ಮತದಾರರ ಪಟ್ಟಿಯ ಪರಿಷ್ಕರಣೆ ಎನ್ನುವುದು ಚುನಾವಣಾ ವ್ಯವಸ್ಥೆಯ ಸಹಜ ಪ್ರಕ್ರಿಯೆ. ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರ ಹೆಸರುಗಳನ್ನು ಗುರುತಿಸಿ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯವೂ ಹೌದು. ಆದರೆ ಇದೇ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳು ಅಸಮಾನ ಪ್ರಮಾಣದಲ್ಲಿ ಹೊರಗುಳಿಯುತ್ತಿರುವುದು ಕಂಡುಬಂದರೆ, ಸಹಜವಾಗಿಯೇ ಅನುಮಾನಗಳು ಮೂಡುತ್ತವೆ. ಇದು ಸಾಮಾನ್ಯ ಪರಿಷ್ಕರಣೆಯೇ, ಅಥವಾ ಅದರೊಳಗೆ ನಿರ್ದಿಷ್ಟ ಸಮುದಾಯದ ಮತದಾರರ ಗುರಿಪಡಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಈಗ ದೇಶದ ಹಲವು ಭಾಗಗಳಲ್ಲಿ ಕೇಳಿಬರುತ್ತಿದೆ.
ಕರ್ನಾಟಕದ ಎಸ್ಐಆರ್ನಲ್ಲಿ ಫಾರ್ಮ್-7 ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಈ ಚರ್ಚೆಗೆ ಹೊಸ ಆಯಾಮ ನೀಡಿವೆ. ಬಬಲೇಶ್ವರದಲ್ಲಿ 1,682 ಹಾಗೂ ಭಾಲ್ಕಿಯಲ್ಲಿ 2,928 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿರುವುದು ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಅರ್ಜಿಗಳಲ್ಲಿ ಬಹುಪಾಲು ಹೆಸರುಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದವು ಎಂದು ವರದಿಗಳು ಹೇಳಿವೆ. ಬಬಲೇಶ್ವರದಲ್ಲಿ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಗಳನ್ನು ಹೊರತುಪಡಿಸಿ ಬಹುತೇಕ ಸಾಮೂಹಿಕ ಅರ್ಜಿಗಳನ್ನು ನಂತರ ಹಿಂಪಡೆಯಲಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.
ಇಲ್ಲಿ ಮುಖ್ಯ ಸಂಗತಿ ಅರ್ಜಿಗಳ ಸಂಖ್ಯೆ ಮಾತ್ರವಲ್ಲ. ಒಂದೇ ವ್ಯಕ್ತಿಯಿಂದ ನೂರಾರು ಅರ್ಜಿಗಳು ಸಲ್ಲಿಕೆಯಾಗಿರುವುದು, ಒಂದೇ ರೀತಿಯ ಕಾರಣಗಳನ್ನು ನೀಡಿ ದೊಡ್ಡ ಸಂಖ್ಯೆಯ ಮತದಾರರ ವಿರುದ್ಧ ಆಕ್ಷೇಪಣೆ ವ್ಯಕ್ತವಾಗಿರುವುದು ಮತ್ತು ಆಕ್ಷೇಪಣೆಗೆ ಒಳಗಾದವರೆಲ್ಲ ಒಂದೇ ಸಮುದಾಯಕ್ಕೆ ಸೇರಿರುವುದು. ಕೆಲವು ಪ್ರಕರಣಗಳಲ್ಲಿ ಬಿಎಲ್ಎ2ಗಳ ಹೆಸರು ಅಥವಾ ವಿವರಗಳನ್ನು ಬಳಸಲಾಗಿದೆ ಎಂಬ ಆರೋಪಗಳು ಪ್ರಕ್ರಿಯೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಭಾಲ್ಕಿಯಲ್ಲಿ ಹಲವು ವರ್ಷಗಳಿಂದ ಒಂದೇ ವಿಳಾಸದಲ್ಲಿ ವಾಸಿಸುತ್ತಿರುವ ಮತದಾರರ ವಿರುದ್ಧವೂ ಅವರು ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿ ಫಾರ್ಮ್-7 ಸಲ್ಲಿಕೆಯಾಗಿರುವ ಪ್ರಕರಣಗಳು ವರದಿಯಾಗಿವೆ.

ಇಂತಹ ಬೆಳವಣಿಗೆಗಳು ಎದುರಾದಾಗ ಫಾರ್ಮ್-7ರ ಉದ್ದೇಶದ ಬಗ್ಗೆಯೇ ಚಿಂತಿಸಬೇಕಾಗುತ್ತದೆ. ನಿಜವಾಗಿಯೂ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕಲು, ಮೃತರ ಹೆಸರುಗಳನ್ನು ಪರಿಷ್ಕರಿಸಲು ಅಥವಾ ನಕಲಿ ನೋಂದಣಿಗಳನ್ನು ಪತ್ತೆಹಚ್ಚಲು ಇರುವ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಜೀವಂತ ಮತದಾರರ ವಿರುದ್ಧ ಬಳಸಲ್ಪಡುತ್ತಿದ್ದರೆ, ಅದರ ಹಿಂದೆ ಇರುವ ಮಾಹಿತಿಯ ಮೂಲವನ್ನು ಪರಿಶೀಲಿಸುವ ಅಗತ್ಯವಿದೆ. ಅರ್ಜಿದಾರರು ಆ ಮತದಾರರನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದರೇ? ಅರ್ಜಿಗಳಲ್ಲಿರುವ ವಿಳಾಸ ಮತ್ತು ಇತರ ವಿವರಗಳು ಅವರಿಗೆ ಹೇಗೆ ದೊರಕಿದವು? ಒಂದೇ ಮಾದರಿಯಲ್ಲಿ ನೂರಾರು ಅರ್ಜಿಗಳು ಬಂದಿರುವುದಕ್ಕೆ ಕಾರಣವೇನು? ಅದೂ ಕೂಡ ಪೂರ್ವ ಮುದ್ರಿತ ರೂಪದಲ್ಲಿ. ಇವು ಈಗ ತನಿಖೆ ಮತ್ತು ದಾಖಲೆಗಳ ಮೂಲಕ ಉತ್ತರಿಸಬೇಕಾದ ಪ್ರಶ್ನೆಗಳು.
ಆದರೆ ಕರ್ನಾಟಕದ ಬೆಳವಣಿಗೆಯನ್ನು ಪ್ರತ್ಯೇಕ ಘಟನೆ ಎಂದು ನೋಡಿದರೆ ಈ ಚರ್ಚೆಯ ವ್ಯಾಪ್ತಿ ಅರ್ಥವಾಗುವುದಿಲ್ಲ. ಬಿಹಾರದ ಎಸ್ಐಆರ್ ಸಂದರ್ಭದಲ್ಲಿ ಸುಮಾರು 65 ಲಕ್ಷ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದವು. ಚುನಾವಣಾ ಆಯೋಗದ ಪ್ರಕಾರ, ಇದಕ್ಕೆ ಮರಣ, ಶಾಶ್ವತ ಸ್ಥಳಾಂತರ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಸೇರಿದಂತೆ ಹಲವು ಕಾರಣಗಳಿದ್ದವು. ಆದರೆ ಇಷ್ಟು ದೊಡ್ಡ ಪ್ರಮಾಣದ ಹೆಸರುಗಳು ಹೊರಗುಳಿದಾಗ, ಆ ಪ್ರಕ್ರಿಯೆಯ ಸಾಮಾಜಿಕ ಪರಿಣಾಮವೇನು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಯಿತು.
ಅದರಲ್ಲೂ ಮುಸ್ಲಿಂ ಮತದಾರರ ಪ್ರಮಾಣದ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಡೆಸಿದ ವಿಶ್ಲೇಷಣೆ ದೇಶದ ಗಮನ ಸೆಳೆಯಿತು. ಎಡಿಆರ್ ಪ್ರಕಾರ, ಕರಡು ಪಟ್ಟಿಯಿಂದ ಹೊರಗುಳಿದ 65 ಲಕ್ಷ ಮತದಾರರಲ್ಲಿ ಸುಮಾರು ಶೇ.25ರಷ್ಟು ಮಂದಿ ಮುಸ್ಲಿಮರು ಎಂದು ಹೆಸರು ಗುರುತಿಸುವ ತಂತ್ರಾಂಶದ ಆಧಾರದ ಮೇಲೆ ಅಂದಾಜಿಸಲಾಗಿತ್ತು. ಅಂತಿಮವಾಗಿ ಅಳಿಸಲಾದ ಸುಮಾರು 3.66 ಲಕ್ಷ ಮತದಾರರಲ್ಲಿ ಮುಸ್ಲಿಮರ ಪಾಲು ಸುಮಾರು ಶೇ.34 ಎಂದು ಅದೇ ವಿಶ್ಲೇಷಣೆ ಹೇಳಿತ್ತು. ಬಿಹಾರದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಸುಮಾರು ಶೇ.17ರಷ್ಟಿದೆ ಎಂಬುದನ್ನು ಗಮನಿಸಬೇಕು.
ಈ ಅಂಕಿಅಂಶಗಳು ಒಂದು ಗಂಭೀರ ಪ್ರಶ್ನೆಯನ್ನು ಮುಂದಿಡುತ್ತವೆ. ಜನಸಂಖ್ಯೆಯಲ್ಲಿ ಸುಮಾರು ಶೇ.17ರಷ್ಟಿರುವ ಸಮುದಾಯವು ಹೊರಗುಳಿದ ಮತದಾರರಲ್ಲಿ ಶೇ.25 ಮತ್ತು ಅಂತಿಮವಾಗಿ ಅಳಿಸಲಾದವರಲ್ಲಿ ಶೇ.34ರಷ್ಟಿದೆ ಎಂದು ವಿಶ್ಲೇಷಣೆ ಹೇಳುತ್ತಿದ್ದರೆ, ಈ ಅಸಮಾನತೆಯ ಹಿಂದೆ ಇರುವ ಕಾರಣಗಳನ್ನು ಪರಿಶೀಲಿಸಬೇಕಲ್ಲವೇ?
ಪಶ್ಚಿಮ ಬಂಗಾಳದ ನಂದಿಗ್ರಾಮ್ನ ಅಂಕಿಅಂಶಗಳು ಈ ಚರ್ಚೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತವೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ದತ್ತಾಂಶವನ್ನು ಎಸ್ಎಬಿಎಆರ್ ಇನ್ಸ್ಟಿಟ್ಯೂಟ್ ವಿಶ್ಲೇಷಿಸಿದಾಗ, ಎಸ್ಐಆರ್ನ ಏಳು ಪೂರಕ ಪಟ್ಟಿಗಳಲ್ಲಿ ಅಳಿಸಲಾದ ಹೆಸರುಗಳ ಪೈಕಿ ಶೇ.95.5ರಷ್ಟು ಮುಸ್ಲಿಮರದ್ದು ಎಂದು ಕಂಡುಬಂದಿದೆ. ನಂದಿಗ್ರಾಮ್ನ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಸುಮಾರು ಶೇ.25ರಷ್ಟಿದೆ. ಈ ಅಂಕಿಅಂಶಗಳ ಪ್ರಕಾರ, ಜನಸಂಖ್ಯೆಯ ಕಾಲುಭಾಗದಷ್ಟಿರುವ ಸಮುದಾಯವು ಕೆಲವು ಪೂರಕ ಪಟ್ಟಿಗಳಲ್ಲಿ ಅಳಿಸಲಾದ ಮತದಾರರ ಪೈಕಿ ಬಹುಪಾಲು ಭಾಗವನ್ನು ಹೊಂದಿದೆ.

ಇದನ್ನು ಸಾಮಾನ್ಯ ಪ್ರಕ್ರಿಯೆ ಎಂದು ಬದಿಗೊತ್ತಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಈ ಅಂಕಿಅಂಶವು ಎಸ್ಎಬಿಎಆರ್ ಇನ್ಸ್ಟಿಟ್ಯೂಟ್ ಮಾಡಿರುವ ಚುನಾವಣಾ ಆಯೋಗದ ದತ್ತಾಂಶದ ವಿಶ್ಲೇಷಣೆಯಾಗಿದೆ ಎಂಬುದನ್ನೂ ಗಮನಿಸಬೇಕು.
ಕರ್ನಾಟಕ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಈ ಬೆಳವಣಿಗೆಗಳನ್ನು ಒಟ್ಟಿಗೆ ನೋಡಿದಾಗ ಒಂದು ಸಾಮಾನ್ಯ ಅಂಶ ಗಮನಕ್ಕೆ ಬರುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಹೆಸರುಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವುದು ಕೇವಲ ಇಂದು ಆಡಳಿತಾತ್ಮಕ ಪ್ರಕ್ರಿಯೆಯಷ್ಟೇ ಅಲ್ಲ. ಅದರ ನೇರ ಪರಿಣಾಮ ಒಬ್ಬ ವ್ಯಕ್ತಿಯ ಮತದಾನದ ಹಕ್ಕಿನ ಮೇಲೆ ಬೀಳುತ್ತದೆ. ಹೀಗಾಗಿ ಒಂದು ನಿರ್ದಿಷ್ಟ ಸಮುದಾಯದ ಹೆಸರುಗಳು ಅಸಾಮಾನ್ಯ ಪ್ರಮಾಣದಲ್ಲಿ ಹೊರಗುಳಿಯುತ್ತಿರುವುದಾಗಿ ಅಂಕಿಅಂಶಗಳು ಸೂಚಿಸಿದಾಗ, ಆ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಸಾರ್ವಜನಿಕವಾಗಿ ವಿವರಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ.
ಇದೇ ಕಾರಣಕ್ಕೆ ಕರ್ನಾಟಕದ ಫಾರ್ಮ್-7 ಪ್ರಕರಣಗಳು ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತವೆ. ಒಬ್ಬ ವ್ಯಕ್ತಿ ಪೂರ್ವ ಮುದ್ರಿತವಾದ ನೂರಾರು ಅರ್ಜಿಗಳನ್ನು ಸಲ್ಲಿಸಿದ್ದರೆ, ಆ ಅರ್ಜಿಗಳ ಮಾಹಿತಿಯ ಮೂಲವೇನು ಎಂಬುದು ತಿಳಿಯಬೇಕು. ಬೇರೆಯವರ ಹೆಸರನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿರುವ ಆರೋಪಗಳಿದ್ದರೆ, ಅವುಗಳ ತನಿಖೆಯಾಗಬೇಕು. ಒಂದೇ ಪ್ರದೇಶದಲ್ಲಿ ಒಂದೇ ಸಮುದಾಯದ ಮತದಾರರ ವಿರುದ್ಧ ಅಸಾಮಾನ್ಯ ಪ್ರಮಾಣದಲ್ಲಿ ಆಕ್ಷೇಪಣೆಗಳು ಬಂದಿದ್ದರೆ, ಆ ಮಾದರಿಯನ್ನು ಅಧಿಕಾರಿಗಳು ಗಮನಿಸಿದ್ದಾರೆಯೇ ಎಂಬುದೂ ಸ್ಪಷ್ಟವಾಗಬೇಕು. ಏಕೆಂದರೆ ಫಾರ್ಮ್-7ರ ಅಂತಿಮ ಪರಿಣಾಮ ಒಬ್ಬ ವ್ಯಕ್ತಿಯ ಮತದಾನದ ಹಕ್ಕಿನ ಮೇಲಾಗುತ್ತದೆ ಎಂಬುದನ್ನು ಮರೆಯಬಾರದು.
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶವನ್ನು ಯಾರೂ ಪ್ರಶ್ನಿಸಬೇಕಾಗಿಲ್ಲ. ಅಕ್ರಮವಾಗಿ ನೋಂದಣಿಯಾಗಿರುವ ಹೆಸರುಗಳಿದ್ದರೆ ಅವುಗಳನ್ನು ತೆಗೆದುಹಾಕಬೇಕು. ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಗುರುತಿಸಬೇಕು. ಆದರೆ ಅದೇ ಪ್ರಕ್ರಿಯೆಯಲ್ಲಿ ಅರ್ಹ ಮತದಾರನ ಹೆಸರು ತಪ್ಪಾಗಿ ಅಳಿಸಲ್ಪಟ್ಟರೆ, ಅದನ್ನು ಚುನಾವಣಾ ವ್ಯವಸ್ಥೆಯ ಸಣ್ಣ ಆಡಳಿತಾತ್ಮಕ ದೋಷವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಒಂದೋ ಅದು ಬೇಜವಾಬ್ದಾರಿಯ ನಡೆ, ಉದ್ದೇಶಪೂರ್ವಕವಾಗಿದ್ದರೆ ಅದು ಸಂವಿಧಾನದ ವಿರುದ್ಧದ ನಡೆ ಎಂಬುದಾಗಿ ಪರಿಗಣಿಸಬೇಕಾಗುತ್ತದೆ.
ಆದ್ದರಿಂದ ವಿರೋಧ ಪಕ್ಷಗಳು ಚರ್ಚೆಯನ್ನು ಎಸ್ಐಆರ್ ಪರ ವಿರೋಧವೆಂಬಂತೆ ಎಂಬ ಸರಳ ರಾಜಕೀಯ ಚರ್ಚೆಯನ್ನಾಗಿಸದೆ ಪರಿಷ್ಕರಣೆಯ ವಿಧಾನ ಎಷ್ಟು ಪಾರದರ್ಶಕವಾಗಿದೆ, ಅರ್ಜಿಗಳ ಹಿಂದೆ ಇರುವ ಮಾಹಿತಿಯನ್ನು ಹೇಗೆ ಪರಿಶೀಲಿಸಲಾಗುತ್ತಿದೆ, ಹೆಸರು ಅಳಿಸುವ ಮೊದಲು ಮತದಾರನಿಗೆ ಎಷ್ಟು ಅವಕಾಶ ನೀಡಲಾಗುತ್ತಿದೆ ಮತ್ತು ಈ ಪ್ರಕ್ರಿಯೆ ಯಾವುದೇ ಸಮುದಾಯವನ್ನು ಗುರಿಪಡಿಸಲಾಗುತ್ತಿದೆಯೇ ಎಂಬುದರ ಸುತ್ತ ನಡೆಯಬೇಕು.

ಲೇಖಕರು ಮುಸ್ಲಿಂ ಸಮುದಾಯದ ಸಂವೇದನಾಶೀಲ ಕವಿ, ಕತೆಗಾರ ಮತ್ತು ಅನುವಾದಕ. ‘ಇಶಾರ’ ಪಾಕ್ಷಿಕ ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ರೂಮಿ ಕತೆಗಳು’ ಅವರ ಇತ್ತೀಚೆಗೆ ಪ್ರಕಟವಾದ ಕೃತಿ. ಇವರ ಸಾಹಿತ್ಯ ಕೃಷಿಗೆ ಸುನ್ನಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
