ನೆತನ್ಯಾಹುಗೆ ನೆರವಾಗುವುದೇ ಸೋಲಿನಂಥಾ ಗೆಲುವು?

ಜಗತ್ತು ವಿಪರೀತ ಕಾತರದಿಂದ ಕಾಯುತ್ತಿದ್ದ ಇಸ್ರೇಲ್‌ ಫಲಿತಾಂಶ ಬಹುಪಾಲು ಹೊರಬಿದ್ದಿದೆ. ಮಧ್ಯ ಪ್ರಾಚ್ಯದ ಪ್ರಕ್ಷುಬ್ಧತೆಗೆ ಕಾರಣವಾಗುವ ಮೂಲಕ ಜಾಗತಿಕ ತೈಲ ಬಿಕ್ಕಟ್ಟು, ಆರ್ಥಿಕ ಮುಗ್ಗಟ್ಟುಗಳಿಗೆ ಕಾರಣವಾಗಿದ್ದ ಇಸ್ರೇಲ್‌ನ ಚುನಾವಣೆ ಕೇವಲ ಅಲ್ಲಿನ ರಾಜಕೀಯ ಬೆಳವಣಿಗೆ ಮಾತ್ರವಾಗಿರದೆ, ವಿಶ್ವದ ಚಿತ್ರಣವನ್ನೆ ಬದಲಿಸುವ ಸಾಮರ್ಥ್ಯ ಹೊಂದಿದೆ.

ಪ್ಯಾಲಿಸ್ತೇನ್‌ ಮತ್ತು ವೆಸ್ಟ್‌ ಬ್ಯಾಂಕ್‌ ಮೇಲಿನ ದಾಳಿಗಳಿಂದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮೂದಲಿಕೆಗೆ ತುತ್ತಾಗಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಹುಗೆ ಫಲಿತಾಂಶದಲ್ಲಿ ಭಾರೀ ಹಿನ್ನಡೆಯಾಗುವಂತೆ ಕಂಡುಬರುತ್ತದಾದರೂ, ಆತನ ಆಟವಿನ್ನು ಮುಗಿದಿಲ್ಲ ಎಂಬುದನ್ನೂ ಫಲಿತಾಂಶ ಒತ್ತಿ ಹೇಳುತ್ತಿದೆ. ಇತ್ತೀಚಿನ ಲಭ್ಯ ಮಾಹಿತಿಗಳ ಪ್ರಕಾರ, ನೆತನ್ಯಾಹು ಅವರ ಲ್ಯಿಕುಡ್ ಪಕ್ಷದ ಮೈತ್ರಿಕೂಟಕ್ಕೆ 53 ಸ್ಥಾನಗಳು, ಗಾಡಿ ಐಸೆನ್‌ಕೋಟ್ ನೇತೃತ್ವದ ಪ್ರಮುಖ ವಿರೋಧ ಪಕ್ಷಗಳ ಒಕ್ಕೂಟಕ್ಕೆ 48 ಸ್ಥಾನಗಳು ಮತ್ತು ಅರಬ್ ನೇತೃತ್ವದ ಪಕ್ಷಗಳಿಗೆ ಒಟ್ಟು 19 ಸ್ಥಾನಗಳು ದೊರೆತಿವೆ. ಇಸ್ರೇಲ್‌ನ 120 ಸದಸ್ಯರ ಸಂಸತ್ತಾದ ನೆಸೆಟ್‌ನಲ್ಲಿ ಸರ್ಕಾರ ರಚಿಸಲು ಕನಿಷ್ಠ 61 ಸದಸ್ಯರ ಮ್ಯಾಜಿಕ್‌ ನಂಬರ್‍‌ ಅತ್ಯಗತ್ಯ. ಯಾವ ಬಣವೂ ಸ್ವತಂತ್ರವಾಗಿ ಬಹುಮತದ ಗಡಿ ದಾಟಿಲ್ಲ. ಅಂದರೆ ಅಲ್ಲೀಗ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಸುದೀರ್ಘ 17 ವರ್ಷಗಳಿಂದ ಇಸ್ರೇಲ್‌ನಲ್ಲಿ ಆಡಳಿತ ನಡೆಸಿಕೊಂಡು ಬಂದಿದ್ದ ತೀವ್ರ ಬಲಪಂಥೀಯ ಸಿದ್ದಾಂತದ ನೆತನ್ಯಾಹು, ಹಮಾಸ್‌ ಬಂಡುಕೋರರು ಮತ್ತು ಇರಾನ್‌ ಮೇಲಿನ ಯುದ್ಧದ ಹೊರತಾಗಿಯೂ ಮೆಜಾರಿಟಿ ಪಡೆಯುವಲ್ಲಿ ವಿಫಲವಾಗಿರೋದು ದೊಡ್ಡ ಸೋಲು ಅಂತಲೇ ಹೇಳಬಹುದು.  ಅತ್ತ, ಚುನಾವಣೆಯಲ್ಲಿ ನೆತನ್ಯಾಹು ಆಡಳಿತವನ್ನು ವಿರೋಧಿಸಿ ಪ್ರಚಾರ ಮಾಡಿದ್ದ ವಿರೋಧ ಪಕ್ಷಗಳಿಗೆ ಒಟ್ಟು 67 ಸ್ಥಾನಗಳು ಲಭಿಸಿವೆ. ಮಾಜಿ ಸೇನಾಧಿಕಾರಿ ಐಸೆನ್‌ಕೋಟ್‌ ನೇತೃತ್ವದ ವಿರೋಧಿ ಕೂಟ (48) ಮತ್ತು ಅರಬ್‌ ಪಕ್ಷಗಳು (19) ಒಟ್ಟಾಗಿ ಸೇರಿ ಸರ್ಕಾರ ರಚನೆ ಮಾಡಿ, ನೆತನ್ಯಾಹು ಪದಚ್ಯುತಿಗೆ ಕಾರಣವಾಗಬಹುದೆಂದು ಮೇಲ್ನೋಟಕ್ಕೆ ಕಾಣಿಸುತ್ತೆ. ಆದರೆ ಇಸ್ರೇಲಿ ರಾಜಕಾರಣ ಇಷ್ಟು ಸರಳವಾಗಿಲ್ಲ.

ಇದು ಅರ್ಥವಾಗಬೇಕೆಂದರೆ ನಾವು ಎರಡು ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಈ ಚುನಾವಣೆಯಲ್ಲಿ ಯಾವುದು ಪ್ರಧಾನ ಚರ್ಚೆಯಾಗಿತ್ತು? ಮತ್ತು ಅರಬ್‌ ಪಕ್ಷಗಳ ಚಾರಿತ್ರಿಕ ಹಿನ್ನೆಲೆ ಎಂತದ್ದು?

ಇದು ಯುದ್ದದ ವಿರುದ್ಧ ತೀರ್ಪೆ?

ನೆತನ್ಯಾಹು ವಿರುದ್ಧ ಮತ ಚಲಾಯಿಸಿರುವ ಇಸ್ರೇಲಿ ಪ್ರಜೆಗಳು, ಆತನ ಯುದ್ಧದಾಹಿ ವಿರುದ್ಧ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ ಎಂದುಕೊಳ್ಳಲಾಗದು. ಯಾಕೆಂದರೆ ಈ ಚುನಾವಣೆ ನಡೆದದ್ದು ಯುದ್ದದ ಪರ ಅಥವಾ ವಿರುದ್ಧ ಎಂಬ ಚರ್ಚೆಯನ್ನು ಆಧರಿಸಿ ಅಲ್ಲ. ಯುದ್ಧದಲ್ಲಿ ಇಸ್ರೇಲಿಗೆ ಲಾಭ ಆಯಿತೋ ಅಥವಾ ಇಲ್ಲವೋ ಎಂಬುದನ್ನು ಆಧರಿಸಿ!

2023ರ ಅಕ್ಟೋಬರ್‍‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ಬಹುದೊಡ್ಡ ದಾಳಿ ನಡೆಸಿದರು. ಅದರಲ್ಲಿ ಸಾವಿರಾರು ಜನ ಅಸುನೀಗಿದರು. ರಕ್ಷಣೆ ಮತ್ತು ಗೂಢಚಾರಿ ಸಂಗತಿಗಳಲ್ಲಿ ಜಗತ್ತಿನ ಅದ್ವಿತೀಯ ಶಕ್ತಿ ಎನಿಸಿದ್ದ ಇಸ್ರೇಲ್‌ ಮೇಲೆ ನಡೆದ ಈ ಬೃಹತ್‌ ದಾಳಿಯಿಂದ ಇಸ್ರೇಲಿಗರು ಕನಲಿಹೋದರು. ನೆತನ್ಯಾಹು ಆಳ್ವಿಕೆಯಲ್ಲಿ ದೇಶವಿನ್ನು ಸುರಕ್ಷಿತವಾಗಿರಲಾರದು ಎಂಬ ಅಭಿಪ್ರಾಯಗಳು ಗಟ್ಟಿಯಾಗಲಾರಂಭಿಸಿದವು. ಹೇಗಾದರು ಮಾಡಿ ಆ ಅಭಿಪ್ರಾಯವನ್ನು ಹೋಗಲಾಡಿಸಬೇಕೆಂಬ ಹಠಕ್ಕೆ ಬಿದ್ದ ನೆತನ್ಯಾಹು ಕಂಡುಕೊಂಡ ದಾರಿಯೇ `ದೀರ್ಘಕಾಲದ ಪ್ರತಿಕಾರ ದಾಳಿಯ ಯುದ್ಧ’! ಗಾಜಾ ಪಟ್ಟಿ ಮತ್ತು ವೆಸ್ಟ್‌ಬ್ಯಾಂಕ್‌ಗಳ ಮೇಲೆ ಅಮಾನವೀಯ ದಾಳಿ ಮಾಡಲಾಯ್ತು. ಹಮಾಸ್‌ ಬಂಡುಕೋರರಿಗೆ ಬಲ ನೀಡುತ್ತಿದೆ ಎಂಬ ಆರೋಪದಲ್ಲಿ ಇರಾನ್‌ ಮೇಲೆಯೂ ಇಸ್ರೇಲ್‌ ಮುಗಿಬಿದ್ದಿತು. ತಮ್ಮ ವಿರುದ್ಧ ದಾಳಿ ನಡೆಸಿದ ಶತ್ರುಗಳಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂಬ ರಾಷ್ಟ್ರೀಯವಾದವನ್ನು ಜಾಗೃತಗೊಳಿಸಿದ ಆತ, ತನ್ನ ಪ್ರಜೆಗಳ ವಿಶ್ವಾಸವನ್ನು ಮರಳಿ ಪಡೆಯಲು ಯತ್ನಿಸಿದ.

ಅಮೆರಿಕಾ ಜೊತೆ ಸೇರಿಕೊಂಡ ನಂತರ ಯುದ್ಧದಲ್ಲಿ ಇಸ್ರೇಲ್‌ಗೆ ಮೇಲುಗೈ ಸಿಕ್ಕಂತೆ ಗೋಚರಿಸಿದರೂ, ಶತ್ರುಗಳನ್ನು ಸಂಪೂರ್ಣವಾಗಿ ನಾಶ ಮಾಡುವಲ್ಲಿ ಅಥವಾ ಇನ್ನೆಂದೂ ಇಸ್ರೇಲ್‌ ತಂಟೆಗೆ ಬರದಂತೆ ನಿಶ್ಯಕ್ತಗೊಳಿಸುವಲ್ಲಿ ನೆತನ್ಯಾಹು ಯಶಸ್ವಿಯಾಗಲಿಲ್ಲ. ವಿರೋಧ ಪಕ್ಷಗಳು ಇದನ್ನೇ ತಮ್ಮ ಚುನಾವಣಾ ವಿಷಯವಾಗಿಸಿಕೊಂಡವು. ಮೊದಲನೆಯದಾಗಿ, 2023ರ ಭಯಾನಕ ದಾಳಿಯನ್ನು ತಡೆಯುವಲ್ಲಿ ನೆತನ್ಯಾಹು ಸರ್ಕಾರ ವಿಫಲವಾಯಿತು; ಅದೊಂದು ಅತಿದೊಡ್ಡ ರಕ್ಷಣಾ ವೈಫಲ್ಯ; ಸುದೀರ್ಘ ಯುದ್ದ ನಡೆಸಿ ದೇಶದ ಬೊಕ್ಕಸ ಬರಿದು ಮಾಡಿದರೂ, ವಿರೋಧಿಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ನೆತನ್ಯಾಹುಗೆ ಸಾಧ್ಯವಾಗಲಿಲ್ಲ ಎಂಬುದು ಐಸೆನ್‌ಕೋಟ್‌ ನೇತೃತ್ವದ ವಿರೋಧ ಪಕ್ಷಗಳ ಪ್ರಚಾರದ ಕೇಂದ್ರ ಸರಕು. ತನ್ನ ಅಧಿಕಾರದ ರಕ್ಷಣೆಗೆ ಯಾವ ಯುದ್ಧದಾಹಿ ನೀತಿಯನ್ನು ನೆತನ್ಯಾಹು ಅಳವಡಿಸಿಕೊಂಡನೋ, ಅದೇ ಯುದ್ಧದಾಹಿ ನೀತಿಯನ್ನೆ ವಿರೋಧ ಪಕ್ಷಗಳೂ ಬಳಸಿಕೊಂಡವು. ಇಸ್ರೇಲಿ ಜನ ಯುದ್ದದಲ್ಲಿ ಲಾಭ-ನಷ್ಟದ ಮೇಲೆ ಮತ ಚಲಾಯಿಸಿದರೆ ಹೊರತು, ಯುದ್ದದ ಪರ-ವಿರುದ್ಧ ಎಂಬ ಚರ್ಚೆಯ ಮೇಲಲ್ಲ. ಇದು ಪರೋಕ್ಷವಾಗಿ ನೆತನ್ಯಾಹುಗೆ ವರವಾಯಿತು. ಅಷ್ಟೆಲ್ಲ ವಿರೋಧದ ನಡುವೆಯೂ ಆತನ ಲ್ಯಿಕುಡ್ ಪಕ್ಷದ ಮೈತ್ರಿಕೂಟ ಅತಿದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದ್ದು ಯುದ್ದಕೇಂದ್ರಿತವಾಗಿ ಚುನಾವಣೆ ನಡೆದಿದ್ದರಿಂದ.

ಇಸ್ಲಾಂ ಮೂಲದ ಅರಬ್ ಪಕ್ಷಗಳು

ಇನ್ನು ಅರಬ್‌ ಪಕ್ಷಗಳ ವಿಚಾರಕ್ಕೆ ಬರುವುದಾದರೆ, 1948ರಲ್ಲಿ ಇಸ್ರೇಲ್‌ ದೇಶ ಯಹೂದಿ ಜನರ ಪ್ರಾಬಲ್ಯದೊಂದಿಗೆ ಸ್ಥಾಪನೆಯಾದಾಗ, ಪೆಲಿಸ್ತೇನಿ ಹಿನ್ನೆಲೆಯ ಒಂದಷ್ಟು ಇಸ್ಲಾಂ ಧರ್ಮೀಯರು ಗಾಜಾ ಅಥವಾ ವೆಸ್ಟ್‌ಬ್ಯಾಂಕ್‌ಗೆ ತೆರಳದೆ ಇಸ್ರೇಲಿನಲ್ಲೆ ಉಳಿದುಕೊಳ್ಳುತ್ತಾರೆ. ಇವರನ್ನು ಇಸ್ರೇಲ್‌ ಪ್ರಜೆಗಳೆಂದೆ ಪರಿಗಣಿಸಿ ಮತದಾನದ ಹಕ್ಕು ನೀಡಲಾಯ್ತು. ದೇಶದ ಜನಸಂಖ್ಯೆಯ ಶೇ.20ರಷ್ಟಿರುವ ಈ ಜನರು ರಾಜಕೀಯವಾಗಿ ಸಂಘಟಿತರಾಗಿ ಹುಟ್ಟುಹಾಕಿಕೊಂಡಿದ್ದು ಈ ಅರಬ್‌ ಪಕ್ಷಗಳ ಒಕ್ಕೂಟ. ಇಸ್ರೇಲ್ ಪ್ರಜೆಗಳಾದರೂ ಪೆಲಸ್ತೀನ್‌ ಪರವಾದ ಒಲವು ಹೊಂದಿದ್ದಾರೆ ಎಂಬ ಸಂಶಯದ ದೃಷ್ಟಿಯಿಂದ ಯಹೂದಿ ಜನ ಇವರನ್ನು `ದೇಶದ್ರೋಹಿ’ಗಳಂತೆ ಕಾಣುತ್ತಾ ಬಂದಿದ್ದಾರೆ. ಸಾರ್ವಜನಿಕ ಅವಕಾಶಗಳಲ್ಲಿ ಅವರನ್ನು ಹೊರಗಿಡುತ್ತಾ, ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಾ ಬರಲಾಗುತ್ತಿದೆ. ಈ ಬಾರಿ ಅವರೆಲ್ಲ ಸಂಘಟಿತರಾಗಿ ನೆತನ್ಯಾಹು ಯುದ್ಧದಾಹಿ ವೈಖರಿಯ ವಿರುದ್ಧ ತಿರುಗಿಬಿದ್ದ ಪರಿಣಾಮ ಇದೇ ಮೊದಲ ಬಾರಿಗೆ ಇಷ್ಟು ಉತ್ತಮ ಫಲಿತಾಂಶ ದಕ್ಕಿಸಿಕೊಂಡಿದ್ದಾರೆ.

ಇಲ್ಲೀಗ ನಾವು ಗಮನಿಸಬೇಕಾದ ಸಂಗತಿಯೆಂದರೆ, ನೆತನ್ಯಾಹು ಮೈತ್ರಿ ಕೂಟ ಹಾಗೂ ಐಸೆನ್‌ಕೋಟ್‌ ಮೈತ್ರಿ ಕೂಟಗಳೆರಡೂ ಯುದ್ಧದ ಪರವಾಗಿ, ಯುದ್ದದಲ್ಲಾದ ಲಾಭ-ನಷ್ಟದ ವಿಚಾರದಲ್ಲಿ ಕಾದಾಡಿದರೆ, ಅರಬ್‌ ಪಕ್ಷಗಳು ಯುದ್ಧದಾಹಿ ನೀತಿಯ ವಿರುದ್ಧ ಒಂದುಗೂಡಿದ್ದವು. ಈಗ ಅತಂತ್ರ ಫಲಿತಾಂಶ ಬಂದಿದೆ ಎಂಬ ಕಾರಣಕ್ಕೆ ಐಸೆನ್‌ಕೋಟ್‌ ನೇತೃತ್ವದ ವಿರೋಧ ಪಕ್ಷಗಳು ಅರಬ್‌ ಪಕ್ಷಗಳ ಬೆಂಬಲ ಪಡೆಯಲು ಮುಂದಾದರೆ ಯುದ್ದದ ಪರ ಮತ್ತು ಯುದ್ದದ ವಿರುದ್ಧ ಎಂಬ ಅಭಿಪ್ರಾಯ ಭೇದ ಭುಗಿಲೇಳುತ್ತದೆ. ಮುಖ್ಯವಾಗಿ, ವಿರೋಧ ಪಕ್ಷಗಳನ್ನು ಬೆಂಬಲಿಸಿದವರು ಕೂಡಾ ನೆತನ್ಯಾಹುವನ್ನು ಬೆಂಬಲಿಸಿಕೊಂಡು ಬಂದಿದ್ದ ಅದೇ ಯಹೂದಿ ಧರ್ಮೀಯರು. ಅರಬ್‌ ಪಕ್ಷಗಳ ಜೊತೆಗಿನ ಸಂಭಾವ್ಯ ವಿಪಕ್ಷಗಳ ಮೈತ್ರಿಯನ್ನು ಅವರೆಲ್ಲ ವಿಶ್ವಾಸದ್ರೋಹ ಎಂತಲೇ ಪರಿಗಣಿಸುವ ಸಾಧ್ಯತೆ ಇದೆ. ಈಗಾಗಲೇ ವಿರೋಧಿ ಕೂಟದ ಹಲವು ರಾಷ್ಟ್ರೀಯವಾದಿ ಪಕ್ಷಗಳು ಯಾವುದೇ ಕಾರಣಕ್ಕೂ ಅರಬ್‌ ಪಕ್ಷಗಳ ಜೊತೆಗೂಡಿ ಸರ್ಕಾರ ರಚನೆ ಮಾಡಬಾರದು ಎಂದು ಹಠ ಹಿಡಿದಿವೆ. ತಮ್ಮ ಕಾಮನ್‌ ವಿರೋಧಿ ನೆತನ್ಯಾಹು ಅನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಕಾರಣವೊಂದನ್ನು ಬಿಟ್ಟರೆ ವಿರೋಧ ಪಕ್ಷಗಳು ಒಟ್ಟುಗೂಡಲು ಸಾಕಷ್ಟು ಅಡೆತಡೆಗಳಿವೆ.

ಯಹೂದಿಗಳು ನೆತನ್ಯಾಹು ವಿರುದ್ದ ಸಿಟ್ಟಾಗಿದ್ದೇಕೆ?

ಇಸ್ರೇಲ್‌ನ ಬಹುಪಾಲು ಯಹೂದಿಗಳು ನೆತನ್ಯಾಹು ವಿರುದ್ಧ ತಿರುಗಿಬೀಳಲು ಮತ್ತೊಂದು ಕಾರಣವೆಂದರೆ ಆತನ ಅಲ್ಟ್ರಾ-ಆರ್ಥೊಡಾಕ್ಸ್ (ಯಹೂದಿಗಳಲ್ಲೆ ಮೇಲುವರ್ಗ) ಓಲೈಕೆ ರಾಜಕಾರಣ. ಜುಲೈ 2026ರಲ್ಲಿ ಈ ಸಮುದಾಯದ ಯೆಶಿವಾ ಯುವಕರಿಗೆ ಕಡ್ಡಾಯ ಸೇನಾ ಸೇವೆಯಿಂದ ವಿನಾಯಿತಿ ನೀಡುವ ಪ್ರಸ್ತಾಪ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಯುದ್ಧದಿಂದ ಸೇನೆಯಲ್ಲಿ ಸೈನಿಕರ ಕೊರತೆ ಎದುರಾಗಿರುವಾಗ, ಸಾಮಾನ್ಯ ನಾಗರಿಕರು ತಮ್ಮ ಉದ್ಯೋಗ, ಕುಟುಂಬ ಮತ್ತು ಜೀವವನ್ನು ಪಣಕ್ಕಿಟ್ಟು ಸೇನೆಗೆ ಸೇರಬೇಕು; ಆದರೆ ಧಾರ್ಮಿಕ ಅಧ್ಯಯನದ ನೆಪದಲ್ಲಿ ಸಂಪ್ರದಾಯವಾದಿ ಯೆಶಿವಾ ಯುವಕರಿಗೆ ವಿನಾಯಿತಿ ಏಕೆ ಎಂಬ ಪ್ರಶ್ನೆ ಎದ್ದಿತು. ಇಸ್ರೇಲ್‌ನ ಹೈಕೋರ್ಟ್‌ ಈ ವಿನಾಯಿತಿಯನ್ನು ರದ್ದುಗೊಳಿಸಿದರೂ, ನೆತನ್ಯಾಹು ಓಲೈಕೆ ರಾಜಕಾರಣ ತಳಶ್ರೇಣಿಯ ಯಹೂದಿಗಳ ಅಸಮಾಧಾನವನ್ನು ಹೆಚ್ಚಿಸಿತು.

ಸಾರಾಂಶದಲ್ಲಿ ನೋಡಿದಾಗ ಯಹೂದಿಗಳು ನೆತನ್ಯಾಹು ವಿರುದ್ಧ ಮತ ಹಾಕಲು ಅವರದೆ ಪ್ರತ್ಯೇಕ ಕಾರಣಗಳಿವೆಯೆ ಹೊರತು, ಯುದ್ದವಿರೋಧಿ ನಿಲುವಿನಿಂದಲ್ಲ. ಇದು ವಿರೋಧ ಪಕ್ಷಗಳ ಒಟ್ಟುಗೂಡಲು ಇರುವ ದೊಡ್ಡ ತೊಡಕು. ನೆತನ್ಯಾಹುಗೆ ಈಗಲೂ ಅವಕಾಶ ಉಳಿಸಿರುವುದು ಇದೇ ತೊಡಕು.

ವಿರೋಧ ಪಕ್ಷಗಳು ತಮ್ಮ ವೈಪರೀತ್ಯಗಳನ್ನು ಸರಿಪಡಿಸಿಕೊಂಡು ಒಮ್ಮತಕ್ಕೆ ಬರುವವರೆಗೆ ಆತನೇ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯಲಿದ್ದಾನೆ. ಈ ಅವಧಿಯಲ್ಲಿ ಆತ ತನ್ನ ಪರವಾಗಿ ವಿರೋಧ ಪಕ್ಷಗಳನ್ನು ಸೆಳೆದರೂ ಅಚ್ಚರಿಯಿಲ್ಲ. ಈಗಾಗಲೇ ಅರಬ್ ಪಕ್ಷಗಳ ಗೆಲುವಿನ ಮೇಲೆ ದಾಳಿಗೆ ಮುಂದಾಗಿರುವ ನೆತಾನ್ಯಾಹು ‘ಚುನಾವಣಾ ಅಕ್ರಮ ನಡೆಸಿ ಅವು ಗೆದ್ದಿವೆ’ ಎಂದಿದ್ದಾನೆ. ಆ ಮೂಲಕ ಅರಬ್ ಪಕ್ಷಗಳು ಮತ್ತು ಆ ಸಮುದಾಯವನ್ನು ಡೆಮನೈಸ್ ಮಾಡುವುದು ಆತನ ಉದ್ದೇಶ. ಇದರಿಂದಾಗಿ ಅವುಗಳ ಜೊತೆ ಮೈತ್ರಿ ಮಾಡಿಕೊಳ್ಳಲು ವಿರೋಧ ಪಕ್ಷಗಳಲ್ಲಿ ಅಪಸ್ವರ ಭುಗಿಲೇಳುವಂತೆ ಮಾಡಿದರೆ ಮೈತ್ರಿ ಕಗ್ಗಂಟಾಗುತ್ತದೆ. ಅದರ ಲಾಭ ಪಡೆದು ವಿರೋಧಿ ಒಕ್ಕೂಟದಲ್ಲಿರುವ ಕೆಲವು ಸಣ್ಣಪುಟ್ಟ ಅರಬ್ ವಿರೋಧಿ ಪಕ್ಷಗಳನ್ನು ತನ್ನತ್ತ ಸೆಳೆದುಕೊಳ್ಳಬಹುದು ಅಥವಾ ಸರ್ಕಾರ ರಚನೆಯ ವಿಳಂಬವನ್ನು ನೆಪ ಮಾಡಿಕೊಂಡು ಮರು ಚುನಾವಣೆ ಘೋಷಿಸಬಹುದು ಅನ್ನೋದು ಆತನ ಲೆಕ್ಕಾಚಾರ. ಇಸ್ರೇಲ್ ಡೆಮಾಕ್ರೆಸಿ ಇನ್‌ಸ್ಟಿಟ್ಯೂಟ್‌ನ ತಮರ್‍‌ ಹರ್ಮನ್‌ ಹೇಳುವ ಒಂದು ಮಾತು ಇಲ್ಲಿ ಮುಖ್ಯವಾಗುತ್ತದೆ “ಯಾರಿಂದಲೂ ನಿಭಾಯಿಸಲು ಸಾಧ್ಯವೆ ಇಲ್ಲವೆನ್ನುವ ಸಮಸ್ಯೆಗಳನ್ನೂ ನೆತನ್ಯಾಹು ನಿಭಾಯಿಸಬಲ್ಲ. ರಾಜಕೀಯವಾಗಿ ಅವನೊಬ್ಬ ಜಾದೂಗಾರ”. ಇಂಥಾ ನೆತನ್ಯಾಹು ಮುಂದೆ ಈಗಿನ ಅತಂತ್ರ ಪರಿಸ್ಥಿತಿ ಎಲ್ಲಾ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಮುಂದೇನು ಮಾಡಬಲ್ಲ?

ವಿರೋಧ ಪಕ್ಷಗಳು ಒಮ್ಮತಕ್ಕೆ ಬಂದು ಸರ್ಕಾರ ರಚನೆಗೆ ವಿಳಂಬ ಮಾಡುವುದನ್ನು ನೆಪ ಮಾಡಿಕೊಂಡು ಆತ ಮರು ಚುನಾವಣೆಯನ್ನು ಘೋಷಿಸಿದ್ದೇ ಆದಲ್ಲಿ ಅದರ ಸಂಪೂರ್ಣ ಲಾಭ ನೆತನ್ಯಾಹು ಪಕ್ಷಕ್ಕೆ ಲಭಿಸಲಿದೆ. ಅಧಿಕಾರ ಆತನ ಕೈಯಲ್ಲಿರುತ್ತದೆ. ಏಟುತಿಂದ ಎಚ್ಚರವು ಮರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡುತ್ತೆ. ಅಲ್ಲದೇ, ಅತಂತ್ರ ಸ್ಥಿತಿಯನ್ನು ಕಂಡ ಜನ ಮತ್ತೊಮ್ಮೆ ಅಂತಹ ಸ್ಥಿತಿ ತಂದುಕೊಳ್ಳಬಾರದೆಂದು ಈಗ ಹೆಚ್ಚು ಸ್ಥಾನ ಗಳಿಸಿರುವ ನೆತನ್ಯಾಹು ಪರ ಮತ ಹಾಕುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಮುಖ್ಯವಾಗಿ, ಇಸ್ರೇಲಿ ಮತದಾರರ ಪೈಕಿ ಬಹಳಷ್ಟು ಜನ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲ ಮತ್ತೊಮ್ಮೆ ಹಣ ಖರ್ಚು ಮಾಡಿಕೊಂಡು ಸ್ವದೇಶಕ್ಕೆ ಮರಳಿ ಮತ ಚಲಾಯಿಸುವುದು ಅನುಮಾನ.

ಈ ಸಾಧ್ಯತೆಗಳನ್ನೆಲ್ಲ ಮೀರಿ, ವಿರೋಧ ಪಕ್ಷಗಳು ಮತ್ತು ಅರಬ್‌ ಪಕ್ಷಗಳು ಒಮ್ಮತಕ್ಕೆ ಬಂದು ಸರ್ಕಾರ ರಚನೆ ಮಾಡಿದವು ಅಂತಲೇ ಇಟ್ಟುಕೊಳ್ಳಿ. ಅವುಗಳಿಗೆ ಆಡಳಿತ ಸುಗಮವಾಗಿ ಇರಲಾರದು. ಹದಿನೇಳು ವರ್ಷಗಳ ಕಾಲ ಅಧಿಕಾರದ ರುಚಿ ಕಂಡಿರುವ ನೆತನ್ಯಾಹು, ಈಗ ಅತಿದೊಡ್ಡ ಪಕ್ಷವಾಗಿ ಅಧಿಕಾರ ವಂಚಿತನಾಗಿ ಇರಬಲ್ಲನೇ? ಗಾಜಾ ಸಂಘರ್ಷ, ಇರಾನ್‌ ಯುದ್ಧಗಳನ್ನು ನೆಪ ಮಾಡಿಕೊಂಡು ಅಲ್ಪಕಾಲದಲ್ಲೆ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನಕ್ಕೂ ಮುಂದಾಗಬಹುದು. ಯುದ್ದದ ವಿಚಾರವಾಗಿ ವಿರೋಧಿ ಕೂಟಗಳ ನಡುವಿರುವ ಭಿನ್ನಾಭಿಪ್ರಾಯವೆ ಆತನಿಗೆ ಬಂಡವಾಳ ಆಗಲಿದೆ. ಒಟ್ಟಿನಲ್ಲಿ, ಸೋಲಿನಂಥಾ ಈ ಗೆಲುವನ್ನು ನೆತನ್ಯಾಹು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಇನ್ನು ಕೆಲವು ದಿನಗಳಲ್ಲಿ ಇಸ್ರೇಲ್‌ನ ರಾಜಕಾರಣವನ್ನು ನಿರ್ಧರಿಸಲಿದೆ. ಒಂದಂತೂ ಸತ್ಯ, ಬಲಹೀನಗೊಂಡಿರುವ ನೆತನ್ಯಾಹು ಅಧಿಕಾರದಿಂದ ದೂರ ಇದ್ದಷ್ಟು ಬಲಿಷ್ಠಗೊಳ್ಳುತ್ತಾರೆ; ಅದರ ಬದಲಿಗೆ ಅತಂತ್ರ ಸರ್ಕಾರ ನಡೆಸಲು ಹೆಣಗಾಡಲು ಬಿಟ್ಟಷ್ಟೂ ಜನರ ಮುಂದೆ ದುರ್ಬಲ ನಾಯಕನಾಗಿ ಅನಾವರಣವಾಗುತ್ತಾರೆ. ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆಯಲ್ಲವೇ!

One thought on “ನೆತನ್ಯಾಹುಗೆ ನೆರವಾಗುವುದೇ ಸೋಲಿನಂಥಾ ಗೆಲುವು?”

  1. ಉತ್ತಮ ವಾದ ಇಸ್ರೇಲಿನ ಚುನಾವಣಾ ಟಿ.ಎನ್ನೆಸ್.

Leave a Reply

Your email address will not be published. Required fields are marked *