ಕತ್ತಲಲ್ಲಿ ಕರಗಿಹೋದ ಹೊಳಲ್ಕೆರೆಯ ಸ್ವಾತಂತ್ಯ್ರ ಸೇನಾನಿ ಕೊಟ್ರೆ ನಂಜಪ್ಪ

150 ಎಕರೆಗಳಷ್ಟು ಎರಿ ಭೂಮಿಯನ್ನು ಹೊಂದಿದ್ದ ದೊಡ್ಡ  ಜಮೀನ್ದಾರಿ ಕುಟುಂಬ. ಮನೆಯ ಯಜಮಾನ ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯ. ಒಂಬತ್ತು ಜನ ಮಕ್ಕಳ ಪೈಕಿ, ಮಿಕ್ಕವರೆಲ್ಲರೂ ತಂದೆತಾಯಿಯ ನಿರೀಕ್ಷೆಯಂತೆ ಬೆಳೆದರು. ಆದರೆ ಅಪ್ಪನಿಗೆ ತನ್ನ ಮೂರನೇ ಮಗನದ್ದೇ ಚಿಂತೆ. ಉಳಿದ ಮಕ್ಕಳಂತೆ ಒಳ್ಳೆಯ ಬದುಕು ಕಟ್ಟಿಕೊಳ್ಳುವ ಬದಲು ಆತ ಸದಾ ಕಾಲ ಸ್ವಾತಂತ್ಯ್ರ ಚಳವಳಿ, ಹೋರಾಟ, ಧರಣಿ ಸತ್ಯಾಗ್ರಹ ಅಂತ ತಿರುಗಾಡುತ್ತಿದ್ದ. ಒಂದು ಮದುವೆ ಮಾಡಿ, ಮೂಗುದಾರ ಹಾಕಿದರೆ ಸರಿಹೋಗಬಹುದೆನ್ನುವ ಆಲೋಚನೆ ಬರುತ್ತೆ. ಮೂರನೇ ಮಗನಿಗೆ 19ನೇ ವಯಸ್ಸಿನಲ್ಲೆ ಮದುವೆ ಮಾಡಲು ಸಜ್ಜಾಗುತ್ತಾರೆ. ಆದರೆ  ಅಪಾರ ದೇಶಭಕ್ತಿ, ಖಾದಿಪ್ರೇಮ,  ಗಾಂಧೀಜಿಯವರ ಕನಸ್ಸುಗಳನ್ನು ನನಸು ಮಾಡಬೇಕೆಂಬ ಹಂಬಲ ತುಂಬಿಕೊಂಡು ಹಳ್ಳಿಗಳ ಉದ್ಧಾರ, ಅಸ್ಪೃಶ್ಯತೆ ನಿವಾರಣೆ, ಪಾನ ನಿರೋಧ, ಬ್ರಿಟಿಷ್‌ ದೌರ್ಜನ್ಯಗಳ ವಿರುದ್ಧ ಹೋರಾಡುವ ಹುಮ್ಮಸ್ಸಿನಲ್ಲಿದ್ದ ಯುವಕನಿಗೆ ಈ ಸುಳಿವು ಸಿಕ್ಕು, ಮನೆಯನ್ನೆ ತೊರೆದು ಹೊರಡುತ್ತಾನೆ. ಹಾಗೆ ಹೊರಟವನು ಸೀದಾ ಹೋಗಿ ತಲುಪಿದ್ದು ಮಹಾತ್ಮ ಗಾಂಧೀಜಿಯವರ ವಾರ್ಧ ಆಶ್ರಮವನ್ನು. ಗಾಂಧಿಯವರ ದರ್ಶನಭಾಗ್ಯದ ಜೊತೆಗೆ ಸುಭಾಷ್‌ಚಂದ್ರ ಬೋಸರ ಸಂಪರ್ಕಕಕ್ಕೂ ಬರುತ್ತಾನೆ.

ಅಂತಹ ಮಹಾ ಚೇತನಗಳ ಒಡನಾಟದಿಂದ ಸ್ವಾತಂತ್ಯ್ರ ಚಳವಳಿಯ ದೀಕ್ಷೆ ಪಡೆದ ಯುವಕ ಮರಳಿ ತನ್ನ ಹುಟ್ಟೂರಿಗೆ ವಾಪಾಸು ಬಂದು ಸ್ಥಳೀಯ ಯುವಕರನ್ನು ಸಂಘಟಿಸಿ ಸ್ವಾತಂತ್ಯ್ರ ಹೋರಾಟದ ಕಿಚ್ಚು ಹಬ್ಬಿಸುತ್ತಾನೆ. ಬ್ರಿಟಿಷರ ಪಾಲಿಗೆ ಚಿತ್ರದುರ್ಗ ಸೀಮೆಯ ದೊಡ್ಡ ಪ್ರತಿರೋಧವಾಗಿ ಬೆಳೆದು ನಿಲ್ಲುತ್ತಾನೆ. ಆ ಯುವಕ ಹೆಸರು, ಕೊಟ್ರೆ ನಂಜಪ್ಪ!

ಹೊಳಲ್ಕೆರೆಯ ಸ್ವಾತಂತ್ಯ್ರ ಸೆಲೆ

ಚಿತ್ರದುರ್ಗ ಜಿಲ್ಲೆಯ ನತದೃಷ್ಟ ಬರದ ನೆಲ ಹೊಳಲ್ಕೆರೆ, ನಾಡಿನ ಪ್ರಗತಿಗೆ ಸದ್ದಿಲ್ಲದೆ ಸಾಕಷ್ಟು ಕೊಡುಗೆ ನೀಡಿದ್ದರೂ ನಿರ್ಲಕ್ಷ್ಯಕ್ಕೆ ತುತ್ತಾಗುತ್ತಲೇ ಬಂದಿದೆ.  ಮಧ್ಯ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಇದೇ ತಾಲ್ಲೂಕಿನ ಮುತ್ತುಗದೂರು ಗ್ರಾಮದವರು.  ‘ಕರ್ನಾಟಕದ ಅಮರ್ತ್ಯ ಸೇನ್’ ಎಂದೇ ಹೆಸರಾದ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಡಿ ಎಂ ನಂಜುಂಡಪ್ಪ,  ಸುಪ್ರಸಿದ್ಧ ವಕೀಲ ಜಿ ಚನ್ನಪ್ಪ ಹೊಳಲ್ಕೆರೆಯ ದೊಗ್ಗನಾಳು ಗ್ರಾಮದವರು. ಅದೇ ದೊಗ್ಗನಾಳು ಗ್ರಾಮದಲ್ಲಿ ಇಲ್ಲಿಗೆ ನೂರು ವರ್ಷಗಳ ಹಿಂದೆ ಸ್ವಾತಂತ್ಯ್ರದ ಕಹಳೆ ಮೊಳಗಿಸಿದ್ದು ಈ ಕೊಟ್ರೆ ನಂಜಪ್ಪನವರು.

ಮೊದಲೇ ಹೇಳಿದಂತೆ, ದೊಗ್ಗನಾಳು ಗ್ರಾಮದ ಈಶ್ವರಪ್ಪಗೌಡ ಮತ್ತು ಈರಮ್ಮ ದಂಪತಿಗಳದ್ದು ಅನುಕೂಲಸ್ಥ ಕುಟುಂಬ. ಅಷ್ಟೇ ಜನಾನುರಾಗಿ ಮನೆತನ. ಒಮ್ಮೆ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಭೀಕರ ಬರಗಾಲ ಎದುರಾಯ್ತು. ಒಂದು ಹೊತ್ತಿನ ಊಟಕ್ಕೂ ತತ್ವಾರ. ಅಂತಹ ಸಂದರ್ಭದಲ್ಲಿ ಆ ಏಳೆಂಟು ಹಳ್ಳಿಗಳ ಜನತೆಗೆ ತಮ್ಮ ಮನೆಯಿಂದ ಅಂಬಲಿ (ಕೊಟ್ರೆ) ಮಾಡಿ ಉಣಬಡಿಸಿ ಜೀವದಾನ ಮಾಡಿದ್ದರು. ಹಾಗಾಗಿ ಅವರ ಮನೆಗೆ ‘ಕೊಟ್ರೆ’ ಮನೆತನ ಎಂಬ ಹೆಸರು ಬಂತು.

ಅಂತವರ ಮೂರನೇ ಮಗನಾಗಿ ಜನಿಸಿದ ನಂಜಪ್ಪನವರು ವಿದ್ಯಾರ್ಥಿ ದೆಸೆಯಲ್ಲೆ ರಾಷ್ಟ್ರೀಯ ನಾಯಕರ ಭಾಷಣಗಳು, ಲೇಖನಗಳಿಂದ ಸ್ವಾತಂತ್ಯ್ರ ಹೋರಾಟದತ್ತ ಆಕರ್ಷಿತರಾದರು. ಶಾಲೆಗೆ ಶರಣು ಹೊಡೆದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಮನೆಯವರ ಅಪೇಕ್ಷೆಯ ಚೌಕಟ್ಟು ದಾಟಿ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು.

ಚಳವಳಿಯ ಕಾವು

1924ರಲ್ಲಿ ಬೆಳಗಾವಿ ನಗರದಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಪರಿಣಾಮ ಮೈಸೂರು ಪ್ರಾಂತದಲ್ಲಿ ಚಳವಳಿಯ ಕಾವು ಇಮ್ಮಡಿಗೊಂಡಿತು. ಹರಿಹರದ ಪ್ರಸಿದ್ಧ ವಕೀಲ ಗುಂಡೂರಾವ್ ಈ ಅಧಿವೇಶನದಲ್ಲಿ ಭಾಗವಹಿಸಿ ಬಂದ ಮೇಲೆ ಚಿತ್ರದುರ್ಗ ನಗರದಲ್ಲಿ ‘ತಿಲಕ ಸಂಘ’ ಸ್ಥಾಪಿಸಿದರು. ಹರ್ಡೇಕರ ಮಂಜಪ್ಪನವರು ತಮ್ಮ ಸಹ ಹೋರಾಟಗಾರೊಂದಿಗೆ  1930ರಲ್ಲಿ ಚಿತ್ರದುರ್ಗ ಭಾಗಗಳಲ್ಲಿ ಸಂಚಾರ ಮಾಡಿದರು. ಬ್ರಿಟಿಷರ ದಬ್ಬಾಳಿಕೆ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಭಾಷಣಗಳು ಮತ್ತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದರ ಮೂಲಕ ದೇಶ ಬಾಂಧವರಲ್ಲಿ ಹೋರಾಟದ  ಮನೋಭಾವ ಮೂಡಿಸಿದರು. ಮಹಾತ್ಮ ಗಾಂಧೀಜಿಯವರ ಕರೆಯ ಮೇರೆಗೆ ಎಲ್ಲೆಡೆ ಖಾದಿ ಪ್ರಚಾರ ಹೆಚ್ಚಾಯಿತು. ಆಗ ಚಿತ್ರದುರ್ಗದ ಬಳಿ ಮದಕರಿಪುರದಲ್ಲಿ ಆರಂಭವಾದ ಖಾದಿ ಕೇಂದ್ರ ರಾಜ್ಯದಲ್ಲಿಯೇ ಮೊಟ್ಟಮೊದಲನೆಯದು.  ಇದೆಲ್ಲಾ ಬಾಲಕ ಕೊಟ್ರೆ ನಂಜಪ್ಪನ ಮನಸ್ಸಿನ ಮೇಲೆ ಅಗಾಧ ಪ್ರಭಾವ ಬೀರಿದವು.

ಶಾಲೆ ತೊರೆದು ಚಳವಳಿಯಲ್ಲಿ ಭಾಗಿಯಾಗುತ್ತಿದ್ದ ಮಗನ ಈ ಚಟುವಟಿಕೆಗಳು ತಂದೆಗೆ ಸರಿಕಾಣಲಿಲ್ಲ. ಮೊದಮೊದಲು ಮಾತಿನಿಂದ ವಿರೋಧಿಸಿದರು. ನಂತರ ದೈಹಿಕವಾಗಿಯೂ ದಂಡಿಸಿದರು. ಆದರೆ ಅದಾವುದಕ್ಕೂ ನಂಜಪ್ಪ ಎದೆಗುಂದಲಿಲ್ಲ. ತಂದೆಯ ವಿರೋಧದ ನಡುವೆಯೂ ಭೂಗತರಾಗಿದ್ದುಕೊಂಡೇ  ಕಾಂಗ್ರೆಸ್ ಸಂಘಟನೆಗಾಗಿ ಹಳ್ಳಿ ಹಳ್ಳಿಗಳನ್ನು ತಿರುಗಿದರು.

ಸಂಘಟನೆಯ ಸಂಚಲನ

ತಂದೆಯ ವಿರೋಧದ ಕಾರಣಕ್ಕೆ ಹುಟ್ಟೂರು ದೊಗ್ಗನಾಳನ್ನು  ತೊರೆದು, ಪಕ್ಕದ ರಂಗಾಪುರ ಗ್ರಾಮವನ್ನು ತಮ್ಮ  ಕಾರ್ಯಕ್ಷೇತ್ರವಾಗಿಸಿಕೊಂಡರು. ಮಹಾತ್ಮ ಗಾಂಧೀಜಿಯವರಿಂದ ಪ್ರೇರಿತರಾಗಿದ್ದ ನಂಜಪ್ಪನವರು ಕೆಲಕಾಲ ವಾರ್ಧಾ ಆಶ್ರಮದಲ್ಲಿ ಗಾಂಧೀಜಿಯವರ ಜೊತೆಗೂ ಇದ್ದು ಬಂದರು. ವಾಪಾಸಾದ ನಂತರ  1934ರಲ್ಲಿ ರಂಗಾಪುರದಲ್ಲಿ ಆಶ್ರಮ ಪ್ರಾರಂಭಿಸಿದರು. ಅಲ್ಲಿ ಗಾಂಧೀಜಿ ಪ್ರಣೀತ ಗ್ರಾಮೋದ್ಯೋಗ, ಖಾದಿ ಉತ್ಪಾದನೆ, ರಾಷ್ಟ್ರೀಯ ಶಿಕ್ಷಣ, ಹರಿಜನೋದ್ಧಾರ ಮುಂತಾದ ಚಟುವಟಿಕೆಗಳಿಗೆ ಚಾಲನೆ ನೀಡಿದರು. ನಂಜಪ್ಪ ಹಳ್ಳಿ ಹಳ್ಳಿಗಳನ್ನು ತಿರುಗಿ  ಯುವಕರಿಗೆ ಕಾಂಗ್ರೆಸ್ ದೀಕ್ಷೆ ನೀಡಿದರೆ, ಆ ಯುವಕರಿಗೆ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು (ತಿರುಕ ಹೆಸರಿನಿಂದ ಪ್ರಸಿದ್ಧರಾದ ರಾಘವೇಂದ್ರರಾಯರು)  ದೈಹಿಕ ಮತ್ತು ಮಾನಸಿಕ ದೃಢತೆಗಾಗಿ ಯೋಗ ಮತ್ತು ವ್ಯಾಯಾಮದ ತರಬೇತಿ ನೀಡುತ್ತಿದ್ದರು.

1932 ರಿಂದ 1938ರವರೆಗೆ ಹೊಳಲ್ಕೆರೆ, ಹೊಸದುರ್ಗ, ಬೀರೂರು, ಅಜ್ಜಂಪುರ, ತರೀಕೆರೆ, ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಸಿದ್ದಾಪುರ ಮುಂತಾದ ಕಡೆಗಳೆಗೆಲ್ಲ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿ,  ಕಾಂಗ್ರೆಸ್ ಪಕ್ಷ ಕಟ್ಟಿದರು. 1936ರಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ದಾವಣಗೆರೆ ನಗರದಲ್ಲಿ ಸ್ಥಾಪಿಸಿ,  ಅದರ ಮೊದಲ ಕಾರ್ಯದರ್ಶಿಯಾದರು.  ಸಾವಿರಾರು ಸಂಖ್ಯೆಯ ಯುವಕರಿಗೆ ಕೊಟ್ರೆ ನಂಜಪ್ಪ ರಾಜಕೀಯ ಗುರು. ಯುವಕರಲ್ಲಿ ದೇಶಭಕ್ತಿ, ಖಾದಿ ಧಾರಣೆ, ಸ್ವರಾಜ್ಯ ಪ್ರೇಮಕ್ಕೆ ಕಾರಣರಾದರು.

ಸ್ವಾತಂತ್ರ್ಯ ಹೋರಾಟದ ಜೊತೆಗೆ ರೈತರ ಕಷ್ಟಗಳಿಗೆ ಪರಿಹಾರ ಹುಡುಕಾಟ, ಅಸ್ಪೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ದೇವರು, ಜಾತ್ರೆ ಹೆಸರಿನಲ್ಲಿ ಪ್ರಾಣಿ ಬಲಿ ತಡೆ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸಿದರು.  ನಂಜಪ್ಪನವರ ಈ  ಚಟುವಟಿಕೆಗಳ ಬಗ್ಗೆ ಜನಗಳಿಗೆ ವಿಶ್ವಾಸ ಮೂಡಿತು. ಆಗಿನ ಕಾಲದಲ್ಲಿ ವಾರಗಟ್ಟಲೆ ಮಾಡುತ್ತಿದ್ದ ಮದುವೆ ಪದ್ಧತಿಯಿಂದ ಸಮಯ, ಹಣ, ಶ್ರಮ ವ್ಯರ್ಥವಾಗುತಿತ್ತು. ಇದನ್ನು ಮನಗಂಡು ಈ ಪದ್ಧತಿಯನ್ನು ಸುಧಾರಿಸಲು ಮುಂದಾದರು. ಒಂದೇ ದಿನದಲ್ಲಿ ಮದುವೆ ಮಾಡಲು ಜನಗಳನ್ನು ಒಪ್ಪಿಸಿ, ಅದನ್ನು ಜಾರಿಗೆ ತಂದರು. ‌

ಸಮಾಜಮುಖಿ ಚೇತನ

1938ರಲ್ಲಿ ರಂಗಾಪುರ ಗ್ರಾಮದಲ್ಲಿ ಬೃಹತ್ ರೈತ ಸಮ್ಮೇಳನ ಏರ್ಪಡಿಸಿದರು. ಹತ್ತು ಸಾವಿರ ಜನ ರೈತರು ಇದರಲ್ಲಿ ಭಾಗವಹಿಸಿ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಈ ಸಮ್ಮೇಳನ ನಾಂದಿಯಾಯಿತು. ಈ ಸಮ್ಮೇಳನದಲ್ಲಿ ಕೆ ಸಿ ರೆಡ್ಡಿ, ಟಿ ಸಿದ್ದಲಿಂಗಯ್ಯ, ಹಳ್ಳಿಕೇರಿ ಗುದ್ಲೆಪ್ಪ ಮುಂತಾದ ಹಿರಿಯ ನಾಯಕರು ಭಾಗವಹಿಸಿದ್ದು ವಿಶೇಷ. ಇದೇ ಸಂದರ್ಭದಲ್ಲಿ  ಸಾಮೂಹಿಕ ವಿವಾಹ ಏರ್ಪಡಿಸಿ, ಎಂಟತ್ತು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲು ಅನುವು ಮಾಡಿಕೊಟ್ಟರು.

ಹಳ್ಳಿಯ ಜನತೆಗೆ ಶಿಕ್ಷಣ ನೀಡಬೇಕೆಂಬುದು ಸಹ ನಂಜಪ್ಪನವರ ಮತ್ತೊಂದು ಆಸೆಯಾಗಿತ್ತು.‌ ಅದಕ್ಕಾಗಿ ರಂಗಾಪುರದ ಆಶ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಶಾಲೆಯನ್ನು ತೆರೆದರು. ಅಂದಿನ ಪ್ರಸಿದ್ಧ ಕಾಂಗ್ರೆಸ್ ಮುಖಂಡರಾದ ತಗಡೂರು ರಾಮಚಂದ್ರರಾವರಾಯರಿಂದ ಈ ಶಾಲೆಯು  ಉದ್ಘಾಟನೆಗೊಂಡಿತು. ಶಾಲೆಯ ನಿರ್ವಹಣೆಗಾಗಿ 40  ಎಕ್ಕರೆಗಳಷ್ಟು ಜಮೀನು ಸಹ ಪಡೆದು ಉಳುಮೆ ಮಾಡಿದರು. ಅದರೊಂದಿಗೆ ಸಾಂಪ್ರದಾಯಿಕ ವ್ಯವಸಾಯ ಪದ್ಧತಿ ಬದಲಿಗೆ ಸುಧಾರಿತ ಪದ್ಧತಿಯನ್ನು ಜಾರಿಗೆ ತಂದರು. ಇಲ್ಲಿಯೇ ಖಾದಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದರು. ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಶಿಸ್ತು, ದೇಶಭಕ್ತಿ ಮತ್ತು ರಾಷ್ಟ್ರೀಯ ಭಾವನೆಗಳನ್ನು ಮೂಡಿಸುವ ತರಬೇತಿ ನೀಡಲಾಗುತ್ತಿತ್ತು. ಹೊದಿಗೆರೆಯ ಗಂಗಾಧರಾಚಾರ್ ಮತ್ತು ರಾಘವೇಂದ್ರ ರಾವ್ ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ ಈ ಶಾಲೆ ಒಂದು ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ ನೀಡುವ ಕೇಂದ್ರವೆಂದು ಸರಕಾರ ಈ ಶಾಲೆಯ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಇಲ್ಲಿಯ  ಕಾರ್ಯಕರ್ತರು   ಚದುರಿದಾಗ ಶಾಲೆ ನಡೆಸುವುದು ದುಸ್ತರವಾಗಿ  ಮುಚ್ಚಿಹೋಯಿತು.

1936ರಲ್ಲಿ  ಅರಣ್ಯ ಸತ್ಯಾಗ್ರಹ ಮತ್ತು 1942ರ ‘ಕ್ವಿಟ್ ಇಂಡಿಯಾ ಚಳವಳಿ’ಗಳಲ್ಲಿ ನಂಜಪ್ಪನವರ ಸಕ್ರಿಯವಾಗಿ ಪಾಲ್ಗೊಂಡು ಬಂಧನಕ್ಕೊಳಗಾದರು. ಸದಾ ಇವರ ಮೇಲೆ ವಾರೆಂಟ್ ಜಾರಿಯಲ್ಲಿರುತ್ತಿತ್ತು.   ಹಾಗಾಗಿ ಕೆಲಕಾಲ ಭೂಗತರಾಗಿ ಚಳವಳಿಗಾರರನ್ನು ಹುರಿದುಂಬಿಸುತ್ತಿದ್ದರು. ಈಗಿರುವಾಗ ಒಮ್ಮೆ  ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧನಕ್ಕೊಳಗಾಬೇಕಾಯಿತು. ಆಗ ತನ್ನ ಹೆಸರನ್ನು ‘ಶಿವಾನಂದ’ ಎಂದು ಬದಲಾಯಿಸಿಕೊಂಡಿದ್ದರು.

ಸುಭಾಷ್‌ಚಂದ್ರ ಬೋಸರ ಒಡನಾಟ

ಪ್ರಾರಂಭದಲ್ಲಿ ಗಾಂಧೀಜಿಯವರ ಅನುಯಾಯಿಯಾಗಿದ್ದ ನಂಜಪ್ಪನವರು ನಂತರದ ದಿನಗಳಲ್ಲಿ ಸುಭಾಷ್ ಚಂದ್ರ ಬೋಸರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಹಾವೇರಿಯ ಸುಪ್ರಸಿದ್ಧ ವಕೀಲರು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಹೊಸಮನಿ ಸಿದ್ಧಪ್ಪನವರು ಸುಭಾಷ್ ಚಂದ್ರ ಬೋಸರ ಆಪ್ತ ಒಡನಾಡಿ. ಹಾಗಾಗಿ 1939ರಲ್ಲಿ ಸುಭಾಷ್ ಚಂದ್ರ ಬೋಸ್ ಸ್ವತಃ ಸಿದ್ಧಪ್ಪನವರನ್ನು ಭೇಟಿಯಾಗಲು ಹಾವೇರಿಗೆ ಆಗಮಿಸಿದ್ದಾಗ ನಂಜಪ್ಪನವರು ಸಹ ಅಲ್ಲಿ ಉಪಸ್ಥಿತರಿದ್ದರು.

‌ಆ ಭೇಟಿಯ ಪ್ರೇರಣೆಯಿಂದ “ಸಶಸ್ತ್ರ ಕ್ರಾಂತಿಯಿಲ್ಲದೆ ಭಾರತದ ವಿಮೋಚನೆ ಆಗಲಾರದು” ಎಂದು ನಂಜಪ್ಪನವರಿಗೆ ಮನವರಿಕೆ ಆಗಿತ್ತು. ಅದಕ್ಕಾಗಿ ಉತ್ತರ ಭಾರತದ ನಾನಾ ಭಾಗದಿಂದ ಸಶಸ್ತ್ರಗಳನ್ನು  ಗುಪ್ತವಾಗಿ ಚಳವಳಿಗಾರರಿಗೆ ಪೂರೈಸುತ್ತಿದ್ದರು. ಆದುದರಿಂದ ಬ್ರಿಟಿಷ್ ಸರ್ಕಾರ “ನಂಜಪ್ಪನವರನ್ನು ಹಿಡಿದು ಕೊಟ್ಟವರಿಗೆ ಎರಡು ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿ ಘೋಷಿಸಿತ್ತು” ಎಂದು ಪಾಟೀಲ ಪುಟ್ಟಪ್ಪನವರು ಹೊಸಮನಿ ಸಿದ್ಧಪ್ಪನವರ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.  

ಶಿವಪುರ ಧ್ವಜ ಸತ್ಯಾಗ್ರಹ, ಹರಿಪುರ ಕಾಂಗ್ರೆಸ್ ಅಧಿವೇಶನದಲ್ಲೂ ಭಾಗವಹಿಸಿದ್ದ ನಂಜಪ್ಪನವರು ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ, ಮೈಲಾರ ಮಹದೇವ, ಮೆಣಸಿನಹಾಳ್ ತಿಮ್ಮನಗೌಡ, ಟಿ ಆರ್ ನೆಸ್ವಿ, ಹೊಸಮನಿ ಸಿದ್ಧಪ್ಪ  ಮುಂತಾದವರ ಆಪ್ತ ಒಡನಾಟವಿತ್ತು. ಹಾವೇರಿ ಸಮೀಪದ ಹೊಸರಿತ್ತಿಯ ಆಶ್ರಮಕ್ಕೆ ತನ್ನ ಬಂಧು ಡಿ ಎಂ ಅಜ್ಜಪ್ಪನವರನ್ನು ತರಬೇತಿಗಾಗಿ ಕಳುಹಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಕೊಟ್ರೆ ನಂಜಪ್ಪ, ರಾಮಗಿರಿಯ ಡಿ ಹನುಮಂತಪ್ಪ ಮತ್ತು ಆತನ ಪತ್ನಿ ಗಂಗಮ್ಮ ಮುಂತಾದವರು ಕೈಬಾಂಬು, ಟೈಮ್ ಬಾಂಬು ಮತ್ತು ಬಂದೂಕುಗಳನ್ನು ಗೋಪ್ಯವಾಗಿ ಸಂಗ್ರಹಿಸಿ; ಸೇತುವೆ ಒಡೆಯುವ, ಅಂಚೆ ಡಬ್ಬಿ ಸುಡುವ ಮತ್ತು ತಂತಿ ಕತ್ತರಿಸುವ ಕೆಲಸವನ್ನು ಮಾಡಿದರು ಎಂದು ಎಚ್ ಎಸ್ ದೊರೆಸ್ವಾಮಿಯವರು ನಂಜಪ್ಪನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ನಂದಿತು ಕ್ರಾಂತಿಜ್ಯೋತಿ

1944ರಲ್ಲಿ  ಭೂಗತರಾಗಿ ಊರೂರು ತಿರುಗಿ ಹೋರಾಟವನ್ನು ತೀವ್ರಗೊಳಿಸುತ್ತಿದ್ದರು. ಕ್ರಾಂತಿಕಾರಕ ಮನೋಭಾವನೆ ಹೊಂದಿದ್ದ ನಂಜಪ್ಪನನ್ನು  ಕಂಡಲ್ಲಿ ಗುಂಡಿಟ್ಟು ಸಾಯಿಸುವ ಹುನ್ನಾರ ಬ್ರಿಟಿಷ್ ಸರಕಾರ ಮಾಡಿತ್ತು.  ಹಗಲು ವೇಳೆ ಯಾರ ಕಣ್ಣಿಗೂ ಕಾಣದೆ ಇರುತ್ತಿದ್ದ ನಂಜಪ್ಪ ರಾತ್ರಿ ವೇಳೆ ಎಲ್ಲೆಂದರಲ್ಲಿಗೆ ಅಂಜದೆ, ಅಳುಕದೆ ನುಗ್ಗಿ ನಡೆಯುತ್ತಿದ್ದರು. ತಮ್ಮ ರಕ್ಷಣೆಗಾಗಿ ಸದಾ ಒಂದು ನಾಡ ಬಂದೂಕನ್ನು ಸಹ ಹೊಂದಿರುತ್ತಿದ್ದರು.

ಇವರ ಸುಳಿವು ನೀಡಿದವರಿಗೆ ಎರಡು ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿತ್ತು.     ಅಷ್ಟರಮಟ್ಟಿಗೆ ನಂಜಪ್ಪ ಬ್ರಿಟಿಷರ ಕಣ್ಣಿಗೆ ಸಿಂಹಸ್ವಪ್ನವಾಗಿದ್ದರು.‌  ಹಾಗಾಗಿ ಅವರನ್ನು  ನಂಜಪ್ಪನನ್ನು ಪೋಲಿಸರು ಸದಾ ಬೆನ್ನತ್ತಿರುತ್ತಿದ್ದರು. ಹೀಗಿರುವಾಗ ನಂಜಪ್ಪ ನವೆಂಬರ್ 11ರಂದು ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾದರು. ಹದಿನಾರನೆಯ ವಯಸ್ಸಿಗೆ ಚಳವಳಿಯಲ್ಲಿ ಧುಮುಕಿ ಮೂವತ್ತೈದನೆಯ ವಯಸ್ಸಿನವರೆಗೆ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ದುಡಿದ ಕರ್ನಾಟಕದ ಕ್ರಾಂತಿ ಕಿಡಿಯೊಂದು ನಂದಿತು.

ಚೆಲ್ಲಬೇಕಿದೆ ಬೆಳಕು

ಕೊಟ್ರೆ  ನಂಜಪ್ಪ ನಿಜಕ್ಕೂ ಈ ನಾಡು ಕಂಡ ಅಪ್ರತಿಮ ದೇಶಪ್ರೇಮಿ. ಅನೇಕರನ್ನು ಹೋರಾಟಕ್ಕೆ ಪರಿಚಯಿಸಿದ ಈ ಮಹಾನ್ ಸಾಧಕನ ರೋಚಕ ಜೀವನ ಮಾತ್ರ ಬೆಳಕಿಗೆ ಬರಲಿಲ್ಲ. ಇತಿಹಾಸದ ಪುಟಗಳಲ್ಲಿ ಅನೇಕ ಪ್ರಸಿದ್ಧರು  ಕೇವಲ ಆನುಷಾಂಗಿಕವಾಗಿ ಕೊಟ್ರೆ ನಂಜಪ್ಪನವರ  ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ ವಿನಃ  ಎಲ್ಲಿಯೂ ಬದುಕಿನ ವಿವರಗಳಾಗಲಿ  ಹೋರಾಟದ ಮಾಹಿತಿಗಳಾಗಲಿ ಒದಗಿಸುವುದಿಲ್ಲ. ಅಷ್ಟರಮಟ್ಟಿಗೆ ಇತಿಹಾಸಕಾರರು ಕೊಟ್ರೆ ನಂಜಪ್ಪನವರನ್ನು ಮರೆಮಾಚಿದ್ದಾರೆ.

ಅದೃಷ್ಟವಶಾತ್ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಹೊಳಲ್ಕೆರೆ ಪಟ್ಟಣದಲ್ಲಿ ತೆರೆದಿರುವ ಪದವಿ ಪೂರ್ವ ಕಾಲೇಜಿಗೆ ಕೊಟ್ರೆ ನಂಜಪ್ಪನವರ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ಮಾತ್ರ ಈ ಹೆಸರು ಅಲ್ಲಿ ಓದಿದ ವಿದ್ಯಾರ್ಥಿಗಳ ಬಾಯಲ್ಲಿ ಕೇಳಿ ಬರುತ್ತಿದೆ.‌ ಅದರಾಚೆಗೆ ಅಪರಿಚಿತವಾಗಿ ಉಳಿದಿದೆ. ಮಧ್ಯ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ತಂದುಕೊಟ್ಟ ಹುತಾತ್ಮರಾದ   ಕೊಟ್ರೆ  ನಂಜಪ್ಪನವರ ನಿಸ್ವಾರ್ಥ ಹೋರಾಟ, ಅಪ್ರತಿಮ ಸಾಹಸ, ದೇಶಪ್ರೇಮ ಇಂದಿನ ಯುವಜನರಿಗೆ ಪರಿಚಯಿಸುವ ಅಗತ್ಯವಿದೆ.

One thought on “ಕತ್ತಲಲ್ಲಿ ಕರಗಿಹೋದ ಹೊಳಲ್ಕೆರೆಯ ಸ್ವಾತಂತ್ಯ್ರ ಸೇನಾನಿ ಕೊಟ್ರೆ ನಂಜಪ್ಪ”

  1. ನಾಗರಾಜ ಸಿರಿಗೆರೆ ಅವರು ಸ್ವಾತಂತ್ರ್ಯ ಹೋರಾಟಗಾರ ಕೊಟ್ರೆ ನಂಜಪ್ಪ ಅವರ ಬಗ್ಗೆ ಒಳ್ಳೆಯ ಮಾಹಿತಿ ಗ್ರಹಿಸಿ ಕೊಟ್ಟಿದ್ದಾರೆ. ಕೊಟ್ರೆ ಅವರು ಗಾಂಧಿ ಹಾಗೂ ಸುಭಾಶ್ಚಂದ್ರ ಬೋಸ್ ಅವರ ಒಡನಾಟದಲ್ಲಿದ್ದು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟ ಕೊಡುಗೆ ಅಸಾಮಾನ್ಯವಾದ್ದು.
    ಕೊಟ್ರೆ ಅವರು ಬ್ರಿಟೀಷರ ಗುಂಡಿಗೆ ಬಲಿಯಾದ ಹುತಾತ್ಮರು. ಈ ವಿಚಾರ ಓದಿ ದುಃಖವಾಯ್ತು. ಅವರ ಸ್ಮಾರಕ ಇರಬೇಕಿತ್ತು. ಇಡೀ ಬದುಕನ್ನೆ ದೇಶ ಸೇವೆಗೆ ಮುಡಿಪಾಗಿಟ್ಟ ಅವರೊಬ್ಬ ಅಪ್ಪಟ ರಾಷ್ಟ್ರ ಭಕ್ತ. ತರಳಬಾಳು ಜಗದ್ಗುರುಗಳಾದರೂ ಅವರ ಸ್ಮರಣೆಗೆ ಕಾಲೇಜಿಗೆ ಹೆಸರಿಟ್ಟಿದ್ದು ಸಾರ್ಥಕ ಆಯ್ತು.

Leave a Reply

Your email address will not be published. Required fields are marked *