ಭಾರತೀಯ ಸಂಜಾತೆಗೆ ನೊಬೆಲ್‌ ಬಂದರೂ ಮೋದಿ ಸರ್ಕಾರ ಅಭಿನಂದಿಸಲಿಲ್ಲವೇಕೆ?

ಅಕ್ಟೋಬರ್ 9ರಂದು ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಯ್ತು. ಈ ಸಲ ದಕ್ಷಿಣ ಆಫ್ರಿಕಾದ ನಾವಿ ಪಿಳ್ಳೈ ಅವರಿಗೆ ಅತ್ಯುನ್ನತ ಪ್ರಶಸ್ತಿ ಸಂದಿದೆ. ಹಲವು ಅಂತಾರಾಷ್ಟ್ರೀಯ ನ್ಯಾಯಪೀಠಗಳ ನ್ಯಾಯಾಧೀಶೆಯಾಗಿ, ವಿಶ್ವಸಂಸ್ಥೆಯಲ್ಲಿ ಮಾನವಹಕ್ಕುಗಳ ಆಯೋಗದ ಆಯುಕ್ತೆಯಾಗಿ ಕೆಲಸ ಮಾಡಿರುವ ನಾವಿ ಪಿಳ್ಳೈ ಶಾಂತಿ ನೋಬೆಲ್‌ಗೆ ಅರ್ಹ ವ್ಯಕ್ತಿ. ಇಡೀ ದಕ್ಷಿಣ ಆಫ್ರಿಕಾ ತನ್ನ ಪ್ರಜೆಗೆ ಸಿಕ್ಕ ಈ ಗೌರವವನ್ನು ಸಂಭ್ರಮಿಸಿತು.

ನಿಜ ಹೇಳಬೇಕೆಂದರೆ, ಈ ಗೌರವವನ್ನು ಭಾರತವೂ ಸಂಭ್ರಮಿಸಬೇಕಿತ್ತು. ಯಾಕೆಂದರೆ ನಾವಿ ಪಿಳ್ಳೈ ಭಾರತ ಮೂಲದವರು. ಪೂರ್ಣ ಹೆಸರು ನವನೀತಂ ಪಿಳ್ಳೈ. ವಸಾಹತು ಕಾಲದಲ್ಲಿ ಬ್ರಿಟಿಷರು ಅವರ ಪೂರ್ವಿಕರನ್ನು ತಮಿಳುನಾಡಿನಿಂದ  ದಕ್ಷಿಣ ಆಫ್ರಿಕಾಗೆ ಕೃಷಿ ಕಾರ್ಮಿಕರನ್ನಾಗಿ ಕರೆದೊಯ್ದಿದ್ದರು. ಇವರನ್ನು indentured labours ಎಂದು ಕರೆಯಲಾಗುತ್ತಿತ್ತು. ಒಂದರ್ಥದಲ್ಲಿ ಜೀತದಾಳುಗಳಿದ್ದಂತೆ. ಒಪ್ಪಂದದ ಮೇಲೆ ಬ್ರಿಟಿಷರು ಅವರನ್ನು ಅಲ್ಲಿಗೆ ಕರೆದೊಯ್ದು, ಕಡಿಮೆ ಸಂಬಳಕ್ಕೆ ದುಡಿಸಿಕೊಂಡು, ವಾಪಾಸು ಸ್ವದೇಶಕ್ಕೆ ಮರಳುವ ವ್ಯವಸ್ಥೆಯನ್ನೂ ಮಾಡದೆ ಅಲ್ಲಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿದರು. ಅಂತಹ ಒಂದು ತಮಿಳು ಕುಟುಂಬದಲ್ಲಿ ಹುಟ್ಟಿ ಬೆಳೆದವರು ಈ ನಾವಿ ಪಿಳ್ಳೈ.

ಆ ಕಾರಣಕ್ಕೇ, ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾದಾಗ ತಮಿಳುನಾಡಿನಲ್ಲಿ ಸಂಭ್ರಮಿಸಲಾಯಿತು. ಅಲ್ಲಿನ ಮುಖ್ಯಮಂತ್ರಿ ಜೋಸೆಫ್‌ ಸಿ ವಿಜಯ್‌, ಮಾಜಿ ಸಿಎಂ ಕೆ. ಸ್ಟಾಲಿನ್‌ ಟ್ವೀಟ್‌ ಮಾಡಿ ಖುಷಿ ಹಂಚಿಕೊಂಡರೆ, ಅವರ ಮೂಲ ಊರಾದ ಬತ್ಲಗುಂಡುವಿನಲ್ಲಿ, ಕುಟುಂಬಸ್ಥರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ತಮಿಳುನಾಡು ಸರ್ಕಾರದಿಂದ ನಾವಿ ಪಿಳ್ಳೈ ಅವರನ್ನು ಕರೆಸಿ ಸನ್ಮಾನ ಸಮಾರಂಭ ಆಯೋಜಿಸುವ ಚರ್ಚೆಗಳೂ ನಡೆಯುತ್ತಿವೆ.

ಇಷ್ಟಾದರೂ ಕೇಂದ್ರ ಸರ್ಕಾರವಾಗಲಿ, ಪ್ರಧಾನಿ ಮೋದಿಯವರಾಗಲಿ ಇದುವರೆಗೆ ಭಾರತೀಯ ಸಂಜಾತೆಯನ್ನು ಅಭಿನಂದಿಸದೆ ಮೌನಕ್ಕೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಿದೆ. ವಿದೇಶಗಳಲ್ಲಿ ಭಾರತೀಯ ಮೂಲದವರು ಸಾಧನೆ ಮಾಡಿದಾಗ ಹೆಮ್ಮೆಯಿಂದ ಸಂಭ್ರಮಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಮಾನವ ಹಕ್ಕುಗಳ ಪರವಾಗಿ ದಶಕಗಳ ಕಾಲ ಹೋರಾಡಿದ ನಾವಿ ಪಿಳ್ಳೈ ಅವರ ಸಾಧನೆಯನ್ನು ಗುರುತಿಸಲು ಹಿಂಜರಿದಿದ್ದೇಕೆ? ಗಾಜಾ ಪಟ್ಟಿಯ ನರಮೇಧದಿಂದಾಗಿ ಜಾಗತಿಕ ವೇದಿಕೆಗಳಲ್ಲಿ ಮೂದಲಿಕೆಗೆ, ಬಹಿಷ್ಕಾರಕ್ಕೆ ತುತ್ತಾಗುತ್ತಿರುವ ಇಸ್ರೇಲ್‌ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ವ್ಯಾಮೋಹ ಈ ಮೌನಕ್ಕೆ ಕಾರಣವೇ? ಯಾಕೆಂದರೆ, ಗಾಜಾದಲ್ಲಿ ಇಸ್ರೇಲ್‌ ನಡೆಸಿದ ದಾಳಿಗಳ ಕುರಿತು ಅಧ್ಯಯನ ನಡೆಸಿದ್ದ ನಾವಿ ಪಿಳ್ಳೈ ಅವರು ‘ಇಸ್ರೇಲ್‌ ನರಮೇಧ ನಡೆಸಿದೆ’ ಎಂದು ದೂರಿದ್ದರು. ಅದು ಅವರ ವೈಯಕ್ತಿಕ ಅಭಿಪ್ರಾಯವಲ್ಲ. ವಿಶ್ವಸಂಸ್ಥೆಯ ಸ್ವತಂತ್ರ International Commission of Inquiry on the Occupied Palestinian Territory ಆಯೋಗದ ಅಧ್ಯಕ್ಷೆಯಾಗಿ ಇಸ್ರೇಲ್‌ ವಿರುದ್ಧ ಈ ರೀತಿ 2025ರಲ್ಲಿ ವರದಿ ನೀಡಿದ್ದರು. ಆಗಿನಿಂದ ಇಸ್ರೇಲ್‌ನ ಆಡಳಿತಗಾರರಿಗೆ ಇವರನ್ನು ಕಂಡರೆ ಆಗುವುದಿಲ್ಲ.

ಹಾಗಾಗಿ ನಾವಿ ಪಿಳ್ಳೈ ಅವರಿಗೆ ಶಾಂತಿ ನೊಬೆಲ್‌ ಘೋಷಣೆಯಾದಾಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು “ನಾರ್ವೆಯ ಆಯ್ಕೆ ಸಮಿತಿ ತನ್ನ ನೈತಿಕ ವಿವೇಚನೆಯನ್ನು ಕಳೆದುಕೊಂಡಂತಿದೆ” ಎಂದು ಲೇವಡಿ ಮಾಡಿದ್ದರು. ಮುಂದುವರೆದು ಪಿಳ್ಳೈ ಕುರಿತು “ಜ್ಯೂ ಜನರನ್ನು ದುಷ್ಟರಂತೆ ಚಿತ್ರಿಸಿದ ಹೆಂಗಸು ಈಕೆ” ಎಂದು ತಮ್ಮ ಅಸಮಾಧಾನ ಕಾರಿಕೊಂಡಿದ್ದರು.

ಹಾಗಾದರೆ, ಇಸ್ರೇಲ್‌ ಆಡಳಿತಗಾರರಿಗೆ ಇಷ್ಟವಾಗದು ಎಂಬ ಕಾರಣಕ್ಕೆ ಭಾರತ ಸರ್ಕಾರ ನಮ್ಮ ದೇಶದ ಸಂಜಾತೆಗೆ ನೊಬೆಲ್‌ ಸಿಕ್ಕರೂ ಅಭಿನಂದಿಸದೆ ಮೌನಕ್ಕೆ ಶರಣಾಯಿತೇ? ಇತ್ತೀಚೆಗೆ ಭೇಟಿ ನೀಡಿದ್ದಾಗ ಪ್ರಧಾನಿ ಮೋದಿಯವರು ಇಸ್ರೇಲನ್ನು “ಫಾದರ್‍‌ ಲ್ಯಾಂಡ್‌” ಎಂದು ಕರೆದಿದ್ದರು. ಇಸ್ರೇಲ್‌ ಜೊತೆ ನಿಲ್ಲುವುದಾಗಿ ಘೋಷಿಸಿದ್ದರು.

ಬಿಜೆಪಿಯವರೇ ಆದ ಅಟಲ್‌ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಅವಧಿಯನ್ನೂ ಒಳಗೊಂಡಂತೆ ಮೊದಲಿನಿಂದಲೂ ಭಾರತವು ಪ್ಯಾಲಿಸ್ತೇನ್‌ ಪರವಾಗಿ ನಿಲ್ಲುತ್ತಾ, ದ್ವಿರಾಷ್ಟ್ರ ನೀತಿಯನ್ನು ಪ್ರಸ್ತಾಪಿಸುತ್ತಾ ಬಂದಿತ್ತು. ಆದರೆ 2014ರಲ್ಲಿ ಮೋದಿಯವರು ಪ್ರಧಾನಿಯಾದ ನಂತರ ಇಸ್ರೇಲ್‌ ಪರವಾದ ಒಲವು ತಳೆಯುತ್ತಾ ಬಂದಿದ್ದಾರೆ. ಇರಾನ್‌ ವಿರುದ್ಧ ಅಮೆರಿಕಾ-ಇಸ್ರೇಲ್‌ ಕೂಟಗಳು ಯುದ್ಧಕ್ಕಿಳಿದಾಗಲೂ ಭಾರತ ಸರ್ಕಾರ ಆರಂಭದಲ್ಲಿ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸದೆ ಇಸ್ರೇಲ್‌ ಪರ ಪರೋಕ್ಷ ವರ್ತನೆ ತೋರಿತು. ಆದರೆ ಯಾವಾಗ ಹೊರ್ಮುಜ್‌ ಜಲಸಂಧಿ ಬಿಕ್ಕಟ್ಟು ಹಿರಿದಾಗಿ, ಭಾರತಕ್ಕೆ ತೈಲ ಸಮಸ್ಯೆ ಎದುರಾಯ್ತೊ ಮತ್ತು 2028-29ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯ ಸ್ಥಾನಕ್ಕಾಗಿ ಹಕ್ಕು ಮಂಡಿಸಬೇಕಾಯ್ತೋ ಆಗ ತನ್ನ ಹಳೆಯ ವಿದೇಶಾಂಗ ನೀತಿಗೆ ಮರಳಿತು.

ಇಸ್ರೇಲ್‌ ಬಗ್ಗೆ ಪ್ರಧಾನಿ ಮೋದಿಯವರಿಗೆ ಇರುವ ಈ ಮೋಹವೇ, ಭಾರತೀಯ ಸಂಜಾತೆಗೆ ನೊಬೆಲ್‌ ಬಂದರೂ ಅಭಿನಂದಿಸದಷ್ಟು ಮೌನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಇಂತಹ ಸೆಲೆಕ್ಟಿವ್‌ ನಡವಳಿಕೆಗಳು ಇದೇ ಮೊದಲೇನಲ್ಲ. 2025ರಲ್ಲಿ ಕನ್ನಡದ ಬಾನು ಮುಷ್ತಾಕ್‌ ಅವರಿಗೆ ಇಂಟರ್‍‌ನ್ಯಾಷನಲ್‌ ಬೂಕರ್ ಪ್ರಶಸ್ತಿ ಬಂದಾಗ, 2022ರಲ್ಲಿ ಗೀತಾಂಜಲಿ ಶ್ರೀಯವರಿಗೆ ಬೂಕರ್‍‌ ಬಂದಾಗ, 2019ರಲ್ಲಿ ಪತ್ರಕರ್ತ ರವೀಶ್‌ ಕುಮಾರ್ ಅವರಿಗೆ ರಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಸಂದಾಗ, 2016ರಲ್ಲಿ ಬೆಜವಾಡ ವಿಲ್ಸನ್‌ ಮತ್ತು ಟಿ.ಎಂ ಕೃಷ್ಣ ಅವರಿಗೆ ಮ್ಯಾಗ್ಸೆಸ್ಸೆ ಲಭಿಸಿದಾಗಲೂ ಪ್ರಧಾನಿ ಮೋದಿಯವರು ಅಭಿನಂದಿಸಿರಲಿಲ್ಲ. ಯಾಕೆಂದರೆ, ಅವರೆಲ್ಲ ಮೋದಿ ಸರ್ಕಾರದ ಟೀಕಾಕಾರರು ಎಂದು ಗುರುತಿಸಿಕೊಂಡಿದ್ದವರು. ಸಾಧಕರ ಸಾಧನೆಗಳನ್ನು ಗುರುತಿಸುವಲ್ಲೂ ರಾಜಕಾರಣವನ್ನು ಬೆರೆಸಲಾಗುತ್ತಿದೆಯೇ? ಎಂಬ ಅನುಮಾನವನ್ನು ಈ ಉದಾಹರಣೆಗಳು ಹುಟ್ಟುಹಾಕುತ್ತಿವೆ. ಆ ಸಾಲಿಗೆ ನಾವಿ ಪಿಳ್ಳೈಯವರ ನಿದರ್ಶನ ಹೊಸ ಸೇರ್ಪಡೆ.

ನಾವಿ ಪಿಳ್ಳೈಯವರು ದಕ್ಷಿಣ ಆಫ್ರಿಕಾದಲ್ಲೆ ಹುಟ್ಟಿದವರಾಗಿದ್ದರೂ, ಭಾರತೀಯ ನಂಟಿನೊಂದಿಗೆ ಬೆಳೆದವರು. ಬ್ರಿಟಿಷರು ಕರೆದೊಯ್ದ ಭಾರತೀಯ ಕೂಲಿ ಕಾರ್ಮಿಕರೆ ವಾಸಿಸಲು ಡರ್ಬನ್‌ ನಗರದ ಬಳಿ ಒಂದು ದೊಡ್ಡ ಕಾಲೊನಿಯಿದೆ. ಇದನ್ನು ಕೇರ್‍‌ವುಡ್‌ ಪ್ರದೇಶ ಎಂದು ಕರೆಯಲಾಗುತ್ತೆ. ವಸಾಹತುಶಾಹಿಯ ಅವಮಾನ ಮತ್ತು ವರ್ಣಭೇದ ನೀತಿಯ ತಾರತಮ್ಯ ಅವರಿಸಿರುವ ಆ ಪ್ರದೇಶದಲ್ಲಿ ನೆಲೆಸಿರುವವರು ಬಹುಪಾಲು ಭಾರತೀಯ ಮೂಲದ ಬಡ-ಮಧ್ಯಮ ವರ್ಗದದವರು. ನಾವಿ ಪಿಳ್ಳೈ ಕೂಡಾ ಅಂತದ್ದೇ ಒಂದು ಕುಟುಂಬದಲ್ಲಿ ಹುಟ್ಟಿ ಬೆಳೆದರು.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಪಿಳ್ಳೈ ಅವರಿಗೆ ಉನ್ನತ ವ್ಯಾಸಂಗ ಮುಂದುವರೆಸಲು ಕುಟುಂಬದ ಬಡತನ ಅಡ್ಡಿಯಾದಾಗ ಕೇರ್‍‌ವುಡ್‌ ಪ್ರದೇಶದ ಭಾರತೀಯ ಕುಟುಂಬಗಳು ದೇಣಿಗೆ ಸಂಗ್ರಹಿಸಿಕೊಟ್ಟು ಓದಿಗೆ ನೆರವಾದರು. ಪಿಳ್ಳೈ ಅವರ ಸಾಧನೆಯೇನೂ ಸಾಮಾನ್ಯವಾದುದಲ್ಲ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಕಾಲದಲ್ಲಿ ವಕೀಲೆಯಾಗಿ ರಾಜಕೀಯ ಕೈದಿಗಳ ಪರವಾಗಿ ನಿಂತರು. ನಂತರ ರುವಾಂಡಾದ ನರಮೇಧದ ವಿಚಾರಣೆ ನಡೆಸಿದ ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದರು. ಅಲ್ಲಿ ಅತ್ಯಾಚಾರವನ್ನು ನರಮೇಧದ ಭಾಗವಾಗಿ ಪರಿಗಣಿಸಬೇಕೆಂದು ಹೊಸ ನ್ಯಾಯತತ್ವ ರೂಪಿಸಿದರು. 2003ರಿಂದ 2012ರವರೆಗೆ ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯದ ನ್ಯಾಯಾಧೀಶೆಯಾಗಿದ್ದ ಅವರು, 2008ರಿಂದ 2014ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಭಾರತದ ವಿಚಾರದಲ್ಲಿ ಅವರು ನಿರಂತರ ಕಾಳಜಿ ತೋರುತ್ತಾ ಬಂದಿದ್ದಾರೆ. 2009ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಆಗಿ ಪಿಳ್ಳೈ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ಜಗತ್ತಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿರುವ ಭಾರತವು ಇತರ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿಯೂ ಧ್ವನಿ ಎತ್ತಬೇಕು ಎಂದು ಹೇಳಿದ್ದರು. ನಂತರ ಭಾರತದಲ್ಲಿನ ಜಾತಿ ತಾರತಮ್ಯ, ಮಹಿಳೆಯರ ಮೇಲಿನ ಲೈಂಗಿಕ ಹಿಂಸೆ ಮತ್ತು ಮನುಷ್ಯರನ್ನು ಮಲಸ್ವಚ್ಛತೆ ಕೆಲಸಕ್ಕೆ ಬಳಸುವ  ಅಮಾನವೀಯ manual scavenging ಪದ್ಧತಿಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು. 2012ರಲ್ಲಿ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಲೈಂಗಿಕ ಹಿಂಸೆಯ ವಿರುದ್ಧ ಕಾರ್ಯಾಚರಣೆಗಿಳಿಯಲು ಈ ಪ್ರಕರಣ ದೊಡ್ಡ ತಿರುವು ಕೊಡಲಿದೆ ಎಂದಿದ್ದರು ಮತ್ತು ಅದರ ಫಲವಾಗಿ ರಚನೆಯಾಗಿದ್ದ ನ್ಯಾ. ಜೆ ಎಸ್ ವರ್ಮಾ ಸಮಿತಿ ಲೈಂಗಿಕ ದೌರ್ಜನ್ಯ ತಡೆಗಟ್ಟಲು ನೀಡಿದ ಶಿಫಾರಸ್ಸುಗಳನ್ನು ಸ್ವಾಗತಿಸಿದ್ದರು.

ಇತ್ತ ಭಾರತ ಸರ್ಕಾರ ಕೂಡಾ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತರ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಬಂದ ಇತಿಹಾಸ ಹೊಂದಿದೆ. ಮೋದಿಯವರು ಪ್ರಧಾನಿಯಾದ ನಂತರವೂ, ಕಳೆದ ಬಾರಿ ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಕೆಲವೇ ದಿನಗಳ ಮೊದಲು ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಮೂಲದವರಿಗೆ ಪೌರತ್ವವಲ್ಲದ ಭಾರತೀಯ ಕಾರ್ಡ್‌ ಪಡೆಯುವ ಅವಕಾಶವನ್ನು ಏಳನೇ ತಲೆಮಾರಿನವರೆಗೂ (ಮೊದಲು ಎರಡು ತಲೆಮಾರಿನವರಿಗೆ ಮಾತ್ರ ಮೀಸಲಿತ್ತು) ವಿಸ್ತರಿಸಲಾಗಿತ್ತು. ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ, ವಸಾಹತುಶಾಹಿ ಮತ್ತು ವರ್ಣಭೇದದ ಸಂಕಷ್ಟಗಳ ನಡುವೆಯೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡ ಭಾರತೀಯ ಸಮುದಾಯವನ್ನು ಶ್ಲಾಘಿಸಿದ್ದರು.

ಹಾಗಿದ್ದರೆ, ಆ ಸಮುದಾಯದ ಹೆಮ್ಮೆಯ ಸಂಕೇತವಾಗಿರುವ ಪಿಳ್ಳೈ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಲು ಮೋದಿ ಸರ್ಕಾರ ಹಿಂಜರಿದಿದ್ದೇಕೆ? ಭಾರತೀಯ ಮೂಲದವರ ಸಾಧನೆ ಸರ್ಕಾರದ ರಾಜತಾಂತ್ರಿಕ ಕಥನಕ್ಕೆ ಅನುಕೂಲವಾದಾಗ ಮಾತ್ರ ಅದು ರಾಷ್ಟ್ರೀಯ ಹೆಮ್ಮೆಯಾಗುತ್ತದೆಯೇ? ಇತ್ತೀಚೆಗೆ ಇಸ್ರೇಲ್‌ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರ ಪ್ರಾಣಕ್ಕೆ ಕಂಟಕಪ್ರಾಯನಾದ ಕೋ-ಪೈಲಟ್‌ ವಿರುದ್ಧ ಹೋರಾಡಿದ ಭಾರತೀಯ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‍‌ ಅವರನ್ನು ಫೋನ್‌ ಮಾಡಿ ಅಭಿನಂದಿಸಿ ಕೊಂಡಾಡಿದ್ದ ಮೋದಿಯವರು, ಭಾರತೀಯ ಸಂಜಾತೆಗೆ ನೊಬೆಲ್‌ ಬಂದಾಗ ಮೌನಕ್ಕೆ ಶರಣಾಗಿದ್ದನ್ನು ಕೇವಲ ಒಂದು ನಿರ್ಲಕ್ಷ್ಯ ಮಾತ್ರ ಎಂದು ಸ್ವೀಕರಿಸಲಾದೀತೆ?

ಕೃಪೆ: ದಿ ವೈರ್

Leave a Reply

Your email address will not be published. Required fields are marked *