವ್ಯಗಳ ದಾಸರಾದವರು ಎಂತಹ ಪರಿಸ್ಥಿತಿಗೆ ತಲುಪುತ್ತಾರೋ, ಅಷ್ಟು ತೀವ್ರವಲ್ಲದಿದ್ದರೂ ಅಂತಹುದೇ ಪರಾವಲಂಬಿತನಕ್ಕೆ ತಲುಪುತ್ತೇವೆ. ಈಗಾಗಲೇ digital algorithm ಹೆಸರಿನಲ್ಲಿ ನಾವು ಮೊಬೈಲ್ನಲ್ಲಿ ಏನು ನೋಡಬೇಕು ಅನ್ನೋದನ್ನು ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳೇ ನಿರ್ಧರಿಸುತ್ತಿವೆ. ನೀವು ಯಾವುದೋ ಒಂದು ವೀಡಿಯೊವನ್ನು ಸ್ವಲ್ಪ ಹೆಚ್ಚು ಸೆಕೆಂಡುಗಳ ಕಾಲ ವೀಕ್ಷಿಸಿದರೆ, ಅಂತಹುದೇ ವೀಡಿಯೊಗಳನ್ನು ಹುಡುಕಿ ಹುಡುಕಿ ನಿಮಗೆ ಫೀಡ್ ಮಾಡುತ್ತಿವೆ. ಆಲ್ಗಾರಿದಮ್ಗಳು ಹೀಗೆ, ಬಳಕೆದಾರರು ಇಷ್ಟಪಡುವ ವಿಷಯಗಳನ್ನಷ್ಟೇ ಮತ್ತೆ ಮತ್ತೆ ತೋರಿಸುವುದರಿಂದ ವ್ಯಕ್ತಿ ತನ್ನದೇ ಆದ ಆದರ್ಶ ಜಗತ್ತಿನಲ್ಲಿ ಬಂಧಿಯಾಗುತ್ತಾನೆ. ಇದರಿಂದ ವೈವಿಧ್ಯಮಯ ಅಥವಾ ಪರ್ಯಾಯ ಆಲೋಚನೆಗಳು ತಲುಪದೆ ವೈಚಾರಿಕ ಧ್ರುವೀಕರಣಕ್ಕೆ (Ideological Polarization) ತುತ್ತಾಗುತ್ತಾನೆ.
‘ಕಾಗ್ನಿಟಿವ್ ಆಫ್ಲೋಡಿಂಗ್’ (Cognitive Offloading) ನಿಯಮದಂತೆ, ಮಾನವನು ತನ್ನ ಆಲೋಚನಾ ಪ್ರಕ್ರಿಯೆಯನ್ನು ಯಂತ್ರಗಳಿಗೆ ಒಪ್ಪಿಸಿದಷ್ಟೂ, ಸ್ವಯಂ-ವಿಮರ್ಶೆ ಮಾಡುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದು ಸರಿಯೋ? ತಪ್ಪೋ? ಇದರ ಅಗತ್ಯ ನನಗೆ ಇದೆಯೋ? ಇಲ್ಲವೋ? ಎನ್ನುವ ವಿವೇಚನೆ ನಮ್ಮಿಂದ ದೂವಾಗುತ್ತವೆ. ಇದು ದೀರ್ಘಾವಧಿಯಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಬರುವ ಸುಳ್ಳು ಮಾಹಿತಿ (Fake News) ಮತ್ತು ‘ಡಿಪ್ಫೇಕ್’ಗಳನ್ನು ಸುಲಭವಾಗಿ ನಂಬುವಂತೆ ಮಾಡುತ್ತದೆ. ಈಗಾಗಲೇ ಫೇಕ್ ನ್ಯೂಸ್ಗಳು ಎಂತಹ ದೊಡ್ಡ ಸಾಮಾಜಿಕ ಅನಾಹುತಗಳನ್ನು ಉಂಟು ಮಾಡಿವೆ ಎನ್ನುವುದನ್ನು ನೋಡುತ್ತಿದ್ದೇವೆ. ಕ್ರಮೇಣ ನಾವು ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನೂ ಈ ಡಿಜಿಟಲ್ ಪ್ಲ್ಯಾಟ್ಫಾರಂಗಳೇ ನಿರ್ಧರಿಸುತ್ತವೆ. ಅವುಗಳ ಅಸಲೀ ಲಾಭ ಇರುವುದೇ ಇಲ್ಲಿ.
ಒಪೀನಿಯನ್ ಮೇಕಿಂಗ್!
ಇವತ್ತು ದೊಡ್ಡದೊಡ್ಡ ಕಂಪನಿಗಳು ಬಿಲಯನ್ಗಟ್ಟಲೆ ಬಂಡವಾಳ ಹೂಡಿ ತಯಾರಿಸುವ ತಮ್ಮ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯಲು ಕೋಟ್ಯಂತರ ಹಣ ಸುರಿವ ಜಾಹೀರಾತುಗಳನ್ನು ಅವಲಂಬಿಸಿವೆ; ಗ್ರಾಹಕರನ್ನು convince ಮಾಡಲು ಹೆಣಗಾಡುತ್ತಿವೆ. ಅಷ್ಟಾದರೂ ಗ್ರಾಹಕ ಅವರು ಜಾಹೀರಾತು ಬಲೆಗೆ ಬೀಳುತ್ತಾನೆ ಎನ್ನುವ ವಿಶ್ವಾಸವಿಲ್ಲ. ಯಾಕೆಂದರೆ, ಗ್ರಾಹಕ ಈಗ ತರ್ಕಿಸುವ ಸಾಮರ್ಥ್ಯ ಉಳಿಸಿಕೊಂಡಿದ್ದಾನೆ. ನನಗೆ ಈ ಉತ್ಪನ್ನದ ಅಗತ್ಯವಿದೆಯೇ? ಕೊಡುವ ಬೆಲೆಗೆ ನ್ಯಾಯವೇ? ಅಥವಾ ಇನ್ನಾವುದಾದರು ಬೇರೆ ಕಂಪನಿಗಳಿವೆಯೇ? ಎಂದೆಲ್ಲಾ ಆಲೋಚಿಸುತ್ತಾನೆ. ಈ ಆಲೋಚನೆಯನ್ನೇ ಡಿಜಿಟಲ್ ವೇದಿಕೆಗಳು ಟ್ರೆಂಡಿಂಗ್ ಹೆಸರಿನಲ್ಲಿ ತಮ್ಮ ಕಬ್ಜಾ ಮಾಡಿಕೊಂಡುಬಿಟ್ಟರೆ! ಅವುಗಳ ತಾಳಕ್ಕೆ ಗ್ರಾಹಕ ತಲೆಯಾಡಿಸಬೇಕಾಗುತ್ತದೆ.

ಹಾಗೆ ತಲೆಯಾಡಿಸುವಂತೆ ಮಾಡುವ ಹುನ್ನಾರವೇ ಈ ಟ್ರೆಂಡಿಂಗ್ ಎಂಬ ಗಾಳಗಳು. ಈ ಹಾಡನ್ನು ಟ್ರೆಂಡ್ ಮಾಡುತ್ತೇವೆ ಇದಕ್ಕೆ ಕುಣಿಯಿರಿ; ಈ ಶೈಲಿಯನ್ನು ಟ್ರೆಂಡ್ ಮಾಡುತ್ತೇವೆ ನಿಮ್ಮ ಫೋಟೊಗಳನ್ನು ಅಪ್ಲೋಡ್ ಮಾಡಿ; ಈ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಇಡುತ್ತೇವೆ ಇದರ ಸುತ್ತಲೇ ಕಂಟೆಂಟ್ ಕ್ರಿಯೇಟ್ ಮಾಡಿ…. ಹೀಗೆ ಈಗಾಗಲೇ ನಮ್ಮನ್ನು ಡಿಕ್ಟೇಟ್ ಮಾಡಲಾಗುತ್ತಿದೆ. ನಿಮ್ಮ ಇಷ್ಟದ ಸಂಗತಿ ಮೇಲೆ ಕಂಟೆಂಟ್ ಜನರೇಟ್ ಮಾಡುವುದಕ್ಕಿಂತ, ಯಾವುದನ್ನು ವೈರಲ್-ಟ್ರೆಂಡಿಂಗ್ ಎಂದು ಹ್ಯಾಷ್ಟ್ಯಾಗ್ ಮಾಡಲಾಗಿದೆಯೋ ಅದರ ಮೇಲೆ ಕಂಟೆಂಟ್ ಕ್ರಿಯೇಟ್ ಮಾಡಿ ಲೈಕ್ ಹಿಗ್ಗಿಸಿಕೊಳ್ಳುವ ವ್ಯಾಮೋಹದ ಬಲೆಗೆ ಜನರನ್ನು ಸಿಕ್ಕಿಸಲಾಗಿದೆ.
ಟ್ರೆಂಡಿಂಗ್ ನೆಪದಲ್ಲಿ ಸೈಕಾಲಜಿಕಲ್ ಡೊಪಮೈನ್ ಲೂಪ್ನ ಅಸ್ತ್ರ ಪ್ರಯೋಗಿಸುತ್ತಿರುವ ಡಿಜಿಟಲ್ ಪ್ಲ್ಯಾಟ್ಫಾರಂಗಳ ಬಲೆಗೆ ಬೀಳುತ್ತಾ ಹೋದರೆ, ನಾವು ಯಾರಿಗೆ ಮತ ಹಾಕಬೇಕು, ನಾವು ಯಾವ ಬಟ್ಟೆ ಧರಿಸಬೇಕು, ಏನನ್ನು ಖರೀದಿಸಬೇಕು, ಯಾರ ಜೊತೆ ಸ್ನೇಹ ಮಾಡಬೇಕು ಎಂಬ ಎಲ್ಲವನ್ನು ಅವುಗಳೇ ನಿರ್ಧರಿಸಿಬಿಡುತ್ತವೆ. ಈಗಾಗಲೇ ಆನ್ಲೈನ್ ಗೇಮ್ಗಳು ಎಳೆಯ ಮಕ್ಕಳಿಗೆ ಆಟದ ಹುಚ್ಚು ಹಿಡಿಸಿ, ಟಾಸ್ಕ್ ಹೆಸರಿನಲ್ಲಿ ಹತ್ಯೆ ಮಾಡಿಸುತ್ತಿರುವ, ಆತ್ಮಹತ್ಯೆಗೆ ಪ್ರೇರೇಪಿಸುತ್ತಿರುವ ದುರಂತಗಳನ್ನು ಕಾಣುತ್ತಿದ್ದೇವೆ. ಅಲ್ಲಿ ಡೊಪಮೈನ್ ಲೂಪ್ನ ನಿಯಂತ್ರಣ ತೀವ್ರವಾಗಿರುತ್ತದೆ, ಆದರೆ ಟ್ರೆಂಡಿಂಗ್ ತಂತ್ರದಲ್ಲಿ ಅದು ಕಡಿಮೆ ಪ್ರಮಾಣದಲ್ಲಿದೆಯಷ್ಟೆ. ಮುಂದೆ ಇಲ್ಲಿಯೂ ಅದು ವಿಪರೀತಕ್ಕೆ ತಲುಪಿದರೆ ಅಚ್ಚರಿಯಿಲ್ಲ. ಯಾಕೆಂದ್ರೆ, ಲಾಭವೇ ಮುಖ್ಯವಾದ ಬಂಡವಾಳ ವ್ಯವಸ್ಥೆಯಲ್ಲಿ ನೈತಿಕತೆ, ಹೊಣೆಗಾರಿಕೆಗಳಿಗೆ space ತುಂಬಾ ಕಡಿಮೆ.
ಪ್ರತಿ ದೊಡ್ಡ ದುರಂತಗಳು ಸಣ್ಣಪುಟ್ಟ ತಪ್ಪುಗಳಿಂದಲೇ ಶುರುವಾಗಿರುತ್ತವೆ. ಯಾವುದೇ ಡಿಜಿಟಲ್ ಟ್ರೆಂಡ್ ಅನ್ನು ಅನುಸರಿಸುವಾಗ ಈಗ ನನಗೆ ಇದರ ಅಗತ್ಯವಿದೆಯೇ? ಇದರಿಂದ ಪ್ರಯೋಜನವೇನು? ಎಂದು ಪ್ರಶ್ನಿಸಿಕೊಳ್ಳುವಷ್ಟು ವಿವೇಚನೆಯನ್ನು ನಾವು ಉಳಿಸಿಕೊಂಡರೆ ಸಾಕು, ನಾವು ನಾವಾಗಿರಬಹುದು. ಬಹಳಷ್ಟು ಜನ ಇದನ್ನು ಮಾಡುತ್ತಿದ್ದಾರೆ, ಹಾಗಾಗಿ ನಾನೂ ಇದನ್ನು ಮಾಡುತ್ತೇನೆ ಎಂಬ Herd Mentalityಯಿಂದ ದೂರವಿರುವುದು ತುಂಬಾ ಮುಖ್ಯ.
ಅಂದಹಾಗೆ, ಇವೆಲ್ಲವೂ ಟ್ರೆಂಡಿಂಗ್ ಅವತಾರಗಳ ದೂರಗಾಮಿ ಪರಿಣಾಮಗಳು. ಸದ್ಯಕ್ಕಂತೂ, ಟ್ರೆಂಡ್ ಕಾರಣಕ್ಕೆ ನೀವು ಅಪ್ಲೋಡ್ ಮಾಡುತ್ತಿರುವ ನಿಮ್ಮ ಫೋಟೊ ಮತ್ತು ವೀಡಿಯೊಗಳನ್ನು ಬಳಸಿಕೊಂಡು ಖರ್ಚಿಲ್ಲದೆ ತಮ್ಮ ಎಐ ಮಾಡೆಲ್ಗೆ Facial Geometry ಮತ್ತು ಬಯೋಮೆಟ್ರಿಕ್ ಡೇಟಾವನ್ನು ನಮ್ಮ ಸಮ್ಮತಿಯೊಂದಿಗೆ ನಮ್ಮಿಂದ ಕದಿಯುತ್ತಿವೆ. ಇವತ್ತಿನ ಡೇಟಾ ಯುಗದಲ್ಲಿ, ನಾವೇ ಒಂದು ಆಸ್ತಿ! ಆ ಆಸ್ತಿಯನ್ನು ಡೊಪಮೈನ್ ನೀಡುವ ಕ್ಷಣಿಕ ಖುಷಿಗಾಗಿ ಯಾರೋ ಅಪರಿಚಿತರ ಸುಪರ್ದಿಗೆ ಒಪ್ಪಿಸುತ್ತಿದ್ದೇವೆ.
– ಗಿರೀಶ್ ತಾಳಿಕಟ್ಟೆ
