ಸ್ಟಿಂಗ್ ಹೋರಾಟದಲ್ಲಿ ಕುಮಾರಸ್ವಾಮಿಯವರನ್ನು ಏಕಾಂಗಿಯಾಗಿಸಿತೇಕೆ ಬಿಜೆಪಿ?

ಸ್ಟಿಂಗ್ ಕಾರ್ಯಾಚರಣೆಯ ಜ್ವಾಲೆ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಒಂದೆರಡು ದಿನಗಳ ಆರೋಪ-ಪ್ರತ್ಯಾರೋಪಗಳ ನಂತರ ಬಿದ್ದುಹೋಗಬಹುದಾಗಿದ್ದ ಚರ್ಚೆ ಇದು. ಆದರೆ ಯಾವಾಗ ಜೆಡಿಎಸ್ ಕಾರ್ಯಕರ್ತರು ಸಿದ್ದರಾಮಯ್ಯನವರ ವಿರುದ್ಧ ನಡೆಸಿದ್ದು ಎನ್ನಲಾದ ಎರಡ್ಮೂರು ವರ್ಷಗಳಷ್ಟು ಹಳೆಯ, ಹುರುಳಿಲ್ಲದ ವಿಡಿಯೊವನ್ನು ಅಪ್‌ಲೋಡ್ ಮಾಡಿದರೋ ಆಗಿನಿಂದ ಸ್ಟಿಂಗ್ ಬೆಂಕಿ ರಾಜ್ಯ ರಾಜಕಾರಣವನ್ನು ನಿಗಿ ಜ್ವಾಲೆಯಂತೆ ಸುಡಲಾರಂಭಿಸಿತು.

ಯಾಕೆಂದರೆ ಈ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಕಾರ್ಯಕರ್ತರೇನಾದರೂ ಪೊಲೀಸ್ ತನಿಖೆಯಲ್ಲಿ ಇದಕ್ಕೆ ಪ್ರೇರಣೆ ಯಾರು? ಅನ್ನೋ ಸಂಗತಿಯನ್ನು ಹೊರಹಾಕಿದರೆ, ಕುಮಾರಸ್ವಾಮಿಯವರು ದೊಡ್ಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತೆ. ಡಿ ಕೆ ಶಿವಕುಮಾರ್ ಸರ್ಕಾರ ತನ್ನನ್ನು ಮಟ್ಟಹಾಕಲು ಈ ಕೇಸನ್ನು ಬಳಸಿಕೊಳ್ಳಬಹುದೆಂಬ ಆತಂಕ ಕುಮಾರಸ್ವಾಮಿಯವರನ್ನು ಕಾಡುತ್ತಿದೆ. ಹಾಗಾಗಿಯೇ ಅವರು ಉಗ್ರ ಹೋರಾಟಕ್ಕೆ ಇಳಿದಿದ್ದಾರೆ. ತನ್ನವರೆಗೆ ಬರದಂತೆ ಸರ್ಕಾರವನ್ನು ರಾಜಕೀಯವಾಗಿ ಕಟ್ಟಿಹಾಕುವುದು ಅವರ ಈ ಹೋರಾಟದ ಉದ್ದೇಶ.

ಅದೇನೆ ಇರಲಿ, ಜೆಡಿಎಸ್‌ನ ಈ ಹೋರಾಟ ಸರ್ಕಾರದ ಪಾಲಿಗೆ ದೊಡ್ಡ ಸವಾಲಾಗಿರುವುದಂತೂ ಸತ್ಯ. ಆದರೆ, ಇಲ್ಲಿ ವಿರೋಧ ಪಕ್ಷಗಳ ಪಾಲಿಗೆ ಹಿನ್ನಡೆಯಾಗುವಂತಹ ಸಂಗತಿಯೂ ಒಂದಿದೆ. ಕುಮಾರಸ್ವಾಮಿಯವರು ತಮ್ಮ ಪಕ್ಷದ ಬಲವನ್ನು ಪಣಕ್ಕಿಟ್ಟು, ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ವಿರುದ್ಧ ಇಷ್ಟೆಲ್ಲ ಹೋರಾಟಕ್ಕಿಳಿದಿದ್ದರೂ, ಮಿತ್ರಪಕ್ಷವಾದ ಬಿಜೆಪಿ ಯಾಕೆ ಸೈಲೆಂಟಾಗಿದೆ? ನೆಪಕ್ಕೆಂಬಂತೆ ಮೀಡಿಯಾಗಳ ಮುಂದೆ ಹೇಳಿಕೆ ಕೊಡುವುದನ್ನು ಬಿಟ್ಟು, ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧದ ಹೋರಾಟದಲ್ಲಿ ಕುಮಾರಸ್ವಾಮಿಯವರ ಜೊತೆ ಕಾಣಿಸಿಕೊಳ್ಳುತ್ತಿಲ್ಲ. ಇಂತಹ ಮೈಲೇಜಿನ ಹೋರಾಟದಲ್ಲೂ ಮೈತ್ರಿಧರ್ಮವನ್ನು ಮರೆತ ಬಿಜೆಪಿ ಕುಮಾರಸ್ವಾಮಿಯವರಿಗೆ ಕೈಕೊಟ್ಟಿದ್ದೇಕೆ? ಬಿಜೆಪಿ-ಜೆಡಿಎಸ್ ನಡುವೆ ಆಲ್ ಈಸ್ ನಾಟ್ ವೆಲ್ ಅನ್ನೋದನ್ನು ಇದು ಬಯಲು ಮಾಡ್ತಿದೆಯಾ? ಕಡೇಪಕ್ಷ, ಮೋದಿ-ಅಮಿತ್ ಶಾ ಆದರೂ ತಮ್ಮ ಸಂಪುಟ ಸಹೋದ್ಯೋಗಿಯ ಹೋರಾಟದಲ್ಲಿ ಕೈಜೋಡಿಸಿ ಎಂದು ರಾಜ್ಯ ನಾಯಕರಿಗೆ ತಾಕೀತು ಮಾಡಬೇಕಿತ್ತಲ್ಲವೇ. ಅವರೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ?

ಬಿಜೆಪಿ-ಜೆಡಿಎಸ್ ಮೈತ್ರಿಯ ಆರಂಭದಿಂದಲೂ ರಾಜ್ಯ ಮಟ್ಟದ ನಾಯಕರಲ್ಲಿ ತಾಳಮೇಳ ಕಾಣಿಸುತ್ತಿಲ್ಲ. ಬಿಜೆಪಿಯ ಹೈಕಮಾಂಡ್ ನಾಯಕರು, ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಅತ್ಯಂತ ಆದರ ಮತ್ತು ಪ್ರೀತಿಯಿಂದ ಕಾಣುತ್ತಾ ಬಂದಿದ್ದೇನೊ ಸರಿ. ಆದರೆ ಈ ಪ್ರೀತಿ ರಾಜ್ಯ ಬಿಜೆಪಿ ನಾಯಕರಿಂದ ಯಾವಾಗಲೂ ವ್ಯಕ್ತವಾಗಿಲ್ಲ. ಮುಡಾ ವಿವಾದ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮೈಸೂರು ಚಲೋ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದಾಗ, ಕುಮಾರಸ್ವಾಮಿಯವರು ಮೊದಮೊದಲು ಅದಕ್ಕೆ ಒಪ್ಪಿರಲಿಲ್ಲ. ತಮ್ಮ ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಾದಯಾತ್ರೆ ನಡೆಸಿದರೆ, ತಮ್ಮ ಪಕ್ಷದ ಶಕ್ತಿಗೆ ಹಿನ್ನಡೆಯಾಗಬಹುದೆನ್ನುವ ಸಕಾರಣ ಆತಂಕ ಅವರದಾಗಿತ್ತು. ಮೈತ್ರಿಯ ಮುನಿಸು ಬೀದಿಗೆ ಬೀಳಬಾರದೆನ್ನುವ ಕಾರಣಕ್ಕೆ ಹಿರಿಯ ನಾಯಕರು ಮಧ್ಯಪ್ರವೇಶಿಸಿದ್ದರಿಂದ ಕೊನೆಗೆ ಜಂಟಿಯಾಗಿ ಪಾದಯಾತ್ರೆ ಮಾಡಲು ಮುಂದಾಗಿದ್ದರು. ಇನ್ನು ಸಚಿವ ಬಿ ನಾಗೇಂದ್ರ ರಾಜೀನಾಮೆಗಾಗಿ ಇತ್ತೀಚೆಗೆ ಬಿಜೆಪಿಯ ವಿಜಯೇಂದ್ರ ಪಾದಯಾತ್ರೆ ನಡೆಸಿದಾಗಲೂ ಕುಮಾರಸ್ವಾಮಿಯವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಸಚಿವರ ರಾಜೀನಾಮೆ ಕೊಟ್ಟ ಮೇಲೂ ಈ ಪಾದಯಾತ್ರೆ ಮಾಡುತ್ತಿರುವುದರಲ್ಲಿ ಅರ್ಥವೇ ಇಲ್ಲವೆಂದು ಕುಮಾರಸ್ವಾಮಿ ಕುಹಕ ಮಾಡಿದ್ದರು. ಇನ್ನು ಎಂಎಲ್‌ಸಿ ಚುನಾವಣೆಯಲ್ಲೂ, ಬಿಜೆಪಿ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್‌ನಿಂದ ನಿಂತಿದ್ದ ಮೂರನೇ ಅಭ್ಯರ್ಥಿಗೆ ಹಾಕಿಸುವ ಬದಲು, ಅಡ್ಡಮತದಾನಕ್ಕೆ ಅವಕಾಶ ಮಾಡಿಕೊಟ್ಟು ಜೆಡಿಎಸ್‌ಗೆ ಭರ್ಜರಿ ಮುಖಭಂಗ ಆಗುವಂತೆ ನಡೆದುಕೊಂಡಿತ್ತು. ಇನ್ನು ನಿಖಿಲ್ ಕುಮಾರಸ್ವಾಮಿಯವರು ಆಗಾಗ್ಗೆ, ’ಕೇಂದ್ರಕ್ಕೆ ಮೋದಿ, ಕರ್ನಾಟಕಕ್ಕೆ ಕುಮಾರಣ್ಣ’ ಎಂಬ ಘೋಷಣೆಯನ್ನು ಮೊಳಗಿಸುತ್ತಾ, ‘2028ರಲ್ಲಿ ಕುಮಾರಣ್ಣನನ್ನು ಮುಖ್ಯಮಂತ್ರಿಯಾಗಿ ನೋಡಲು ಜನ ಕಾಯುತ್ತಿದ್ದಾರೆ’ ಎಂಬ ಮಾತುಗಳನ್ನು ಆಡುತ್ತಿರುತ್ತಾರೆ. ಇದು ಕೂಡಾ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿದ್ದುಂಟು.

ಈ ಹಿನ್ನೆಲೆಗಳಲ್ಲಿ ನೋಡಿದಾಗ, ಈಗ ಬಿಜೆಪಿ ನಾಯಕರು ಸ್ಟಿಂಗ್ ಹೋರಾಟದಲ್ಲಿ ಕುಮಾರಸ್ವಾಮಿಯವರನ್ನು ಏಕಾಂಗಿಯಾಗಿಸಿ ತಮ್ಮ ಜಿದ್ದು ತೀರಿಸಿಕೊಳ್ಳುತ್ತಿದ್ದಾರಾ? ಅಥವಾ ಈ ತನಿಖೆ ಗಂಭೀರವಾಗಿ ಸಾಗಿದಷ್ಟೂ ಕುಮಾರಸ್ವಾಮಿಯವರು ಕಾನೂನಿನ ಇಕ್ಕಟ್ಟಿಗೆ ಸಿಲುಕಲಿದ್ದಾರೆ ಎಂಬ ಅರಿವಾಗಿ, ಜೆಡಿಎಸ್ ಹೋರಾಟದಿಂದ ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆಗಳು ಇಲ್ಲಿ ಕಾಡುತ್ತವೆ. ಯಾಕೆಂದರೆ, ಈ ಬಗ್ಗೆ ಮಾಧ್ಯಮದವರು ಕೆಣಕಿ ಕೇಳಿದಾಗಲೂ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸುತ್ತಾ ವಿಜಯೇಂದ್ರ ’ಕುಮಾರಸ್ವಾಮಿಯವರು ಹೋರಾಟ ಮಾಡುತ್ತಿದ್ದಾರೆ. ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮಾತನಾಡುತ್ತೇವೆ’ ಎಂದು ಹೇಳಿದ್ದಾರೆ. ಇದರರ್ಥ ನಾವು ಹೇಳಿಕೆಗಷ್ಟೆ ಸೀಮಿತವಾಗುತ್ತೇವೆಯೆ ವಿನಾ ಕುಮಾರಸ್ವಾಮಿಯವರೊಟ್ಟಿಗೆ ಕೈಜೋಡಿಸಲಾರೆವು ಎಂಬುದು ಸ್ಪಷ್ಟವಾಗುತ್ತದೆ.

ಬಿಜೆಪಿ ಕುಮಾರಸ್ವಾಮಿಯವರಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ; ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ ಎನ್ನಲಾಗುತ್ತಿದೆ. ಹೌದು, ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ಮತ್ತು ಕಾಕ್ರೋಚ್ ಯುವಹೋರಾಟದಿಂದ ಹೈರಾಣಾಗಿರುವ ಮೋದಿಯವರ ಕೇಂದ್ರ ಸರ್ಕಾರಕ್ಕೆ ಈಗ ಜನರ ವಿಶ್ವಾಸ ಗಳಿಸಿಕೊಳ್ಳಲು ಏನಾದರೊಂದು ಗಂಭೀರ ನಿರ್ಧಾರ ಕೈಗೊಳ್ಳಬೇಕಿದೆ. ಹಾಗಾಗಿ ಸಂಪುಟವನ್ನು ಪುನರ್‌ರಚನೆ ಮಾಡಿ, ಹಳೆಯ ಬಹಳಷ್ಟು ಮಂತ್ರಿಗಳನ್ನು ಕಿತ್ತುಹಾಕಿ, ಹೊಸ ಸಚಿವರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಹಾಗೆ ಕೈಬಿಡುವವರ ಪಟ್ಟಿಯಲ್ಲಿ ಕುಮಾರಸ್ವಾಮಿಯವರ ಹೆಸರೂ ಇದೆ ಎಂದು ಹೇಳಲಾಗುತ್ತಿದೆ. ಈ ನಿರ್ಧಾರದಿಂದ ಜೆಡಿಎಸ್ ನಾಯಕರಿಗೆ ಆಗುವ ಅಸಮಾಧಾನವನ್ನು ತಪ್ಪಿಸಲು, ಕುಮಾರಸ್ವಾಮಿಯವರ ಬದಲು ಅವರದೇ ಕುಟುಂಬದ ಅಳಿಯ, ಹೃದ್ರೋಗ ತಜ್ಞ ಬಿಜೆಪಿ ಸಂಸದ ಡಾ. ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಬಿಜೆಪಿ ವರಿಷ್ಠರು ಮುಂದಿಟ್ಟಿರುವ ಆಫರ್ ಕೂಡಾ ಕುಮರಸ್ವಾಮಿಯವರನ್ನು ಸಮಾಧಾನ ಮಾಡಲು ಸೋತಿದೆ. ಈ ಬೆಳವಣಿಗೆಯಿಂದ ಬೇಸತ್ತಿರುವ ಕುಮಾರಸ್ವಾಮಿಯವರು, ದಿಲ್ಲಿಗಿಂತ ಹೆಚ್ಚಾಗಿ ಕರ್ನಾಟಕದಲ್ಲಿ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸಮಯ ಕಳೆಯಲಾರಂಭಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಹುಶಃ ಬಿಜೆಪಿ ರಾಜ್ಯ ನಾಯಕರು ಸ್ಟಿಂಗ್ ಹೋರಾಟದಲ್ಲಿ ಕುಮಾರಸ್ವಾಮಿಯವರನ್ನು ಏಕಾಂಗಿಯಾಗಿಸಿರುವುದರ ಹಿಂದೆ ಈ ಪ್ರಭಾವವೂ ಇರಬಹುದು.

ಇಂತಹ ಯಾವ ಲೆಕ್ಕಾಚಾರವೂ ಇಲ್ಲದೆ, ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಆಲ್ ಈಸ್ ವೆಲ್ ಎಂಬ ಅನ್ಯೋನ್ಯತೆ ಇದ್ದಿದ್ದರೆ, ಇಂಥಾ ಗಂಭೀರ ಹೋರಾಟದಲ್ಲಿ ಜೆಡಿಎಸ್ ಪಕ್ಷವನ್ನು ಅಖಾಡಕ್ಕೆ ತಳ್ಳಿ, ಬಿಜೆಪಿ ಸೈಲೆಂಟಾಗಿ ಹಿಂದೆ ನಿಂತು ಆಟ ನೋಡುತ್ತಿರಲಿಲ್ಲ. ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ದ ಹೋರಾಡುವ ಶ್ರಮ ಕುಮಾರಸ್ವಾಮಿಯವರದ್ದು; ಆದರೆ, ಲಾಭ ಮಾತ್ರ ಬಿಜೆಪಿಗಾ? ಎಂದು ಸ್ವತಃ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕುತ್ತಿರುವುದಕ್ಕೆ ಕಾರಣವಿದೆ. ಕುಮಾರಸ್ವಾಮಿಯವರ ಆರೋಗ್ಯ ಗಟ್ಟಿಮುಟ್ಟಾಗೇನೂ ಇಲ್ಲ. ಈಗಾಗಲೇ ಹಲವು ಆಪರೇಷನ್ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಥಾ ಸಮಯದಲ್ಲಿ ಅವರು ರಾಜಕಾರಣದ ಇಷ್ಟೆಲ್ಲ ಒತ್ತಡವನ್ನು ಏಕಾಂಗಿಯಾಗಿ ಎದುರಿಸಿದರೆ, ಅವರ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ, ಮುಖ್ಯವಾಗಿ ಒಕ್ಕಲಿಗ ಸಮುದಾಯದೊಳಗೆ ಡಿ.ಕೆ.ಶಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ಇದು ಹಿನ್ನಡೆಯಾಗಲಿದೆ ಎಂಬುದು ಎಷ್ಟು ಸತ್ಯವೋ, ವಿರೋಧ ಪಕ್ಷವಾದ ಬಿಜೆಪಿಗೆ ಲಾಭ ತರಲಿದೆ ಎಂಬುದು ಅಷ್ಟೇ ಸತ್ಯ. ಜೆಡಿಎಸ್‌ಗೂ ಇದರಿಂದ ಲಾಭ ಆಗಬಹುದಾದರೂ, ಅದಕ್ಕೋಸ್ಕರ ಆ ಪಕ್ಷ ತಮ್ಮ ಪರಮೋಚ್ಛ ನಾಯಕ ಕುಮಾರಸ್ವಾಮಿಯವರ ಆರೋಗ್ಯದ ಬೆಲೆ ತೆತ್ತಿರುತ್ತದೆ. ಆದರೆ ಇಂತಹ ಯಾವ ಬೆಲೆಯೂ ತೆರಲಾರದೆ, ಅನಾಯಾಸವಾಗಿ ಲಾಭ ಬಾಚಿಕೊಳ್ಳುವ ಸಲುವಾಗಿ ಬಿಜೆಪಿ ಕುಮಾರಣ್ಣನನ್ನು ಮುಂದೆ ಬಿಟ್ಟು, ಆಟ ನೋಡುತ್ತಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ನೋವಿನ ಮಾತು. ಅದೇನೆ ಇರಲಿ, ಸ್ಟಿಂಗ್ ಹೋರಾಟದ ಮಟ್ಟಿಗೆ ಕುಮಾರಸ್ವಾಮಿಯವರು ಏಕಾಂಗಿಯಾಗಿರುವುದು ಮಾತ್ರ ಸತ್ಯ.

Leave a Reply

Your email address will not be published. Required fields are marked *