ಕಾಟನ್‌ಸಿಟಿ ದಾವಣಗೆರೆಯಲ್ಲಿ ಕಮ್ಯುನಿಷ್ಟ್‌ ರಾಜಕಾರಣದ ಏಳು-ಬೀಳು: ಭಾಗ 1

ಒಂದು ಕಾಲಕ್ಕೆ ಮೇ 1 ಬಂತೆಂದರೆ ದಾವಣಗೆರೆ ರಸ್ತೆಯ ತುಂಬೆಲ್ಲ ಕೆಂಪು ಬಾವುಟ, ಕೆಂಪು ಅಂಗಿಗಳದ್ದೇ ಕಾರುಬಾರು. ಏನಿಲ್ಲವೆಂದರು 1 ಮೈಲಿ ಉದ್ದದ ಕಾರ್ಮಿಕ ಮೆರವಣಿಗೆ ಹೊರಡುತ್ತಿತ್ತು. ಇದೆಲ್ಲ 1960, 1970ರ ದಶಕದ ಕಥೆ. ವ್ಯಾಪಕ ಹತ್ತಿ ಗಿರಣಿಗಳಿಂದಾಗಿ ಕರ್ನಾಟಕದ ಮ್ಯಾಂಚೆಸ್ಟರ್‍‌ ಸಿಟಿ ಅಂತಲೇ ಗುರುತಿಸಿಕೊಂಡಿದ್ದ ದಾವಣಗೆರೆಯಲ್ಲಿ ಸುಮಾರು ಎರಡು ದಶಕಗಳ ಕಾಲ ಕಮ್ಯುನಿಷ್ಟ್‌ ರಾಜಕಾರಣ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮಿಲ್‌ ಕಾರ್ಮಿಕರ ಸಂಘಟನೆಗಳು ಅಷ್ಟು ಬಲವಾಗಿದ್ದವು. ಕಾಮ್ರೇಡ್‌ ಪಂಪಾಪತಿಯವರ ನೇತೃತ್ವದಲ್ಲಿ ಆಗಿನ ನಾಯಕತ್ವವೂ ಮೊನಚಾಗಿತ್ತು. ಶ್ರಮಿಕರ ಹಕ್ಕು ಮತ್ತು ಬಂಡವಾಳಿಗ ಮಾಲೀಕರ ಸೊಕ್ಕುಗಳ ನಡುವಿನ ಸಂಘರ್ಷ ದಾವಣಗೆರೆಯ ಕಾರ್ಮಿಕ ವಲಯವನ್ನು ವೈಬ್ರೆಂಟ್‌ ಆಗಿಟ್ಟಿದ್ದವು. ಎಲ್ಲವೂ ಹೀಗೆಯೇ ಇರಲಿದೆ, ದಾವಣಗೆರೆಯಲ್ಲಿ ಕಮ್ಯುನಿಷ್ಟ್‌ ರಾಜಕಾರಣಕ್ಕೆ ಕುಸಿತವೆಂಬುದೇ ಬಾರದು ಎನ್ನುವಂತಿದ್ದ ಸ್ಥಿತಿ ಪಂಪಾಪತಿಯವರ ಕಾಲದಲ್ಲೇ ಕುಸಿಯಲಾರಂಭಿಸಿತು. ಇದು ಕೇವಲ ಒಂದು ರಾಜಕೀಯ ಪಕ್ಷದ ಅಥವಾ ಸಿದ್ದಾಂತದ ಕುಸಿತವಾಗಿರಲಿಲ್ಲ. ಪಲ್ಲಟಗೊಂಡ ಸಾಮಾಜಿಕ ರಾಜಕಾರಣ, ಉದ್ಯಮ ಸಂರಚನೆ, ಜಾಗತೀಕರಣ, ಆರ್ಥಿಕ ಮತ್ತು ಔದ್ಯಮಿಕ ಮೂಲಗಳ ಒಟ್ಟಾರೆ ಪರಿವರ್ತನೆಯ ಫಲವೆನ್ನಬಹುದು. ಹತ್ತಿ ಗಿರಣಿಗಳ ಅವಸಾನದೊಂದಿಗೆ ಶುರುವಾದ ಕಾರ್ಮಿಕ ಬದುಕಿನ ಪಲ್ಲಟವು, ಕಮ್ಯುನಿಷ್ಟ್ ರಾಜಕಾರಣವನ್ನು ನಿಶ್ಯಕ್ತಗೊಳಿಸುತ್ತಾ ಬಂತು.

ಈ ಪ್ರಕ್ರಿಯೆ ನಮ್ಮಲ್ಲಿ ಒಂದಷ್ಟು ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ದಾವಣಗೆರೆಯ ಕಮ್ಯುನಿಷ್ಟ್‌ ರಾಜಕಾರಣವು ಕಾರ್ಮಿಕ ಸಂಘಟನೆ ಮತ್ತು ಅವರ ಹಕ್ಕುಗಳ ಬುನಾದಿಯ ಮೇಲೆ ರೂಪುಗೊಂಡಿದ್ದು ನಿಜವಾದರೂ, ತನಗೆ ಸಿಕ್ಕ ರಾಜಕೀಯ ವಿಸ್ತಾರವನ್ನು ಬಳಸಿಕೊಂಡು ಅದು ಜನಸಾಮಾನ್ಯರನ್ನು ಸೈದ್ದಾಂತಿಕವಾಗಿ ತಲುಪಲು ಯತ್ನಿಸಲಿಲ್ಲವೇ? ಕಾಮ್ರೇಡ್ ಪಂಪಾಪತಿಯವರ ಹೊರತಾಗಿ ಬೇರಾವ ನಾಯಕರು ಯಾಕೆ, ಸಂಘಟನಾ ರಾಜಕಾರಣದ ಜೊತೆಗೆ ಚುನಾವಣಾ ರಾಜಕಾರಣವನ್ನೂ ಗಂಭೀರವಾಗಿ ಮುಖಾಮುಖಿಯಾಗಲಿಲ್ಲ? ಎರಡು ದಶಕಗಳ ಕಾಲ ಸಂಪೂರ್ಣ ನಗರಸಭೆ ಮತ್ತು ವಿಧಾನಸಭಾ ಕ್ಷೇತ್ರದ ಮೇಲೆ ತನ್ನ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದ ಕಮ್ಯುನಿಷ್ಟ್‌ ರಾಜಕಾರಣ, ಕಾರ್ಮಿಕ ಸಂಘಟನೆಯಾಚೆಗೆ ಒಂದು ರಾಜಕೀಯ ಸಿದ್ದಾಂತವಾಗಿ ಜನರನ್ನು ತಲುಪಲು ಮುಗ್ಗರಿಸಿದ್ದೆಲ್ಲಿ?

ಬಹುಶಃ ಈ ಪ್ರಶ್ನೆಗಳು ಅಧ್ಯಯನಯೋಗ್ಯ ಸರಕುಗಳು. ಯಾಕೆಂದರೆ, ಕೇವಲ ದಾವಣಗೆರೆಯ ಕಮ್ಯುನಿಷ್ಟ್‌ ರಾಜಕಾರಣದ ಹಿನ್ನಡೆಯನ್ನು ಮಾತ್ರವಲ್ಲದೆ ಭಾರತದ ಒಟ್ಟಾರೆ ಕಮ್ಯುನಿಷ್ಟ್‌ ರಾಜಕಾರಣದ ವಿಸ್ತರಣೆಯಲ್ಲಿ ಇರಬಹುದಾದ ಮಿತಿಗಳನ್ನೂ ತೆರೆದಿಡಬಹುದು. ಪತ್ರಕರ್ತನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲಘಟ್ಟದಲ್ಲಿ ಕಮ್ಯುನಿಷ್ಟ್‌ ರಾಜಕಾರಣದ ಉತ್ತುಂಗ ಸ್ಥಿತಿಯನ್ನು ಕಂಡವನು ನಾನು. ಆ ಪ್ರಭಾವಕ್ಕೆ ಒಳಗಾಗಿ ಶ್ರಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡವನು. ಲಂಕೇಶರಿಂದ ಪ್ರಭಾವಿತನಾಗಿ ದಾವಣಗೆರೆಯಿಂದ ನಾನು ಪ್ರಕಟಿಸುತ್ತಿದ್ದ `ಪ್ರಜಾಕೂಗು’ ಪತ್ರಿಕೆ ಕಮ್ಯುನಿಷ್ಟ್‌ ಆಶಯಗಳನ್ನೆ ಉಸಿರಾಡುತ್ತಿತ್ತು. ಅದಕ್ಕಾಗಿ ಬಂಡವಾಳಿಗರಿಂದ ದಮನಕ್ಕೂ ಗರಿಯಾದವನು. ಹಾಗಾಗಿ ಈ ಮೇಲಿನ ಪ್ರಶ್ನೆಗಳು ನನ್ನನ್ನು ನಿರಂತರವಾಗಿ ಕಾಡುತ್ತಿರುತ್ತವೆ. ಉತ್ತರ  ಕಂಡುಕೊಳ್ಳಲು ಯತ್ನಿಸಿ, ಹಲವು ಬಾರಿ ಕೈಚೆಲ್ಲಿದ್ದೇನೆ. ಈಗ ಮತ್ತೊಮ್ಮೆ ಆ ಪ್ರಯತ್ನದಲ್ಲಿ ಈ ಬರೆಹ.

ಹತ್ತಿ ಗಿರಣಿಗಳ ಹುಟ್ಟಿನೊಂದಿಗೆ ಶುರು….

ವಸಾಹತು ಕಾಲಘಟ್ಟದಲ್ಲಿ ಭಾರತದ ಬಹುಪಾಲು ಶಹರದಂತಿದ್ದ ದಾವಣಗೆರೆಗೆ ಒಂದು ಆರ್ಥಿಕ ಲವಲವಿಕೆಯನ್ನು ಮತ್ತು ಪ್ರಾಮುಖ್ಯತೆಯನ್ನು ತಂದುಕೊಟ್ಟಿದ್ದು 1936ರಲ್ಲಿ ಸ್ಥಾಪನೆಯಾದ ದಾವಣಗೆರೆ ಕಾಟನ್‌ ಮಿಲ್ಸ್‌ (ಡಿಸಿಎಂ). ಸ್ಥಳೀಯ ಉದ್ಯಮಿ ರಾಜನಹಳ್ಳಿ ಹನುಮಂತಪ್ಪನವರು ಈ ಗಿರಣಿ ಸ್ಥಾಪಿಸಿದರು. ಸುತ್ತಲಿನ ಪ್ರದೇಶದಲ್ಲಿ ಹತ್ತಿಯನ್ನು ಹೇರಳವಾಗಿ ಬೆಳೆಯಲಾಗುತ್ತಿತ್ತು. ಅಲ್ಲದೇ, ರೈಲು ಮತ್ತು ರಸ್ತೆ ಸಂಪರ್ಕ ಇದ್ದುದರಿಂದ ಸಾಗಾಣಿಕೆಗೂ ಅನುಕೂಲವಾಗಿತ್ತು. ಜೊತೆಗೆ, ಈ ಭಾಗದಲ್ಲಿ ಪ್ರಮುಖ ಕೈಗಾರಿಕೆಗಳ ಕೊರತೆಯಿಂದಾಗಿ ನಿರುದ್ಯೋಗದ ಸಮಸ್ಯೆಯೂ ಜನರನ್ನು ಬಾಧಿಸುತ್ತಿತ್ತು. ಅದಾಗಲೇ ಸಣ್ಣಮಟ್ಟದ ವ್ಯಾಪಾರಿ ಕೇಂದ್ರವಾಗಿಯೂ ಗುರುತಿಸಿಕೊಂಡಿದ್ದ ದಾವಣಗೆರೆಯಲ್ಲಿ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವೂ ದೊರಕಿತು. ಈ ಎಲ್ಲಾ ಕಾರಣಗಳಿಂದ ಕಾಟನ್‌ ಮಿಲ್‌ಗಳು ದಾವಣಗೆರೆಯನ್ನು ತನ್ನ ಕೇಂದ್ರಸ್ಥಾನವಾಗಿಸಿಕೊಂಡವು. ಡಿಸಿಎಂ ಗಿರಣಿಯ ಯಶಸ್ಸು ಮತ್ತಷ್ಟು ಗಿರಣಿಗಳು ಅಲ್ಲಿ ತಲೆಯೆತ್ತುವಂತೆ ಮಾಡಿದವು. ಶಂಕರ ಕಾಟನ್ ಮಿಲ್, ಸಿದ್ದೇಶ್ವರ ಕಾಟನ್ ಮಿಲ್ ಮತ್ತು ಯಲ್ಲಮ್ಮ ಕಾಟನ್ ಮಿಲ್ ಮುಂತಾದ ಸಂಸ್ಥೆಗಳು ನಗರದ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಇವುಗಳ ಜೊತೆಗೆ ಇತರ ಜವಳಿ ಘಟಕಗಳೂ ಶುರುವಾದವು. ದಾವಣಗೆರೆಯಲ್ಲಿ ಕೈಗಾರಿಕಾ ಕ್ರಾಂತಿ ಶುರುವಾಯಿತು.

ದಾವಣಗೆರೆಯ ಹತ್ತಿ ಗಿರಣಿಗಳು ನಗರದ ಆರ್ಥಿಕತೆಯಲ್ಲಿ ಮೂಲಭೂತ ಬದಲಾವಣೆಯನ್ನು ತಂದವು. ಗಿರಣಿಗಳ ಸ್ಥಾಪನೆಯಿಂದ ನೇರವಾಗಿ ಉದ್ಯೋಗ ಪಡೆದವರು ಮಾತ್ರವಲ್ಲದೆ, ಅವುಗಳ ಮೇಲೆ ಅವಲಂಬಿತವಾಗಿದ್ದ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ಸಾರಿಗೆ ಕಾರ್ಮಿಕರು, ಅಂಗಡಿಯವರು ಮತ್ತು ಮನೆ ಬಾಡಿಗೆದಾರರಿಗೂ ಹೊಸ ಆದಾಯದ ಅವಕಾಶಗಳು ತೆರೆದುಕೊಂಡವು. ನೋಡನೋಡುತ್ತಿದ್ದಂತೆಯೇ ಅಕ್ಕಪಕ್ಕದ ಗ್ರಾಮೀಣ ಭಾಗಗಳಿಂದ ಮತ್ತು ತಮಿಳುನಾಡಿನಂತಹ ದೂರದ ಸ್ಥಳಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ದಾವಣಗೆರೆಯತ್ತ ಹರಿದುಬಂದರು. ಹೀಗೆ ತಮಿಳುನಾಡಿನಿಂದ ಉದ್ಯೋಗವರಸಿ ವಲಸೆ ಬಂದ ಒಂದು ಬಡ ಕಾರ್ಮಿಕ ಕುಟುಂಬದ ಬಾಲಕನೇ ಕಾಮ್ರೇಡ್‌ ಪಂಪಾಪತಿ!

ಕಾರ್ಮಿಕ ಶಕ್ತಿಯ ಉದಯ

1960ರಿಂದ 1970ರ ಅವಧಿಯ ನಡುವೆ ದಾವಣಗೆರೆ ಕಾಟನ್ ಮಿಲ್ಸ್ ಒಂದರಲ್ಲೇ ಸುಮಾರು 5,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. 1970ರ ದಶಕದ ಮಧ್ಯಭಾಗದಲ್ಲಿ ನಗರದ ಜವಳಿ ಉದ್ಯಮಗಳಲ್ಲಿ ಸುಮಾರು 10,000 ಜನರು ಕೆಲಸ ಮಾಡುತ್ತಿದ್ದರು. ನಗರದ ಜನಸಂಖ್ಯೆಯಲ್ಲಿ ಕಾರ್ಮಿಕ ವರ್ಗದ ಪ್ರಭಾವ ಹಿಗ್ಗಲಾರಂಭಿಸಿತು. ಜೊತೆಗೆ ಬಂಡವಾಳಶಾಹಿ ಗಿರಣಿ ಮಾಲೀಕರಿಂದ ಅವರ ಸಮಸ್ಯೆಗಳೂ ಹೆಚ್ಚಲಾರಂಭಿಸಿದವು. ಶ್ರಮಕ್ಕೆ ಸರಿಯಾದ ವೇತನ ನೀಡದೆ, ಕಾರ್ಮಿಕರ ನಿರ್ವಹಣೆಯಲ್ಲಿ ಪಕ್ಷಪಾತಿ-ಸ್ವೇಚ್ಛೆಯ ಧೋರಣೆಯನ್ನು ಅನುಸರಿಸುತ್ತಾ ಮಾಲೀಕರು ಕಾರ್ಮಿಕರನ್ನು ಶೋಷಿಸಲು ಮುಂದಾದರು. ಆಗ ಅವರಿಗೆಲ್ಲ ತಮ್ಮ ಹಕ್ಕುಗಳಿಗಾಗಿ ಒಗ್ಗೂಡುವ ಅನಿವಾರ್ಯತೆ ಮನದಟ್ಟಾಯಿತು.

ಒಂದೇ ಗಿರಣಿಯಲ್ಲಿ ನೂರಾರು ಅಥವಾ ಸಾವಿರಾರು ಜನರು ಕೆಲಸ ಮಾಡುವುದರಿಂದ ಅವರ ಸಮಸ್ಯೆಗಳೂ ಸಾಮಾನ್ಯವಾಗಿದ್ದವು. ವೇತನ ಕಡಿತ, ಕೆಲಸದ ಅವಧಿ, ಕೆಲಸದ ಭದ್ರತೆ, ವಜಾ, ಕಾರ್ಮಿಕ ಕಲ್ಯಾಣ ಮತ್ತು ನಿರ್ವಹಣೆಯ ನಿರ್ಧಾರಗಳ ಬಗ್ಗೆ ಅಸಮಾಧಾನ ಉಂಟಾದಾಗ ಕಾರ್ಮಿಕರು ಒಟ್ಟಾಗಿ ಪ್ರತಿಕ್ರಿಯಿಸುವುದು ಸಾಮಾನ್ಯವಾಯಿತು. ಇದಕ್ಕೊಂದು ಸಂಘಟನೆಯ ರೂಪ ಅನಿವಾರ್ಯವಾಗಿದ್ದರಿಂದ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡವು. ಆ ಕಾರ್ಮಿಕ ಸಂಘಟನೆಗಳೇ ದಾವಣಗೆರೆಯ ಕಮ್ಯುನಿಸ್ಟ್ ರಾಜಕೀಯದ ತಳಹದಿ ಎನ್ನಬಹುದು. 1966ರಲ್ಲಿ ದಾವಣಗೆರೆ ಕಾಟನ್‌ ಮಿಲ್ಸ್‌ ಆಡಳಿತ ಮಂಡಳಿಯು 77 ಕಾರ್ಮಿಕರನ್ನು ವಜಾ ಮಾಡಿದಾಗ ಕಾರ್ಮಿಕರ ಅಸೋಸಿಯೇಷನ್‌ ನ್ಯಾಯಾಲಯದಲ್ಲಿ ದಾವೆ ಹೂಡಿತು. ಬಹುಶಃ ಅದುವೇ, ಕಾರ್ಮಿಕ ಸಂಘಟನೆಯ ಮೊಟ್ಟಮೊದಲ ಕಾನೂನಾತ್ಮಕ ಹೋರಾಟ.

ಕಮ್ಯುನಿಷ್ಟ್‌ ರಾಜಕಾರಣದ ಪ್ರಾಬಲ್ಯ

ಸಹಸ್ರಾರು ಸಂಖ್ಯೆಯಲ್ಲಿದ್ದ ಕಾರ್ಮಿಕರ ಸಂಘಟನೆಗಳ ಬಲವನ್ನು ವಿಸ್ತಾರದ ರಾಜಕೀಯ ಶಕ್ತಿಯಾಗಿ ಪರಿವರ್ತಿಸುವಲ್ಲಿ ಕಮ್ಯುನಿಷ್ಟ್ ನಾಯಕರು ಯಶಸ್ವಿಯಾದರು. ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳು ನಗರದಲ್ಲಿ ಒಂದು ದೊಡ್ಡ ಸಮೂಹವಾಗಿದ್ದರು. ಇವರ ಸಮಸ್ಯೆಗಳನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಕ್ಕೆ ಚುನಾವಣೆಯಲ್ಲಿ ಗಮನಾರ್ಹ ಬೆಂಬಲ ದೊರೆಯುವ ಪರಿಸ್ಥಿತಿ ಇತ್ತು. ಕಮ್ಯುನಿಸ್ಟ್ ಪಕ್ಷವು ಮೂಲತಃ ಕಾರ್ಮಿಕರ ಹಕ್ಕುಗಳು, ವೇತನ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳ ಸುತ್ತಲೇ ತನ್ನ ರಾಜಕೀಯ ಗಮನವನ್ನು ಕೇಂದ್ರೀಕರಿಸಿದ ಪಕ್ಷವಾದ್ದರಿಂದ ಕಾರ್ಮಿಕ ಸಂಘಟನೆಗಳು ಕಮ್ಯುನಿಷ್ಟ್‌ ಪಕ್ಷವಾಗಿ ವಿಸ್ತರಣೆಗೊಂಡವು.

ಈ ರಾಜಕೀಯ ಪರಿವರ್ತನೆಯನ್ನು ಸಾಧಿಸಿದ ಕಮ್ಯುನಿಷ್ಟ್‌ ನಾಯಕರಲ್ಲಿ ಕಾಮ್ರೇಡ್‌ ಪಂಪಾಪತಿ ಪ್ರಮುಖರು. ಇವರು ದಾವಣಗೆರೆ ವಿಧಾನ ಸಭಾಕ್ಷೇತ್ರದಿಂದ ಮೂರುಬಾರಿ ಶಾಸಕರಾಗಿದ್ದರು. ಅದಕ್ಕೂ ಮೊದಲು ಅವರು ಪುರ ಸಭೆ ನಂತರ ನಗರ ಸಭೆಗಳ ಅಧ್ಯಕ್ಷರಾಗಿಯೂ ಪ್ರಾಬಲ್ಯ ಸಾಬೀತು ಮಾಡಿದ್ದರು. ದಾವಣಗೆರೆಯಲ್ಲಿ ಅಷ್ಟೊತ್ತಿಗಾಗಲೇ ಘಟಾನುಘಟಿ ರಾಜಕೀಯ ನಾಯಕರುಗಳು ರಾಜಕೀಯ ಪರಿಸರದಲ್ಲಿ ತಮ್ಮದೇ ಆದ ಪಟ್ಟುಗಳನ್ನು ಪ್ರಯೋಗಿಸಿದ್ದರು. ಆಗಿನ್ನೂ RSS ರಾಜಕೀಯ ಪ್ರತಿನಿಧಿಯಾದ ಜನಸಂಘ ಅಷ್ಟೇನು ಹೆಸರು ಮಾಡಿರಲಿಲ್ಲ. ಸ್ವಾತಂತ್ಯ್ರ ಚಳವಳಿಯ ಹೋರಾಟದ ಕಾರಣಕ್ಕೆ ಕಾಂಗ್ರೆಸ್‌ ತನ್ನ ಪಾರುಪತ್ಯ ಮೆರೆಯುತ್ತಿತ್ತು. ಸಂಸ್ಥಾ ಕಾಂಗ್ರೇಸಿನ ನಾಯಕರಾಗಿ ಶಿವಾನಂದಸ್ವಾಮಿ ತಮ್ಮ ಪ್ರಭಾವ ಹೊಂದಿದ್ದರು. ಶಾಮನೂರು ಶಿವಶಂಕರಪ್ಪ, ಕೇಶವಮೂರ್ತಿಯಂತವರು ಅವರ ನೆರಳಿನ ಮೊಳಕೆಯಂತಿದ್ದರು. ದಾವಣಗೆರೆಯಲ್ಲಿ ಲಿಂಗಾಯತ ಜಾತಿಯ ಪ್ರಾಬಲ್ಯ. ಅದರಲ್ಲೂ, ಸಾದರ ಲಿಂಗಾಯತರಿಗಿಂತ ಬಣಜಿಗ ಸಮುದಾಯ ರಾಜಕೀಯವಾಗಿ ಪ್ರಬಲವಾಗಿತ್ತು. ಬಣಜಿಗ ಸಮುದಾಯದ ವಕೀಲರಾಗಿದ್ದ ಕೊಟ್ರುಬಸಪ್ಪನವರು ಭದ್ರಾ ಸಹಕಾರಿ ಸಕ್ಕರೆ ಕಂಪನಿ ನೆಲೆಗೊಳ್ಳಲು ಶ್ರಮಿಸಿದವರು. ಬಾಪೂಜಿ ಬ್ಯಾಂಕು ಸ್ಥಾಪಿಸಿ ಆರ್ಥಿಕವಾಗಿ, ಮತ್ತು ಮೆಡಿಕಲ್‌ ಕಾಲೇಜು ಶುರು ಮಾಡಿ ಶೈಕ್ಷಣಿಕವಾಗಿ ವಿಸ್ತರಣೆಗೊಳ್ಳಲು ದಾವಣಗೆರೆಗೆ ಭದ್ರ ಬುನಾದಿ ಹಾಕಿದ್ದರು. ಸ್ಥಳೀಯ ರಾಜಕಾರಣದ ಮೇಲೆ ಅವರ ಪ್ರಭಾವವೂ ಇತ್ತು. ಇಂಥಾ ರಾಜಕೀಯ ವಾತಾವರಣದ ನಡುವೆ ಪಂಪಾಪತಿಯವರು ಕಾರ್ಮಿಕ ಶಕ್ತಿಯನ್ನು ಕಮ್ಯುನಿಷ್ಟ್‌ ಶಕ್ತಿಯಾಗಿ ಬೆಳೆಸಿ ನಿಲ್ಲಿಸಿದರು.

ಪಂಪಾಪತಿಯವರ ರಾಜಕೀಯ ಪರ್ವ

ಕಾಮ್ರೇಡ್ ಪಂಪಾಪತಿ ನಾಯಕತ್ವದಲ್ಲಿ ದಾವಣಗೆರೆಯ ಕಮ್ಯುನಿಸ್ಟ್ ರಾಜಕಾರಣವನ್ನು ಸುವರ್ಣಾಕ್ಷರಗಳಲ್ಲಿ ಬರದಿಡುವಂತದ್ದು ಎಂದರೂ ತಪ್ಪಲ್ಲ. ಹಾಗೆ ನೋಡಿದರೆ, ಪಂಪಾಪತಿ ವಿಪರೀತ ಓದಿಕೊಂಡವರಲ್ಲ. ಓದಿದ್ದು ಮಿಡ್ಲ್‌ ಸ್ಕೂಲ್‌ವರೆಗೆ ಮಾತ್ರ. ಅಂತಹ ವ್ಯಕ್ತಿಗೆ ಅವತ್ತಿನ ಕಾಲದ ಕಾರ್ಮಿಕ ಚಳುವಳಿಯಾಗಲಿ, ಕಮ್ಯುನಿಸ್ಟ್ ಪಾರ್ಟಿಯ ಸೈದ್ದಾಂತಿಕ ವಿಚಾರಗಳಾಗಲಿ, ಅಥವಾ ಕಾರ್ಲ್ ಮಾರ್ಕ್ಸ್‌ ಆಗಲಿ, ಲೆನಿನ್ ಆಗಲಿ ಅರ್ಥವಾಗುವುದು ಕಠಿಣ. ಆದರೆ ಪಂಪಾಪತಿ ಸೂಕ್ಷ್ಮಗ್ರಾಹಿ. ಪ್ರತಿರೋಧದ ಜಾಯಮಾನದವರು. ಅನ್ಯಾಯವನ್ನು ಕಂಡರೆ ಸಹಿಸದ ವ್ಯಕ್ತಿತ್ವ. ಅಂತಿಮವಾಗಿ ಕಮ್ಯುನಿಷ್ಟ್‌ ಸಿದ್ದಾಂತಗಳು ಹೇಳುವುದು ಇದನ್ನೇ ಅಲ್ಲವೇ. ಹಾಗಾಗಿ ಪಂಪಾಪತಿಯವರು ಕಮ್ಯುನಿಷ್ಟ್‌ ತತ್ವಗಳೆಡೆಗೆ ಆಕರ್ಷಿತರಾಗುತ್ತಾ ಬಂದರು. 

ಅವರ ತಂದೆತಾಯಿ ಸ್ವಾತಂತ್ರಪೂರ್ವದಲ್ಲೇ ತಮ್ಮ ಜೀವಾತ್ಮದ ನೆಲದ (ತಮಿಳುನಾಡಿನ ) ಬೇರು ಕಳಚಿಕೊಂಡು ದಾವಣಗೆರೆಗೆ ವಲಸೆ ಬಂದವರು. ಎಲ್ಲರೂ ನಿರಕ್ಷರಕುಕ್ಷಿಗಳೇ! ಪಂಪಾಪತಿ ಪ್ರಬುದ್ದಮಾನಕ್ಕೆ ಬಂದಾಗ ಅವರು ಕೂಲಿಕಾರ್ಮಿಕರಾಗಿ ಬದುಕಿನ ದಿಕ್ಕು ಕಂಡುಕೊಂಡರು. ನಂತರ ಅವರ ಬದುಕಿನಲ್ಲಿ ನಡೆದದ್ದೆಲ್ಲ ಕ್ರಾಂತಿಯ ಘಳಿಗೆಗಳು! ಪಾರ್ಟಿಯ ಐಡಿಯಾಲಜಿ ಅಧ್ಯಯನಕ್ಕಿಂತ ಬದುಕಿಬಂದ ಬಾಲ್ಯ ಮತ್ತು ಹೋರಾಟದ ಮನೋಭಾವಗಳೇ ಅವರನ್ನು ಕಮ್ಯುನಿಷ್ಟ್‌ ನಾಯಕನನ್ನಾಗಿ ರೂಪಿಸಿದವು. ಕ್ರಮೇಣ ಅವರು ಪ್ರಖರ ಕಮ್ಯುನಿಷ್ಟ್‌ ನಾಯಕ, ಚಿಂತಕರಾಗಿ ಬದಲಾದರು.

ಈ ಹಂತದಲ್ಲಿ ಅವರ ಬದುಕಿನ ಒಂದು ನಿದರ್ಶನ ನೆನಪಾಗುತ್ತಿದೆ. ಪಂಪಾಪತಿ ನಗರಸಭಾ ಅಧ್ಯಕ್ಷರಾಗಿದ್ದ ಅವಧಿ. ಅಷ್ಟರಲ್ಲಾಗಲೆ ಕಾರ್ಮಿಕ ಸಂಘಟನೆಗಳು, ಕಮ್ಯುನಿಷ್ಟ್‌ ರಾಜಕಾರಣ ದಾವಣಗೆರೆಯನ್ನು ದಟ್ಟವಾಗಿ ಆವರಿಸಿದ್ದವು. ಆಗ ನಗರಸಭೆಗೆ ಸದಸ್ಯನಾಗಿ ಆಯ್ಕೆಯಾಗಿದ್ದ ಜಯಣ್ಣ ಜಾಧವ್‌ ಎಂಬ ಪಾರ್ಟಿ ಕೇಡರ್‍‌ ಸದಸ್ಯ ಒಂದು ದಿನ ಪಂಪಾಪತಿಯವರ ಮುಂದೆ ಬಂದು ನಿಲ್ಲುತ್ತಾನೆ. ಆತನ ಮುಖದಲ್ಲಿ ಏನೋ ಒಂದು ಕೊಸರಾಟ ಇತ್ತು. ಅದನ್ನು ಗುರುತಿಸಿದ ಪಂಪಾಪತಿಯವರು ಮಾತಿಗೆಳೆಯುತ್ತಾರೆ. ಆಗ ಆತ ಅಳುಕುತ್ತಲೇ “ಕಾಮ್ರೇಡ್ ನನಗೆ ನನ್ನದೇ ಎಂಬ ಅಂಗೈ ಅಗಲದ ಜಾಗವಿಲ್ಲ. ಹಾಗಾಗಿ ನಗರನಭೆಯಿಂದ ನನಗೊಂದು ಸಣ್ಣ ನಿವೇಶನ ಕೊಡಲು ಸಾಧ್ಯವೆ?” ಎಂದು ಕೇಳುತ್ತಾನೆ. ಪಂಪಾಪತಿ ತುಂಬಾ ಸಿಟ್ಟಿನ, ಉಗ್ರ ಪ್ರತಿಕ್ರಿಯೆಯ ಮನುಷ್ಯ ಎಂದು ಹೆಸರಾಗಿದ್ದವರು. ಆದರೆ ಅವತ್ತು ಅವರು ಸಿಟ್ಟಿಗೇಳಲಿಲ್ಲ. ಸಮಾಧಾನದ ಧ್ವನಿಯಲ್ಲೆ, “ಜಯಣ್ಣಾ, ನಾವು ಕಾರ್ಮಿಕ ವರ್ಗದವರ ಪ್ರತಿನಿಧಿಗಳು. ನಮ್ಮನ್ನು ನಾಯಕರೆಂದು ಆಯ್ಕೆ ಮಾಡಿರುವ ಸಾವಿರಾರು ಕಾರ್ಮಿಕರು ತಮ್ಮದಲ್ಲದ ಯಾರದೋ ಗುಡಿಸಲುಗಳಲ್ಲಿ ನಿರಾಶ್ರಿತರಂತೆ ವಾಸಿಸುತ್ತಿದ್ದಾರೆ. ಅವರು ನಮ್ಮನ್ನು ನಂಬಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಹೊಣೆ. ನಾವು ಬೀದಿಯಲ್ಲಿ ಹೋರಾಡಿ ಅವರಿಗೆ ನ್ಯಾಯಸಮ್ಮತ ಹಕ್ಕು ಕೊಡಿಸಬೇಕು. ಅಂತದ್ದರಲ್ಲಿ ಅವರನ್ನು ಬೀದಿಯಲ್ಲಿ ಮಲಗಿಸಿ, ನಾವು ಅರಮನೆ ಕಟ್ಟಿಕೊಂಡರೆ ಬೇರೆ ಪಕ್ಷಗಳ ಭ್ರಷ್ಟ ರಾಜಕಾರಣಿಗಳಿಗೂ, ನಮ್ಮ ಕಮ್ಯುನಿಷ್ಟ್‌ ರಾಜಕಾರಣಕ್ಕೂ ಏನು ವ್ಯತ್ಯಾಸ?” ಎಂದು ಮರುಪ್ರಶ್ನಿಸುತ್ತಾರೆ. ಸೈಟಿನ ಲೋಭೆ ಹತ್ತಿಸಿಕೊಂಡು ಬಂದಿದ್ದ ಆ ಸದಸ್ಯನಲ್ಲಿ ಆದರ್ಶದ ಚಿಲುಮೆಯನ್ನು ಚಿಮ್ಮಿಸಿ ಕಳಿಸುತ್ತಾರೆ.

ಒಂದುವೇಳೆ, ಕಮ್ಯುನಿಷ್ಟ್‌ ತತ್ವ ಸಿದ್ದಾಂತಗಳ ಆಳ ಅರಿವು ಇಲ್ಲದೆ; ಕೇವಲ ರಾಜಕೀಯ ಅವಕಾಶವಾದಿತನಕ್ಕಾಗಿ ಕಾರ್ಮಿಕ ಬಲವನ್ನು ರಾಜಕಾರಣಕ್ಕೆ ಬಳಸಿಕೊಂಡು ಗೆದ್ದವರಾಗಿದ್ದರೆ ಇಂಥಾ ಪ್ರಬುದ್ಧತೆ ತೋರಲು ಸಾಧ್ಯವಿತ್ತೇ? ಕೇವಲ ಬೇರೆಯವರಿಗೆ ಇಂಥಾ ಉಪದೇಶಗಳನ್ನು ಹೇಳಿದ್ದು ಮಾತ್ರವಲ್ಲ, ತಮ್ಮ ಬದುಕಿನುದ್ದಕ್ಕು ಹಾಗೆಯೇ ಬದುಕಿದ ಕಮ್ಯುನಿಷ್ಟ್‌ ಸಿದ್ದಾಂತಿ ಅವರು. ಜನರ ನಡುವೆ ಆ ವಿಶ್ವಾಸವನ್ನು ಗಳಿಸಿಕೊಂಡಿದ್ದರಿಂದಲೇ ತಮಿಳುನಾಡಿನಿಂದ ವಲಸೆಬಂದ ಸಣ್ಣ ಜಾತಿಯ ವ್ಯಕ್ತಿ, ಪ್ರಬಲ ಜಾತಿ ರಾಜಕಾರಣವನ್ನು ಹಿಮ್ಮೆಟ್ಟಿಸಿ ದಾವಣಗೆರೆಯಲ್ಲಿ ಮೂರು ಬಾರಿ ಗೆದ್ದು ಶಾಸಕರಾಗಲು ಸಾಧ್ಯವಾಯ್ತು. ದಾವಣಗೆರೆಯಲ್ಲಿ ಇವತ್ತಿಗೂ ಕಾಣಸಿಗುವ ಲೆನಿನ್‌ ನಗರ, ಕಮ್ಯುನಿಷ್ಟ್‌ ನಾಯಕ ಎಸ್‌ ಎ ಡಾಂಗೆ ಸ್ಮರಣಾರ್ಥ ನಾಮಕರಣ ಮಾಡಲಾದ ಡಾಂಗೆ ಪಾರ್ಕ್‌ಗಳು ಅಲ್ಲಿ ಪಂಪಾಪತಿಯವರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿದ್ದ ಕಮ್ಯುನಿಷ್ಟ್‌ ರಾಜಕಾರಣವನ್ನು ಪ್ರತಿನಿಧಿಸುತ್ತವೆ. ಆದರೆ ಈ ಪ್ರತಿನಿಧಿಕರಣ, ಜನಮಾನಸದ ನಡುವೆ ಸಾಧ್ಯವಾಗದೆ ಹೋದದ್ದು ದುರಂತ. ತೊಂಬತ್ತರ ದಶಕ ಸಮೀಪಿಸುವ ವೇಳೆಗಾಗಲೆ ದಾವಣಗೆರೆಯಲ್ಲಿ ಕಾಂಗ್ರೆಸ್‌ ಪ್ರವರ್ಧಮಾನಕ್ಕೆ ಬಂದಿತು. ಶಾಮನೂರು ಶಿವಶಂಕರಪ್ಪ ಅದರ ಸಾರಥಿಯಾದರು.

ಹತ್ತಿ ಗಿರಣಿಗಳ ಅವಸಾನದಿಂದ ಕಾರ್ಮಿಕರ ಸಾಮಾಜಿಕ ಬದುಕುಗಳು ಪಲ್ಲಟವಾದವು. ಬೇರೆಬೇರೆ ಉದ್ಯೋಗಗಳನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಒಂದೇಕಡೆ ಸಾವಿರ ಸಂಖ್ಯೆಯಲ್ಲಿ ಕಲೆಯುತ್ತಿದ್ದ ಕಾರ್ಮಿಕರು, ಬಿಡಿಬಿಡಿ ಉದ್ಯೋಗಿಗಳಾದರು. ಸಂಘಟನೆಗೆ ಅವಕಾಶ ಕಡಿಮೆಯಾಯಿತು. ಬಹಳಷ್ಟು ಜನ ನಗರವನ್ನೆ ತೊರೆದು ಬೇರೆಡೆ ವಲಸೆ ಹೋದರು. ಕಾರ್ಮಿಕರ ಬಲವನ್ನೆ ಅವಲಂಭಿಸಿ ಬಲಗೊಂಡಿದ್ದ ಕಮ್ಯುನಿಷ್ಟ್‌ ಪಕ್ಷ ಕೂಡಾ ಸೊರಗಲಾರಂಭಿಸಿತು. ಹಾಗಂತ ಹತ್ತಿ ಗಿರಣಿಗಳ ಅವಸಾನ ಮಾತ್ರವೇ ಕಮ್ಯುನಿಷ್ಟ್‌ ರಾಜಕಾರಣದ ಹಿನ್ನಡೆಗೆ ಕಾರಣ ಎನ್ನಲಾಗದು. ಇಲ್ಲಿ ಹಲವು ಕಾರಣಗಳು ಎದ್ದು ನಿಲ್ಲುತ್ತವೆ. ಒಂದು ರಾಜಕೀಯ ಪಕ್ಷವೆಂದ ಮೇಲೆ, ಸವಾಲುಗಳು ಸಹಜವಾದುದು. ಆದರೆ ಅಂತಹ ಸವಾಲುಗಳನ್ನು ಎದುರಿಸುವಲ್ಲಿ ಕಾಲದ ತುರ್ತನ್ನು ಅರ್ಥ ಮಾಡಿಕೊಳ್ಳದೆ ಹೋದಾಗ ಸಿದ್ದಾಂತ ಎಷ್ಟೇ ಬಲವಾಗಿದ್ದರೂ, ರಾಜಕೀಯ ಪಕ್ಷಗಳು ಸೊರಗುತ್ತವೆ. ಅಂತಹ ಏರಿಳಿತ ದಾವಣಗೆರೆ ಕಮ್ಯುನಿಷ್ಟ್‌ ಪಕ್ಷದಲ್ಲೂ ಘಟಿಸಿದವೇ? ಹಾಗಾಗಿಯೇ ಅದು ಅಲ್ಲಿ ಕುಂದಿತೇ? ಮುಂದಿನ ಭಾಗದಲ್ಲಿ ಚರ್ಚಿಸೋಣ…

2 thoughts on “ಕಾಟನ್‌ಸಿಟಿ ದಾವಣಗೆರೆಯಲ್ಲಿ ಕಮ್ಯುನಿಷ್ಟ್‌ ರಾಜಕಾರಣದ ಏಳು-ಬೀಳು: ಭಾಗ 1”

  1. ಅದ್ಭುತ ನಿಜ ಸಂಗತಿ ಇನ್ನು ಅವರ ಜೊತೆಗಿದ್ದು ಪಕ್ಷಕ್ಕಾಗಿ ತ್ಯಾಗಮಾಡಿದ ಆನಂದ್ ತೀರ್ಥ ರಾಮಚಂದ್ರಪ್ಪ ಕಾರ್ಮಿಕರ ಹೋರಾಟದಲ್ಲಿ ಬಲಿದಾನವಾದ ಶೇಖರಪ್ಪ ಮತ್ತು ಸಂಗಡಿಗರ ಬಗ್ಗೆ ಪ್ರಸ್ತಾಪಿಸಿದರೆ ಚೆನ್ನಾಗಿತ್ತು. ನನ್ನ ಅಭಿಪ್ರಾಯದ ಪ್ರಕಾರ ವಾಸ್ತ್ಯವ ಮತ್ತು ನಿಜ ಸಂಗತಿ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಧನ್ಯವಾದಗಳು.

  2. ದಾವಣಗೆರೆ ಕಮ್ಯುನಿಷ್ಟ್ ಹೋರಾಟಗಳ‌ ಸರಣಿ ಆರಂಭವಾಗಿರುವುದು ಸೂಕ್ತವಾಗಿದೆ.
    ಇದರ ಹಿನ್ನೆಯ ಬೆಳಕನ್ನು ಇಂದಿನ‌ ಸಮಾಜಕ್ಕೆ ಬೇಕಿದೆ.ಮುಖ್ಯ ಹೋರಾಟದ ರೂಪಕಗಳೇನಾದರೂ ಇದ್ದರೆ ಈ ರೀತಿಯ ಬರವಣಿಗೆಗೆ ಸೂಕ್ತ.
    ಮುಂದಿನ ಬರವಣಿಗೆಯಲ್ಲಿ ಜಿಲ್ಲೆಯಾಗಿ ಚಿತ್ರದುರ್ಗದಲ್ಲಿ ಕಮ್ಯೂನಿಸ್ಟ್‌ ಪ್ರಭಾವ ಬಾರದೇ ಇರುವುದಕ್ಕೆ ಕಾರಣಗಳ ವಿಶ್ಲೇಷಣೆ ನೀಡಲು ಸಾಧ್ಯವೇ? ನೊಡಿ..ಸರ್.

Leave a Reply

Your email address will not be published. Required fields are marked *