ಶಿಕ್ಷಕರು ಮತ್ತು ಪದವೀಧರರ ನಾಲ್ಕು ಕ್ಷೇತ್ರಗಳಿಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ನಾಲ್ಕರಲ್ಲೂ ಜಯಗಳಿಸಿ ತಮ್ಮ ಪ್ರಾಬಲ್ಯ ಮರುಸ್ಥಾಪಿಸಿದ್ದರೆ, ಕಾಂಗ್ರೆಸ್ ಸೊನ್ನೆ ಸುತ್ತುವ ಮೂಲಕ ತೀವ್ರ ಮುಖಭಂಗಕ್ಕೆ ಈಡಾಗಿದೆ. 2028ರ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಅಂತೇಳುವುದು ಆತುರದ ಮಾತಾಗುತ್ತದಾದರೂ, ಮುಂಬರುವ ವಿಧಾನಸಭಾ ಚುನಾವಣೆಗೆ ಹೇಗೆ ತಯಾರಾಗಬೇಕೆನ್ನುವ ಕುರಿತು ಮೂರೂ ಪಕ್ಷಗಳಿಗೆ ಈ ಫಲಿತಾಂಶದಲ್ಲಿ ಪಾಠಗಳಿವೆ.
ಈಗ ಚುನಾವಣೆ ನಡೆದ ನಾಲ್ಕು ಕ್ಷೇತ್ರಗಳ ಪೈಕಿ ಆಗ್ನೇಯ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳು, ಈಶಾನ್ಯ ಶಿಕ್ಷಕರ ಕ್ಷೇತ್ರ 2020ರಿಂದಲೂ ಬಿಜೆಪಿ ತೆಕ್ಕೆಯಲ್ಲಿದ್ದವು. ಅವುಗಳನ್ನು ಜತನ ಮಾಡಿಕೊಳ್ಳುವಲ್ಲಿ ಬಿಜೆಪಿ ಗೆದ್ದಿದೆ. ಆದರೆ ತನ್ನ ತೆಕ್ಕೆಯಲ್ಲಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕಳೆದುಕೊಂಡಿರುವುದು ಕಾಂಗ್ರೆಸ್ಗೆ, ಅದರಲ್ಲೂ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ದೊಡ್ಡ ಹಿನ್ನಡೆ. ಸತತ ಐದು ಬಾರಿ ಬೇರೆಬೇರೆ ಪಕ್ಷಗಳಿಂದ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದ ಪಿ. ಪುಟ್ಟಣ್ಣನವರ ವೈಯಕ್ತಿಕ ವರ್ಚಸ್ಸಿನ ಹೊರತಾಗಿಯೂ ಕಾಂಗ್ರೆಸ್ ಇಲ್ಲಿ ಸೋತಿದೆ. ಹಾಗೆ ನೋಡಿದರೆ ಆರಂಭದಿಂದಲೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಜೆಡಿಎಸ್ನ ಭದ್ರ ನೆಲೆ. 2002ರಿಂದ 2020ರವರೆಗೆ ಪಿ ಪುಟ್ಟಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಇಲ್ಲಿ ಗೆಲ್ಲುತ್ತಾ ಬಂದಿದ್ದರು. 2020ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದರು. 2024ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ವಲಸೆ ಬಂದ ಅವರು, ಆ ವರ್ಷದ ಫೆಬ್ರವರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಿದ್ದರು.
ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಡಿ ಕೆ ಸುರೇಶ್ ಅವರ ಪ್ರಾಬಲ್ಯವಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ (ಹಿಂದಿನ ರಾಮನಗರ) ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಇಲ್ಲಿ ಒಕ್ಕಲಿಗ ಸಮುದಾಯ ನಿರ್ಣಾಯಕ ಓಟ್ಬ್ಯಾಂಕ್. ಈ ಸಮುದಾಯದ ನಾಯಕತ್ವಕ್ಕಾಗಿ ದೇವೇಗೌಡರ ಕುಟುಂಬದ ಜೊತೆಗೆ ಜಿದ್ದಾಜಿದ್ದಿಗೆ ಮುಂದಾಗಿದ್ದ ಡಿ ಕೆ ಶಿವಕುಮಾರ್ ಅವರ ಪಾಲಿಗೆ ಪುಟ್ಟಣ್ಣನವರ ಗೆಲುವು ಅತ್ಯಗತ್ಯವಾಗಿತ್ತು. ಅದರಲ್ಲೂ, ಅಧಿಕಾರ ಪಲ್ಲಟದ ನಂತರ ಸಿಎಂ ಆಗಿ ಅವರು ಎದುರಿಸುತ್ತಿರುವ ಮೊಟ್ಟಮೊದಲ ನೇರ (ಮತದಾರರನ್ನು ಎಡತಾಕುವ) ಚುನಾವಣೆ ಇದಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ, ಇತ್ತೀಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರು ಡಿ ಕೆ ಶಿವಕುಮಾರ್ ಅವರ ಮೇಲೆ ತೀವ್ರ ಪೈಪೋಟಿಗೆ ಇಳಿದಿದ್ದಾರೆ. ಇಂಥಾ ಸಮಯದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅವರು ವಿಪರೀತ ಮುತುವರ್ಜಿ ವಹಿಸಿದ್ದರು.

ಈಗ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಮೂಲಕ, ಒಕ್ಕಲಿಗ ಸಮುದಾಯದ ನಾಯಕತ್ವದ ವಿಚಾರದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿಯವರ ಎದುರು ಹಿನ್ನಡೆಯಾದಂತಾಗಿದೆ. ಬಿಡದಿ ಭೂಸ್ವಾಧೀನ ವಿರುದ್ಧ ರೈತರ ಹೋರಾಟ, ನೈಸ್ ಪ್ರಕರಣದ ಮರುಜನ್ಮ, ಸ್ಟಿಂಗ್ ಆಪರೇಷನ್ ತಲ್ಲಣಗಳಿಂದಾಗಿ ತೀವ್ರ ಮುಜುಗರಕ್ಕೆ ಈಡಾಗಿದ್ದ ಕಾಂಗ್ರೆಸ್ಗೆ ಎದುರಾಗಿರುವ ಈ ಶೂನ್ಯ ಫಲಿತಾಂಶವನ್ನು ಪಕ್ಷದ ಹೈಕಮಾಂಡ್ ಹೇಗೆ evaluate ಮಾಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ. ಯಾಕೆಂದರೆ, ಸಿದ್ದರಾಮಯ್ಯನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಅವರನ್ನು ತಂದು ಕೂರಿಸಿದ ಪಕ್ಷದ ಪ್ರಯೋಗದ ಮಾಪನವಾಗಿ ಈ ಫಲಿತಾಂಶವನ್ನು ಹೈಕಮಾಂಡ್ ಪರಿಗಣಿಸುವುದೋ? ಅಥವಾ ಈಗಷ್ಟೆ ಸಿಎಂ ಹುದ್ದೆಗೇರಿರುವ ಡಿ ಕೆ ಶಿವಕುಮಾರ್ ಅವರ ಹೆಗಲಿಗೆ ಸಂಪೂರ್ಣವಾಗಿ ಈ ಸೋಲು ವರ್ಗಾಯಿಸದೆ, ಕಾದು ನೋಡುತ್ತದೋ? ಎಂಬುದೀಗ ಪಕ್ಷದ ವರಿಷ್ಠರ ಕೈಯಲ್ಲಿದೆ.
ಸಿದ್ದು ಪದತ್ಯಾಗ: ಕೈಕೊಟ್ಟ ಮಹಿಳೆಯರು?
ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಸೋಲು ಕೇವಲ ಡಿ ಕೆ ಶಿವಕುಮಾರ್ ಅವರ ಪ್ರಾಬಲ್ಯದ ಕಾರಣಕ್ಕೆ ಮಾತ್ರವಲ್ಲದೆ ಸಿದ್ದರಾಮಯ್ಯನವರ ಪದಚ್ಯುತಿಯ ಫ್ಯಾಕ್ಟರ್ನಿಂದಲೂ ಮುಖ್ಯವಾಗುತ್ತದೆ. ಇಲ್ಲಿ ಒಟ್ಟು 22,468 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಅವರ ಪೈಕಿ 14,108 ಮಹಿಳಾ ಮತದಾರರು. ಪುರುಷ ಮತದಾರರ ಸಂಖ್ಯೆ ಕೇವಲ 8,360 ಮಾತ್ರ! ಮಹಿಳೆಯರೆ ಇಲ್ಲಿ ದೊಡ್ಡ ಮತಸಮೂಹ. ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಮೊದಲಾದ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ನಂತರ ಸಿದ್ದರಾಮಯ್ಯನವರಿಗೆ ದೊಡ್ಡ ಮಹಿಳಾ ಮತ ಸಮೂಹ ಸೃಷ್ಟಿಯಾಗಿತ್ತೆಂದು ಹಲವು ವಿಶ್ಲೇಷಕರು ವ್ಯಾಖ್ಯಾನಿಸಿದ್ದರು ಮತ್ತು 2025ರಲ್ಲಿ ಪ್ರಕಟವಾದ ಪೀಪಲ್ಸ್ ಪಲ್ಸ್ ಸಮೀಕ್ಷೆ ಕೂಡಾ ಇದನ್ನು ದೃಢಪಡಿಸಿತ್ತು. ಶೇ. 39.1 ಮಹಿಳೆಯರು (ಶೇ. 26.1 ಪುರುಷರು) ಸಿದ್ದರಾಮಯ್ಯನವರ ಪರ ಅಭಿಪ್ರಾಯ ಹಂಚಿಕೊಂಡಿದ್ದರು. ಗಮನಾರ್ಹವೆಂದರೆ ಕರ್ನಾಟಕದ ಬೇರಾವ ರಾಜಕಾರಣಿಗೂ ಮಹಿಳೆಯರ ಒಲವು ಈ ಸಮೀಕ್ಷೆಯಲ್ಲಿ ಎರಡಂಕಿ ದಾಟಿರಲಿಲ್ಲ. ತಮ್ಮ ಪರವಾಗಿ ಮಹಿಳಾ ಮತದಾರರ ಬೆಂಬಲ ಹೆಚ್ಚಾಗುತ್ತಿರುವುದನ್ನು ಆರಂಭದಲ್ಲಿಯೇ ಮನಗಂಡ ಸಿದ್ದರಾಮಯ್ಯನವರು 2024ರ ಲೋಕಸಭಾ ಚುನಾವಣಾ ಸಮಯದಲ್ಲಿ ಮಹಿಳಾ ಮತದಾರರಿಗೆ ವಿಶೇಷ ಬಹಿರಂಗ ಪತ್ರ ಬರೆದು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕೋರಿಕೊಂಡಿದ್ದರು. ಹೀಗೆ ಜಾತಿ ಸಮೀಕರಣಗಳನ್ನು ಮೀರಿ, ಮಹಿಳಾ ಮತದಾರರು ಸಿದ್ದರಾಮಯ್ಯನವರ ಕಾರಣಕ್ಕೆ ಕಾಂಗ್ರೆಸ್ನತ್ತ ಒಲವು ತೋರುತ್ತಿದ್ದಾರೆ ಎಂಬ ಅಭಿಪ್ರಾಯ ರೂಪುಗೊಂಡಿತ್ತು. ಈಗ ಅವರ ಪದಚ್ಯುತಿಯ ನಂತರ ನಡೆದ ಚುನಾವಣೆಯಲ್ಲಿ ಮಹಿಳಾ ಮತದಾರರೇ ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತು ತನ್ನ ತೆಕ್ಕೆಯಲ್ಲಿದ್ದ ಸ್ಥಾನ ಕಳೆದುಕೊಂಡಿರುವುದು ಈ ಫಲಿತಾಂಶದ ಒಂದು ವಿಶೇಷ ಫ್ಯಾಕ್ಟರ್ ಎಂದು ಪರಿಗಣಿಸಬಹುದು.

ಚುನಾವಣೆ ಕೆಲವೇ ದಿನ ಇದೆ ಎನ್ನುವಾಗ ಪಕ್ಷವನ್ನು ಬೇಗುದಿಗೆ ತಳ್ಳಿದ ‘ಸ್ಟಿಂಗ್ ಆಪರೇಷನ್’ ಚರ್ಚೆಯ ಪ್ರಭಾವ ಈ ಫಲಿತಾಂಶವನ್ನು ಹೇಗೆಲ್ಲಾ ಬಾಧಿಸಿದೆ ಎಂಬುದನ್ನೂ ಕಾಂಗ್ರೆಸ್ ಪಕ್ಷ ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ. ಇನ್ನು, ಡಿಸೆಂಬರ್ ವೇಳೆಗೆ ಎದುರಾಗಬಹುದಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯ ಮೇಲೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ನೇರ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈಗ ಚುನಾವಣೆ ಎದುರಿಸಿದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಜಿಬಿಎ ವ್ಯಾಪ್ತಿಗೆ ಒಳಪಡುತ್ತವೆ. ಶಿಕ್ಷಕರ ಕ್ಷೇತ್ರದ ಫಲಿತಾಂಶದ ಟ್ರೆಂಡ್, ಜಿಬಿಎ ಚುನಾವಣೆಗೂ ವರ್ಗಾವಣೆಯಾದರೆ ಡಿ ಕೆ ಶಿವಕುಮಾರ್ ಅವರ ನಾಯಕತ್ವ ದೊಡ್ಡ ಸಂಕಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಅಲ್ಲದೇ, ಜನವರಿಯೊಳಗೆ ನಡೆಯಲಿರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಈ ಫಲಿತಾಂಶ ಪರಿಣಾಮ ಬೀರದಂತೆ ನೋಡಿಕೊಳ್ಳುವ ಹೊಣೆ ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರ ಹೆಗಲ ಮೇಲಿದೆ.
ಮೈತ್ರಿಗಳಿಗೆ ಹೊಂದಾಣಿಕೆಯ ಸವಾಲು
ಇತ್ತ ಮೈತ್ರಿ ಪಕ್ಷಗಳ ಪಾಲಿಗೆ ಮೇಲ್ಮನೆ ಚುನಾವಣೆ ಫಲಿತಾಂಶ ದೊಡ್ಡ ಹುಮ್ಮಸ್ಸು ತಂದಿರುವುದು ನಿಜವಾದರೂ ಮೈಮರೆಯಬಾರದ ಎಚ್ಚರಿಕೆಗಳನ್ನೂ ರವಾನಿಸುತ್ತಿದೆ. ಬಿಜೆಪಿ ಈಗ ಗೆದ್ದಿರುವ ಮೂರು ಕ್ಷೇತ್ರಗಳನ್ನು 2020ರಲ್ಲೂ ಗೆದ್ದು ಕೊಂಡಿತ್ತು. ಆದರೆ ಆಗ ಬಿಜೆಪಿ ಪಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕಾರದಲ್ಲಿತ್ತು. ಈಗ ಅಧಿಕಾರ ಇಲ್ಲದಿದ್ದರೂ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ದೊಡ್ಡ ಸಾಧನೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್ನಿಂದ ತನ್ನದಾಗಿಸಿಕೊಂಡ ಜೆಡಿಎಸ್ ಸಾಧನೆಯೂ ಗಮನಾರ್ಹ. ಎನ್ಡಿಎ ಮೈತ್ರಿಯು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಅನಿವಾರ್ಯ ಎಂಬುದನ್ನು ಈ ಫಲಿತಾಂಶ ಸಾಬೀತು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧದ ತಮ್ಮ ಹೋರಾಟದಲ್ಲಿ ತಾಳಮೇಳ ಕಳೆದುಕೊಂಡಿರುವ ರಾಜ್ಯಮಟ್ಟದ ಮೈತ್ರಿ ನಾಯಕರು ಈ ಫಲಿತಾಂಶದಿಂದ ಪ್ರೇರಣೆಗೊಂಡು ಹೇಗೆ ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲಿದ್ದಾರೆ ಎಂಬುದು ಅವರ ಮುಂದಿರುವ ಸವಾಲು.

ಯಾಕೆಂದರೆ ಎನ್ಡಿಎ ಅಭ್ಯರ್ಥಿಗಳಿಗೆ ಗೆಲುವು ದಕ್ಕಿರುವುದು ನಿಜವಾದರೂ, ಅಂಕಿಅಂಶಗಳು ಬೇರೆಯದೆ ಕಥೆ ಹೇಳುತ್ತಿವೆ. ಉದಾಹರಣೆಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ (ಬಿಜೆಪಿ) ಈ ಬಾರಿ 15,596 ಮತ ಪಡೆದಿದ್ದಾರೆ. 2020ರಲ್ಲಿ ಇಲ್ಲಿ ಬಿಜೆಪಿ 10,200 ಮತ್ತು ಜೆಡಿಎಸ್ 3800 ಮತ ಪಡೆದಿದ್ದವು. ಅಂದರೆ ಮೈತ್ರಿಯ ಫಲವಾಗಿ ಎನ್ಡಿಎ ಗಳಿಕೆ 14,000 ಮತಗಳಿಗೆ ಅನಾಯಾಸವಾಗಿ ಹೆಚ್ಚಾಗಲಿತ್ತು. ಅದಕ್ಕಿಂತಲೂ ಕೇವಲ 1500 ಹೆಚ್ಚುವರಿ ಹೊಸ ಮತಗಳನ್ನು ಮೈತ್ರಿ ಪಕ್ಷಗಳು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆದರೆ ಕಾಂಗ್ರೆಸ್ ಇಲ್ಲಿ 2020ರಲ್ಲಿ 7,082 ಮತ ಪಡೆದಿತ್ತು. ಈ ಬಾರಿ ತನ್ನ ಗಳಿಕೆಯನ್ನು ಏಕಾಏಕಿ 5,200ರಷ್ಟು ಹೆಚ್ಚಿಸಿಕೊಂಡಿದೆ. ಅಂದರೆ ಮೈತ್ರಿ ಹೋರಾಟದ ಫಲವಾಗಿಯೂ ಎನ್ಡಿಎ ಕೇವಲ 1500 ಹೊಸ ಮತ ಪಡೆದಿದ್ದರೆ, ಕಾಂಗ್ರೆಸ್ ಏಕಾಂಗಿಯಾಗಿ 5200 ಮತ ಹೆಚ್ಚಿಸಿಕೊಂಡಿದೆ. ಅದೇ ರೀತಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮೈತ್ರಿಪಕ್ಷಗಳು ಕಳೆದ ಬಾರಿಗಿಂತ 9854 ಹೊಸ ಮತ ಪಡೆದಿದ್ದರೆ, ಕಾಂಗ್ರೆಸ್ 11,940 ಹೊಸ ಮತಗಳೊಂದಿಗೆ 24,388 ಮತ ಗಳಿಸಿದೆ. ಅಂದರೆ ತನ್ನ ಸಾಮರ್ಥ್ಯವನ್ನು ದುಪ್ಪಟ್ಟಾಗಿಸಿಕೊಂಡಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲೂ 2020ರ ತಮ್ಮ ಒಟ್ಟಾರೆ ಮತಗಳಿಕೆಗಿಂತ ಈ ಬಾರಿ ಮಿತ್ರಪಕ್ಷಗಳು 25,482 ಹೊಸ ಮತ ಪಡೆದರೆ, ಕಾಂಗ್ರೆಸ್ 34,315 ಹೊಸ ಮತ ಪಡೆದಿದೆ (ವಿವರಣೆಗೆ ಕೋಷ್ಟಕ ನೋಡಿ). ಹೊಸ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಮೈತ್ರಿ ಪಕ್ಷಗಳಿಗಿಂತ ಕಾಂಗ್ರೆಸ್ ಮುಂದಿದೆ. ಆದರೆ ಆ ವೇಗವನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ.

ಅಂತಿಮವಾಗಿ ಚುನಾವಣೆಗಳಲ್ಲಿ ಗೆಲುವು ಗೆಲುವೇ, ಸೋಲು ಸೋಲೆ! ತಮ್ಮ ಪಕ್ಷದ ಪಾರಂಪರಿಕ ಕಾಂಗ್ರೆಸ್-ವಿರೋಧಿ ಮತಗಳು ಅನಿವಾರ್ಯ ಕಾರಣದಿಂದಾಗಿ ಮಿತ್ರಪಕ್ಷಗಳ ನಡುವೆ ವರ್ಗಾವಣೆಯಾಗುತ್ತಿವೆಯೇ ಹೊರತು, ಹೊಸ ಮತದಾರರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಮೈತ್ರಿಪಕ್ಷಗಳಿಗೆ ಹಿನ್ನಡೆಯಾಗುತ್ತಿದೆ. ಬಹುಶಃ ರಾಜ್ಯಮಟ್ಟದ ಮೈತ್ರಿ ನಾಯಕರ ನಡುವಿನ ಹೊಂದಾಣಿಕೆ ಕೊರತೆಯೆ ಇದಕ್ಕೆ ಕಾರಣವಿರಬಹುದು. ಈ ಕೊರತೆ ನೀಗಿಕೊಳ್ಳುವ ಅನಿವಾರ್ಯತೆಯನ್ನು ಮೇಲ್ಮನೆ ಫಲಿತಾಂಶ ಒತ್ತಿ ಹೇಳುತ್ತಿದೆ. ಮುಖ್ಯವಾಗಿ ಜೆಡಿಎಸ್ಗೆ ಮೈತ್ರಿಯ ಅಗತ್ಯತೆ ಹೆಚ್ಚಿರುವುದನ್ನು ಇದು ಸಾಬೀತು ಮಾಡಿದೆ. ಸಿಎಂ ಡಿ ಕೆ ಶಿವಕುಮಾರ್ ಜೊತೆಗೆ ಒಕ್ಕಲಿಗ ವೋಟ್ಬ್ಯಾಂಕ್ ಅಧಿಪತ್ಯಕ್ಕಾಗಿ ಸೆಣೆಸಾಡಬೇಕೆಂದರೆ ಕುಮಾರಸ್ವಾಮಿಯವರಿಗೆ ಬಿಜೆಪಿ ಬಲದ ಇಂತಹ ಸಣ್ಣಪುಟ್ಟ ಮುನ್ನಡೆಗಳು ಬೇಕು. ಇಲ್ಲವಾದರೆ, ಅವರ ಮತ್ತು ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಕುಸಿಯುವ ಅಪಾಯವಿರುತ್ತದೆ. ಒಂದಂತೂ ಸತ್ಯ, ಈಗ ಸಿಕ್ಕಿರುವ ಫಲಿತಾಂಶದ ಮುನ್ನಡೆಯಿಂದ ಕುಮಾರಸ್ವಾಮಿಯವರ ಆಕ್ರಮಣಕಾರಿ ವೈಖರಿ ಇನ್ನಷ್ಟು ತೀಕ್ಷ್ಣವಾಗಲಿದ್ದು ಕಾಂಗ್ರೆಸ್ ಪಾಲಿಗೆ ಕಷ್ಟದ ದಿನಗಳು ಎದುರಾಗಲಿವೆ. ರಾಜ್ಯ ರಾಜಕಾರಣ ಇನ್ನಷ್ಟು ರಂಗೇರಲಿದೆ.

ಹವ್ಯಾಸಿ ಬರವಣಿಗೆ ಮೂಲಕ ಪತ್ರಿಕೋದ್ಯಮ ಮತ್ತು ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯವರೆಗೆ ವಿಸ್ತರಿಸಿಕೊಂಡಿರುವ ಲೇಖಕರು ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಷಯಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಡುವಂತವರು. ಹಲವು ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ವೆಬ್ ಆವೃತ್ತಿಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದ್ದು, ತಮ್ಮ ಮೊನಚು ಬರವಣಿಗೆ ಶೈಲಿ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಓದುಗರ ಗಮನ ಸೆಳೆದಿದ್ದಾರೆ.
