ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಐದು ವರ್ಷವಾಯ್ತು. ಕನ್ನಡಿಗರಿಗೆ ಅತ್ಯಂತ ಆಪ್ತವಾಗಿಯೂ ಐದು ವರ್ಷವಾಯ್ತು. ನಿಜ! ಪುನೀತ್ ರಾಜ್ಕುಮಾರ್ ಅವರು ಬದುಕಿದ್ದಾಗಿಗಿಂತ, ತಮ್ಮ ನಿರ್ಗಮನದ ನಂತರ ಕನ್ನಡಿಗರ ಹೃದಯವನ್ನು ಪ್ರವೇಶಿಸಿದ್ದು ಹೆಚ್ಚು. ಇದಕ್ಕೆ ಕೇವಲ ಅವರ ಹಠಾತ್ ವಿದಾಯ ಮಾತ್ರ ಕಾರಣವೆನ್ನಲಾಗದು. ಅವರು ಬದುಕಿಹೋದ ರೀತಿಯೂ ಕಾರಣ. ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಮೌಲ್ಯ ಅದನ್ನು ಕಳೆದುಕೊಂಡ ನಂತರ ಅರ್ಥವಾಗುತ್ತದಂತೆ. ಪುನೀತ್ ಅವರ ವಿಚಾರದಲ್ಲು ಅದು ನಿಜವಾಯ್ತು. ಬದುಕಿದ್ದಾಗ ಕೇವಲ ನಟನೆ, ಸಿನಿಮಾ ಮೂಲಕ ಮಾತ್ರ ಪರಿಚಯವಾಗಿದ್ದ ಪುನೀತ್ ಅವರ ಬದುಕಿನ ಮಗ್ಗುಲಗಳು ಕನ್ನಡಿಗರ ಮುಂದೆ ಅನಾವರಣವಾದದ್ದು ಅವರ ನಿರ್ಗಮನದ ನಂತರ. ಅಣ್ಣಾವ್ರ ಮಗನಾಗಿದ್ದ ಅಪ್ಪು, ತಂದೆಗೆ ತಕ್ಕ ಮಗ ಎನಿಸಿಕೊಂಡರು. ಕನ್ನಡಿಗರ ಮಗನಾಗಿ ವಿಸ್ತರಿಸಿದರು. ಐದು ವರ್ಷದ ನಂತರವೂ ಅವರ ಫೋಟೊ ಬ್ಯಾನರ್ಗಳಿಲ್ಲದ ಹಳ್ಳಿ, ಗಲ್ಲಿಗಳಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಾಯಿಯಾಗಿದ್ದಾರೆ. ಅವರ ಚಿರಶಾಂತಿಯ ತಾಣ ದಿನಂಪ್ರತಿ ನೂರಾರು ಜನರು ಭೇಟಿ ನೀಡುವ ಸ್ಪೂರ್ತಿಯ ತಾಣವಾಗಿದೆ. ಅದಕ್ಕಾಗಿಯೇ ಸರ್ಕಾರ ಅಪ್ಪು ಅವರ ಜನ್ಮದಿನವನ್ನು ಸ್ಪೂರ್ತಿ ದಿನವಾಗಿ ಆಚರಿಸುವ ನಿರ್ಧಾರ ಕೈಗೊಂಡಿದ್ದಿರಬಹುದು. ಇಂತಹ ಅಪ್ಪುವನ್ನು ಇನ್ನಷ್ಟು ಆಪ್ತವಾಗಿಸುವ ಕೆಲವೊಂದು ಅಪರೂಪದ ಮೆಲುಕುಗಳು ಇಲ್ಲಿವೆ.
ಪತ್ರಕರ್ತೆಗೆ ಸಹಾಯ ಹಸ್ತ
2000ರಲ್ಲಿ ವೀರಪ್ಪನ್ ಡಾ. ರಾಜ್ಕುಮಾರ್ ಅವರನ್ನು ಅಪಹರಣ ಮಾಡಿದಾಗ, ಇಡೀ ನಾಡು ದಿಗ್ಬ್ರಾಂತಿಗೆ ಒಳಗಾಗಿತ್ತು. ಕ್ಷಣಕ್ಷಣದ ಸುದ್ದಿ ನೀಡಲು ಪತ್ರಕರ್ತರು ಸದಾಶಿವನಗರದ ಅಣ್ಣಾವ್ರ ಮನೆಯ ಸುತ್ತ ಬೀಡುಬಿಟ್ಟಿದ್ದರು. ಆಗಿನ್ನೂ ಪುನೀತ್ ನಾಯಕನಟನಾಗಿ ಚಿತ್ರರಂಗವನ್ನು ಆಳಲು ಆರಂಭಿಸಿರಲಿಲ್ಲ. ಪುನೀತ್ ರಾಜ್ಕುಮಾರ್ ಅವರ ಗ್ರಾನೈಟ್ ಬಿಸಿನೆಸ್ ವ್ಯವಹಾರದ ಕಾರಣಕ್ಕೆ ವೀರಪ್ಪನ್ ರಾಜಣ್ಣನವರನ್ನು ಕಿಡ್ನಾಪ್ ಮಾಡಿದ್ದಾನೆ ಎಂಬ ಗಾಳಿಸುದ್ದಿಗಳು ಹರಡಿದ್ದವು. ಆ ಕುರಿತು ಸ್ವತಃ ಪುನೀತ್ ಅವರನ್ನು ಮಾತಾಡಿಸಲು ಪತ್ರಕರ್ತೆ ಸೌಮ್ಯ ಆಜಿ ಸದಾಶಿವನಗರದ ಮನೆ ಬಳಿ ತೆರಳಿದ್ದರು. ತಂದೆಯ ಅಪಹರಣದಿಂದ ಆಘಾತಕ್ಕೀಡಾಗಿದ್ದ ಪುನೀತ್ ಅವರಿಗೆ ಸೌಮ್ಯ ಅಜಿಯವರು ತಾವು ಕೇಳಬೇಕೆಂದಿರುವ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಅಪ್ಸೆಟ್ ಆಗ್ತಾರೆ. “ನಾನ್ಯಾಕೆ ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡ್ಬೇಕು. ಈಗಾಗ್ಲೆ ಅಪ್ಪಾಜಿಯವರ ಅಪಹರಣದಿಂದ ಶಾಕ್ನಲ್ಲಿದೀವಿ. ಅಂತದ್ರಲ್ಲಿ ಇಂಥಾ ಗಾಸಿಪ್ ವಿಚಾರ ಕೇಳಿ ಯಾಕೆ ಹರ್ಟ್ ಮಾಡ್ತೀರಿ” ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಾರೆ. ಆದರೂ ಸೌಮ್ಯ ಅಜಿಯವರ ಹಠ ಬಿಡದೆ, “ಈ ತರಹದ ಸುದ್ದಿಗಳು ಹರಿದಾಡ್ತಿರುವಾ ನೀವು ಸ್ಪಷ್ಟಣೆ ಕೊಟ್ಟರೆ, ಅನುಮಾನಗಳು ಕರಗಿ ಹೋಗ್ತವೆ. ಇಲ್ಲಾಂದ್ರೆ, ಅವು ರೆಕ್ಕೆಪುಕ್ಕ ಪಡೆಯುತ್ತಲೇ ಇರುತ್ತವೆ” ಎಂದಾಗ ಪುನೀತ್ ಅವರು ಮಾತಾಡಲು ಒಪ್ತಾರೆ. ತಮ್ಮ ಬಿಸಿನೆಸ್ಗೂ ಇದಕ್ಕೂ ಸಂಬಂಧವಿಲ್ಲ; ಬಹಳ ಹಿಂದೆಯೇ ನಾನು ಅದರಿಂದ ವಾಪಾಸ್ ಸರಿದಿದ್ದೇನೆ ಎಂದು ಹೇಳ್ತಾರೆ.

ಮೊದಮೊದಲು ಪತ್ರಕರ್ತೆಯ ಪ್ರಶ್ನೆಯಿಂದ ಕಿರಿಕಿರಿ ಅನುಭವಿಸಿದ್ರೂ, ಕಾಲದ ಅನಿವಾರ್ಯತೆ ಅರ್ಥ ಮಾಡಿಕೊಂಡು ಉತ್ತರಿಸುವ ಪುನೀತ್, ಆ ಪತ್ರಕರ್ತೆಯ ದಿಟ್ಟತೆ ಬಗ್ಗೆ ಅಭಿಮಾನ ತಳೆಯುತ್ತಾರೆ. ರಾಜ್ಕುಮಾರ್ ಅವರು ಸುರಕ್ಷಿತವಾಗಿ ಮರಳಿ ಕೆಲವು ದಿನಗಳ ನಂತರ ಕಾವೇರಿ ವಿಚಾರದಲ್ಲೋ, ಡಬ್ಬಿಂಗ್ ವಿರೋಧಿ ಹೋರಾಟದಲ್ಲೋ ರಾಜ್ಕುಮಾರ್ ಅವರ ನೇತೃತ್ವದಲ್ಲಿ ಎಂಜಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ಕನ್ನಡ ಸಿನಿಮಾ ಇಂಡಸ್ಟ್ರಿಯವರು ದೊಡ್ಡ ಪ್ರತಿಭಟನೆ ನಡೆಸ್ತಿರ್ತಾರೆ. ರಾಜಣ್ಣ ಇದ್ದ ಮೇಲೆ ಜನಜಂಗುಳಿ ಕೇಳಬೇಕೆ. ಆ ಸುದ್ದಿಯ ವರದಿಗಾಗಿ ಸೌಮ್ಯ ಅಜಿಯವರೂ ಹೋಗಿರುತ್ತಾರೆ. ಆಗ ಜನಸಾಗರದ ನೂಕಾಟದ ಮಧ್ಯೆ ಸಿಕ್ಕಿಹಾಕಿಕೊಂಡ ಸೌಮ್ಯ ಅವರು ಹೊರಬರಲಾರದೆ ಪರಿತಪಿಸುತ್ತಿರುವುದು ಸ್ಟೇಜ್ ಮೇಲಿದ್ದ ಪುನೀತ್ ಅವರ ಕಣ್ಣಿಗೆ ಬೀಳುತ್ತೆ. ಅವರನ್ನು ಥಟ್ಟನೆ ಗುರುತು ಹಿಡಿಯುವ ಪುನೀತ್, ಜನಸಂದಣಿ ನಡುವೆ ಜಾಗ ಮಾಡಿಕೊಂಡು ಪತ್ರಕರ್ತೆಯತ್ತ ಕೈಚಾಚಿ, ಅವರನ್ನು ಸ್ಟೇಜ್ ಮೇಲಕ್ಕೆ ಹಿಡಿದಿತ್ತಿಕೊಳ್ಳುತ್ತಾರೆ. “ಅಲ್ಲಾರೀ, ಇಂಥಾ ಜನಜಂಗುಳಿ ಜಾಗಕ್ಕೆ ನೀವ್ಯಾಕ್ರೀ ಬರೋಕ್ ಹೋದ್ರಿ” ಎಂದು ಪತ್ರಕರ್ತೆಯ ಯೋಗಕ್ಷೇಮ ವಿಚಾರಿಸುತ್ತಾರೆ. ಆ ಕ್ಷಣದಲ್ಲಿ ಅವರ ಮುಂದೆ ನಿಂತಿದ್ದದ್ದು ಪತ್ರಕರ್ತೆ ಎನ್ನುವುದಕ್ಕಿಂತ ಜನಸಂದಣಿಯಲ್ಲಿ ತೊಂದರೆಗೆ ಸಿಲುಕಿದ್ದ ವ್ಯಕ್ತಿಯಾಗಿ ಅಪ್ಪುವಿಗೆ ಗೋಚರಿಸಿದ್ದರು. ತನಗೆ ಮುಜುಗರವಾಗುವಂತಹ ಪ್ರಶ್ನೆ ಕೇಳಲು ಬಂದಿದ್ದ ಪತ್ರಕರ್ತೆಯನ್ನೂ ಗೌರವಿಸುವ ಗುಣ ಪುನೀತ್ರಲ್ಲಿತ್ತು. ಮುಂದೆ, ಅವರು ಮದುವೆಗೆ ಆ ಪತ್ರಕರ್ತೆಯನ್ನು ಆತ್ಮೀಯವಾಗಿ ಆಹ್ವಾನಿಸಿದ್ದರು.
ಪಾಪ್ಕಾರ್ನ್ ಹುಡುಗನಿಗೆ ಸ್ಪೂರ್ತಿ
ಬೆಂಗಳೂರಿನ ಸದಾಶಿವನಗರದ ಪಾರ್ಕ್ ಬಳಿ, ಸುಮಾರು 2003ರ ಆಸುಪಾಸಿನಲ್ಲಿ ಪಾಪ್ಕಾರ್ನ್ ಮಾರುತ್ತಿದ್ದ ಹದಿನೆಂಟು ವರ್ಷದ ಒಬ್ಬ ಹುಡುಗ ವಾಕಿಂಗ್ ಮಾಡುತ್ತಿದ್ದ ಅಪ್ಪು ಕಣ್ಣಿಗೆ ಬೀಳುತ್ತಾನೆ. ಆತನ ಹೆಸರು ಸುರೇಶ್ ಮಲ್ಲಯ್ಯ. ಆ ಹುಡುಗನಲ್ಲಿದ್ದ ಚುರುಕುತನ ಕಂಡ ಪುನೀತ್, “ಸುಮ್ನೆ ಯಾಕೆ ಪಾಪ್ಕಾರ್ನ್ ಮಾರುತ್ತಾ ಟೈಮ್ ವೇಸ್ಟ್ ಮಾಡ್ತಾ ಇದೀಯ. ಯಾವುದಾದ್ರು ಒಂದಷ್ಟು ಸ್ಕಿಲ್ಸ್ ಕಲಿತು, ಬದುಕು ಕಟ್ಟಿಕೊಳ್ಳಲು ಯತ್ನಿಸು” ಎಂಬ ಸಲಹೆ ನೀಡ್ತಾರೆ. ಒಂದು ಸಾರಿ ಹೀಗೆ ಹೇಳಿ ನಿಲ್ಲಿಸುವುದಿಲ್ಲ. ಆ ಹುಡುಗನನ್ನು ನೋಡಿದಾಗಲೆಲ್ಲ, ‘ನಿನ್ನಲ್ಲೇನೋ ಸಾಮರ್ಥ್ಯ ಇದೆ. ಅದನ್ನು ವ್ಯರ್ಥ ಮಾಡ್ಕೊಬೇಡ. ಆದಷ್ಟು ಬೇಗ ಈ ಕೆಲಸ ಬಿಟ್ಟು ಬೇರೆ ದಾರಿ ಹುಡುಕಿಕೊ’ ಎಂದು ಹೇಳುತ್ತಲೇ ಇರುತ್ತಾರೆ. ಪುನೀತ್ ಅವರ ಈ ಮಾತುಗಳಿಂದ ಪ್ರೇರಣೆ ಪಡೆಯುವ ಆ ಯುವಕ ಪಾಪ್ ಕಾರ್ನ್ ಮಾರುವುದು ಬಿಟ್ಟು ವಿಡಿಯೊ ಎಡಿಟಿಂಗ್ ಕಲಿಯುತ್ತಾನೆ. ಕೆಲ ಸಮಯ ನ್ಯೂಸ್ ಚಾನೆಲ್ಗಳಲ್ಲಿ ಕೆಲಸ ಮಾಡಿದ ಆತ, ನಂತರ ಸಿನಿಮಾ ಕ್ಷೇತ್ರಕ್ಕೆ ಹೊರಳಿ ಸಂಕಲನಕಾರನಾಗಿ ಬದುಕು ರೂಪಿಸಿಕೊಳ್ಳುತ್ತಾನೆ. 2025ರಲ್ಲಿ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಸಂಕಲನಕಾರನಾಗಿ ಕೆಲಸ ಮಾಡಿದ್ದು ಅದೇ ಪಾಪ್ಕಾರ್ನ್ ಹುಡುಗ!
ಸುರೇಶ್ ಅವರ ಏಳಿಗೆಗೆ ಕೇವಲ ಪುನೀತ್ ಅವರ ಮಾತುಗಳಷ್ಟೆ ಕಾರಣ ಎಂದು ಹೇಳಲಾಗದು. ಸ್ವತಃ ಆ ವ್ಯಕ್ತಿಯ ಪರಿಶ್ರಮ, ಶ್ರದ್ಧೆ ಮತ್ತು ಬದ್ಧತೆಗಳು ಆತನನ್ನು ಬೆಳೆಸಿವೆ. ಆದರೆ ತನಗೆ ಪರಿಚಯವಿಲ್ಲದ ಹುಡುಗನೊಬ್ಬನಲ್ಲಿ ಇರುವ ಸಾಮರ್ಥ್ಯವನ್ನು ಗುರುತಿಸುವ ಅಗತ್ಯ ಪುನೀತ್ ಅವರಿಗೆ ಇರಲಿಲ್ಲ. ಆದರೂ ಆ ಹುಡುಗನ ಬಗ್ಗೆ ಆಸಕ್ತಿ ತಳೆದರು, ಮಾತಾಡಿಸಿದರು, ಹೊಸದನ್ನು ಕಲಿಯುವಂತೆ ಪ್ರೇರೇಪಿಸಿದರು. ದೊಡ್ಡ ಸ್ಟಾರ್ ಕುಟುಂಬದ ವ್ಯಕ್ತಿಯಲ್ಲಿಇಂತಹ ಸರಳ ಗುಣ ಇದ್ದದ್ದು ನಮಗಿಲ್ಲಿ ಮುಖ್ಯವಾಗಬೇಕಿದೆ.
ಕನಸಾಗಿಯೇ ಉಳಿದ ಗೆಳೆಯನ ಯೋಜನೆ
ಪುನೀತ್ ಅವರ ಬಾಲ್ಯದ ಗೆಳೆಯ ಕುಳ್ಳ ನಾಗರಾಜ್ ಹಂಚಿಕೊಂಡ ನೆನಪು ಇನ್ನೂ ವೈಯಕ್ತಿಕವಾದದ್ದು. ಅವರಿಬ್ಬರದು ಸುಮಾರು ನಾಲ್ಕು ದಶಕಗಳ ಸ್ನೇಹ. ತಂದೆಯ ಹುಟ್ಟೂರು ಗಾಜನೂರಿನಲ್ಲಿ ಒಟ್ಟಿಗೇ ಆಡಿ ಬೆಳೆದವರು. ಪುನೀತ್ ದೊಡ್ಡ ನಟರಾದ ಮೇಲೂ ಸ್ನೇಹ ಅಷ್ಟೆ ಆತ್ಮೀಯತೆಯಿಂದ ಮುಂದುವರೆದಿತ್ತು. ನಾಗರಾಜ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸ್ವಂತ ವಾಹನ ಇರಲಿಲ್ಲ. ನಾಗರಾಜ್ ಎಂದೂ ತಮ್ಮ ಆರ್ಥಿಕ ಸಂಕಟಗಳನ್ನು ಗೆಳೆತನದ ಮಧ್ಯ ತಂದವರಲ್ಲ. ಹಾಗಾಗಿ ಅವರ ಪರಿಸ್ಥಿತಿ ತುಂಬಾ ತಡವಾಗಿ ಪುನೀತ್ ಗಮನಕ್ಕೆ ಬಂದಿತ್ತು. ಗೆಳೆಯನಿಗೆ ಸ್ವಂತ ವಾಹನ ಕೊಡಿಸಿ, ಅವನ ದುಡಿಮೆಗೆ ನೆರವಾಗಬೇಕೆಂದು ನಿರ್ಧರಿಸಿದ ಅಪ್ಪು, ಅದಕ್ಕಾಗಿ ವಾಹನದ ಬೆಲೆ ಮತ್ತು ಹಣಕಾಸಿನ ವಿವರಗಳ ಕೊಟೇಷನ್ ತರಿಸಿಕೊಂಡಿದ್ದರು. ಲೋನ್ ನಲ್ಲಿ ವಾಹನ ಖರೀದಿಸಿದರೆ 18 ಲಕ್ಷ ಖರ್ಚಾಗುತ್ತೆ, ನೇರ ಹಣ ಕಟ್ಟಿದರೆ ಮೂರು ಲಕ್ಷ ಉಳಿತಾಯವಾಗುತ್ತೆ ಎಂಬುದನ್ನು ಖಾತ್ರಿಪಡಿಸಿಕೊಂಡ ಅಪ್ಪು, ಅಕ್ಟೋಬರ್ 30ರಂದು ಮತ್ತೆ ಭೇಟಿಯಾಗಿ ಮುಂದಿನ ಕ್ರಮದ ಬಗ್ಗೆ ಮಾತನಾಡೋಣ ಎಂದಿದ್ದರಂತೆ. ಆದರೆ ಅಕ್ಟೋಬರ್ 30 ಬರಲೇ ಇಲ್ಲ! ಅಕ್ಟೋಬರ್ 29ರಂದೆ ಪುನೀತ್ ನಮ್ಮನ್ನು ಅಗಲಿದರು. ಗೆಳೆಯನಿಗೆ ವಾಹನ ಕೊಡಿಸುವ ಅವರ ಯೋಜನೆ ಕನಸಾಗಿಯೇ ಉಳಿಯಿತು.

ಪುನೀತ್ ಅವರ ಸಾಮಾಜಿಕ ಕಾಳಜಿ ಕೇವಲ ಸ್ನೇಹಕ್ಕಷ್ಟೆ ಸೀಮಿತವಾದುದಲ್ಲ. ಕೋವಿಡ್ ಅವಧಿಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅವರು ₹50 ಲಕ್ಷ ದೇಣಿಗೆ ನೀಡಿದ್ದರು ಮತ್ತು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವು ಒದಗಿಸಿದ್ದರು. ರೈತರ ಬಾಳಿಗೆ ಆಸರೆಯಾಗಿರುವ ಹೈನುಗಾರಿಕೆಯ `ನಂದಿನಿ’ ಉತ್ಪನ್ನಕ್ಕೆ ಯಾವುದೇ ಸಂಭಾವನೆ ಪಡೆಯದೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಕುಟುಂಬದ ನಿರ್ಮಾಣ ಸಂಸ್ಥೆಯಲ್ಲದೆ ಬೇರೆ ನಿರ್ಮಾಣದ ಚಿತ್ರಗಳಿಗೆ ಹಾಡು ಹಾಡಿದಾಗ ದೊರೆಯುತ್ತಿದ್ದ ಸಂಭಾವನೆಯನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೆರವಾಗಲು ಬಳಸುತ್ತಿದ್ದರು.
ಪುನೀತ್ ಅವರ ಬಗ್ಗೆ ಇಂಥ ನೆನಪುಗಳನ್ನು ಒಟ್ಟಾಗಿ ಮೆಲುಕು ಹಾಕಿದಾಗ ಒಬ್ಬ ನಟನನ್ನು ಜನರು ಏಕೆ ಇಷ್ಟು ಆಳವಾಗಿ ಅಪ್ಪಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ಅವರ ಸಿನಿಮಾಗಳ ಸಕ್ಸಸ್, ಅವರ ಕುಟುಂಬಕ್ಕಿದ್ದ ತಾರಾ ಜನಪ್ರಿಯತೆಯ ಹೊರತಾಗಿಯೂ ಪುನೀತ್ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದು ಇಂತಹ ಅವರ ಗುಣಗಳಿಂದಾಗಿ ಎಂದರೂ ತಪ್ಪಲ್ಲ. ಇಂತಹ ನೂರು ಕತೆಗಳು ನಮಗೆ ಮುಖಾಮುಖಿಯಾಗುತ್ತವೆ. ವಿಶೇಷವೆಂದರೆ, ಇವ್ಯಾವುವೂ ಅವರು ಬದುಕಿದ್ದಾಗ, ಅವರನ್ನು ಮೆಚ್ಚಿಸಲು ಹರಿದಾಡಿದ್ದ ಕತೆಗಳಲ್ಲ; ಅಗಲಿಕೆಯ ನಂತರ ಅವರ ನೆನಪುಗಳನ್ನು ಸ್ಮರಿಸಿಕೊಂಡವರು ಹೊರಹಾಕಿದ ಸತ್ಯಗಳು!
ಸಂಗ್ರಹ-ನಿರೂಪಣೆ: ಸತೀಶ್ ಎಸ್

ಲೇಖಕರು ‘ಲಂಕೇಶ್ ಪತ್ರಿಕೆ’, ‘ಗೌರಿ ಲಂಕೇಶ್’, ‘ಗೈಡ್’ ಮಾಸಪತ್ರಿಕೆ ಸೇರಿದಂತೆ ಎರಡು ದಶಕಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ತಮ್ಮದೇ ಮಾಧ್ಯಮ ಸಂಪರ್ಕ ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.
