ಚುನಾವಣಾ ಆಯುಕ್ತರ ಗದ್ದಲ: ಪ್ರತಿಕ್ರಿಯಿಸುವ ಮುನ್ನ ತಿಳಿದಿರಲಿ 2018ರ ಆ ಘಟನೆ…

ವಿಪರೀತ ಖುಷಿಯಲ್ಲಿದ್ದಾಗ ಅಥವಾ ವಿಪರೀತ ದಿಗಿಲುಗೊಂಡಿದ್ದಾಗ ನಾವು ಗಂಭೀರ ಎನ್ನುವಂತಹ ಯಾವುದೇ ತೀರ್ಮಾನಕ್ಕೆ ಬರಬಾರದು ಅಂತ ದೊಡ್ಡವರು ಹೇಳ್ತಾರೆ. ಅದು ನಿಜವೂ ಹೌದು. ಯಾಕೆಂದರೆ ಅಂತಹ ಪರಿಸ್ಥಿತಿಯಲ್ಲಿ ಮನಸ್ಸು, ಪರಿಣಾಮಗಳನ್ನು ತೂಗಿನೋಡುವ ಸಮಭಾವದಲ್ಲಿ ಇರುವುದಿಲ್ಲ. ದುಡುಕಿನ ನಿರ್ಧಾರಗಳು ನಮ್ಮಿಂದ ಹೊರಬೀಳುವ ಸಾಧ್ಯತೆಗಳೆ ಹೆಚ್ಚು.

ಚುನಾವಣಾ ಆಯುಕ್ತರ ಕಚೇರಿಯಿಂದ ಹೊರಬರುತ್ತಿರುವ ರೋಚಕ ಸುದ್ದಿಗಳು ಈಗ ಅಂತಹ ದಿಗಿಲಿನ, ನಿಟ್ಟುಸುರಿನ, ಆಕ್ರೋಶದ ವಾತಾವರಣ ಸೃಷ್ಟಿಸಿವೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರು ಇನ್ನಿಬ್ಬರು ಚುನಾವಣಾ ಆಯುಕ್ತರನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಕಾನೂನುಸಮ್ಮತವಲ್ಲದ, ಅನಧಿಕೃತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದು ಆರೋಪ. ಗ್ಯಾನೇಶ್‌ ಅವರ ಇಂತಹ ಸರ್ವಾಧಿಕಾರಿ ವರ್ತನೆಯ ವಿರುದ್ಧ, ಎಸ್‌ಐಆರ್ ವಿಚಾರದಲ್ಲಿ ಅವರ ಹಠಮಾರಿತನದ ವಿರುದ್ಧ ವಿರೋಧ ಪಕ್ಷಗಳು ಮತ್ತು ನಾಗರಿಕ ವೇದಿಕೆಗಳು ಆರೋಪ ಮಾಡುತ್ತಲೇ ಬಂದಿದ್ದವು. ಇದೀಗ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯಿಂದ ಅಧಿಕೃತ ಸಾಕ್ಷ್ಯಗಳು ಸಿಕ್ಕಂತಾಗಿದೆ.

ಸಹಜವಾಗಿಯೇ ಗ್ಯಾನೇಶ್‌ ಅವರ ರಾಜೀನಾಮೆಗೆ ಒತ್ತಾಯಗಳು ಕೇಳಿಬರುತ್ತಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಕಾಕ್ರೋಚ್‌ ಜನತಾ ಪಾರ್ಟಿಯ ನೇತಾರರು ಗ್ಯಾನೇಶ್‌ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದ್ದಾರೆ; ವಿರೋಧ ಪಕ್ಷಗಳು ಅವರ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗಕ್ಕೆ ಪ್ರಸ್ತಾಪ ಮಂಡಿಸಲು ತಯಾರಾಗುತ್ತಿವೆ; ಪ್ರಿಯಾಂಕ ಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೇಶದ್ರೋಹದ ಕೇಸು ಹಾಕಿ ಗ್ಯಾನೇಶ್‌ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದಿದ್ದಾರೆ. ಇವೆಲ್ಲವು ಸಹಜ ಮತ್ತು ನಿರೀಕ್ಷಿತ ಆಕ್ರೋಶಗಳು. ಆದರೆ ನಮ್ಮ ಪ್ರತಿಕ್ರಿಯೆ ಇಷ್ಟಕ್ಕೇ ಸೀಮಿತಗೊಳ್ಳಬೇಕೆ?

ಸುಪ್ರೀಂ ನೆನಪು!

2018ರಲ್ಲಿ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ನಡೆದ ಆ ಘಟನೆ ಇಲ್ಲಿ ಮುಖ್ಯವಾಗುತ್ತದೆ. ಜನವರಿ 12. ಸರ್ವೋಚ್ಛ ನ್ಯಾಯಾಲಯದ ನಾಲ್ವರು ಜಡ್ಜ್‌ಗಳಾದ ಚಲಮೇಶ್ವರ್‍‌, ರಂಜನ್‌ ಗೊಗೊಯ್, ಮದನ್‌ ಲೋಕೂರ್ ಮತ್ತು ಕುರಿಯನ್‌ ಜೋಸೆಫ್‌ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್‌ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪದ ವಿರುದ್ಧ ಹರಿಹಾಯ್ದಿದ್ದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೀಗೆ ಸುಪ್ರೀಂ ಜಡ್ಜ್‌ಗಳು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದು ಅದೇ ಮೊದಲು. ಅಷ್ಟರಲ್ಲಾಗಲೇ, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಸೇರಿದಂತೆ ಸ್ವಾಯತ್ತ ತನಿಖಾ ಸಂಸ್ಥೆಗಳ ಮೇಲೆ ತನ್ನ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪಗಳು ದಟ್ಟವಾಗಿದ್ದವು. ಅಂತಹ ಸಮಯದಲ್ಲಿ ಅಷ್ಟೂ ಹಿರಿಯ ನ್ಯಾಯಾಧೀಶರು ಬಹಿರಂಗವಾಗಿ ಪ್ರತಿಭಟಿಸಿದಾಗ, ಜನರಿಗೆ ಇವತ್ತು ಚುನಾವಣಾ ಆಯೋಗದ ವಿಚಾರದಲ್ಲಿ ಹುಟ್ಟಿರುವಂತಹ ಭರವಸೆ ಹುಟ್ಟಿತ್ತು. ನ್ಯಾಯಾಧೀಶರ ಈ ಪ್ರತಿರೋಧ, ನ್ಯಾಯಾಂಗವನ್ನು ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸಲಿದೆ ಎಂಬ ನಿರೀಕ್ಷೆಗಳು ಗರಿಗೆದರಿದ್ದವು! ಅದಾಗಿ ಕೆಲವೇ ತಿಂಗಳಲ್ಲಿ, ನಾಲ್ವರು ರೆಬೆಲ್‌ ನ್ಯಾಯಾಧೀಶರ ಪೈಕಿ ಒಬ್ಬರಾಗಿದ್ದ ರಂಜನ್‌ ಗೊಗಾಯ್‌ ಅವರು ಸುಪ್ರೀಂ ಕೋರ್ಟ್‌ನ ಛೀಫ್‌ ಜಸ್ಟೀಸ್‌ ಆಗಿ ಆಯ್ಕೆಯಾದಾಗ, ಇವರಿಂದಾಗಿ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಜನ ಆಶಿಸಿದರು.

ಆದರೆ ಆದದ್ದೇನು?

ಅವರ ಕಾಲದಲ್ಲಿ ಹೊರಬಿದ್ದ ಅಯೋಧ್ಯೆ ತೀರ್ಪು, ರಫೇಲ್‌ ವಿಚಾರಣೆ, ಅಸ್ಸಾಂ ಎನ್‌ಆರ್‍‌ಸಿ ಹಾಗೂ ಶಬರಿಮಲೈ ತೀರ್ಪುಗಳು ನಿರೀಕ್ಷೆ ಹೊತ್ತು ಕಾಯುತ್ತಿದ್ದ ಜನರನ್ನು ಪ್ರಪಾತಕ್ಕೆ ತಳ್ಳಿದವು. ಯಾವಾಗ ತಮ್ಮ ಮೇಲೆ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪವನ್ನು ತಾವೇ ವಿಚಾರಣೆ ಮಾಡಿ, ತಮ್ಮನ್ನು ತಾವೇ ನಿರ್ದೋಷಿ ಎಂದು ತೀರ್ಪು ಕೊಟ್ಟುಕೊಂಡರೋ ಆಗಂತೂ ನ್ಯಾಯಾಂಗದ ಮೇಲಿನ ನಂಬಿಕೆಗಳು ಮತ್ತಷ್ಟು ಕುಸಿದುಹೋದವು. ಸಾಲದ್ದಕ್ಕೆ ನಿವೃತ್ತಿಯ ತತ್‌ಕ್ಷಣವೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಯ್ತು.

ನ್ಯಾಯಾಧೀಶರುಗಳ ಪತ್ರಿಕಾಗೋಷ್ಠಿ-ಪ್ರತಿಭಟನೆಯ ನಂತರ ಎಲ್ಲವೂ ಸರಿಹೋಗದೆ ಹೋದರೂ, ಸ್ವಲ್ಪವಾದರೂ ಒಳ್ಳೆಯ ಬದಲಾವಣೆ ಆಗಲಿವೆ ಎಂದು ಹುಟ್ಟಿದ್ದ ಭರವಸೆಗಳು ಹುಸಿಯಾಗಿ, ವ್ಯವಸ್ಥೆ ಮೊದಲಿಗಿಂತ ಅಧಃಪತನಕ್ಕೆ ಜಾರಿತು. ಅಂದರೆ, ಪ್ರಸ್ತುತ ಅಧಿಕಾರ ಹೊಂದಿರುವ ಶಕ್ತಿಗಳು ತಮಗೆ ಪ್ರತಿಕೂಲವಾಗಬಹುದಾದ ಎಂತದ್ದೇ ಸನ್ನಿವೇಶವನ್ನು ಅನುಕೂಲವಾಗಿ ಪರಿವರ್ತಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ತಲುಪಬಲ್ಲರು ಎಂಬುದನ್ನು ನ್ಯಾಯಾಧೀಶರ ಆ ಪ್ರತಿರೋಧದ ನಂತರದ ಬೆಳವಣಿಗೆಗಳು ಅರ್ಥ ಮಾಡಿಸಿವೆ. ಈಗ ಸುಪ್ರೀಂಕೋರ್ಟ್‌ ಬದಲು ಚುನಾವಣಾ ಆಯೋಗದ ಸರದಿಯಷ್ಟೆ.

ಇದು ಯಾರಿಗೆ ಬಲೆ?

ಹಿರಿಯ ವಿಶ್ಲೇಷಕ ರಾಜಾರಾಂ ತಲ್ಲೂರು ಅವರು ಹೇಳುವಂತೆ, ನಾವೆಲ್ಲ ಇಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿರುವ ಈ ಗದ್ದಲವನ್ನು ತಣ್ಣಗೆ ಮಾಡುವುದು ಅಧಿಕಾರಶಾಹಿಗಳಿಗೆ ಕಷ್ಟವೇನಲ್ಲ. ಮೂವರು ಆಯುಕ್ತರನ್ನು ಒಟ್ಟಿಗೇ ಪತ್ರಿಕಾಗೋಷ್ಠಿ ನಡೆಸಿ, ಎಲ್ಲವೂ ಸರಿಯಿದೆ, ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳಿಸಿಬಿಟ್ಟರೆ ನಮ್ಮ ಪ್ರತಿಕ್ರಿಯೆಯ ಅಡಿಪಾಯ ಕುಸಿದುಹೋಗಲಿದೆ. ಅಥವಾ ಜನರನ್ನು ಡೈವರ್ಟ್ ಮಾಡುವಲ್ಲಿ ನಿಷ್ಣಾತರೆನಿಸಿಕೊಂಡಿರುವ ಆಡಳಿತಗಾರರು, ತಮ್ಮ ಬೇರೆ ಕಾರ್ಯಸಾಧನೆಗಾಗಿ ಆಯೋಗದ ಗದ್ದಲವನ್ನು ತಾವೇ ಸೃಷ್ಟಿಸಿದ ಒಂದು ಡೈವರ್ಟ್‌ ಸರಕಾಗಿ ನಮ್ಮ ಮುಂದಿರಿಸಿರಲೂಬಹುದು.

ಅವರ ಎರಡೂ ಅಂದಾಜುಗಳನ್ನು ನಾವು ತಳ್ಳಿಹಾಕಲಾಗದು. ಹಿಂದಿನ ಅನುಭವಗಳು ನಮಗೆ ಈ ಎಚ್ಚರಿಕೆ ಕೊಡುತ್ತಿವೆ. ಮುಖ್ಯವಾಗಿ, ಗ್ಯಾನೇಶ್‌ ಕುಮಾರ್‍‌ ಅವರ ರಾಜೀನಾಮೆ ಅಥವಾ ಅವರಿಗೆ ಶಿಕ್ಷೆಯಾಗುವಂತೆ ಒತ್ತಾಯಿಸುವುದೇ ನಮ್ಮ ಪ್ರಧಾನ ಪ್ರತಿರೋಧವಾಗಿ ಸೀಮಿತಗೊಂಡರೆ ನಾವು ಬಹುಪಾಲು ಎಡವಿದಂತೆ. ಯಾಕೆಂದರೆ, 2023ರಲ್ಲಿ Chief Election Commissioner and Other Election Commissioners (Appointment, Conditions of Service and Term of Office) ಕಾಯ್ದೆಗೆ ತಿದ್ದುಪಡಿ ತಂದ ಪ್ರಸ್ತುತ ಕೇಂದ್ರ ಸರ್ಕಾರ ಸೆಕ್ಷನ್‌ 16 ಎಂಬ ಹೊಸ ನಿಯಮ ಸೇರಿಸಿದೆ. ಅದರ ಪ್ರಕಾರ, ಚುನಾವಣಾ ಆಯುಕ್ತರ ವಿರುದ್ಧ ಅವರ ಅಧಿಕಾರಾವಧಿಯಲ್ಲಿ ನಡೆದ ಹಗರಣ ಅಥವಾ ಆರೋಪಗಳ  ಕುರಿತಂತೆ ಯಾವುದೇ ದೂರು ದಾಖಲಿಸುವಂತಿಲ್ಲ; ಯಾವ ನ್ಯಾಯಾಲಯವೂ ತನಿಖೆ ಮಾಡುವಂತಿಲ್ಲ! ಇಷ್ಟೊಂದು legal immunity ಹೊಂದಿರುವ ಗ್ಯಾನೇಶ್‌ ಕುಮಾರ್‍‌ ಅವರನ್ನು ಶಿಕ್ಷೆಗೆ ಒಳಪಡಿಸಿ, ಆ ಮೂಲಕ ಮುಂಬರುವ ಆಯುಕ್ತರಿಗೆ ಎಚ್ಚರಿಕೆಯ ಪಾಠ ರವಾನಿಸುವುದು ಕಷ್ಟಸಾಧ್ಯದ ಮಾತು. ಆಡಳಿತ ಪಕ್ಷದ ಇಚ್ಛಾಶಕ್ತಿಯಿಲ್ಲದೆ ಇದು ಆಲ್‌ಮೋಸ್ಟ್‌ ಅಸಂಭವ!

ರಾಜೀನಾಮೆ ಮಾತ್ರ ಪರಿಹಾರವೇ?

ಇನ್ನು ಅವರ ರಾಜೀನಾಮೆ.  ಅಕಸ್ಮಾತ್‌ ಗ್ಯಾನೇಶ್‌ ಕುಮಾರ್‍‌ ರಾಜೀನಾಮೆ ನೀಡಲೇಬೇಕಾದ ಪರಿಸ್ಥಿತಿ ಉದ್ಭವವಾದರೆ, ಕೇಂದ್ರ ಸರ್ಕಾರಕ್ಕೆ ಒಂದಷ್ಟು ಮುಖಭಂಗ ಆಗುವುದಂತೂ ಸತ್ಯ. ಆದರೆ ದಿಲ್ಲಿ ರೈತರ ಹೋರಾಟ, ಮಣಿಪುರದ ಹಿಂಸಾಚಾರ, ಜೆನ್‌-ಜಿ ಪ್ರತಿಭಟನೆ ಫಲದ ಸಚಿವರ ರಾಜೀನಾಮೆಯ ಮುಖಭಂಗಗಳಿಗೆ ಜಗ್ಗದವರಿಗೆ ಈ ಮುಖಭಂಗದಿಂದ ಹೆಚ್ಚಿಗೆ ಏನಾದೀತು? ಹಾಗೆ ನೋಡಿದರೆ, ಜನರ ಪ್ರತಿರೋಧವೆಲ್ಲ ಗ್ಯಾನೇಶ್‌ ಸುತ್ತಲೇ ಸಾಂದ್ರೀಕರಿಸಿ, ಆತ ರಾಜೀನಾಮೆ ನೀಡುವಂತಾದರೆ ಅದರಿಂದ ಮೋದಿ ಸರ್ಕಾರಕ್ಕೆ ಎರಡು ರೀತಿಯ ಲಾಭವಿದೆ.

ಮೊದಲನೆಯದದ್ದು – ಎಸ್‌ಐಆರ್‍‌, ವೋಟ್‌ಚೋರಿ ಯಂತಹ ಆರೋಪಗಳಿಂದಾಗಿ ಚುನಾವಣಾ ಆಯೋಗದ ಮೇಲೆ ಜನಸಾಮಾನ್ಯರ ನಡುವೆ ಹುಟ್ಟಿಕೊಂಡಿರುವ ಅಸಮಾಧಾನ ಗ್ಯಾನೇಶ್‌ ರಾಜೀನಾಮೆಯ ಮೂಲಕ ತಣ್ಣಗಾಗುತ್ತದೆ. ಎಲ್ಲಾ ಕೆಡುಕುಗಳಿಗೆ ಗ್ಯಾನೇಶ್‌ ಮಾತ್ರವೆ ಕಾರಣವಾದಂತಾಗಿ, ಕೇಂದ್ರ ಸರ್ಕಾರ ಆ ಬಿಸಿಯಿಂದ ಬಚಾವಾಗುತ್ತಾರೆ. ಆಯೋಗಕ್ಕೆ ಒಂದಷ್ಟು ವಿಶ್ವಾಸಾರ್ಹತೆ ಮರಳುತ್ತದೆ. ಎರಡನೆಯದ್ದು –  ಗ್ಯಾನೇಶ್‌ ಕುಮಾರ್ ರಾಜೀನಾಮೆಯಿಂದ ತೆರವಾಗುವ ಹುದ್ದೆಗೆ ಹೊಸ ಆಯುಕ್ತರನ್ನು ನೇಮಕ ಮಾಡುವವರು ಯಾರು? ಇದೇ ಸರ್ಕಾರ. ಹಾಗಿರುವಾಗ, ಮತ್ತೋರ್ವ ಗ್ಯಾನೇಶರನ್ನೋ, ಅವರಿಗಿಂತಲು ಅನುಕೂಲಕಾರಿ ವ್ಯಕ್ತಿಯನ್ನೋ ತಂದು ಕೂರಿಸುತ್ತಾರೆ. ಹೇಗೂ ಗ್ಯಾನೇಶ್‌ ತೆರವಿನ ಕಾರಣಕ್ಕೆ ಜನಾಕ್ರೋಶ ತಣ್ಣಗಾಗಿರುತ್ತಾದ್ದರಿಂದ, ತಾವು ಬಯಸಿದ ರೀತಿಯಲ್ಲಿ ಹಾಗೂ ಇನ್ನಷ್ಟು ಎಚ್ಚರಿಕೆಯಿಂದ ಚುನಾವಣಾ ವ್ಯವಸ್ಥೆಯನ್ನು ಛಿದ್ರಗೊಳಿಸಲು ಹಾದಿ ಸುಗಮವಾಗುತ್ತೆ. ಯಾಕೆಂದರೆ, ಈ ಮೊದಲು ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರ (ಸಿಜೆಐ) ತ್ರಿಸದಸ್ಯ ಆಯ್ಕೆ ಸಮಿತಿ ನೇಮಕ ಮಾಡುತ್ತಿತ್ತು. ಆದರೆ 2023ರಲ್ಲಿ ಆ ನಿಯಮಕ್ಕೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ, ಸಿಜೆಐ ತೆಗೆದುಹಾಕಿ, ಅವರ  ಬದಲಿಗೆ ಸಚಿವ ಸಂಪುಟದ ಒಬ್ಬ ಮಂತ್ರಿಯನ್ನು ಆಯ್ಕೆ ಸಮಿತಿ ಸದಸ್ಯರನ್ನಾಗಿಸಿದೆ. ಅಂದರೆ ಸರ್ಕಾರದ ಪರವಾಗಿ ಇಬ್ಬರು ವ್ಯಕ್ತಿಗಳು, ವಿರೋಧ ಪಕ್ಷದಿಂದ ಒಬ್ಬ ವ್ಯಕ್ತಿ. ಎರಡು ಮತಗಳು ಅವರ ಕೈಯಲ್ಲೇ ಇರುವುದರಿಂದ, ವಿಪಕ್ಷ ನಾಯಕ ವಿರೋಧಿಸಿದರೂ 2:1 ಬಹುಮತದೊಂದಿಗೆ ತಮಗಿಷ್ಟ ಬಂದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಹಾಗಾದರೆ ಗ್ಯಾನೇಶ್‌ ಕುಮಾರ್‍‌ ರಾಜೀನಾಮೆಗೆ ಒತ್ತಾಯಿಸಬಾರದೆ? ಖಂಡಿತ ನಮ್ಮ ಒತ್ತಾಯಗಳಲ್ಲಿ ಅದೂ ಒಂದಾಗಿರಬೇಕು. ಆದರೆ, ಅದಕ್ಕೆ ಮಾತ್ರವೇ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರ ಒತ್ತಾಯ ಸಮಂಜಸವಾಗಿದೆ. ಎಸ್‌ಐಆರ್‍‌ ಪ್ರಕ್ರಿಯೆ ಏಕಪಕ್ಷೀಯ ಅಥವಾ ದೋಷಪೂರಿತ ಎಂದಾದರೆ, ಅಂತಹ ಎಸ್‌ಐಆರ್‍‌ ಆಧಾರದಲ್ಲಿ ನಡೆದ ಚುನಾವಣೆಗಳು, ಆ ಚುನಾವಣೆಗಳಲ್ಲಿ ಗೆದ್ದ ಸರ್ಕಾರಗಳು ಮತ್ತು ಆ ಸರ್ಕಾರಗಳು ರೂಪಿಸಿದ ಶಾಸನಗಳೂ (ಕಾನೂನ್ ಚೋರಿ) ಕಾನೂನುಬಾಹಿರ ಎಂಬ ಅವರ ಧ್ವನಿ ಜನಾಕ್ರೋಶದ ಒಮ್ಮತವಾಗಬೇಕಿದೆ. ಆಗ ಗ್ಯಾನೇಶ್‌ ಕುಮಾರ್‍‌  ಮಾತ್ರವಲ್ಲದೆ, ಈ ಅವ್ಯವಸ್ಥೆಯ ಪರದೆ ಹಿಂದಿರುವವರೂ ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಸಮಸ್ಯೆಗಳ ಅಸಲೀ ಮೂಲ, ಜನರ ಮುಂದೆ ಅನಾವರಣವಾಗಲಿದೆ.

ಇದರ ಹೊರತಾಗಿ, ಗ್ಯಾನೇಶ್‌ ಕುಮಾರ್ ರಾಜೀನಾಮೆಗೆ ಗಡುವು ನೀಡುವುದಾಗಲಿ, ಆ ಮೂಲಕ ಅವರ ರಾಜೀನಾಮೆಯೆ ಎಲ್ಲಾ ಸಮಸ್ಯೆಗೂ ಪರಿಹಾರ ಎಂಬ ಅಭಿಪ್ರಾಯ ಬಿತ್ತುವುದಾಗಲಿ ಮಾಡಿದರೆ, ಸಮಸ್ಯೆಯ ಮೂಲಗಳು ಸೇಫ್ ಆಗಿಬಿಡುತ್ತವೆ. ಈಗಾಗಲೇ, ಗ್ಯಾನೇಶ್‌ ಕುಮಾರ್‍‌ ಅವರಿಂದ ತಾವು ಪಡೆಯಬಹುದಾದ ಗರಿಷ್ಠ ಲಾಭವನ್ನು ಅವರು ಪಡೆದುಕೊಂಡಿದ್ದಾರೆ; ಈಗ ಆತ ನಿರ್ಗಮಿಸಿದರೆ, ಆತನಿಗೆ ವಿಶ್ರಾಂತಿ ಸಿಗಬಹುದೇ ಹೊರತು ಮತ್ತೇನೂ ಆಗದು. ಯಾಕೆಂದರೆ, ಹೊಸ ತಿದ್ದುಪಡಿ ಪ್ರಕಾರ ಸಿಇಸಿ ವಿರುದ್ಧ ಕೇಸು ಕೂಡಾ ಹೂಡುವಂತಿಲ್ಲ. ಇನ್ನು ಹೊಸ ಗ್ಯಾನೇ’ಶಾ’, ಹಳೆಯ ಕೆಲಸವನ್ನು ನಿರಾತಂಕವಾಗಿ ಮುಂದುವರೆಸುತ್ತಾನೆ. ಗ್ಯಾನೇಶ್‌ ಕುಮಾರ್‍‌ಗೆ ರಾಜ್ಯಸಭೆ ಹುದ್ದೆ ಉಡುಗೊರೆಯಾಗಿ ಕಾದಿರುತ್ತದೆ. ಅಷ್ಟೆ!

Leave a Reply

Your email address will not be published. Required fields are marked *