ಎರಡು ಕಾರಣಗಳಿಗಾಗಿ ಐಪಿಎಸ್ ಅಧಿಕಾರಿಯಾದ ಎಸ್ ಎಲ್ ಚೆನ್ನಬಸವಣ್ಣನವರ ಕೃತಿಯಾದ ‘ಅಲ್ಕೆಬುಲಾನಾದ ಹೃದಯದಿಂದ – ದಕ್ಷಿಣ ಸುಡಾನಿನ ಅನುಭವ ಕಥನ’ ಗಮನಸೆಳೆಯುತ್ತದೆ. ಮೊದಲನೆಯದು, ತಮ್ಮ ಕರ್ತವ್ಯದ ಅವಧಿಯಲ್ಲಿ ಅವರು ದಕ್ಷಿಣ ಸುಡಾನಿನ ಬದುಕನ್ನು ಕಂಡ ಬಗೆ. ಎರಡನೆಯದು, ತನ್ನ ಅನುಭವವನ್ನು ಗದ್ಯರೂಪಕ್ಕಿಳಿಸುವಾಗ ಅವರು ಕರಗತ ಮಾಡಿಕೊಂಡಿರುವ ಬರವಣಿಗೆಯ ಜೀವಂತಿಕೆ.
ನಾವು ನಮ್ಮೆದುರಿಗಿನ ವಸ್ತುವನ್ನೋ, ದೃಶ್ಯವನ್ನೋ ನೋಡಲು ಕಣ್ಣುಗಳಿದ್ದರೆ ಸಾಕು; ಆದರೆ, ಆ ವಸ್ತು-ದೃಶ್ಯದ ಆಳವನ್ನು ಅರಿತು-ಕಾಣಲು ನಮಗೆ ಒಳಗಣ್ಣುಗಳಿರಬೇಕು, ವಿವೇಕವಿರಬೇಕು, ತರ್ಕಶೀಲತೆ, ಅಂತಃಕರಣಗಳೆಲ್ಲ ಇರಬೇಕು. ನೋಡುವುದಕ್ಕೂ ಮತ್ತು ಕಾಣುವುದಕ್ಕೂ ನಡುವಿನ ಅಂತರ ಹೀಗಿರುತ್ತದೆ. ಚೆನ್ನಬಸವಣ್ಣನವರು ದಕ್ಷಿಣ ಸುಡಾನಿನಲ್ಲಿ ಇದ್ದಷ್ಟು ಕಾಲ, ಅಲ್ಲಿನ ಜನಜೀವನವನ್ನು ಕೇವಲ ನೋಡಲಿಲ್ಲ; ಬದಲಿಗೆ ಕಂಡರು. ಹಾಗೆ ಕಾಣಲು ಸಾಧ್ಯವಾಗಿದ್ದರಿಂದಲೇ ತಮ್ಮ ಅನುಭವಗಳನ್ನು ಈ ಕೃತಿಯಾಗಿಸಲು ಅವರಿಗೆ ಸಾಧ್ಯವಾಗಿದೆ.

ಈ ಕೃತಿ ನಮ್ಮ ಮುಂದೆ ದಕ್ಷಿಣ ಸುಡಾನ್ ಅನ್ನು ಬಿಚ್ಚಿಡುತ್ತಾ ಸಾಗುತ್ತದೆ. ಅಲ್ಲಿನ ಪರಿಸರ, ಬಂದುಹೋಗುವ ವ್ಯಕ್ತಿಚಿತ್ರಗಳು, ಅಲ್ಲಲ್ಲಿ ಇಣುಕುವ ಚರಿತ್ರೆಯ ಸಂಕ್ಷಿಪ್ತ ಕುರುಹುಗಳು, ಜನರ ಬವಣೆಗಳು ಇವೆಲ್ಲವೂ ಓದುಗರ ಕಣ್ಣಮುಂದೆ ಕಟ್ಟಿದಂತೆ ಬಿತ್ತರಗೊಳುತ್ತವೆ. ಇದು ಸಾಧ್ಯವಾದದ್ದು ಚೆನ್ನಬಸವಣ್ಣನವರು ಅವೆಲ್ಲವುಗಳನ್ನು ನೋಡುವುದಕ್ಕಷ್ಟೆ ಸೀಮಿತಗೊಳ್ಳದೆ ಕಾಣಲು ಹಂಬಲಿಸಿದ್ದರಿಂದ. ಅವರು ಕೇವಲ ನೋಡಿ ಬಂದು, ಈ ಕೃತಿಯನ್ನು ಬರೆದಿದ್ದರೆ ನಮಗೆ ಅಕ್ಷರಗಳು ಮಾತ್ರ ಕಾಣುತ್ತಿದ್ದವು, ದೃಶ್ಯಗಳು ಗೋಚರಿಸುತ್ತಿರಲಿಲ್ಲ. ಹೀಗೆ ಕಣ್ಣಮುಂದಿನ ದೃಶ್ಯಗಳ ಆಳಕ್ಕಿಳಿದು ಕಾಣುವ ತುಡಿತ ಅಥವಾ ಆಸಕ್ತಿಯನ್ನು ಸಾಮಾನ್ಯವಾಗಿ ಸಾಹಿತ್ಯಶೀಲರಲ್ಲಿ ಕಾಣುತ್ತೇವೆ. ಆದರೆ ಕಾಠಿಣ್ಯವನ್ನೇ ಹೊದ್ದು ಮಲಗಿದ ಪೊಲೀಸ್ ವೃತ್ತಿ ಬದುಕಿನಲ್ಲಿರುವವರಲ್ಲಿ ಇಂತಹ ಸಂವೇದನೆ ಮೂಡುವುದು ತುಂಬಾ ವಿರಳ. ಚೆನ್ನಬಸವಣ್ಣನವರು ಅಂತಹ ವಿರಳ ವ್ಯಕ್ತಿಗಳಲ್ಲಿ ಒಬ್ಬರಾಗಿರುವುದೇ ಈ ಕೃತಿಯನ್ನು ಓದುಗರಿಗೆ ಆಪ್ಯವಾಗಿಸಿದೆ ಎನ್ನಬಹುದು.
ಇನ್ನು ಗದ್ಯವನ್ನು ನಿರೂಪಿಸುವಾಗ ಬರವಣಿಗೆಯ ಲಯ ಅಥವಾ ಜೀವಂತಿಕೆ ತುಂಬಾ ಮುಖ್ಯ. Liveliness ಇಲ್ಲದ ಯಾವ ಗದ್ಯವೂ ಓದುಗನನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಕೇವಲ ಮಾಹಿತಿಯನ್ನಷ್ಟೇ ನೀಡುತ್ತಾ ಹೋದರೆ, ಅಥವಾ ನಿರೂಪಣೆಯ ಏರಿಳಿತವಿಲ್ಲದ, ವೈವಿಧ್ಯಮಯ ವಿಸ್ತಾರವಿಲ್ಲದ ಓದು ಬಹುಬೇಗನೇ ನಿರಾಸಕ್ತಿಗೆ ಈಡಾಗುತ್ತದೆ. ಒಂದು ಹಾಡಿಗೆ ರಾಗ, ತಾಳ, ಸಾಹಿತ್ಯ ಎಷ್ಟು ಅಗತ್ಯವೋ, ಒಂದು ಗದ್ಯಕ್ಕೂ ಬರವಣಿಗೆಯ Liveliness ತುಂಬಾ ಮುಖ್ಯ. ಇಂಗ್ಲಿಷ್ನ ಖ್ಯಾತ ಕಾದಂಬರಿಕಾರ್ತಿ ವರ್ಜೀನಿಯಾ ವೂಲ್ಫ್ ಅವರು ಇದನ್ನೇ ಗದ್ಯದ ಕುರಿತು ““Style is a very simple matter; it is all rhythm” ಎಂದು ಹೇಳುತ್ತಾರೆ. ಓದುಗರನ್ನು ಹಿಡಿದಿಡುವಂತೆ ಗದ್ಯವನ್ನು ಕಟ್ಟುತ್ತಾ ಸಾಗುವುದು ಕೂಡಾ ಒಂದು ಕಲೆ. ಪೂರ್ಣಚಂದ್ರ ತೇಜಸ್ವಿ ಮತ್ತು ಲಂಕೇಶ್ ತರಹದ ಕನ್ನಡದ ಸಾಹಿತಿಗಳು ಗದ್ಯಬರಹಗಳಿಗೂ ಲವಲವಿಕೆಯನ್ನು ತುಂಬಿ, ನಮ್ಮ ಮುಂದೆ ನಿರೂಪಣೆಯ ಮಾದರಿಗಳನ್ನಿಟ್ಟು ಹೋಗಿದ್ದಾರೆ. ತೇಜಸ್ವಿಯವರಿಂದ ಪ್ರಭಾವಿತರಾದ ಚೆನ್ನಬಸವಣ್ಣನವರ ನಿರೂಪಣೆ ಕೂಡಾ ತನ್ನ ಜೀವಂತಿಕೆಯ ಕಾರಣಕ್ಕೆ ಓದುಗರನ್ನು ಹಿಡಿದಿಡುವಂತದ್ದು. ತೇಜಸ್ವಿಯವರು ಪರಿಸರದ ಬಗ್ಗೆ, ಮನುಷ್ಯನ ವರ್ತನೆ-ವಿಕಾಸದ ಬಗ್ಗೆ ವಿಭಿನ್ನ ನೋಟಗಳನ್ನು ನಮಗೆ ದಾಟಿಸಿದಂತವರು. ಚನ್ನಬಸಣ್ಣವನವರು ನಿರೂಪಿಸುವ ಪರಿಸರದ ಕಥನಗಳು, ಮನುಕುಲದ ವಿಕ್ಷಿಪ್ತ ಚರಿತ್ರೆಗಳು ಈ ಕೃತಿಯಲ್ಲೂ ನಮಗೆ ಅಲ್ಲಲ್ಲಿ ತೇಜಸ್ವಿಯವರು ಇಣುಕಿಹೋಗುವಂತೆ ಮಾಡುತ್ತವೆ.

ಯಾವುದೋ ಒಬ್ಬ ವ್ಯಕ್ತಿಚಿತ್ರದಿಂದ ಶುರುವಾಗಿ, ಆ ದೇಶದ ಚರಿತ್ರೆಯನ್ನು ಹಾಯ್ದು, ಮನುಕುಲದ ಪಲ್ಲಟಗಳನ್ನೂ, ಪರಿಸರದ ವಿಸ್ಮಯಗಳನ್ನೂ ತಂದು ಜೋಡಿಸಿ ಗದ್ಯದ ಓದನ್ನು ಏಕತಾನತೆಗೊಳಿಸದೆ ವೈವಿಧ್ಯಗೊಳಿಸುವ ಅವರು ಮಾಹಿತಿಯ ಹರವನ್ನು ವಿಶಾಲಗೊಳಿಸಿ, ಚಕಿತಗೊಳಿಸುತ್ತಾರೆ. ಅವರ ಈ ಶೈಲಿಯಿಂದ ಓದುಗ ಉಲ್ಲಾಸಗೊಳ್ಳುತ್ತಾನೆ. ಆ ಉಲ್ಲಾಸವೇ ಓದಿನ ಆಸಕ್ತಿಯನ್ನು ಸೆಳೆದಿಡುತ್ತದೆ. ರೂಪಕದ ಮಾತಿನಲ್ಲಿ ಹೇಳುವುದಾದರೆ, ಒಂದೇ ಓಘದಲ್ಲಿ ಭೋರ್ಗರೆದು ಹರಿವ ಪ್ರವಾಹದಂತೆ ದಿಗಿಲುಬೀಳಿಸದೆ, ಬೆಟ್ಟದ ನೆತ್ತಿಯಲ್ಲೆಲ್ಲೊ ಹುಟ್ಟಿ, ಕೊರಕೊಲು ಬಂಡೆಗಳ ಸಂಧಿಯಲ್ಲಿ ಒಸರಿ, ಕಣಿವೆಗಳಲ್ಲಿ ಇಳಿದು, ಗಿಡಮರಗಳ ಬೇರುಗಳನ್ನು ತೊಳೆದು, ಖಗಮೃಗಗಳಿಗೆ ನೀರುಣಿಸಿ, ಕಾಡನ್ನೆಲ್ಲ ಸುತ್ತಾಡಿ ಆಡಂಬರವಿಲ್ಲದೆ ಹರಿವ ಕಾಡ ತೊರೆಯಂತೆ ಓದುಗನನ್ನು ಅವರ ಬರಹ ತಣಿಸುತ್ತದೆ. ಬಿಡುಗಡೆಯಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಸಾವಿರ ಪ್ರತಿಗಳು ಮಾರಾಟವಾಗಿ, ಮೂರನೇ ಮುದ್ರಣ ಕಾಣುತ್ತಿರುವುದು ಪುಸ್ತಕದ ಸತ್ವಕ್ಕೆ ಸಾಕ್ಷಿ. ಇವತ್ತಿನ ಮಟ್ಟಿಗೆ ಕನ್ನಡ ಪುಸ್ತಕಲೋಕದಲ್ಲಿ ಇದೊಂದು ದುಸ್ಥರ ಸಾಧನೆಯೇ ಸರಿ.
ತನ್ನದಲ್ಲದ ಆಚರಣೆ, ತನ್ನದಲ್ಲದ ಅಭಿಪ್ರಾಯ, ತನ್ನದಾಗಿರದ ಅಭಿರುಚಿಗಳ ಬಗ್ಗೆ ಮನುಷ್ಯ ಸಹಿಷ್ಣುತೆಯನ್ನು ಕಳೆದುಕೊಳ್ಳುತ್ತಿರುವ ಇವತ್ತಿನ ಕಾಲದಲ್ಲಿ ತನ್ನೊಳಗಿರುವ ಮೇಲರಿಮೆ ಅಥವಾ ಶ್ರೇಷ್ಠತೆಯನ್ನು ಬದಿಗಿಟ್ಟು ಬಹುತ್ವದ ಬದುಕುಗಳನ್ನು ಅವುಗಳಿರುವಂತೆಯೇ ಸ್ವೀಕರಿಸಿ, ಅವುಗಳನ್ನು ಗೌರವಿಸುವ ಕೃತಿಕಾರರ ಮಾನವೀಯ ಗುಣ, ಈ ಕೃತಿಯನ್ನು ವಿಶಿಷ್ಟಗೊಳಿಸಿರುವ ಇನ್ನೊಂದು ಆಯಾಮ ಅಂತಲೂ ಹೇಳಬಹುದು. ಸೀಮಿತ ಪುಟಗಳಲ್ಲಿ ಅಗಾಧ ವಸ್ತು ಮತ್ತು ವಿಚಾರಗಳ ಮಂಥನಕ್ಕೆ ಹಾದಿ ಮಾಡಿಕೊಡುತ್ತಾ ಸಾಗುವ ಈ ಕೃತಿಯ ಬಗ್ಗೆ ಹೇಳುವುದಕ್ಕೆ ಇನ್ನೂ ಸಾಕಷ್ಟು ವಿಚಾರಗಳಿವೆ. ಸದ್ಯಕ್ಕೆ ಇಷ್ಟು ಸಾಕು.
ಪೊಲೀಸರಿಗೆ ಸಿಕ್ಕಷ್ಟು ದಟ್ಟವಾದ ಜೀವನಾನುಭವಗಳು ಬೇರಾವ ವೃತ್ತಿಯವರಿಗೂ ಲಭಿಸುವುದಿಲ್ಲ. ದಿನಂಪ್ರತಿ ಒಂದಿಲ್ಲೊಂದು ಹೊಸಹೊಸ ವೃತ್ತಾಂತಗಳು ಅವರ ಮುಂದೆ ತೆರೆದುಕೊಳ್ಳುತ್ತಲೇ ಇರುತ್ತವೆ. ವೃತ್ತಿಯ ಒತ್ತಡದ ಕಾರಣಕ್ಕೆ, ಅವುಗಳನ್ನು ನಿಭಾಯಿಸುವಲ್ಲೇ ಹೈರಾಣಾಗುವ ಮತ್ತು ಆ ಹೈರಾಣಾಗುವಿಕೆಯಲ್ಲೇ ಒಂದು ಬಗೆಯ ನಿಷ್ಠುರ, ಕಠೋರ ವ್ಯಕ್ತಿತ್ವವನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳುವ ಪೊಲೀಸರು ತಮ್ಮ ಮುಂದೆ ತೆರೆದುಕೊಂಡ ವೈವಿಧ್ಯಮಯ ಬದುಕುಗಳನ್ನು ಕಾಣುವಲ್ಲಿ ಸೋತುಹೋಗುತ್ತಿದ್ದಾರೆ. ಒಂದುವೇಳೆ, ಸಾಹಿತ್ಯಮಯ ಓದು ಮತ್ತು ಬರಹವನ್ನು ಅವರು ತಮ್ಮ ಅಭಿರುಚಿಯಾಗಿಸಿಕೊಂಡಿದ್ದೇ ಆದಲ್ಲಿ, ಒತ್ತಡಗಳಿಂದ ಮುಕ್ತಗೊಂಡು ಎಲ್ಲರಂತೆ ಲವಲವಿಕೆಯ ವ್ಯಕ್ತಿತ್ವವನ್ನು ಹೊಂದುವ ಸಾಧ್ಯತೆಗಳು ಅವರ ಮುಂದಿವೆ. ಅದಕ್ಕಿಂತಲೂ ಮುಖ್ಯವಾಗಿ ಅವರ ಮೂಲಕ ಸಮೃದ್ಧ ಕಥನಗಳು ಈ ಸಮಾಜದ ಮುಂದೆ ತೆರೆದುಕೊಂಡು, ಆರೋಗ್ಯವಂತ ಗ್ರಹಿಕೆಗೆ ಕಾರಣವಾಗಬಹುದು. ಬರೆಯುವ ಆಸಕ್ತಿಯಿದ್ದು, ಕಾರಣಾಂತರಗಳಿಂದ ಬರೆಯಲಾಗದೆ ತೊಳಲಾಡುತ್ತಿರುವ ಸಾವಿರಾರು ಪೊಲೀಸ್ ಸಿಬ್ಬಂದಿಗಳಿಗೆ ‘ತಾವು ಕೂಡಾ ಬರೆಯಬಹುದೆನ್ನುವ’ ಪ್ರೇರಣೆ ನೀಡುವಂತಹ ಕೃತಿ ಇದು. ಇಂಥಾ ಕೃತಿಯನ್ನು ಓದುಗರ ಕೈಗಿಟ್ಟ ಚೆನ್ನಬಸವಣ್ಣನವರಿಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು.

ಕೃತಿ ವಿವರ
ಹೆಸರು: ಅಲ್ಕೆಬುಲಾನದ ಹೃದಯದಿಂದ – ದಕ್ಷಿಣ ಸುಡಾನಿನ ಅನುಭವ ಕಥನ
ಲೇಖಕರು: ಎಸ್ ಎಲ್ ಚೆನ್ನಬಸವಣ್ಣ, ಐಪಿಎಸ್
ಪುಟಗಳು: 186
ಬೆಲೆ: ರೂ. 250/-
ಪ್ರಕಾಶನ: ಅಭಿರುಚಿ ಪ್ರಕಾಶನ, ಮೈಸೂರು
ಪ್ರತಿಗಳಿಗೆ ಸಂಪರ್ಕಿಸಿ: 99805 60013
– ಗಿರೀಶ್ ತಾಳಿಕಟ್ಟೆ

ರಾಜಕೀಯ, ಸಾಹಿತ್ಯ, ಶಿಕ್ಷಣ, ಉದ್ಯೋಗ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ವಿಶ್ಲೇಷಣೆಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಲೇಖಕರು, ಎರಡು ದಶಕಗಳ ಪತ್ರಕರ್ತ ವೃತ್ತಿಬದುಕಿನಲ್ಲಿ ಪತ್ರಿಕೋದ್ಯಮದ ವಿವಿಧ ಮಜಲುಗಳಲ್ಲಿ ಸಂಪಾದಕೀಯ ಅನುಭವವನ್ನು ಗಳಿಸಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲಿ ಸಕ್ರಿಯರಾಗಿರುವ ಅವರು, ‘ಜೆನ್ ಕತೆಗಳು’, ‘ಎಲ್ಲೆ ತೊರೆದ ಕತೆಗಳು’, ‘ಟರ್ನಿಂಗ್ ಪಾಯಿಂಟ್’, ‘ಕಾಡುವ ಕತೆಗಳು’, ‘ಆ 117 ದಿನಗಳು’ ಮತ್ತು ‘ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
