ಕೇಂದ್ರ ಸಚಿವ ಕುಮಾರಸ್ವಾಮಿಯವರು ಎಂಥಾ ಉಸುಕಿಗೆ ಇಳಿದಿದ್ದಾರೆಂದರೆ, ಹೊರಬರಲು ಬಡಿದಾಡಿದಷ್ಟೂ ಅವರ ತೂಕ ಆಳಕ್ಕೆ ಕುಸಿಯುತ್ತಲೇ ಇದೆ. ಸ್ಟಿಂಗ್ ಆಪರೇಷನ್ ಬಲೆಗೆ ವಿರೋಧಿಗಳು ಬಯಸಿದ್ದಕ್ಕಿಂತಲೂ ಭೀಕರವಾಗಿ ಸಿಲುಕಿಕೊಳ್ಳುತ್ತಿದ್ದಾರೆ. ಇದು ಅವರದೇ ಅತಿ ಜಾಣತನದ ತಪ್ಪು!
ಸಿಎಂ ಡಿ ಕೆ ಶಿವಕುಮಾರ್ ಕ್ಯಾಬಿನೆಟ್ ಸಚಿವರಿಗೆ ಸ್ಟಿಂಗ್ ಆಪರೇಷನ್ ಕುರಿತು ಹೇಳಿದರೆನ್ನಲಾದ ಕಿವಿಮಾತು, ಕುಮಾರಸ್ವಾಮಿಯವರನ್ನು ಇಷ್ಟೊಂದು ಅನಾಯಾಸವಾಗಿ ಕಟ್ಟಿಹಾಕುವ ಅಸ್ತ್ರವಾಗಲಿದೆ ಎಂದು ಬಹುಶಃ ಅವರೂ ನಿರೀಕ್ಷಿಸಿರಲಿಕ್ಕಿಲ್ಲ. ಆದರೆ ನಾಜೂಕಿನಿಂದ ನಿಭಾಯಿಸಬಹುದಾಗಿದ್ದ ಪ್ರಕರಣವನ್ನು ಅತಿ ಜಾಣತನದಿಂದ ಬಳಸಲು ಹೋಗಿ ಸ್ವತಃ ಕುಮಾರಸ್ವಾಮಿಯವರು ದೊಡ್ಡ ಚಕ್ರವ್ಯೂಹದೊಳಗೆ ಬಂಧಿಯಾಗಿದ್ದಾರೆ.
ಬಿಡದಿ ಟೌನ್ಶಿಪ್, ನೈಸ್ ಭೂಸ್ವಾಧೀನ, ಕೆಪಿಎಸ್ಸಿ ಪ್ರಕರಣಗಳನ್ನಿಟ್ಟುಕೊಂಡು ತಮ್ಮ ಸರ್ಕಾರವನ್ನು ನಿರಂತರವಾಗಿ ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಮಾಡುತ್ತಿದ್ದ ಕುಮಾರಸ್ವಾಮಿಯವರನ್ನು ಸೈಲೆಂಟ್ ಮಾಡಲು ಸಿಎಂ ಡಿ ಕೆ ಶಿವಕುಮಾರ್ ಸೂಕ್ತ ಅಸ್ತ್ರದ ಹುಡುಕಾಟದಲ್ಲಿದ್ದಾಗ ಅವರಿಗೆ ಸಿಕ್ಕಿದ್ದೇ ಮೀಡಿಯಾಗಳಲ್ಲಿ ವರ್ಣರಂಜಿತವಾಗಿ ಚರ್ಚೆಯಾಗುತ್ತಿದ್ದ ಸ್ಟಿಂಗ್ ಆಪರೇಷನ್ ಅಸ್ತ್ರ. ಸರ್ಕಾರವನ್ನು ಅಸ್ಥಿರಗೊಳಿಸುವ ಈ ಸ್ಟಿಂಗ್ ಹಿಂದೆ ಕೇಂದ್ರ ಮಂತ್ರಿಯೊಬ್ಬರ ಕೈವಾಡವಿದೆ ಎಂಬ ಸುದ್ದಿಯನ್ನು ಹರಿಬಿಡಲಾಯ್ತು. ಪರೋಕ್ಷವಾಗಿ ಎಚ್ಡಿಕೆಯವರನ್ನು ಟಾರ್ಗೆಟ್ ಮಾಡಲಾಗಿತ್ತು. ಈ ಅಪವಾದದಿಂದ ಹೊರಬರಲು ಯತ್ನಿಸಿದಷ್ಟೂ ಸರ್ಕಾರದ ತಂಟೆಗೆ ಬರುವುದು ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿತ್ತು.
ಕುಮಾರಸ್ವಾಮಿಯವರು ‘ಗಂಭೀರ ಸಮಸ್ಯೆಗಳ ಚರ್ಚೆಯಿಂದ ಗಮನ ಬೇರೆಡೆ ಸೆಳೆಯಲು ಸರ್ಕಾರ ಈ ಅನಗತ್ಯ ಸ್ಟಿಂಗ್ ಚರ್ಚೆ ಹುಟ್ಟುಹಾಕಿದೆ. ನಾನು ಡೈವರ್ಟ್ ಆಗಲ್ಲ. ಇಶ್ಯೂ ಬೇಸ್ಡ್ ಹೋರಾಟ ಮುಂದುವರೆಸ್ತೀನಿ’ ಅಂತ ಒಂದು ಮಾತು ಹೇಳಿದ್ದರೂ, ಡಿಕೆಶಿ ಹೆಣೆದ ತಂತ್ರ ಬಿದ್ದುಹೋಗುತ್ತಿತ್ತೇನೊ. ಆದರೆ, ಕುಮಾರಸ್ವಾಮಿಯವರು ಅತಿಜಾಣತನ ತೋರಲು ಯೋಚಿಸಿದರು. ತನ್ನನ್ನು ಸಿಲುಕಿಸಲು ನೋಡುತ್ತಿರುವ ಈ ಷಡ್ಯಂತ್ರದಿಂದ ಹೊರಬರುವುದು ಮಾತ್ರವಲ್ಲದೆ, ಒಂದೇ ಏಟಿಗೆ ಮೂವರು ವಿರೋಧಿಗಳನ್ನು ಮಟ್ಟಹಾಕುವ ಪ್ಲ್ಯಾನ್ ರೂಪಿಸಿದರು. ಮೊದಲನೆಯವರು, ತಮ್ಮ ರಾಜಕೀಯ ಕಡುವಿರೋಧಿ ಸಿದ್ದರಾಮಯ್ಯ; ಎರಡನೆಯವರು, ಜಾತಿ ವೋಟ್ಬ್ಯಾಂಕ್ನ ಕಡುಪ್ರತಿಸ್ಪರ್ಧಿ ಡಿ ಕೆ ಶಿವಕುಮಾರ್; ಮೂರನೆಯದಾಗಿ, ತಾವೇ ಸಾಕಿ ಬೆಳೆಸಿ ಈಗ ತಮಗೇ ಮಗ್ಗುಲ ಮುಳ್ಳಾಗಿರುವ ರಾಕೇಶ್ ಶೆಟ್ಟಿ!
ಎಚ್ಡಿಕೆ ಎಣಿಕೆ ಹೀಗಿತ್ತು!
ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಹೋಗಿ ಅತಿ ಸುದೀರ್ಘ ಸಿಎಂ ಎನಿಸಿಕೊಂಡ ಸಿದ್ದರಾಮಯ್ಯನವರ ಮೇಲೆ ಆರಂಭದಿಂದಲೂ ಅಸಮಾಧಾನ ಇತ್ತು. ಆದರೆ ತೀರಿಸಿಕೊಳ್ಳುವಂತಹ ಸೂಕ್ತ ಸಂದರ್ಭ ಎದುರಾಗಿರಲಿಲ್ಲ. ರಾಜಕಾರಣದ ಮುಸ್ಸಂಜೆಯಲ್ಲಿರುವ ಈಗ ಅವರ ವಿರುದ್ಧದ ಇಂತಹ ಸ್ಟಿಂಗ್ ವದಂತಿಯನ್ನು ಹಬ್ಬಿಸಿದರೆ, ಅವರಿಗೆ ವ್ಯಕ್ತಿತ್ವಕ್ಕೆ ದೊಡ್ಡ ಆಘಾತ ಮಾಡಿದಂತಾಗುತ್ತೆ ಮಾತ್ರವಲ್ಲದೆ; ಅವರು ಸಂಘಟಿಸಿದ ಅಹಿಂದ ವೋಟ್ಬ್ಯಾಂಕ್ ಅನ್ನು ಛಿದ್ರ ಮಾಡಬಹುದು. ಅದರಿಂದಾಗಿ ಪ್ರಭಾವಿ ಜಾತಿಗಳ ರಾಜಕಾರಣ ಮತ್ತೆ ಮುನ್ನೆಲೆಗೆ ಬರಲಿದೆ. ಇದರಿಂದ ತಮಗೆ ಪರೋಕ್ಷ ಲಾಭ.

ಇನ್ನು ಸಿದ್ದರಾಮಯ್ಯನವರ ವಿರುದ್ಧ ಇಂತದ್ದೊಂದು ಸ್ಟಿಂಗ್ ನಡೆದಿದೆಯೆಂದರೆ, ಅದು ಸುಲಭವಾಗಿ ಡಿ ಕೆ ಶಿವಕುಮಾರ್ ಹೆಗಲೇರುತ್ತದೆ. ಸಿಎಂ ಸ್ಥಾನದಿಂದ ಇಳಿಸಿದ ನಂತರ ಸಿದ್ದರಾಮಯ್ಯನವರ ಅಭಿಮಾನಿ ವಲಯದಲ್ಲಿ ಡಿಕೆಶಿ ವಿರುದ್ಧ ಇರುವ ಅಸಮಾಧಾನವನ್ನು ಇದಕ್ಕಾಗಿ ಬಳಸಿಕೊಳ್ಳಬಹುದೆಂಬುದು ಅವರ ಇಂಗಿತ. ಹಾಗಾಗಿಯೇ, ಸ್ಟಿಂಗ್ ಪ್ರಕರಣ ಹೊರಬಂದ ನಂತರ ದಿಢೀರ್ ಸಿದ್ದರಾಮಯ್ಯನವರ ಬಗ್ಗೆ ಅಪಾರ ಕಾಳಜಿಯ ಮಾತುಗಳನ್ನಾಡಲು ಶುರು ಮಾಡಿದರು. ಅಕಸ್ಮಾತ್ ಡಿ ಕೆ ಶಿವಕುಮಾರ್ ಅವರ ಬಳಿ, ಎರಡ್ಮೂರು ವರ್ಷಗಳಷ್ಟು ಹಳೆಯದಾದ ಈ ಸ್ಟಿಂಗ್ ಆಪರೇಷನ್ನ ಅಸ್ತ್ರ ಇದ್ದು, ಅದನ್ನವರು ಬ್ಲ್ಯಾಕ್ಮೇಲ್ ರಾಜಕಾರಣಕ್ಕೆ ಬಳಸಲೇಬೇಕು ಎಂದಿದ್ದರೆ, ತುಂಬಾ ಹಿಂದೆಯೇ ಅವರು ಸಿಎಂ ಆಗಬೇಕಿತ್ತು. ಅಧಿಕಾರ ಹಸ್ತಾಂತರದ ಚರ್ಚೆ ಸುಮಾರು ಒಂದೂವರೆ ವರ್ಷಗಳ ಕಾಲ ಹಗ್ಗಜಗ್ಗಾಟವಾಡಲು ಅವಕಾಶ ಕೊಡುತ್ತಿರಲಿಲ್ಲ. ಸಿದ್ದರಾಮಯ್ಯನವರನ್ನು ಈ ರೀತಿ ಹೆದರಿಸಿ, ಬೆದರಿಸಿ ಅಧಿಕಾರ ದಕ್ಕಿಸಿಕೊಂಡರೆ ಅದನ್ನು ಬಹಳ ದಿನ ದಕ್ಕಿಸಿಕೊಳ್ಳಲಾಗದು ಎಂದು ಅರಿತಿದ್ದರಿಂದಲೇ ಡಿ ಕೆ ಶಿವಕುಮಾರ್ ಹೈಕಮಾಂಡ್ ಮನವೊಲಿಸುವ ನಿರಂತರ ಯತ್ನದಲ್ಲಿ ತಲ್ಲೀನರಾಗಿ ಯಶಸ್ವಿಯಾದದ್ದು.
ಡಿಕೆಶಿ ತಳಮಳ
ಮತ್ತೊಂದು ವಿಚಾರ. ಸಿದ್ದರಾಮಯ್ಯನವರ ವಿರುದ್ಧದ ಸ್ಟಿಂಗ್ ಕಾರ್ಯಾಚರಣೆ ಹೊರಬಂದ ನಂತರದಲ್ಲಿ ಡಿ ಕೆ ಶಿವಕುಮಾರ್ ಅದೆಷ್ಟು clueless ಮತ್ತು ತಳಮಳಗೊಂಡಿದ್ದಾರೆಂದರೆ, ಇತ್ತೀಚಿನ ವರ್ಷಗಳಲ್ಲಿ ಅವರ ಡೋಂಟ್ಕೇರ್ ವ್ಯಕ್ತಿತ್ವಕ್ಕೆ ಸೂಕ್ತವಲ್ಲದ ರೀತಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ‘ನನಗೆ ಗೊತ್ತಿಲ್ಲ’, ‘ಕಾಲವೇ ಉತ್ತರಿಸುತ್ತೆ’, ‘ಗೃಹ ಇಲಾಖೆ ಎಲ್ಲವನ್ನು ನೋಡಿಕೊಳ್ಳುತ್ತೆ’ ‘ಅವರಿಗೆ ಒಳ್ಳೆಯದಾಗಲಿ’ ಎಂಬ ನೀರಸ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರ ಬಾಡಿ ಲಾಂಗ್ವೇಜ್ ಕೂಡಾ ತಳಮಳ ತೆರೆದಿಡುತ್ತಿದೆ. ಒಂದುವೇಳೆ, ಡಿ ಕೆ ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ಧ ಈ ಸ್ಟಿಂಗ್ ವಿಡಿಯೊ ಹೊರಬರುವಂತೆ ಮಾಡಿದ್ದರೆ, ಎದುರಾಗಬಹುದಾದ ಆಘಾತಗಳಿಗೆಲ್ಲ ತಯಾರಾಗಿಯೇ ಅಖಾಡಕ್ಕಿಳಿಯುತ್ತಿದ್ದರು. ತಮ್ಮ ರೆಗ್ಯುಲರ್ ಡೋಂಟ್ಕೇರ್ ಶೈಲಿಯಲ್ಲೆ ಈ ಸಂದರ್ಭವನ್ನು ಮುಖಾಮುಖಿಯಾಗುತ್ತಿದ್ದರು. ಆದರೆ, ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಿ ತಾನು ಹುದ್ದೆಗೇರಿದ ನಂತರ ಪಕ್ಷದ ವೋಟ್ಬ್ಯಾಂಕ್ನಲ್ಲಿ ಉಂಟಾಗಿರಬಹುದಾದ ಹಿನ್ನಡೆಯನ್ನು ಮ್ಯಾನೇಜ್ ಮಾಡಿ ಹೈಕಮಾಂಡ್ ಮೆಚ್ಚಿಸುವ ಸಾಹಸದಲ್ಲೆ ಅವರಿನ್ನೂ ಹೆಣಗಾಡುತ್ತಿದ್ದಾರೆ. ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಅಂದರೆ, ಅದು ಪಕ್ಷಕ್ಕೂ ಡ್ಯಾಮೇಜ್ ಅನ್ನೋದನ್ನು ಹೈಕಮಾಂಡ್ ಕೂಡಾ ಬಲ್ಲದು, ಸ್ವತಃ ಡಿಕೆಶಿ ಕೂಡಾ ಅರ್ಥ ಮಾಡಿಕೊಂಡಿದ್ದಾರೆ. ಅವರನ್ನು ಕೆಳಗಿಳಿಸಿದ ಕಾರಣಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ನಲ್ಲಿ ಒದ್ದಾಡುತ್ತಿರುವ ಡಿ ಕೆ ಶಿವಕುಮಾರ್, ಹೈಕಮಾಂಡ್ನ ಅವಕೃಪೆಗೆ ಈಡಾಗುವಂತೆ ಈ ಸಾಹಸಕ್ಕೆ ಕೈಹಾಕಲು ಸಾಧ್ಯವೇ? ಈ ಪ್ರಕರಣದ ನಂತರ ದಿಲ್ಲಿ ನಾಯಕರು ಎಷ್ಟು ಗರಂ ಆಗಿದ್ದಾರೆ ಅನ್ನೋದು ಅವರ ಈ ತಳಮಳದ ವರ್ತನೆಗಳಿಂದ ಅರ್ಥವಾಗುತ್ತೆ. ಇಂತದ್ದನ್ನೆಲ್ಲ ಮೊದಲೇ ಊಹಿಸದಷ್ಟು ದಡ್ಡ ರಾಜಕಾರಣಿಯಂತೂ ಅವರಲ್ಲ.
ಇನ್ನು ಪ್ರಜ್ವಲ್ ಪ್ರಕರಣ ಮತ್ತು ಆನಂತರದಲ್ಲಿ, ತಮ್ಮ ಕುಟುಂಬವನ್ನು ನಿರಂತರವಾಗಿ ಟಾರ್ಗೆಟ್ ಮಾಡಿಕೊಳ್ತಿರುವ ರಾಕೇಶ್ ಶೆಟ್ಟಿಯ ಮೇಲೆ ಕುಮಾರಸ್ವಾಮಿಯವರಿಗೆ ಮೊದಲಿನಿಂದಲೂ ಸಿಟ್ಟಿತ್ತು. ಆತ ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಸಿಟ್ಟಿನ ಇನ್ನೊಂದು ಕಾರಣ. ಆತ ನಡೆಸಿರುವ ಸ್ಟಿಂಗ್ ವಿಡಿಯೊ ಹೊರಬಂದರೆ, ಜನ ಸುಲಭವಾಗಿ ಡಿಕೆಶಿ ಮೇಲೆ ಗುಮಾನಿಗೊಳ್ಳುತ್ತಾರೆ ಎಂದು ಎಚ್ಡಿಕೆ ಯೋಚಿಸಿದರು. ಇದೇ ಅವರು ಮಾಡಿದ ದೊಡ್ಡ ಯಡವಟ್ಟು. ಯಾಕೆಂದರೆ, ಸ್ಟಿಂಗ್ ವೀಡಿಯೊದಲ್ಲಿ ಯಾವ ಹೆಂಗಸು ಆರೋಪ ಮಾಡಿದ್ದಾರೋ, ಆ ಮಹಿಳೆಯನ್ನು ರಾಕೇಶ್ ಶೆಟ್ಟಿಗೂ ಮೊದಲೇ ಕುಮಾರಸ್ವಾಮಿ ಕಡೆಯವರೇ ಸಂಪರ್ಕಿಸಿದ್ದಾಗಿ ಸ್ಟಿಂಗ್ ವಿಡಿಯೊದಲ್ಲಿ ಮಹಿಳೆ ಕಡೆಯವರು ಒಪ್ಪಿಕೊಂಡಿದ್ದಾರೆ. ಒಂದುವೇಳೆ ಆಕೆ ಮಾಡುತ್ತಿರುವ ಆರೋಪದಲ್ಲಿ ಹುರುಳಿದ್ದಿದ್ದರೆ, ಇಷ್ಟೊತ್ತಿಗಾಗಲೇ ಜೆಡಿಎಸ್ನವರೇ ಆ ವಿಡಿಯೊ ಮುಂದಿಟ್ಟುಕೊಂಡು ಸಿದ್ದರಾಮಯ್ಯನವರ ವಿರುದ್ದ ಹರಿಹಾಯಬೇಕಿತ್ತು. ಅದು ಹಣದಾಸೆಗೋಸ್ಕರ ನಡೆಸುತ್ತಿರುವ ಆರೋಪ ಎಂಬುದು ಸಾಬೀತಾಗಿದ್ದರಿಂದಲೇ ಜೆಡಿಎಸ್ನವರೂ ಸುಮ್ಮನಾಗಿದ್ದರು. ರಾಕೇಶ್ ಶೆಟ್ಟಿ ನಡೆಸಿದ ಸ್ಟಿಂಗ್ನಲ್ಲೂ ಇದು ಮತ್ತೊಮ್ಮೆ ಸಾಬೀತಾಗಿದ್ದರಿಂದ 2023ರ ಈ ವಿಡಿಯೊ ಕಸದ ಬುಟ್ಟಿಗೆ ಸೇರಿತ್ತು.
ಟೊಳ್ಳು ಸಾಕ್ಷಿ
ಗಟ್ಟಿ ಸಾಕ್ಷ್ಯವೇ ಇಲ್ಲದ ಇಂತಹ ಟೊಳ್ಳು ವಿಡಿಯೊ ಇಟ್ಟುಕೊಂಡು ಮೂವರು ವಿರೋಧಿಗಳನ್ನು ಒಂದೇ ಏಟಿಗೆ ಹೊಡೆಯಲು ಮುಂದಾದದ್ದು ಅವರ ಅತಿ ಜಾಣತನವೇ ಸರಿ. ಡಿ.ಕೆ. ಶಿವಕುಮಾರ್ ಯಾವಾಗ ಸ್ಟಿಂಗ್ ಚರ್ಚೆಯನ್ನು ಮುನ್ನೆಲೆಗೆ ತಂದರೋ, ಇದೇ ಸೂಕ್ತ ಸಮಯ ಎಂದರಿತ ಕುಮಾರಸ್ವಾಮಿಯವರು ತಮ್ಮ ಕಾರ್ಯಕರ್ತರಿಗೆ ಗ್ರೀನ್ ಸಿಗ್ನಲ್ ರವಾನಿಸಿರಬಹುದು. ವಿಡಿಯೊ ಅಪ್ಲೋಡ್ ಆಗಿ ಅಲ್ಲೋಲಕಲ್ಲೋಲ ಸೃಷ್ಟಿಸಿತು. ಇದು ಕಾಂಗ್ರೆಸ್ನೊಳಗೆ ಆಂತರಿಕ ಯುದ್ದವನ್ನೆ ಶುರು ಮಾಡುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡವರು ಆರಂಭದಲ್ಲಿ ಖುಷಿಪಟ್ಟಿದ್ದೇನೊ ನಿಜ. ಅಂತಹ ಬೆಳವಣಿಗೆಗಳೂ ನಡೆದವು. ಆದರೆ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿ, ಡ್ಯಾಮೇಜ್ ಕಂಟ್ರೋಲ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ರವಾನಿಸಿದ ನಂತರ ಎಣಿಕೆಗಳೆಲ್ಲ ತಲೆಕೆಳಗಾದವು. ತನಿಖೆ ಚುರುಕಾಯ್ತು. ವಿಡಿಯೊ ಹರಿಬಿಟ್ಟಿದ್ದ ಜೆಡಿಎಸ್ ಕಾರ್ಯಕರ್ತರನ್ನು ಯಾವಾಗ ಪೊಲೀಸರು ಅರೆಸ್ಟ್ ಮಾಡಿದರೋ ಆಗ ಕುಮಾರಸ್ವಾಮಿಯವರಿಗೆ ಇದರ ಸೀರಿಯಸ್ನೆಸ್ ಅರ್ಥವಾಗಿದೆ.

ಅಕಸ್ಮಾತ್ ತಮ್ಮ ಕಾರ್ಯಕರ್ತರ ಬಾಯಿಂದ ಈ ವಿಡಿಯೊ ಅವರಿಗೆ ಯಾರಿಂದ ಸಿಕ್ಕಿತು? ಅಪ್ಲೋಡ್ ಮಾಡಲು ಪ್ರೇರಣೆ ಯಾರು? ಎನ್ನುವ ವಿಷಯ ಹೊರಗೆಡವಿಸಿ, ಅದರಲ್ಲಿ ತಮ್ಮ ಹೆಸರೇನಾದರೂ ಬಂತೆಂದರೆ, ಕೇಂದ್ರ ಮಂತ್ರಿಗಿರಿಯೂ ಕೈತಪ್ಪುತ್ತೆ; ರಾಜಕೀಯ ಬುನಾದಿಯೂ ಕುಸಿಯಲಿದೆ ಎಂಬುದು ಕುಮಾರಸ್ವಾಮಿಯವರ ಆತಂಕ. ಈಗ ಅವರ ಮುಂದಿರುವ ಏಕೈಕ ಆಯ್ಕೆಯೆಂದರೆ, ಆದಷ್ಟು ಈ ತನಿಖೆಯನ್ನು ಪೊಲಿಟಿಸೈಜ್ ಮಾಡಿ ಕಾಂಗ್ರೆಸ್ ಸರ್ಕಾರಕ್ಕೆ ರಾಜಕೀಯ ಆತಂಕವನ್ನು ಸೃಷ್ಟಿಸುವುದು. ಈ ಪ್ರಕರಣವಿಟ್ಟುಕೊಂಡು ತನ್ನ ಮೇಲೆ ಕ್ರಮಕ್ಕೆ ಮುಂದಾದರೆ, ಅದನ್ನು ರಾಜಕೀಯ ಸೇಡಿನ ಕ್ರಮವೆನ್ನುವಂತೆ ಬಿಂಬಿಸುವುದು. ಅದಕ್ಕಾಗಿಯೇ restless ಆಗಿ ಕಮೀಷನರ್ ಕಚೇರಿ ಮುಂದೆ ಧರಣಿ, ರಾಜ್ಯಪಾಲರಿಗೆ ದೂರು, ಡಿಜಿ ಕಚೇರಿಗೆ ಪಾದಯಾತ್ರೆಯಂತಹ ಯತ್ನಗಳಿಗೆ ಮೇಲಿಂದ ಮೇಲೆ ಮುಂದಾಗುತ್ತಿದ್ದಾರೆ. ಅತ್ತ, ಇವರ ಬೆದರಿಕೆಗೆಳಿಗೆ ಅಂಜದೆ ರೊಚ್ಚಿಗೆದ್ದಿರುವ ರಾಕೇಶ್ ಶೆಟ್ಟಿ, ಪತ್ರಿಕೋದ್ಯಮದ ಘನತೆಗಳನ್ನೆಲ್ಲ ಗಾಳಿಗೆ ತೂರಿ ವೈಯಕ್ತಿಕ ಪೈಪೋಟಿಗೆ ಇಳಿದಿರುವುದು ಕುಮಾರಸ್ವಾಮಿಯವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ತನಿಖೆ ತನ್ನವರೆಗೂ ಬರಲಿದೆ ಎಂಬ ಖಾತ್ರಿ ಇರುವುದರಿಂದ, ಆತುರದಲ್ಲಿ ಗೃಹಸಚಿವ ಪ್ರಿಯಾಂಕ್ ಖರ್ಗೆಯವರ ಮೇಲೆ ದಾಳಿಗೆ ಮುಂದಾಗಿ ಅಲ್ಲಿಯೂ ಯಡವಟ್ಟು ಮಾಡಿಕೊಂಡಿದ್ದಾರೆ. ಖರ್ಗೆಯವರ ದಲಿತ ಹಿನ್ನೆಲೆಯನ್ನು ಪ್ರಶ್ನಿಸಲು ಹೋಗಿ ದಲಿತ ಸಮುದಾಯಗಳ ವಿರೋಧಕ್ಕೂ ತುತ್ತಾದರು. ಪ್ರಿಯಾಂಕ ಅವರನ್ನು ಏಕವಚನದಲ್ಲೆ ಕೆಣಕಿದ ಕುಮಾರಸ್ವಾಮಿಯವರು ‘ಬಲಿತ ದಲಿತನಿಗೇಕೆ ಮೀಸಲಾತಿ’ ಎಂದು ಪ್ರಶ್ನಿಸಿದರು. ಇದು ಕುಮಾರಸ್ವಾಮಿಯವರ ಜಾತಿವಾದಿ ಮನಸ್ಥಿತಿಗೆ ಸಾಕ್ಷಿ ಎಂಬ ಟೀಕೆಗಳು ವ್ಯಾಪಕವಾಗುತ್ತಿವೆ. ತಮ್ಮದೇ ಸಮುದಾಯದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೂ ಸಹಿಸಿಕೊಳ್ಳದ, ದಲಿತ ವ್ಯಕ್ತಿ ಗೃಹಮಂತ್ರಿಯಾಗಿರುವುದನ್ನೂ ಸಹಿಸಿಕೊಳ್ಳದ ಕುಮಾರಸ್ವಾಮಿಯವರ ಕುಟುಂಬ ಕೇಂದ್ರಿತ ರಾಜಕೀಯ ಜಿಗುಟುತನ ಇಂಥಾ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಚರ್ಚೆಯಾಗುವಂತೆ ಮಾಡಿಕೊಂಡಿದ್ದು ಅವರ ಸ್ವಯಂಕೃತ ಅಪರಾಧವೆ ಸರಿ. ತಾನಾಗಿಯೇ ಅನಗತ್ಯವಾಗಿ ಸೃಷ್ಟಿಸಿಕೊಂಡಿರುವ ಸ್ಟಿಂಗ್ ಸಮಸ್ಯೆಯ ನಡುವೆ ಈ ದಲಿತವಿರೋಧವೂ ಅವರಿಗೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.

ಲೇಖಕರು ಹಿರಿಯ ಪತ್ರಕರ್ತರು ಮತ್ತು ಕಾದಂಬರಿಕಾರರು. ಲಂಕೇಶ್ ಪತ್ರಿಕೆಯಲ್ಲಿ ಗುರುತಿಸಿಕೊಂಡ ಅವರು ನಂತರ ದಾವಣಗೆರೆಯಿಂದ ತಮ್ಮದೇ ಸಂಪಾದಕತ್ವದಲ್ಲಿ ಪ್ರಜಾಕೂಗು ಎಂಬ ಸ್ವತಂತ್ರ ಪತ್ರಿಕೆಯನ್ನು ಹೊರತರುತ್ತಿದ್ದರು. ದಂಗೆಯೆದ್ದವರು, ಗರ್ಭಗುಡಿ, ಮುಖ ಮತ್ತು ಮುಖವಾಡಗಳು, ಮೌನದ ಸನ್ನಿಧಿಯಲ್ಲಿ, ಮತ್ತೊಂದು ನೋಟೀಸು, ಪ್ರತಿಕ್ರಿಯೆ ಇವರ ಪ್ರಮುಖ ಕೃತಿಗಳು.

ಉತ್ತಮ ಬರಹ ಷಣ್ಮುಖ ಅವರೇ, ಇರಲಾರದೆ ಇರುವೆ ಬಿಟ್ಕೊಂಡ ಸ್ಥಿತಿ ಈಗ ಸುಮಾರಸ್ವಾಮಿಗೆ….ಮಾಡಬಾರದ್ದು ಮಾಡಿದರೆ ಇನ್ನೇನಾಗುತ್ತೆ…