ನೂರು ಅಪರಾಧಿ; ಒಬ್ಬ ನಿರಪರಾಧಿ ಮತ್ತು ಒಂದು ಕಸ್ತೂರಿ ರಂಗನ್‌ ವರದಿ!

ನ್ಯಾಯಶಾಸ್ತ್ರದಲ್ಲಿ ಒಂದು ಅನೌಪಚಾರಿಕ ಮಾತಿದೆ. ನೂರು ಅಪರಾಧಿ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯಾಗಬಾರದು. ಇದರ ಆಶಯ, ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕಿಂತಲೂ ತಪ್ಪಿತಸ್ಥರಲ್ಲದವರ ಅಥವಾ ಸಂತ್ರಸ್ತರ ರಕ್ಷಣೆಯು ನ್ಯಾಯಕ್ರಿಯೆಯ ಆದ್ಯತೆಯಾಗಿರಬೇಕು ಎಂಬುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ಶಿಕ್ಷೆ ಮತ್ತು ರಕ್ಷಣೆಯ ಆಯ್ಕೆಗಳನ್ನು ಮುಂದಿರಿಸಿದಾಗ  ನ್ಯಾಯಪೀಠದ ಆಯ್ಕೆ ರಕ್ಷಣೆಯಾಗಿರಬೇಕು. ಯಾಕೆಂದರೆ ಶಿಕ್ಷೆ ಒಬ್ಬ ಅಪರಾಧಿಯಲ್ಲಿ ಪಾಪಪ್ರಜ್ಞೆ ಅಥವಾ ಪರಿವರ್ತನೆಯನ್ನು ತರುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ ಒಬ್ಬ ಅಸಹಾಯಕನಿಗೆ ಸಿಗುವ ರಕ್ಷಣೆ, ಆತನಲ್ಲಿ ವ್ಯವಸ್ಥೆಯ ಮೇಲೆ ನಂಬಿಕೆ ಮೂಡುವಂತೆ ಖಂಡಿತ ಮಾಡುತ್ತದೆ. ಮತ್ತು ಆ ಮೂಲಕ ಆತ ಪ್ರತೀಕಾರದ ಅಪರಾಧಿಯಾಗಬಹುದಾದ ಸಂಭವವನ್ನು ತಪ್ಪಿಸುತ್ತದೆ. ಇದು ಕೇವಲ ನ್ಯಾಯದಾನ ವ್ಯವಸ್ಥೆಗೆ ಮಾತ್ರ ಸೀಮಿತವಾದುದಲ್ಲ; ಎಲ್ಲಾ ಕಡೆಯೂ ಸಲ್ಲುವಂತಹ ಎಚ್ಚರ.

ಕಸ್ತೂರಿ ರಂಗನ್‌ ವರದಿಗೆ ಉದ್ಭವಿಸಿರುವ ವಿರೋಧವನ್ನು ಗ್ರಹಿಸುವಾಗ ನಮಗೆ ಈ ಎಚ್ಚರದ ಪಾಠ ಮುಖ್ಯವಾಗಬೇಕಾಗುತ್ತದೆ. ಈ ವರದಿಯ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶ (ESA)ಗಳನ್ನು ನೋಟಿಫೈ ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಗೂ, ಈ ಹಿಂದಿನ ಆರು ಅಧಿಸೂಚನೆಗಳಿಗೆ ವ್ಯಕ್ತವಾಗಿದ್ದ ವಿರೋಧ ವ್ಯಕ್ತವಾಗುತ್ತಿದೆ. ತಲೆಮಾರುಗಳಿಂದ ಈ ಭಾಗದಲ್ಲಿ ನೆಲೆಸಿ, ಕೃಷಿ ಚಟುವಟಿಕೆಯ ಮೂಲಕ ಜೀವನೋಪಾಯ ಕಂಡುಕೊಂಡಿರುವ ಸುಮಾರು 4156 ಗ್ರಾಮಗಳ ಜನ ಆತಂಕಕ್ಕೆ ಈಡಾಗಿದ್ದಾರೆ. ಪ್ರಸ್ತುತ ESA ಗಡಿ ಗುರುತಿಸುವಿಕೆಯನ್ನು ವಿರೋಧಿಸುತ್ತಿದ್ದಾರೆ. ಅವರ ಆತಂಕವನ್ನು ಅರ್ಥ ಮಾಡಿಕೊಳ್ಳುತ್ತಲೇ, ಅವರ ಬೆನ್ನಹಿಂದೆ ಒಂದಷ್ಟು ಗಣಿ ಮಾಫಿಯಾದವರು, ರಿಯಲ್‌ ಎಸ್ಟೇಟ್‌ ಉದ್ಯಮದವರು, ಬೃಹತ್‌ ಟೂರಿಸಂ ಸಂಸ್ಥೆಗಳು ಈ ವಿರೋಧವನ್ನು ತಮ್ಮ ಲಾಭಕ್ಕಾಗಿ ಪ್ರಚೋದಿಸುತ್ತಿದ್ದಾರೆ ಎನ್ನುವ ಒಳನೋಟಗಳೂ ಈಗ ಚರ್ಚೆಯಾಗುತ್ತಿವೆ. ಅದು ನಿಜವೂ ಇರಬಹುದು. ಇಂತಹ ಗೊಂದಲದ ಸಂದರ್ಭದಲ್ಲಿ ನಮ್ಮ ನಿಲುವು ಏನಾಗಿರಬೇಕು ಅನ್ನೋದಕ್ಕೆ ನ್ಯಾಯಶಾಸ್ತ್ರದ ಮೇಲಿನ ಮಾತು ಅಳತೆಗೋಲಾಗುತ್ತದೆ. ಕೆಲವು ಲಾಭಕೋರರ ಚಿತಾವಣೆ ಸತ್ಯವೆ ಆಗಿದ್ದರೂ, ಅವರ ಚಿತಾವಣೆಯನ್ನು ಗುಮಾನಿಸುವ ನೆಪದಲ್ಲಿ ಪ್ರಾಮಾಣಿಕವಾಗಿ ಆತಂಕಗೊಂಡು ಪ್ರತಿಭಟಿಸುತ್ತಿರುವವರ ಸ್ಥೈರ್ಯ ಉಡುಗುವಂತೆ ನಾವು ಮಾಡಬಾರದು. ಪ್ರಾಮಾಣಿಕರ ಕಾರಣಕ್ಕೆ ಒಂದಷ್ಟು ಲಾಭಕೋರರಿಗೆ ಅನುಕೂಲವಾದರೂ, ಲಾಭಕೋರರ ಮೇಲಿನ ಸಂಶಯದ ಕಾರಣಕ್ಕೆ ಒಬ್ಬ ಪ್ರಾಮಾಣಿಕ ವ್ಯಕ್ತಿಗೂ ಅನ್ಯಾಯವಾಗಬಾರದು.

ಗಾಡ್ಗಿಳ್‌-ರಂಗನ್‌ ವರದಿಗಳು

ಪಶ್ಚಿಮ ಘಟ್ಟಗಳ ಪರಿಸರ ಮತ್ತು ಜೀವವೈವಿಧ್ಯವನ್ನು ಸಂರಕ್ಷಿಸಲು 2011ರಲ್ಲಿ ಮಾಧವ್‌ ಗಾಡ್ಗಿಳ್‌ ನೇತೃತ್ವದ Western Ghats Ecology Expert Panel (WGEEP) ಸಮಿತಿ ಒಂದಷ್ಟು ನಿಯಮಗಳನ್ನು ಶಿಫಾರಸ್ಸು ಮಾಡಿತ್ತು. ಘಟ್ಟ ಪ್ರದೇಶದ ಶೇ.64ರಷ್ಟು ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದ ಸಮಿತಿ, ಅಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಶಿಫಾರಸ್ಸು ಮಾಡಿತ್ತು. ಗ್ರಿಡ್‌ ಮಾದರಿಯ ಸಮೀಕ್ಷೆ ನಡೆಸಿದ್ದ ಆ ಸಮಿತಿ ವ್ಯಾಪಕ ಜನವಸತಿ ಪ್ರದೇಶಗಳನ್ನೂ ಸೂಕ್ಷ್ಮ ಪ್ರದೇಶಗಳ ಪರಿಧಿಗೆ ಸೇರಿಸಿತ್ತು. ಪರಿಸರ ರಕ್ಷಣೆಯ ಹೆಸರಿನಲ್ಲಿ ತಮ್ಮ ಜೀವನೋಪಾಯ ಮತ್ತು ಅಭಿವೃದ್ಧಿ ಸಾಧ್ಯತೆಯನ್ನು ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಲಿದ್ದ ಅದರ ವಿರುದ್ಧ ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಬಾಧಿತ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಗಾಡ್ಗಿಳ್‌ ವರದಿಯನ್ನು ಮರುಪರಿಶೀಲಿಸಿ, ಆ ಭಾಗದ ಕೃಷಿಕರಿಗೆ ಹೆಚ್ಚು ತೊಂದರೆಯಾಗದಂತೆ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯನ್ನು ಮರುರೂಪಿಸಲು 2012ರಲ್ಲಿ ಡಾ. ಕಸ್ತೂರಿ ರಂಗನ್‌ ಅವರ ನೇತೃತ್ವದಲ್ಲಿ High-Level Working Group (HLWG) ರಚಿಸಲಾಯ್ತು. ಸ್ಯಾಟಲೈಟ್‌ ಡೇಟಾ ಆಧಾರಿತ ಸಮೀಕ್ಷೆ ನಡೆಸಿದ ಸಮಿತಿ 2013ರಲ್ಲಿ ತನ್ನ ವರದಿ ಸಲ್ಲಿಸಿತು. ಗಾಡ್ಗಿಳ್‌ ಗುರುತಿಸಿದ್ದ ಶೇ.64ರಷ್ಟು ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಶೇ.37ಕ್ಕೆ ಇಳಿಸಿತು. ಆದಾಗ್ಯೂ 59,940 ಚದರ ಕಿಮೀ ವ್ಯಾಪ್ತಿಯ ಈ ಪ್ರದೇಶದಲ್ಲಿ 4156 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ನೋಟಿಫೈ ಮಾಡಲಾಗಿತ್ತು.

ಪಶ್ಚಿಮ ಘಟ್ಟದ ರೈತರ ಆತಂಕವೇನು?

ಪರಿಸರ ಸೂಕ್ಷ್ಮ ಪ್ರದೇಶವೆಂದರೆ, ಅಭಯಾರಣ್ಯಗಳಿಗಿರುವಂತೆ ಬೇಲಿಯನ್ನು ಹಾಕಿ, ಮಾನವ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ, ಅಲ್ಲಿನ ನಿವಾಸಿಗಳನ್ನು ಸಂಪೂರ್ಣವಾಗಿ ಒಕ್ಕಲೆಬ್ಬಿಸುವಂತದ್ದೇನಲ್ಲ. ಹಾಗಾಗಿ ಅಲ್ಲಿ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ; ಅವರ ಕೃಷಿ ಭೂಮಿಗಳನ್ನು ಅರಣ್ಯ ಸಂಪತ್ತೆಂದು ವಶಪಡಿಸಿಕೊಳ್ಳಲಾಗುವುದಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಜನವಸತಿ ಪ್ರದೇಶಗಳೂ ಸೇರಿದಂತೆ ಈ 59,940 ಚದರ ಕಿಮೀ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಕೆಲವು ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುತ್ತದೆ. ಹೊಸ ಗಣಿಗಾರಿಕೆ, ಶಾಖ ವಿದ್ಯುತ್‌ ಸ್ಥಾವರುಗಳು ಮತ್ತು ಅಪಾರ ಮಾಲಿನ್ಯಕ್ಕೆ ಕಾರಣವಾಗುವ ರೆಡ್‌ ಕೆಟಗರಿಯ ಕೈಗಾರಿಕೆಗಳಿಗೆ ಖಡಾಖಂಡಿತವಾಗಿ ಅನುಮೋದನೆ ನೀಡಲಾಗುವುದಿಲ್ಲ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇಂತಹ ಘಟಕಗಳು ಕೂಡಾ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಐದು ವರ್ಷದ ಒಳಗೆ ನಿಧಾನಕ್ಕೆ ತನ್ನ ಕಾರ್ಯಸ್ಥಗಿತಕೊಳಿಸಬೇಕು. ಹೊಸ ವಿಸ್ತರಣೆಗಳಿಗೆ ಮುಂದಾಗುವಂತಿಲ್ಲ. ಅಲ್ಲದೇ, 20,000 ಚದರ ಮೀಟರ್‍‌ಗಿಂತಲು ಹೆಚ್ಚಿನ ಅಳತೆಯ ಬೃಹತ್‌ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ; 50 ಹೆಕ್ಟೇರ್‍‌ಗಿಂತ ವಿಶಾಲವಾದ ಟೌನ್‌ಶಿಪ್‌ ನಿರ್ಮಾಣ ಮಾಡುವಂತಿಲ್ಲ. ಇಷ್ಟೇ ಆಗಿದ್ದರೆ ರೈತರು ಆತಂಕಗೊಳ್ಳುವ ಅಗತ್ಯವಿರಲಿಲ್ಲ. ಆದರೆ ಅರಣ್ಯ ಇಲಾಖೆಗೆ ಈ ವ್ಯಾಪ್ತಿಯ ಮೇಲೆ ಹೆಚ್ಚು ಸ್ವಾಯತ್ತತೆ ಲಭಿಸುವುದರಿಂದ, ಕೃಷಿ ಚಟುವಟಿಕೆಯ ಆಧುನೀಕತೆಗೆ ಕಡಿವಾಣ ಬೀಳುತ್ತದೆ. ಬೇರೆ ರೈತರಿಗೆ ಹೋಲಿಸಿದರೆ ಅವರ ಇಳುವರಿ ಕುಂಠಿತವಾಗಿ ನಷ್ಟಕ್ಕೆ ಈಡಾಗುತ್ತಾರೆ. ಸರ್ಕಾರವೇ ಕೈಗೊಳ್ಳುವ ಮೂಲಸೌಕರ್ಯಗಳ ಅಭಿವೃದ್ಧಿಗಳಿಗೂ ನಿಯಂತ್ರಣ ಹೇರಲ್ಪಡುತ್ತದೆ.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಆ ಜನರನ್ನು ಅಭಿವೃದ್ಧಿಯಿಂದ ವಂಚಿಸಿದಂತಾಗುತ್ತದೆ. ಅರಣ್ಯ ಅಧಿಕಾರಿಗಳ ಉಪಟಳ ಹೆಚ್ಚಾಗುತ್ತದೆ. ಜಮೀನುಗಳ ವಾಣಿಜ್ಯ ಮೌಲ್ಯ ಕುಸಿದು ಅವರು ಅಪಾರ ನಷ್ಟಕ್ಕೆ ತುತ್ತಾಗಬೇಕಾಗುತ್ತದೆ. ತಾವು ಬೆಳೆದ ಬೆಳೆ ಸಂರಕ್ಷಿಸಿಕೊಳ್ಳಲೂ ಅರಣ್ಯ ನಿರ್ಬಂಧಗಳಿಂದಾಗಿ ಅಸಹಾಯಕರಾಗುತ್ತಾರೆ.

ಕರ್ನಾಟಕದಲ್ಲೇಕೆ ಹೆಚ್ಚಿನ ವಿರೋಧ?

ಪಶ್ಚಿಮ ಘಟ್ಟಗಳು ಆರು ರಾಜ್ಯಗಳಲ್ಲಿ ಹಾದುಹೋಗುತ್ತವಾದರೂ ಕರ್ನಾಟಕದಲ್ಲಿ ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜನರ ಒತ್ತಡಕ್ಕೆ ಮಣಿದು ಈ ಹಿಂದೆ ಸಚಿವ ಸಂಪುಟ ಸಭೆಯ ನಿರ್ಣಯದ  ಮೂಲಕ ಇಲ್ಲಿನ ಸರ್ಕಾರಗಳು ತಮ್ಮ ವಿರೋಧವನ್ನು ಕೇಂದ್ರಕ್ಕೆ ರವಾನಿಸುತ್ತಾ ಬಂದಿವೆ. ಈಗಂತೂ, ಮೂರು ದಿನಗಳ ವಿಶೇಷ ಅಧಿವೇಶವನ್ನು ಕರೆದು ಚರ್ಚಿಸಲಾಗುತ್ತಿದೆ. ಒಕ್ಕೊರಲಿನಿಂದ ವಿರೋಧದ ನಿಲುವಳಿ ಅಂಗೀಕಾರವಾಗುವ ಸಾಧ್ಯತೆಯು ಢಾಳಾಗಿದೆ.

ಇಂಥಾ ತೀವ್ರ ಪ್ರತಿರೋಧಕ್ಕೆ ಕಾರಣವಿದೆ. ಕಸ್ತೂರಿ ರಂಗನ್‌ ವರದಿ ಅನುಷ್ಠಾನಗೊಂಡರೆ, ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚು ಸಂಕಷ್ಟಕ್ಕೆ ಸಿಲುಕುವುದು ಕರ್ನಾಟಕದ ರೈತರು ಮತ್ತು ಇಲ್ಲಿನ ಪ್ರಾದೇಶಿಕ ಅಭಿವೃದ್ಧಿ. ವರದಿ ಗುರುತಿಸಿರುವ ಒಟ್ಟು 59,940 ಚದರ ಕಿಮೀ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಅತಿಹೆಚ್ಚು ಸೂಕ್ಷ್ಮ ಪ್ರದೇಶ ಇರುವುದು ಕರ್ನಾಟಕದಲ್ಲಿ 20,668 ಚ.ಕಿ.ಮೀ ವಿಸ್ತೀರ್ಣ ESA ಭಾಗವಾಗುತ್ತವೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 17,340 ಚ.ಕಿ.ಮೀ, ಕೇರಳದಲ್ಲಿ 9,993 ಚ.ಕಿ.ಮೀ, ತಮಿಳುನಾಡಿನಲ್ಲಿ 6,914 ಚ.ಕಿ.ಮೀ, ಗೋವಾದಲ್ಲಿ 1,461 ಚ.ಕಿ.ಮೀ ಮತ್ತು ಗುಜರಾತ್‌ನಲ್ಲಿ ಕೇವಲ 449 ಚ.ಕಿ.ಮೀ ವ್ಯಾಪ್ತಿ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಕರ್ನಾಟಕದ 1,576 ಗ್ರಾಮಗಳು ಬಾಧಿಸಲ್ಪಡುತ್ತವೆ. ಹಾಗಾಗಿ ಇಲ್ಲಿ ಇಷ್ಟು ದೊಡ್ಡ ಪ್ರತಿರೋಧ ಭುಗಿಲೇಳುತ್ತಿದೆ.

ಪರಿಹಾರವೇನು?

ಜೀವವೈವಿಧ್ಯತೆಯ ಪರಿಸರವನ್ನು ಸಂರಕ್ಷಿಸಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕು. ಆದರೆ, ಆ ನೆಪದಲ್ಲಿ ಲಕ್ಷಾಂತರ ಜನರ ಬದುಕಿಗೆ ಅನಗತ್ಯ ಅಸ್ಥಿರತೆಯನ್ನು ತೊಂದೊಡ್ಡದಂತೆ ಎಚ್ಚರವಹಿಸಬೇಕಿದೆ. ಕಡೇಪಕ್ಷ, ಈ ಹಾನಿಯನ್ನು ಎಷ್ಟು ಕಡಿಮೆಗೊಳಿಸಲು ಸಾಧ್ಯವಿದೆಯೋ ಆ ಆಯ್ಕೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ. ಗಾಡ್ಗಿಳ್‌ ವರದಿಯಾಗಲಿ, ಅಥವಾ ಕಸ್ತೂರಿ ರಂಗನ್‌ ವರದಿಯಾಗಲಿ  ಭೌತಿಕ ಸ್ಥಳ ಭೇಟಿಯ ಮೂಲಕ, ಜನವಸತಿ ಮತ್ತು ಅರಣ್ಯ ವ್ಯಾಪ್ತಿಯನ್ನು ಅಧ್ಯಯನ ಮಾಡಿ ಸೂಕ್ಷ್ಮ ಪ್ರದೇಶದ ಗಡಿಗಳನ್ನು ಗುರುತಿಸಿಲ್ಲ. ಸ್ಯಾಟಲೈಟ್ ಡೇಟಾಗಳನ್ನು ಆಧರಿಸಿ ವರ್ಗೀಕರಿಸಲಾಗಿದೆ. ಅಪಾರ ಜನವಸತಿ ಮತ್ತು ಕೃಷಿ ಪ್ರದೇಶಗಳೂ ESA ಭಾಗವಾಗಲು ಈ ದೋಷವೇ ಮುಖ್ಯಕಾರಣ. ಅಲ್ಲಿನ ಜನ ಮುಂದಿಡುತ್ತಿರುವುದು, ಇದರ ಬದಲು ಸ್ಥಳ ಪರಿವೀಕ್ಷಣೆ ನಡೆಸಿ, ಯಾವುದು ಅರಣ್ಯ, ಯಾವುದು ಕೃಷಿ ಜಮೀನು ಎಂಬುದನ್ನು ಪ್ರಾಯೋಗಿಕವಾಗಿ ವಿಂಗಡಿಸಿ ಎನ್ನುವ ಸರಳ ಬೇಡಿಕೆಯನ್ನು. ವಿವಾದಿತ ಎಸ್‌ಐಆರ್‍‌ ಪ್ರಕ್ರಿಯೆ ನಡೆಸುವುದಕ್ಕಿಂತಲೂ ಸುಲಭವಾಗಿ ಮಾಡಬಹುದಾದ ಕೆಲಸವಿದು.

ಆ ಬೇಡಿಕೆಯನ್ನು ಮನ್ನಿಸದೆ ಪದೇಪದೇ ಅಧಿಸೂಚನೆಯನ್ನು ಹೊರಡಿಸುತ್ತಲೇ ಇದ್ದರೆ, ವಿರೋಧ ಭುಗಿಲೇಳುತ್ತಲೇ ಇರುತ್ತದೆ, ಪರಿಸರ ಸಂರಕ್ಷಣೆಯ ಕಾಳಜಿಯೂ ಮುಂದೂಡಲ್ಪಡುತ್ತದೆ. ಇದರ ಅನುಕೂಲ ಲಾಭಕೋರ ಉದ್ಯಮಿಗಳ ಪಾಲಾಗುತ್ತದೆಯೆ ಹೊರತು ಪರಿಸರಕ್ಕೂ ಲಾಭವಿಲ್ಲ, ರೈತರಿಗೂ ನೆಮ್ಮದಿಯಿಲ್ಲ. ಯಾಕೆಂದರೆ ಭಾಗೀದಾರಿ ರಾಜ್ಯಗಳ ಸಂಪೂರ್ಣ ಸಮ್ಮಿತಿಯಿಲ್ಲದೆ ಈ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಕರಡು ಅಧಿಸೂಚನೆ ಹೊರಡಿಸಿದ ದಿನದಿಂದ 545 ದಿನಗಳ ಒಳಗಾಗಿ ಎಲ್ಲಾ ರಾಜ್ಯಗಳು ತಮ್ಮ ಸಮ್ಮತಿ ನೀಡದಿದ್ದರೆ ಅಥವಾ ಒಂದು ರಾಜ್ಯ ಅಸಮ್ಮತಿಯನ್ನು ದಾಖಲಿಸಿದರೂ, ಆ ಕರಡು ಅಧಿಸೂಚನೆ ಬರಖಾಸ್ತಾಗುತ್ತದೆ. ಈ ಹಿಂದೆ ಆರು ಕರಡುಗಳು ಬಿದ್ದು ಹೋಗಿದ್ದು ಇದೇ ರೀತಿ. ಈ ಸಲ ಕರ್ನಾಟಕ ಅಸಮ್ಮತಿಸಿದರೆ, ಏಳನೆಯದೂ ಬಿದ್ದುಹೋಗಲಿದೆ. ಇಲ್ಲಿನ ರೈತರ ಆತಂಕಗಳನ್ನು ಬದಿಗೊತ್ತಿ ಯಾವ ಸರ್ಕಾರಗಳೂ ಸಮ್ಮತಿ ನೀಡಲಾರವು. ಎಂಟು, ಒಂಬತ್ತು, ಹತ್ತನೆ ಅಧಿಸೂಚನೆಗಳು ಬರುತ್ತಲೇ ಇರುತ್ತವೆ, ಮೂಲೆ ಹಿಡಿಯುತ್ತಲೇ ಸಾಗುತ್ತವೆ. ಅಷ್ಟರಲ್ಲಿ ಪರಿಸರಕ್ಕೆ ಹಾನಿ ಮಾಡಿ, ತಾವು ಮಾಡಿಕೊಳ್ಳಬಹುದಾದ ಲಾಭವನ್ನು ಉದ್ಯಮಿಗಳು ಪಡೆದುಕೊಳ್ಳುತ್ತಿರುತ್ತಾರೆ. ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕಾಳಜಿ ನಿಜಕ್ಕೂ ಇದ್ದಿದ್ದೇ ಆದಲ್ಲಿ, ರೈತರ ಬೇಡಿಕೆಯಂತೆ ಸ್ಥಳಭೇಟಿಯ ಗಡಿ ನಿಶ್ಚಯಕ್ಕೆ ತುರ್ತಾಗಿ ಮುಂದಾಗಬೇಕಿದೆ.

Leave a Reply

Your email address will not be published. Required fields are marked *