ಸಾಹಿತ್ಯ ಮತ್ತು ರಾಜಕಾರಣ

ಪ್ರಿಯಾಂಕ್‌ ಖರ್ಗೆ ಪೋಸ್ಟೂ, ಹಾವೆಲ್ಸ್‌ ನಾಟಕವೂ, ದೇವನೂರರ ಸಲಹೆಯೂ

ಎರಡು ದಿನಗಳ ಹಿಂದೆ ಸಚಿವ ಪ್ರಿಯಾಂಕ್‌ ಖರ್ಗೆಯವರು ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್ ಗಮನಸೆಳೆಯಿತು. ಇತ್ತೀಚೆಗೆ ಕುಮಾರಸ್ವಾಮಿಯವರಿಗೂ, ಪ್ರಿಯಾಂಕ್‌ ಅವರಿಗೂ ನಡೆಯುತ್ತಿರುವ ಸಾರ್ವಜನಿಕ ವಾಗ್ವಾದ ಹೊಸದೇನಲ್ಲ. ತಮ್ಮ ಭಾಷೆಯ ಬಗ್ಗೆ ತಾವೇ ವಿಷಾದ ವ್ಯಕ್ತಪಡಿಸಿಕೊಳ್ಳುವಷ್ಟು ಏಕವಚನದ ದಾಳಿಗೆ ಕುಮಾರಸ್ವಾಮಿಯವರು ಮುಂದಾಗಿದ್ದುಂಟು. ಇಬ್ಬರ ನಡುವಿನ ವಾಗ್ವಾದ ಹಾಗೆ ಬೆಳೆದು ನಿಂತಿದೆ. ಹಾಗಾಗಿ ಮೊನ್ನೆ ಪ್ರಿಯಾಂಕ್‌ ಅವರ ಎಫ್‌ ಬಿ ಖಾತೆಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೆ ಹಾಕಿದ್ದ ಪೋಸ್ಟ್‌ ಕುಮಾರಸ್ವಾಮಿಯವರನ್ನೆ ಗುರಿಯಾಗಿಸಿಕೊಂಡಿತ್ತೆಂದು ಅರ್ಥವಾಗುತ್ತಿತ್ತು.

ಆದರೆ, ಗಮನಸೆಳೆದದ್ದು ಅದರೊಳಗಿದ್ದ ರಾಜಕಾರಣವಲ್ಲ, ಆ ರಾಜಕಾರಣವನ್ನು ಅಭಿವ್ಯಕ್ತಿಸಲು ಪೋಸ್ಟ್‌ ಬಳಸಿದ್ದ ಸಾಹಿತ್ಯ ಶೈಲಿ! ಇತ್ತೀಚಿನ ದಿನಗಳಲ್ಲಿ ತುಂಬಾ ಅಪರೂಪವೆನ್ನಬಹುದಾದ ಸಾಹಿತ್ಯಶೀಲ ಪೋಸ್ಟ್‌ ಅದಾಗಿತ್ತು. ಪುರಂದರ ದಾಸರ ನುಡಿ, ಸರ್ವಜ್ಞನ ವಚನಗಳನ್ನು ಬಳಸಿಕೊಂಡು ರೂಪಿಸಲಾದ ಆ ಬರಹ ರಾಜಕಾರಣವನ್ನು ಉಸಿರಾಡುತ್ತಿತ್ತಾದರೂ, ತನ್ನ ಸಾಹಿತ್ಯಿಕ ಹರವನ್ನೂ ಪ್ರದರ್ಶಿಸುತ್ತಿತ್ತು.

ಬಹುಶಃ ಪ್ರತಿಯೊಬ್ಬರಿಗೂ ಗೊತ್ತಿದೆ. ಇವತ್ತು ಯಾವುದೇ ರಾಜಕಾರಣಿಯ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಅವರೆ ಸ್ವತಃ ನಿರ್ವಹಿಸುವುದಿಲ್ಲ. ಅದಕ್ಕಾಗಿ ನಂಬಿಕಸ್ತ ಜನರನ್ನು ನೇಮಿಸಿಕೊಂಡಿರುತ್ತಾರೆ. ಇತ್ತಿತ್ತಲಾಗೆ, ಇದು ಒಂದು ಉದ್ಯಮವಾಗಿ ಬೆಳೆದ ನಂತರ ರಾಜಕಾರಣಿಗಳ ಸೋಷಿಯಲ್‌ ಮೀಡಿಯಗಳನ್ನು ಮ್ಯಾನೇಜ್‌ ಮಾಡುವ ಕಂಪನಿಗಳು ಹುಟ್ಟಿಕೊಂಡಿವೆ. ಇಂದಿನ ಎಐ ಯುಗದಲ್ಲಿ ಪ್ರತಿಯೊಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವುದರಿಂದ  ಒಬ್ಬ ರಾಜಕಾರಣಿಯ ಟ್ವೀಟನ್ನು, ಪೋಸ್ಟನ್ನು ಲಕ್ಷಾಂತರ ಜನ ಗಂಭೀರವಾಗಿ ಗಮನಿಸುತ್ತಾರೆ. ಆ ರಾಜಕಾರಣಿಯ social presence ಮಾತ್ರವಲ್ಲದೆ, ಆತನ stature, personalityಗಳನ್ನು ಕಟ್ಟಿನಿಲ್ಲಿಸುವ ಅವಕಾಶ ಈ ಕಂಪನಿಗಳ ಅಥವಾ ಸೋಷಿಯಲ್‌ ಮೀಡಿಯಾ ಖಾತೆಗಳ ನಿರ್ವಾಹಕರ ಕೈಯಲ್ಲಿರುತ್ತದೆ. ಇದೊಂದು ಜವಾಬ್ಧಾರಿಯುತ ಕೆಲಸ. ಯಾಕೆಂದರೆ ಇಂದಿನ ರಾಜಕಾರಣಿಗಳಂತು ಸೃಜನಶೀಲ ಅಭಿರುಚಿ, ಸಭ್ಯ ವರ್ತನೆ, ರಾಜಕೀಯ ಘನತೆಗಳನ್ನು ಕಳೆದುಕೊಂಡು ವರ್ತಿಸುತ್ತಿದ್ದಾರೆ. ಅವರಿಂದ ನಾವು ಆದರ್ಶಮಯ ನಡವಳಿಕೆಗಳನ್ನು ನಿರೀಕ್ಷಿಸುವುದು ದುಬಾರಿಯ ಮಾತು. ಕಡೇಪಕ್ಷ, ಸೋಷಿಯಲ್‌ ಮೀಡಿಯಾ ಪ್ಲ್ಯಾಟ್‌ಫಾರಂಗಳಲ್ಲಿ ಅವರನ್ನು ಪ್ರತಿನಿಧಿಸುವ ಇಂತಹ ನಿರ್ವಹಣಾ ವ್ಯಕ್ತಿ ಅಥವಾ ಸಂಸ್ಥೆಗಳಾದರೂ ಒಂದಷ್ಟು ಅಭಿರುಚಿ, ಸಂವೇದನೆಗಳನ್ನು ರೂಢಿಸಿಕೊಂಡು ತಮಗಿರುವ presentation ಮಿತಿಯಲ್ಲೆ ಸೃಜನಶೀಲ ರೀತಿಯಲ್ಲಿ ಅಭಿವ್ಯಕ್ತಗೊಳ್ಳಲು ಸಾಧ್ಯವಾದರೆ, ರಾಜಕಾರಣವನ್ನು ಒಂದಷ್ಟು ಮಟ್ಟಿಗಾದರೂ ಸಹ್ಯಗೊಳಿಸಬಹುದು. ಹಾಗಾಗಿ ಅಂತಹ ಕಂಪನಿಗಳ ಪಾತ್ರ ಮುಖ್ಯವೆನಿಸುತ್ತದೆ.

ದುರಂತವೆಂದರೆ, ಇಂತಹ ಕಂಪನಿಗಳ ಸಂರಚನೆ ಕಾರ್ಪೊರೇಟ್‌ ಶೈಲಿಯಲ್ಲಿ ಇರುತ್ತದೆ. ಹಾಗಾಗಿ ಅವುಗಳ ವ್ಯವಹಾರ ಮತ್ತು ಉತ್ಪನ್ನಗಳು ಕೂಡಾ ಕಮರ್ಷಿಯಲ್‌ ರಿಜಲ್ಟ್‌ ಬೇಸ್ಡ್‌ ಉದ್ದೇಶ ಹೊಂದಿರುತ್ತವೆ. ತಾವು ನಿರ್ವಹಿಸಿದ ಪ್ರತಿ ಪೋಸ್ಟ್‌ಗೆ Views, likes, shares, comment…. ಎಷ್ಟು ಸಿಕ್ಕವು, ಅದರಿಂದ ಎಷ್ಟು ಫಾಲೋವರ್ಸ್‌ ಹೆಚ್ಚಾದರು ಎನ್ನುವುದು ಆ ಕಂಪನಿಗಳು ತಮ್ಮ ಗ್ರಾಹಕರ ಮುಂದಿಡಬೇಕಾದ ಪ್ರೊಗ್ರೆಸ್ ಕಾರ್ಡ್‌ಗಳು. ಒಂಥರಾ ಅಂಕಿಅಂಶಗಳ ಒತ್ತಡದಲ್ಲಿ ಕೆಲಸ ಮಾಡುವ ಈ ಕಂಪನಿಗಳು ತಮ್ಮ performance ಹೆಚ್ಚಿಸಿಕೊಂಡು ಉದ್ಯಮ ವ್ಯಾಪ್ತಿ ಹಿಗ್ಗಿಸಿಕೊಳ್ಳಲು ಯತ್ನಿಸುತ್ತವೆ. ಹಾಗಾಗಿ ಸೋಷಿಯಲ್‌ ಮೀಡಿಯಾದ ಟ್ರೆಂಡ್‌ನ ಹಿಂದೆ ಬೀಳುವ ಅವುಗಳಿಗೆ ಸಹಜವಾಗಿಯೆ ಸಾಹಿತ್ಯ ಅಷ್ಟು ಮುಖ್ಯವೆನಿಸುತ್ತಿಲ್ಲ. Raw ಆರೋಪಗಳು, ಕೀಳು ಅವಹೇಳನಗಳು, ಉದ್ವಿಗ್ನಗೊಳಿಸುವಂತಹ ಭಾಷೆಗಳ ಮೂಲಕ Views, like, share, commentಗಳನ್ನು ಸೆಳೆಯುವ ಧಾವಂತಕ್ಕೆ ಬೀಳುತ್ತಿವೆ. ಈಗಾಗಲೇ ನೈತಿಕವಾಗಿ ಪತನವಾಗಿರುವ ರಾಜಕಾರಣಿಗಳನ್ನು, ಇಂತಹ presentationಗಳು ಇನ್ನಷ್ಟು ಕ್ಷುಲ್ಲಕಗೊಳಿಸುತ್ತಾ ಸಾಗುವ ಅಪಾಯವಿದೆ. Obviously, ತತ್‌ಕ್ಷಣಕ್ಕೆ performance indicatorಗಳನ್ನು ಆ ಅಗ್ರೆಸಿವ್‌ ಪೋಸ್ಟ್‌ಗಳು ತಂದುಕೊಡಬಲ್ಲವು. ಆದರೆ ಒಂದು ವೃತ್ತಿಯಾಗಿ, ತನ್ನ ಕೊಡುಗೆಯೇನು? ಎಂದು ಈ ಕಂಪನಿಗಳು/ವ್ಯಕ್ತಿಗಳು ವಿಶ್ಲೇಷಿಸಿಕೊಂಡಾಗ ಸಮಾಧಾನ ಸಿಗಲಾರದು.

ಆರೋಪ, ಪ್ರತ್ಯಾರೋಪ, ಸ್ಪಷ್ಟನೆ, ಅಂಕಿಅಂಶ, ಅಭಿಮತಗಳನ್ನು ರಾಜಕಾರಣಿಗಳ ಖಾತೆಗಳು ಅಭಿವ್ಯಕ್ತಿಸಬೇಕು. ಆದರೆ, ಅದಕ್ಕೆ ಯಾವ ಭಾಷೆಯನ್ನು, ಯಾವ ಶೈಲಿಯನ್ನು ಬಳಸಲಾಗಿದೆ ಎಂಬುದೂ ಮುಖ್ಯವಾಗಬೇಕಿದೆ. ಈ ಆಯಾಮದಿಂದ ಪ್ರಿಯಾಂಕ್‌ ಅವರ ಮೊನ್ನೆಯ ಪೋಸ್ಟ್‌ ವಿಶೇಷವೆನಿಸುತ್ತದೆ.

ರಾಜಕಾರಣಿಗಳಂತೂ ಸಾಹಿತ್ಯದ ಮೌಲ್ಯ ಕಳೆದುಕೊಂಡಿದ್ದಾರೆ, ಆದರೆ ಅವರ ವ್ಯಕ್ತಿತ್ವದ ಅಕ್ಷರಾಭಿವ್ಯಕ್ತಿ ಹೊಣೆಹೊತ್ತವರೂ ಅಷ್ಟೇ ಶುಷ್ಕವಾಗಿ, ಸಾಹಿತ್ಯದ ಗುಣಧರ್ಮವನ್ನು ಮರೆತು ಕೇವಲ ಅಕ್ಷರಗಳ ಕಾಳಗಕ್ಕೆ ಮುಂದಾಗುವುದಾದರೆ ಕೊನೆಗೆ ಉಳಿಯಬಲ್ಲುದೇನು?  ರಾಜಕಾರಣಿಗಳ ಜಗಳಗಳು ಕೇವಲ ಸಾರ್ವಜನಿಕ ರಂಜನೆಗಳಲ್ಲ; ಸಾರ್ವಜನಿಕ ನಡವಳಿಕೆಯ ಮಾದರಿಗಳೂ ಹೌದು. ರಾಜಕಾರಣಿಗಳು ತಮ್ಮ ಈ ಮೌಲ್ಯವನ್ನು ಮರೆತರು, ಅವರ ವ್ಯಕ್ತಿತ್ವ ಕಟ್ಟಿನಿಲ್ಲಿಸುವವರು ಇದನ್ನು ಮರೆಯಬಾರದು. ಯಾಕೆಂದರೆ ಸಾಹಿತ್ಯಕ್ಕೂ, ರಾಜಕಾರಣಕ್ಕೂ ಬಲವಾದ ನಂಟಿದೆ.

ಒಂದು ಕಾಲವಿತ್ತು, ರಾಜಕಾರಣಿಯಾದವನ ವ್ಯಕ್ತಿತ್ವವನ್ನು ಆತನ ಸಾಂಸ್ಕೃತಿಕ-ಸಾಹಿತ್ಯಿಕ ಅಭಿರುಚಿಗಳ ಮೇಲೆ ಅಳೆಯಲಾಗುತ್ತಿತ್ತು. ಅದರಲ್ಲೂ ಸಾಹಿತ್ಯ ಎನ್ನುವುದು ರಾಜಕಾರಣಿಯ ಒಂದು quality ಎಂದೇ ಪರಿಗಣನೆಗೆ ಒಳಪಡುತ್ತಿತ್ತು. ಆತ/ಆಕೆ ಏನೆಲ್ಲಾ ಓದಿಕೊಂಡಿದ್ದಾನೆ/ಳೆ, ಎಷ್ಟೆಲ್ಲ ತಿಳಿದುಕೊಂಡಿದ್ದಾನೆ/ಳೆ ಎಂಬುದರ ಮೇಲೆ ರಾಜಕಾರಣಿಯ ಘನತೆಗಳನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಆ ಘನತೆಗಳ ಮಾನದಂಡಗಳು ಬದಲಾಗಿವೆ. ಅದರಲ್ಲಿ ಓದಿನ ಅಭಿರುಚಿ, ಸಾಹಿತ್ಯದ ಆಸಕ್ತಿಗೆ ಎಳ್ಳಷ್ಟೂ ಸ್ಥಾನವಿಲ್ಲ. ಅಮೆರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್‌ ಒಬ್ಬ ಅದ್ಭುತ ಓದುಗನಾಗಿದ್ದರು. ಷೇಕ್ಸ್‌ಪಿಯರ್‍‌ನ ನಾಟಕ, ರಾಬರ್ಟ್‌ ಬರ್ನ್ಸ್‌ ಕವಿತೆಗಳು ಅವರ ಭಾಷಣದ ಉಲ್ಲೇಖಗಳಾಗುತ್ತಿದ್ದವು. ಆ ಓದಿನ ವಿಸ್ತಾರದಿಂದ ಲಿಂಕನ್‌ ವಿಶಿಷ್ಟ ರಾಜಕಾರಣಿಯಾಗಿ ರೂಪುಗೊಳ್ಳುವಲ್ಲಿ ಸಾಧ್ಯವಾಯ್ತು. 1859ರಲ್ಲಿ ಲಿಂಕನ್‌ ಅವರು “ಓದಿನ ಅಭಿರುಚಿಯು, ಈಗಾಗಲೇ ಬೇರೆಯವರು ಕಂಡುಕೊಂಡ ಜ್ಞಾನದ ಖಜಾನೆಯನ್ನು ನಮಗೆ ಅನಾಯಾಸವಾಗಿ ದಾಟಿಸುತ್ತದೆ” ಎಂದ ವಿಸ್ಕಾನ್ಸಿನ್‌ ಭಾಷಣದಲ್ಲಿ ಹೇಳಿದ ಮಾತು , ಅವರ ಓದಿನ ಆಸಕ್ತಿಯನ್ನು ತೆರೆದಿಡುತ್ತದೆ. ನಮ್ಮ ಪ್ರಥಮ ಪ್ರಧಾನಿ ನೆಹರೂ ಅವರ ಓದಿನ, ಬರವಣಿಗೆಯ ಪಾಂಡಿತ್ಯ ಅಪಾರವಾದದ್ದು. ಸ್ವಾತಂತ್ಯ್ರಹೋರಾಟದ ಸಂದರ್ಭದಲ್ಲಿ ಜೈಲಿನಲ್ಲಿದ್ದಾಗ ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡ ನೆಹರೂ ಅವರ ‘ಗ್ಲಿಂಪ್ಸಸ್‌ ಆಪ್‌ ವರ್ಲ್ಡ್‌ ಹಿಸ್ಟರಿ’ (1930-1933) ಮತ್ತು ‘ದಿ ಡಿಸ್ಕವರಿ ಆಫ್‌ ಇಂಡಿಯಾ’ (1942-1945) ಕೃತಿಗಳು ಸಾಹಿತ್ಯವಿಸ್ತಾರಕ್ಕೆ ಸಾಕ್ಷಿಗಳು.

ಜೆಕೊಸ್ಲಾವಿಕಿಯಾದ ನಾಟಕಕಾರ ವಾಕ್ಲಾವ್‌ ಹಾವೆಲ್‌ ಆ ದೇಶದ ರಾಷ್ಟ್ರಾಧ್ಯಕ್ಷನಾಗಿ ಬೆಳೆದ ಉದಾಹರಣೆ, ರಾಜಕಾರಣದಲ್ಲಿ ಸಾಹಿತ್ಯದ ಪ್ರಭಾವಕ್ಕೆ ಮತ್ತೊಂದು ಅತ್ಯುತ್ತಮ ನಿದರ್ಶನ. ತನ್ನ `ದಿ ಗಾರ್ಡನ್‌ ಪಾರ್ಟಿ’ ಮತ್ತು ‘ದಿ ಮೆಮೊರ್‍ಯಾಂಡಮ್‌’ ಮೊದಲಾದ ನಾಟಕಗಳ ಮೂಲಕ ಆತ ಆಗಿನ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸುತ್ತಾ ಬಂದ. ಮುಂದೆ ಅದು ಜನಾಂದೋಲನವಾಗಿ ರೂಪುಗೊಳ್ಳಲು ಕಾರಣವಾಯ್ತು. ಅವನನ್ನು ಬಂಧಿಸಲಾಯ್ತು, ದೇಶದ್ರೋಹಿಯೆಂದು ಕರೆದು ತಾಯ್ನೆಲವ ತೊರೆಯುವ ಎಚ್ಚರಿಕೆ ನೀಡಲಾಯ್ತು, ಆತನ ನಾಟಕಗಳಿಗೆ ನಿಷೇಧ ಹೇರಲಾಯ್ತು, ಗೃಹಬಂಧನದಲ್ಲಿ ಇರಿಸಲಾಯ್ತು. ಆದರೆ ಆತ ಬರೆಯುತ್ತಲೇ ಹೋದ. ಆದಾಯದ ಮೂಲ ಇಲ್ಲವಾದಾಗ ಬಿಯರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ. ಆದರೂ ಬರೆದ.  1978ರಲ್ಲಿ ಆತ ಬರೆದ ‘The Power of the Powerless’ ಕೃತಿ ಜನಸಾಮಾನ್ಯರ ಪ್ರತಿರೋಧದ ಗುಣವನ್ನು ಬಡಿದೆಬ್ಬಿಸಿತು ಎಂದರೂ ತಪ್ಪಲ್ಲ. ವ್ಯವಸ್ಥೆ ಎಷ್ಟೇ ಹದಗೆಟ್ಟು ಹೋದರೂ ತನ್ನ ಪಾಡಿಗೆ ತಾನು, ತನ್ನ ಅನುಕೂಲಕ್ಕಾಗಿ ತಾನು ಬದುಕುವುದನ್ನು ಆತ ‘ಸುಳ್ಳಿನೊಳಗೆ ಬದುಕುವಿಕೆ’ (Living within a lie) ಎಂದು ಕರೆಯುತ್ತಾನೆ. ಅದಕ್ಕೆ ವಿರುದ್ಧವಾಗಿ ಪ್ರಶ್ನಿಸುವ ಗುಣಮಾನವನ್ನು ‘ಸತ್ಯದೊಂದಿಗೆ ಬದುಕುವಿಕೆ’ (Living in truth) ಎನ್ನುತ್ತಾನೆ. ಈಗ ನಾವೆಲ್ಲಾ ಸತ್ಯದೊಂದಿಗೆ ಬದುಕುವ ಬೆಲೆ ತೆರುವ ಕಾಲ ಬಂದಾಗಿದೆ ಎಂದು ಆ ಕೃತಿ ಜನರನ್ನು ಹುರಿದುಂಬಿಸಿತ್ತು. ಮುಂದೆ 1989ರಲ್ಲಿ regime ಬದಲಾವಣೆಗೆ ನಾಂದಿಯಾಡಿದ ವಾಲ್ವೆಟ್‌ ಕ್ರಾಂತಿಗೆ ಪ್ರೇರಣೆಯಾಗುವಲ್ಲಿ ಹಾವೆಲ್‌ನ ಸಾಹಿತ್ಯ ಕೊಡುಗೆ ಅಪಾರವಾದುದು. ಕಮ್ಯುನಿಷ್ಟರು ಮತ್ತು ಸುಧಾರಣಾವಾದಿಗಳ ನಡುವೆ ನಡೆದ ಒಪ್ಪಂದದ ಪರಿಣಾಮವಾಗಿ ರಚನೆಯಾದ ಹೊಸ ಸರ್ಕಾರದಲ್ಲಿ ಫೆಡರಲ್‌ ಅಸೆಂಬ್ಲಿಯು ಹಾವೆಲ್‌ರನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತದೆ.

ಇದೆಲ್ಲವನ್ನೂ ಹಾವೆಲ್‌ ಕೇವಲ ಸಾಹಿತ್ಯದಿಂದ ಮಾತ್ರವೇ ಮಾಡಿದರು ಎನ್ನಲಾಗದು. ಸಾಮಾಜಿಕ-ಸಂಘಟನಾತ್ಮಕ ಹೋರಾಟ, ಕಾನೂನು ಸಂಘರ್ಷ, ಬೀದಿ ಹೋರಾಟಗಳು ಕೂಡಾ ಹಾವೆಲ್‌ ವೈಖರಿಯ ಭಾಗವಾಗಿದ್ದವು. ಆದರೆ ಅವುಗಳಿಗೆಲ್ಲ ಮೂಲ ಪ್ರೇರಣೆ ಆತನ ಸಾಹಿತ್ಯ ಅಭಿರುಚಿ. ಜೆಕೊಸ್ಲಾವಾಕಿಯಾದಲ್ಲಿ ಆತನ ಬರಹಗಳ ಮೇಲೆ ನಿಷೇಧವಿದ್ದಾಗ, ಈಗಾಗಲೇ ಗಡಿಪಾರು ಶಿಕ್ಷೆಗೆ ಗುರಿಯಾಗಿ ವಿದೇಶದಲ್ಲಿ ನೆಲೆಸಿದ್ದ ಅವನ ಸ್ನೇಹಿತರು ಗುಪ್ತವಾಗಿ ಆತನ ಬರಹಗಳನ್ನು ತರಿಸಿಕೊಂಡು ಹೊರದೇಶಗಳಲ್ಲಿ ಪ್ರಕಟಿಸಿ ಹಂಚುತ್ತಿದ್ದರು. ಇದನ್ನು ‘ಸಮಿಜ್ದಾತ್‌’ (Samizdat) ಚಳವಳಿ ಎಂದು ಕರೆಯಲಾಗುತ್ತಿತ್ತು. ತನ್ನಂತೆ ಸರ್ಕಾರದಿಂದ ನಿಷೇಧಕ್ಕೆ ಒಳಗಾಗಿದ್ದ ಬರಹಗಾರರ ಕೃತಿಗಳನ್ನು ಪ್ರಕಟಿಸುವುದಕ್ಕೆಂದು ಹಾವೆಲ್‌ 1975ರಲ್ಲಿ Edice Expedice (Dispatch Editions) ಎಂಬ ಸಮಿಜ್ದಾತ್ ಪ್ರಕಾಶನ ಸಂಸ್ಥೆ ಹುಟ್ಟುಹಾಕಿದ್ದರು. ಇಂತಹ ಬರಹಗಳಿಂದಾಗಿ ಜೆಕೊಸ್ಲಾವಾಕಿಯಾದ ಆಂತರಿಕ ಸ್ಥಿತಿಗಳು ಹೊರಜಗತ್ತಿಗೆ ತಿಳಿದವು. ಜಾಗತಿಕ ಒತ್ತಡಗಳು ದಟ್ಟವಾದವು. ಪರಿವರ್ತನೆ ಅನಿವಾರ್ಯವಾಯ್ತು.

ಸಾಹಿತ್ಯದ ಅಭಿರುಚಿಗಿರುವ ಶಕ್ತಿ ಇಂತದ್ದು. ಅದಕ್ಕೆಂದೇ ಹಿಂದಿನ ಕಾಲದ ರಾಜಕಾರಣಿಗಳು ಓದಿನಲ್ಲಿ, ಬರಹದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಸಂವಾದಗಳು, ವಾಗ್ವಾದಗಳು ಘನತೆಯಿಂದ ಕೂಡಿರುತ್ತಿದ್ದವು. ಬಹುಶಃ ರಾಜಕಾರಣಿಗಳಾದವರಿಗೆ ಸಾಹಿತ್ಯಾಭಿರುಚಿಯ ಅಗತ್ಯ ಮನಗಂಡಿದ್ದರಿಂದಲೇ 2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೂ ಮುನ್ನ ಮಾರ್ಗದರ್ಶನಕ್ಕಾಗಿ ತಮ್ಮ ಮನೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯನವರಿಗೆ ಇ ಎಫ್‌ ಶೂಮಾಕರ್‍‌ ಬರೆದ ‘Small Is Beautiful’ ಎನ್ನುವ ಪುಸ್ತಕ ಓದುವಂತೆ ಹಿರಿಯ ಸಾಹಿತಿ ದೇವನೂರು ಮಹಾದೇವರು ಸಲಹೆ ನೀಡಿದ್ದಿರಬಹುದು. 1973ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕ ಆಧುನಿಕ ಜಗತ್ತು ಅಭಿವೃದ್ಧಿಯನ್ನು ಅಳೆಯುತ್ತಿರುವ ವಿಧಾನವನ್ನೇ ಪ್ರಶ್ನಿಸಿತ್ತು. ಪರಿಸರವಾದ, ಪರ್ಯಾಯ ಆರ್ಥಿಕತೆ, ವಿಕೇಂದ್ರೀಕೃತ ಅಭಿವೃದ್ಧಿ ಮತ್ತು ಸ್ಥಳೀಯ ಆರ್ಥಿಕ ವ್ಯವಸ್ಥೆಗಳ ಮೇಲೆ ಬೆಳಕು ಚೆಲ್ಲಿತ್ತು. ಸಿದ್ದರಾಮಯ್ಯನವರು ಆ ಕೃತಿಯನ್ನು ಓದಿದರೋ ಇಲ್ಲವೋ ಗೊತ್ತಿಲ್ಲ, ಆದರೆ 2013-2018ರ ಅವಧಿಯಲ್ಲಿ ಅವರು `ಭಾಗ್ಯ’ಗಳ ಸರಮಾಲೆಯ ಮೂಲಕ ಗ್ರಾಮೀಣ ಸಮುದಾಯ, ತಳಸಮುದಾಯಗಳ ಏಳಿಗೆಗೆ ಯೋಜನೆಗಳನ್ನು ರೂಪಿಸಿದ್ದಂತೂ ಸತ್ಯ.

ರಾಜಕಾರಣದೊಂದಿಗೆ ಇಷ್ಟು ಹಾಸುಹೊಕ್ಕಾಗಿದ್ದ ಸಾಹಿತ್ಯದ ಆಸಕ್ತಿಯನ್ನು ಇಂದು ರಾಜಕಾರಣಿಗಳು ಕಳೆದುಕೊಂಡಿದ್ದಾರೆ. ‘ಜನನಾಯಕರು’ ರೂಪುಗೊಳ್ಳುವ ಹಾದಿಗಳು ಪಲ್ಲಟಗೊಂಡಿವೆ. ಹೀಗಿರುವಾಗ ಅಕ್ಷರಗಳ ಮೂಲಕ ಅವರ ಅಭಿವ್ಯಕ್ತಿಯನ್ನು ರೂಪಿಸಬಲ್ಲ ಅವಕಾಶವಿದ್ದವರೂ ಸಾಹಿತ್ಯದಿಂದ ನುಣುಚಿಕೊಂಡರೆ ರಾಜಕಾರಣ ಮತ್ತಷ್ಟು ಅಸಹನೀಯಗೊಳ್ಳುತ್ತದೆ. ಹಾಗಾದರೆ ರಾಜಕಾರಣಿಗಳ ಸೋಷಿಯಲ್‌ ಮೀಡಿಯಾದ ಕಂಟೆಂಟ್‌ ಬರೆಯುವವರು ಸಾಹಿತ್ಯ ಸಂವೇದನೆ ಬೆಳೆಸಿಕೊಂಡ ಮಾತ್ರಕ್ಕೆ ರಾಜಕಾರಣದ ಗ್ರೌಂಡ್‌ ರಿಯಾಲಿಟಿ ಸಂಪೂರ್ಣ ಬದಲಾಗಿಬಿಡುತ್ತದಾ?…. ಪ್ರಶ್ನೆಗಳು ಎಲ್ಲಾ ಹಾದಿಯಲ್ಲೂ ಎದುರುಗೊಳ್ಳುತ್ತವೆ. ಆದರೆ ನಾವು ಕಂಡುಕೊಳ್ಳುವ ಉತ್ತರಗಳು ನಮ್ಮನ್ನು ನೈತಿಕವಾಗಿ ಎಷ್ಟು ಹಗುರವಾಗಿಸುತ್ತವೆ ಎನ್ನುವುದು ಮುಖ್ಯ.

One thought on “ಸಾಹಿತ್ಯ ಮತ್ತು ರಾಜಕಾರಣ”

Leave a Reply

Your email address will not be published. Required fields are marked *