ಎಲ್‌ಐಸಿ ಎಂ ಡಿ ದಿಢೀರ್ ಸ್ವಯಂ ನಿವೃತ್ತಿ!: ವಿಮಾದಾರರ ₹2600 ಕೋಟಿ ಏನಾಯ್ತು?

ಇಡೀ ದೇಶ ಚುನಾವಣಾ ಆಯೋಗದ ಗದ್ದಲದಲ್ಲಿ ಮೈಮರೆತಿರುವಾಗ ಸದ್ದಿಲದೆ ಇನ್ನೊಂದು ಗಂಭೀರ ಘಟನೆ ನಡೆದುಹೋಗಿದೆ. ಕೋಟ್ಯಂತರ ಜನರು ತಮ್ಮ ಕುಟುಂಬದವರ ಭವಿಷ್ಯಕ್ಕಾಗಿ ಲಕ್ಷಾಂತರ ಕೋಟಿ ಹಣ ಹೂಡಿಕೆ ಮಾಡಿರುವ ಎಲ್‌ಐಸಿಯ ಮ್ಯಾನೇಜಿಂಗ್‌ ಡೈರೆಕ್ಟರ್ ಹಠಾತ್ತನೆ ಸ್ವಯಂ ನಿವೃತ್ತಿ ತೆಗೆದುಕೊಂಡು ನಿರ್ಗಮಿಸಿದ್ದಾರೆ. ದಿನೇಶ್‌ ಪಂಥ್‌ ಅವರು 2027ರ ಮೇ31ರವರೆಗೆ ಎಂ ಡಿ ಹುದ್ದೆಯಲ್ಲಿ ಮುಂದುವರೆಯಬೇಕಿತ್ತು. ಆದರೆ ಸೆಪ್ಟೆಂಬರ್ 24ರಂದು ಏಕಾಏಕಿ ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಸರ್ಕಾರ ಕೂಡಾ ತರಾತುರಿಯಲ್ಲಿ ಅವರ ನಿವೃತ್ತಿಯನ್ನು ಅನುಮೋದಿಸಿದೆ. ಇಷ್ಟೇ ಆಗಿದ್ದರೆ, ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ, ಅವರು ನಿವೃತ್ತಿ ತೆಗೆದುಕೊಳ್ಳುವ ಕೇವಲ ಆರು ದಿನಗಳ ಹಿಂದೆ, ಎಲ್‌ಐಸಿ ಹೂಡಿಕೆಯಲ್ಲಿ  ₹2,684.57 ಕೋಟಿ ಅವ್ಯವಹಾರ ನಡೆದಿದೆ ಎಂದು ಸಿಬಿಐ ಎಫ್‌.ಐ.ಆರ್ ರೆಜಿಸ್ಟರ್ ಮಾಡಿತ್ತು! ಅದಾದ ಬೆನ್ನಿಗೇ ಪಂಥ್‌ ಸ್ವಯಂ ನಿವೃತ್ತಿ ಪಡೆದಿರುವುದು ಹಲವು ಗುಮಾನಿಗಳು ಪುಟಿದೇಳುವಂತೆ ಮಾಡುತ್ತಿದೆ.

ದಿನೇಶ್ ಪಂತ್ ಅವರು 2025ರ ಜೂನ್ 1ರಂದು LIC ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಮೋಸ್ಟ್ ಇಂಟರೆಸ್ಟಿಂಗ್ಲಿ, ಇಲ್ಲಿಗೆ ಮೂರು ತಿಂಗಳ ಹಿಂದೆ, ಅಂದರೆ ಜೂನ್‌ 2026ರಲ್ಲಿ, ಇದೇ ಕೇಂದ್ರ ಸರ್ಕಾರ ಅವರನ್ನು ಐದು ವರ್ಷಗಳ ಅವಧಿಯವರೆಗೆ IRDAIಯ Whole Time Member (Actuary) ಆಗಿ ನೇಮಕ ಮಾಡಿತ್ತು. ಇಂಥಾ ವ್ಯಕ್ತಿ ಈಗ ದಿಢೀರ್ ಸ್ವಯಂ ನಿವೃತ್ತಿ ತೆಗೆದುಕೊಳ್ತಾರೆ, ಸರ್ಕಾರವೂ ಅನುಮೋದಿಸುತ್ತೆ ಅಂದರೆ ಏನರ್ಥ?

ಪಂತ್ ಅವರು LICಗೆ ಹೊರಗಿನಿಂದ ಬಂದವರಲ್ಲ. ಎಲ್‌ಐಸಿಯೊಳಗೆ ದಶಕಗಳ ಕಾಲ ಕೆಲಸ ಮಾಡಿದ ಅನುಭವ ಅವರಿಗಿದೆ. ವ್ಯವಸ್ಥಾಪಕ ನಿರ್ದೇಶಕರಾಗುವ ಮುನ್ನ ಅವರು ಇನ್ವೆಸ್ಟ್‌ಮೆಂಟ್ ರಿಸರ್ಚ್ ವಿಭಾಗದಲ್ಲಿ ಕೆಲಸ ಮಾಡಿದ್ದರು. ಸಾಲಪತ್ರ, ಷೇರು ವಹಿವಾಟು, ವೆಂಚರ್ ಫಂಡ್‌ಗಳು ಮತ್ತು ಪ್ರಾಜೆಕ್ಟ್ ಫೈನಾನ್ಸ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ಅವರಿಗೆ ಅನುಭವವಿತ್ತು. LICಯ ಖಜಾನೆ ವಿಭಾಗವನ್ನೂ ಮುನ್ನಡೆಸಿದ್ದರು. ಅಷ್ಟೇ ಅಲ್ಲ, LICಯ ಅಧಿಕೃತ ವಿವರಗಳ ಪ್ರಕಾರ, ಅವರು ಸಂಸ್ಥೆಯ Investment Committee ಮತ್ತು Risk Management Committeeಗಳಲ್ಲಿಯೂ ಕೆಲಸ ಮಾಡಿದ್ದರು. ಅಂದರೆ, LICಯ ಹೂಡಿಕೆ ನಿರ್ಧಾರಗಳ ಒಳಹೊರಗನ್ನು ತಿಳಿದಿದ್ದ ವ್ಯಕ್ತಿಯೇ ಎಂ ಡಿ ಹುದ್ದೆಗೆ ಬಂದಿದ್ದರು.

ಸಿಬಿಐ ದಾಖಲಿಸಿದ ಆ ಅವ್ಯವಹಾರದ ಕೇಸಿನ ವಿವರ ಇಲ್ಲಿ ಮುಖ್ಯವಾಗುತ್ತದೆ. ಯಾಕೆಂದರೆ ಎಲ್‌ಐಸಿ ಸಂಸ್ಥೆಯೇ ತನ್ನ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರು ನೀಡಿದೆ. ಅದನ್ನು ಆಧರಿಸಿ ಸಿಬಿಐ ಸಲ್ಲಿಸಿರುವ ಎಫ್‌ಐಆರ್ ನಲ್ಲಿ ರಿಲಯನ್ಸ್ ಕ್ಯಾಪಿಟಲ್, ಅನಿಲ್ ಅಂಬಾನಿ, ಕಂಪನಿಯ ಮಾಜಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಸೇಠ್ ಸೇರಿದಂತೆ ಹಲವರ ಹೆಸರುಗಳಿವೆ!

ಇದು ಇಂದು ನಿನ್ನೆಯ ಪ್ರಕರಣವಲ್ಲ. 2012ರಿಂದ 2018ರ ಅವಧಿಯಲ್ಲಿ LIC ಸಂಸ್ಥೆಯು ತನ್ನ ಪಾಲಿಸಿದಾರರ ಹೂಡಿಕೆಯ ಹಣವನ್ನು ರಿಲಯನ್ಸ್ ಕ್ಯಾಪಿಟಲ್ ಹೊರತಂದಿದ್ದ ಐದು Non-Convertible Debenturesಗಳಲ್ಲಿ ಒಟ್ಟು ₹3,900 ಕೋಟಿ ಹೂಡಿಕೆ ಮಾಡಿತ್ತು. ಈ ಹಣದ ದುರ್ಬಳಕೆ ಮತ್ತು ಅನಧಿಕೃತ ವರ್ಗಾವಣೆಯಿಂದಾಗಿ LICಗೆ ಸುಮಾರು ₹2,684.57 ಕೋಟಿ ನಷ್ಟವಾಗಿದೆ ಎಂದು CBI ಪ್ರಕರಣದಲ್ಲಿ ಹೇಳಲಾಗಿದೆ.

ಈ ಹೂಡಿಕೆಗಳು ನಡೆದದ್ದು 2012ರಿಂದ 2018ರ ನಡುವೆ. ದಿನೇಶ್ ಪಂತ್ LICಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು 2025ರಲ್ಲಿ. ಹೀಗಾಗಿ, ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರಕ್ಕೆ ಪಂತ್ ಅವರೇ ಕಾರಣರಾಗಿದ್ದರು ಎಂದು ಹೇಳಲು ಯಾವುದೇ ಆಧಾರವಿಲ್ಲ. ಅಲ್ಲದೇ, ಪ್ರಸ್ತುತ CBI ಪ್ರಕರಣದಲ್ಲಿ ಪಂತ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿರುವ ಬಗ್ಗೆಯೂ ಉಲ್ಲೇಖಗಳಿಲ್ಲ. ಆದಾಗ್ಯೂ, ಮೊದಲೇ ಹೇಳಿದಂತೆ ಪಂಥ್‌ ಅವರು ಎಂ ಡಿ ಆಗುವುದಕ್ಕು ಮೊದಲು ಎಲ್‌ ಐ ಸಿ ಯ ಹಲವು ಆಯಕಟ್ಟಿನ, ಹೂಡಿಕೆ ನಿರ್ವಹಣೆಯ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ರಿಲಯನ್ಸ್‌ನಲ್ಲಿ ಹೂಡಿಕೆ ಮಾಡಿದ್ದ ಹಣದ ವಿಚಾರ ಅವರು ಈ ಹಿಂದೆ ಸದಸ್ಯರಾಗಿದ್ದ Investment Committee ಅಥವಾ Board ಮುಂದೆ ಬಂದಿತ್ತೇ? ಪಂತ್ ಅವರು ಅದರ ಬಗ್ಗೆ ಯಾವುದೇ ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೇ? ಎಂಬ ಪ್ರಶ್ನೆಗಳನ್ನು ತಳ್ಳಿಹಾಕಲಾಗದು.

ಇಲ್ಲಿ ಇನ್ನೂ ಒಂದು ಆಯಾಮವಿದೆ. ಒಂದುವೇಳೆ, ಈ ಅವ್ಯವಹಾರದಲ್ಲಿ ಪಂಥ್‌ ಅವರ ಯಾವುದೇ ಪಾತ್ರ ಇಲ್ಲ ಎಂದುಕೊಂಡರೂ, ಪ್ರಸ್ತುತ ಸಿಬಿಐಗೆ ಹಣ ಅವ್ಯವಹಾರದ ತನಿಖೆ ನಡೆಸುವಂತೆ ಎಲ್‌ ಐ ಸಿ ಪರವಾಗಿ ದೂರು ಸಲ್ಲಿಕೆ ಮಾಡಿದ್ದರ ಹಿಂದೆ ಪಂಥ್‌ ಅವರ ಪಾತ್ರವಿತ್ತೆ? ಪ್ರಭಾವಿಗಳ ವಿರುದ್ಧ ದೂರು ಕೊಟ್ಟಿದ್ದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಿ, ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ತರಲಾಯ್ತೆ? ಸದ್ಯಕ್ಕೆ ಈ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಪ್ರಾಮಾಣಿಕ ತನಿಖೆ ನಡೆದರೆ ಮಾತ್ರ ಉತ್ತರಗಳು ಹೊರಬರಬಲ್ಲವು.

ನೆನಪಿರಲಿ, LIC ಅನ್ನೋದು ಕೇವಲ ಜನರಿಂದ ಪ್ರೀಮಿಯಂ ಸಂಗ್ರಹಿಸುವ ವಿಮಾ ಸಂಸ್ಥೆಯಲ್ಲ. ಕೋಟ್ಯಂತರ ಜನರ ಕನಸುಗಳು, ಭವಿಷ್ಯಗಳು ಜಮೆಯಾಗಿರುವ ಸುರಕ್ಷಿತ ಜಾಗ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೋ, ಮದುವೆಗೋ, ಮನೆ ಕಟ್ಟುವುದಕ್ಕೆಂದೋ, ಚಿಕಿತ್ಸೆಗೆಂದೋ, ಅಥವಾ ತಮ್ಮ ನಿರ್ಗಮನದ ನಂತರ ಕುಟುಂಬದವರಿಗೆ ಆಸರೆಯಾಗಲಿ ಎಂದೋ ಜತನವಾಗಿ ಕೂಡಿಟ್ಟಿರುವ ಹಣ ಅಲ್ಲಿರುವುದು. ಆ ಹಣವನ್ನು ಸರ್ಕಾರ ಖಾಸಗಿ ಕಂಪನಿಗಳಲ್ಲಿ ಹೂಡಿಕೆ ಮಾಡುವಾಗ ತುಂಬಾ ಎಚ್ಚರವಹಿಸಬೇಕಾಗುತ್ತದೆ. ಯಾಕೆಂದರೆ, ಅಕಸ್ಮಾತ್‌ ಆ ಹೂಡಿಕೆಯಲ್ಲಿ ತುಸು ಏರುಪೇರಾದರೂ ಪಾಲಿಸಿದಾರರು ಕಂಗಾಲಾಗಬೇಕಾಗುತ್ತದೆ. ಅಂತದ್ದರಲ್ಲಿ ಬರೋಬ್ಬರಿ 2,684 ಕೋಟಿ ರೂ. ಹಣ ದುರುಪಯೋಗವಾಗಿದೆ ಎಂದರೆ ಏನರ್ಥ? ಇಂಥಾ ಸಂದರ್ಭದಲ್ಲಿ ಪಾಲಿಸಿದಾರರಿಗೆ ವಿಶ್ವಾಸ ಮೂಡಿಸುವ ಬದಲು, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೇ ದಿಢೀರ್ ಸ್ವಯಂ ನಿವೃತ್ತಿ ತೆಗೆದುಕೊಂಡು ನಿರ್ಗಮಿಸುತ್ತಾರೆಂದರೆ ಆತಂಕ ಆಗದೆ ಇದ್ದೀತೆ?

ಹಣವನ್ನು ಹೂಡಿಕೆ ಮಾಡಲು ನಿರ್ಧರಿಸಿದವರು ಯಾರು? ಯಾವ ರಿಸ್ಕ್‌ ಪ್ರೊಟೆಕ್ಷನ್ ಗ್ಯಾರಂಟಿ ಮೇಲೆ ಹೂಡಿಕೆ ಮಾಡಲಾಗಿತ್ತು? ಯಾವ ಹಂತದಲ್ಲಿ ಅವ್ಯವಹಾರ ನಡೆಯಿತು? ಹಣ ದುರುಪಯೋಗದ ವಿಚಾರ ಗೊತ್ತಾದ ನಂತರ ವಿಮಾದಾರರ ಭದ್ರೆತೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ?… ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಿದ್ದ ವ್ಯಕ್ತಿಯೇ ಈಗ ಸ್ವಯಂ ನಿವೃತ್ತ!!

ಮುಂದೇನು? ಎಲ್‌ಐಸಿಯೊಳಗೆ ಏನು ನಡೆಯುತ್ತಿದೆ? ಸದ್ಯಕ್ಕಂತು ಈ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ವಿಮಾದಾರರಿಗೆ ವಿಶ್ವಾಸ ಮೂಡಿಸುವ ಕೆಲಸ ತ್ವರಿತವಾಗಿ ಎಲ್‌ಐಸಿ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರದಿಂದ ನಡೆಯಬೇಕಿದೆ.

Leave a Reply

Your email address will not be published. Required fields are marked *