ಹೊಸ ಓದು: ಬದುಕು ಬವಣೆಗಳ ತೆರೆದಿಡುವ ತೆಲುಗನ್ನಡ ಕಾವ್ಯಗಳು

ವೃತ್ತಿಯಿಂದ ಪೊಲೀಸ್‌ ಸಿಬ್ಬಂದಿಯಾಗಿದ್ದರೂ ಪ್ರವೃತ್ತಿಯಿಂದ ಸೃಜನಶೀಲ ಬರಹಗಾರ, ಕವಿಯಾಗಿ ಗುರುತಿಸಿಕೊಂಡಿರುವ ಚಿನ್ನುಪ್ರಕಾಶ್‌ ಶ್ರೀರಾಮನಹಳ್ಳಿಯವರು ಉದಯೋನ್ಮುಖ ಸಾಹಿತ್ಯ ಪ್ರತಿಭೆ. ತೆಲುಗಿನ ಕವಿ ಅಗ್ರಹಾರಂ ನಾಗಶೇಷು ಅವರ ಕವನ ಸಂಕಲನವನ್ನು ಕನ್ನಡಕ್ಕೆ `ಕಾಲದ ಜೊತೆ ನಾನೂ…’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಆ ಕೃತಿಯ ಬಗ್ಗೆ ಡಾ. ಎಂ ಎಸ್‌ ಮಣಿಯವರ ವಿಮರ್ಶಾತ್ಮಕ ಮಾತುಗಳು ಇಲ್ಲಿವೆ.

ಬದುಕು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಹೋರಾಟದ ಪ್ರಕ್ರಿಯೆ. ಬದುಕು ಅಂದರೆ ಒಂದು ಸಮುದ್ರವಿದ್ದಂತೆ. ಈಜುವುದು ಕಷ್ಟ, ಈಜಿ ದಡ ಸೇರಿದರೆ ಸಾರ್ಥಕ ಈ ಜನ್ಮ.

ಇಲ್ಲಿ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದೇ ಮುಖ್ಯ. ನಮಗಾಗಿ ನಾವು ಬದುಕುವುದಕ್ಕಿಂತ ಬೇರೆಯವರಿಗಾಗಿ ಬದುಕುವುದು, ನಮ್ಮ ನೋವನ್ನು ಮರೆತು, ಆ ನೋವಿನೊಳಗೇ ಬೇರೆಯವರಿಗೆ ಸಂತಸ ನೀಡುವುದು, ಹಸಿದವರಿಗೆ ಊಟ ನೀಡುವುದು, ದುಃಖ ಒತ್ತರಿಸಿ ಬರುತ್ತಿದ್ದರೂ, ತೋರಿಸಿಕೊಳ್ಳದೇ ಬೇರೆಯವರ ಜೊತೆ ಸಂತೋಷವಾಗಿ ಜೀವಿಸುವುದು, ಸಮಾಜದಲ್ಲಿನ ಕಷ್ಟ ಸುಖಗಳಲ್ಲಿ ಭಾಗಿಯಾಗುವುದು, ಬಡವರು, ವೃದ್ಧರಿಗೆ ನೆರವಾಗುವುದು, ಹಿರಿಯರನ್ನು ಗೌರವಿಸಿ, ಪ್ರೀತಿಸುವುದು ಜೀವನ. ಅದೇ ನಿಜವಾದ ಬದುಕು.

ಕಷ್ಟಸುಖದ ಕಡಲುಬದುಕು ಕಷ್ಟಸುಖ ಬೆರೆತ ನೂರು ನದಿಗಳ ಕಡಲು. ಪ್ರತಿಕ್ಷಣ ಅದನ್ನು ಸುಖಮಯವಾಗಿಸುವ ಮಂತ್ರದಂಡ ನಮ್ಮ ಕೈಯಲ್ಲೇ ಇದೆ. ಅದಕ್ಕಾಗಿ ಕಾಣದ ಮನಸ್ಸನ್ನು ಹದಗೊಳಿಸಿದರೆ ಸಮಸ್ತ ಸೃಷ್ಟಿಯನ್ನೇ ಅನುಭವಿಸುವ, ಆನಂದಿಸುವ ಗುಣಾತ್ಮಕ ಭಾವ ನಮ್ಮಲ್ಲಿ ಉದಯಿಸುತ್ತದೆ. ನಮ್ಮ ಬಾಳಿನ ಹೊದಿಕೆ ಸುಖ ದುಃಖದ ದಾರಗಳಿಂದ ನೇಯ್ದಿರುತ್ತದೆ. ಈ ಕ್ಷಣ ಸುಂದರಗೊಳಿಸಿದರೆ ಮುಂದಿನ ಕ್ಷಣವೂ ಸುಂದರವಾಗುತ್ತದೆ. ಅದರ ಮುಂದಿನ ಕ್ಷಣಗಳೂ ಸುಂದರವಾಗುತ್ತವೆ. ಹೀಗೆ ನಮ್ಮ ಬದುಕೇ ಸುಂದರವಾಗುತ್ತದೆ, ಸುಖಮಯವಾಗುತ್ತದೆ.

ಕತ್ತಲು- ಬೆಳಕು ಎಂಬ ಜೋಡಿ ಎತ್ತುಗಳು ಜಗತ್ತಿನ ಬಂಡಿಯನ್ನು ಜೀಕಿದಂತೆ ಕಷ್ಟ ಮತ್ತು ಸುಖ ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಸಿರಿವಂತರಿರಲಿ, ಬಡವರಿರಲಿ ಸುಖ, ದುಃಖ ಎರಡನ್ನೂ ಅನುಭವಿಸಲೇಬೇಕು. ಕೆಲವೊಮ್ಮೆ ಸಿರಿವಂತರಾದವರೂ ದುಃಖಿಗಳಾಗಿರಬಹುದು. ಬಡವರಾದರೂ ಸುಖಿಗಳಾಗಿರಬಹುದು. ಒಟ್ಟಿನಲ್ಲಿ ಸುಖ, ದುಃಖಗಳ ಅನುಭವ ಬಂಧ ಯಾರನ್ನೂ ಬಿಟ್ಟಿಲ್ಲ.

ಇಂಥ ಬದುಕಿನಲಿ ನಾವು ಮಾಡಬೇಕಾದ ಸಾಧನೆ ಎಂದರೆ ದುಃಖದ ಅಂಶವನ್ನು ಸಾಧ್ಯವಾದಷ್ಟು ಕಡಿಮೆ  ಮಾಡುವುದು ಮತ್ತು ಸುಖದ ಅಂಶವನ್ನು ಹೆಚ್ಚಿಸುವುದು. ಬದುಕು ಸುಂದರ ಉದ್ಯಾನ. ಇಲ್ಲಿನ ಮನದಂಗಳದ ವಾತ್ಸಲ್ಯ, ಕಾರುಣ್ಯ, ಪ್ರೀತಿ, ದಯೆ, ಸಮಾಧಾನ, ಶಾಂತಿ, ಮುಂತಾದ ಗಿಡಗಳಿಗೆ ನಾವೇ ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳೂ ವಿಶಾಲವಾಗಿರಬೇಕು.

ಜೀವನ ಗಡಿಯಾರದ ಮುಳ್ಳುಗಳಿದ್ದಂತೆ ಏರುಪೇರು ಸರ್ವೇ ಸಾಮಾನ್ಯ. ಇಲ್ಲಿ ಮೇಲುಕೀಳು ಎನ್ನುವ ಹಂಗಿಲ್ಲದೆ ಎಲ್ಲರೂ ಒಂದೇ. ಇಂದು ಮೇಲಿದ್ದವ ನಾಳೆ ಕೆಳಗಿಳಿಯಲೇಬೇಕು ಮತ್ತೆ ಕೆಲವು ಸಮಯದ ನಂತರ ಒಂದೊಂದೇ ಮೆಟ್ಟಿಲು ಹತ್ತುತಾ ಮೇಲೆ ತಲುಪಲೇ ಬೇಕು. ದೇವರು ಸೃಷ್ಟಿಸಿದ ಈ ಜಗತ್ತಿನಲ್ಲಿ ಹೊಂದಾಣಿಕೆಯೇ ಮೇಲು. ಇಲ್ಲದಿದ್ದರೆ ಬದುಕಿನ ಬಂಡಿ ಕಾಲು ಮುರಿದುಕೊಂಡು ನಿಂತುಬಿಡುತ್ತದೆ.

ಹಣವಿದ್ದರೆ ಫಲವಿಲ್ಲ. ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನಾದರೂ ಪ್ರೀತಿಯ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಜೀವನ ಸಂಜೀವನ. ಆದ್ದರಿಂದ ಹಣದೊಂದಿಗೆ ಅಂಟಿಕೊಂಡು ಬರುವ ಅಹಂ, ದುರಹಂಕಾರಗಳನ್ನು ನಮಗೆ ತಾಕದಂತೆ ಓಡಿಸಬೇಕು ಅಷ್ಟೇ. ನಾವು ಯಾವತ್ತೂ ಅಂತರಂಗದ ಸಿರಿವಂತಿಕೆಯನ್ನು ಗಳಿಸುವತ್ತ ದುಡಿಯಬೇಕು. ಬಹಿರಂಗದ ಸಿರಿವಂತಿಕೆ, ಸಂಪತ್ತು, ಗೆಲುವು ಮುಂತಾದುವುಗಳಿಂದ ನೆಮ್ಮದಿ ಸಂತೋಷ ಸಾಧ್ಯವಿಲ್ಲ. ವಿಶಾಲ ಮನಸ್ಥಿತಿಯನ್ನು ಹೊಂದಿದ ಬದುಕು ನಿಜಕ್ಕೂ ಸುಂದರ ಕಾವ್ಯಧಾರೆ.

ಕಾಲದ ಜೊತೆ ನಾವೂ ಹೆಜ್ಜೆ ಹಾಕಬೇಕು. ಕೆಟ್ಟಿರುವುದು ಕಾಲವಲ್ಲ; ನಾವು-ನಮ್ಮ ಆಲೋಚನೆ. ತೆಲುಗಿನ ಖ್ಯಾತ ಕವಿ ಅಗ್ರಹಾರಂ ನಾಗಶೇಷು ಅವರ `ಕಾಲಂ ವೆಂಟೆ ನೆನೂ..’ ಕವನ ಸಂಕಲದಲ್ಲಿ ಬದುಕಿನ ಹತ್ತಾರು ಮುಖಗಳು ಮುಖಾಮುಖಿಯಾಗುತ್ತವೆ. ಓದುಗರೊಂದಿಗೆ ಸಂವಾದಿಸುತ್ತಲೇ ಹೊಸ ಚಿಂತನೆಯ ದಿಸೆ ದರ್ಶಿಸುತ್ತದೆ. ಮೂಲ ತೆಲುಗು ಕೃತಿಯನ್ನು `ಕಾಲದ ಜೊತೆ ನಾನು’ ಎಂಬ ಶೀರ್ಷಿಕೆಯಡಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕವನದೊಳಗಿನ ಗೂಢ-ಗಾಢ ಭಾವರ್ಥವನ್ನು ಸರಳ ಭಾಷೆಯಲ್ಲಿ; ಕಾವ್ಯ ಪರಿಭಾಷೆಯ ಚೌಕಟ್ಟಿನೊಳಗೇ ನಿವೇದಿಸಿದ್ದಾರೆ. ಇದು ಆ ಕವಿಯ ತಾಕತ್ತೂ ಹೌದು.

ಬದುಕಿನ ಹಾದಿಯಲ್ಲಿ ಕವಿ ತಾವು ಕಂಡುಂಡ ಕೋಪ-ತಾಪ- ವಿಷಾದ-ನಿರಾಸೆ-ಧನವಂತರ ದಬ್ಬಾಳಿಕೆ- ಹಳ್ಳಿಗಳ ವಾಸ್ತವ ಸ್ಥಿತಿ- ಸಂಬಂಧಗಳ ನಾಟಕೀಯತೆ- ಸಾವು-ನೋವು-ಕತ್ತಲು-ಬೆಳಕು.. ಎಲ್ಲವನ್ನೂ ಭಾವ ಸಮ್ಮಿಳಿತಗೊಳಿಸಿದ್ದಾರೆ. ಆ ಮೂಲಕ ತಮ್ಮಂತೆಯೇ ಸಮ ಭಾವ ಜೀವಿಗಳ ತುಮುಲಗಳಿಗೆ ಸೇತುವೆಯಾಗಿದ್ದಾರೆ.

ಮಳೆರಾಯನ ಕರುಣೆಯಿಲ್ಲದೇ
ಕಣ್ಣೀರನ್ನಿಡುತ್ತಿವೆ ಹೊಲಗಳು-ಬೆಳೆಗಳು
ಪ್ರೇಮವನ್ನೇ ಹಂಚುಂಡು ಒಡನಾಡಿದ ರಾಸುಗಳು
ಅಸ್ತಿಪಂಜರಗಳಂತಾಗಿ ಕಣ್ಮರೆಯಾಗುತ್ತಿದ್ದರೆ
ನೋಡಲಾಗದೇ ಅನ್ನದಾತನ ಎದೆಬಡಿತ ನಿಂತಂತಾಗಿದೆ

ಹೀಗೆ ಪ್ರಸ್ತುತ ಹಳ್ಳಿಯಲ್ಲಿ ವಿಷಮಿಸುತ್ತಿರುವ ಪರಿಸ್ಥಿತಿಯನ್ನು ಚಿತ್ರಿಸುತ್ತಲೇ ವಲಸೆ ಜೀವನದ ಪರಿಗೆ ವಿಷಾದಿಸಿದ್ದಾರೆ.

ಕಷ್ಟ-ಕಣ್ಣೀರು
ಸಾಲದೊಂದಿಗೆ ಅವಮಾನಗಳೂ.. ಇಂತಹ
ಅಸ್ತ್ರಗಳೊಂದಿಗೆ ಠಳಾಯಿಸುತ್ತಿದೆ
ಅನಾರೋಗ್ಯವೆಂಬ ಅಸಾಮಾನ್ಯ
ಬ್ರಹ್ಮಾಸ್ತ್ರವು ಕೂಡಾ ಮೃತ್ಯು ಸೇನೆಯ
ಬತ್ತಳಿಕೆಯಲ್ಲಿ ಕಾದು ಕುಳಿತಿದೆ

ಬದುಕೆಂಬ ಹೋರಾಟದಲ್ಲಿ ಕಷ್ಟ-ಕಣ್ಣೀರುಗಳು ಸಾಮಾನ್ಯ ಅಸ್ತ್ರಗಳೆಂದು ಹೇಳುತ್ತಲೇ..

ಧನದ ಮದದಲ್ಲಿ ಹಲವು
ಮಾನವ ಸಂಬಂಧಗಳು
ಹೊಳೆ ಹೊಳೆಯುತ್ತಿವೆ
ಕೆಲವು ನಲುಗಿ ಹೋಗುತ್ತಿವೆ

ಎಂಬ ಕವಿ ಮಾತುಗಳು ಪ್ರಸ್ತುತ ದಿನಮಾನಗಳಲ್ಲಿ ಮಾನ ಸಂಬಂಧಗಳು ಅದೆಷ್ಟು ಪೇಲವವಾಗಿವೆ ಎಂಬುದನ್ನು ಬಿಂಬಿಸುತ್ತವೆ.

ಸಂಬಂಧಗಳ ಬಳ್ಳಿಗಳು
ಕಾಲುಗಳಿಗೆ ಸುತ್ತಿಕೊಳ್ಳುತ್ತಿವೆ
ಅನುಬಂಧಗಳ ಮಾತುಗಳು
ಎದುರುಗೊಳ್ಳುತ್ತಲೇ ಇರುತ್ತವೆ
ಕಾಲವು ನನ್ನನ್ನು ಬಿಟ್ಟು
ಹೋಯಿತೇನೋ ಅಂದುಕೊಂಡೆನು
ಅಲ್ಲವೇ ಅಲ್ಲ! ಕಾಲದ ಹಿಂದೆ
ನಾನಿನ್ನೂ ನಡೆಯುತ್ತಲೇ ಇದ್ದೇನೆ..

ಎಂದು ಕಾಲನ ಮಹಿಮೆಯನ್ನು ಕವಿ ವರ್ಣಿಸುತ್ತಾರೆ.

ಎಷ್ಟೋ ದಾರಿದ್ರ್ಯ ಜನರ
ಗುಂಡಿಗೆಯ ತುಂಬಾ
ಒಬ್ಬ ಧನವಂತನ
ಅಟ್ಟಹಾಸದ ಆಯುಧಗಳು
ತೂರಿ ಹೋದರೆ
ನ್ಯಾಯವು ಗಗನ ಸೇರದೇ!?

ಈ ಸಾಲುಗಳು ಇಂದಿನ ವಾಸ್ತವತೆಗೆ ಹಿಡಿದ ಕನ್ನಡಿಯಂತಿದೆ.

ಕಷ್ಟಗಳು ಕೈಹಿಡಿದ ಜೀವನದಲ್ಲಿ
ಹೋರಾಟವಿದೆ ಹಾರಾಟವಿದೆ
ಅನುರಾಗವಿದೆ ಆರೋಪವಿದೆ
ಅಪ್ಯಾಯತೆಯಿದೆ ತಾಪತ್ರಯವಿದೆ
ಸುಖದಲ್ಲಿ ಏನಿದೆ!?

ಇದು ಕವಿಯ ಪ್ರಶ್ನೆ. ಕಷ್ಟ-ಸುಖದ ನಡುವಿನ ಅಂತರನ್ನು ಕವಿ ಹೀಗೆ ವ್ಯಾಖ್ಯಾನಿಸುವಾಗ ಅಂತರಾಳದಲ್ಲಿನ ತುಮುಲಗಳು ಓದುಗರೆದೆಗೆ ತಾಕದೇ ಇರದು.

ಹೃದಯವನ್ನೇ ಗುಡಿಯನ್ನಾಗಿಸಿ
ಪ್ರಾಣವನ್ನೇ ನೇವೇದ್ಯವಾಗಿಟ್ಟು
ಪ್ರೇವ ದೀಪವನ್ನು ಹಚ್ಚಿಟ್ಟು
ಆರಾಧಿಸುತ್ತಿದ್ದರೆ
ನೀ ತಿರಸ್ಕರಿಸಿ ಹೊರಟರೆ
ಉಳಿಯುವುದ ವೇದನೆಯಲ್ಲದೇ ಮತ್ತೇನಿದೆ

ಎನ್ನುವಾಗ ಪ್ರೇಮಿಯೊಬ್ಬನ ವೇದನೆ; ಆರ್ತನಾದ ಮಾರ್ದನಿಸುತ್ತದೆ.

ಕವನ ಸಂಕಲದಲ್ಲಿನ ಪದ್ಯಗಳನ್ನೊಮ್ಮೆ ಓದುತ್ತಾ ಹೋದಂತೆ ವಿಷಾದತೆ ಆವರಿಸುತ್ತದೆ. ಬದುಕು-ಬವಣೆಗಳ ಪುಟಗಳು ತೆರೆದುಕೊಳ್ಳುತ್ತವೆ. ವಾಸ್ತವತೆಗೆ ಕನ್ನಡಿ ಹಿಡಿದು; ಅದುಮಿಟ್ಟ ಭಾವನೆಗಳನ್ನು ಬೋರ್ಗರೆಸುತ್ತವೆ. ಕಾಲ ಬದಲಾದರೂ ಭಾವನೆಗಳು ಬದಲಾಗವು. ಸರ್ವ ಕಾಲಕ್ಕೂ ಸಲ್ಲುವಂತಹವು `ಭಾವನೆ’ಗಳು. ಕೆಲವನ್ನು ಮೆಲುಕು ಹಾಕಬಹುದು; ಹಲವನ್ನು ಅನುಭವಿಸಿರಲೂ ಬಹುದು. ಅದರ ನೆನಪುಗಳು ಶಾಶ್ವತ. ಬದುಕಿನ ವಾಸ್ತವ ಚಿತ್ರಣಗಳ ಗುಚ್ಛ `ಕಾಲದ ಜೊತೆ ನಾನು’.

ಒಂದೇ ಗುಕ್ಕಿಗೆ ಓದಬಹುದಾದ- ಬದುಕಿನ ವಾಸ್ತವಗಳಿಗೆ ಮುಖಾಮುಖಿಯಾಗುವ; ಗತಿಸಿಹೋದ ಭಾವನೆಗಳೊಂದಿಗೆ ಒಡನಾಡಬಹುದಾದ ಕೃತಿ ಇದು. ಅನುವಾದವೆಂದೆನಿದೇ ದೇಸಿಯತೆಯನ್ನು ಕೃತಿ ಕಾಪಾಡಿಕೊಂಡಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಕೃತಿಯ ಹೆಸರು: ಕಾಲದ ಜೊತೆ ನಾನೂ…
ತೆಲುಗು ಮೂಲ: ಅಗ್ರಹಾರಂ ನಾಗಶೇಷು
ಕನ್ನಡಕ್ಕೆ: ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ
ಪುಟಗಳು: 120
ಪ್ರಕಾಶನ: ಸಂಕೀರ್ತನ ಪ್ರಕಾಶನ
ಬೆಲೆ: ರೂ. 150
ಪ್ರತಿಗಳಿಗೆ ಸಂಪರ್ಕಿಸಿ: 9632358625

Leave a Reply

Your email address will not be published. Required fields are marked *