ಪಶ್ಚಿಮ ಬಂಗಾಳ ಉಪಚುನಾವಣೆ: ಬಿಜೆಪಿಯ ಗೂಂಡಾಗಿರಿ ಬಿಚ್ಚಿಟ್ಟ scroll ಗ್ರೌಂಡ್‌ ರಿಪೋರ್ಟ್!

ನಿನ್ನೆಯಷ್ಟೆ ಪಶ್ಚಿಮ ಬಂಗಾಳದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಮುಗಿದಿದೆ. ಯಥಾ ಪ್ರಕಾರ ಗೋದಿ ಮೀಡಿಯಾಗಳು, ಅದನ್ನು ಶಾಂತಿಯುತ ಮತದಾನ ಎಂದು ವರ್ಣಿಸುತ್ತಿವೆ. ಚುನಾವಣಾ ಆಯೋಗದ ವರದಿಯ ಪ್ರಕಾರ ಶೇ.80ರಷ್ಟು ಮತದಾನವಾಗಿದೆ. ಆದರೆ ಸ್ಥಳಕ್ಕೆ ಭೇಟಿ ನೀಡಿ, ಗ್ರೌಂಡ್‌ ರಿಪೋರ್ಟ್‌ ಮಾಡಿದ scroll.in ವೆಬ್‌ ಪೋರ್ಟಲ್‌ನ ಅನಂತ್ ಗುಪ್ತಾ ಮತ್ತು ರೋಕಿಬುಜ್ ಜಮಾನ್ ವರದಿ ಬೇರೆಯದೆ ಕಥೆ ಹೇಳುತ್ತದೆ. ಸುವೇಂಧು ಅಧಿಕಾರಿ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸ್ಥಳೀಯ ಪೊಲೀಸ್‌ ವ್ಯವಸ್ಥೆ ಮತ್ತು ಚುನಾವಣಾ ಅಧಿಕಾರಿಗಳನ್ನು ದುರಪಯೋಗಪಡಿಸಿಕೊಂಡ ಕರಾಳ ಚಿತ್ರಣವನ್ನು ಈ ವರದಿ ತೆರೆದಿಡುತ್ತಿದೆ.

ಉಪಚುನಾವಣೆ ನಡೆದ ರೇಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಈ ಇಬ್ಬರು ವರದಿಗಾರರು ಭೇಟಿ ನೀಡಿದ್ದರು. ಶೇ.60-70ರಷ್ಟು ಮುಸ್ಲಿಂ ಮತದಾರರಿರುವ ಕ್ಷೇತ್ರ ಇದು. ಇಲ್ಲಿ ಬಿಜೆಪಿ ಇದುವರೆಗೆ ಗೆದ್ದಿಲ್ಲ. 2026ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಎ.ಜೆ.ಯು ಪಾರ್ಟಿಯ ಹುಮಾಯೂನ್‌ ಕಬೀರ್ 1,23,000 ಮತ ಗಳಿಸಿದರೆ, ಬಿಜೆಪಿ ಗಳಿಸಿದ್ದು ಸರಿಸುಮಾರು ಇದರ ಅರ್ಧದಷ್ಟು ಮಾತ್ರ, ಅಂದರೆ 64 ಸಾವಿರ! ಗೆದ್ದ ಹುಮಾಯೂನ್‌, ರೆಜಿನಗರದ ಜೊತೆಗೆ ನವಾಡಾ ಕ್ಷೇತ್ರದಲ್ಲಿಯೂ ಸ್ಪರ್ಧಿಸಿ ಗೆದ್ದಿದ್ದರು. ನವಾಡಾ ಶಾಸಕ ಸ್ಥಾನ ಉಳಿಸಿಕೊಂಡು ರೇಜಿನಗರಕ್ಕೆ ರಾಜೀನಾಮೆ ನೀಡಿದ್ದರಿಂದ ಇಲ್ಲಿ ಉಪಚುನಾವಣೆ ಎದುರಾಗಿತ್ತು. ಆ ಕ್ಷೇತ್ರವನ್ನೆ scroll.in ವರದಿಗಾರರು ತಮ್ಮ ಭೇಟಿಗೆ ಆಯ್ಕೆ ಮಾಡಿಕೊಂಡಿದ್ದರು.

ಉಪಚುನಾವಣೆಯ ಮತದಾನದ ಬೆಳಗ್ಗೆ ನಜೀರ್‌ಪುರ ಗ್ರಾಮಕ್ಕೆ ವರದಿಗಾರರು ಭೇಟಿ ನೀಡಿದಾಗ,  ಸುಮಾರು 9 ಗಂಟೆ ಹೊತ್ತಿಗೆ ತೆಘಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಮತದಾನ ಸರಾಗವಾಗಿಯೇ ಸಾಗುತ್ತಿತ್ತು. ದೂರದಿಂದ ನೋಡಿದವರಿಗೆ ಅದೊಂದು ಸಾಮಾನ್ಯ ಚುನಾವಣೆಯ ಬೆಳಗಿನಂತೆಯೇ ಕಾಣುತ್ತಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ಅಲ್ಲಿನ ವಾತಾವರಣ ಬದಲಾಗತೊಡಗಿತು. ಮತಗಟ್ಟೆಯತ್ತ ಬರುತ್ತಿದ್ದವರ ಸಂಖ್ಯೆ ಕುಸಿಯಲಾರಂಭಿಸಿತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಏನೋ ಗದ್ದಲ. ಮತ ಹಾಕಲು ಬರುತ್ತಿದ್ದ ಕೆಲವು ಮುಸ್ಲಿಂ ಪುರುಷರನ್ನು ಅಲ್ಲಿಂದಲೇ ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂಬ ದೃಶ್ಯವನ್ನು Scroll ವರದಿಗಾರರು ಕಂಡಿದ್ದಾಗಿ ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. ಪೊಲೀಸರು, ಅರೆಸೇನಾ ಪಡೆಯ ಸಿಬ್ಬಂದಿಯೂ ಅಲ್ಲಿದ್ದರು. ಆದರೂ ಮತದಾರರನ್ನು ಹಿಂದಕ್ಕೆ ಕಳುಹಿಸುತ್ತಿದ್ದವರನ್ನು ತಡೆಯುವ ಪ್ರಯತ್ನ ಕಾಣಿಸಲಿಲ್ಲ ಎಂಬುದು Scroll ವರದಿಯಲ್ಲಿರುವ ಪ್ರಮುಖ ಉಲ್ಲೇಖ.

ಇಷ್ಟೇ ಅಲ್ಲ. ಅಲ್ಲಿ ಕಂಡದ್ದೇನು ಎಂದು ತಿಳಿದುಕೊಳ್ಳಲು ಸ್ಥಳೀಯರೊಬ್ಬರ ಜೊತೆ ಮಾತನಾಡಲು ವರದಿಗಾರರು ಮುಂದಾದಾಗ, ಚುನಾವಣೆ ಹಿಂದಿನ ಮತ್ತೊಂದು ಮುಖ ಅನಾವರಣವಾಗಿದೆ. ಕ್ಯಾಮೆರಾ ಮುಂದೆ ಮಾತನಾಡಲು ಹಿಂಜರಿದ  ಆ ವ್ಯಕ್ತಿ, “ಈಗ ಮಾತನಾಡಿದರೆ, ಪತ್ರಕರ್ತರು ಇಲ್ಲಿಂದ ಹೋದ ನಂತರ ಪೊಲೀಸರು ನಮ್ಮನ್ನು ವಶಕ್ಕೆ ಪಡೆಯಬಹುದು” ಎಂಬ ಆತಂಕವನ್ನು ಹೊರಹಾಕಿದ್ದರು. ಚುನಾವಣೆಯ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ದೊಡ್ಡದೊಡ್ಡ ರಾಜಕೀಯ ಭಾಷಣಗಳಿಗಿಂತ ಇಂತಹ ಸಣ್ಣ ಮಾತುಗಳೇ ಸಹಕಾರಿ. ಆದರೆ ಇದು ನಜೀರ್‌ಪುರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ.

ಅಲ್ಲಿಂದ ಸುಮಾರು 12 ಕಿಲೋಮೀಟರ್ ದೂರದ ಮರದಿಘಿ ಗ್ರಾಮದಲ್ಲೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. 2,500ಕ್ಕೂ ಹೆಚ್ಚು ಮತದಾರರಿರುವ ಅಲ್ಲಿ  ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಆದರೆ ಗ್ರಾಮದ ಹತ್ತಕ್ಕೂ ಹೆಚ್ಚು ನಿವಾಸಿಗಳು ತಮಗೆ ಮತ ಚಲಾಯಿಸಲು ಅವಕಾಶ ಸಿಗಲಿಲ್ಲ ಎಂದು Scrollಗೆ ತಿಳಿಸಿದ್ದಾರೆ. ಯಥಾ ಪ್ರಕಾರ ತಮ್ಮ ಹೆಸರು ಪ್ರಕಟಿಸಬಾರದು ಎಂಬುದು ಅವರ ಮನವಿ. ಕಾರಣ, ಪೊಲೀಸರ ಪ್ರತೀಕಾರದ ಭಯ!

ಗ್ರಾಮದ ವೃದ್ಧ ಮಹಿಳೆಯೊಬ್ಬರ ಪ್ರಕಾರ, ಬೆಳಗ್ಗೆಯೇ ಮತ ಹಾಕಲು ಹೋದ ನಾಲ್ಕೈದು ಜನರನ್ನು ವಾಪಸ್ ಕಳುಹಿಸಲಾಗಿತ್ತು. ಮತದಾರರನ್ನು ತಡೆಯುವ ಘಟನೆ ಪೊಲೀಸರ ಎದುರಲ್ಲೇ ನಡೆದಿದೆ ಎಂದು ಮತ್ತೊಬ್ಬ ಮಹಿಳೆ ಆರೋಪಿಸಿದ್ದಾರೆ. ಯುವ ಮತದಾರನೊಬ್ಬ ಹೇಳಿದ ಸಂಗತಿ ಮತ್ತಷ್ಟು ಗಂಭೀರವಾಗಿತ್ತು. ಆತ ಮತ ಹಾಕಲು ಮತಗಟ್ಟೆಗೆ ಹೋದಾಗ, ಆತನ ಮತ ಈಗಾಗಲೇ ಚಲಾವಣೆಯಾಗಿದೆ ಎಂದು ತಿಳಿಸಲಾಯಿತು. ಬೂತ್‌ಗಳಲ್ಲಿ ಬಿಜೆಪಿ ಪರ ಏಜೆಂಟ್‌ಗಳನ್ನು ಬಿಟ್ಟರೆ, ವಿರೋಧ ಪಕ್ಷಗಳ ಏಜೆಂಟರೇ ಇರಲಿಲ್ಲ ಎಂದು ಆತ Scrollಗೆ ಹೇಳಿದ್ದಾನೆ.

ಇದಿಷ್ಟು ಮತದಾರರು ಮುಂದಿಟ್ಟ ಆರೋಪಗಳು. ಚುನಾವಣಾ ಆಯೋಗದ ವೀಕ್ಷಕರ ಮಾತು ಇದಕ್ಕೆ ತದ್ವಿರುದ್ದವಾಗಿದೆ. ರೇಜಿನಗರದ ಚುನಾವಣಾ ಉಸ್ತುವಾರಿ ಹೊತ್ತ ಐಎಎಸ್ ಅಧಿಕಾರಿ ಹರ್ಷಲ್ ಪಂಚೋಲಿಯವರನ್ನು scroll ವರದಿಗಾರರು ಸಂಪರ್ಕಿಸಿದಾಗ, “ಉಪಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ” ನಡೆದಿದೆ ಎಂದು ತಿಳಿಸಿದ್ದಾರೆ. ಮತಗಟ್ಟೆಗಳನ್ನು ಅನಧಿಕೃತ ವ್ಯಕ್ತಿಗಳು ವಶಕ್ಕೆ ಪಡೆದಿರುವ ತಮ್ಮ ವೀಡಿಯೊ ಸಾಕ್ಷಿಗಳನ್ನು ವರದಿಗಾರರು ಮುಂದಿಟ್ಟಾಗ, “ಅದನ್ನು ಪರಿಶೀಲಿಸುವುದಾಗಿ” ಹಾರಿಕೆ ಉತ್ತರ ನೀಡಿದ್ದಾರೆ.

ಒಂದೇ ಚುನಾವಣೆಯ ಬಗ್ಗೆ ಎರಡು ಭಿನ್ನ ಚಿತ್ರಗಳು ಇವು.  ರೇಜಿನಗರದ ಈ ಕಥೆ ಮತದಾನದ ದಿನ ಬೆಳಗ್ಗೆ ಆರಂಭವಾದದ್ದಲ್ಲ. ಚುನಾವಣೆ ಘೋಷಣೆಯಾದ ದಿನದಿಂದಲೇ ವ್ಯವಸ್ಥಿತ ಯೋಜನೆಗಳು ತಯಾರಾಗಿದ್ದವು ಎನ್ನುತ್ತದೆ ವರದಿ. ಈ ಬಾರಿ ಹುಮಾಯೂನ್ ಕಬೀರ್ ತನ್ನ ಆಮ್ ಜನತಾ ಉನ್ನಯನ್ ಪಾರ್ಟಿಯಿಂದ ಪುತ್ರ ಗುಲಾಂ ನಬಿ ಆಜಾದ್ ರನ್ನು ಕಣಕ್ಕಿಳಿಸಿದ್ದರು.

ಆದರೆ ಮತದಾನ ಆರಂಭವಾಗುವುದಕ್ಕೂ ಮೊದಲೇ ಪೊಲೀಸ್ ಕ್ರಮದ ಆರೋಪಗಳು ಕೇಳಿಬರತೊಡಗಿದವು. ತಮ್ಮ ಪಕ್ಷದ 64 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹುಮಾಯೂನ್ ಕಬೀರ್ ಆರೋಪಿಸಿದ್ದರು. ಮತದಾನದ ದಿನ ಬೆಳಗ್ಗೆ ಕಬೀರ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಗುಲಾಂ ನಬಿ ಆಜಾದ್ ಹೇಳುವ ಪ್ರಕಾರ, ಕಳೆದ ಎರಡು ವಾರಗಳಿಂದಲೇ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ರಾತ್ರಿ ವೇಳೆ ತೆರಳುತ್ತಿದ್ದರು. ಹಳೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅವರನ್ನು ವಶಕ್ಕೆ ಪಡೆಯಲಾಗುತ್ತಿತ್ತು ಎಂಬುದು ಅವರ ಆರೋಪ. ಇಂತಹ ದೂರು ಕೇವಲ ಒಂದು ಪಕ್ಷದಿಂದ ಮಾತ್ರ ಕೇಳಿಬಂದಿಲ್ಲ.

ಸಿಪಿಐ(ಎಂ) ಅಭ್ಯರ್ಥಿ ಮೊಹಮ್ಮದ್ ಸಯೀದ್ ಕೂಡ ತಮ್ಮ ಪೋಲಿಂಗ್ ಏಜೆಂಟ್‌ಗಳಲ್ಲಿ ಒಬ್ಬರಾದ ತಫಜುಲ್ ಶೇಖ್ ಅವರನ್ನು ಮತದಾನಕ್ಕೂ ಮೊದಲೇ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲವರು ಬಿಜೆಪಿ ಸೇರುವುದಕ್ಕೆ ಒಪ್ಪಿದ ನಂತರ ಅವರನ್ನು ಪೊಲೀಸರು ಬಿಡುಗಡೆ ಮಾಡಿದರು ಎಂಬ ಗಂಭೀರ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ.

ಇದೇ ವೇಳೆ ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಬಾದಲ್ ಮೊಲ್ಲಾ ಹೇಳಿರುವ ಸಂಗತಿಯೂ ಗಮನ ಸೆಳೆಯುತ್ತದೆ. ತಮ್ಮ ವ್ಯಾಪ್ತಿಯ 13 ಮತಗಟ್ಟೆಗಳಿಗೆ ಪೋಲಿಂಗ್ ಏಜೆಂಟ್‌ಗಳನ್ನು ನಿಯೋಜಿಸಿದ್ದಾಗಿ ಹೇಳಿರುವ ಮೊಲ್ಲಾ, ಬೆಳಗ್ಗೆ ಸುಮಾರು 8.30ರವರೆಗೆ ಅವರೊಂದಿಗೆ ಸಂಪರ್ಕದಲ್ಲಿದ್ದರು. ಆ ಬಳಿಕ ಅವರ ಮೊಬೈಲ್‌ಗಳು ಒಂದೊಂದಾಗಿ ಸ್ವಿಚ್ ಆಫ್ ಆಗತೊಡಗಿದವು ಎಂದು ಆರೋಪಿಸಿದ್ದಾರೆ. ಕೊನೆಯ ಬಾರಿ ಮಾತನಾಡಿದಾಗ, ತಮ್ಮ ಏಜೆಂಟ್‌ಗಳ ಗುರುತಿನ ದಾಖಲೆಗಳನ್ನು ಕಸಿದುಕೊಂಡು ಮನೆಗೆ ಹೋಗುವಂತೆ ಸೂಚಿಸಲಾಗಿತ್ತು ಎಂದು ಅವರು Scrollಗೆ ಹೇಳಿದ್ದಾರೆ.

ಆದರೆ ಮೊಲ್ಲಾ ಮಾತಿನಲ್ಲಿ ಮತ್ತೊಂದು ಗಮನಾರ್ಹ ಅಂಶವೂ ಇದೆ. ತಮ್ಮ ಪಕ್ಷ ಅಧಿಕಾರದಲ್ಲಿದ್ದ ಹಿಂದಿನ 15 ವರ್ಷಗಳ ಅವಧಿಯಲ್ಲೂ ಚುನಾವಣಾ ಅಕ್ರಮಗಳು ನಡೆದಿದ್ದವು ಎಂಬುದನ್ನು ಅವರು ನಿರಾಕರಿಸುವುದಿಲ್ಲ. ಆಗ ಇಂತಹ ಘಟನೆಗಳು ಒಂದೆರಡು ಮತಗಟ್ಟೆಗಳಿಗೆ ಸೀಮಿತವಾಗಿದ್ದವು; ಈಗ ಅದರ ಪ್ರಮಾಣ ಹೆಚ್ಚಾಗಿದೆ ಎಂಬುದು ಅವರ ವಾದ.

ಇವೆಲ್ಲದರ ನಡುವೆ ಈ ಉಪಚುನಾವಣೆಗೆ ಇನ್ನೊಂದು ಆಯಾಮವೂ ಸೇರಿಕೊಂಡಿದೆ. ಮತದಾನಕ್ಕೂ ಮೊದಲ ಒಂದು ವಾರದಲ್ಲಿ ಹಲವು ಸ್ಥಳೀಯ ಪತ್ರಕರ್ತರ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಿಗೆ, ಪೇಜ್‌ಗಳಿಗೆ ನಿರ್ಬಂಧ ಹೇರಲಾಗಿತ್ತು. ಮತ್ತು ಮತದಾನ ಮುಗಿದ ನಂತರವೇ ಅವುಗಳು ಮತ್ತೆ ಲಭ್ಯವಾದವು ಎಂದು Scroll ವರದಿ ಹೇಳುತ್ತದೆ. Alt News ಕೂಡ ಕನಿಷ್ಠ ಹನ್ನೆರಡು ಖಾತೆಗಳು ಇಂತಹ ಕ್ರಮಕ್ಕೆ ಒಳಗಾಗಿದ್ದವು ಎಂದು ವರದಿ ಮಾಡಿದೆ.

Murshidabad Today ಎಂಬ ಫೇಸ್‌ಬುಕ್ ಪುಟ ನಡೆಸುವ ಸ್ವಪನ್ ಕರಿಕರ್ ಅವರ ಖಾತೆಯೂ ಸೆಪ್ಟೆಂಬರ್ 29ರಂದು ನಿರ್ಬಂಧಕ್ಕೊಳಗಾಗಿತ್ತು. ಆಮ್ ಜನತಾ ಉನ್ನಯನ್ ಪಾರ್ಟಿಯ ಕಾರ್ಯಕರ್ತರನ್ನು ರಾತ್ರಿ ವೇಳೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ ಎನ್ನಲಾದ ಘಟನೆಗಳ ವಿಡಿಯೊಗಳನ್ನು ಪ್ರಕಟಿಸಿದ ನಂತರ ತಮ್ಮ ಪುಟಕ್ಕೆ ಟೇಕ್‌ಡೌನ್ ನೋಟಿಸ್‌ಗಳು ಬಂದಿದ್ದವು ಎಂದು ಅವರು ಹೇಳಿದ್ದಾರೆ. Murshidabad News Time ನಡೆಸುವ ಬಕ್ತರ್ ಶೇಖ್ ಅವರ ಅನುಭವವೂ ಇದೇ ರೀತಿಯದ್ದು. ಪೊಲೀಸರು ಯಾರದ್ದಾದರೂ ಮನೆಗೆ ಹೋಗಿದ್ದಾರೆ, ಕುಟುಂಬದವರು ದೌರ್ಜನ್ಯದ ಆರೋಪ ಮಾಡಿದ್ದಾರೆ ಎಂದಾದರೆ ಅದನ್ನು ವರದಿ ಮಾಡುವುದು ಪತ್ರಕರ್ತನ ಕೆಲಸ. ನಾವು ಸ್ಥಳೀಯ ಸುದ್ದಿಯನ್ನೇ ಮಾಡುತ್ತಿದ್ದೇವೆ. ಈಗ ಅದಕ್ಕೂ ನಿರ್ಬಂಧ ಹೇರಿದರೆ ಹೇಗೆ? ಎಂಬುದು ಅವರ ಪ್ರಶ್ನೆ.

ಇಂಥಾ ಉಪಚುನಾವಣೆಯ ಫಲಿತಾಂಶ ಏನಾಗಬಹುದು ಎನ್ನುವುದಕ್ಕಿಂತ, ಇಂಥಾ ಚುನಾವಣಾ ಅಕ್ರಮಗಳು ಸಹಜವೆನಿಸಿಬಿಟ್ಟರೆ, ಸರ್ಕಾರಿ ಕಾರ್ಯಾಂಗವೇ ಶಾಮೀಲಾದರೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಗತಿ ಏನು? ಎನ್ನುವುದು ಮುಖ್ಯವಾಗಬೇಕಿದೆ. ಯಾಕೆಂದರೆ, ಮತದಾರರನ್ನು ಮತಗಟ್ಟೆಯಿಂದ ಹಿಂದಕ್ಕೆ ಕಳುಹಿಸಲಾಗಿದೆ ಎಂಬ ಆರೋಪವಿದೆ; ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಮತದಾನಕ್ಕೂ ಮೊದಲೇ ವಶಕ್ಕೆ ಪಡೆಯಲಾಗಿದೆ ಎಂಬ ಆರೋಪವಿದೆ; ಪೋಲಿಂಗ್ ಏಜೆಂಟ್‌ಗಳನ್ನು ಮತಗಟ್ಟೆಯಿಂದ ದೂರವಿಡಲಾಗಿದೆ ಎಂಬ ದೂರುಗಳಿವೆ; ಅದರ ಜೊತೆಗೆ, ಸ್ಥಳೀಯ ಪತ್ರಕರ್ತರ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳ ಮೇಲಿನ ನಿರ್ಬಂಧದ ಪ್ರಶ್ನೆಯೂ ಇದೆ.

ವಿರೋಧ ಪಕ್ಷಗಳ ನಾಯಕರು, ಸ್ಥಳೀಯ ಮತದಾರರು ಮತ್ತು ಪತ್ರಕರ್ತರು Scroll ಮುಂದೆ ಇಂತಹ ಅನುಭವಗಳನ್ನಿಟ್ಟರೆ, ಇನ್ನೊಂದು ಕಡೆ ಚುನಾವಣಾ ಅಧಿಕಾರಿಗಳು, ವೀಕ್ಷಕರು ಮತದಾನ ನ್ಯಾಯಸಮ್ಮತವಾಗಿ ನಡೆದಿದೆ ಎಂದು ಹೇಳಲಾಗಿದೆ. Scrollನ ಗ್ರೌಂಡ್‌ ರಿಪೋರ್ಟ್‌ ನಮ್ಮ ಮುಂದೆ ಇಡುವ ಮೂಲ ಪ್ರಶ್ನೆ ಮಾತ್ರ ಸರಳವಾಗಿದೆ: ಮತದಾನ ಮುಕ್ತ ಮತ್ತು ನ್ಯಾಯಸಮ್ಮತವಾಗಿತ್ತು ಎಂದಾದರೆ, ಮತ ಹಾಕಲು ಬಂದಿದ್ದೇವೆ ಎನ್ನುವ ಜನರಲ್ಲಿ ಇಷ್ಟೊಂದು ಆತಂಕ ಮತ್ತು ದೂರುಗಳು ಏಕೆ ಕೇಳಿಬಂದವು?

ಆ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಆರೋಪಗಳಷ್ಟೇ ಅಲ್ಲ, ಮತಗಟ್ಟೆಗಳ ವೀಡಿಯೊ ದಾಖಲೆಗಳು, ಪೊಲೀಸ್ ಕ್ರಮಗಳು, ಬಂಧನಗಳ ವಿವರಗಳು ಮತ್ತು ಚುನಾವಣಾ ಆಯೋಗದ ಪರಿಶೀಲನೆ — ಇವೆಲ್ಲವೂ ಸಾರ್ವಜನಿಕವಾಗಿ ಪರಿಶೀಲನೆಗೆ ಒಳಪಡಬೇಕಾಗುತ್ತದೆ.

(ಈ ಲೇಖನವು Scroll.inನಲ್ಲಿ ಅನಂತ್ ಗುಪ್ತಾ ಮತ್ತು ರೋಕಿಬುಜ್ ಜಮಾನ್ ವರದಿ ಮಾಡಿರುವ ಗ್ರೌಂಡ್‌ ರಿಪೋರ್ಟ್‌ ಆಧರಿಸಿ ಕನ್ನಡದಲ್ಲಿ ನಿರೂಪಿಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಿರುವ ಚುನಾವಣಾ ಅಕ್ರಮ ಹಾಗೂ ಪೊಲೀಸ್ ಕ್ರಮಗಳಿಗೆ ಸಂಬಂಧಿಸಿದ ಹಲವು ಅಂಶಗಳು ಸಂಬಂಧಪಟ್ಟ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು Scroll.in ಮುಂದೆ ಮಾಡಿರುವ ಆರೋಪಗಳಾಗಿವೆ.)

ಕೃಪೆ: scroll.in

Leave a Reply

Your email address will not be published. Required fields are marked *