ಚುನಾವಣಾ ಆಯೋಗದೊಳಗೇ ಬಂಡಾಯ: ಕಾವಲುಗಾರನೇ ಕಳ್ಳನಾದೊಡೆ?

ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ದೇಶದಲ್ಲಿ ಬಹುಕಾಲದಿಂದ ಕೇಳಿಬರುತ್ತಿದ್ದ ಅನುಮಾನಗಳಿಗೆ ಈಗ ಚುನಾವಣಾ ಆಯೋಗದ ಒಳಗಿನಿಂದಲೇ ದಾಖಲೆಗಳ ರೂಪದಲ್ಲಿ ಪ್ರಶ್ನೆಗಳು ಎದುರಾಗಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ತನಿಖಾ ವರದಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದೊಳಗೆ ನಡೆದಿರುವ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ. ಕಳೆದ ಹತ್ತು ತಿಂಗಳಲ್ಲಿ ಆಯೋಗದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ, ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ, ಫಾರ್ಮ್-6 ಬದಲಾವಣೆ ಹಾಗೂ ಮತದಾರರ ಮಾಹಿತಿಯ ಕೇಂದ್ರೀಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆ ದಾಖಲಿಸಿದ್ದಾರೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಕೆಲವು ಕ್ರಮಗಳನ್ನು ತಮ್ಮ ತಿಳುವಳಿಕೆ ಅಥವಾ ಒಪ್ಪಿಗೆಯಿಲ್ಲದೆ ಕೈಗೊಳ್ಳಲಾಗಿದೆ ಎಂದು ಈ ಇಬ್ಬರು ಆಯುಕ್ತರು ಆಕ್ಷೇಪಿಸಿದ್ದಾರೆ. ಹೊಸ ಮತದಾರರ ಸೇರ್ಪಡೆ, ಮತದಾರರ ಹೆಸರುಗಳ ತೆಗೆದುಹಾಕುವಿಕೆ, ಮತದಾರರ ದತ್ತಾಂಶವನ್ನು ದೆಹಲಿಯಲ್ಲಿ ಕೇಂದ್ರೀಕರಿಸುವ ಪ್ರಯತ್ನ ಹಾಗೂ ಸಾಫ್ಟ್‌ವೇರ್‌ನ ವಿಶ್ವಾಸಾರ್ಹತೆ ಕುರಿತ ಪ್ರಶ್ನೆಗಳೂ ಅವರ ಆಕ್ಷೇಪಣೆಗಳಲ್ಲಿ ಸೇರಿವೆ. ಈ ಕುರಿತು ಅವರು ಕ್ಯಾಬಿನೆಟ್ ಕಾರ್ಯದರ್ಶಿಯವರಿಗೂ ಪತ್ರ ಬರೆದಿರುವುದಾಗಿ ವರದಿ ಹೇಳುತ್ತದೆ.

ಇದನ್ನು ಸಂಸ್ಥೆಯೊಂದರ ಸಾಮಾನ್ಯ ಭಿನ್ನಾಭಿಪ್ರಾಯ ಎಂದು ತಳ್ಳಿಹಾಕಲಾಗದು. ಯಾಕೆಂದರೆ ಚುನಾವಣಾ ಆಯೋಗ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ. ಅದು ನಡೆಸುವ ಚುನಾವಣೆಯ ಮೇಲೆ ಅಧಿಕಾರಕ್ಕೇರುವ ಸರ್ಕಾರಗಳು ದೇಶದ ಶಾಸನ, ನೀತಿಗಳನ್ನು ನಿರೂಪಿಸುತ್ತವೆ. ಹಾಗಾಗಿ ಇದೊಂದು ಗಂಭೀರವಾದ ಬೆಳವಣಿಗೆ.

ಮತದಾರರ ಪಟ್ಟಿ ಕೇವಲ ಕಾಗದದ ಮೇಲಿರುವ ಹೆಸರುಗಳ ಪಟ್ಟಿಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ನಾಗರಿಕನ ಅಸ್ತಿತ್ವದ ರಾಜಕೀಯ ಗುರುತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ Special Intensive Revision—SIR ಪ್ರಕ್ರಿಯೆ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ತನಿಖೆಯ ಪ್ರಕಾರ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಗಳಲ್ಲಿ 13 ಕೋಟಿಗೂ ಹೆಚ್ಚು ಹೆಸರುಗಳು ಕಡಿತಗೊಂಡಿವೆ ಎನ್ನಲಾಗಿದೆ. ಆಯೋಗದ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದಾದರೂ, ಈ ಮೊದಲು ವಿರೋಧ ಪಕ್ಷಗಳು ಹಾಗೂ ಈಗ ಇಬ್ಬರು ಆಯುಕ್ತರೇ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಅರ್ಹ ಮತದಾರರ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಗ್ಯಾನೇಶ್ ಕುಮಾರ್: ಅನುಮಾನಗಳ ಕೇಂದ್ರಬಿಂದು

ಗ್ಯಾನೇಶ್ ಕುಮಾರ್ ಈಗ ದೇಶದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಅವರ ವಿರುದ್ಧ ವಿರೋಧ ಪಕ್ಷಗಳು ಹಲವು ಆರೋಪಗಳನ್ನು ಮಾಡಿಕೊಂಡು ಬಂದಿದ್ದವು. ಆದರೆ ಅದಕ್ಕಿಂತ ಗಂಭೀರವಾದುದು ಇಂಡಿಯನ್ ಎಕ್ಸ್‌ಪ್ರೆಸ್ ಹೊರತಂದಿರುವ ದಾಖಲೆಗಳು. ಈ ವರದಿಯ ಸಾರಾಂಶ ನಿಜವೇ ಆಗಿದ್ದರೆ ಅವರು ದೇಶದ ಜನರಿಗೆ ಉತ್ತರ ನೀಡುವುದು ಮಾತ್ರವಲ್ಲ, ಶಿಕ್ಷೆಯನ್ನೂ ಎದುರಿಸಬೇಕಾಗುತ್ತದೆ.

ಸಿಇಸಿ ಹುದ್ದೆಗೆ ಗ್ಯಾನೇಶ್‌ ಕುಮಾರ್ ನೇಮಕಾತಿಯೇ ಹಲವು ಅಪಸ್ವರಗಳಿಗೆ ಕಾರಣವಾಗಿತ್ತು. ಯಾಕೆಂದರೆ, ಅಲ್ಲಿಯವರಗೆ ಇದ್ದ ನಿಯಮಗಳನ್ನು ಬದಲಿಸಿ, ಗ್ಯಾನೇಶ್‌ ಅವರನ್ನು ಈ ಸ್ಥಾನಕ್ಕೆ ಸರ್ಕಾರ ನೇಮಿಸಿತ್ತು. ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ನಿರ್ದೇಶನದ ಪ್ರಕಾರ ಈ ಮೊದಲು CEC ಮತ್ತು ECಗಳ ನೇಮಕಾತಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರ ಸಮಿತಿಯ ಶಿಫಾರಸಿನ ಆಧಾರದ ಮೇಲೆ ನಡೆಯುತ್ತಿತ್ತು.

ಆದರೆ 2023ರಲ್ಲಿ ಹೊಸ ಕಾನೂನು ತಂದ ಕೇಂದ್ರ ಸರ್ಕಾರ, ಅದರಲ್ಲಿ ಮುಖ್ಯ ನ್ಯಾಯಮೂರ್ತಿಯ ಸ್ಥಾನಕ್ಕೆ ಪ್ರಧಾನಮಂತ್ರಿಯಿಂದ ನಾಮನಿರ್ದೇಶನವಾಗುವ ಕೇಂದ್ರ ಸಚಿವರನ್ನು ನೇಮಕಾತಿ ಸಮಿತಿಯಲ್ಲಿ ಸೇರಿಸಲಾಯಿತು. ಹೀಗಾಗಿ ಸಮಿತಿಯಲ್ಲಿ ಸರ್ಕಾರದ ಇಬ್ಬರು ಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ಒಬ್ಬ ಪ್ರತಿನಿಧಿ ಎಂಬಂತಾಯಿತು. ಈ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನೇ ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಸೆಪ್ಟೆಂಬರ್ 2026ರಲ್ಲಿ ಇಬ್ಬರು ನ್ಯಾಯಮೂರ್ತಿಗಳ ಭಿನ್ನಾಭಿಪ್ರಾಯದ ಬಳಿಕ ವಿಷಯವನ್ನು ದೊಡ್ಡ ಸಂವಿಧಾನ ಪೀಠದ ಪರಿಗಣನೆಗೆ ಕಳುಹಿಸಲಾಗಿದೆ. ಅಂದರೆ, ಪ್ರಶ್ನೆ ಕೇವಲ ಗ್ಯಾನೇಶ್ ಕುಮಾರ್ ಹೇಗೆ ಕೆಲಸ ಮಾಡುತ್ತಿದ್ದಾರೆ?” ಎನ್ನುವುದಷ್ಟೇ ಅಲ್ಲ, ಚುನಾವಣಾ ಆಯೋಗವನ್ನು ಆಯ್ಕೆ ಮಾಡುವ ವ್ಯವಸ್ಥೆಯೇ ಎಷ್ಟು ಸ್ವತಂತ್ರ? ಎಂಬುದಾಗಿದೆ.

ನೋಯಿಡಾದ ಮತ್ತೊಂದು ಕಥೆ

ಚುನಾವಣಾ ಆಯೋಗದ ವಿವಾದದ ನಡುವೆ, ಮತ್ತೊಂದು ಪ್ರಕರಣ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಗೌತಮ್ ಬುದ್ಧ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಮೇಧಾ ರೂಪಂ, ನೋಯಿಡಾ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆಕೃತಿ ಚೌಧರಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ—NSA ಅಡಿಯಲ್ಲಿ ಬಂಧನದಲ್ಲಿಡುವ ಆದೇಶ ಹೊರಡಿಸಿದ್ದರು.

ಅಲಹಾಬಾದ್ ಹೈಕೋರ್ಟ್ ಸೆಪ್ಟೆಂಬರ್ 2ರಂದು ಆ ಬಂಧನವನ್ನು ರದ್ದುಪಡಿಸಿತು. ಚೌಧರಿಯ ಬಂಧನಕ್ಕೆ ಬಳಸಿದ ಕಾರಣಗಳು ಸಮರ್ಪಕವಾಗಿಲ್ಲ ಎಂದು ನ್ಯಾಯಾಲಯ ಹೇಳಿತ್ತಲ್ಲದೇ, ಆಕೆಗೆ ಜಿಲ್ಲಾಧಿಕಾರಿಯ ಸಂಬಳದಿಂದಲೇ ₹5 ಲಕ್ಷ ಪರಿಹಾರ ನೀಡುವಂತೆ  ನಿರ್ದೇಶಿಸಿತ್ತು. ಆದರೆ ಈ ಕಥೆ ಅಲ್ಲಿಗೇ ಮುಗಿಯಲಿಲ್ಲ. ಮೇಧಾ ರೂಪಂ ಅವರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದರು. ಸೆಪ್ಟೆಂಬರ್ 24ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಆದೇಶದ ಕೆಲವು ಭಾಗಗಳಿಗೆ—ವಿಶೇಷವಾಗಿ ₹5 ಲಕ್ಷ ಪರಿಹಾರ ಮತ್ತು ಅಧಿಕಾರಿಗಳ ವಿರುದ್ಧದ ಕಠಿಣ ಟೀಕೆಗಳಿಗೆ—ತಾತ್ಕಾಲಿಕ ತಡೆ ನೀಡಿತು.  ಒಂದುವೇಳೆ, ಹೈಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ದೋಷವಿದ್ದಿದ್ದರೆ, ಆಕೃತಿ ಚೌಧರಿಯ NSA ಬಂಧನವನ್ನು ರದ್ದುಪಡಿಸಿದ ಹೈಕೋರ್ಟ್ ತೀರ್ಪಿಗೆ  ಸಂಪೂರ್ಣವಾಗಿ ತಡೆ ನೀಡಬೇಕಿತ್ತು. ಆದರೆ ಹಾಗೆ ಮಾಡದೆ, ಆಕೃತಿ ಬಿಡುಗಡೆಯನ್ನು ಎತ್ತಿಹಿಡಿಯುತ್ತಲೇ, ಕರ್ತವ್ಯಲೋಪ ಆರೋಪ ಹೊತ್ತ ಅಧಿಕಾರಿಗಳಿಗೆ ನೀಡಲಾಗಿದ್ದ ದಂಡನೆಯನ್ನು ಮಾತ್ರ ರದ್ದು ಮಾಡಲಾಗಿದೆ. ವಿಶೇಷವೆಂದರೆ, ನಿಯಮವನ್ನು ಮೀರಿ, ಈ ಪ್ರಕರಣವನ್ನು ಬೇರೆ ಪ್ರಕರಣಗಳಿಗಿಂತ ಬೇಗ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗುತ್ತಿದೆ. ಈ ಮೇಧಾ ರೂಪಂ ಬೇರಾರೂ ಅಲ್ಲ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಪುತ್ರಿ!

ಆಕೃತಿ ಚೌಧರಿ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಬಂದಾಗ ಆ ಪ್ರಕರಣವನ್ನು ವಿಚಾರಣೆ ನಡೆಸಿದ  ಪೀಠದಲ್ಲಿ ಇದ್ದದ್ದು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ. ಇದೇ ನ್ಯಾಯಮೂರ್ತಿ ಶರ್ಮಾ ಅವರು CEC ಮತ್ತು ECಗಳ ನೇಮಕಾತಿ ಕುರಿತ 2023ರ ಕಾನೂನನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಪೀಠದ ಸದಸ್ಯರಾಗಿದ್ದರು. ಸೆಪ್ಟೆಂಬರ್ 23ರಂದು ಅವರು ಈ ಪ್ರಶ್ನೆಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಕಳುಹಿಸುವ ಅಗತ್ಯವಿದೆ ಎಂಬ ನಿಲುವು ವ್ಯಕ್ತಪಡಿಸಿದರು.

ಈ ಎರಡು ಪ್ರಕರಣಗಳು ಒಬ್ಬರೇ ನ್ಯಾಯಾಧೀಶರ ಬಳಿಗೆ ಬಂದಿರುವುದು ಸಾರ್ವಜನಿಕವಾಗಿ ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಹಿತಾಸಕ್ತಿ ಸಂಘರ್ಷದ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಆದರೆ ಇಲ್ಲಿ ಮತ್ತೊಂದು ಬೆಳವಣಿಗೆಯನ್ನೂ ಗಮನಿಸಬೇಕು. ವರದಿಗಳ ಪ್ರಕಾರ, ನ್ಯಾಯಮೂರ್ತಿ ಶರ್ಮಾ ಅವರ ಪುತ್ರ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಚುನಾವಣಾ ಆಯೋಗದ ಸ್ಟ್ಯಾಂಡಿಂಗ್ ಕೌನ್ಸೆಲ್ ಆಗಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಔಚಿತ್ಯದ ಕುರಿತು ಪ್ರಶ್ನೆಗಳು ಎದ್ದಿವೆ. ಇದು ಆರೋಪದ ಹಂತದಲ್ಲಿರುವ ವಿಷಯವಾಗಿದ್ದು, ಅದರ ಸತ್ಯಾಸತ್ಯತೆಯ ಕುರಿತು ಅಧಿಕೃತ ನಿರ್ಧಾರವೆಂದು ಪರಿಗಣಿಸಲಾಗದು.

ಯಾರು ಕಾವಲು ಕಾಯಬೇಕು?

ಚುನಾವಣಾ ಆಯೋಗ ಸ್ವತಂತ್ರವಾಗಿರಬೇಕು ಎನ್ನುವುದು ಕೇವಲ ಸಂವಿಧಾನಾತ್ಮಕ ಆದರ್ಶವಲ್ಲ. ಜನರು ತಮ್ಮ ಮತದಾನದ ಮೂಲಕ ಸರ್ಕಾರವನ್ನು ಆಯ್ಕೆ ಮಾಡುವ ವ್ಯವಸ್ಥೆಯ ಮೂಲಭೂತ ಅವಶ್ಯಕತೆ. ಒಬ್ಬ ಮತದಾರನ ಹೆಸರು ತಪ್ಪಾಗಿ ಅಳಿಸಿದರೂ ಅದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಯಾಕೆಂದರೆ, ಅದರಿಂದ ಒಬ್ಬ ಅರ್ಹ ನಾಗರಿಕನ ಧ್ವನಿಯೇ ಚುನಾವಣೆಯಿಂದ ಹೊರಗುಳಿಯಬಹುದು. ಒಬ್ಬ ಅಧಿಕಾರಿಯು ತಪ್ಪಾಗಿ NSA ಬಳಸಿದರೂ ಅದು ಕೇವಲ ಕಡತದ ಮೇಲಿನ ತಪ್ಪಲ್ಲ. ಒಬ್ಬ ಯುವತಿಯ ಸ್ವಾತಂತ್ರ್ಯವನ್ನು ತಿಂಗಳುಗಳ ಕಾಲ ಕಸಿದುಕೊಳ್ಳಬಹುದು. ಮತ್ತು ಚುನಾವಣಾ ಆಯೋಗದೊಳಗಿನ ಇಬ್ಬರು ಆಯುಕ್ತರು ತಮ್ಮದೇ ಸಂಸ್ಥೆಯ ಕೆಲವು ನಿರ್ಧಾರಗಳ ಬಗ್ಗೆ 14 ಬಾರಿ ಲಿಖಿತ ಆಕ್ಷೇಪಣೆ ದಾಖಲಿಸಿದ್ದರೆ, ಅದು ಕೇವಲ “ಆಂತರಿಕ ಭಿನ್ನಾಭಿಪ್ರಾಯ” ಎಂದು ಮುಚ್ಚಿಹಾಕಿ ಬಿಡುವಷ್ಟು ಸಣ್ಣ ವಿಷಯವೂ ಅಲ್ಲ.

ಮತದಾರರ ಪಟ್ಟಿಯಿಂದ ಹೆಸರು ಏಕೆ ಅಳಿಸಲಾಯಿತು ಎಂಬುದನ್ನು ಮತದಾರನಿಗೆ ತಿಳಿಯುವ ಹಕ್ಕು ಇರಬೇಕು. ಆಯೋಗದೊಳಗಿನ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಹೇಗೆ ಪರಿಹರಿಸಲಾಯಿತು ಎಂಬುದಕ್ಕೆ ಉತ್ತರ ಇರಬೇಕು. CEC ಮತ್ತು ECಗಳ ನೇಮಕಾತಿ ವ್ಯವಸ್ಥೆ ನಿಜಕ್ಕೂ ಸ್ವತಂತ್ರವೇ ಎಂಬ ಪ್ರಶ್ನೆಗೆ ಸಂವಿಧಾನಾತ್ಮಕವಾಗಿ ಸ್ಪಷ್ಟ ಉತ್ತರ ಬರಬೇಕು.

ಯಾಕೆಂದರೆ ಅಂತಿಮವಾಗಿ ಇದು ಗ್ಯಾನೇಶ್ ಕುಮಾರ್ ವಿರುದ್ಧದ ಪ್ರಶ್ನೆಯಲ್ಲ. ಇದು ಮೋದಿ ವಿರುದ್ಧವೋ, ವಿರೋಧ ಪಕ್ಷಗಳ ಪರವೋ ಎಂಬ ಪ್ರಶ್ನೆಯೂ ಅಲ್ಲ. ಇದು ಭಾರತದ ಮತದಾರನ ಮತದ ಮೇಲೆ ಯಾರಿಗೆ ಅಂತಿಮ ಅಧಿಕಾರ? ಎಂಬ ಪ್ರಶ್ನೆ. ಚುನಾವಣಾ ಆಯೋಗವೇ ಆ ಮತದ ಕಾವಲುಗಾರ. ಆ ಕಾವಲುಗಾರನ ಮೇಲೆಯೇ ಅನುಮಾನ ಮೂಡಿದರೆ, ಪ್ರಜಾಪ್ರಭುತ್ವದ ಬಾಗಿಲ ಬಳಿ ನಿಂತಿರುವ ಸಾಮಾನ್ಯ ನಾಗರಿಕನನ್ನು “ನನ್ನ ಮತವನ್ನು ಕಾಪಾಡುವವರು ಯಾರು?” ಎಂಬ ಆತಂಕ ಕಾಡಲಾರಂಭಿಸುತ್ತದೆ.

Leave a Reply

Your email address will not be published. Required fields are marked *