ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಿತ್ರಪಕ್ಷಗಳು 16 ಸ್ಥಾನಗಳಲ್ಲಿ ಗೆದ್ದಿವೆ. ಬಿಜೆಪಿ ಏಕಾಂಗಿಯಾಗಿ 13 ಸ್ಥಾನ ಗೆದ್ದು, ಎರಡಂಕಿ ದಾಟಿದ ಏಕೈಕ ಪಕ್ಷ ಎನಿಸಿಕೊಂಡಿದೆ. ಜೆನ್ ಜಿ ಚಳವಳಿ, ಸಚಿವ ಪ್ರಧಾನ್ ರಾಜೀನಾಮೆ, ಚುನಾವಣಾ ಆಯಕ್ತರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟಗಳಿಂದ ಹೈರಾಣಾಗಿದ್ದ ಬಿಜೆಪಿಗೆ ಈ ಫಲಿತಾಂಶ ಸಣ್ಣ ನಿಟ್ಟುಸಿರು ತಂದಿರುವುದು ಸುಳ್ಳಲ್ಲ. ಅದನ್ನು ಸೆಲೆಬ್ರೇಟ್ ಮಾಡುವುದಕ್ಕೋಸ್ಕರ ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಶೂನ್ಯ ಸಾಧನೆಯನ್ನು ಲೇವಡಿ ಮಾಡಿ, ತಮ್ಮ ಕಾರ್ಯಕರ್ತರನ್ನು ಖುಷಿ ಪಡಿಸಲು ಯತ್ನಿಸಿದ್ದೂ ಅಯ್ತು.
ಕಾಂಗ್ರೆಸ್ ಕಾಲೆಳೆಯುವಲ್ಲಿ ಸದಾ ಮುಂದಿರುವ ಮೋದಿಯವರು ಉದ್ದೇಶಪೂರ್ವಕವಾಗಿ ಎರಡು ಸೋಲುಗಳನ್ನು ಪ್ರಸ್ತಾಪಿಸಲಿಲ್ಲ. ಮೊದಲನೆಯದ್ದು, ತಮ್ಮ ಮಾತೃಸಂಸ್ಥೆ ಆರೆಸ್ಸೆಸ್ನ ಕೇಂದ್ರ ಸ್ಥಾನವಾದ ನಾಗ್ಪುರದಲ್ಲಿ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್ ಗೆದ್ದಿದ್ದು. ಎರಡನೆಯದು, ಸ್ವತಃ ತಾವು ಪ್ರತಿನಿಧಿಸುವ ವಾರಣಾಸಿ ವಿಭಾಗದ ಎರಡೂ ಸ್ಥಾನಗಳಲ್ಲಿ ಬಿಜೆಪಿ ಸೋತಿದ್ದು. ಹದಿನಾರು ಸ್ಥಾನಗಳಲ್ಲಿ ಗೆದ್ದಿದ್ದಕ್ಕಿಂತ ಇವೆರಡು ವಲಯಗಳಲ್ಲಿ ಸೋತಿದ್ದು ಬಿಜೆಪಿ ಪಾಲಿಗೆ ಮುಖ್ಯವಾಗುತ್ತವೆ. ಬಹಿರಂಗವಾಗಿ ತಮ್ಮ ಬೇಗುದಿಯನ್ನು ತೋಡಿಕೊಳ್ಳದೆ ಹೋದರೂ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರನ್ನು ಈ ಸೋಲುಗಳು ಒಳಗೊಳಗೆ ಆತಂಕಕ್ಕೀಡು ಮಾಡಿವೆ. ಅದರಲ್ಲೂ ವಾರಣಾಸಿಯ ಎರಡು ಸೋಲುಗಳು ಮೋದಿಯವರ ಪಾಲಿಗೆ crucial ಎನ್ನಬಹುದು.
2014ರಿಂದೀಚೆಗೆ ವಾರಣಾಸಿ ಕೇವಲ ಮೋದಿಯವರು ಪ್ರತಿನಿಧಿಸುವ ಒಂದು ಲೋಕಸಭಾ ಕ್ಷೇತ್ರವಾಗಿ ಮಾತ್ರ ಉಳಿದಿಲ್ಲ. ತಮ್ಮನ್ನು ದೈವಾಂಶ ಸಂಭೂತನೆಂದು propogate ಮಾಡಿಕೊಳ್ಳಲು ಮತ್ತು ಆ ಮೂಲಕ ತಮ್ಮ ಪಕ್ಷದ ಧರ್ಮಕೇಂದ್ರಿಯ ರಾಜಕಾರಣವನ್ನು ಜನರ ಮನಸ್ಸಿಗೆ ವಿಸ್ತರಿಸಲು ವಾರಾಣಸಿಯನ್ನು ಮೋದಿಯವರು ಬಳಸಿಕೊಳ್ಳುತ್ತಾ ಬಂದಿದ್ದಾರೆ. ಯಾಕೆಂದರೆ ಗಂಗಾನದಿಯ ಮಡಿಲಿನಲ್ಲಿರುವ ವಾರಾಣಸಿ (ಕಾಶಿ) ಹಿಂದೂಗಳ ಪಾಲಿನ ಪವಿತ್ರ ಕ್ಷೇತ್ರ. ಮುಕ್ತಿತಾಣ. ಅದನ್ನು ತನ್ನೊಟ್ಟಿಗೆ ಅಸೋಸಿಯೇಟ್ ಮಾಡಿಕೊಂಡಷ್ಟೂ ಸಂಪ್ರದಾಯಸ್ಥ ಹಿಂದೂಗಳಿಗೆ ಪ್ರಿಯವಾಗಬಹುದೆಂಬುದು ಮೋದಿಯವರ calculated political strategy. ‘ತಾಯಿ ಗಂಗೆಯೆ ತನ್ನ ಸೇವೆಗೆ ನನ್ನನ್ನು ಆಯ್ಕೆ ಮಾಡಿ ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂಬ ಅವರ ಮಾತಾಗಲಿ ಅಥವಾ ಕಾಶಿಯ ಗಂಗಾ ಆರತಿಯನ್ನು ರಾಷ್ಟ್ರೀಯ ಆಚರಣೆಯಂತೆ ಬಿಂಬಿಸಿದ್ದಾಗಲಿ ಎಲ್ಲವೂ ಇದನ್ನು ಸ್ಪಷ್ಟಪಡಿಸುತ್ತೆ.

ಈ ಕಾರಣದಿಂದ ವಾರಾಣಸಿಯಲ್ಲಿ ಬಿಜೆಪಿ ಅಥವಾ ಮೋದಿಯವರ ಇಮೇಜಿಗೆ ಆಗುವ ಯಾವುದೇ ಹಿನ್ನಡೆಯನ್ನು ಕೇವಲ ಒಂದು ರಾಜಕೀಯ ಸೋಲಿನಂತೆ ಪರಿಗಣಿಸುವುದಕ್ಕಿಂತ ಅವರ ರಾಜಕೀಯ ಅಡಿಪಾಯದಲ್ಲಿ ಉಂಟಾಗುತ್ತಿರುವ ಕಂಪನವೆಂದು ಪರಿಗಣಿಸಬೇಕಾಗುತ್ತದೆ.
ಅಕ್ಟೋಬರ್ 29ರಂದು ಪ್ರಕಟವಾದ ಫಲಿತಾಂಶದಲ್ಲಿ ವಾರಣಾಸಿ ವಿಭಾಗದ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳೆರಡಲ್ಲೂ ಬಿಜೆಪಿ ಸೋತಿದೆ. ಇವುಗಳನ್ನು ಅಖಿಲೇಶ್ ಯಾದವರ ಸಮಾಜವಾದಿ ಪಕ್ಷ ಗೆದ್ದುಕೊಂಡಿದೆ. ಗೆದ್ದುಕೊಂಡಿದೆ ಎನ್ನುವುದಕ್ಕಿಂತ ಉಳಿಸಿಕೊಂಡಿದೆ ಎನ್ನುವುದು ಸೂಕ್ತ. ಯಾಕೆಂದರೆ, 2020ರ ಚುನಾವಣೆಗಳಲ್ಲೂ ಸಮಾಜವಾದಿ ಪಕ್ಷವೆ ಇಲ್ಲಿ ಗೆದ್ದಿತ್ತು. ಸರಿ, ತನ್ನದಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿಯೂ ಸೋತಿದೆ, ಇದರಲ್ಲೇನು ವಿಶೇಷ? ಎಂದು ತಳ್ಳಿಹಾಕಲಾಗದು. ಅದಕ್ಕೆ ಎರಡು ಕಾರಣಗಳಿವೆ. 2020ರಲ್ಲಿ ಎಸ್ಪಿ ಇಲ್ಲಿ ಗೆಲುವಿನ ದಾಖಲೆ ತೆರೆಯುವುದಕ್ಕಿಂತ ಮುಂಚೆ, ಇವೆರಡೂ ದಶಕಗಳ ಕಾಲ ಬಿಜೆಪಿಯ ಭದ್ರ ತೆಕ್ಕೆಯಲ್ಲಿದ್ದವು. ಅಂತಹ ಕ್ಷೇತ್ರಗಳನ್ನು ಬಿಜೆಪಿ ಸತತ ಎರಡನೇ ಸಲ ಕಳೆದುಕೊಂಡಿದೆ. ಅದೂ ಪ್ರಧಾನಿ ಮೋದಿಯವರ ವೈಯಕ್ತಿಕ ವರ್ಚಸ್ಸಿನ ಹೊರತಾಗಿಯೂ!
ಎರಡನೇ ಕಾರಣ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿರುವ ಸಮಾಜವಾದಿ ಪಕ್ಷದ ಗೆಲುವಿನ ಅಂತರ. 2020ರ ವಾರಾಣಸಿ ಪದವೀಧರ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ 3,850 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಈ ಬಾರಿ ಗೆಲುವಿನ ಅಂತರವನ್ನು ಐದು ಪಟ್ಟು ಹೆಚ್ಚಿಸಿಕೊಂಡಿರುವ ಸಮಾಜವಾದಿ ಅಭ್ಯರ್ಥಿ 18,459 ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನು ಶಿಕ್ಷಕರ ಕ್ಷೇತ್ರದಲ್ಲು ಕಳೆದ ಬಾರಿ ಕೇವಲ 930 ಮತಗಳ ಅಂತರದಿಂದ ಗೆದ್ದಿದ್ದ ಎಸ್ಪಿ ಅಭ್ಯರ್ಥಿ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು 5,015 ಮತಗಳ ಅಂತರದಿಂದ ಸೋಲಿಸಿದ್ದಾರೆ.
ನಿಮಗೆ ನೆನಪಿರುವುದಾದರೆ, 2024ರ ಲೋಕಸಭಾ ಫಲಿತಾಂಶದ ವೇಳೆಯಲ್ಲು ಇದೇ ವಾರಾಣಸಿಯ ಮತಗಳ ಅಂತರದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅದು ಪ್ರಧಾನಿ ಮೋದಿಯವರ ಗೆಲುವಿನ ಅಂತರ. 2019ರ ಚುನಾವಣೆಯಲ್ಲಿ 4.79 ಲಕ್ಷ ಮತಗಳ ಅಂತರದಿಂದ ಪ್ರಚಂಡ ಗೆಲುವು ಸಾಧಿಸಿದ್ದ ಮೋದಿಯವರು 2024ರ ಚುನಾವಣೆಯ ವೇಳೆಗೆ ಅವರ ಗೆಲುವಿನ ಅಂತರ ಕೇವಲ 1.52 ಲಕ್ಷಕ್ಕೆ ಕುಸಿದಿತ್ತು. ಆರಂಭಿಕ ಸುತ್ತಿನ ಎಣಿಕೆಗಳಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆಗೆ ಮೋದಿಯವರು ಕಂಫರ್ಟಬಲ್ ಆಗಿ ಗೆದ್ದಿದ್ದೇನೊ ನಿಜ. ಆದರೆ, ಸುಮಾರು 3 ಲಕ್ಷದಷ್ಟು ಮತದಾರರು ಮೋದಿಯವರಿಂದ ವಿಮುಖವಾದದ್ದನ್ನು ಅವರ ಜನಪ್ರಿಯತೆಯ ಕುಸಿತದ ಮಾಪನವಾಗಿ ನೋಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಎಂ ಎಲ್ ಸಿ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಅಂತರ ಇನ್ನಷ್ಟು ಕುಸಿದಿರುವುದು ಮೋದಿಯವರ ವರ್ಚಸ್ಸು ಮತ್ತು ಬಿಜೆಪಿ ದೃಷ್ಟಿಯಿಂದ ಸಣ್ಣ ಹಿನ್ನಡೆಯಲ್ಲ.

ಯಾಕೆಂದರೆ ಉತ್ತರ ಪ್ರದೇಶವು ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಬೇಕಿದೆ. ಈಗ ವಾರಾಣಸಿ ವಿಭಾಗದಲ್ಲಿ ಬಿಜೆಪಿ ಕಳೆದುಕೊಂಡ ಎರಡು ಕ್ಷೇತ್ರಗಳು ಕೇವಲ ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾದವಲ್ಲ. ಎಂಟು ಜಿಲ್ಲೆಗಳಿಗೆ ವ್ಯಾಪಿಸಿರುವ ವಾರಾಣಸಿ ವಿಭಾಗದಲ್ಲಿ ಒಟ್ಟು 47 ವಿಧಾನಸಭಾ ಕ್ಷೇತ್ರಗಳಿವೆ. ಯೋಗಿ ಆದಿತ್ಯನಾಥರ ಸಂಪುಟದಲ್ಲಿ ಈ ಎಂಟು ಜಿಲ್ಲೆಗಳ ಒಂಬತ್ತು ಸಚಿವರು ಅಧಿಕಾರದಲ್ಲಿದ್ದಾರೆ. ಉತ್ತರ ಪ್ರದೇಶದ ರಾಜಕಾರಣದಲ್ಲಿ ಅಷ್ಟೊಂದು ಪ್ರಭಾವಿ ವಿಭಾಗ ಇದು. 2022ರ ವಿಧಾನಸಭಾ ಚುನಾವಣೆಯಲ್ಲಿ ಈ 47 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಮಿತ್ರಪಕ್ಷಗಳು 28 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಸಮಾಜವಾದಿ ಪಕ್ಷ ಕೇವಲ 14 ಸ್ಥಾನಗಳಲ್ಲಿ ಗೆದ್ದಿತ್ತು. ಇನ್ನುಳಿದವನ್ನು ಬೇರೆ ಪಕ್ಷಗಳು ಗೆದ್ದುಕೊಂಡಿದ್ದವು.
ಈಗ ಬಿಜೆಪಿ ಸೋತಿರುವ ವಾರಾಣಸಿ ವಿಭಾಗದ ಆ ಎರಡು ಎಂ ಎಲ್ ಸಿ ಚುನಾವಣೆಯಲ್ಲಿ 47 ವಿಧಾನಸಭಾ ಕ್ಷೇತ್ರಗಳ ಪದವೀಧರ ಮತ್ತು ಶಿಕ್ಷಕ ಮತದಾರರು ಮತ ಚಲಾಯಿಸಿದ್ದಾರೆ. ಇದನ್ನು overall voting trend ಎಂದು ಪರಿಗಣಿಸಲು ಸಾಧ್ಯವಿಲ್ಲವಾದರೂ ಈ ವಿಭಾಗದಲ್ಲಿ ಬಿಜೆಪಿಯ ಒಲವು ಮತ್ತು ಮೋದಿ- ಆದಿತ್ಯನಾಥರ ವೈಯಕ್ತಿಕ ವರ್ಚಸ್ಸುಗಳು ಕುಸಿಯುತ್ತಿರುವುದನ್ನು ತಳ್ಳಿಹಾಕಲಾಗುವುದಿಲ್ಲ. 2024ರಲ್ಲಿ ಮೋದಿಯವರ ಗೆಲುವಿನ ಅಂತರದ ಕುಸಿತ ಹಾಗೂ ಈಗ ಎಸ್ಪಿ ಗೆಲುವಿನ ಅಂತರ ಹಿಗ್ಗಿರುವುದು ಮಾತ್ರವಲ್ಲದೆ, 2022ರಲ್ಲಿ ಇದೇ ವಿಭಾಗದಲ್ಲಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಂದ ನಡೆದಿದ್ದ ಎಂ ಎಲ್ ಸಿ ಚುನಾವಣೆಯಲ್ಲೂ ಬಿಜೆಪಿ ಸೋತಿತ್ತು. ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಬಿಜೆಪಿ ಅಭ್ಯರ್ಥಿ, ಮೋದಿಯವರ ವಾರಣಾಸಿ ವಿಭಾಗದಲ್ಲಿ ಗಳಿಸಲು ಸಾಧ್ಯವಾಗಿದ್ದು ಕೇವಲ 170 ಮತಗಳು ಮಾತ್ರ!
ಹೀಗೆ ನಿರಂತರವಾಗಿ ಬಿಜೆಪಿಯ ಪ್ರಭಾವ ಮೋದಿಯವರ ವರ್ಚಸ್ಸಿನ ಹೊರತಾಗಿಯೂ ವಾರಾಣಸಿಯಲ್ಲಿ ಕುಸಿಯುತ್ತಿರುವುದು 2027ರ ವಿಧಾನಸಭಾ ದೃಷ್ಟಿಯಿಂದ ಬಿಜೆಪಿಗೆ ಶುಭ ಸೂಚನೆಯಂತೂ ಅಲ್ಲ. ಹಾಗಾಗಿ ವಾರಾಣಸಿಯ ಆ ಎರಡು ಎಂ ಎಲ್ ಸಿ ಸ್ಥಾನಗಳ ಸೋಲು ಗಂಭೀರವೆನಿಸಿಕೊಳ್ಳುತ್ತವೆ.

ಹವ್ಯಾಸಿ ಬರವಣಿಗೆ ಮೂಲಕ ಪತ್ರಿಕೋದ್ಯಮ ಮತ್ತು ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯವರೆಗೆ ವಿಸ್ತರಿಸಿಕೊಂಡಿರುವ ಲೇಖಕರು ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಷಯಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಡುವಂತವರು. ಹಲವು ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ವೆಬ್ ಆವೃತ್ತಿಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದ್ದು, ತಮ್ಮ ಮೊನಚು ಬರವಣಿಗೆ ಶೈಲಿ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಓದುಗರ ಗಮನ ಸೆಳೆದಿದ್ದಾರೆ.
