ಪರದೆ ಹಿಂದಿನ ‘ನಾನಾ’ ಮುಖಗಳು!: ಕೋಪ, ಕಣ್ಣೀರು, ಕಾರ್ಗಿಲ್ ಮತ್ತು ಮಣ್ಣಿನ ಋಣ

ತಮ್ಮ ವಿಶಿಷ್ಟ ನಟನೆಯ ಶೈಲಿಯಿಂದ ಪ್ರೇಕ್ಷಕರ ಎದೆಯಲ್ಲಿ ಛಾಪು ಮೂಡಿಸಿದ್ದ ಹಿರಿಯ ಬಾಲಿವುಡ್‌ ನಟ ನಾನಾ ಪಾಟೇಕರ್‍‌, ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ. ರಂಗಭೂಮಿ ಹಿನ್ನೆಲೆಯ ನಾನಾ ಸಿನಿಮಾಗಳ ಮೂಲಕ ಬಹಳಷ್ಟು ಜನರಿಗೆ ಗೊತ್ತು. ಆದರೆ ನಿಜಕ್ಕೂ ನಾನಾ ಪಾಟೇಕರ್‌ರನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವರ ಸಿನಿಮಾಗಳನ್ನು ನೋಡಿದರಷ್ಟೆ ಸಾಲದು. ಅವರ ಜೀವನದ ಕೆಲವು ಪುಟಗಳನ್ನು ತಿರುವಿ ಹಾಕಬೇಕು.

ಹಾಗೆ ತಿರುವುತ್ತಾ ಕೂತಾಗ ನಮಗೆ ಒಂದು ಪುಟದಲ್ಲಿ  ತಿಂಗಳಿಗೆ 35 ರೂಪಾಯಿ ಸಂಬಳಕ್ಕೆ ಸಿನಿಮಾ ಪೋಸ್ಟರ್ ಬಿಡಿಸುತ್ತಿದ್ದ ಹುಡುಗ ಸಿಗುತ್ತಾನೆ. ಇನ್ನೊಂದು ಪುಟದಲ್ಲಿ ಸೈನಿಕನ ಪಾತ್ರಕ್ಕಾಗಿ ಸೈನಿಕರ ಜೊತೆ ಗಡಿ ಕಾದುಬಂದ ತನ್ಮಯ ನಟ ದೊರಕುತ್ತಾನೆ. ಮತ್ತೊಂದು ಪುಟದಲ್ಲಿ ನಿರ್ದೇಶಕನೊಂದಿಗೆ ಸೆಟ್‌ನಲ್ಲೇ ಜಗಳವಾಡುವಷ್ಟು ಸಿಡುಕಿನ ಮನುಷ್ಯ ದೊರಕುತ್ತಾನೆ. ಇನ್ನೊಂದು ಪುಟದಲ್ಲಿ ಅಪ್ಪಟ ರೈತ ಗೋಚರಿಸುತ್ತಾನೆ. ಕೊನೆಗೆ, ಮುಂಬೈನ ಝಗಮಗ ಬೆಳಕಿನಿಂದ ದೂರವಾಗಿ 27 ಎಕರೆ ಹೊಲದಲ್ಲಿ ಮಣ್ಣಿನೊಂದಿಗೆ ಬದುಕುತ್ತಿದ್ದ ಸರಳ ಮನುಷ್ಯ ದಕ್ಕುತ್ತಾನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಾನಾ ಪಾಟೇಕರ್‌ರ ಕಥೆ ಒಬ್ಬ ನಟನ ಕಥೆಯಲ್ಲ. ಒಬ್ಬ ಮನುಷ್ಯನೊಳಗೆ ಅಡಗಿರುವ ಹಲವು ವೈವಿಧ್ಯಮಯ ಮುಖಗಳ ಕಥೆ.

₹35ರಿಂದ ಆರಂಭವಾದ ಕಥೆ

ನಮ್ಮನ್ನು ಅಗಲಿಹೋಗುವ ವೇಳೆಗೆ ನಾನಾ ಪಾಟೇಕರ್‌ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ನಟನಾಗಿ ಬೆಳೆದು ನಿಂತಿದ್ದರು. ಆದರೆ ಅವರ ಬದುಕಿನ ಆರಂಭ ಇಷ್ಟು ಅನುಕೂಲಕರವಾಗಿ ಇರಲಿಲ್ಲ. ಹಣವೆಂಬುದು ದುಸ್ಥರದ ಕನಸು. ಯುವಕನಾಗಿದ್ದಾಗ ಮುಂಬೈನಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ಬಿಡಿಸುವ ಕೆಲಸ ಮಾಡುತ್ತಿದ್ದ ನಾನಾಗೆ ತಿಂಗಳಿಗೆ ಸಿಗುತ್ತಿದ್ದದ್ದು ಕೇವಲ 35 ರೂಪಾಯಿ ಮಾತ್ರ! ಮುಂಬೈ ಎಂಬ ಮಾಯಾನಗರಿಯಲ್ಲಿ ಅಷ್ಟರಲ್ಲೆ ಬದುಕು ಸಾಗಿಸಲು ಹೆಣಗಾಡುತ್ತಿದ್ದರು. ಕಲೆಯ ಮೇಲಿನ ಆಸಕ್ತಿ ಮತ್ತು ಬದುಕಿನ ಅನಿವಾರ್ಯತೆ ಒಂದೇ ದಿಕ್ಕಿನಲ್ಲಿ ಸಾಗಿದ್ದು, ಆ ವೃತ್ತಿಯಿಂದ ಅವರಿಗೆ ಸಿಕ್ಕ ಒಂದು ಲಾಭ.

ಅದೇ ಚಿತ್ರ ಬಿಡಿಸುತ್ತಿದ್ದ ಹುಡುಗ, ಮುಂದೆ ಕ್ಯಾಮೆರಾದ ಎದುರು ನಿಂತ. ಆದರೆ ಅವರು ಸಾಂಪ್ರದಾಯಿಕ ‘ಹೀರೋ’ ಆಗಲಿಲ್ಲ. ಅವರ ಮುಖದಲ್ಲಿ ನಾಯಕನ ಹೊಳಪಿಗಿಂತ ಬದುಕಿನ ಕಠಿಣತೆ ಕಾಣಿಸುತ್ತಿತ್ತು. ಅವರ ಧ್ವನಿಯಲ್ಲಿ ಸಂಭಾಷಣೆಗಿಂತ ಅನುಭವದ ತೂಕವಿತ್ತು. ಬಹುಶಃ ಅದಕ್ಕಾಗಿಯೇ ಅವರ ಅಭಿನಯದಲ್ಲಿ ಒಂದು ವಿಚಿತ್ರ ನೈಜತೆ ಮೂಡಿಬಂತು. India Today ವರದಿ ಮಾಡಿರುವಂತೆ, ₹35ರ ಪೋಸ್ಟರ್ ಪೇಂಟರ್‌ನಿಂದ ಆರಂಭವಾದ ಈ ಪಯಣ ಮುಂದೆ ಭಾರತೀಯ ಚಿತ್ರರಂಗದ ಅತ್ಯಂತ ವಿಶಿಷ್ಟ ನಟರೊಬ್ಬರ ಸ್ಥಾನಕ್ಕೆ ಕರೆದೊಯ್ದಿತು.

‘ಪ್ರಹಾರ್’ನ ಸೈನಿಕ ಪಾತ್ರದಿಂದ ನಿಜವಾದ ಸೇನೆಯತ್ತ

ಒಬ್ಬ ನಟ ಸೈನಿಕನ ಪಾತ್ರ ಮಾಡಬೇಕಾದರೆ ಕೆಲವು ದಿನ ತರಬೇತಿ ಪಡೆಯುವುದು ಹೊಸದೇನಲ್ಲ. ಆದರೆ ನಾನಾ ಪಾಟೇಕರ್ ವಿಷಯದಲ್ಲಿ ಕಥೆ ಸ್ವಲ್ಪ ಭಿನ್ನ. ‘ಪ್ರಹಾರ್’ ಸಿನಿಮಾದ ಸೈನಿಕ ಪಾತ್ರಕ್ಕಾಗಿ ಅವರು ಭಾರತೀಯ ಸೇನೆಯೊಂದಿಗೆ ಕಠಿಣ ತರಬೇತಿ ಪಡೆದರು. ಮರಾಠಾ ಲೈಟ್ ಇನ್‌ಫ್ಯಾಂಟ್ರಿಯೊಂದಿಗೆ ನಡೆಸಿದ ತರಬೇತಿ ಅವರ ದೇಹ ಮತ್ತು ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತು. ನಟನಾಗಿ ಅವರ ತನ್ಮಯತೆ ಅಂತದ್ದು. ಆದರೆ ಇದು ತನ್ಮಯತೆ ಮಾತು ಮಾತ್ರ ಆಗಿರಲಿಲ್ಲ. ಸೇನೆಯ ಬಗ್ಗೆ, ಸೈನಿಕರ ಬಗ್ಗೆ ಅಭಿಮಾನ ಹೊಂದಿದ್ದ ಮತ್ತು ದೇಶ ಸೇವೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಪಾಟೇಕರ್ ಒಳಗಿನ ವ್ಯಕ್ತಿ ಆ ಅವಕಾಶವನ್ನು ಸೇನೆಯೊಟ್ಟಿಗೆ ಕಳೆಯಲು ಬಳಸಿಕೊಂಡರು. ಅವರ ಆ ಒಲವು ಸಿನಿಮಾದ ಚಿತ್ರೀಕರಣಕ್ಕಷ್ಟೆ ಸೀಮಿತಗೊಳ್ಳಲಿಲ್ಲ.

1999ರಲ್ಲಿ ದೇಶವು ಕಾರ್ಗಿಲ್ ಯುದ್ಧದ ಬೆಂಕಿಯಲ್ಲಿತ್ತು. ಇಂಥಾ ಸಮಯದಲ್ಲಿ ಯಾರಾದರೂ ಬೆಚ್ಚನೆಯ ಜಾಗದಲ್ಲಿ ನಿಂತು ದೇಶಭಕ್ತಿಯ ಭಾಷಣ ಬಿಗಿಯುವುದು ಸುಲಭ. ಅದರಲ್ಲೂ ಆಕ್ಷನ್‌ ಕಟ್‌ ಗದ್ದಲಗಳು, ಮೇಕಪ್‌ಗಳ ಭಾರಗಳಲ್ಲಿ ಮುಳುಗಿಹೋದ ನಟರು ದೇಶಪ್ರೇಮದ ಬಗ್ಗೆ ಸ್ಟುಡಿಯೊದಲ್ಲಿ ನಿಂತು ಸಂಭಾಷಣೆ ಹೇಳಿ ಸುಮ್ಮನಾಗುವುದು ಬಹಳ ಸುಲಭ. ಆದರೆ ನಾನಾ ಹಾಗೆ ಮಾಡಲಿಲ್ಲ. ಅವರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಸಂಪರ್ಕಿಸಿದರು. ಸೈನಿಕರೊಂದಿಗೆ ಯುದ್ಧಭೂಮಿಗೆ ಹೋಗಲು ಅವಕಾಶ ಕೇಳಿದರು. ಅನುಮತಿ ದೊರೆಯಿತು. ಅದರ ನಂತರ ಸುಮಾರು 60 ದಿನಗಳ ಕಾಲ ಅವರು ಸೈನಿಕರೊಂದಿಗೆ ಇದ್ದು ಬಂದರು. ಕ್ವಿಕ್ ರಿಯಾಕ್ಷನ್ ಟೀಮ್‌ನ ಭಾಗವಾಗಿದ್ದೆ ಎಂದು ಅವರು ತಮ್ಮ ಅನುಭವ ನೆನಪಿಸಿಕೊಂಡಿದ್ದರು. ಅದು ಸಿನಿಮಾದ ದೃಶ್ಯವಲ್ಲ. ಕ್ಯಾಮೆರಾ ಇರಲಿಲ್ಲ. ನಿರ್ದೇಶಕ ಇರಲಿಲ್ಲ. ಅಪಾಯ ಕುತ್ತಿಗೆ ಸನಿಹಕ್ಕೆ ಬಂದಾಗ ‘ಕಟ್’ ಎಂದು ಹೇಳುವವರೂ ಇರಲಿಲ್ಲ. ಆದರೂ ಒಬ್ಬ  ನಟ ಸೈನಿಕರ ಬದುಕನ್ನು ಸಮೀಪದಿಂದ ನೋಡುತ್ತಿದ್ದ.

ರಂಗಭೂಮಿ ನಂಟಿನ ಕಾರಣಕ್ಕೆ ನಟನೆಯ ಬಗ್ಗೆ ಅವರಿಗೆ ಅಪಾರ ಬದ್ಧತೆ. ನಟಿಸುವ ಪಾತ್ರಕ್ಕೆ ನ್ಯಾಯ ಒದಗಿಸಬೇಕಾದರೆ ಮೊದಲು ಆ ಪಾತ್ರವನ್ನು ಬದುಕಲು ಯತ್ನಿಸಬೇಕು ಎನ್ನುವ ಸಿದ್ದಾಂತದ ಇದೇ ನಟ ಕೆಲವೊಮ್ಮೆ ಸೆಟ್‌ಗಳಲ್ಲಿ ಸಹೋದ್ಯೋಗಿಗಳ ಜೊತೆ ಜಗಳ ಕಾದಿದ್ದೂ ಉಂಟು.

ಜಟಾಪಟಿಯಲ್ಲಿ ಹರಿದುಹೋಯ್ತು ಕುರ್ತಾ!

ಅದು ಪರಿಂಧಾ ಚಿತ್ರದ ಚಿತ್ರೀಕರಣದ ಸಮಯ. ನಿರ್ದೇಶಕ ವಿನೋದ್‌ ಚೋಪ್ರಾ ಜೊತೆ ಸಣ್ಣದಾಗಿ ಶುರುವಾದ ಮಾತಿನ ಚಕಮಕಿ ಜಗಳಕ್ಕೆ ತಿರುಗಿಕೊಂಡು, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಅಸಲಿಗೆ ಆಗಿದ್ದಿಷ್ಟು. ಪರಿಂದಾ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ತಯಾರಾಗುತ್ತಿದ್ದ ಸಿನಿಮಾಗಿದ್ದರಿಂದ ಕಲಾವಿದರು, ತಂತ್ರಜ್ಞರು ಮನೆಯಿಂದಲೇ ಊಟ ತರಬೇಕಾಗಿತ್ತು. ಅವತ್ತು ನಾನಾ, ಅದನ್ನು ಮರೆತು ಛೋಪ್ರಾ ಬಳಿ ಊಟ ಇನ್ನೂ ತರಿಸಿಲ್ಲವೇ ಎಂದು ಕೇಳುತ್ತಾರೆ. ಆಗ ತೀಕ್ಷ್ಣವಾಗಿ ಪ್ರಕ್ರಿಯಿಸುವ ಛೋಪ್ರಾ, “ಯಾಕೆ ನಿಮ್ಮ ಮನೆಯಿಂದ ತರಲಿಲ್ಲವೇ?” ಎಂದಿದ್ದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯ್ತು. ಜಗಳ ಪರಸ್ಪರ ತಳ್ಳಾಟಕ್ಕೂ ತಲುಪಿತು. ಆ ತಳ್ಳಾಟದಲ್ಲಿ ಅಕಸ್ಮಾತ್ತಾಗಿ ನಿರ್ದೇಶಕ ಚೋಪ್ರಾ ನಾನಾ ಧರಿಸಿದ್ದ ಕುರ್ತಾವನ್ನು ಹರಿದುಬಿಡುತ್ತಾರೆ. ಕೆಲವರು ಹೇಳುವ ಪ್ರಕಾರ, ದಣಿದಿದ್ದ ನಾನಾ ಅವತ್ತು ಬೇಗ ಮನೆಗೆ ಹೋಗುವೆ ಎಂದು ಕೇಳಿದಾಗ, ದಿನದ ಓವರ್‍‌ಹೆಡ್‌ ವೆಚ್ಚವನ್ನು ನೀವೆ ಕೊಟ್ಟು ಹೋಗಿ ಎಂದು ಚೋಪ್ರಾ ಹೇಳಿದ್ದು ಜಗಳಕ್ಕೆ ಕಾರಣ ಎನ್ನಲಾಗುತ್ತೆ. ಕಾರಣ ಏನೇ ಇದ್ದರೂ, ಅವತ್ತು ಜಗಳ ಆಗಿದ್ದಂತೂ ಸತ್ಯ.

ನಿಜವಾದ ಟ್ವಿಸ್ಟ್‌ ಆಗ ಎದುರಾಯ್ತು. ಸೆಟ್‌ನ ಆಚೆ ನಡೆಯುತ್ತಿದ್ದ ಈ ಗಲಾಟೆಯ ಅರಿವಿರದ ಛಾಯಾಗ್ರಾಹಕ ಬಿನೋದ್ ಪ್ರಧಾನ್ ಶಾಟ್ ಸಿದ್ಧವಾಗಿದೆ ಎಂದು ಕೂಗುತ್ತಾರೆ. ಅಲ್ಲಿ ನಡೆಯುತ್ತಿದ್ದುದು ಒಂದು ದುಃಖ ಭರಿತ ದೃಶ್ಯದ ಚಿತ್ರೀಕರಣ. ಸಿನಿಮಾದಲ್ಲಿ ನಾನಾ ಅವರದ್ದು ಒಬ್ಬ ಭೂಗತ ವ್ಯಕ್ತಿಯ ಪಾತ್ರ. ಆ ಪಾತ್ರದ ಹೆಂಡತಿಯ ಕೊಲೆಯಾಗಿರುತ್ತದೆ. ಸಾವಿನ ಮುಂದೆ  ದುಃಖ, ಆಘಾತ ಮತ್ತು ಅಸಹಾಯಕತೆಯನ್ನು ತೋರಿಸಬೇಕಿದ್ದ ಸನ್ನಿವೇಶ ಅದು. ಛಾಯಾಗ್ರಾಹಕ ಶಾಟ್‌ ರೆಡಿ ಎನ್ನುತ್ತಿದ್ದಂತೆಯೇ ತನ್ನ ಈ ಅಸ್ತವ್ಯಸ್ತ ಬಟ್ಟೆ, ಮನಸ್ಥಿತಿ, ದುಃಖ, ಸಿಟ್ಟಿನಲ್ಲೆ ನಟನೆಗೆ ತೊಡಗುವ ನಾನಾ, ಅದನ್ನು ಸಹಜವಾಗಿ ನಟಿಸುತ್ತಾರೆ.  ಚೋಪ್ರಾ ಅವರ ಪ್ರಕಾರ, ಕ್ಯಾಮೆರಾ ಆನ್ ಆದಾಗ ನಾನಾ ಅವರ ಕಣ್ಣಲ್ಲಿ ಕಾಣುವ ಕಣ್ಣೀರು ಕೂಡ ನಿಜವಾದದ್ದು. ಕೆಲವೇ ಕ್ಷಣಗಳ ಹಿಂದೆ ನಿರ್ದೇಶಕನೊಂದಿಗೆ ನಡೆದ ಜಗಳದ ಭಾವನಾತ್ಮಕ ತೀವ್ರತೆ ಇನ್ನೂ ಅವರೊಳಗಿತ್ತು. ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡು ಜಗಳ ಮುಗಿಸಿಕೊಂಡರು. ನಾನಾ ತಮಗೆ ಆ ದೃಶ್ಯದ ಬಗ್ಗೆ ಭಯವಾಗಿತ್ತು/ತಾವು nervous ಆಗಿದ್ದೆ ಎಂದು ಹೇಳಿದರೆಂದು ಚೋಪ್ರಾ ನೆನಪಿಸಿಕೊಂಡಿದ್ದರು.

₹1.5 ಕೋಟಿ ಕಾರು ಬೇಡವೆಂದ ನಟ

ನಾನಾ ಅವರ ಕಥೆ ಇಲ್ಲಿ ಸಿನಿಮಾದಿಂದ ಸಮಾಜದತ್ತ ಹೊರಳಿಕೊಳ್ಳುತ್ತದೆ. ಅವರೊಂದಿಗೆ ಕೆಲಸ ಮಾಡಿದ ಬರಹಗಾರರೊಬ್ಬರು ಹೇಳುವಂತೆ, ಒಮ್ಮೆ ಅವರಿಗೆ ನಿರ್ಮಾಪಕರು  ₹1.5 ಕೋಟಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಲು ಮುಂದಾಗುತ್ತಾರೆ. ಆದರೆ ನಾನಾ ಅದನ್ನು ಸ್ವೀಕರಿಸಲು ನಿರಾಕರಿಸಿ,  ಆ ಹಣವನ್ನು ರೈತರಿಗೆ ನೀಡುವಂತೆ ಸೂಚಿಸಿದರು. ಕಷ್ಟದಲ್ಲಿ ಬೆಳೆದು ಬಂದಿದ್ದ ನಾನಾ ಪಾಟೇಕರ್‍‌ ಅವರಿಗೆ ರೈತರ ಸಂಕಟಗಳ ಬಗ್ಗೆ ಅದೇನೊ ಒಂಥರಾ ಮರುಕ. ಆ ಮರುಕ ಕೇವಲ ತೋರಿಕೆಗೆ ಸೀಮಿತವಾಗಿ ಉಳಿಯಲಿಲ್ಲ. ಮಕರಂದ್ ಅನಾಸ್ಪುರೆ ಅವರೊಂದಿಗೆ ಸೇರಿ NAAM Foundation ಸ್ಥಾಪಿಸಿದರು. ರೈತರ ಆತ್ಮಹತ್ಯೆ, ಬರ, ನೀರಿನ ಸಮಸ್ಯೆ ಮತ್ತು ಗ್ರಾಮೀಣ ಪುನರ್‌ನಿರ್ಮಾಣದಂತಹ ವಿಚಾರಗಳಲ್ಲಿ ಈ ಸಂಸ್ಥೆ ಕೆಲಸ ಮಾಡತೊಡಗಿತು. ಸಿನಿಮಾದಲ್ಲಿ ರೈತನ ನೋವನ್ನು ಅಭಿನಯಿಸುವುದಕ್ಕಿಂತ, ರೈತನ ಬದುಕಿನ ಸಮಸ್ಯೆಗಳನ್ನು ಎದುರಿಸುವುದೇ ಅವರಿಗೆ ಮುಖ್ಯವಾಗಿತ್ತು.

ಹಾಗಾಗಿ, ತಮ್ಮ ಇಳಿ ವಯಸ್ಸಿನಲ್ಲಿ ಮುಂಬೈನ ಮೋಹವನ್ನು ತುಂಡರಿಸಿಕೊಂಡು ಕೃಷಿಯತ್ತ ಹೊರಳಿದ್ದರು.  27 ಎಕರೆ ಹೊಲ ಖರೀದಿಸಿ ಭತ್ತ, ಗೋಧಿ, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಹಸು, ಎತ್ತು, ನಾಯಿಗಳ ನಡುವೆ ಗ್ರಾಮೀಣ ಬದುಕಿನ ಸರಳತೆಯನ್ನು ಅವರು ಇಷ್ಟಪಡುತ್ತಿದ್ದರು.

ಹೀಗೆ ನಟನೆಯಲ್ಲಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ವಿಶಿಷ್ಟವಾಗಿ ಬದುಕುತ್ತಾ ಬಂದ ನಾನಾ ಪಾಟೇಕರ್‍‌ ಅವರನ್ನು ಒಂದೇ ಪದದಲ್ಲಿ ವ್ಯಾಖ್ಯಾನಿಸುವುದು ಕಷ್ಟ. ಅವರು ಕೋಪಿಷ್ಠರೂ ಹೌದು. ಅದೇ ಸಮಯದಲ್ಲಿ ಮೃದು ಹೃದಯದವರೂ ಹೌದು. ಅವರು ಗಂಭೀರ ನಟರೂ ಹೌದು. ಅದೇ ಸಮಯದಲ್ಲಿ ‘ಉದಯ್ ಶೆಟ್ಟಿ’ಯಂತಹ ಪಾತ್ರದಲ್ಲಿ ಹುಚ್ಚೆದ್ದು ನಗಿಸುವ ಕಾಮಿಡಿಯನ್ ಕೂಡ ಹೌದು. ಅವರು ಸೈನಿಕನ ಪಾತ್ರ ಮಾಡಿದ ನಟ ಮಾತ್ರವಲ್ಲ—ಕಾರ್ಗಿಲ್‌ನ ಸೈನಿಕರ ನಡುವೆ ನಿಜವಾಗಿ ನಿಂತ ವ್ಯಕ್ತಿ. ಅವರು ರೈತನ ಪಾತ್ರ ಮಾಡಿದ ನಟ ಮಾತ್ರವಲ್ಲ—ರೈತರಿಗಾಗಿ ಕೆಲಸ ಮಾಡಿದ ಸಮಾಜಮುಖಿ. ಅವರು ಕೋಟ್ಯಂತರ ರೂಪಾಯಿ ಗಳಿಸಿದ ತಾರೆ ಮಾತ್ರವಲ್ಲ—₹35ರಿಂದ ತನ್ನ ಬದುಕು ಆರಂಭಿಸಿದ ಹುಡುಗ.

ಅದಕ್ಕಾಗಿಯೇ ನಾನಾ ಪಾಟೇಕರ್‌ರ ಕಥೆಯನ್ನು ಕೇವಲ ಅವರ ಸಿನಿಮಾ ಕ್ರೊನಾಲಜಿ ಮೂಲಕ ಮಾತ್ರ ಹೇಳಲು ಮುಂದಾದರೆ ಅದರು ಅಪೂರ್ಣವೆನಿಸುತ್ತದೆ. ಪರದೆಯ ಮೇಲೆ ಕಾಣಿಸಿಕೊಂಡಿದ್ದಕ್ಕಿಂತ ವಿಶಿಷ್ಟವಾಗಿ ಪರದೆಯ ಹಿಂದೆಯೂ ಬದುಕಿದವರು. ಇಷ್ಟೆಲ್ಲ ಆಕ್ಟಿವ್‌ ಆಗಿದ್ದ ಬದುಕಿಗೆ, ಅವರ ಹೃದಯವೇ `ಕಟ್‌’ ಹೇಳಿ ಶಾಶ್ವತ ವಿಶ್ರಾಂತಿ ಕೊಟ್ಟಿದೆ. ಹೋಗಿ ಬನ್ನಿ, ನಾನಾ…. ನಿಮ್ಮ ಮ್ಯಾನರಿಸಂನಿಂದ ಮಾತ್ರ ಅಲ್ಲ; ನಿಮ್ಮ ಮಾನವೀಯ ಗುಣದಿಂದಲೂ ನೆನಪಿನಲ್ಲಿರುತ್ತೀರಿ!

Leave a Reply

Your email address will not be published. Required fields are marked *