ಸ್ಟಿಂಗ್ ಆಪರೇಷನ್ ಸುತ್ತ ಈಗ ಗಂಭೀರ ಚರ್ಚೆಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ರಾಜಕಾರಣದ ಅಂಗಳದಲ್ಲಿ ಅದರದ್ದೇ ಚರ್ಚೆ. ಇಂತಹ ಸ್ಟಿಂಗ್ ಅಪರೇಷನ್ಗಳು ಹೊಸದೇನಲ್ಲ. ಆದರೆ ಈ ಬಾರಿಯ ವಿಶೇಷವೇನೆಂದರೆ, ಕುಟುಕು ಕಾರ್ಯಾಚರಣೆಗೆ ತುತ್ತಾದವರ ಮೇಲಿನ ದಾಳಿಗಿಂತ ನಡೆಸಿದವರ ವಿರುದ್ಧವೂ ತನಿಖೆಯಾಗಬೇಕು; ಇಂತಹ ಕೆಟ್ಟ ಸಂಪ್ರದಾಯ ಕೊನೆಯಾಗಬೇಕು ಎನ್ನುವ parallel ಅಭಿಪ್ರಾಯಗಳು ಈ ಸಲ ದಟ್ಟವಾಗಿ ಕೇಳಿಬರ್ತಿವೆ. ಈ ಆಯಾಮದಿಂದ ನೋಡಿದಾಗ ರಾಜಕೀಯ ದುರುದ್ದೇಶ ಅಥವಾ ವ್ಯಕ್ತಿಯ ತೇಜೋವಧೆ ಅಥವಾ ವೈಯಕ್ತಿಕ ಲಾಭಕ್ಕಾಗಿ ನಡೆಸಲಾಗುವ ಇಂತಹ ಸ್ಟಿಂಗ್ ಆಪರೇಷನ್ ನಡೆಸುವವರನ್ನು ನಮ್ಮ ಕಾನೂನು ಹೇಗೆ ಪರಿಗಣಿಸುತ್ತೆ? ಈ ಹಿಂದಿನ ಕೋರ್ಟ್ ತೀರ್ಪುಗಳು ಏನು ಹೇಳ್ತವೆ? ಇಂಥಾ ಕೆಟ್ಟ ಸಂಚಿನಲ್ಲಿ ಭಾಗಿಯಾದವರಿಗೆ ಏನೆಲ್ಲಾ ಶಿಕ್ಷೆ ಕಾದಿರಬಹುದು? ಅನ್ನೋ ಸಂಗತಿಗಳು ಮುಖ್ಯವೆನಿಸುತ್ತವೆ.
ಮೊದಲನೆಯದಾಗಿ ಸ್ಟಿಂಗ್ ಆಪರೇಷನ್ಗಳನ್ನು ನಮ್ಮ ನ್ಯಾಯಾಂಗ ಯಾವ್ಯಾವ ಭಿನ್ನ ಆಯಾಮಗಳಿಂದ ಪರಿಗಣಿಸಿದೆ ಅನ್ನೋದನ್ನು ನೋಡೋಣ. ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ನಡೆಸುವ ಸ್ಟಿಂಗ್ ಆಪರೇಷನ್ಗೂ, ವ್ಯಕ್ತಿಯ ಖಾಸಗಿ ಬದುಕನ್ನು ಬಲವಂತವಾಗಿ ಬಲೆಗೆ ಬೀಳಿಸಿ ರಾಜಕೀಯವಾಗಿ ಬಳಸಿಕೊಳ್ಳುವ ಕಾರ್ಯಾಚರಣೆಗೂ ನಡುವೆ ಕಾನೂನು ಮಹತ್ವದ ವ್ಯತ್ಯಾಸವನ್ನು ಗುರುತಿಸುತ್ತದೆ. ಅಂದರೆ ಒಬ್ಬ ಅಧಿಕಾರಸ್ಥ ವ್ಯಕ್ತಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ, ಸಾರ್ವಜನಿಕ ವ್ಯವಸ್ಥೆಯ ವಿರುದ್ಧ ಷಡ್ಯಂತ್ರಗಳನ್ನು ಬಯಲು ಮಾಡುವ ಪತ್ರಿಕೋದ್ಯಮ ಚೌಕಟ್ಟಿನ ಕುಟುಕು ಕಾರ್ಯಾಚರಣೆಗಳಿಗೂ, ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವ ಏಕೈಕ ಕಾರಣಕ್ಕೆ ಆತನ/ಆಕೆಯ privacy ಯನ್ನು ಅತಿಕ್ರಮಿಸುವ ಕಾರ್ಯಾಚರಣೆಗೂ ಭಿನ್ನ ನಿಲುವುಗಳನ್ನು ನಮ್ಮ ಕೋರ್ಟುಗಳು ತಳೆಯುತ್ತಾ ಬಂದಿವೆ.
ಇಂಟರೆಸ್ಟಿಂಗ್ ವಿಚಾರ ಏನು ಅಂದರೆ, ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ನಡೆಸಲಾಗುವ ಸ್ಟಿಂಗ್ ಆಪರೇಷನ್ಗಳ ವಿಧಾನಗಳನ್ನು ಕೂಡಾ ನ್ಯಾಯಾಂಗ ಕಾನೂನುಬದ್ಧತೆಯ ತಕ್ಕಡಿಯಲ್ಲಿಟ್ಟು ತೂಗುತ್ತದೆ. ಸ್ಟಿಂಗ್ ಆಪರೇಷನ್ ನಡೆಸುವವರು ತಮ್ಮ ಕಾರ್ಯಾಚರಣೆಗೆ ಸಾರ್ವಜನಿಕ ಹಿತಾಸಕ್ತಿಯ ಮುಖವಾಡವನ್ನು ತೊಡಿಸುವುದು ಹೊಸದೇನಲ್ಲ. ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು, ಅಧಿಕಾರದ ದುರುಪಯೋಗವನ್ನು ದಾಖಲಿಸುವುದು ಮತ್ತು ಸಾರ್ವಜನಿಕ ಹುದ್ದೆಯಲ್ಲಿರುವವರನ್ನು ಹೊಣೆಗಾರರನ್ನಾಗಿಸುವುದು ತನಿಖಾ ಪತ್ರಿಕೋದ್ಯಮದ ಉದ್ದೇಶಗಳಾಗಬಹುದು. ಆದರೆ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ನಡೆಸುವ ಪ್ರತಿಯೊಂದು ರಹಸ್ಯ ಕಾರ್ಯಾಚರಣೆಯೂ ಕಾನೂನುಬದ್ಧವಾಗುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟಪಡಿಸಿದೆ.
2014ರ Rajat Prasad v. CBI ಪ್ರಕರಣ ಇಲ್ಲಿ ಮುಖ್ಯವಾಗುತ್ತದೆ. ಸಚಿವರೊಬ್ಬರಿಗೆ ಲಂಚ ನೀಡಿದಂತೆ ತೋರಿಸಿ, ಪತ್ರಿಕಾ ಸಂಸ್ಥೆಯೊಂದು ರಹಸ್ಯವಾಗಿ ದಾಖಲಿಸಿದ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಕರಣ ಅದು. ಆ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಸ್ಟಿಂಗ್ ಆಪರೇಷನ್ಗಳ ಸ್ವರೂಪ ಮತ್ತು ಅವುಗಳಲ್ಲಿ ಭಾಗವಹಿಸಿದವರ ಹೊಣೆಗಾರಿಕೆಯನ್ನು ವಿಸ್ತೃತವಾಗಿ ಪರಿಶೀಲಿಸಿತು. ಅಂತಿಮವಾಗಿ, ಕಾರ್ಯಾಚರಣೆಯ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವಿದೆ ಎಂಬ ಕಾರಣಕ್ಕೆ, ಅದರ ವಿಧಾನ ಮತ್ತು ಭಾಗವಹಿಸಿದವರ ಪಾತ್ರಗಳನ್ನು ಕಾನೂನಿನ ಪರಿಶೀಲನೆಯಿಂದ ಹೊರಗಿಡಲಾಗುವುದಿಲ್ಲ ಎಂಬ ವಿಶ್ಲೇಷಣೆಯನ್ನು ಎತ್ತಿಹಿಡಿಯಿತು.

ಈ ತೀರ್ಪಿನ ಸಾರಾಂಶ, ಸಾರಾಸಗಟಾಗಿ ಸ್ಟಿಂಗ್ ಆಪರೇಷನ್ ನಡೆಸಿದವರನ್ನೂ ತಪ್ಪಿತಸ್ಥರೆಂದು ಘೋಷಿಸುವುದಾಗಿರಲಿಲ್ಲ. ಬದಲಿಗೆ, ಸಾರ್ವಜನಿಕ ಹಿತಾಸಕ್ತಿ ಇದೆ ಎಂಬ ಕಾರಣಕ್ಕೆ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಮೀರಿ ಆತನ ಚಲನವಲನಗಳನ್ನು ಚಿತ್ರೀಕರಿಸುವ ಕ್ರಿಯೆಗಳ ಕಾನೂನುಬದ್ಧತೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂಬುದಾಗಿದೆ. ಹಾಗಂತ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರೆಂಬ ಒಂದೇ ಕಾರಣಕ್ಕೆ ಎಲ್ಲರನ್ನೂ ಅಪರಾಧಿಗಳೆಂದು ತೀರ್ಮಾನಿಸಲಾಗುವುದಿಲ್ಲ. ಪ್ರತಿಯೊಬ್ಬರ ಪಾತ್ರ ಮತ್ತು ಉದ್ದೇಶವನ್ನು ಸಾಕ್ಷ್ಯಗಳ ಮೂಲಕ ನಿರ್ಧರಿಸಬೇಕು ಎಂದು ಕೋರ್ಟು ಹೇಳಿದೆ. ಅಂದರೆ ಉದ್ದೇಶ ಸರಿಯಿದ್ದರೂ, ಪ್ರಕ್ರಿಯೆ ಕಾನೂನುಬಾಹಿರವಾಗಿರುವ ಕಾರಣಕ್ಕೆ ಸ್ಟಿಂಗ್ ಆಪರೇಷನ್ ನಡೆಸಿದವರೂ ಕಾನೂನು ಪ್ರಕ್ರಿಯೆ ಎದುರಿಸಬೇಕು. ನೆನಪಿರಲಿ, ಸುಪ್ರೀಂ ಕೋರ್ಟ್ ಹೀಗೆ ಹೇಳಿದ್ದು ತನಿಖಾ ಪತ್ರಿಕೋದ್ಯಮ ನಡೆಸುವ ಸಾರ್ವಜನಿಕ ಹಿತಾಸಕ್ತಿ ಹೊಂದಿದ ಸ್ಟಿಂಗ್ ಆಪರೇಷನ್ಗಳಿಗೆ. ಇನ್ನು ದುರುದ್ದೇಶಪೂರಿತ, ರಾಜಕೀಯಪ್ರೇರಿತ, ತೇಜೋವಧೆಯ ಸ್ಟಿಂಗ್ ಆಪರೇಷನ್ಗಳನ್ನು ನಮ್ಮ ಕಾನೂನು ಹೇಗೆ ಪರಿಗಣಿಸಬಹುದೆನ್ನುವುದನ್ನು ನೀವೇ ಯೋಚಿಸಿ.
ಒಬ್ಬ ರಾಜಕಾರಣಿಯ ಖಾಸಗಿ ಕ್ಷಣಗಳನ್ನು ಸೆರೆಹಿಡಿದಿರುವುದೇ ಸಾರ್ವಜನಿಕ ಹಿತಾಸಕ್ತಿಯ ತನಿಖೆಯಾಗಿದೆ ಎಂದು ಹೇಳಲಾಗುವುದಿಲ್ಲ. ಆ ದೃಶ್ಯಗಳು ಭ್ರಷ್ಟಾಚಾರ, ಅಧಿಕಾರದ ದುರುಪಯೋಗ, ಸಾರ್ವಜನಿಕ ಹುದ್ದೆಗೆ ಸಂಬಂಧಿಸಿದ ಗಂಭೀರ ಅಕ್ರಮ ಅಥವಾ ಸಾರ್ವಜನಿಕರ ಹಕ್ಕುಗಳಿಗೆ ಸಂಬಂಧಿಸಿದ ವಿಷಯವನ್ನು ಬಯಲಿಗೆಳೆಯುವಲ್ಲಿ ನೆರವಾಗುತ್ತಿವೆಯೇ? ಅಥವಾ ಅವು ಕೇವಲ ವ್ಯಕ್ತಿಯ ಖಾಸಗಿ ಬದುಕನ್ನು ಅವಮಾನಕ್ಕೆ ಗುರಿಪಡಿಸಿ, ರಾಜಕೀಯವಾಗಿ ಮಣಿಸುವ ಉದ್ದೇಶಕ್ಕೆ ಬಳಕೆಯಾಗುತ್ತಿವೆಯೇ? ಎಂಬುದನ್ನೂ ಕೋರ್ಟುಗಳು ಪರಿಶೀಲಿಸುತ್ತವೆ. ಒಂದುವೇಳೆ, ಅಂತಹ ಖಾಸಗಿ ಕ್ಷಣಗಳ ವಿಡಿಯೊಗಳಲ್ಲಿ ಗಂಭೀರ ಸಾರ್ವಜನಿಕ ಅಕ್ರಮಗಳನ್ನು ಬಯಲಿಗೆಳೆಯುವ ಮಾಹಿತಿಗಳು ಲಭ್ಯವಾದರೆ, ಅದನ್ನು ಸಾರ್ವಜನಿಕ ಹಿತಾಸಕ್ತಿಯ ಸ್ಟಿಂಗ್ ಎಂದು ಪರಿಗಣಿಸಬಹುದು. ಇಲ್ಲವಾದರೆ ಅದೊಂದು ಶುದ್ದ ತೇಜೋವಧೆಯ ಸಂಚಿನ ಸ್ಟಿಂಗ್ ಎನಿಸಿಕೊಳ್ಳುತ್ತದೆ.
ಭ್ರಷ್ಟಾಚಾರವನ್ನು ದಾಖಲಿಸಲು ಪ್ರಯತ್ನಿಸುವ ಪತ್ರಕರ್ತನ ಉದ್ದೇಶ ಮತ್ತು ಮಹಿಳೆಯೊಬ್ಬರನ್ನು ಆಮಿಷವೊಡ್ಡಿ ಖಾಸಗಿ ಸಂಬಂಧದೊಳಗೆ ಕರೆದೊಯ್ದು, ಆ ಕ್ಷಣಗಳನ್ನು ರಾಜಕೀಯ ಎದುರಾಳಿಯ ವಿರುದ್ಧ ಬಳಸಲು ರೂಪಿಸಿದ ಕಾರ್ಯಾಚರಣೆಯ ಉದ್ದೇಶ ಒಂದೇ ಆಗಿರುವುದಿಲ್ಲ. ಎರಡನೆಯ ಪ್ರಕರಣದಲ್ಲಿ ಮಹಿಳೆಯ ಸ್ವಾಯತ್ತತೆ, ಆಕೆಯ ಖಾಸಗಿತನ, ರಾಜಕಾರಣಿಯ ಘನತೆ ಮತ್ತು ವಿಡಿಯೊವನ್ನು ರೂಪಿಸಿದವರ ಸಂಭವನೀಯ ಅಪರಾಧ ಉದ್ದೇಶ ಇವೆಲ್ಲವೂ ತನಿಖೆಯ ಭಾಗವಾಗುತ್ತವೆ. ಮಹಿಳೆ ತನ್ನ ಇಚ್ಛೆಯಿಂದ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದಾಳೆ ಎಂಬ ಕಾರಣಕ್ಕೆ, ಆ ಭೇಟಿಯ ಪ್ರತಿಯೊಂದು ಕ್ಷಣವನ್ನೂ ರಹಸ್ಯವಾಗಿ ದಾಖಲಿಸಲು ಒಪ್ಪಿದ್ದಾಳೆ ಎಂದು ಅರ್ಥವಲ್ಲ. ಅದೇ ರೀತಿ, ಚಿತ್ರೀಕರಣಕ್ಕೆ ಒಪ್ಪಿದ್ದರೂ ಅದನ್ನು ಸಾರ್ವಜನಿಕವಾಗಿ ಹರಡಲು ಅನುಮತಿ ನೀಡಿದ್ದಾಳೆ ಎಂದೂ ಹೇಳಲಾಗುವುದಿಲ್ಲ. ಒಪ್ಪಿಗೆ ಎನ್ನುವುದು ಒಂದೇ ಹಂತದಲ್ಲಿ ಮುಗಿಯುವ ಸರಳ ಪ್ರಕ್ರಿಯೆಯಲ್ಲ. ಸಂಬಂಧಕ್ಕೆ ಒಪ್ಪಿಗೆ, ಚಿತ್ರೀಕರಣಕ್ಕೆ ಒಪ್ಪಿಗೆ ಮತ್ತು ಪ್ರಸಾರಕ್ಕೆ ಒಪ್ಪಿಗೆ ಹೀಗೆ ಭಿನ್ನ ಆಯಾಮಗಳಿಂದ ಕಾನೂನು ಭಾಗಿಯಾದವರ ಪಾತ್ರಗಳನ್ನು ವಿಶ್ಲೇಷಣೆಗೆ ಒಡ್ಡುತ್ತದೆ. ಇಂತಹ ಕಾರ್ಯಾಚರಣೆಯಲ್ಲಿ ಮಹಿಳೆಯನ್ನು ಬೆದರಿಸಿ ಬಳಸಿಕೊಂಡಿದ್ದರೆ, ಭಾರತೀಯ ನ್ಯಾಯ ಸಂಹಿತೆಯ ಕಲಮು 351ರ ಅಡಿಯಲ್ಲಿನ ಕ್ರಿಮಿನಲ್ ಬೆದರಿಕೆಯ ಪ್ರಶ್ನೆಯೂ ಉದ್ಭವಿಸಬಹುದು.
ಭಾರತೀಯ ನ್ಯಾಯ ಸಂಹಿತೆಯ 356ನೇ ಸೆಕ್ಷನ್ ವ್ಯಕ್ತಿಯ ಮಾನಹಾನಿಗೆ ಸಂಬಂಧಿಸಿದ್ದು. ವೀಡಿಯೊ ನೈಜವಾಗಿದ್ದರೂ ಅದಕ್ಕೆ ಸುಳ್ಳು ವಿವರಣೆ ನೀಡಲಾಗಿದೆಯೇ, ಸಂದರ್ಭವನ್ನು ಉದ್ದೇಶಪೂರ್ವಕವಾಗಿ ಮರೆಮಾಡಲಾಗಿದೆಯೇ ಅಥವಾ ದೃಶ್ಯಗಳನ್ನು ತಪ್ಪು ಅರ್ಥ ಬರುವಂತೆ ಸಂಪಾದಿಸಲಾಗಿದೆಯೇ ಎಂಬುದನ್ನೂ ಈ ಕಲಮ್ಮು ಪರಿಗಣಿಸುತ್ತದೆ. ಈ ಕಲಮಿನಡಿ ಸತ್ಯ, ಸಾರ್ವಜನಿಕ ಹಿತಾಸಕ್ತಿ ಮತ್ತು ಸದುದ್ದೇಶಕ್ಕೆ ಸಂಬಂಧಿಸಿದ ವಿನಾಯಿತಿಗಳೂ ಇರುವುದರಿಂದ, ಪ್ರತಿಯೊಂದು ಟೀಕೆ ಅಥವಾ ಅಹಿತಕರ ಪ್ರಕಟಣೆಯನ್ನು ಕ್ರಿಮಿನಲ್ ಮಾನಹಾನಿ ಎಂದು ಕರೆಯಲಾಗುವುದಿಲ್ಲ. ಆದಾಗ್ಯೂ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದನ್ನು ಇದು ಗಂಭೀರವಾಗಿ ಪರಿಗಣಿಸುತ್ತದೆ.
ಖಾಸಗಿತನದ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ ನೀಡಿರುವ R. Rajagopal v. State of Tamil Nadu (1994) ತೀರ್ಪು ಇಲ್ಲಿ ಮುಖ್ಯವಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ಖಾಸಗಿ ಬದುಕಿನ ನಡುವಿನ ಸಂಬಂಧವನ್ನು ಪರಿಶೀಲಿಸಿದ ಈ ಪ್ರಕರಣವು, ವ್ಯಕ್ತಿಯ ಖಾಸಗಿತನಕ್ಕೆ ಅನಿಯಂತ್ರಿತವಾಗಿ ಅತಿಕ್ರಮಿಸುವ ಹಕ್ಕು ಮಾಧ್ಯಮಗಳಿಗೆ ಇಲ್ಲ ಎಂದು ಹೇಳಿತ್ತು. ಹೀಗಾಗಿ, ವಿಡಿಯೊದಲ್ಲಿರುವ ದೃಶ್ಯ ನೈಜವಾಗಿದೆ ಎಂಬ ಕಾರಣಕ್ಕೆ ಅದರ ಪ್ರತಿಯೊಂದು ರೀತಿಯ ಪ್ರಕಟಣೆಯೂ ಕಾನೂನುಬದ್ಧವಾಗುವುದಿಲ್ಲ.
2017ರ Justice K.S. Puttaswamy v. Union of India ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು ಖಾಸಗಿತನವನ್ನು ಸಂವಿಧಾನದ ಅಡಿಯಲ್ಲಿ ಸಂರಕ್ಷಿತ ಮೂಲಭೂತ ಹಕ್ಕು ಎಂದು ಗುರುತಿಸುತ್ತದೆ. ವ್ಯಕ್ತಿಯ ಸ್ವಾಯತ್ತತೆ, ಘನತೆ ಮತ್ತು ವೈಯಕ್ತಿಕ ಆಯ್ಕೆಗಳು ಈ ಹಕ್ಕಿನ ಭಾಗಗಳಾಗಿವೆ. ಹಾಗೆಂದ ಮಾತ್ರಕ್ಕೆ ಈ ತೀರ್ಪು ಪ್ರತಿಯೊಂದು ರಹಸ್ಯ ಚಿತ್ರೀಕರಣಗಳನ್ನು ಅನಾಮತ್ತಾಗಿ ಕ್ರಿಮಿನಲ್ ಅಪರಾಧಗಳೆಂದು ಘೋಷಿಸುವುದಿಲ್ಲ. ಆದರೆ ವ್ಯಕ್ತಿಯ ಖಾಸಗಿ ಬದುಕನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸುವ ಅಥವಾ ಅವಮಾನಿಸುವ ಸಾಧನವಾಗಿ ಬಳಸಿದಾಗ, ಆ ಕೃತ್ಯವನ್ನು ಕಾನೂನು ಮತ್ತು ಸಂವಿಧಾನದ ಅವಕಾಶಗಳಲ್ಲಿ ಪರಿಶೀಲಿಸಬೇಕೆಂಬುದನ್ನು ಸ್ಪಷ್ಟಪಡಿಸುತ್ತದೆ.

ನ್ಯಾಯ ವ್ಯವಸ್ಥೆಯ ಇಂಥಾ ನಿಲುವುಗಳಿಂದಾಗಿಯೇ, ಹಾಸನದ ಲೈಂಗಿಕ ಶೋಷಣೆಯ ಪೆನ್ಡ್ರೈವ್ ಪ್ರಕರಣದಲ್ಲಿ ಆಪಾದಿತನ ಜೊತೆಗೆ, ಆ ವಿಡಿಯೊಗಳನ್ನು ಸಾರ್ವಜನಿಕಗೊಳಿಸಿದ ಆರೋಪ ಹೊತ್ತವರು ಕೂಡಾ ಕಾನೂನು ಪ್ರಕ್ರಿಯೆ ಎದುರಿಸಬೇಕಾಯ್ತು. ಸ್ಟಿಂಗ್ ಆಪರೇಷನ್ಗಳಲ್ಲಿ ಕ್ಯಾಮೆರಾದ ಮುಂದೆ ಕಾಣಿಸಿಕೊಳ್ಳುವ ವ್ಯಕ್ತಿ ಮಾತ್ರವೇ ಇಡೀ ಘಟನೆಯ ಏಕೈಕ ಪಾತ್ರಧಾರಿಯಾಗಿರಬೇಕೆಂದಿಲ್ಲ. ಆತನನ್ನು ಅಲ್ಲಿಗೆ ಕರೆತಂದವರು ಯಾರು? ಮಹಿಳೆಯನ್ನು ಸಂಪರ್ಕಿಸಿ ವಿಶ್ವಾಸ ಗಳಿಸಲು ಸೂಚಿಸಿದವರು ಯಾರು? ಚಿತ್ರೀಕರಣಕ್ಕೆ ಸ್ಥಳ ಅಥವಾ ಸಾಧನ ಒದಗಿಸಿದವರು ಯಾರು? ದೃಶ್ಯಗಳನ್ನು ಸಂಗ್ರಹಿಸಿ, ಸಂಪಾದಿಸಿ, ಅನಾಮಧೇಯವಾಗಿ ಹರಡುವ ವ್ಯವಸ್ಥೆ ರೂಪಿಸಿದವರು ಯಾರು? ಇವರೆಲ್ಲರ ನಡುವೆ ಪೂರ್ವಯೋಜಿತ ಒಪ್ಪಂದವಿತ್ತೇ? ಈ ಪ್ರಶ್ನೆಗಳ ಉತ್ತರಗಳಲ್ಲಿಯೇ ಇಂತಹ ಕಾರ್ಯಾಚರಣೆಯ ಕಾನೂನುಬದ್ಧ ಸ್ವರೂಪ ಅಡಗಿರುತ್ತದೆ.
ಇದನ್ನು ನಿರ್ಧರಿಸುವುದಕ್ಕೆಂದೇ ನಮ್ಮ ಕಾನೂನು ಕಟ್ಟಳೆಗಳಲ್ಲಿ ನಿರ್ದಿಷ್ಟ ಸೆಕ್ಷನ್ಗಳನ್ನು ಸೇರ್ಪಡೆ ಮಾಡಲಾಗಿದೆ. ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ಕಾನೂನುಬಾಹಿರ ಕೃತ್ಯ ನಡೆಸಲು ಅಥವಾ ಕಾನೂನುಬದ್ಧ ಕೃತ್ಯವನ್ನೇ ಕಾನೂನುಬಾಹಿರ ವಿಧಾನದಿಂದ ನಡೆಸಲು ಒಪ್ಪಂದ ಮಾಡಿಕೊಂಡಿದ್ದರೆ ಅದನ್ನು BNS 61ನೇ ಕಲಮ್ಮು ಕ್ರಿಮಿನಲ್ ಸಂಚು ಎಂದು ಹೇಳುತ್ತದೆ. ಅಪರಾಧಕ್ಕೆ ಪ್ರಚೋದನೆ ನೀಡಿ, ಸಂಬಂಧಿತ ಸಂಚಿನಲ್ಲಿ ಭಾಗವಹಿಸಿ ನೆರವು ನೀಡುವುದನ್ನು BNS 45ನೇ ಕಲಮ್ಮು ಅಪರಾಧ ಎನ್ನುತ್ತದೆ. ಅದೇರೀತಿ BNS 351ನೇ ಕಲಮ್ಮಿನ ಪ್ರಕಾರ ಮಹಿಳೆಯನ್ನು ಬೆದರಿಸಿ ಖಾಸಗಿ ಭೇಟಿಗೆ ಒತ್ತಾಯಿಸುವುದು ಅಥವಾ ರಾಜಕಾರಣಿಗೆ ವಿಡಿಯೊ ತೋರಿಸಿ ಅವರ ಘನತೆಗೆ ಹಾನಿ ಮಾಡುವುದಾಗಿ ಬೆದರಿಸುವುದೂ ಅಪರಾಧ ಎನಿಸಿಕೊಳ್ಳುತ್ತದೆ. ವ್ಯಕ್ತಿಯ ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ಅಥವಾ ಹಾನಿಯಾಗುವ ಸಾಧ್ಯತೆ ತಿಳಿದಿದ್ದರೂ ಆತನ ಬಗ್ಗೆ ಮಾನಹಾನಿಕರ ಆರೋಪಗಳನ್ನು ಪ್ರಕಟಿಸುವುದು BNS 356ನೇ ಕಲಮಿನ ವ್ಯಾಪ್ತಿಗೆ ಒಳಪಡುತ್ತದೆ.
ಕೊನೆಯದಾಗಿ ಒಂದು ಮಾತು. ಒಂದು ವಿಡಿಯೊವನ್ನು ಕಾನೂನುಬಾಹಿರವಾಗಿ ಚಿತ್ರೀಕರಿಸಲಾಗಿದೆ ಎಂಬ ಕಾರಣಕ್ಕೆ ಅದರಲ್ಲಿ ಕಾಣಿಸುವ ಪ್ರತಿಯೊಂದು ಸಂಗತಿಯ ಸತ್ಯಾಸತ್ಯತೆಯ ಮಾನ್ಯತೆಯನ್ನು ಕೋರ್ಟು ಸಾರಾಸಗಟು ತಳ್ಳಿಹಾಕುವುದಿಲ್ಲ. ಇದರರ್ಥ, ಅಂತಹ ವಿಡಿಯೊ ಚಿತ್ರೀಕರಿಸಿದ ಕಾನೂನುಬದ್ಧತೆಯ ಪ್ರಶ್ನೆ ಇದ್ದಾಗ್ಯೂ ವಿಡಿಯೊದಲ್ಲಿ ಅಪರಾಧ ನಡೆದಿರುವುದು ಕಂಡುಬಂದರೆ, ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸುವ ದಿಕ್ಕಿನಲ್ಲೂ ನ್ಯಾಯಾಲಯಗಳು ಕಾರ್ಯಪ್ರವೃತ್ತವಾಗುತ್ತವೆ. ಅದೇ ರೀತಿ, ವಿಡಿಯೊ ನೈಜವಾಗಿದೆ ಎಂಬ ಕಾರಣಕ್ಕೆ ಅದನ್ನು ಸೆರೆ ಹಿಡಿದವರು ಅಥವಾ ಪ್ರಸಾರ ಮಾಡಿದವರು ಕೆಲಸಗಳೂ ಕಾನೂನುಬದ್ಧವಾಗುವುದಿಲ್ಲ. ಎರಡೂ ಬದಿಯ ಕಾನೂನು ಉಲ್ಲಂಘನೆಗಳನ್ನು ಕೋರ್ಟುಗಳು ವಿಚಾರಣೆಗೆ ಒಳಪಡಿಸುತ್ತವೆ.
ಹಾಗಾಗಿ, ಕಾನೂನಿನ ಚೌಕಟ್ಟಿನಲ್ಲಿ ಸ್ಟಿಂಗ್ ಆಪರೇಷನ್ಗಳು ಯಾರನ್ನು ಬಯಲಿಗೆಳೆಯಿತು ಎಂಬುದರ ಜೊತೆಗೆ, ಅದನ್ನು ನಡೆಸಲು ಯಾವ ವಿಧಾನವನ್ನು ಬಳಸಲಾಯಿತು, ಯಾರ ಹಕ್ಕುಗಳನ್ನು ಉಲ್ಲಂಘಿಸಲಾಯಿತು ಮತ್ತು ಅದರ ಹಿಂದೆ ಯಾರು? ಯಾವ ಉದ್ದೇಶದಿಂದ ಕೆಲಸ ಮಾಡಿದ್ದಾರೆ? ಎಂಬುದೂ ಚರ್ಚೆಯಾಗುತ್ತವೆ.
