ಅಕ್ಟೋಬರ್ 22ರಂದು ರಾಜಸ್ಥಾನದ ಅಲ್ವಾರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜೀತ್ ಸಿಂಗ್ ಕಪೂರ್ ಹೇಳಿದ ಒಂದು ಮಾತು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಸಾಹಸವನ್ನು ಶ್ಲಾಘಿಸುತ್ತಾ ಅವರು, ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನೀ ಪಡೆಗಳ ನಡುವೆ ಮುಖಾಮುಖಿಗಳು ನಡೆದಿದ್ದು, ಅವು ಈಗಲೂ ಮುಂದುವರಿದಿವೆ ಎಂದು ಹೇಳಿದ್ದರು.
ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿಲ್ಲ ಎಂಬುದನ್ನು ಅವರ ಮಾತುಗಳು ಸ್ಪಷ್ಟಪಡಿಸುತ್ತಿವೆ. ಈ ಮಾತು ಹೇಳಿದ ಶತ್ರುಜಿತ್ ಸಿಂಗ್ ಒಬ್ಬ ರಾಜಕಾರಣಿಯಲ್ಲ, ಸಾಮಾನ್ಯ ಪ್ರಜೆಯೂ ಅಲ್ಲ. ಗಡಿಯಲ್ಲಿ ಕಾವಲು ಕಾಯುವ ಪಡೆಯೊಂದರ ಮುಖ್ಯಸ್ಥರು! ಹಾಗಾಗಿ ಇದನ್ನು ಕೇವಲ ಒಂದು ಭಾಷಣವೆಂದು ತಳ್ಳಿಹಾಕಲಾಗದು.
ಯಾಕೆಂದರೆ ಅವರು ಈ ಮಾತು ಹೇಳುವುದಕ್ಕು ಕೆಲವು ವಾರಗಳ ಹಿಂದೆ, ಅಂದರೆ ಸೆಪ್ಟೆಂಬರ್ 27ರಂದು ಎನ್ಡಿಟಿವಿ ಡಿಫೆನ್ಸ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎನ್ ಎಸ್ ರಾಜಾ ಸುಬ್ರಮಣಿಯವರು “ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ, ಆತಂಕಗೊಳ್ಳುವ ಅಗತ್ಯವಿಲ್ಲ” ಎಂದಿದ್ದರು. ಆದರೆ ಈಗ ಕಪೂರ್ ಅವರು ಕಳೆದ ಕೆಲವು ವಾರಗಳಿಂದ ಉಭಯ ಪಡೆಗಳ ಮುಖಾಮುಖಿ ನಡೆಯುತ್ತಿದ್ದು, ಈಗಲೂ ಮುಂದುವರೆದಿದೆ ಎಂದಿದ್ದಾರೆ. ಇದರರ್ಥ, ರಾಜಾ ಅವರು `ಎಲ್ಲವೂ ಸರಿಯಿದೆ’ ಎಂದು ಹೇಳುತ್ತಿರುವಾಗಲೇ, ಗಡಿಯಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬುದು ಸಾಬೀತಾಗುತ್ತದೆ. ದೇಶದ ಜನರನ್ನು ಆತಂಕಕ್ಕೆ ಈಡು ಮಾಡುತ್ತಿರುವುದೇ ಈ ದ್ವಂದ್ವ ಹೇಳಿಕೆಗಳು.

ಕಪೂರ್ ಅವರ ಹೇಳಿಕೆಯ ಮಾರನೇ ದಿನ, ಅಕ್ಟೋಬರ್ 23ರಂದು ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು “ಚೀನೀ ಪಡೆಗಳು ಈ ಹಿಂದೆ ಅನುಸರಿಸುತ್ತಿದ್ದ ಗಸ್ತು ಸಂಚಾರದ ಮಾದರಿಗಿಂತ ಭಿನ್ನವಾಗಿ ನಡೆದುಕೊಂಡಾಗ ಗಡಿ ಪ್ರದೇಶದ ಪರಿಸ್ಥಿತಿ ಕಾಲಕಾಲಕ್ಕೆ ಅಸ್ತವ್ಯಸ್ತವಾಗುತ್ತದೆ” ಎಂದು ಹೇಳಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ, ಕಪೂರ್ ಅವರ ಗಡಿ ಮುಖಾಮುಖಿಯ ಹೇಳಿಕೆಯನ್ನು ಕೇಂದ್ರ ಸಚಿವಾಲಯ ಅಲ್ಲಗಳೆದಿಲ್ಲ. ಬದಲಿಗೆ ಚೀನಿ ಸೇನಾ ಪಡೆಯು ತಮ್ಮ ಗಸ್ತು ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅದರಿಂದಾಗಿ ಆಗಾಗ್ಗೆ ಮುಖಾಮುಖಿ ನಡೆಯುತ್ತಿವೆ ಎಂದು ಒಪ್ಪಿಕೊಂಡಿದೆ. ಆದರೆ ಹೆಚ್ಚಿನ ಮಾಹಿತಿಯನ್ನು ರಕ್ಷಣಾ ಇಲಾಖೆಯಿಂದ ಪಡೆಯುವಂತೆ ಜೈಸ್ವಾಲ್ ತಿಳಿಸಿದ್ದಾರೆ. ಇದಕ್ಕೆ ಅಕ್ಟೋಬರ್ 26ರಂದು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಗುಓ ಜೈಕುನ್ ಅವರು “ಸಹಜ ಗಡಿ ಗಸ್ತು ನಿಯಮಗಳ ಪ್ರಕಾರವೇ ಚೀನಾ ಸೇನೆ ಪಹರೆ ಕಾಯುತ್ತಿದ್ದು, ತನ್ನ ಭೂಪ್ರದೇಶಗಳ ಸಾರ್ವಭೌಮತೆ ಮತ್ತು ಶಾಂತಿಯ ದೃಷ್ಟಿಯಿಂದ ಕಾರ್ಯಾಚರಣೆ ನಡೆಸುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲಿಗೆ, ಕಪೂರ್ ಅವರು ಹೇಳಿದ ಸೇನಾ ತುಕಡಿಗಳ ಮುಖಾಮುಖಿಯನ್ನು ಚೀನಾ ಸರ್ಕಾರ, ತನ್ನ ಸಾರ್ವಭೌಮತೆಯ ಹೆಸರಿನಲ್ಲಿ ಸಮರ್ಥಿಸಿಕೊಂಡಂತಾಯಿತು!
ಸಹಜ ಸ್ಥಿತಿ ಮತ್ತು ಮುಖಾಮುಖಿ!
ಕಪೂರ್, ಜೈಸ್ವಾಲ್ ಮತ್ತು ಜೈಕುನ್ ಅವರ ಹೇಳಿಕೆಗಳನ್ನು ಸಾರಾಂಶದಲ್ಲಿ ಗಮನಿಸಿದಾಗ, ಅರುಣಾಚಲ ಪ್ರದೇಶದ ಲೈನ್ ಆಫ್ ಅಕ್ಚುಯಲ್ ಕಂಟ್ರೋಲ್ (ಎಲ್ಎಸಿ – ಭಾರತ ಚೀನಾ ಗಡಿ) ಭಾಗದಲ್ಲಿ ಸೇನಾ ಪಡೆಗಳ ನಡುವೆ ಮುಖಾಮುಖಿ ನಡೆಯುತ್ತಿರುವುದು ನಿಜ; ಅವು ಈಗಲೂ ಮುಂದುವರೆದಿವೆ; ತನ್ನ ಈ ಮುಖಾಮುಖಿಯನ್ನು ಚೀನಾ ಸಾರ್ವಭೌಮತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದೆ ಎಂಬುದು ಅರ್ಥವಾಗುತ್ತದೆ. ಇಷ್ಟಿದ್ದರೂ ಜನರಿಂದ ಗಡಿ ಪರಿಸ್ಥಿತಿಯನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆಯೇ? ಎಂಬ ಪ್ರಶ್ನೆಯನ್ನು ಜನರಲ್ ರಾಜಾ ಅವರ “ಎಲ್ಲವೂ ಸಹಜ ಸ್ಥಿತಿಯಲ್ಲಿದೆ” ಎಂಬ ಹೇಳಿಕೆ ಹುಟ್ಟುಹಾಕುತ್ತಿದೆ.
ಹಾಗಂತ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನಕಾರಿ ಪರಿಸ್ಥಿತಿ ಇದೆ, ಯುದ್ದದ ಸಂಭಾವ್ಯತೆ ಹೆಪ್ಪುಗಟ್ಟಿದೆ ಎಂದು ಹೇಳುವುದು ತಪ್ಪಾಗುತ್ತದೆ. ಯಾಕೆಂದರೆ ಯಾವುದೇ ಎರಡು ದೇಶಗಳ ನಡುವಿನ ಗಡಿ ಪಹರೆಯ ವಿಚಾರದಲ್ಲಿ ‘ಸಹಜ ಪರಿಸ್ಥಿತಿ’ ಮತ್ತು ‘ಮುಖಾಮುಖಿ’ ಎನ್ನುವುದಕ್ಕೆ ನಾವು ಭಾವಿಸುವುದಕ್ಕಿಂತ ಬೇರೆಯದೆ ಅರ್ಥಗಳಿರುತ್ತವೆ. ರಾಜತಾಂತ್ರಿಕವಾಗಿ ಒಮ್ಮತಕ್ಕೆ ಬರಲಾಗದ ಗಡಿ ಭಾಗಗಳಲ್ಲಿ ಸಂಬಂಧಪಟ್ಟ ದೇಶಗಳು ತಮ್ಮ ಪಹರೆ ಪಡೆಗಳನ್ನು ಗಸ್ತಿಗೆ ಮೀಸಲಿಡುವುದು ಸಹಜ. ಕೆಲವೊಮ್ಮೆ ಮಾಹಿತಿ ಸಂವಹನ ಕೊರತೆಯಿಂದ, ಅಥವಾ ಭೌಗೋಳಿಕ ಎಲ್ಲೆ ಮೀರುವಿಕೆಯ ಪ್ರಮಾದದಿಂದ ಪರಸ್ಪರ ಪಡೆಗಳು ಗುಂಡಿನ ಚಕಮಕಿ ಅಥವಾ ಸೈನಿಕರ ಮುಖಾಮುಖಿಯಾಗುವುದು ಕೂಡಾ ನಡೆಯುತ್ತಿರುತ್ತೆ. ರಾಜತಾಂತ್ರಿಕ ಉದ್ವಿಗ್ನತೆ ಅಥವಾ ಅಂತಾರಾಷ್ಟ್ರೀಯ ಸಂಘರ್ಷದ ಹೊರತಾಗಿ ನಡೆಯುವ ಇಂತಹ ‘ಮುಖಾಮುಖಿ’ಗಳ ಸೇನಾ ಕಾರ್ಯಾಚರಣೆಯ ಸಹಜ ವೈಖರಿಗಳು. ಕೆಲವೊಮ್ಮೆ, ಇಂತಹ ಮುಖಾಮುಖಿಗಳು ಹೇಗಿರಬೇಕು ಎನ್ನುವುದಕ್ಕೆ ಉಭಯ ದೇಶಗಳು ಒಡಂಬಡಿಕೆ ಮಾಡಿಕೊಂಡಿರುತ್ತವೆ.

1996 ಮತ್ತು 2005ರ ಭಾರತ-ಚೀನಾ ಒಪ್ಪಂದಗಳ ಪ್ರಕಾರ ಗಡಿ ಪ್ರದೇಶದ ಆಸುಪಾಸಿನ ಎರಡು ಕಿಮೀ ವ್ಯಾಪ್ತಿಯಲ್ಲಿ ಉಭಯ ದೇಶಗಳ ಸೈನಿಕರು ತಮ್ಮ ಶಸ್ತ್ರಾಸ್ತ್ರ , ಮದ್ದುಗುಂಡುಗಳನ್ನು ಸಿಡಿಸುವಂತಿಲ್ಲ. ಶಸ್ತ್ರಗಳಿದ್ದರೂ ಬಳಸುವಂತಿಲ್ಲ. ಈ ನಿಬಂಧನೆಯಿಂದಾಗಿಯೇ ಉಭಯ ದೇಶಗಳ ಸೈನಿಕರು ದೈಹಿಕ ಹಲ್ಲೆಯಂತಹ ಮುಖಾಮುಖಿ ಕಾರ್ಯಾಚರಣೆಗಳಲ್ಲಿ ತೊಡಗುತ್ತಾ ಬಂದಿದ್ದಾರೆ. 2020ರ ಗ್ಯಾಲ್ವಾನ್ ಕಣಿವೆಯಲ್ಲಿ ಭಾರತದ 20 ಸೈನಿಕರನ್ನು ಚೀನಿ ಸೈನಿಕರು ವಿಚಿತ್ರ ಬಡಿಗೆಗಳನ್ನು ಬಳಸಿ ಹತ್ಯೆ ಮಾಡಿದ್ದು ಇದೇ ಕಾರಣಕ್ಕೆ. ಗ್ಯಾಲ್ವನ್ ಘಟನೆಯ ನಂತರ 21 ಅಕ್ಟೋಬರ್ 2024ರಂದು ಭಾರತ ಮತ್ತು ಚೀನಾ ಸೇನೆಗಳು ಡಿಸ್ ಎಂಗೇಜ್ಮೆಂಟ್ ಒಡಂಬಡಿಕೆ ಮಾಡಿಕೊಂಡಿವೆ. ಆದರೆ ಈ ಒಡಂಬಡಿಕೆ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಜಿಲ್ಲೆಗಳ ವ್ಯಾಪ್ತಿಯ ಗಡಿಪ್ರದೇಶಕ್ಕೆ ಮಾತ್ರ ಸೀಮಿತ. ಹಾಗಾಗಿ ಮಿಕ್ಕ ಜಾಗಗಳಲ್ಲಿ ಸೈನಿಕರು ಪರಸ್ಪರ ಮುಖಾಮುಖಿಯಾಗುತ್ತ ಇರುತ್ತಾರೆ.
ಮುಖಾಮುಖಿಗಳೇಕೆ ಈಗ ಮುಖ್ಯ?
ಈ ಆಯಾಮದಿಂದ ನೋಡಿದಾಗ ಶತ್ರುಜೀತ್ ಸಿಂಗ್ ಕಪೂರ್ ಅವರ ಹೇಳಿಕೆ ಗಡಿಯ ಸಹಜ ವಿದ್ಯಮಾನವೆಂದು ನಾವು ತಳ್ಳಿಹಾಕಬಹುದಿತ್ತು. ಆದರೆ ಈ ಹೇಳಿಕೆ ಹೊರಬಂದಿರುವ ರಾಜಕೀಯ-ಭೌಗೋಳಿಕ ಸನ್ನಿವೇಶ ಇಷ್ಟು ಸರಳವಿಲ್ಲ. ಈಶಾನ್ಯ ರಾಜ್ಯ ಮಣಿಪುರದಲ್ಲಿ ಆಂತರಿಕ ಘರ್ಷಣೆ ಸಂಪೂರ್ಣ ಶಮನವಾಗಿಲ್ಲ. ಬಾಂಗ್ಲಾ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿರುವ ಮೊಹಮದ್ ಯೂನುಸ್ ಚೀನಾದತ್ತ ಒಲವು ತೋರುತ್ತಿದ್ದಾರೆ. ಇತ್ತೀಚಿನ ತಮ್ಮ ಚೀನಾ ಪ್ರವಾಸದ ವೇಳೆ, “ಭಾರತದ ಈಶಾನ್ಯ ಸಪ್ತ ಸೋದರಿ ರಾಜ್ಯಗಳು ಸಂಪೂರ್ಣ ಭೂಆವೃತ ರಾಜ್ಯಗಳಾಗಿದ್ದು, ಚೀನಾ ಈಗ ಬಾಂಗ್ಲಾದೇಶವನ್ನು ತನ್ನ ಆರ್ಥಿಕ ವಿಸ್ತರಣೆಗೆ ಹೆಬ್ಬಾಗಿಲಾಗಿ ಬಳಸಿಕೊಳ್ಳಬಹುದು” ಎಂದು ಆಹ್ವಾನ ನೀಡಿದ್ದರು. ಇದೇ ಏಪ್ರಿಲ್ ತಿಂಗಳಿನಲ್ಲಿ ಭಾರತದ ಹಲವು ಪ್ರದೇಶಗಳಿಗೆ ಚೀನಾ ತನ್ನದೇ ಮರುನಾಮಕರಣ ಮಾಡುವ ಹಳೆಯ ಚಾಳಿಯನ್ನು ಮುಂದುವರೆಸಿತ್ತು. ಭಾರತ ಸರ್ಕಾರದ ಪ್ರತಿರೋಧ ಮತ್ತು ನಿರಾಕರಣೆಯ ಹೊರತಾಗಿಯೂ ಅರುಣಾಚಲ ಪ್ರದೇಶವನ್ನು ‘ಜಂಗ್ನನ್’ ಎಂದು ನಾಮಕರಣ ಮಾಡಿತ್ತು.
ಅಲ್ಲದೇ, ಅರುಣಾಚಲ ಪ್ರದೇಶದ ಉತ್ತರ ಸುಬಾಂಸಿರಿ ಜಿಲ್ಲೆಯ ಸಮುದಾಯ ಸಂಘಟನೆ ‘ನ್ಹಾ ವೆಲ್ಫೇರ್ ಸೊಸೈಟಿ’ಯು ಇದೇ ಜೂನ್ ತಿಂಗಳಿನಲ್ಲಿ ಸಮೀಕ್ಷೆ ನಡೆಸಿ ‘ಚೀನಾದ ಪಿಎಲ್ಎ (ಪೀಪಲ್ಸ್ ಲಿಬರೇಷನ್ ಅರ್ಮಿ) ಸೇನೆಯು ಟೆಕ್ಸಾಂಗ್ ಪ್ರಾಂತ್ಯದಲ್ಲಿ ಗಡಿಯನ್ನು ದಾಟಿ ಭಾರತದ ಹಲವು ಭೂಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ’ ಎಂದು ಅಲ್ಲಿನ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು. ಅದಾದ ಎರಡು ತಿಂಗಳ ನಂತರ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ ಸಂಘಟನೆಯ ಸತ್ಯಶೋಧನ ಸಮಿತಿ ಕೂಡಾ “ಭಾರತ ಭೂಪ್ರದೇಶದ ಭಾಗಗಳಿಗೆ ಭಾರತೀಯ ಸೈನಿಕರು ಗಸ್ತು ಕಾಯಲು ಹೋಗುವುದನ್ನು ಚೀನಾ ಸೈನಿಕರು ನಿರ್ಬಂಧಿಸುತ್ತಿದ್ದಾರೆ. ಆ ಮೂಲಕ ಭಾರತ ಭೂಪ್ರದೇಶದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ” ಎಂದು ವರದಿ ಪ್ರಕಟಿಸಿತ್ತು. ಇಂಥಾ ಸಂದರ್ಭಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನಾ ಪಡೆ ಭಾರತ ಸೈನಿಕರೊಟ್ಟಿಗೆ ಮುಖಾಮುಖಿ ಕಾರ್ಯಾಚರಣೆಗೆ ಮುಂದಾಗುತ್ತಿರುವುದನ್ನು ನಿರ್ಲಕ್ಷಿಸಲಾಗದು. ಯಾಕೆಂದರೆ ಇತ್ತೀಚೆಗೆ, `ದಿ ಕ್ಯಾರವಾನ್’ ಪತ್ರಿಕೆ ಪ್ರಕಟಿಸಿದ್ದ ಭಾರತ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆಯವರ ಆತ್ಮಕತೆಯಲ್ಲಿ ಉಲ್ಲೇಖವಾಗಿತ್ತೆಂದು ಹೇಳಲಾದ ಒಂದು ಸೇನಾ ಘಟನೆಯ ವರದಿಯು ದೇಶದ ಜನರಲ್ಲಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಪಾರ ಗೊಂದಲ ಮೂಡಲು ಕಾರಣವಾಗಿತ್ತು. ಸೇನೆಯ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ಸರ್ಕಾರ, ಗಂಭೀರ ಸನ್ನಿವೇಶದಲ್ಲಿ ತನ್ನ ಹೊಣೆಯಿಂದ ನುಣುಚಿಕೊಂಡಿತ್ತು ಎಂಬ ಆರೋಪಗಳನ್ನು ಆ ವರದಿ ವಿಶ್ಲೇಷಿಸಿತ್ತು. ಈ ಎಲ್ಲಾ ಆಯಾಮಗಳಿಂದ ನೋಡಿದಾಗ, ಕಪೂರ್ ಅವರ ಹೇಳಿಕೆ ದೇಶದ ಜನರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದೆ.
ಪರಿಸ್ಥಿತಿ ಇಷ್ಟು ಸಂಕೀರ್ಣವಾಗಿರುವಾಗ ಗಡಿಯಲ್ಲಿ ನಡೆಯುವ ಸಣ್ಣ ಬೆಳವಣಿಗೆಗಳು ಕೂಡಾ ಮುಖ್ಯವಾಗುತ್ತವೆ. ಸಹಜ ಸಂದರ್ಭದಲ್ಲಿನ ಮುಖಾಮುಖಿಗಿಂತ ಗಂಭೀರವೆಂದು ಪರಿಗಣಿಸಬೇಕಾಗುತ್ತದೆ. ಗಡಿಯಲ್ಲಿ ನಿಜಕ್ಕೂ ಏನು ನಡೆಯುತ್ತಿದೆ? ಉಭಯ ಸೇನಾ ಪಡೆಗಳ ಮುಖಾಮುಖಿ ಎಷ್ಟು ಸಲ ನಡೆದಿದೆ? ಅದರ ಗಂಭೀರತೆ ಎಂತದ್ದು? ಭಾರತಕ್ಕೆ ಅದರಿಂದ ಹಾನಿಯಾಗಿದೆಯಾ ಅಥವಾ ತಕ್ಕ ಪ್ರತಿಕ್ರಿಯೆ ನೀಡುವಲ್ಲಿ ನಮ್ಮ ದೇಶ ಹೇಗೆ ಯಶಸ್ವಿಯಾಗಿದೆ? ಭಾರತ ಸಾರ್ವಭೌಮತೆಯ ಸ್ಪಷ್ಟ ಚಿತ್ರಣ ಹೇಗೆ ಸಂರಕ್ಷಿತವಾಗಿದೆ? ಈ ನಿರಂತರ ಮುಖಾಮುಖಿಗಳನ್ನು ತಡೆಗಟ್ಟಲು ಬೀಜಿಂಗ್ ಸರ್ಕಾರದ ಜೊತೆ ಎಂತಹ ರಾಜತಾಂತ್ರಿಕ ಮಾತುಕತೆಗಳಿಗೆ ಸರ್ಕಾರ ಮುಂದಾಗಿದೆ? ಈ ವಿಚಾರಗಳನ್ನು ಜನರೆದುರು ಪಾರದರ್ಶಕವಾಗಿ ಇಡಬೇಕಾದದ್ದು ಸರ್ಕಾರದ ಹೊಣೆಗಾರಿಕೆ.
ರಾಜಕಾರಣ ಸಲ್ಲದು!
ಹಾಗಾದರೆ ಸರ್ಕಾರ ಈಗ ಏನು ಮಾಡಬೇಕು? ಕನಿಷ್ಠ ಪಕ್ಷ ವರದಿಯಾಗಿರುವ ಮುಖಾಮುಖಿಗಳು ಯಾವ ಪ್ರದೇಶಗಳಲ್ಲಿ ನಡೆದವು, ಅವುಗಳ ಸ್ವರೂಪವೇನು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯೇ, ಚೀನೀ ಪಡೆಗಳು ತಮ್ಮ ಹಿಂದಿನ ಸ್ಥಾನಗಳಿಗೆ ಮರಳಿವೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಸೇನಾ ಕಾರ್ಯಾಚರಣೆಗಳ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಒಳಿತಲ್ಲ. ಅಂತವುಗಳನ್ನು ನಾವು ನಿರೀಕ್ಷಿಸಲೂಬಾರದು. ಆದರೆ ಗಡಿಯ ಸ್ಥಿತಿಗತಿ ಕುರಿತು ಸರ್ಕಾರವೇ ನೀಡುವ ಸಂಗತಿಗಳನ್ನು ಪರಿಶೀಲಿಸಲು ಅಗತ್ಯವಾದ ಮೂಲಭೂತ ಮಾಹಿತಿಯನ್ನಾದರೂ ಸಾರ್ವಜನಿಕರಿಗೆ ಒದಗಿಸುವುದು ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಭಾಗ. ಕಡೇಪಕ್ಷ, ಉನ್ನತ ಅಧಿಕಾರಿಗಳಿಂದ ಇಂತಹ ಗೊಂದಲಕಾರಿ ಹೇಳಿಕೆಗಳು ಬಂದಾಗ, ಜನರ ಗೊಂದಲಗಳನ್ನು ಸರ್ಕಾರ ಪಾರದರ್ಶಕವಾಗಿ ಬಗೆಹರಿಸಬೇಕಾಗುತ್ತದೆ.

ಐಟಿಬಿಪಿ ಮುಖ್ಯಸ್ಥರ ಹೇಳಿಕೆಯು ಭಾರತ ಹೊಸ ಯುದ್ಧದ ಅಂಚಿನಲ್ಲಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಹಾಗೆಯೇ, ಅದನ್ನುಕೇವಲ ಸಾಮಾನ್ಯ ಎಚ್ಚರಿಕೆಯ ಮಾತು ಎಂದು ಕಡೆಗಣಿಸಲೂ ಸಾಧ್ಯವಿಲ್ಲ. ಗಡಿಯಲ್ಲಿ ಹಲವು ಸ್ಥಳಗಳಲ್ಲಿ ಮುಖಾಮುಖಿಗಳು ನಡೆದಿವೆ ಮತ್ತು ಅವು ಮುಂದುವರಿದಿವೆ ಎಂದವರು ಹೇಳಿದ್ದಾರೆ. ಮತ್ತು ಅದನ್ನು ವಿದೇಶಾಂಗ ಸಚಿವಾಲಯವೂ ಒಪ್ಪಿಕೊಂಡಿದೆ. ಯುದ್ಧ ನಡೆಯುತ್ತಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ಅದೊಂದೇ ಗಡಿಯಲ್ಲಿ ಶಾಂತಿ ನೆಲೆಸಿದೆ ಎನ್ನಲು ಸಾಕಾಗುವುದಿಲ್ಲ. ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯುತ್ತಿವೆ ಎಂಬುದು ಒಳ್ಳೆಯ ಬೆಳವಣಿಗೆಯಾದರೂ ಆದರೆ ಅವು ಗ್ರೌಂಡ್ ಮಟ್ಟದಲ್ಲಿ ಎಷ್ಟು ಪರಿಣಾಮಕಾರಿಯಾಗಿವೆ ಎನ್ನುವುದೂ ಅಷ್ಟೇ ಮುಖ್ಯ. ಚೀನಾದ ವಿಚಾರದಲ್ಲಿ ಈಗಾಗಲೇ ನಾವು 1962ರಲ್ಲಿ ದೊಡ್ಡ ಪಾಠ ಕಲಿತಿದ್ದೇವೆ. ಅಂತಹ ತಪ್ಪು ಮತ್ತೆ ಪುನರಾವರ್ತನೆಯಾಗದಿರಲಿ. ಮುಖ್ಯವಾಗಿ, ದೇಶದ ಸಾರ್ವಭೌಮತೆಯ ವಿಚಾರವು ಎಂಥಾ ಪರಿಸ್ಥಿತಿಯಲ್ಲು ರಾಜಕಾರಣದ ಸರಕಾಗಬಾರದು. ಸರ್ಕಾರವಷ್ಟೆ ಅಲ್ಲ, ವಿರೋಧ ಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕಿರುವ ತುರ್ತು ಇದು.

ಹವ್ಯಾಸಿ ಬರವಣಿಗೆ ಮೂಲಕ ಪತ್ರಿಕೋದ್ಯಮ ಮತ್ತು ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯವರೆಗೆ ವಿಸ್ತರಿಸಿಕೊಂಡಿರುವ ಲೇಖಕರು ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಷಯಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಡುವಂತವರು. ಹಲವು ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ವೆಬ್ ಆವೃತ್ತಿಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದ್ದು, ತಮ್ಮ ಮೊನಚು ಬರವಣಿಗೆ ಶೈಲಿ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಓದುಗರ ಗಮನ ಸೆಳೆದಿದ್ದಾರೆ.
