ನನ್ನ ಹೆಸರು ಸೋಮಣ್ಣ. ಈ ಹೆಸರು ಕೂಡಾ ನನ್ನದಲ್ಲ, ನೀವೆ ಇಟ್ಟಿದ್ದು; ನೀವೇ ಕರೆದಿದ್ದು. ಇಲ್ಲವಾಗಿದ್ದರೆ ಹೆಸರಿನ ಹಂಗು ಇಲ್ಲದೆ ಸಹ್ಯಾದ್ರಿ ಕಾಡಿನ ಯಾವುದೋ ಮೂಲೆಯಲ್ಲಿ ಸ್ವಚ್ಛಂಧವಾಗಿ ಅಲೆದಾಡಿಕೊಂಡಿರುತ್ತಿದೆ. ನನ್ನನ್ನು ಸೆರೆ ಹಿಡಿದಿರಿ; ಪಳಗಿಸಿದಿರಿ; ಪರಿಚಯಿಸಿಕೊಂಡಿರಿ; ನಿಮ್ಮ ಸ್ವತ್ತಾಗಿ ಮಾಡಿಕೊಂಡಿರಿ. ಗುಲಾಮಗಿರಿಗೆ ನಾನೂ ಒಗ್ಗಿಕೊಂಡೆ.
ಆ ದಿನ ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ ನಾನಿದ್ದೆ. ಸುತ್ತಲೂ ಜನಸಾಗರ, ವಾದ್ಯಗಳ ಸದ್ದು, ಜನರ ಕೂಗು, ಮೊಬೈಲ್ ಕ್ಯಾಮೆರಾಗಳ ಮಿಂಚು. ಮನುಷ್ಯರಿಗೆ ಅದೊಂದು ಹಬ್ಬದ ದಿನ. ದೇವರ ದರ್ಶನ, ಮೆರವಣಿಗೆಯ ವೈಭವ, ಅಂಬಾರಿಯ ಕಳೆ. ಆದರೆ ನನ್ನ ಪಾಲಿಗೆ ಆ ದಿನದ ಅನುಭವ ಹೇಗಿತ್ತು ಎಂದು ಯಾರಾದರೂ ಕೇಳಿದಿರಾ? ಯಾಕೆಂದರೆ ನನ್ನ ಬೆನ್ನ ಮೇಲಿದ್ದ ಬೆಳ್ಳಿಯ ಅಂಬಾರಿ ನಿಮ್ಮೆಲ್ಲರ ದೃಷ್ಟಿಯಲ್ಲಿ ಸಂಭ್ರಮದ ಸಂಕೇತ, ಭಕ್ತಿಯ ಪ್ರತೀಕ, ಸಂಸ್ಕೃತಿಯ ಪ್ರತಿಬಿಂಬ, ಪರಂಪರೆಯ ಹೆಮ್ಮೆ! ಆದರೆ ನನ್ನ ಪಾಲಿಗೆ ಅದೊಂದು ಬೆನ್ನ ಮೇಲಿನ ಭಾರ!!
ನಾನು ಮನುಷ್ಯನಲ್ಲ. ನನ್ನೊಳಗೆ ಏನಾಗುತ್ತದೆ ಎಂಬುದನ್ನು ಪದಗಳಲ್ಲಿ ವಿವರಿಸಲಾರೆ. ನನ್ನೊಳಗಿನ ಭಯವನ್ನು ಪತ್ರಿಕಾ ಹೇಳಿಕೆಯಾಗಿ ಹೊರಡಿಸಲಾರೆ. ನನ್ನ ದೇಹಕ್ಕೆ ಆಯಾಸವಾದರೆ ಪತ್ರಿಕಾಗೋಷ್ಠಿ ಕರೆದು ದೂರು ನೀಡಲಾರೆ. ನನ್ನ ಸುತ್ತಲಿನ ಗದ್ದಲ ಅಸಹನೀಯವೆನಿಸಿದರೆ ಮೈಕ್ ಹಿಡಿದು ಮೆರವಣಿಗೆ ನಿಲ್ಲಿಸುವಂತೆ ಮನವಿ ಮಾಡಲಾರೆ. ನಾನು ಎಂದರೆ ನನ್ನ ದೇಹ, ನನ್ನ ಇಂದ್ರಿಯಗಳು, ನನ್ನ ಅನುಭವಗಳು ಮತ್ತು ಅವುಗಳಿಗೆ ಪ್ರತಿಕ್ರಿಯಿಸುವ ಸಹಜ ಪ್ರವೃತ್ತಿ. ನಾನು ಮನುಷ್ಯರಿಗಿಂತ ಭಿನ್ನವೆಂದ ಮೇಲೆ ನನ್ನ ವರ್ತನೆಗಳೂ ಭಿನ್ನವಾಗಿರುತ್ತವೆಯಲ್ಲವೇ? ಅದನ್ನು ಅರ್ಥ ಮಾಡಿಕೊಳ್ಳದೆ, ನನಗಾದ ಅಘಾತವನ್ನು ‘ದಾಂಧಲೆ’ ಎಂದು ಕರೆದುಬಿಡುವುದು, ಯಾರೋ ಒಂದಿಬ್ಬರು ಅಧಿಕಾರಿಗಳನ್ನು ಹೊಣೆ ಮಾಡುವುದು, ಅದಕ್ಕೆ ಪ್ರತೀಕಾರವೆಂಬಂತೆ ನಮ್ಮಂತಹ ಪ್ರಾಣಿಗಳಿಗೆ ತರಬೇತಿಯ ಹೆಸರಿನಲ್ಲಿ ಇನ್ನಷ್ಟು ಸುದೀರ್ಘ ಹಿಂಸೆ ಕೊಡುವುದು ಎಷ್ಟು ಸರಿ?
ನಿಮಗೆ ನಿಮ್ಮ ಸಂಭ್ರಮವನ್ನು ಹೊರಲು ಪ್ರಾಣಿಯೊಂದು ಬೇಕು. ದೈತ್ಯ ದೇಹ, ಅಗಾಧ ಸಾಮರ್ಥ್ಯದ ಕಾರಣಕ್ಕೆ ಅದು ಆನೆಯೇ ಆಗಿರಬೇಕು. ನನ್ನ ಗೆಳೆಯ ಸಾಗರ್ (ಅದು ಕೂಡಾ ನೀವಿಟ್ಟ ಹೆಸರು) ಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ, ಅವನ ಬದಲಿಗೆ ಕೊನೇ ಘಳಿಗೆಯಲ್ಲಿ ನನ್ನನ್ನು ಅಂಬಾರಿ ಹೊರುವ ಕೆಲಸಕ್ಕೆ ಕರೆತಂದಿರಿ.
ನಾನು ಈ ಕೆಲಸಕ್ಕೆ ತಕ್ಕವನೇ ಎಂದು ಅಳೆಯುವಾಗ ನೀವೇನು ಮಾಡಿದಿರಿ? ನನ್ನ ಗಾತ್ರ ನೋಡಿದಿರಿ. ಸೊಂಡಿಲಿನ ಬಲ, ಕಾಲುಗಳ ಶಕ್ತಿ, ನನ್ನ ದೇಹದ ತೂಕವನ್ನು ಲೆಕ್ಕ ಹಾಕಿದಿರಿ. ನನ್ನ ಆರೋಗ್ಯವನ್ನು ಅಳೆದಿರಿ. ಆದರೆ ನನ್ನ ಭಯವನ್ನು ಅಳೆಯಲು ಯಾವ ಸಾಧನ ಬಳಸಿದಿರಿ? ನನ್ನ ಆಯಾಸವನ್ನು ಯಾವ ತಕ್ಕಡಿಯಲ್ಲಿ ತೂಗಿದಿರಿ? ನನ್ನ ಅಸಹಜತೆಯನ್ನು ಯಾವ ಕಣ್ಣಿನಿಂದ ಗುರುತಿಸಿದಿರಿ? ದೊಡ್ಡ ದೇಹವಿದೆ ಎಂಬ ಕಾರಣಕ್ಕೆ ನನಗೆ ನೋವಾಗುವುದಿಲ್ಲವೇ? ಬಲಶಾಲಿ ಎಂಬ ಕಾರಣಕ್ಕೆ ನನ್ನ ಮೇಲೆ ಎಂತದೇ ಒತ್ತಡವನ್ನು ನನ್ನ ಮನಸ್ಸು ತಡೆದುಕೊಂಡುಬಿಡುವುದೇ?

ಮನುಷ್ಯರಿಗೆ ಮಾತ್ರ ವರ್ತನೆ, ಒತ್ತಡ, ಮಾನಸಿಕ ತುಮುಲಗಳಿವೆಯೇ? ಕಾಡುಪ್ರಾಣಿಯಾದ ನಮಗೆ ಅವ್ಯಾವುದು ಇಲ್ಲವೆಂದುಕೊಂಡಿರಾ? ಖಂಡಿತ ನಮಗೂ ಮನಸ್ಸಿದೆ. ಅದಕ್ಕೂ ಒತ್ತಡ, ಆತಂಕಗಳು ಎದುರಾಗುತ್ತವೆ. ನಿಮ್ಮಷ್ಟು ಜಾಣತನದಿಂದ, ನಾಜೂಕುತನದಿಂದ ಅಲ್ಲದಿದ್ದರೂ ನಮ್ಮದೇ ಪ್ರಾಕೃತಿಕ ರೀತಿಯಲ್ಲಿ ಅವುಗಳನ್ನು ನಿಭಾಯಿಸಿಕೊಳ್ಳಲು ನಾವು ಯತ್ನಿಸುತ್ತೇವೆ. ಅವುಗಳನ್ನೆಲ್ಲ ಅರ್ಥ ಮಾಡಿಕೊಳ್ಳದೆ ಒಂದು ನಿರ್ಜೀವ ಯಂತ್ರದ ಇಂಜಿನ್ನು, ಮೋಟಾರು, ಬ್ರೇಕ್ ಸ್ಟಿಸ್ಟಮ್, ಟೈರ್ ಕೆಪಾಸಿಟಿಗಳನ್ನು ಅಳೆಯುವಂತೆ ನಮ್ಮ ಕಾಲಿನ ಬಲ, ಸೊಂಡಿಲಿನ ತಾಕತ್ತು, ಪಾದದ ಗಾಯ, ಕೀಲುಗಳ ಸಾಮರ್ಥ್ಯವನ್ನು ಅಳೆದು ಸರ್ಟಿಫಿಕೇಟ್ ಕೊಡುವ ನಿಮ್ಮ ಮುಂದೆ ಒಂದಷ್ಟು ಮಾತುಗಳನ್ನು ಆಡಲೇಬೇಕಿದೆ ಇವತ್ತು. ಈ ಯಾವ ಮಾತುಗಳೂ ನನ್ನವಲ್ಲ, ನೀವೇ ಮನುಷ್ಯರು ಮಾಡಿದ ಸಂಶೋಧನೆಯ ಸತ್ಯಗಳು. ಅವುಗಳನ್ನು ನೀವು ಮರೆತಿದ್ದೀರಿ. ನೆನಪಿಸಬೇಕಾದ ಜವಾಬ್ಧಾರಿ ನನ್ನದು.
ನಿಮ್ಮಿಂದಲೇ ಶುರು ಮಾಡುತ್ತೇನೆ. ನಿಮ್ಮಲ್ಲಿ ಕೆಲವರು ಅಥವಾ ಬಹಳಷ್ಟು ಮಂದಿ, ತಮ್ಮ ಆಪ್ತರ ಜೊತೆಗೋ, ಸ್ನೇಹಿತರ ನಡುವೆಯೋ ಬಹಳ ಅದ್ಭುತವಾಗಿ ಮಾತನಾಡುತ್ತಾರೆ. ಅವರ ವಾಕ್ಸಾಮರ್ಥ್ಯಕ್ಕೆ ಎಲ್ಲರೂ ತಲೆದೂಗುತ್ತಾರೆ. ಅದೇ ವ್ಯಕ್ತಿಯನ್ನು, ಅದೇ ಆತ್ಮೀಯರ ನಡುವೆ ಒಂದು ವೇದಿಕೆ ಹಾಕಿ, ಕೈಗೆ ಮೈಕ್ ಕೊಟ್ಟು ಮಾತಾಡಿ ಎಂದು ಹೇಳಿ! ಸ್ಟೇಜ್ ಫಿಯರ್ನಿಂದ ತತ್ತರಿಸಿಹೋಗುತ್ತಾರೆ. ಅಲ್ಲಿ ಹೊಸಬರಾರೂ ಇಲ್ಲ, ಮಾತನಾಡುವುದು ಹೊಸ ಕೆಲಸವೂ ಅಲ್ಲ. ಆದರೆ ಪರಿಸರದಲ್ಲಿ ಏನೋ ಒಂದು ಬದಲಾವಣೆಯಾಗಿರುತ್ತದೆ. ಆ ಬದಲಾವಣೆಗೆ ನಮ್ಮ ಮನಸ್ಸು ಬೇರೆಯದೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ.
ಅಯ್ಯಾ ಮನುಷ್ಯರೇ, ಇಂತಹ ವರ್ತನೆಯ ಸಮಸ್ಯೆ ನಮ್ಮನ್ನೂ ಕಾಡುತ್ತದೆ. ನೀವು ಭಾರ ಹೊರಲು ನಮಗೆ ತರಬೇತಿ ಕೊಟ್ಟಿರುತ್ತೀರಿ, ನಡೆದು ಸಾಗುವ ಬೀದಿಯ ಪರಿಚಯ ಮಾಡಿಸಿರುತ್ತೀರಿ, ಆಭರಣಗಳನ್ನು ಹೇರಿಕೊಳ್ಳುವುದನ್ನೂ ಹೇಳಿಕೊಟ್ಟಿರುತ್ತೀರಿ. ನಾವು ಕೂಡಾ ನಿರಾತಂಕವಾದ ಆ ಪರಿಸರದಲ್ಲಿ ಅದನ್ನೆಲ್ಲ ಸರಾಗವಾಗಿ ಮಾಡಿರುತ್ತೇವೆ. ಆದರೆ ಅದೇ ಕೆಲಸವನ್ನು ಬದಲಾದ ಪರಿಸರದಲ್ಲಿ, ಅಂದರೆ ಲಕ್ಷಾಂತರ ಜನರ ಗದ್ದಲದ ನಡುವೆ, ಕಿವಿಗಡಚಿಕ್ಕುವ ವಾದ್ಯವೃಂದಗಳ ಮಧ್ಯೆ, ಚಿತ್ರವಿಚಿತ್ರ ವೇಷಭೂಷಣಗಳ ನಡುವೆ `ಹೊರುವ’ ಕೆಲಸ ಮಾಡುವಾಗ ನಮ್ಮಲ್ಲೂ ಒಂದಷ್ಟು ಬದಲಾವಣೆಗಳಾಗುತ್ತವೆ. ಗಾಬರಿಯಾಗುತ್ತದೆ. ಆತಂಕವೆನಿಸುತ್ತದೆ. ಜನಸಾಗರ ನಿಮಗೆ ಸಂಭ್ರಮವಾಗಿ ಗೋಚರಿಸಬಹುದು; ಕಾಡಿನ ನಡುವೆ, ಗಿಡಮರಗಳ ಮಧ್ಯೆ ಅಲೆದಾಡಿಕೊಂಡಿರುವ ನಮಗೆ ಮನುಷ್ಯನೆಂಬ ಅಪಾಯಕಾರಿ ಪ್ರಾಣಿಯನ್ನು ಸಾವಿರಾರು ಸಂಖ್ಯೆಯಲ್ಲಿ ಒಮ್ಮೆಲೇ ಕಾಣುವುದು ಎಂಥಾ ಆಘಾತವೆಂಬುದು ನಿಮಗೆ ತಿಳಿದಿದೆಯೇ?
ಹಾಗಿದ್ದರೆ 2019ರಲ್ಲಿ ‘ಅನಿಮಲ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯನ್ನೊಮ್ಮೆ ಗಮನಿಸಿ. ಹೈದ್ರಾಬಾದಿನ Centre for Cellular and Molecular Biology (CSIR-) ಸಂಸ್ಥೆಯ ವಿನೋದ್ ಕುಮಾರ್, ಮುತ್ತುಲಿಂಗಂ, ಆದಿಶೇಷು ಕೊಕ್ಕಿಲಿಗಡ್ಡಾ, ರಾಜಶೇಕರ್ ನಿಯೋಗಿ ಮತ್ತು ಗೋವಿಂದಸ್ವಾಮಿ ಉಮಾಪತಿ ಮೊದಲಾದ ಸಂಶೋಧಕರು ಮೈಸೂರು ದಸರೆಯಲ್ಲಿ ಭಾಗವಹಿಸುವ ನಮ್ಮಂತ ಆನೆಗಳ ವರ್ತನೆಯನ್ನು ಅಧ್ಯಯನ ಮಾಡಿ ಸಿದ್ದಪಡಿಸಿದ Non-Invasive Assessment of Physiological Stress in Captive Asian Elephants ಸಂಶೋಧನೆ ಅದು. ಮೈಸೂರು ಮೃಗಾಯಲದಲ್ಲಿರುವ, ದಸರಾ ತರಬೇತಿ ಕ್ಯಾಂಪ್ನಲ್ಲಿರುವ, ಮಧುಮಲೈ ಕ್ಯಾಂಪ್ನಲ್ಲಿರುವ, ಹೀಗೆ ಪ್ರತ್ಯೇಕ ಪರಿಸರದಲ್ಲಿರುವ ಒಟ್ಟು 37 ಆನೆಗಳ 870 ವಿವಿಧ ಸಮಯಗಳ ಲದ್ದಿ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದರು. ನಮ್ಮ ಲದ್ದಿ ಯಾಕೆ ಪರೀಕ್ಷಿಸಿದರು ಗೊತ್ತಾ? ಅದರಲ್ಲಿ ಗ್ಲೂಕೋಕಾರ್ಟಿಕಾಯ್ಡ್ ತ್ಯಾಜ್ಯಗಳಿರುತ್ತವೆ. ಈ ಕಾರ್ಟಿಸೋಲ್ ಹಾರ್ಮೊನುಗಳು ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಒತ್ತಡವನ್ನು ನಿಭಾಯಿಸುವ ಸಮಯದಲ್ಲಿ ಉತ್ಪತ್ತಿಯಾಗುತ್ತವೆ. ಹೆಚ್ಚು ಒತ್ತಡವನ್ನು ಪ್ರಾಣಿ ಎದುರಿಸಿದಷ್ಟೂ ಹೆಚ್ಚು ಕಾರ್ಟಿಕಾಯ್ಡ್ ಹಾರ್ಮೊನುಗಳನ್ನು ದೇಹ ಉತ್ಪಾದಿಸಿ ಒತ್ತಡವನ್ನು ನಿಭಾಯಿಸಲು ಯತ್ನಿಸುತ್ತದೆ. ಈ ಪ್ರಮಾಣ ನಮ್ಮ ಲದ್ದಿಗಳಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದೆಯೆಂದರೆ ನಾವು ವಿಪರೀತ ಒತ್ತಡಕ್ಕೆ ತೆರೆದುಕೊಳ್ಳುತ್ತಿದ್ದೇವೆ ಎಂದರ್ಥ.

ಈಗ ನಿಮಗೆ ಅರ್ಥವಾಗಬಹುದು, ನಿಮ್ಮ ಸಂಭ್ರಮಕ್ಕಾಗಿ ನಾವು ಎಂಥಾ ಒತ್ತಡಕ್ಕೆ ತುತ್ತಾಗುತ್ತೇವೆ ಅಂತ. ಯಾಕೆಂದರೆ, ಮೃಗಾಲಯದಲ್ಲಿದ್ದ ಆನೆಗಳ ಲದ್ದಿಯಲ್ಲಿ ಗ್ಲೂಕೋಕಾರ್ಟಿಕಾಯ್ಡ್ ಪ್ರಮಾಣ 14 ನ್ಯಾನೋ ಗ್ರಾಂ/ಗ್ರಾಂ ಇದ್ದರೆ, ದಸರೆ ತರಬೇತಿ ಶಿಬಿರದ ಆನೆಗಳ ಲದ್ದಿಯಲ್ಲಿ ಅದು 36.23 ನ್ಯಾನೋ ಗ್ರಾಂ/ಗ್ರಾಂನಷ್ಟಿತ್ತು! ಅಂದರೆ ದಸರೆ ಮೆರವಣಿಗೆಯ ಆನೆಗಳು ಎರಡೂವರೆ ಪಟ್ಟು ಹೆಚ್ಚು ಒತ್ತಡಕ್ಕೆ ತುತ್ತಾಗಿದ್ದವು. ನೆನಪಿರಲಿ, ಇದು ಹೆಚ್ಚೇನು ಗೌಜು, ಗದ್ದಲವಿಲ್ಲದ ತರಬೇತಿಯಲ್ಲಿದ್ದ ಆನೆಗಳ ಅಂಕಿಅಂಶ. ಮೆರವಣಿಗೆಯ ದಿನ ಭಾಗಿಯಾಗುವ ಆನೆಗಳ ಒತ್ತಡ ಇನ್ನೆಷ್ಟಿರಬೇಡ ಊಹಿಸಿ. ನಮ್ಮಂತಹ ಕಾಡುಪ್ರಾಣಿಗಳನ್ನು ನೋಡುವುದು ನಿಮಗೆ ಮೋಜು ಎನಿಸಬಹುದು; ಆದರೆ ನಿಮ್ಮಂತಹ ಮನುಷ್ಯರ ಸಹಸ್ರರ ಸಂಖ್ಯೆಯ ಒಡನಾಟ ನಮಗೆ ಮೋಜಿನದ್ದಲ್ಲ! ಟಾರ್ ರಸ್ತೆಯ ಮೇಲೆ ಪಾದರಕ್ಷೆಯ ತೊಟ್ಟು ನಡೆದಾಡುವುದು ನಿಮಗೆ ಖುಷಿಯೆನಿಸಬಹುದು, ಆದರೆ ನಮಗಲ್ಲ! ಬಿಸಿಲಿನ ಝಳದ ನಡುವೆ ನೆರಳಿನಲ್ಲಿ ಕೂತು, ಛತ್ರಿ ಹಿಡಿದು ನಿಂತು ನೋಡುವುದು ನಿಮಗೆ ಸಂಭ್ರಮವೆನಿಸಬಹುದು, ಬಿಸಿಲಿನ ಏಟು ತಡೆದುಕೊಳ್ಳಲು ನಮ್ಮಿಂದಾಗುವುದಿಲ್ಲ. ಕಾಡಿನಲ್ಲಿದ್ದಾಗ ನಾವು, ಗಿಡಮರಗಳ ನೆರಳಿದ್ದರೂ ಮಧ್ಯಾಹ್ನದ ಬಿಸಿಲಿನ ಹೊತ್ತು ಊಟಕ್ಕಾಗಿ ಅಲೆದಾಡದೆ, ದಟ್ಟ ಕಾಡಿನಲ್ಲಿ ವಿಶ್ರಾಂತಿ ಪಡೆಯುತ್ತೇವೆ. ನಾವು ಮೆಯ್ದಾಡುವುದು ಸಂಜೆ ಮತ್ತು ಬೆಳಗಿನ ಜಾವ ಮಾತ್ರ. ನಮ್ಮ ಪ್ರಯಾಣವೂ ರಾತ್ರಿ ಹೊತ್ತು.
ಇಂತಹ ನಮ್ಮ ಒಳಗಿನ ಹೊಂದಾಣಿಕೆಗಳನ್ನು ಅರ್ಥ ಮಾಡಿಕೊಳ್ಳದೆ, ಖಾಲಿ ಪ್ರದೇಶದಲ್ಲಿ ಭಾರ ಹೊತ್ತು ನಡೆಯುವ ತರಬೇತಿ ಕೊಟ್ಟು, ಏಕಾಏಕಿ ಸಾವಿರಾರು ಜನರ ಮುಂದೆ, ಬಿಸಿಲಿನ ಝಳದಲ್ಲಿ, ಗದ್ದಲದ ನಡುವೆ ತಂದುಬಿಟ್ಟಾಗ ನಮ್ಮ ಆತಂಕ ಹೇಗಿರಬೇಡ? ಇದು ನಿಮಗೆ ಅರ್ಥವಾದೀತೆ?
ಭಾರ ಹೊರುವ ಸಾಮರ್ಥ್ಯವಿದ್ದರೂ ನಾನು ಅವತ್ತು ಓಡಿದೆ. ನಿಮ್ಮನ್ನು ಹೆದರಿಸಲು ಅಲ್ಲ; ನಿಮ್ಮಿಂದ ಹೆದರಿ! ನಮ್ಮ ಪ್ರಾಣಿಗಳ ಇಂತಹ ವರ್ತನೆಗೆ ನೀವೇ ಸೈಕಾಲಜಿಯ ಪರಿಭಾಷೆಯಲ್ಲಿ ‘fight or flight’ ಪ್ರತಿಕ್ರಿಯೆ ಎಂದು ಕರೆದಿದ್ದೀರಿ. ಅಂದರೆ ಅಪಾಯವಿದೆ ಎಂದು ಪ್ರಾಣಿಗೆ ಅನಿಸಿದಾಗ ಹೋರಾಡುವುದು ಅಥವಾ ಅಲ್ಲಿಂದ ಪಲಾಯನಗೈಯ್ಯುವುದು ಪ್ರಾಣಿಗಳ ಸಹಜ ಪ್ರತಿಕ್ರಿಯೆ. ನೀವು ಮನುಷ್ಯರಂತೆ ಪಲಾಯನಗೈಯ್ಯುವುದನ್ನು ನಾವು ಹೇಡಿತನ ಎಂದು ಭಾವಿಸುವುದಿಲ್ಲ. ಆತ್ಮರಕ್ಷಣೆಗೆ ಅದೊಂದು ಅನಿವಾರ್ಯ ಪ್ರತಿಕ್ರಿಯೆ. ನಾನು ಮಾಡಿದ್ದು ಅದನ್ನೇ. ನನ್ನ ಸುತ್ತಲಿನ ಪರಿಸರ ನನ್ನ ನಿಯಂತ್ರಣದಾಚೆಗೆ ಹೋದಾಗ, ನನ್ನ ದೇಹ ಅದಕ್ಕೆ ಪ್ರತಿಕ್ರಿಯಿಸಿತು. ನಿಮ್ಮಂತೆ ಕಾರಣಗಳನ್ನು ವಿಶ್ಲೇಷಿಸಿ, ಪರಿಣಾಮಗಳನ್ನು ಲೆಕ್ಕಹಾಕಿ, ನಂತರ ಓಡಬೇಕೋ ಬೇಡವೋ ಎಂದು ನಿರ್ಧರಿಸಲು ನಮಗೆ ಬರುವುದಿಲ್ಲ. ಆ ಕ್ಷಣದ ಪ್ರಚೋದನೆಗೆ ಪ್ರತಿಕ್ರಿಯಿಸುವುದಷ್ಟೇ ನನಗೆ ಗೊತ್ತು.
‘ಫೈಟ್ ಆರ್ ಫ್ಲೈಟ್’ ನಿಯಮದ ಪ್ರಕಾರ ಆತ್ಮರಕ್ಷಣೆಗೆ ಪ್ರಾಣಿ ಪಲಾಯನಗೈಯ್ಯುವಾಗ ಅದು ತನ್ನ ದಾರಿಯಲ್ಲಿ ಮುಂದಕ್ಕೆ ಓಡುವುದಿಲ್ಲ, ಬಂದ ದಾರಿಯಲ್ಲೇ ಹಿಂದಕ್ಕೆ ಓಡುತ್ತವೆ. ಹೊಸ ದಾರಿಯಲ್ಲಿ ಸಾಗುವುದಕ್ಕಿಂತಹ ಈಗಷ್ಟೆ ಬಂದ, ಪರಿಚಿತ ದಾರಿಯಲ್ಲಿ ತಪ್ಪಿಸಿಕೊಳ್ಳುವುದು ಸುಲಭ ಎಂಬ ಎಣಿಕೆ ಪ್ರಾಣಿಗಳದ್ದು. ಅವತ್ತು ನಾನು ಕೂಡಾ ಬಂದ ದಾರಿಯಲ್ಲೆ ವಾಪಾಸ್ ಓಡಿದ್ದು ನಿಮಗೆ ನೆನಪಿರಬಹುದು. ಹಾಗೆ ಗಾಬರಿಗೊಂಡು ಓಡುವಾಗ ತಮ್ಮ ಹಾದಿಗೆ ಅಡ್ಡಬರುವ ವಸ್ತುಗಳನ್ನು ಪ್ರಾಣಿಗಳು ಶಕ್ತ್ಯಾನುಸಾರ ಪಕ್ಕಕ್ಕೆ ತಳ್ಳಿ ದಾರಿ ಮಾಡಿಕೊಳ್ಳಲು ಯತ್ನಿಸುತ್ತವೆ. ನಾನು ನಿಮ್ಮ ಕಾರು, ಬೈಕ್ಗಳ ಮೇಲೆ ದಾಳಿ ಮಾಡಿದ್ದು ಕೂಡಾ ನನ್ನ ಹಾದಿಗಿದ್ದ ಆತಂಕವನ್ನು ನಿವಾರಿಸಿಕೊಳ್ಳಲು. ನಿಮ್ಮ ಮೇಲೆ ದಾಳಿ ಮಾಡುವುದಕ್ಕಲ್ಲ. ಸಿಟ್ಟಿಗೆದ್ದಿದ್ದಕ್ಕೂ ಅಲ್ಲ!
ನನಗೆ ಗೊತ್ತು, ನನ್ನ ವರ್ತನೆಯಿಂದ ನಿಮಗೆ ಆಘಾತವಾಗಿದೆ. ಯಾಕೆಂದರೆ ನೀವು ಮನುಷ್ಯರ ಆಯಾಮದಿಂದ ಮಾತ್ರ ಚಿಂತಿಸಬಲ್ಲಿರಿ. ನನ್ನನ್ನು ನೋಡಲು ಬಂದವರಲ್ಲಿ ಅನೇಕರು ನನ್ನನ್ನು ಪ್ರೀತಿಯಿಂದಲೇ ನೋಡಿರಬಹುದು. ನನ್ನನ್ನು ದೇವರ ವಿಗ್ರಹ ಹೊತ್ತ ಪವಿತ್ರ ಪ್ರಾಣಿಯೆಂದು ಭಾವಿಸಿರಬಹುದು. ಅದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಪ್ರೀತಿಯೆಂದರೆ ಕೇವಲ ನನ್ನನ್ನು ಅಲಂಕರಿಸಿ, ನನ್ನ ಚಿತ್ರ ತೆಗೆದು, ನನ್ನ ಮುಂದೆ ಕೈಮುಗಿಯುವುದೇ? ಪ್ರೀತಿಯೆಂದರೆ ನನ್ನ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದೂ ಅಲ್ಲವೇ? ನನ್ನನ್ನು ಪವಿತ್ರವೆಂದು ಭಾವಿಸುವ ನೀವು, ನನಗೂ ಭಯವಾಗಬಹುದೆಂಬ ಸಾಧ್ಯತೆಯನ್ನು ಏಕೆ ಮರೆತುಬಿಡುತ್ತೀರಿ?
ನನ್ನ ವರ್ತನೆಯಲ್ಲಿ ಒತ್ತಡದ ಲಕ್ಷಣಗಳಿವೆಯೇ ಎಂದು ಗಮನಿಸುವ ಸ್ವತಂತ್ರ ವ್ಯವಸ್ಥೆ ನಿಮ್ಮ ಬಳಿ ಇದೆಯೇ? ನಾನು ಮುಂದುವರಿಯಲು ಸಿದ್ಧನಿಲ್ಲದಿದ್ದರೆ, ಮೆರವಣಿಗೆಯನ್ನು ನಿಲ್ಲಿಸಿ ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳುವ ಧೈರ್ಯವಿದೆಯೇ? ಅದನ್ನು ನೀವು ಅಪಶಕುನವೆಂದು ಭಾವಿಸುತ್ತೀರಿ.

ಪ್ರಿಯ ಮನುಷ್ಯರೇ, ನಿಮಗೆ ತಿಳಿದಿದೆಯೇ ನನ್ನಂತಹ ಪ್ರಾಣಿಗಳ ಯೋಗಕ್ಷೇಮಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮದೇ ಮನುಷ್ಯ ವಿಜ್ಞಾನಿಯಾದ ಡೇವಿಡ್ ಮೆಲ್ಲರ್ ಮತ್ತು ಸಂಗಡಿಗರು ‘ಫೈವ್ ಡೊಮೇನ್ಸ್’ ಎಂಬ ಮಾದರಿಯನ್ನು ಮುಂದಿಟ್ಟಿದ್ದಾರೆ. ಅದರ ಪ್ರಕಾರ ಸೆರೆಹಿಡಿದ ಪ್ರಾಣಿಗಳಿಗೆ ಸಾಕಷ್ಟು ಆಹಾರ ಮತ್ತು ನೀರು ಸಿಕ್ಕಿದೆಯೇ; ಸೂಕ್ತ ಆರೈಕೆ ಮಾಡಲಾಗುತ್ತಿದೆಯೇ; ಇರಲು ಅಚ್ಚುಕಟ್ಟಾದ ತಾಣಗಳನ್ನು ಕಲ್ಪಿಸಲಾಗಿದೆಯೇ ಎನ್ನುವುದರ ಜೊತೆಗೆ ಪ್ರಾಣಿಗಳ ಸಹಜ ವರ್ತನೆ ಮತ್ತು ಮಾನಸಿಕ ಸಮತೋಲನ ಕಾಪಾಡುವಂತಹ ವಾತಾವರಣದಲ್ಲಿ ಅವುಗಳನ್ನು ಇಡಲಾಗಿದೆಯೇ ಎಂಬುದು ಕೂಡಾ ಮುಖ್ಯ. ಅಂದರೆ ನಮ್ಮಂತಹ ಪ್ರಾಣಿಗಳನ್ನು ಭಯದ, ಆತಂಕದ, ತಲ್ಲಣದ ಪರಿಸ್ಥಿತಿಗಳಿಗೆ ತಳ್ಳುವುದು ಕೂಡಾ ಪ್ರಮಾದ. ನಮಗೆ ಮೇವು, ನೀರು, ಸೂರು, ಔಷಧ ಆರೈಕೆ ಕೊಡುವ ವಿಚಾರದಲ್ಲೇನೊ ನೀವು ಉದಾರಿಗಳು ಒಪ್ಪುತ್ತೇವೆ; ಅವುಗಳನ್ನು ಕೊಟ್ಟಿದ್ದೇವೆ ಎಂಬ ಏಕೈಕ ಕಾರಣಕ್ಕೆ ನಮ್ಮನ್ನು ಇಂತಹ ಒತ್ತಡದ, ಆಂತಕಕಾರಿ ಸಂದರ್ಭಗಳಿಗೆ ತಳ್ಳುವುದು ನಿಮಗೆ ತರವೇ?
ನೀವೇ ಅನುಷ್ಠಾನಕ್ಕೆ ತಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಮುಂತಾದ ಕಾನೂನುಗಳಿಗೆ ಬೆಲೆ ಇಲ್ಲವೇ? ನಮ್ಮನ್ನು ಮೆರವಣಿಗೆಯಲ್ಲಿ ಬಳಸಿದ ಪ್ರತಿಯೊಂದು ಸಂದರ್ಭ ಕಾನೂನುಬಾಹಿರವೆಂದು ನಾನು ಹೇಳುವುದಿಲ್ಲ. ಆದರೆ ಧಾರ್ಮಿಕ ಆಚರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಪ್ರಾಣಿಗಳ ಯೋಗಕ್ಷೇಮದ ಹೊಣೆಗಾರಿಕೆ ಇಲ್ಲವಾಗುವುದೇ? ಯೋಗಕ್ಷೇಮ ಎಂದರೆ ಕೇವಲ ಮೇವು, ನೀರು, ಸೂರು ಮಾತ್ರ ಅಲ್ಲ. ನಮ್ಮ ವರ್ತನೆಗಳಲ್ಲಿ ಆತಂಕಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ಕೂಡಾ ಹೌದು. ನಿಮಗೆ ತಿಳಿದಿದೆಯಾ, 1989 ರಿಂದ 2003ರವರೆಗೆ ಕೇರಳದಲ್ಲಿ ನಮ್ಮ ಆನೆಗಳ ಆತಂಕಕಾರಿ ವರ್ತನೆಯ ಪರಿಣಾಮವಾಗಿ 274 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರಾಸರಿ ವರ್ಷಕ್ಕೆ 10 ಜನರ ದುರ್ಮರಣ. ಅದರಲ್ಲಿ ಮಾವುತರೂ ಉಂಟು! ಯಾಕೆ? ನಮ್ಮನ್ನು ಬಂಧಿಸಿದ ಕಾರಣಕ್ಕೆ ನಿಮ್ಮ ಮೇಲೆ ನಮಗೆ ಯಾವುದೇ ಜಿದ್ದು ಇಲ್ಲ. ಮನುಷ್ಯರಂತೆ ಅಂತಹ ಲೆಕ್ಕಾಚಾರದ ಸಿಟ್ಟು ಸಾಧಿಸುವ ಗುಣವೂ ನಮಗಿಲ್ಲ. ಆ ಕ್ಷಣದ ಆತಂಕಕ್ಕೆ ಪ್ರತಿಕ್ರಿಯಿಸುವ ಗುಣದ ನಮ್ಮನ್ನು ಅಂತಹ ಸಂದರ್ಭಗಳಿಗೆ ನೀವು ತಳ್ಳುತ್ತಾ ಬಂದುದೇ ಇದಕ್ಕೆ ಕಾರಣ.
ಅದೃಷ್ಟವಶಾತ್, ಮೊನ್ನೆ ಶಿವಮೊಗ್ಗದ ನನ್ನ ಓಟಕ್ಕೆ ಅಡ್ಡ ಸಿಲುಕಿ ಯಾವುದೇ ಪ್ರಾಣಾಪಾಯ ಆಗಲಿಲ್ಲ. ಆಗಿದ್ದಿದ್ದರೆ ನಿಮ್ಮೆಲ್ಲರ ದೃಷ್ಟಿಯಲ್ಲಿ ನಾನೊಂದು ಪುಂಡಾನೆಯಾಗಿಯೂ, ಹುಚ್ಚು ಹಿಡಿದ ಆನೆಯಾಗಿಯೂ ಗೋಚರಿಸುತ್ತಿದೆ. ನನ್ನ ಈ ಸ್ವಗತದ ಮಾತು ಕೇಳುತ್ತಿರುವ ನಿಮ್ಮಲ್ಲಿ ಬಹಳಷ್ಟು ಜನರಿಗೆ ಆಂಗ್ಲ ಕಾದಂಬರಿಕಾರ ಜಾರ್ಜ್ ಆರ್ವೆಲ್ ಬಗ್ಗೆ ತಿಳಿದಿರಬಹುದು. ಪ್ರಖ್ಯಾತ ‘ಅನಿಮಲ್ ಫಾರ್ಮ್’ ಕಾದಂಬರಿ ಬರೆದಾತ. ಆತ ಒಮ್ಮೆ ಬರ್ಮಾದಲ್ಲಿ ಬ್ರಿಟಿಷ್ ಸೇನಾಧಿಕಾರಿಯಾಗಿದ್ದಾಗ ನನ್ನಂತಹ ಒಂದು ಆನೆ ಕೊಂದುಹಾಕಿದ್ದ. ಕಾರಣ, ಆ ಸಾಕು ಆನೆ ತನ್ನ ಮಾವುತನಿಲ್ಲದ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ತುಳಿದು ಸಾಯಿಸಿತ್ತು. ಅದೇನು ಪುಂಡಾನೆಯಲ್ಲ, ಹುಚ್ಚೂ ಹಿಡಿದಿರಲಿಲ್ಲ. ನಮ್ಮ ಆನೆಗಳ ಸಂತತಿಯಲ್ಲಿ ಗಂಡು ಆನೆಗಳು ಪ್ರೌಢ ವಯಸ್ಸಿಗೆ ಬಂದಾಗ, ವರ್ಷದ ನಿರ್ದಿಷ್ಟ ತಿಂಗಳಲ್ಲಿ ಮದವೇರುತ್ತವೆ. ಅಂದರೆ ನಮ್ಮ ದೇಹದಲ್ಲಾಗುವ ಕೆಲವೊಂದು ಹಾರ್ಮೋನುಗಳ ವ್ಯತ್ಯಯದಿಂದ ಸ್ವಲ್ಪ ಉದ್ವಿಗ್ನವಾಗಿ ವರ್ತಿಸುತ್ತೇವೆ. ಬೇರೆ ಬೇರೆ ಆನೆಯಲ್ಲಿ ಅದರ ತೀವ್ರತೆ ಹೆಚ್ಚಿರುತ್ತದೆ. ಆ ಕಾಲ ತೀರುವವರೆಗೆ ಮಾವುತರೂ ಅಂತಹ ಆನೆಗಳ ತಂಟೆಗೆ ಹೋಗದೆ ದೂರದಿಂದಲೇ ಮೇವು ಹಾಕುತ್ತಾರೆ. ಆ ಆನೆ ಅಂತಹ ಮದವೇರಿತ್ತು. ಮಾವುತ ಇರಲಿಲ್ಲ. ಇದರ ಅರಿವಿರದ ವ್ಯಕ್ತಿ ಅದರ ಸನಿಹಕ್ಕೆ ಸುಳಿದಾಗ, ಅಚಾತುರ್ಯದಿಂದ ವರ್ತಿಸಿ ಅವನನ್ನು ಕೊಂದುಹಾಕಿತ್ತು. ನೋಡುತ್ತಿದ್ದಂತೆಯೆ ಜಾರ್ಜ್ ಆರ್ವೆಲ್ಲನಿಗೂ ಅದೊಂದು ಮದವೇರಿದ ಆನೆ, ಕ್ಷಣ ಕಾಲ ಬಿಟ್ಟರೆ ಸರಿಹೋಗುತ್ತದೆ, ಅದನ್ನು ಕೊಲ್ಲವುದರಲ್ಲಿ ಅರ್ಥವಿಲ್ಲ ಎಂದುಕೊಂಡ. ಆದರೆ ಸುತ್ತಲಿನ ಜನರ ಸಾರ್ವಜನಿಕ ಉನ್ಮಾದ ಅವನನ್ನು ಎಷ್ಟು ವಿಚಾರಹೀನನ್ನಾಗಿಸಿತು ಎಂದರೆ, ತಾನು ಈ ಆನೆಯನ್ನು ಕೊಲ್ಲದಿದ್ದರೆ ಇವರೆಲ್ಲ ನನ್ನನ್ನು ಆಡಿಕೊಂಡು ನಗಾಡುತ್ತಾರೆ, ನನ್ನ ಸಾಮರ್ಥ್ಯವನ್ನು ಪ್ರಶ್ನಿಸುತ್ತಾರೆ, ನನ್ನನ್ನು ಉಪಯೋಗಕ್ಕೆ ಬಾರದವನು ಎಂದುಕೊಳ್ಳುತ್ತಾರೆ ಎಂಬ ಸಾಮಾಜಿಕ ಒತ್ತಡಕ್ಕೆ ಸಿಲುಕಿ ಆ ಆನೆಯನ್ನು ಕೊಂದುಹಾಕುತ್ತಾನೆ.

ಈ ಕತೆ ಯಾಕೆ ಹೇಳಿದೆನೆಂದರೆ, ಅಕಸ್ಮಾತ್ ಮೊನ್ನೆಯ ಗಾಬರಿಯಲ್ಲಿ ನಾನೂ ಯಾರದಾದರು ಪ್ರಾಣದ ಬಲಿಗೆ ಕಾರಣವಾಗಿಬಿಟ್ಟಿದ್ದರೆ, ನೀವು ಮತ್ತು ನಿಮ್ಮ ಸರ್ಕಾರ ನನಗೂ ಅದೇ ಗತಿ ಕಾಣಿಸಿದ್ದರೆ ಏನು ಮಾಡಬೇಕಿತ್ತು? ನಿಮ್ಮ ಆಲೋಚನೆಗಳು, ತರ್ಕಗಳು, ಭುಜಬಲಗಳು ಯಾವ್ಯಾವ ರೀತಿ ಚರ್ಚೆಯಾಗುತ್ತಿದ್ದವೋ ನಮಗಂತೂ ಅರ್ಥವಾಗುವುದಿಲ್ಲ.
ಈಗಲು ಸಹಾ, ನಮ್ಮನ್ನು ಇನ್ನೂ ಹೆಚ್ಚಿನ ತರಬೇತಿಯೊಂದಿಗೆ, ಹೆಚ್ಚಿನ ಎಚ್ಚರಿಕೆಯೊಂದಿಗೆ, ಹೆಚ್ಚಿನ ಪೂರ್ವಸಿದ್ದತೆಯೊಂದಿಗೆ ಬಳಸಬೇಕೆನ್ನುವ ಮಾತುಗಳನ್ನಾಡುತ್ತಿದ್ದೀರೇ ಹೊರತು, ನಮ್ಮ ಸಂಭ್ರಮಕ್ಕೆ ಆ ಪ್ರಾಣಿಗಳನ್ನೇಕೆ ಆತಂಕಕ್ಕೆ ತಳ್ಳಬೇಕೆಂದು ಪ್ರಶ್ನಿಸಿಕೊಳ್ಳುತ್ತಿಲ್ಲ! ನನಗೀಗ ಬೇಕಿರುವುದು ಮನುಷ್ಯರ ವಿರುದ್ಧದ ತೀರ್ಪಲ್ಲ. ಯಾಕೆಂದರೆ ನನ್ನನ್ನು ಮೆರವಣಿಗೆಯಲ್ಲಿ ನೋಡಲು ಬಂದ ಜನರೆಲ್ಲ ಕ್ರೂರಿಗಳೆಂದು ನಾನು ಹೇಳಲಾರೆ. ನೋಡಲು ಬಂದವರಲ್ಲಿ ನನ್ನನ್ನು ಪ್ರೀತಿಸುವವರೂ ಇದ್ದಾರೆ. ನನ್ನನ್ನು ನೋಡಿಕೊಳ್ಳುವವರಲ್ಲಿ ನನ್ನ ಆರೋಗ್ಯಕ್ಕಾಗಿ ಶ್ರಮಿಸುವವರೂ ಇದ್ದಾರೆ. ಆದರೆ ಒಳ್ಳೆಯ ಉದ್ದೇಶವೊಂದೇ ಸಾಕಾಗುವುದಿಲ್ಲ, ಆ ಉದ್ದೇಶದಿಂದ ನಡೆಯುವ ಪರಿಣಾಮವೂ ಬುದ್ದಿವಂತರಾದ ಮನುಷ್ಯರಿಗೆ ಮುಖ್ಯವಾಗಬೇಕಲ್ಲವೇ? ನಡೆದಾಡುವುದು ಕಷ್ಟವೆಂದಾಗ ಮೋಟಾರು ವಾಹನ ಶೋಧಿಸಿಕೊಂಡಿರಿ. ಮೋಟಾರುಗಳ ನಿಧಾನವೆಂದಾದಾಗ ಹಾರಾಡುವ ವಿಮಾನಗಳನ್ನು ಕಂಡುಕೊಂಡಿರಿ. ಬೃಹತ್ ನೌಕೆಗಳು, ಅಂತರಿಕ್ಷಕ್ಕೆ ಹಾರುವ ರಾಕೆಟ್ಗಳು ಏನೆಲ್ಲಾ ಬದಲಿ ವ್ಯವಸ್ಥೆಗಳನ್ನು ಕಂಡುಕೊಂಡಿರಿ. ನಿಮ್ಮ ಮನದಲ್ಲಿ ನಮ್ಮಂತಹ ಪ್ರಾಣಿಗಳ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ, ನಿಮ್ಮ ಸಂಭ್ರಮಾಚರಣೆಗೆ ನಮ್ಮ ಬದಲಿಗೆ ಒಂದಷ್ಟು ಪರ್ಯಾಯಗಳು ನಿಮಗೆ ಗೋಚರಿಸಲಾರವೆ?
ದೇವರ ಹೆಸರಿನಲ್ಲಿ ನಡೆಯುವ ಸಂಭ್ರಮದಲ್ಲಿ, ದೇವರ ಸೃಷ್ಟಿಯಾದ ಪ್ರಾಣಿಗಳ ನೋವು ಮರೆಯಾಗಬಾರದಲ್ಲವೇ? ಹೋಗಲಿ ಬಿಡಿ, ಇದನ್ನೆಲ್ಲ ನಿಮ್ಮ ಬಳಿ ಹೇಳುವುದರಲ್ಲಿ ಅರ್ಥವಿಲ್ಲ. ನಿಮ್ಮಂತೆಯೆ ಮನುಷ್ಯರಾದವರನ್ನು ಜಾತಿಯ ಕಾರಣಕ್ಕೆ ಪ್ರಾಣಿಗಳಂತೆ ನಡೆಸಿಕೊಂಡವರಲ್ಲವೇ ನೀವು! ಇನ್ನು ನಮ್ಮಂತಹ ಮೂಕಪ್ರಾಣಿಗಳ ಮಾತುಗಳು ನಿಮಗೆ ಕೇಳಿಸುವುದುಂಟೇ? ಇಷ್ಟು ಹೊತ್ತು ನನ್ನ ಮನದ ಮಾತು ಹೇಳಿಕೊಂಡು ನಿಮ್ಮ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ!
- ಇಂತಿ ನಿಮ್ಮವನಲ್ಲದ ಸೋಮಣ್ಣ

ರಾಜಕೀಯ, ಸಾಹಿತ್ಯ, ಶಿಕ್ಷಣ, ಉದ್ಯೋಗ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ವಿಶ್ಲೇಷಣೆಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಲೇಖಕರು, ಎರಡು ದಶಕಗಳ ಪತ್ರಕರ್ತ ವೃತ್ತಿಬದುಕಿನಲ್ಲಿ ಪತ್ರಿಕೋದ್ಯಮದ ವಿವಿಧ ಮಜಲುಗಳಲ್ಲಿ ಸಂಪಾದಕೀಯ ಅನುಭವವನ್ನು ಗಳಿಸಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲಿ ಸಕ್ರಿಯರಾಗಿರುವ ಅವರು, ‘ಜೆನ್ ಕತೆಗಳು’, ‘ಎಲ್ಲೆ ತೊರೆದ ಕತೆಗಳು’, ‘ಟರ್ನಿಂಗ್ ಪಾಯಿಂಟ್’, ‘ಕಾಡುವ ಕತೆಗಳು’, ‘ಆ 117 ದಿನಗಳು’ ಮತ್ತು ‘ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಸೋಮಣ್ಣನ ಕಥೆ ಓದಿ ನಿಜಕ್ಕೂ ವ್ಯಥೆ ಆಯಿತು ಸರ್. ತಮ್ಮ ಪರಕಾಯ ಪ್ರವೇಶ ಅಸಾಮಾನ್ಯ. ತುಸು ದೀರ್ಘ ಅನ್ನಿಸಿದರೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ತಮ್ಮ ಓದಿನ ವಿವಿಧ ಆಯಾಮಗಳನ್ನೂ ಸಹ ಪರಿಚಯಿಸುತ್ತದೆ. ಧನ್ಯವಾದಗಳು ಸರ್
– ನಾಗರಾಜ ಸಿರಿಗೆರೆ