ಇಂದಿನ ಆಧುನಿಕ ಸಮಾಜದಲ್ಲಿ ಮನುಷ್ಯನ ವ್ಯಕ್ತಿತ್ವ ಮತ್ತು ಗೌರವವನ್ನು ಅಳೆಯುವ ಮಾನದಂಡಗಳು ಬದಲಾಗಿವೆ. ಮೈಮೇಲೆ ತೊಟ್ಟಿರುವ ಬಟ್ಟೆಯ ಬ್ರ್ಯಾಂಡ್ ಯಾವುದು? ಕಾಲಿಗೆ ಹಾಕಿರುವ ಚಪ್ಪಲಿಯ ಬೆಲೆ ಎಷ್ಟು? ಓಡಾಡುವ ವಾಹನ ಎಷ್ಟು ದುಬಾರಿ? ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ಯಾವ ಪ್ರತಿಷ್ಠಿತ ಕಂಪನಿಯದ್ದು? — ಇವುಗಳೇ ವ್ಯಕ್ತಿಯ ಯೋಗ್ಯತೆಯನ್ನು ನಿರ್ಧರಿಸುವ ದಿನಗಳಿವು.
ಆದರೆ, ಒಮ್ಮೆ ಎದೆಯ ಮೇಲೆ ಕೈಯಿಟ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತು ಪ್ರಶ್ನೆಯೊಂದಿದೆ: ಕೇವಲ ಬ್ರ್ಯಾಂಡೆಡ್ ಬಟ್ಟೆ, ಚಪ್ಪಲಿ, ವಾಹನ ಮತ್ತು ಫೋನ್ಗಳಿಂದಲೇ ನಮ್ಮ ಜೀವನ ನಡೆದುಬಿಡುತ್ತದೆಯೇ? ಖಂಡಿತ ಇಲ್ಲ.
ಬಟ್ಟೆಯ ಮೂಲ ಉದ್ದೇಶ ಮಾನ ಮುಚ್ಚುವುದು ಮತ್ತು ಕಾಲದ ಹವಾಮಾನದಿಂದ ದೇಹವನ್ನು ಕಾಪಾಡುವುದು. ಚಪ್ಪಲಿಯ ಕೆಲಸ ಮುಳ್ಳು-ಕಲ್ಲುಗಳಿಂದ ಪಾದಗಳಿಗೆ ರಕ್ಷಣೆ ನೀಡುವುದು. ವಾಹನದ ಉದ್ದೇಶ ನಮ್ಮನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವುದು. ಮೊಬೈಲ್ ಫೋನಿನ ಕಾರ್ಯ ಸಂಬಂಧಗಳನ್ನು ಬೆಸೆಯುವುದು ಮತ್ತು ಸಂವಹನ ನಡೆಸುವುದು. ಈ ಮೂಲಭೂತ ಅವಶ್ಯಕತೆಗಳು ಪೂರೈಕೆಯಾಗುವ ಬದಲು, ಅವುಗಳು ಕೇವಲ ಪ್ರದರ್ಶನದ ವಸ್ತುಗಳಾಗಿ ಮಾರ್ಪಟ್ಟಾಗ ಮನುಷ್ಯ ತನ್ನ ನೈಜ ಅಸ್ತಿತ್ವವನ್ನೇ ಮರೆಯತೊಡಗುತ್ತಾನೆ.
ನಾವು ಹೊರಗಿನ ಸಮಾಜಕ್ಕೆ ತೋರಿಸಿಕೊಳ್ಳುವ ಈ ತೋರಿಕೆಯ ವೈಭವವನ್ನು ನಿಜವಾದ ‘ಐಷಾರಾಮಿ ಜೀವನ’ ಎನ್ನಲು ಸಾಧ್ಯವೇ? ದೇಹಕ್ಕೆ ಬ್ರ್ಯಾಂಡೆಡ್ ಉಡುಪು ತೊಡಿಸಿ, ಮನಸ್ಸಿನಲ್ಲಿ ಕಪಟ, ಸ್ವಾರ್ಥ ಮತ್ತು ಅಶಾಂತಿಯನ್ನು ತುಂಬಿಕೊಂಡಿದ್ದರೆ ಅದು ಯಾವ ರೀತಿಯ ಐಷಾರಾಮ? ನಿಜವಾದ ಐಷಾರಾಮವಿರುವುದು ಮೈಮೇಲಿನ ಲೇಬಲ್ಗಳಲ್ಲಲ್ಲ; ರಾತ್ರಿ ಕಣ್ಣು ಮುಚ್ಚಿದಾಗ ಕಳವಳವಿಲ್ಲದೆ ಬರುವ ನೆಮ್ಮದಿಯ ನಿದ್ದೆಯಲ್ಲಿ. ಶಾಂತ ಮನಸ್ಸು ಮತ್ತು ನಿರ್ಮಲ ಹೃದಯವನ್ನು ಮೀರಿದ ವೈಭೋಗ ಜಗತ್ತಿನಲ್ಲಿ ಇನ್ನೊಂದಿಲ್ಲ.
ಹಾಗಾದರೆ ಇದು ಯಾವ ರೀತಿಯ ಶ್ರೀಮಂತಿಕೆ? ಇದು ಕೇವಲ ಕಣ್ಣಿಗೆ ಕಾಣುವ ‘ವಸ್ತುಗಳ ಶ್ರೀಮಂತಿಕೆ’ಯೇ ಹೊರತು ‘ವ್ಯಕ್ತಿತ್ವದ ಶ್ರೀಮಂತಿಕೆ’ಯಲ್ಲ. ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಇರಬಹುದು, ಗ್ಯಾರೇಜ್ನಲ್ಲಿ ದುಬಾರಿ ಕಾರುಗಳು ನಿಲ್ಲಬಹುದು. ಆದರೆ, ದಾರಿಯಲ್ಲಿ ಬಿದ್ದು ನರಳುತ್ತಿರುವ ಒಬ್ಬ ಅಸಹಾಯಕನ ಕಣ್ಣೀರು ಒರೆಸುವ, ಒಬ್ಬರ ನೋವಿಗೆ ಮಿಡಿಯುವ ಕರುಣೆ ನಮ್ಮ ಹೃದಯದಲ್ಲಿ ಇಲ್ಲದಿದ್ದರೆ; ಮನುಷ್ಯ-ಮನುಷ್ಯರ ನಡುವೆ ಜಾತಿಮತಗಳ ಗೋಡೆಕಟ್ಟದೆ ಎಲ್ಲರೊಂದಿಗೆ ಸಹಬಾಳುವ ಅನುಭೂತಿ ಇಲ್ಲದಿದ್ದರೆ ಆ ಹಣ ಮತ್ತು ಆಡಂಬರಕ್ಕೆ ಕಿಂಚಿತ್ತೂ ಮೌಲ್ಯವಿಲ್ಲ. ಕರುಣೆ, ಪ್ರೀತಿ ಮತ್ತು ಸಹಾನುಭೂತಿ ಇಲ್ಲದ ಶ್ರೀಮಂತಿಕೆ ಬರಿದಾದ ಕವಚದಂತೆ.
ನಮ್ಮ ನಡುವೆ ಎಷ್ಟೋ ಜನ ದೊಡ್ಡ ಉದ್ಯೋಗ, ಅಂತಸ್ತು, ಪ್ರಭಾವ ಮತ್ತು ಬಿರುದುಗಳನ್ನು ಹೊತ್ತು ತಿರುಗುತ್ತಾರೆ. ಆದರೆ ತಮ್ಮ ಸುತ್ತಮುತ್ತಲಿನ ಜನರ ಸಂಕಷ್ಟಕ್ಕೆ ಕರಗದ, ನೋವಿಗೆ ಸ್ಪಂದಿಸದ ಕಲ್ಲು ಮನಸ್ಸಿನ ವ್ಯಕ್ತಿತ್ವ ಎಷ್ಟೇ ದೊಡ್ಡದಾಗಿದ್ದರೇನು ಫಲ? ಬಿಸಿಲಲ್ಲಿ ಬಳಲಿದವರಿಗೆ ನೆರಳು ನೀಡಲಾಗದ ಜಾಲಿ ಮರವೊಂದು ಬೆಟ್ಟದಷ್ಟು ಬೆಳೆದರೇನು ಪ್ರಯೋಜನ? ನೈಜ ವ್ಯಕ್ತಿತ್ವ ಅಡಗಿರುವುದು ನಾವು ಸಮಾಜದಿಂದ ಏನು ಪಡೆದುಕೊಂಡೆವು ಎಂಬುದರಲ್ಲಲ್ಲ; ನೋವಿನಲ್ಲಿರುವ ಜೀವಕ್ಕೆ ನಾವು ಹೇಗೆ ಆಸರೆಯಾದೆವು ಎಂಬುದರಲ್ಲಿ.
ಮನುಷ್ಯ ಜನ್ಮ ಸಿಕ್ಕಿರುವುದೇ ಪರಸ್ಪರ ಹಂಚಿಕೊಂಡು ಬದುಕಲು. ನಾಲ್ಕು ಜನರ ಹಸಿವು ನೀಗಿಸಿದಾಗ, ಅನಾಥ ಕಣ್ಣುಗಳಲ್ಲಿ ಭರವಸೆಯ ಬೆಳಕು ಮೂಡಿಸಿದಾಗ, ಯಾರದೋ ಸಂಕಷ್ಟಕ್ಕೆ ಹೆಗಲು ಕೊಟ್ಟಾಗ ಸಿಗುವ ಆಂತರಿಕ ತೃಪ್ತಿಯಿದೆಯಲ್ಲ — ಅದೇ ನಿಜವಾದ ಬ್ರ್ಯಾಂಡ್! ಕರುಣೆಯೇ ನಮ್ಮ ಅತ್ಯಂತ ಶ್ರೇಷ್ಠ ಆಭರಣವಾಗಬೇಕು, ಮಾನವೀಯತೆಯೇ ನಮ್ಮ ನಿತ್ಯದ ಜೀವನಶೈಲಿಯಾಗಬೇಕು. ಸಹಬಾಳುವೆಯೆ ನಮ್ಮ ವೈಭವವಾಗಬೇಕು.
ವಸ್ತುಗಳು ಕಾಲಕ್ರಮೇಣ ಹಳೆಯದಾಗುತ್ತವೆ, ಬಣ್ಣಗೆಡುತ್ತವೆ, ನಶಿಸಿಹೋಗುತ್ತವೆ. ಆದರೆ ಇನ್ನೊಬ್ಬರ ನೋವಿಗೆ ಮಿಡಿದು ನಾವು ಹಂಚಿದ ಪ್ರೀತಿ ಮತ್ತು ಮಾಡಿದ ನಿಸ್ವಾರ್ಥ ಸೇವೆ ಸದಾ ಜೀವಂತವಾಗಿರುತ್ತದೆ. ಆಡಂಬರದ ಮುಖವಾಡಗಳನ್ನು ಕಳಚಿ, ಜೀವಪರ ಕಳಕಳಿಯೊಂದಿಗೆ ಬದುಕುವುದೇ ಬದುಕಿನ ಪರಮ ಸಾರ್ಥಕತೆ.

ಲೇಖಕರು ವೃತ್ತಿಯಿಂದ ಆಭರಣ ವಿನ್ಯಾಸಕಾರ; ಪ್ರವೃತ್ತಿಯಿಂದ ಬರಹಗಾರ. ಪ್ರಕೃತಿ ಸಂರಕ್ಷಣೆ, ಜೀವಜಗತ್ತು, ಸಮಾಜಮುಖಿ ಬರಹಗಳ ಬರವಣಿಗೆ ಇವರ ಅಭಿರುಚಿ. ಹೊಸನಗರ ಭಾಗದ ಉರಗ ರಕ್ಷಕನಾಗಿಯೂ (ಸ್ನೇಕ್ ರೆಸ್ಕ್ಯೂ) ಗುರುತಿಸಿಕೊಂಡಿರುವ ಇವರು ಸೋನು ಕಮ್ಯುನಿಕೇಷನ್ ಸಂಸ್ಥೆಯ ಮೂಲಕ ಬಡವರ ಆರೋಗ್ಯ ಕಾಳಜಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಬಹುಮುಖಿ ವ್ಯಕ್ತಿತ್ವಕ್ಕೆ ನವದೆಹಲಿಯ ‘ವೆಲ್ ಎಜುಕೇಶನಲ್ ಆಂಡ್ ಪೀಸ್ ಕೌನ್ಸಿಲ್’ ವತಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ.
