ಓದಲೇಬೇಕಾದ ಹೊಸ ಕೃತಿ ಮತ್ತು ತಿಳಿಯಲೇಬೇಕಾದ ವಿಕೃತಿ

ಕಳೆದ ವಾರ ಬೆಂಗಳೂರಿನಲ್ಲಿ ನಟರಾಜ್‌ ಹುಳಿಯಾರ್‍‌ ಮೂರು ವರ್ಷ ಅಧ್ಯಯನ ಮಾಡಿದ ಲೋಹಿಯಾರವರ ಬದುಕನ್ನು ಆಧರಿಸಿದ `ಡಾಕ್ಟರ್ ಸಾಹೇಬ್‌’ ಪುಸ್ತಕ ಬಿಡುಗಡೆಯಾಯ್ತು. ಈಗ ಉಳಿದಿರುವ ಸೋಷಲಿಸ್ಟರ ಕೊನೆಯ ಕೊಂಡಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿದರು. ಆಶ್ಚರ್ಯ ಅಂದರೆ ಬಿಡುಗಡೆಯಾಗುವ ಮುನ್ನವೇ ಎಲ್ಲರ ಕೈಯಲ್ಲೂ ಡಾಕ್ಟರ್ ಸಾಹೇಬ್‌ ಪುಸ್ತಕ ಇದ್ದವು. ಬಿಡುಗಡೆ ನಂತರ ನಟರಾಜ್‌ ಹುಳಿಯಾರ್ ಮರು ಮುದ್ರಣವನ್ನು ಪ್ರಕಟಿಸಿದರು. ಬಿಡುಗಡೆಯ ದಿನವೇ ಕೃತಿಯ ಮರುಮುದ್ರಣದ ಪ್ರಕಟಣೆ ನಿಜಕ್ಕೂ ಒಂದು ಐತಿಹಾಸಿಕ ಘಟನೆ.

ಕೃತಿ ಈ ರೂಪದಲ್ಲಿ ಖರ್ಚಾಗಲು ಕಾರಣ ಲೋಹಿಯಾ ವಿಚಾರಧಾರೆಗೆ ಕನ್ನಡಿಗರು ಸ್ಪಂದಿಸಿರುವುದು. ಲೋಹಿಯಾರವರು ಕಾಗೋಡು ಚಳವಳಿ ಪ್ರಾರಂಭಿಸಲು ಬೆಂಗಳೂರಿನಿಂದ ಸಾಗರಕ್ಕೆ ಬಂದಾಗ ಪೊಲೀಸರು ಅವರನ್ನು ಸಾಗರದಲ್ಲಿ ಬಂಧಿಸಿದರು. ಆ ನೆನಪಿಗಾಗಿ ಸಾಗರದ ರೈಲ್ವೆ ನಿಲ್ದಾಣಕ್ಕೆ ಲೋಹಿಯಾರವರ ಹೆಸರಿಡಲು ಈಗಲೂ ಹೋರಾಟ ನಡೆಯುತ್ತಿದೆ. ಲೋಹಿಯಾ ಅಂದ ಕೂಡಲೇ ಕಾಗೋಡಿನ ರೈತ ಹೋರಾಟ ನೆನಪಿಗೆ ಬರುತ್ತದೆ. ಹಾಗೆ ನೋಡಿದರೆ ಕಾಗೋಡು ಸತ್ಯಾಗ್ರಹದ ಮೂಲಕ ಹಲವಾರು ನಾಯಕರು ಮುಂಚೂಣಿಗೆ ಬಂದರು. ಲೋಹಿಯಾರವರ ವಿಚಾರಧಾರೆಯಿಂದಲೇ ಐದು ಜನ ಶಾಸಕರು ವಿಧಾನಸಭೆಗೆ ಹೋದರು. ಪಟೇಲರು ಲೋಕಸಭೆಗೆ ಹೋಗಿದ್ದರು. ಕನ್ನಡ ಸಾಹಿತ್ಯದ ನವ್ಯ ಲೇಖಕರೆಲ್ಲಾ ಲೋಹಿಯಾ ಪ್ರಭಾವಕ್ಕೆ ಒಳಗಾಗಿದ್ದರು. ಪ್ರೊ.ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್, ಚಂಪಾ, ವೆಂಕಟರಾಂ, ಮಂಗ್ಳೂರ ವಿಜಯ, ಶೂದ್ರ ಶ್ರೀನಿವಾಸ್‌, ರವಿವರ್ಮಕುಮಾರ್‍‌ ಇವರೆಲ್ಲಾ ಲೋಹಿಯಾರವರ ಹೊಸ ಸಂವೇದನೆಗೆ ಮಾರುಹೋಗಿದ್ದರು. ಹಾಗಾಗಿ ಉತ್ತರ ಭಾರತಕ್ಕಿಂತಲೂ ಲೋಹಿಯಾ ಕರ್ನಾಟಕದಲ್ಲಿ ನೆಲೆಯೂರಿದರು.

ಅವರ ಹೋರಾಟದ ಕುರಿತು ಹಲವಾರು ಪುಸ್ತಕ ಬಂದಿದ್ದರೂ ಡಾಕ್ಟರ್ ಸಾಹೇಬ್‌ ಪುಸ್ತಕ ಅವರನ್ನು ಸಮಗ್ರವಾಗಿ ಪರಿಚಯಿಸುತ್ತದೆ. ಹಾಗಾಗಿ ನಾವು ಓದಲೇಬೇಕಾದ ಪುಸ್ತಕ ಇದು. ಈ ಹಿಂದೆ ನಟರಾಜ್‌ ಹುಳಿಯಾರ್ ಎಲ್ಲರ ಗಾಂಧಿಯನ್ನು ರಚಿಸಿ ನಮ್ಮ ಕೈಗಿಟ್ಟಿದ್ದರು. ಅದೂ ಕೂಡ ಹೀಗೇ ಖರ್ಚಾಗಿತ್ತು. ಆದರೆ ಡಾಕ್ಟರ್‍‌ ಸಾಹೇಬ್‌ ಅದಕ್ಕಿಂತಲೂ ವೇಗವಾಗಿ ಮಾರಾಟವಾಗಿದೆ.

ಸರಕಾರದ ಸಗಟು ಖರೀದಿ ಕಾಯುತ್ತಾ ಕುಳಿತ ಲೇಖಕರು ಒಂದಿಷ್ಟು ಯೋಚಿಸುವುದು ಒಳ್ಳೆಯದು. ಏಕೆಂದರೆ ಸಗಟು ಖರೀದಿ ಆರಂಭದಲ್ಲಿ ಒಳ್ಳೆಯ ಆಶಯಗಳನ್ನಿಟ್ಟುಕೊಂಡಿತ್ತು. ಆ ನಂತರ ಅದೊಂದು ದಂಧೆಯಾಗಿ ಹೋಯಿತು. ಆಗ ತೇಜಸ್ವಿಯವರು ಸರಕಾರದ ಸಗಟು ಖರೀದಿಯ ಸಮೀಪಕ್ಕೆ ಬರದೆ ಸ್ವತಂತ್ರವಾಗಿ ಓದುಗರನ್ನು ತಲುಪತೊಡಗಿದರು. ಪರಿಣಾಮ ಅವರೆಲ್ಲಾ ಕೃತಿಗಳು ಇಪ್ಪತ್ತು ಮೂವತ್ತು ಪ್ರಕಟಣೆ ಕಂಡಿವೆ. ನಿಜಕ್ಕೂ ಸಗಟು ಖರೀದಿ ಯಾವ ಮಟ್ಟ ತಲುಪಿತೆಂದರೆ, ಒಬ್ಬ ಸುಮಾರು ನಲವತ್ತು ಪ್ರಕಾಶನ ತೆಗೆದಿದ್ದ. ಲೇಖಕನಿಗೆ 50 ಪ್ರತಿಕೊಟ್ಟು, 300 ಪ್ರತಿ ಸಗಟು ಮಾರಾಟ ಮಾಡಿ ಉಳಿದ ನೂರು ಅವನಿಗೇನು ನಷ್ಟವಾಗುತ್ತಿರಲಿಲ್ಲ. ಇದನ್ನು ಪತ್ತೆ ಮಾಡಿದ ಹೊರಟ್ಟಿಯವರು ಶಿಕ್ಷಣ ಸಚಿವರಾಗಿದ್ದಾಗ ಅವನ ಪ್ರಕಾಶನ ಸಂಸ್ಥೆಗಳನ್ನು ತನಿಖೆಗೊಳಪಡಿಸಿದರು.

ಒಮ್ಮೆ ನಾನು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಗ್ರಂಥಾಲಯ ಅಧಿಕಾರಿಯಾಗಿದ್ದಾಗ, 2012-13ರ ಅವಧಿಯ ಪಟ್ಟಿಯಲ್ಲಿನ ಪುಸ್ತಕ ನೋಡಿ ‘ಇವುಗಳನ್ನು ಕೊಳ್ಳಲು ಸಾಧ್ಯವಿಲ್ಲ’ ಎಂದು ಅಂದಿನ ಗ್ರಂಥಾಲಯ ನಿರ್ದೇಶಕರಿಗೆ ತಿಳಿಸಿದ್ದೆ. ಅಷ್ಟು ಕಳಪೆ ಸಾಹಿತ್ಯ ಮತ್ತು ಕೇಡಿನ ಉದ್ದೇಶವನ್ನು ಹೊಂದಿದ್ದಂತಹ ಕೃತಿಗಳು ಅವು. ಆಗ ಪುಸ್ತಕ ಕೊಳ್ಳಲು ಪತ್ರ ಬರೆದ ಕೆಲವು ಪ್ರಕಾಶಕರು c/o ಎಮ್ಮೆಲ್ಲೆ ಅಡ್ರೆಸ್‌ ಬರೆಯುತ್ತಿದ್ದರು. ಅಂದರೆ ನಾವೆಷ್ಟು ಪ್ರಭಾವಿಗಳು ಎಂಬುದನ್ನು ತೋರಿಸಿ, ಆ ಮೂಲಕ ತಮ್ಮ ಪುಸ್ತಕ ಖರೀದಿಸಲೇಬೇಕು ಎನ್ನುವ ಒತ್ತಡ ಸೃಷ್ಟಿಸುವ ತಂತ್ರ. ಬಹುಶಃ ಆಗಲೇ ನಮ್ಮ ಗ್ರಂಥಾಲಯಗಳು ರದ್ದಿ ತುಂಬಿದ ಗೋಡೌನುಗಳಂತಾದವು. ಲೈಬ್ರರಿಯಿಂದಲೇ ಲೇಖಕನಾದವನು ನಾನು. ಈಗ ಲೈಬ್ರರಿಗೆ ಹೋಗಲಿಕ್ಕೇ ಆಗದಂತೆ ಮಾಡಿಟ್ಟಿದ್ದಾರೆ. ಯಾವುದೇ ಇಲಾಖೆ ಅಥವಾ ಯಾವುದೇ ಉದ್ದೇಶ ತನ್ನ ಉಪಯೋಗದ ಆಶಯವನ್ನು ಕಳೆದುಕೊಂಡು, ಕೇವಲ ಕೆಲವರ ಹಣ ಮಾಡುವ ದಂಧೆಗೂಡಿನಂತಾದಾಗ ಸಾರ್ವಜನಿಕರಿಗೆ ಅದರ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಜನರಿಗೇ ಆಸಕ್ತಿ ಇಲ್ಲವೆಂದ ಮೇಲೆ ಹಣ ನೀಡಲು ನಮ್ಮ ಸರ್ಕಾರಗಳು ಮುಂದೆ ಬರುತ್ತವೆಯೇ? ಯಾಕೆ ನೀಡಲಿಲ್ಲವೆಂದು ಪ್ರಶ್ನಿಸಲು ಜನರಿಗೆ ಕಾಳಜಿ ಉಳಿಯುತ್ತದೆಯೇ?  

ಗ್ರಂಥಾಲಯ ಇಲಾಖೆಗೆ ಈಗ ಎದುರಾಗಿರುವುದು ಇದೇ ಸಮಸ್ಯೆ. ಸರಕಾರ 2022ರಿಂದ ಹಣಕಾಸಿನ ಕೊರತೆಯ ಕಾರಣಕ್ಕೆ ಸಗಟು ಖರೀದಿ ನಿಲ್ಲಿಸಿದೆ. ಇದರಿಂದ ಯಾವ ಅನಾಹುತವೂ ಸಂಭವಿಸಿಲ್ಲ. ಬದಲಿಗೆ ಪ್ರಕಾಶಕರ ಬೊಬ್ಬೆ ಜಾಸ್ತಿಯಾಗಿದೆಯಷ್ಟೆ. ಕೆಲವು ಸಾಹಿತಿಗಳಂತೂ ಓದುಗರಿಗೆ ಸಕಾಲಕ್ಕೆ ನಮ್ಮ ಪುಸ್ತಕ ಸಿಗುತ್ತಿಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇರಲಿ, ನಿಜಕ್ಕೂ ನಮ್ಮ ಸರಕಾರಗಳು ಅತ್ಯಂತ ನಿರ್ಲಕ್ಷ್ಯದಿಂದ ಕಾಣುವ ಇಲಾಖೆಯೆಂದರೆ ಈ ಗ್ರಂಥಾಲಯ ಇಲಾಖೆ. ಆಗ ಎಂ ಪಿ ಪ್ರಕಾಶ್‌ ಮತ್ತು ಕಡಿದಾಳು ಶಾಮಣ್ಣನವರ ಕಾಳಜಿಯಿಂದ ಗ್ರಾಮೀಣ ಗ್ರಂಥಾಲಯಗಳು ಪ್ರಾರಂಭವಾದವು. ಸ್ಥಳೀಯ ಮೇಲ್ವಿಚಾರಕರು ಗೌರವ ಧನದಲ್ಲಿ ನೇಮಕಗೊಂಡರು. ಆದರೆ ಈ ಕಾರ್ಯ ಅಲ್ಲಿಗೇ ನಿಂತುಹೋಯಿತು. ಈ ಗ್ರಂಥಾಲಯಗಳಿಗೆ ಹೊಸ ಅಲ್ಮೆರಾಗಳು, ಕುರ್ಚಿ ಮೇಜುಗಳೂ ಬರಲಿಲ್ಲ. ಸಗಟು ಖರೀದಿ ಪುಸ್ತಕ ಮಾತ್ರ ಬಂದು ಬೀಳುತ್ತಿವೆ. ಗ್ರಂಥಾಲಯದ ಹಣ ಗಿಂಚುವುದಕ್ಕೆಂದೇ, ಸಾಹಿತ್ಯದ ಗಂಧಗಾಳಿ ತಿಳಿಯದ ಹಲವರು ಪ್ರಕಾಶನ ಸಂಸ್ಥೆಗಳನ್ನು ಮಾಡಿಕೊಂಡಿರುವುದುಂಟು. ಪುಸ್ತಕದ ಮೌಲ್ಯ ಅಂತವರಿಗೆ ತಿಳಿಯದು. ಹಾಗಾಗಿ ಲೇಖಕರ ಜೊತೆಗೆ, ತರಕಾರಿ ಮಾರುಕಟ್ಟೆ ಶೈಲಿಯಲ್ಲಿ ಚೌಕಾಶಿಗಿಳಿಯುತ್ತಾರೆ. ನಿಮ್ಮ ಪುಸ್ತಕ ಪ್ರಕಟಿಸುವುದೇ ನಾವು ಮಾಡುತ್ತಿರುವ ಮಹದೋಪಕಾರ ಎನ್ನುವಂತೆ ಮಾತಾಡುತ್ತಾರೆ. ಗೌರವಧನದ ಮಾತು ಕೇಳುವುದು ಬೇಡ. ಯಾಕೆಂದರೆ ಯಾವ ಲೇಖಕರು ಪುಸ್ತಕ ಕೊಡದಿದ್ದರೂ, ಗ್ರಂಥಾಲಯದ ಸಗಟು ಖರೀದಿಗೆ ತುಂಬಬಹುದಾದ ಪುಸ್ತಕಗಳನ್ನು ಹೇಗೆ ಸೃಷ್ಟಿಸಬೇಕೆಂದು ಗೊತ್ತು ಮಾಡಿಕೊಂಡಿದ್ದಾರೆ. ಅಂತವರಿಂದಾಗಿ ಪ್ರಾಮಾಣಿಕವಾಗಿ ಪ್ರಕಾಶನ ಸಂಸ್ಥೆ ನಡೆಸುವವರಿಗೂ ಕೆಟ್ಟ ಹೆಸರು. ಈಗ ನೋಡಿ, ಇಂತವರ ಉಪಟಳದಿಂದಾಗಿ ಜನರಿಗೂ ಆಸಕ್ತಿಯಲ್ಲದೆ, ಸರಕಾರಕ್ಕೂ ಅವಶ್ಯಕತೆ ಇಲ್ಲದೆ ಸಗಟು ಖರೀದಿ ನಿಂತಿರುವುದರಿಂದ ಪ್ರಾಮಾಣಿಕ ಪ್ರಕಾಶಕರಿಗೂ ಸಂಕಷ್ಟ.

ಅಂತೂ ಈ ಗ್ರಂಥಾಲಯಗಳು ಯಾರಿಗೂ ಬೇಡದ ತಾಣಗಳಾಗಿ, ಅಂದು ನೇಮಕಗೊಂಡ ಮೇಲ್ವಿಚಾರಕರು ಯಾವ ಪಿಂಚಣಿಯೂ ಇಲ್ಲದೆ ನಿವೃತ್ತರಾಗುತ್ತಿದ್ದಾರೆ. ಮೊನ್ನೆ ಎಪ್ಪತ್ತೈದು ಲಕ್ಷದಲ್ಲಿ ಆಂಜನೇಯನ ಗುಡಿ ಕಟ್ಟಲೋಸ್ಕರ ಅಡಿಗಲ್ಲಾಕಲು ಚುಂಚನಗಿರಿ ಸ್ವಾಮಿ ಕರೆಯಲು ಹೊರಟ ಟೀಮು ನೋಡಿದೆ. ಇಂತವರಾರಿಗೂ ಪಾಳುಬಿದ್ದ ತಮ್ಮೂರ ಗ್ರಂಥಾಲಯ ಕಂಡಿರಲಾರದು! ಒಳ್ಳೆಯ ಆಶಯದೊಂದಿಗೆ ಪ್ರಾರಂಭಗೊಂಡ ಗ್ರಂಥಾಲಯ ಹಾಳುಬಿದ್ದಿವೆ. ಸಗಟು ಖರೀದಿ ನಿಂತಿದೆ. ಈ ಸಮಯದಲ್ಲಿ ಲೇಖಕರು ತಮ್ಮ ಕೃತಿಗಳು ಓದುಗರನ್ನು ತಲುಪುವ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲವರು ನಮ್ಮ ಹಿರಿಯ ಸಾಹಿತಿಗಳ ಕಡೆ ನೋಡುವುದು ಒಳ್ಳೆಯದು. ಡಾಕ್ಟರ್‍‌ ಸಾಹೇಬ್‌ ಕೃತಿ ಬಿಡುಗಡೆ ಸಮಯದಲ್ಲಿ ಹೊಳೆದಿದ್ದನ್ನು ನಿಮ್ಮೊಡನೆ ಹಂಚಿಕೊಂಡೆ ಅಷ್ಟೆ.

ಕೃತಿ: ಡಾಕ್ಟರ್‍‌ ಸಾಹೇಬ್‌
ಲೇಖಕರು: ನಟರಾಜ್‌ ಹುಳಿಯಾರ್
ಪ್ರಕಾಶನ: ಪಲ್ಲವ ಪ್ರಕಾಶನ
ಪುಟಗಳು: 506
ಬೆಲೆ ರೂ.: 450
ಪ್ರತಿಗಳಿಗೆ ಸಂಪರ್ಕಿಸಿ: 88800 87235

Leave a Reply

Your email address will not be published. Required fields are marked *