ಸೆಪ್ಟೆಂಬರ್ 10ನೇ ತಾರೀಖು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಒಂದು ನೋಟಿಸ್ ನೀಡಿತು. ಉತ್ತರ ಪ್ರದೇಶದ ಮಾಜಿ ಎಂಎಲ್ಎ, ಎಂಪಿಗಳಿಗೆ ಜನರ ತೆರಿಗೆ ದುಡ್ಡಿನಿಂದ ಜೀವನಪೂರ್ತಿ ಪೆನ್ಷನ್ ಯಾಕೆ ಕೊಡ್ಬೇಕು ಎಂದು ಲೋಕ್ ಪ್ರಹಾರಿ ಎಂಬ ಎನ್ಜಿಒ ಹೂಡಿರುವ ಮೊಕದ್ದಮೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸರ್ಕಾರದಿಂದ ಸ್ಪಷ್ಟಣೆ ಕೇಳಿದೆ. ಇದು ಕೇವಲ ಉತ್ತರ ಪ್ರದೇಶಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ಯಾಕೆಂದರೆ, ಕರ್ನಾಟಕವೂ ಸೇರಿದಂತೆ ಬಹುಪಾಲು ಭಾರತದ ಎಲ್ಲಾ ರಾಜ್ಯಗಳೂ ಸಾಂವಿಧಾನಿಕ ಅವಕಾಶಕ್ಕೆ ಒಳಪಟ್ಟು ಮಾಜಿ ಶಾಸಕರುಗಳಿಗೆ ಜೀವನಪೂರ್ತಿ ಪಿಂಚಣಿ ನೀಡುತ್ತಿವೆ.
ಇವತ್ತು ರಾಜಕೀಯ ಎನ್ನುವುದು ಶುಭ್ರವಾಗಿ ಉಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಈಗ ಚುನಾವಣೆ ನಡೆಸಲು ಕೋಟಿಗಟ್ಟಲೆ ಹಣ ತರಬೇಕಿದೆ. ವ್ಯವಸ್ಥೆ ಕೆಟ್ಟು ಹೋಗಿದೆ. ಹಾಗಾಗಿ ನಾನು ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ” ಎಂದು ಘೋಷಿಸಿದ್ದಾರೆ. ಅವರ ನಿಲುವು ಸರಿಯಾದುದೆ. ಆದರೆ, ಆ ಹೇಳಿಕೆ ಹಲವು ಸತ್ಯ ಸಂಗತಿಗಳನ್ನು ಬಿಚ್ಚಿಡುತ್ತಿದೆ. ಚುನಾವಣೆಯಲ್ಲಿ ಹಣ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎಂದರೆ, ಚುನಾವಣೆಗೆ ನಿಲ್ಲುವ ವ್ಯಕ್ತಿಗಳು ಹಣವಂತರೇ ಆಗಿರುತ್ತಾರೆ. ಚುನಾವಣಾ ಅಫಿಡವಿಟ್ಗಳನ್ನು ನೋಡಿದರೆ, ರಾಜಕಾರಣಿಗಳ ಆಸ್ತಿ-ಹಣ ನೋಡಿ ನಾವು ದಂಗಾಗಬೇಕಾಗುತ್ತದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ ಕರ್ನಾಟಕದ 223 ಶಾಸಕರ ಸರಾಸರಿ ಆಸ್ತಿಯ ಮೊತ್ತ 63.58 ಕೋಟಿ ರೂಪಾಯಿ. ಅವರ ಪೈಕಿ 32 ಶಾಸಕರ ಆಸ್ತಿ ನೂರು ಕೋಟಿಗಿಂತ ಹೆಚ್ಚು. ಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಮೂವರು ಶಾಸಕರ ಆಸ್ತಿ 1,000 ಕೋಟಿಗೂ ಹೆಚ್ಚು! ಇವೆಲ್ಲವೂ ಚುನಾವಣೆಯ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿರುವ ಅಧಿಕೃತ ಆಸ್ತಿಯ ಪ್ರಮಾಣ. ಕೆಲವರ ಘೋಷಿತ ಆಸ್ತಿಯ ಮೊತ್ತ ಒಂದು ಕೋಟಿಗಿಂತ ಕಡಿಮೆ ಇದೆಯಾದರೂ, ಸರಾಸರಿಯಾಗಿ ನೋಡಿದಾಗ ಯಾವ ಶಾಸಕರು ಆರ್ಥಿಕವಾಗಿ ದುರ್ಬಲರೇನಲ್ಲ. ಅಲ್ಲದೇ, ಈ ಅವಧಿ ಮುಗಿಯುವ ವೇಳೆಗಾಗಲೇ ಅವರ ಆಸ್ತಿಯ ಗಾತ್ರ ಏರಿಕೆಯಾಗಿರುತ್ತೆ. ಹಿಂದಿನ ಕೆಲ ವರ್ಷಗಳ ಅನುಕ್ರಮ ಅಫಿಡವಿಟ್ಗಳನ್ನು ಪರಿಶೀಲಿಸಿದರೆ ಈ ಏರಿಕೆಯ ಪ್ರಮಾಣ ಅರ್ಥವಾಗುತ್ತೆ. ಇದು ಒಟ್ಟಾರೆ, ರಾಜಕಾರಣಿಗಳ ಇಂದಿನ ಆರ್ಥಿಕ ಪರಿಸ್ಥಿತಿ.
ಹೀಗಿರುವಾಗ, ಅವರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ಜೀವನಪೂರ್ತಿ ಪಿಂಚಣಿ ಕೊಡುವುದು ಸರಿಯೇ? ಬಹುದೀರ್ಘ ಕಾಲದ ಈ ಪ್ರಶ್ನೆಯನ್ನು ಪ್ರಸ್ತುತ ಕೇಸು ಮತ್ತೆ ಮುನ್ನೆಲೆಗೆ ತಂದಿದೆ. ಈ ಸಂಗತಿಯನ್ನು ನಾವು ಹಣಕಾಸು ಆಯಾಮವನ್ನೂ ಮೀರಿ, ಕಾನೂನು ಅವಕಾಶಗಳೇನು, ಹಿಂದಿನ ಇಂಥಾ ಪ್ರಕರಣಗಳಲ್ಲಿ ಕೋರ್ಟು ಏನು ತೀರ್ಪು ನೀಡಿದ್ದವು, ಇಲ್ಲಿ ಸಾರ್ವಜನಿಕ ಹೊಣೆಗಾರಿಕೆಯ ಪ್ರಶ್ನೆ ಹೇಗೆ ಉದ್ಭವಿಸುತ್ತದೆ, ಇಂದಿನ ಸರ್ಕಾರದ ಆರ್ಥಿಕ ಪರಿಸ್ಥಿತಿಗಳು ಏನು, ಜನಕಲ್ಯಾಣ ಕಾರ್ಯಕ್ರಮಗಳ ಮೇಲೆ ಈ ಹೊರೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಿ ನೋಡಬೇಕಿದೆ. ಯಾಕೆಂದರೆ, ಒಬ್ಬ ಸರ್ಕಾರಿ ನೌಕರ 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಾನೆ. ಒಬ್ಬ ಸಾಮಾನ್ಯ ಕಾರ್ಮಿಕ ತನ್ನ ಜೀವನದ ಬಹುಪಾಲು ದುಡಿದು ವೃದ್ಧಾಪ್ಯ ತಲುಪುತ್ತಾನೆ. ಕೋಟ್ಯಂತರ ಜನರು ನಿವೃತ್ತಿಯ ನಂತರದ ಜೀವನಕ್ಕಾಗಿ ತಮ್ಮದೇ ಆದ ಉಳಿತಾಯದ ಮೇಲೆ ಅವಲಂಬಿತರಾಗುತ್ತಾರೆ. ಆದರೆ ಒಬ್ಬ ವ್ಯಕ್ತಿ ಕೆಲವೇ ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದರೂ, ಅವರಿಗೆ ಜೀವನಪೂರ್ತಿ ಪಿಂಚಣಿ!
ಕರ್ನಾಟಕದ ಪಿಂಚಣಿ ಪ್ಯಾಕೇಜ್
ಕರ್ನಾಟಕದಲ್ಲಿ ಮಾಜಿ ಶಾಸಕರಿಗೆ ಪಿಂಚಣಿ ನೀಡುವುದು ಹೊಸ ವ್ಯವಸ್ಥೆಯಲ್ಲ. Karnataka Legislature Salaries, Pensions and Allowances Act, 1956ರ ಸೆಕ್ಷನ್ 11A ಅಡಿಯಲ್ಲಿ ಐದು ವರ್ಷಗಳ ಕಾಲ ವಿಧಾನಸಭೆ ಸದಸ್ಯ, ವಿಧಾನ ಪರಿಷತ್ ಸದಸ್ಯ ಅಥವಾ ಎರಡೂ ಸದನಗಳಲ್ಲಿ ಸೇರಿ ಐದು ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಗೆ ಜೀವನಪೂರ್ತಿ ಪಿಂಚಣಿ ನೀಡುವ ವ್ಯವಸ್ಥೆ ಇದೆ. 2025ರಲ್ಲಿ ತಿದ್ದುಪಡಿಯನ್ನು ತಂದು ಮಾಜಿ ಎಂಎಲ್ಎ, ಎಂಎಲ್ಸಿಗಳ ತಿಂಗಳ ಪಿಂಚಣಿ ಮೊತ್ತವನ್ನು ₹50,000ದಿಂದ ₹75,000ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಐದಕ್ಕಿಂತ ಹೆಚ್ಚು ವರ್ಷ ಶಾಸಕರಾಗಿದ್ದರೆ, ಪ್ರತಿ ಹೆಚ್ಚುವರಿ ಒಂದು ವರ್ಷಕ್ಕೆ ಒಂದು ಸಾವಿರದಂತೆ ಪಿಂಚಣಿ ಏರಿಕೆಯಾಗುತ್ತದೆ. ಅಲ್ಲದೇ, ಕೆಲವು ವಿಶೇಷ ಸಂದರ್ಭಗಳಲ್ಲಿ ಐದು ವರ್ಷಗಳ ಸೇವೆ ಪೂರ್ಣಗೊಳಿಸದಿದ್ದರೂ ಐದು ವರ್ಷ ಸೇವೆ ಮಾಡಿದಂತೆ ಪರಿಗಣಿಸುವ ನಿಯಮಗಳೂ ಇವೆ.

ಜೊತೆಗೆ, ಪಿಂಚಣಿ ಪಡೆಯುತ್ತಿರುವ ಮಾಜಿ ಶಾಸಕರಿಗೆ ತಿಂಗಳಿಗೆ ₹5,000 ವೈದ್ಯಕೀಯ ಭತ್ಯೆಯನ್ನೂ ನೀಡಲಾಗುತ್ತಿದೆ. ಇದು ಕೇವಲ ಪಿಂಚಣಿ ಮೊತ್ತದ ಪ್ರಶ್ನೆಯಲ್ಲ. ಆರ್ಥಿಕವಾಗಿ ಸದೃಢರೂ, ಸಶಕ್ತರೂ ಆದ ಈ ವರ್ಗವನ್ನು ಜೀವನಪೂರ್ತಿ ಪೊರೆಯುವ ಸಾರ್ವಜನಿಕ ಖಜಾನೆಯ ಹೊರೆಯ ಪ್ರಶ್ನೆ.
ಉದಾಹರಣೆಗೆ, ಕರ್ನಾಟಕದ ಹಣಕಾಸಿನ ಚಿತ್ರವನ್ನೇ ನೋಡೋಣ. PRS Legislative Researchನ ಕರ್ನಾಟಕ ಬಜೆಟ್ ವಿಶ್ಲೇಷಣೆಯ ಪ್ರಕಾರ, 2026-27ರಲ್ಲಿ ರಾಜ್ಯದ ಬದ್ಧ ವೆಚ್ಚ (Committed Expenditure) ₹1,85,025 ಕೋಟಿಗೆ ತಲುಪುವ ಅಂದಾಜಿದೆ. ಇದು ರಾಜ್ಯದ ಅಂದಾಜು ಆದಾಯ ಸ್ವೀಕೃತಿಗಳ ಸುಮಾರು 59%.
ಈ ಬದ್ಧ ವೆಚ್ಚದಲ್ಲಿ ಸರ್ಕಾರಿ ನೌಕರರ ವೇತನ ₹90,557 ಕೋಟಿ, ಪಿಂಚಣಿ ₹41,136 ಕೋಟಿ, ಸಾಲದ ಮೇಲಿನ ಬಡ್ಡಿ ₹53,332 ಕೋಟಿ ಎಂದು ಅಂದಾಜಿಸಲಾಗಿದೆ. ಇವು ಅತ್ಯಂತ ಗಮನಾರ್ಹ ಅಂಕಿಅಂಶ. ರಾಜ್ಯದ ಆದಾಯದ ಬಹುಪಾಲು ಈಗಾಗಲೇ ವೇತನ, ಪಿಂಚಣಿ ಮತ್ತು ಬಡ್ಡಿಯಂತಹ ಬದ್ಧ ವೆಚ್ಚಗಳಿಗೆ ಹೋಗುತ್ತಿರುವ ಸಂದರ್ಭದಲ್ಲಿ, ಹೊಸ ಶಾಶ್ವತ ವೆಚ್ಚಗಳಿಗೆ ಸರ್ಕಾರದ ಹಣಕಾಸಿನ ಅವಕಾಶ ಎಷ್ಟು ಮಾತ್ರ ಉಳಿಯಬಹುದು ಎಂಬುದು ಪ್ರಶ್ನೆ. ಅಂದರೆ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೇಲೆ ಸರ್ಕಾರ ಅನಿವಾರ್ಯವಾಗಿ ನಿಯಂತ್ರಣ ಹೇರಬೇಕಾಗುತ್ತದೆ.
ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳಿಗೆ ಗ್ಯಾರಂಟಿ ರೂಪದಲ್ಲಿ ಚೈತನ್ಯ ತುಂಬುವ ಪರಿಣಾಮಕಾರಿ ಮತ್ತು ಸಮಾಜಮುಖಿ ವೆಚ್ಚಗಳನ್ನು `ಬಿಟ್ಟಿ ಭಾಗ್ಯ’ ಎಂದು ಲೇವಡಿ ಮಾಡುವ ನಾವು, ಇಂತಹ ಅನುಕೂಲಸ್ಥ ವರ್ಗದ ಜನರಿಗೆ ಹರಿದು ಹೋಗುತ್ತಿರುವ ಖಜಾನೆಯ ಬಾಬ್ತನ್ನು ಯಾಕೆ ಪ್ರಶ್ನಿಸುವುದಿಲ್ಲ. ಆರ್ಥಿಕ ಹೊರೆ ಕಡಿಮೆ ಮಾಡುವ ನೆಪದಲ್ಲಿ, ಗ್ಯಾರಂಟಿ ಯೋಜನೆಗಳಿಗೆ ಪರಿಷ್ಕರಣೆಯ ಕಟ್ಟಳೆ ಹೇರುವ, ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಸರ್ಕಾರಗಳು ಇಂತಹ ಬದ್ಧ ವೆಚ್ಚದ ನಿಯಂತ್ರಣದತ್ತಲೂ ಕಡಿವಾಣ ಹೇರಲು ಮುಂದಾಗಬೇಕಲ್ಲವೇ?
ನ್ಯಾಯಾಲಯಗಳ ಹಳೆಯ ತೀರ್ಪುಗಳು
ಅಂದಹಾಗೆ, ಇಂತಹ ಚರ್ಚೆ ನ್ಯಾಯಾಲಯಗಳ ಮುಂದೆ ಬಂದದ್ದು ಇದೇ ಮೊದಲಲ್ಲ. ರಾಜಸ್ಥಾನದಲ್ಲಿ Milap Chand Dandia v. State of Rajasthan ಪ್ರಕರಣದಲ್ಲಿ ಮಾಜಿ ಶಾಸಕರಿಗೆ ಪಿಂಚಣಿ ನೀಡುವ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾಗಿತ್ತು. ಸಂವಿಧಾನದ Article 195, ಶಾಸಕರ “ವೇತನ ಮತ್ತು ಭತ್ಯೆ” ಬಗ್ಗೆ ಮಾತ್ರ ಮಾತನಾಡುತ್ತದೆ; ಪಿಂಚಣಿ ಬಗ್ಗೆ ಸ್ಪಷ್ಟವಾಗಿ ಹೇಳುವುದಿಲ್ಲ. ಹಾಗಾದರೆ ರಾಜ್ಯ ವಿಧಾನಮಂಡಲವು ಸ್ವತಃ ತನ್ನ ಮಾಜಿ ಸದಸ್ಯರಿಗೆ ಜೀವಿತಾವಧಿ ಪಿಂಚಣಿ ನೀಡುವ ಕಾನೂನು ರೂಪಿಸಬಹುದೇ? ಎಂಬುದು ದೂರುದಾರರ ವಾದವಾಗಿತ್ತು. ಆದರೆ ಸರ್ಕಾರದ ಪರ ವಕೀಲರು, ಸಂವಿಧಾನದ Seventh Scheduleನ State Listನ Entry 42 – “State pensions” ಅಡಿಯಲ್ಲಿ ರಾಜ್ಯ ವಿಧಾನಮಂಡಲಕ್ಕೆ ಪಿಂಚಣಿ ಕುರಿತಂತೆ ಕಾನೂನು ರೂಪಿಸುವ ಅಧಿಕಾರವಿದೆ ಎಂದು ವಾದ ಮಂಡಿಸಿದ್ದರಿಂದ ರಾಜಸ್ಥಾನ ಹೈಕೋರ್ಟ್ 7 ಮೇ 2026ರಂದು ಅರ್ಜಿಯನ್ನು ತಿರಸ್ಕರಿಸಿತು. Article 195ರಲ್ಲಿ ಪಿಂಚಣಿ ಎಂಬ ಪದ ಪ್ರತ್ಯೇಕವಾಗಿ ಇಲ್ಲದಿರುವುದರ ಮಾತ್ರಕ್ಕೆ ಪಿಂಚಣಿ ನೀಡುವುದನ್ನು ಸಂವಿಧಾನ ನಿಷೇಧಿಸಿದೆ ಎಂದು ಅರ್ಥೈಸಲಾಗದು ಎಂದ ಹೈಕೋರ್ಟ್, Entry 42 ಮತ್ತು Article 246(3) ಅಡಿ ಸರ್ಕಾರಕ್ಕೆ ಕಾನೂನು ಮಾಡುವ ಅಧಿಕಾರವಿದೆ ಎಂದಿತು. 1986ರ ನಾರಾಯಣ ಲಾಲ್ ಹಿಮ್ಮತ್ ಲಾಲ್ ಭಟ್ ವರ್ಸಸ್ ಗುಜರಾತ್ ಸರ್ಕಾರ ಹಾಗೂ 1996ರ ರಘು ಠಾಕೂರ್ ವರ್ಸಸ್ ಮಧ್ಯಪ್ರದೇಶ ಸರ್ಕಾರ ಪ್ರಕರಣಗಳಲ್ಲೂ ಆಯಾ ನ್ಯಾಯಾಲಯಗಳು ಆಕ್ಷೇಪಣೆಯನ್ನು ತಳ್ಳಿಹಾಕಿ, ಶಾಸಕರಿಗೆ ನೀಡುವ ಪಿಂಚಣಿ ಅವಕಾಶವನ್ನು ಎತ್ತಿ ಹಿಡಿದಿದ್ದವು.

ನ್ಯಾಯಾಲಯಗಳೇ ಒಪ್ಪಿಕೊಂಡ ಮೇಲೆ ಇನ್ನೇನು ತಕರಾರು? ಎಂದು ನೀವು ಕೇಳಬಹುದು. ನ್ಯಾಯಾಲಯಗಳು ಕಾನೂನಿನ ಅವಕಾಶದಲ್ಲಿ ಪಿಂಚಣಿ ನೀಡಿರುವುದು ಸರಿಯಾಗಿದೆಯೇ? ಅಥವಾ ಕಾನೂನು ಬದ್ಧವಾಗಿಲ್ಲವೇ? ಎಂಬ ಮಾನ್ಯತೆಯನ್ನಷ್ಟೆ ಪರಿಗಣಿಸುತ್ತವೆ. ಇದರ ಅಗತ್ಯ ಈಗ ಇದೆಯೋ ಇಲ್ಲವೋ ಎಂಬುದನ್ನು ನ್ಯಾಯಾಲಯಗಳು ಚರ್ಚಿಸುವುದಿಲ್ಲ. ಆ ಕೆಲಸ ಶಾಸನ ಸಭೆಗಳದ್ದು.
ಒಂದು ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದ ಮಾತ್ರಕ್ಕೆ, ಆ ಕಾನೂನು ಎಂದಿಗೂ ಬದಲಾಗಬಾರದು ಎಂದರ್ಥವಲ್ಲ. ಸರ್ಕಾರಗಳು ಕಾಲಕಾಲಕ್ಕೆ ನೀತಿಗಳನ್ನು ಬದಲಾಯಿಸುತ್ತವೆ. ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ. ಜನಸಂಖ್ಯೆ ಬದಲಾಗುತ್ತದೆ. ಸರ್ಕಾರದ ಆದ್ಯತೆಗಳು ಬದಲಾಗುತ್ತವೆ. ಸಾಮಾಜಿಕ ಭದ್ರತೆಯ ಮಾದರಿಗಳು ಬದಲಾಗುತ್ತವೆ. ಹೀಗಾಗಿ, ದಶಕಗಳ ಹಿಂದೆ ರೂಪಿಸಲಾದ ಪಿಂಚಣಿ ವ್ಯವಸ್ಥೆಯನ್ನು “ಒಮ್ಮೆ ಕಾನೂನಾಗಿ ಬಂದಿದೆ; ಆದ್ದರಿಂದ ಸದಾಕಾಲ ಹಾಗೆಯೇ ಇರಬೇಕು” ಎಂಬ ದೃಷ್ಟಿಯಿಂದ ಮಾತ್ರ ನೋಡುವುದು ಸಾರ್ವಜನಿಕ ನೀತಿಯ ದೃಷ್ಟಿಯಿಂದ ಸಾಕಾಗುವುದಿಲ್ಲ.
ಪರ್ಯಾಯಗಳೇನು?
ಹಾಗಂತ, ಎಲ್ಲಾ ಶಾಸಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಕೆಲವರು ನಿಜಕ್ಕೂ ಪ್ರಾಮಾಣಿಕರು, ಜನಸೇವೆಯನ್ನೆ ಕಾಯಕವಾಗಿಸಿಕೊಂಡವರು ಇರಬಹುದು. ಹೀಗೆ ಏಕಾಏಕಿ ಪಿಂಚಣಿ ನಿಲ್ಲಿಸುವುದರಿಂದ ಅವರಿಗೆ ತೊಂದರೆಯಾಗುವುದಿಲ್ಲವೇ? ಎಂಬ ನೈಸರ್ಗಿಕ ನ್ಯಾಯದ ಪ್ರಶ್ನೆ ಇಲ್ಲಿ ಕಾಡಬಹುದು. ಅದಕ್ಕೆ ಒಂದಷ್ಟು ಪರ್ಯಾಯಗಳನ್ನು ನಾವು ಯೋಚಿಸಬಹುದು.
ಮೊದಲನೆಯದಾಗಿ, ಒಬ್ಬ ವ್ಯಕ್ತಿ ತನ್ನ ಉದ್ಯೋಗ ಕಳೆದುಕೊಳ್ಳುತ್ತಿದ್ದಂತೆಯೇ ಅಷ್ಟು ದಿನ ಅವಲಂಭಿಸಿದ್ದ ಆದಾಯದಿಂದ ದಿಢೀರ್ ವಂಚಿತನಾಗುತ್ತಾನೆ. ಅಪಾರ ಆಸ್ತಿಯ ಹೊರತಾಗಿಯೂ, ಪ್ರಾಮಾಣಿಕರನ್ನು ಪರಿಗಣಿಸಿ ನೋಡಿದಾಗ, ಶಾಸಕರು ಕೂಡಾ ಮಾಜಿಯಾಗುತ್ತಿದ್ದಂತೆಯೆ ಅಷ್ಟು ದಿನ ತಮಗೆ ಸಿಗುತ್ತಿದ್ದ ವೇತನ ಕಳೆದುಕೊಳ್ಳುವುದರಿಂದ ಈ ಇಕ್ಕಟ್ಟಿಗೆ ಸಿಲುಕಬಹುದು. ಆಗ ಜೀವನಪೂರ್ತಿ ಪಿಂಚಣಿ ಕೊಡುವ ಬದಲು, ತನ್ನ ಮಾಜಿ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆಗೆ ದಾರಿ ಕಂಡುಕೊಳ್ಳುವ ಒಂದು ನಿಗದಿತ transition period ವರೆಗೆ ಮಾತ್ರ ಪಿಂಚಣಿ ಎಂದು ನಿಗದಿಪಡಿಸಬಹುದು.
ಎರಡನೆಯದಾಗಿ, ಅಗತ್ಯಕ್ಕೆ ತಕ್ಕಂತೆ ಪಿಂಚಣಿಯನ್ನು ನಿಗದಿಪಡಿಸುವ ನಿಯಮವನ್ನು ರೂಢಿಸಬಹುದು. ಅವರು ಸಲ್ಲಿಸಿದ ಅಫಿಡವಿಟ್ನ ಆಧಾರದಲ್ಲಿ ಅವರ ಆರ್ಥಿಕ ಸಾಮರ್ಥ್ಯ ಆಧರಿಸಿ, ನಿಜಕ್ಕೂ ಅರ್ಹರಿರುವವರಿಗೆ ಅಗತ್ಯಕ್ಕೆ ತಕ್ಕಂತೆ ಪಿಂಚಣಿಯನ್ನು ನಿಗದಿ ಮಾಡಬಹುದು. ಅಥವಾ ಶಾಸಕರ ವೇತನ, ಪಿಂಚಣಿ, ಭತ್ಯೆ ಇತ್ಯಾದಿಗಳನ್ನು ಶಾಸನ ಸಭೆಯಲ್ಲಿ ಅವರೇ ಕಾನೂನು ಮಾಡಿಕೊಂಡು ರೂಪಿಸಿಕೊಳ್ಳುವ ಪ್ರಸ್ತುತ ಅವಕಾಶದ ಬದಲು ಒಂದು ಸ್ವತಂತ್ರ ಆಯೋಗವನ್ನು ರಚಿಸಿ, ಪಾರದರ್ಶಕವಾಗಿಸಬಹುದು. ಅದರ ಮೇಲೂ ರಾಜಕಾರಣಿಗಳು ಪ್ರಭಾವ ಬೀರುವ ಸಾಧ್ಯತೆ ಇದೆಯಾದರೂ, ನೇರವಾಗಿ ಅವರೇ ನೀತಿ ರೂಪಿಸಿಕೊಳ್ಳುವ ಏಕಸ್ವಾಮ್ಯಕ್ಕಿಂತ ಇದು ಒಳಿತೆನ್ನಿಸುತ್ತದೆ.
ಆರಂಭದಲ್ಲಿಯೇ ಹೇಳಿದಂತೆ, ಇದು ಕೇವಲ ಬೊಕ್ಕಸಕ್ಕೆ ಹಣವನ್ನು ಉಳಿತಾಯ ಮಾಡುವ ಪ್ರಶ್ನೆ ಮಾತ್ರ ಅಲ್ಲ. ಹೊಣೆಗಾರಿಕೆಯ ಪ್ರಶ್ನೆ. ಸರ್ಕಾರದ ಚುಕ್ಕಾಣಿ ಹಿಡಿದವರು ಜನಸಾಮಾನ್ಯರಿಗೆ “ಹಣಕಾಸಿನ ಕೊರತೆ ಇದೆ”, “ವೆಚ್ಚ ಕಡಿಮೆ ಮಾಡಬೇಕು”, “ಸಂಪನ್ಮೂಲಗಳ ಮಿತಿ ಇದೆ” “ಮಿತವ್ಯಯಕ್ಕೆ ಮಹತ್ವ ಕೊಡಿ” ಎಂದು ಹೇಳುವಾಗ, ಜನಪ್ರತಿನಿಧಿಗಳಿಗೆ ನೀಡಲಾಗುವ ಸೌಲಭ್ಯಗಳನ್ನೂ ಅದೇ ಮಾನದಂಡದಲ್ಲಿ ಪರಿಗಣಿಸಬೇಕಲ್ಲವೇ? ಅಥವಾ ತೆರಿಗೆ ಹಣದ ಪಿಂಚಣಿ ಹಣ ಸಿಗದಿದ್ದರೆ ಮಾಜಿ ಶಾಸಕರು, ಸಂಸದರ ಬದುಕೇ ದುರ್ಬರವಾಗುವಷ್ಟು ರಾಜಕಾರಣ ಪ್ರಾಮಾಣಿಕವಾಗಿ ಉಳಿದಿದೆ ಎಂದು ಜನ ಮೈಮರೆತು ಕೂರಬೇಕೆ? ಇದು ನ್ಯಾಯಾಲಯಗಳ ಅಂಗಳವನ್ನು ದಾಟಿ ಸಾಗಬೇಕಿರುವ ಚರ್ಚೆ…

ಲೇಖಕರು ‘ಲಂಕೇಶ್ ಪತ್ರಿಕೆ’, ‘ಗೌರಿ ಲಂಕೇಶ್’, ‘ಗೈಡ್’ ಮಾಸಪತ್ರಿಕೆ ಸೇರಿದಂತೆ ಎರಡು ದಶಕಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ತಮ್ಮದೇ ಮಾಧ್ಯಮ ಸಂಪರ್ಕ ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.
