ರಂಗ-ಮೆಲುಕು: ನಟನ ಬದುಕನ್ನೇ ಆವರಿಸಿದ ‘ಮುಖ್ಯಮಂತ್ರಿ’ ನಾಟಕ!

ಕನ್ನಡ ರಂಗಭೂಮಿ ಪ್ರಯೋಗಗಳ ಪೈಕಿ ಅಪರೂಪ ಎನ್ನಬಹುದಾದ `ಮುಖ್ಯಮಂತ್ರಿ’ ನಾಟಕ ಇತ್ತೀಚೆಗೆ ತನ್ನ 900ನೇ ಪ್ರದರ್ಶನ ಕಂಡಿತು. ನಮ್ಮ ಹಾಲಿ, ಮಾಜಿ ಮುಖ್ಯಮಂತ್ರಿಗಳು ಖುದ್ದು ಆ ಪ್ರದರ್ಶನ ನೋಡಿ ಮೆಚ್ಚಿಕೊಂಡಿರುವುದು ಒಂದು ಐತಿಹಾಸಿಕ ಘಟನೆಯಾಗಿದೆ. ಯಾವ ಸಂದರ್ಭಕ್ಕೂ ಸಲ್ಲುತ್ತಲೇ ಹೋಗುವ ಈ ನಾಟಕ, ಆಮಟ್ಟಿಗೆ ತನ್ನ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತಾ ಬಂದಿದೆ. ಎಂಬತ್ತರ ದಶಕದಲ್ಲಿ ತರುಣನಾಗಿದ್ದ ಚಂದ್ರಶೇಖರ್ ಈ ಪಾತ್ರವನ್ನು ಮೊದಲ ಬಾರಿಗೆ ಆಡುವಾಗ್ಗೆ ಅವರಿಗೇ ಅರ್ಥವಾಗಿರಲಿಲ್ಲವಂತೆ. ಆದರೆ ಕ್ರಮೇಣ ಅವರನ್ನು ಆವರಿಸಿದ ಈ ನಾಟಕದ ಕಾರಣವಾಗಿ ಚಂದ್ರಶೇಖರ್‍‌, ಮುಖ್ಯಮಂತ್ರಿ ಚಂದ್ರುವಾದರು. ಅಂದಿನಿಂದ ಇಲ್ಲಿಯವರೆಗೆ ಒಂಬೈನೂರು ಪ್ರದರ್ಶನ ಕಂಡ ಈ ನಾಟಕದಲ್ಲಿ ಅವರನ್ನು ಬಿಟ್ಟು ಇನ್ನಾರೂ ಆ ಪಾತ್ರ ಮಾಡಲಾಗಿಲ್ಲ. ಒಬ್ಬ ವ್ಯಕ್ತಿ ಒಂದು ಪಾತ್ರವಾಗಿಯೇ ಬದುಕಿದ ಅಪರೂಪದ ನಿದರ್ಶನ ಇದು. 1976ರಲ್ಲಿ ಚಾಣಕ್ಯಸೇನ್‌ ಹಿಂದಿಯಲ್ಲಿ ಬರೆದ ಕಾದಂಬರಿಯನ್ನು ರಂಗಕರ್ಮಿ ರಂಜಿತ್‌ ಕಪೂರ್‍‌ ನಾಟಕದ ರೂಪಕ್ಕೆ ತಂದರು. ಕಲಾಗಂಗೋತ್ರಿ ರಂಗತಂಡದ ಟಿ.ಎಸ್.ಲೋಹಿತಾಶ್ವ ಇದನ್ನು ಕನ್ನಡಕ್ಕೆ ಅನುವಾದಿಸಿದರು. ಬಿ.ವಿ.ರಾಜಾರಾಂ ನಿರ್ದೇಶಿಸಿದ ಈ ನಾಟಕದಲ್ಲಿ ಕೆ.ಡಿ.ಕೌಶಲ್‌ ಅನ್ನುವ ಕಾಲ್ಪನಿಕ ಮುಖ್ಯಮಂತ್ರಿ ಪಾತ್ರವನ್ನು ಬೇರೆ ಯಾರೋ ಮಾಡಬೇಕಿತ್ತಿಂತೆ. ಆದರೆ ಕೊನೇ ಘಳಿಗೆಯಲ್ಲಿ ಅವರ ಆರೋಗ್ಯ ಕೈಕೊಟ್ಟು, ಅಚಾನಕ್ಕಾಗಿ ಚಂದ್ರು ಪಾಲಾಯಿತು. ಅಲ್ಲಿಂದಾಚೆಗೆ ಅವರು ಮುಖ್ಯಮಂತ್ರಿ ಚಂದ್ರುವಾಗಿಯೇ ಬದಕುಲಾರಂಭಿಸಿದರು.

ಆ ಪಾತ್ರದಿಂದಲೇ ಚಂದ್ರುಗೆ ರಾಜಕೀಯದಲ್ಲೂ ಮತ್ತು ಚಿಂತ್ರರಂಗದಲ್ಲೂ ಅವಕಾಶಗಳು ಸಿಕ್ಕಿವೆ. ರಾಜಕಾರಣಿಯಾಗಿ ತಮ್ಮ ಕರ್ತವ್ಯವನ್ನು ಮುಗಿಸಿ ಬಂದು ಚಿತ್ರರಂಗದಲ್ಲಿ ಮುಂದುವರಿದಿದ್ದಾರೆ. ನಮ್ಮ ಚಿತ್ರರಂಗದ ನಟರ ಪೈಕಿ ಎಲ್ಲ ನಟರ ವ್ಯಕ್ತಿತ್ವನ್ನು ಕರಾರುವಕ್ಕಾಗಿ ಗ್ರಹಿಸಿ ಹೇಳುವ ನಟ ಮುಖ್ಯಮಂತ್ರಿ ಚಂದ್ರು ಖಾಸಗಿ ಮಾತುಕತೆಯಲ್ಲಿ ಎಂದೂ ತಮ್ಮ ನಟನೆಯ ಚಿತ್ರಗಳ ಬಗ್ಗೆ ಹೇಳಿಕೊಂಡು ಮೆರೆದವರಲ್ಲ. ಅಷ್ಟರಮಟ್ಟಿಗೆ ಬದುಕು ಮತ್ತು ವೃತ್ತಿಯ ಬಗ್ಗೆ ಅವರು ಬಲವಾದ ಗೆರೆ ಎಳೆದುಕೊಂಡಿದ್ದಾರೆ.

ಒಮ್ಮೆ ಈ ನಾಟಕವನ್ನು ಆಡಲು ಅವರು ಶಿವಮೊಗ್ಗಕ್ಕೆ ಬಂದಾಗ, ನಾನು ಬಹುದಿನಗಳ ಪರಿಚಿತನಂತೆ “ಚಂದ್ರು, ನಮ್ಮ ಮನೇಲಿ ಸೊಪ್ಪು ಸಾರು ಮುದ್ದೆ ಮಾಡಿದ್ದೀವಿ ಊಟಕ್ಕೆ ಬನ್ನಿ” ಎಂದೆ. “ಬೇಡ ಗೌಡ್ರೆ, ಇಲ್ಲಿಗೇ ತಂದುಬಿಡಿ. ಸ್ಟೇಜ್‌ ಮೇಲೆಯೇ ನಿಮ್ಮ ಮನೆಯ ಊಟವನ್ನು ಜಮಾಯ್ಸಿ ಬಿಡ್ತೀನಿ” ಎಂದರು. ಅದರಂತೆ ಕುವೆಂಪು ರಂಗಮಂದಿರಕ್ಕೆ ಊಟ ತೆಗೆದುಕೊಂಡು ಹೋದೆ. ನಾಟಕದ ಒಂದು ದೃಶ್ಯದಲ್ಲಿ ಅವರ ಪಾತ್ರ ಊಟ ಮಾಡುವ ಸನ್ನಿವೇಶ ಬರುತ್ತೆ. ಆಗ ನಮ್ಮ ಮನೆ ಊಟವನ್ನೇ ತಂದುಕೊಂಡುವಂತೆ ತಮ್ಮ ರಂಗತಂಡಕ್ಕೆ ಹೇಳಿದ್ದರು. ಅದರಂತೆ ಪಾತ್ರದಾರಿಯೊಬ್ಬ ತಟ್ಟೆಯಲ್ಲಿ ಮುದ್ದೆ, ಸೊಪ್ಪು ಸಾರು ಹಾಕಿಕೊಂಡು ಹೋಗಿ ಕೊಟ್ಟ. ಆತನನ್ನು ಕುರಿತು, “ಓಹ್‌, ಚಂದ್ರೇಗೌಡ್ರು ಮನೆ ಊಟನಾ?” ಎಂದು ಸಂಭಾಷಣೆ ನುಡಿದರು. ತಂದ ವ್ಯಕ್ತಿ “ಹೌದು” ಎಂದ. ಸ್ಟೇಜ್‌ ಮೇಲೆ ಪಾತ್ರವಾಗಿಯೇ ಊಟ ಮಾಡಿದರು. ಆದರೆ ನಾಟಕ ನಿರ್ದೇಶಕರಿಗೆ ಇದರಿಂದ ಒಂಚೂರು ಇರಿಸುಮುರಿಸಾಯಿತು. ಯಾಕೆಂದರೆ, ಮೊದಲೇ ಹೇಳಿದಂತೆ ನಾಟಕ ಹಿಂದಿ ಭಾಷೆಯಿಂದ ಬಂದ ಉತ್ತರ ಭಾರತದ್ದು. ಅಲ್ಲಿನ ಊಟದಲ್ಲಿ ಸೊಪ್ಪು ಸಾರು, ರಾಗಿ ಮುದ್ದೆ ಇರಲಾರದು. ಜೊತೆಗೆ, ಚಂದ್ರೇಗೌಡನೂ ಇರಲಾರ. ಯಾಕೆಂದರೆ ಇದು ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕಕ್ಕೆ ಸೀಮಿತವಾದ ಹೆಸರಿನ ರೂಢಿ. ಹೀಗೆ ಸ್ವಂತ ಸಂಭಾಷಣೆ ಸೇರಿಸಿದರೆ ಹೇಗೆ ಎಂಬ ಸಮಯೋಚಿತ ಆಕ್ಷೇಪಣೆ ಅವರದಾಗಿತ್ತು. ನಾಟಕ, ಕರ್ನಾಟಕದ ಸ್ವಂತಿಕೆಗೆ ಒಗ್ಗಿಹೋಗಿರುವುದರಿಂದ ಪ್ರೇಕ್ಷಕರು ಇದನ್ನೆಲ್ಲ ಗ್ರಹಿಸಲಾರರು ಎಂದೆ. ಚರ್ಚೆ ಅಲ್ಲಿಗೆ ಮುಗಿಯಿತು.

ಊಟದ ನಂತರ ಕುವೆಂಪು ರಂಗಮಂದಿರದ ಪಕ್ಕ ಕುಳಿತ ಚಂದ್ರು “ಈ ತರಹದ ರಾಜಕೀಯ ವಿಡಂಬನೆಯ ಒಂದು ನಾಟಕ ನೀವೂ ಬರೀರಿ” ಎಂದರು.  “ಅದಾಗಲೇ ಬರೆದಿದೀನಿ. ಕಟ್ಟೆಪುರಾಣ ನಾಟಕ ಅದಾಗಲೇ ನಲವತ್ತು ಪ್ರದರ್ಶನ ಕಂಡಿದೆ” ಎಂದೆ. ಅವರದೇ ಶೈಲಿಯಲ್ಲಿ “ಇರಲಿ, ಇರಲಿ, ಇನ್ನೊಂದು ಬರೀರಿ” ಎಂದರು.

ಅವರ ಮುಖ್ಯಮಂತ್ರಿ ನಾಟಕದ ತಿರುಳು ಎಷ್ಟು ಸಹಜವಾದುದು ಎಂದರೆ, ಅದು ಎಲ್ಲ ಕಾಲಕ್ಕೂ ಪ್ರಸ್ತುತಗೊಳ್ಳುತ್ತಲೆ ಬಂದಿದೆ. ಹಾಲಿ ಮುಖ್ಯಮಂತ್ರಿ ಶಾಸಕರ ವಿಶ್ವಾಸ ಕಳೆದುಕೊಂಡಿರುವುದರಿಂದ ಮುಂದಿನ ವಾರ ಅಧಿಕಾರ ಬಿಟ್ಟುಕೊಡಬೇಕೆಂಬ ಸೂಚನೆ ಹೈಕಮಾಂಡಿನಿಂದ ಬರುತ್ತದೆ. ಇದನ್ನು ಯಾವ ಪ್ರತಿಭಟನೆ ಇಲ್ಲದೆ ಒಪ್ಪಿಕೊಂಡ ಮುಖ್ಯಮಂತ್ರಿ, ತನ್ನಲ್ಲಿ ವಿಶ್ವಾಸ ಕಳೆದುಕೊಂಡು ತಿರುಗಿಬಿದ್ದಿರುವ ಶಾಸಕರಿಗೆ ಫೋನ್‌ ಮಾಡತೊಡಗುತ್ತಾನೆ. ಅಧಿಕಾರದಿಂದ ಇಳಿದುಹೋಗಲಿರುವ ಮುಖ್ಯಮಂತ್ರಿ ಎತ್ತುವ ಪ್ರಶ್ನೆಗಳಿಗೆ ಮತ್ತು ಆತ ಪ್ರಸ್ತಾಪಿಸುವ ತಾವು ಮಾಡಿಕೊಂಡಿರುವ ಅವಾಂತರಗಳಿಗೆ ಉತ್ತರ ಕೊಡಲಾಗದ ಮಂತ್ರಿ ಮಹೋದಯರು ಉಸಿರೆತ್ತದೆ ತಮ್ಮ ಬೆಂಬಲ ನಿಮಗೆ ಎನ್ನುತ್ತಾ ಹೋಗುತ್ತಾರೆ. ಒಂದು ವಾರ ಕಳೆಯುವುದರಲ್ಲಿ ಮುಖ್ಯಮಂತ್ರಿ ಬಗ್ಗೆ ವಿಶ್ವಾಸ ಮುಂದುವರೆಸುವ ತೀರ್ಮಾನಕ್ಕೆ ಬರುತ್ತಾರೆ. ಆ ಒಂದು ವಾರ ಮನೆಬಿಟ್ಟು ಎಲ್ಲೂ ಹೋಗದ ಮುಖ್ಯಮಂತ್ರಿ ಭ್ರಷ್ಟ ಎಮ್ಮೆಲ್ಲೆಗಳಿಗೆ ಫೋನು ಮಾಡುತ್ತಲೇ ತಮ್ಮ ಸ್ಥಾನ ಭದ್ರ ಪಡಿಸಿಕೊಂಡು, ಹೈಕಮಾಂಡ್‌ ಎದುರು ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.

ಅರ್ಧ ಶತಮಾನದ ಹಿಂದೆ ರಚನೆಯಾದ ಈ ನಾಟಕ ಪ್ರಸ್ತುತ ಕರ್ನಾಟಕದಲ್ಲೂ ಸಂಭವಿಸಿತು. ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಹೈಕಮಾಂಡ್‌ ಸೂಚಿಸಿದಾಗ, ಸಿದ್ದರಾಮಯ್ಯ ಕೂಡಾ ಪ್ರತಿಭಟಿಸದೆ ಬಿಟ್ಟುಕೊಟ್ಟರು. ಆದರೆ ನಾಟಕದಲ್ಲಿ ಬರುವ ಮುಖ್ಯಮಂತ್ರಿಯಂತೆ ತಂತ್ರ ಹೆಣೆಯಲು ಮುಂದಾಗದ್ದು ಒಂದು ವ್ಯತ್ಯಾಸ. ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸುದ್ದಿಗಳ ಪ್ರಕಾರ ಸಿದ್ದರಾಮಯ್ಯನವರು ರಾಜೀನಾಮೆ ನೀಡಲು ಶಾಸಕರ ಅನುಮತಿ ಕೇಳಬೇಕಿದೆ ಎಂದರಂತೆ. ಆದರೆ ರಾಹುಲ್‌ಗಾಂಧಿ, ‘ಶಾಸಕರು ನಿಮ್ಮ ವಿರುದ್ಧ ಸಹಿ ಮಾಡಿಕೊಟ್ಟಿರುವ ಪತ್ರ ಇಲ್ಲಿದೆ ನೋಡಿ’ ಎಂದು ತೋರಿಸಿದರಂತೆ. ಸಿದ್ದರಾಮಯ್ಯ ಮರುಮಾತನಾಡದೆ ರಾಜೀನಾಮೆ ಘೋಷಿಸಿದರು. ಇದರಿಂದ ರಾಷ್ಟ್ರಮಟ್ಟದಲ್ಲಿ ಅವರಿಗೂ ಒಂದು ಹೆಸರು ಬಂತು. ಪ್ರಸ್ತುತ ಸಂದರ್ಭವೂ ಅವರ ನಿರ್ಗಮನ ಬಯಸಿತ್ತು. ಏಕೆಂದರೆ, ರಾಹುಲ್‌ ಗಾಂಧಿಯವರು ಮುಂದಿಟ್ಟ ಶಾಸಕರ ಸಹಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಅತ್ಯಾಪ್ತರ ಸಹಿಗಳೂ ಇದ್ದವಂತೆ. ರಾಜಕಾರಣ ಇಷ್ಟು ವಿಶ್ವಾಸದ್ರೋಹಕ್ಕೆ ತಿರುಗಿದ ಮೇಲೆ ಅವರು ನಿರ್ಗಮಿಸಲೇಬೇಕು. ಅಲ್ಲದೇ, ಡಿ.ಕೆ. ಶಿವಕುಮಾರ್‍‌ ಕಾಂಗೈ ಪಾರ್ಟಿಯಿಂದಲೇ ಮೇಲೆ ಬಂದವರು. ಜೊತೆಗೆ, ಹೇರಳವಾಗಿ ಸಂಗ್ರಹಿಸಿದ ಹಣಕಾಸಿನಿಂದಲೇ ತೊಂದರೆಗೆ ಒಳಗಾದವರು. ಸಮಸ್ಯೆಗಳನ್ನು ತಂತ್ರದಿಂದಲೇ ಪರಿಹರಿಸುವ ಚಾಣಾಕ್ಷತೆ ಮೆರೆದವರು. ಎಮ್ಮೆಲ್ಸಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರಿಂದಲೇ ಮತ ಹಾಕಿಸಿಕೊಂಡು ಅವೆರಡು ಪಾರ್ಟಿಗಳು ಮುಜುಗರಕ್ಕೆ ಒಳಗಾಗುವಂತೆ ಮಾಡಿದರು.  ಚಂದ್ರು ನಾಟಕದ ಮುಖ್ಯಮಂತ್ರಿ ತೋರುವ ತಂತ್ರಗಾರಿಕೆ, ಡಿ.ಕೆ ಶಿವಕುಮಾರರು ಶಾಸಕರನ್ನು ನಿಭಾಯಿಸುವ ತಂತ್ರಗಾರಿಕೆ ಹೆಚ್ಚೂಕಮ್ಮಿ ಒಂದೇ ತೆರನಾದದ್ದು. ಇತ್ತೀಚೆಗೆ, ಸದನದಲ್ಲಿ ಅವರು ‘ಬೆಂಗಳೂರಿಗೆ ಬಂದ ಯಾವೆಲ್ಲಾ ಶಾಸಕರು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ’ ಎಂದು ಘಂಟಾಘೋಷವಾಗಿ ಸಾರಿದರು. ಇವತ್ತಿನ ರಾಜಕಾರಣಕ್ಕೆ ಬೇಕಾಗಬಹುದಾದ ಇಂತಹ ಚಾಣಾಕ್ಷತೆ ಸಿದ್ದರಾಮಯ್ಯನವರಿಗೆ ಇಲ್ಲ. ಆದರೂ ಜೆಡಿಎಸ್‌ ಪಾರ್ಟಿಯಿಂದ ಕರೆತಂದು ಅವರನ್ನು ಎಂಟು ವರ್ಷ ಮುಖ್ಯಮಂತ್ರಿ ಮಾಡಿದ ಕೀರ್ತಿ ಕಾಂಗೈಗೆ ಸಲ್ಲಬೇಕು. ಇದರ ಅರಿವಿದ್ದ ಸಿದ್ದರಾಮಯ್ಯ ಘನತೆಯಿಂದ ನಿರ್ಗಮಿಸಿದರು. ಇದೇನೆ ಇದ್ದರೂ, ಪುತ್ರವ್ಯಾಮೋಹದ ದೇವೇಗೌಡರು, ಸಿದ್ದರಾಮಯ್ಯ ಜೆಡಿಎಸ್‌ ತೊರೆಯುವಂತೆ ಮಾಡದಿದ್ದರೆ ಈ ಎಂಟು ವರ್ಷ ಸಿಎಂ ಆಗಲು ಸಾಧ್ಯವಿರಲಿಲ್ಲ. ಹಾಗಾಗಿ ದೇವೇಗೌಡರ ಶ್ರಮವೇನು ಕಡಿಮೆಯಿಲ್ಲ! ಇದರ ಅರಿವು ಸಿದ್ದರಾಮಯ್ಯನವರಿಗೂ ಇದೆ. ಅದಕ್ಕಾಗಿ ಎಷ್ಟೇ ವೈರತ್ವ ಸಾಧಿಸಿದರೂ ಚೆನ್ನಮ್ಮನವರು ನಿರ್ಗಮಿಸಿದಾಗ ಮನೆಗೆ ಹೋಗಿ ದೇವೇಗೌಡರ ಕಣ್ಣೀರು ಒರೆಸಿದರು.

ಕರ್ನಾಟಕದಲ್ಲಿ ಹೈಕಮಾಂಡ್‌ ಸೂಚನೆಯಂತೆ ಇಳಿದುಹೋದ ಹಲವಾರು ಮುಖ್ಯಮಂತ್ರಿಗಳಿದ್ದಾರೆ. ಆಶ್ಚರ್ಯ ಎಂದರೆ ಆಗೆಲ್ಲಾ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಇತಿಹಾಸ ನಿರ್ಮಿಸಿದ ಡಿ.ದೇವರಾಜ ಅರಸುರನ್ನು ನಿರ್ದಯವಾಗಿ ಇಳಿಸಿದ ಸಂಜಯ್‌ಗಾಂಧಿ-ಇಂದಿರಾ ಗಾಂಧಿಯವರು ಮೊದಲ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದರು. ವೀರೇಂದ್ರ ಪಾಟೀಲ್‌, ಬಂಗಾರಪ್ಪ, ಯಡಿಯೂರಪ್ಪ ಎಲ್ಲರ ವಿಚಾರದಲ್ಲಿ ಇದಾಗಿದೆ. ಪ್ರಸ್ತುತ ಅಂತದ್ದೊಂದು ಅಪಾಯ ಸಂಭವಿಸದಂತೆ ಕಾಂಗ್ರೆಸ್ ಎಚ್ಚರವಹಿಸಬೇಕು.

ಅಧಿಕಾರ ಕಳೆದುಕೊಳ್ಳುವುದರ ಮತ್ತು ಉಳಿಸಿಕೊಳ್ಳುವುದರ ಸುತ್ತ ನಡೆಯುವ ಸಂಚಿನಂತಹ ತಂತ್ರಗಾರಿಕೆಗಳನ್ನು ಹೇಳುವ ಮುಖ್ಯಮಂತ್ರಿ ನಾಟಕ ಹಳೆಯದು ಅನ್ನಿಸಲು ನಮ್ಮ ರಾಜಕಾರಣಿಗಳು ಬಿಡುವುದಿಲ್ಲ. ತಮ್ಮ ಕುತಂತ್ರಿ ಆಟಗಳಿಂದ ಅದನ್ನು ಪ್ರಸ್ತುತಗೊಳಿಸುತ್ತಲೇ ಇರುತ್ತಾರೆ. ಎಂಬತ್ತರ ದಶಕದಿಂದ ಶುರುವಾಗಿ ಈಗ ನಾಟಕವು 900ನೇ ಪ್ರದರ್ಶನ ಕಾಣುವವರೆಗೆ ಕರ್ನಾಟಕದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡು ನಿರ್ಗಮಿಸಿದ್ದಾರೆ. ಆದರೆ ಇಷ್ಟು ಸುದೀರ್ಘ ಕಾಲ ಖಾಯಂ ಮುಖ್ಯಮಂತ್ರಿಯಾಗಿಯೇ ಮುಂದವರೆದಿರುವ ಚಂದ್ರು ಅವರಿಗೆ ಅಭಿನಂದನೆ ತಿಳಿಸೋಣ.

Leave a Reply

Your email address will not be published. Required fields are marked *