ನಮ್ಮೊಳಗೇ ನೆಲೆಸಿರುವ ಗಾಂಧಿ!

ನಾಗಮಂಗಲದ ಟಿ ಬಿ ಬಡಾವಣೆಯಲ್ಲಿರುವ ಜವರೇಗೌಡ ತನ್ನ ಜಮೀನಿನಲ್ಲೆ ಮನೆ ಕಟ್ಟಿಕೊಂಡಿದ್ದಾನೆ. ಪಕ್ಕದಲ್ಲಿರುವ ಸೈಟು ಮಾರಿದರೆ ತನ್ನ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆಂದು ಐದು ಲಕ್ಷಕ್ಕೆ ಮಾರಿದ. ಕೊಂಡವನು ಹಣ ಕೊಡುವುದು ತಡವಾಯ್ತು. ಅಷ್ಟರಲ್ಲಿ ಇನ್ನೊಬ್ಬ ಬಂದು “ಏಳು ಲಕ್ಷ ಕೊಡ್ತೀನಿ ಸೈಟು ನನಿಕ್ಕೊಡು” ಎಂದ. ಮನೆ ಮುಂದೆ ಅದೂ ಇದು ಕೆಲಸ ಮಾಡುತ್ತಿದ್ದ ಜವರೇಗೌಡ ಏನೋ ಹೊಳೆದಂತೆ ಹಠಾತ್ತನೆ ಬಂದು, “ಯಂತ ಮಾತಾಡ್ತಿಯಯ್ಯ ನೀನು. ನಾನವುನಿಗೆ ಐದು ಲಕ್ಷಕ್ಕೆ ಸೈಟು ಕೊಟ್ಟಿದಿನಿ. ಅದರ ಮ್ಯಾಲೆ ಎರಡು ಲಕ್ಷ ಜಾಸ್ತಿ ಕೊಡಕ್ಕೆ ಬಂದಿದ್ದೀಯಲ್ಲಾ ನಾನವುನಿಗೆ ಮಾತು ಕೊಟ್ಟಿದ್ದೆ. ಮಾತು ಕೊಟ್ಟ ಮ್ಯಾಲೆ ತಪ್ಪಕ್ಕಾಯ್ತದ. ನಾಗಮಂಗಲದಲ್ಲಿ ನಾನು ನಿಂತಿದ್ರೆ, ಜನ ನನ್ನ ಕಡಿಕೆ ಕೈತೋರಿ ಮಾತಾಡಂಗೆ ಮಾಡಕ್ಕೆ ಬಂದಿದೀಯಲ್ಲಾ ಯಂತ ಗಿರಸ್ತನಯ್ಯ ನೀನು” ಎಂದ. ಆಗ ನನಗೆ ನಮ್ಮ ಗ್ರಾಮೀಣರಲ್ಲಿ ಗಾಂಧಿ ಇನ್ನು ಬದುಕಿದ್ದಾರೆ ಅನ್ನಿಸಿತು. ಅಷ್ಟೇ ಅಲ್ಲ ಅವರ ಬದುಕಿನಲ್ಲಿ ಗಾಂಧಿ ಹಾಸು ಹೊಕ್ಕಾಗಿದ್ದಾರೆ ಅನ್ನಿಸಿತು. ಆದರೂ ಕಳೆದೆರಡು ದಶಕದಿಂದ ಗಾಂಧಿ ಹತ್ಯೆ ನಡೆಯುತ್ತಲೇ ಇದೆ. ಗಾಂಧಿ ಕೊಂದ ಸಿದ್ದಾಂತ ಇಂದು ವಿಜೃಂಭಿಸುತ್ತಿದೆ. ಅದಕ್ಕಾಗಿ ಗೋಡ್ಸೆ ಗುಡಿ, ಗೋಡ್ಸೆ ಪುಸ್ತಕ ನಿರ್ಮಾಣವಾಗುತ್ತಲೇ ಇವೆ. ಆದರೆ ಗಾಂಧಿಗೆ ಕುಂದು ತರಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಗಾಂಧಿ ಮತ್ತು ಅಂಬೇಡ್ಕರ್‍‌ ಇಬ್ಬರೂ ಈ ದೇಶಕ್ಕೆ ಎರಡು ಕಣ್ಣುಗಳು ಇದ್ದಂತೆ. ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ಯ್ರ ತಂದುಕೊಡಲು ಹೋರಾಡಿದರೆ, ಅಂಬೇಡ್ಕರ್ ಸಂಪಾದಿಸುತ್ತಿದ್ದ ವಿದ್ವತ್ತು ಈ ದೇಶಕ್ಕೆ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ರೂಪಿಸಲು ಸನ್ನದ್ಧವಾಗುತ್ತಿತ್ತು. ಪುರೋಹಿತಶಾಹಿ ವರ್ಗಕ್ಕೆ ಸ್ವಾತಂತ್ರ್ಯ ಮತ್ತು ಸಮಾನತೆ ಇವೆರಡೂ ರುಚಿಸದ ಪದಗಳು. ಹಾಗಾಗಿ ಈ ಇಬ್ಬರನ್ನು ಭಾರತದಿಂದ ಅಳಿಸಿಹಾಕುವ ಪ್ರಯತ್ನಗಳನ್ನು ಮಾಡುತ್ತಾ ಬಂದರು. ಆದರೆ ಇವರಿಬ್ಬರು ಭಾರತದ ಆತ್ಮದೊಂದಿಗೆ ಎಷ್ಟು ಆಳವಾಗಿ ಬೆಸೆದು ಹೋಗಿದ್ದಾರೆಂದರೆ ಆ ಯಾವ ಪ್ರಯತ್ನಗಳು ಯಶಸ್ವಿಯಾಗಲಾರವು. ಇದು ಗೊತ್ತಿದ್ದೇ ಕುತಂತ್ರಿಗಳು, ಅವರಿಬ್ಬರನ್ನು ಪರಸ್ಪರ ದುಶ್ಮನಿಗಳಂತೆ ಚಿತ್ರಿಸಲು ಹೆಣಗಾಡುತ್ತಾ ಬಂದಿದ್ದಾರೆ. ಶತಮಾನಗಳಿಂದ ಹೀಗೆ ನಮ್ಮ ಶಕ್ತಿಗಳನ್ನು ಒಡೆದು ಆಳುತ್ತಾ ಬಂದವರ ಕುತಂತ್ರ ಇದು. ವರ್ಣದ ಹೆಸರಲ್ಲಿ ಒಡೆದರು, ಜಾತಿ ಹೆಸರಲ್ಲಿ ಒಡೆದರು, ಧರ್ಮದ ಹೆಸರಲ್ಲಿ ಒಡೆದರು. ಕೊನೆಗೆ ನಮ್ಮ ಧೀಶಕ್ತಿಗಳಾದ ಈ ಚೇತನಗಳನ್ನೂ ಒಡೆದು ನಮ್ಮನ್ನು ನಿತ್ರಾಣಗೊಳಿಸಲು ನೋಡುತ್ತಿದ್ದಾರೆ. ನಮ್ಮ ಮುಂದಿರುವ ನಿಜವಾದ ಸವಾಲು ಆ ಕುತಂತ್ರಕ್ಕೆ ಬಲಿಯಾಗದಂತೆ ಪಾರಾಗುವುದು. ಈ ನಿಟ್ಟಿನಲ್ಲಿ ಅವರನ್ನು ಎರಡು ಕಣ್ಣುಗಳಿಗೆ ಹೋಲಿಸುವ ರೂಪಕ ಅತ್ಯಂತ ಅರ್ಥಪೂರ್ಣ. ಯಾಕೆಂದರೆ, ನಮ್ಮ ಎರಡು ಕಣ್ಣುಗಳು ಪರಸ್ಪರ ತಮ್ಮನ್ನು ನೋಡಿಕೊಳ್ಳಲಾರವು. ಆದರೆ ನಮಗೆ ಇಡೀ ಜಗತ್ತಿನ ದರ್ಶನ ಮಾಡಿಸುತ್ತವೆ. ಅವು ಪರಸ್ಪರ ನೋಡಿಕೊಳ್ಳಲಾರವು ಎಂಬ ಕಾರಣಕ್ಕೆ ಅವುಗಳ ನಡುವೆ ವೈಷಮ್ಯ ತಂದಿಡುವವರ ಹುನ್ನಾರ ನಮ್ಮ ದೃಷ್ಟಿಯನ್ನು ಕುರುಡಾಗಿಸುವುದಾಗಿರುತ್ತೆ ಎಂಬುದನ್ನು ಅರಿಯದೆ ಹೋದರೆ ನಮಗೇ ನಷ್ಟ!

ಗಾಂಧೀಜಿ ಭಾರತಕ್ಕೆ ಬಂದು ಸ್ವಾತಂತ್ಯ್ರ ಹೋರಾಟಕ್ಕೆ ತೊಡಗುವ ಮುನ್ನ ದಕ್ಷಿಣ ಆಫ್ರಿಕಾದಲ್ಲೆ ತರಬೇತಿ ಪಡೆದು ಬಂದಂತಿದ್ದರು. ಅವರು ಮಾಡಿದ ಮೊದಲ ಕೆಲಸ ಭಾರತವನ್ನು ಮೂರಾವರ್ತಿ ತಿರುಗಿದ್ದು. ನಮ್ಮ ಹರಪನಹಳ್ಳಿ ಪ್ರೈಮರಿ ಶಾಲೆಯಲ್ಲಿ ಮಲಗಿದ್ದು ಹೋಗಿದ್ದಾರೆಂದರೆ, ಅವರ ತಿರುಗಾಟ ಮತ್ತು ಜನರನ್ನು ಸ್ವತಂತ್ರ ಹೋರಾಟಕ್ಕೆ ಹಚ್ಚಿದ ಪರಿ ನಿಮಗರ್ಥವಾಗಬಹುದು. ಅದಕ್ಕೆ ತೇಜಸ್ವಿಯವರು “ಗಾಂಧೀಜಿ ಈ ದೇಶದ ಹುಲ್ಲುಕಡ್ಡಿಯನ್ನೂ ಸೈತ ಸ್ವಾತಂತ್ರ ಹೋರಾಟಕ್ಕೆ ತೊಡಗಿಸಿದ್ದನ್ನು ನೆನಪಿಸಿಕೊಂಡರೆ ವಿಸ್ಮಯವಾಗುತ್ತೆ” ಎಂದರು. ಈ ಮಾತು ನಮ್ಮನ್ನೆಲ್ಲ ಕಾಡಬೇಕಾಗಿತ್ತು. ಆದರೆ ಗಾಂಧಿಯನ್ನು ಬದಿಗೆ ಸರಿಸಿದ ನಾವು ಹಳ್ಳಿ ತೊರೆದು ಪಟ್ಟಣ ಸೇರಿದ್ದೇವೆ. ಐವತ್ತು ಲಕ್ಷವಿದ್ದ ಬೆಂಗಳೂರು ಜನಸಂಖ್ಯೆ ಈಗ ಒಂದೂವರೆ ಕೋಟಿಯಾಗಿದೆ. ಗಾಂಧಿಯ ಗ್ರಾಮಭಾರತ, ಹಳ್ಳಿಗಳ ಉದ್ದಾರ ಮೂಲೆ ಸೇರಿದೆ. ಆಳುವವರ ಈ ನಿರ್ಲಕ್ಷ್ಯದಿಂದಾಗಿ ನಮ್ಮ ತರುಣರು ಹಳ್ಳಿಗಳನ್ನು ಬಿಟ್ಟುಹೋದ ಕಾರಣಕ್ಕೆ ಬೇಸಾಯದ ಕಸುಬು ಕ್ಷೀಣಿಸಿದೆ. ಆಡು, ಕುರಿ, ದನ ಎಮ್ಮೆಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಹಿರಿಯರ ವೇಷ ಗಾಂಧಿಯಂತೆ ಎರಡು ವಸ್ತ್ರಗಳಿಗೆ ಸೀಮಿತವಾಗಿತ್ತು. ಅಲ್ಲದೆ ಯಾವುದೇ ದುಶ್ಚಟಗಳಿರಲಿಲ್ಲ. ದುಡ್ಡಿನ ಅಗತ್ಯವೇ ಇಲ್ಲದಂತೆ ಬದುಕಿದ್ದರು. ಭೂಮಿಯ ಬದುಕು ಮತ್ತು ಬದುಕಿನ ಸಂಸ್ಕೃತಿ ಮೇಳೈಸಿದ್ದವು. ಇದೆಲ್ಲಾ ಗಾಂಧಿ ಹೇಳಿಹೋದ ಬದುಕೇ ಆಗಿತ್ತು. ಗಾಂಧಿ ಎದುರು ಬರೀ ಸ್ವಾತಂತ್ರ ಹೋರಾಟವಷ್ಟೆ ಇರಲಿಲ್ಲ. ಆ ನಂತರ ಭಾರತೀಯ ಹೇಗೆ ಬದುಕಬೇಕೆಂಬ ಕನಸನ್ನೂ ಹೇಳಿದ್ದರು. ಅದರ ಫಲವೇ ಹಿಂದ್‌ ಸ್ವರಾಜ್‌ ಕೃತಿ.

ನಮ್ಮ ಬದಲಾದ ಸಂಸ್ಕೃತಿ ಗಾಂಧಿ ಸಿದ್ದಾಂತವನ್ನು ಬದಿಗೆ ಸರಿಸಿದರೂ, ನಮಗೆ ಗೊತ್ತಿಲ್ಲದಂತೆಯೇ ಗಾಂಧಿ ಆಶಯಗಳಲ್ಲಿ ಬದುಕುವವರಿದ್ದಾರೆ. ಧಾರ್ಮಿಕ ಕಾರಣಕ್ಕೆ ಮತ್ತೊಬ್ಬರನ್ನು ನೋಯಿಸದವರು. ಹೆಣ್ಣು ಹೆತ್ತವರನ್ನು ಸತಾಯಿಸದವರು. ಹೆಣ್ಣನ್ನು ತನ್ನ ಸಮಾನಳೆಂದು ಭಾವಿಸುವವರು. ನೊಂದವರು ಮತ್ತು ಅಸಹಾಯಕರಿಗೆ ಸಹಾಯ ಮಾಡುವವರು. ಇತರರ ಮಾತನ್ನು ಸಂಪೂರ್ಣ ತಾಳ್ಮೆಯಿಂದ ಕೇಳಿಸಿಕೊಳ್ಳುವವರು. ಸರಳವಾಗಿ ಮದುವೆಯಾಗುವವರು. ಅಂತರ್ಜಾತಿ ವಿವಾಹ ಆಗುವವರು. ಮೂಢನಂಬಿಕೆ ಕಂದಾಚಾರಗಳನ್ನು ತಿರಸ್ಕರಿಸುವವರು. ವಕೀಲರನ್ನು ಅವಲಂಬಿಸದ ರೀತಿ ಸತ್ಯಮಾರ್ಗದಲ್ಲಿ ಬದುಕುವವರು ಇವರೆಲ್ಲ ತಮಗೆ ಅರಿವಿಲ್ಲದೆ ಗಾಂಧೀಜಿಯ ಸಿದ್ದಾಂತದಲ್ಲಿ ಬದುಕುತ್ತಿದ್ದಾರೆ. ಗಾಂಧಿ, ಬದುಕಿನ ಕಡೆಯವರೆಗೂ ಬದಲಾಗುತ್ತಲೇ ಹೋದವರು. ಹಾಗಾಗಿ ಗಾಂಧಿಯನ್ನು ಯಾವುದೋ ಒಂದು ಕಾಲಘಟ್ಟದ ಮಾತು, ನಡವಳಿಕೆ, ತೀರ್ಮಾನಗಳಿಂದ ಅಳೆಯುವುದೆಂದರೆ ಗಾಂಧಿ ಅಂತವರಿಗೆ ಅರ್ಥವಾಗಿಲ್ಲವೆಂದರ್ಥ. ತನ್ನ ತಂದೆಯ ಜೇಬಿನಲ್ಲಿ ಕಾಸು ಕದಿಯುತ್ತಿದ್ದ, ದುರಾಭ್ಯಾಸಗಳ ಕಲಿತಿದ್ದ ಗಾಂಧಿ, ಬದಲಾವಣೆಯ ಹಾದಿಯಲ್ಲಿ ಕಳೆದುಹೋಗಿ ಬೇರೆಯದೆ ಗಾಂಧಿಯಾದ. ಉದಾಹರಣೆಗೆ ಅಂಬೇಡ್ಕರರಿಂದ ಗಾಂಧಿ ಹೊಸ ದೃಷ್ಟಿ ಪ್ರಾಪ್ತಿಯಾಗಿ ಬದಲಾದರು.ತಮ್ಮ ಆಶ್ರಮದ ಆಪ್ತರಾಗಿ ದಲಿತರನ್ನು ಜೊತೆಗಿಟ್ಟುಕೊಂಡರು. ಹರಿಜನ ಅನ್ನುವ ಪತ್ರಿಕೆ ತೆರೆದರು. ಯಾವುದೇ ಊರಿಗೋದರು ದಲಿತರ ಕೇರಿ ಪ್ರವೇಶ ಮಾಡತೊಡಗಿದರು. ಅಷ್ಟೇ ಅಲ್ಲ ಅನ್ ಟಚಬಲ್ ಈಸ್ ಕ್ರೈಮ್ ಎಂದು ಸಾರಿದರು. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದೊಳಕ್ಕೆ ದಲಿತರ ಸಮಸ್ಯೆಗಳೂ ಸೇರಿಕೊಂಡವು. ತನ್ನನ್ನು ತಾನು ಮತಾಂತರಗೊಂಡ ದಲಿತ ಎಂದು ಕರೆದುಕೊಳ್ಳುವಷ್ಟು ಬದಲಾದರು. ಗಾಂಧಿ ಎಂದೂ ತಪ್ಪನ್ನು ವಿಮರ್ಶಿಸುತ್ತಾ ಕೂರದೆ ತನ್ನ ಮಿತಿಯಲ್ಲಿ ಸರಿ ಪಡಿಸಲು ಚಡಪಡಿಸುತ್ತಿದ್ದರು. ಹಾಗಾಗಿ ಅವರಿಗೆ ಬದಲಾವಣೆ ಸಾಧ್ಯವಾಯ್ತು. ನಮ್ಮ ಬದುಕನ್ನು ನಾವೇ ಹಸನು ಮಾಡಿಕೊಳ್ಳಬೇಕೆನ್ನುತ್ತಿದ್ದರು. ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ನಮ್ಮ ಬದುಕಿಗೆ ಪರರನ್ನು ಅವಲಂಬಿಸುವಾತ ಅಂಗವಿಹೀನ ಎಂಬ ಭಾವನೆ ಬರುವಂತೆ ಮಾಡುತ್ತಿದ್ದರು. ಗಾಂಧಿ ಬದುಕು, ಹೋರಾಟ, ಅವರ ಸಿದ್ದಾಂತ  ಪ್ರಪಂಚದಾದ್ಯಂತ ಹಬ್ಬುತ್ತಿರುವಾಗ, ಅವರ ಅಹಿಂಸೆ ಹಿನ್ನೆಲೆಗೆ ಸರಿದು, ಹಿಂಸೆ ತಾಂಡವವಾಡುವಂತೆ ದೇಶ ಇಬ್ಭಾಗವಾಯ್ತು. ಆಗ ನಡೆದ ಸರಣಿ ಅನಾಹುತಗಳ ಪೈಕಿ ಗಾಂಧಿ ಹತ್ಯೆಯೂ ಒಂದು. ಆಗ ಬ್ರಿಟಿಷರು, “ನಾವು ಗಾಂಧಿಯನ್ನು ಎಂತೆಂಥಾ ಸಂದರ್ಭದಲ್ಲೂ ಕಾಪಾಡಿಕೊಂಡು ಬಂದಿದ್ದೆವು. ಆದರೆ ನೀವು ಒಂದು ವರ್ಷ ಕೂಡಾ ಗಾಂಧಿಯನ್ನು ಇಟ್ಟುಕೊಳ್ಳಲಾಗಲಿಲ್ಲ” ಎಂದರು. ಇಂತಹ ಯಾವ ಮಾತುಗಳೂ ನಮಗೆ ಅವಮಾನಕರವಲ್ಲ. ಅಂತಹ ಅವಮಾನಗಳಿಗೆ ಅರ್ಹರು ನಾವು. ಆದರೂ ಈ ದುರಿತ ಕಾಲದ ಮುಂದಿನ ಬದುಕಿಗೆ ಗಾಂಧೀಜಿ ಬೇಕಿದೆ. ಎಲ್ಲ ಜಟಿಲ ಸಮಸ್ಯೆಗಳ ಗೋಜಲು ಬಿಡಿಸಿ ದಾರಿ ತೋರುವ ಸಾಮರ್ಥ್ಯ ಗಾಂಧಿಯ ಸಿದ್ದಾಂತಗಳಿಗಿದೆ. ಆ ಮಹಾತ್ಮನನ್ನು ಕುರಿತು ಗಾಂಧಿ ಜಯಂತಿಯಂದು ಒಂದು ಗಂಟೆ ಯೋಚಿಸಿದರೆ ಸಾಕು, ನಮ್ಮ ಮನಸ್ಸಿನಲ್ಲಿ ಮಗುವಿನ ನಗೆಯ ಗಾಂಧಿ ಮೂಡಬಹುದು. ಎಲ್ಲಕ್ಕಿಂತ ಮಿಗಿಲಾಗಿ ಗಾಂಧಿಯ ರಾಮನೂ ನಮಗೆ ತೋರಬಹುದು. ಅವರ ರಾಮ ಆಕಾಶದಷ್ಟು ಅಗಲವಾದವನು. ಸಮುದ್ರದಷ್ಟು ಆಳವಾದವನು, ಗಾಳಿಯಂತೆ ಎಲ್ಲೆಲ್ಲೂ ತುಂಬಿದವನು.

ಅಯೋಧ್ಯೆಯ ರಾಮಮಂದಿರದಲ್ಲಿ ಬಂಧಿಯಾಗಿ ನೂರಾರು ಕೋಟಿ ಕಾಣಿಕೆ ಕಳ್ಳತನಕ್ಕೆ ದಾರಿ ಮಾಡಿದವನಲ್ಲ. ಗಾಂಧಿ ನಂಬಿದ ರಾಮನ ವಿಸ್ತಾರ ತಿಳಿದೆ ಖಾನ್‌ ಅಬ್ದುಲ್‌ ಗಫಾರ್ ಖಾನ್‌ ತರದ ಹಲವು ಮುಸ್ಲಿಮರು ಗಾಂಧಿಯ ಅನುಯಾಯಿಯಾಗಿದ್ದರು.

‘ಹೇ ರಾಮ್‌!”

Leave a Reply

Your email address will not be published. Required fields are marked *