ತಮ್ಮ ತೊಂಬತ್ತೈದನೇ ವಯಸ್ಸಿನಲ್ಲಿ ತೀರಿಕೊಂಡ ಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸರ ಸಾಧನೆ ಹೇಳುತ್ತಾ ಹೋದಂತೆ ನಮ್ಮ ನಡುವೆ ಎಂತಹ ಪ್ರತಿಭಾವಂತ ಚಿತ್ರ ನಿರ್ದೇಶಕರಿದ್ದರಲ್ಲಾ ಅನ್ನಿಸಿತು. ಎಂದಿನಂತೆ ನಮ್ಮ ಟಿವಿಗಳು ಯಾವುದಾದರೊಂದು ಸಿನಿಮಾ ತೋರುವಂತೆ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರ ತೋರಿದವು. ನಾಲ್ಕು ದಶಕದ ನಂತರವೂ ಆ ಚಿತ್ರ ಬಿಡದೆ ನೋಡುವಂತಿತ್ತು. ಹಾಗೆ ನೋಡಿದರೆ ಸಿಂಗೀತಂ ಶ್ರೀನಿವಾಸರ ಯಾವ ಚಿತ್ರವನ್ನು ನೋಡದೆ ತಾತ್ಸಾರ ಮಾಡುವಂತಿಲ್ಲ.
ಅವರನ್ನು ಪ್ರಯೋಗಶೀಲ ನಿರ್ದೇಶಕ ಎಂದು ಸುಲಭದಲ್ಲಿ ಗುರುತಿಸಿಬಿಡಬಹುದು. ಯಾಕೆಂದರೆ ಪುಷ್ಪಕ ವಿಮಾನ, ಅಪೂರ್ವ ಸಹೋದರಂಗಳ್, ಮಯೂರಿ, ಮಗಳಿರ್ ಮಟ್ಟುಮ್, ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರಗಳು ಅವರ ಪ್ರಯೋಗಶೀಲತೆಯನ್ನು ಎತ್ತಿ ತೋರುತ್ತವೆ. ಸಂಭಾಷಣೆಗಳು ಅಬ್ಬರಿಸುವ ಕಾಲದಲ್ಲಿ ಮಾತೇ ಇಲ್ಲದ ಮೂಕಿ ಚಿತ್ರ ತೆಗೆದಿದ್ದು, ದೈಹಿಕ ಊನತೆಯ ವ್ಯಕ್ತಿಗಳನ್ನು ಸಾಧಕ ಪಾತ್ರಗಳಾಗಿ ಪೋಷಿಸಿದ್ದು, ಒಬ್ಬನೇ ನಟನಿಂದ ನಾಲ್ಕು ಪಾತ್ರಗಳನ್ನು ಮಾಡಿಸಿದ್ದು ಹೀಗೆ ಅವರು ಸದಾ ಚೌಕಟ್ಟುಗಳನ್ನು ಮೀರಿ ಪ್ರಯೋಗ ಮಾಡಲು ಹಾತೊರೆದವರು. ಆದರೆ ಪ್ರಯೋಗಶೀಲತೆಗಷ್ಟೆ ಸೀಮಿತಗೊಳಿಸಿ ನೋಡಲು ಮುಂದಾದರೆ, ಅವರೊಳಗಿನ ಸಿನಿಮಾ ರಾಜಕಾರಣಿಯೊಬ್ಬ ಕಾಣದೆ ಉಳಿದುಬಿಡುತ್ತಾನೆ. ಆ ರಾಜಕಾರಣಿ ಅಧಿಕಾರವನ್ನು ಕೇಂದ್ರೀಕರಿಸಿಕೊಂಡವನಲ್ಲ; ಕ್ರಾಂತಿಯನ್ನು ಉದ್ದೀಪಿಸುವವನೂ ಅಲ್ಲ; ತಣ್ಣಗೆ ಕೂತು ಯೋಚಿಸುವಂತೆ ಮಾಡಬಲ್ಲವನು, ಹಾಗೆ ಯೋಚನೆಗೆ ತಳ್ಳುವುದಕ್ಕು ಮುನ್ನ ನಿಮ್ಮನ್ನು ಮನಪೂರ್ತಿ ನಕ್ಕುನಗಿಸಬಲ್ಲವನು. ಯಾಕೆಂದರೆ, ಅವರು ತಮ್ಮ ಚಿತ್ರಗಳುದ್ದಕ್ಕೂ ತೋರಲು ಬಯಸಿದ್ದು ಸಮಾಜದ ಅಂಚಿನಲ್ಲಿ ಬದುಕುವ ಸಾಮಾನ್ಯ ಮನುಷ್ಯನ ಹೋರಾಟವನ್ನು.
ಅವರ ಈ ಸಿನಿಮಾ ರಾಜಕಾರಣಕ್ಕೆ ಒಂದು ಅತ್ಯುತ್ತಮ ಉದಾಹರಣೆ 1987ರಲ್ಲಿ ತೆರೆಕಂಡ ಪುಷ್ಪಕ ವಿಮಾನ. ಅದರಲ್ಲಿ ಕಮಲ್ ಹಾಸನ್ ನಿರುದ್ಯೋಗಿ ಪದವೀಧರ. ಅವನಿಗೊಂದು ಸಣ್ಣ ಕೋಣೆ, ಉದ್ಯೋಗದ ನಿರೀಕ್ಷೆ ಮತ್ತು ಸಂದರ್ಶನಕ್ಕೆ ಧರಿಸಲು ಒಂದೇ ಒಳ್ಳೆಯ ಅಂಗಿ. ಅದರ ತೋಳನ್ನು ಮಾತ್ರ ತೊಳೆದು ಮತ್ತೆ ಧರಿಸುವ ದೃಶ್ಯವೇ ಅವನ ಆರ್ಥಿಕ ಸಂಕಟವನ್ನು ಸಂಭಾಷಣೆಯಿಲ್ಲದೆ ಕಟ್ಟಿಕೊಡುತ್ತದೆ. ಆದರೆ ಸಿಂಗೀತಂ ಬಡವನನ್ನು ಪವಿತ್ರನನ್ನಾಗಿ ಚಿತ್ರಿಸುವುದಿಲ್ಲ. ಶ್ರೀಮಂತನ ಗುರುತನ್ನು ಕದ್ದುಕೊಂಡು ಐಷಾರಾಮಿ ಜಗತ್ತಿಗೆ ಪ್ರವೇಶಿಸುವ ನಾಯಕನ ತಪ್ಪನ್ನು ಸಮರ್ಥಿಸದೆಯೇ, ಬಡತನ ಮನುಷ್ಯನನ್ನು ಹೇಗೆ ನೈತಿಕ ಸಂಘರ್ಷಕ್ಕೆ ತಳ್ಳುತ್ತದೆ ಎಂಬುದನ್ನು ಹಾಸ್ಯದ ಮೂಲಕ ತೆರೆದಿಡುತ್ತಾರೆ.

ಚಿತ್ರದ ವರ್ಗ ಸಂಘರ್ಷ ಭಾಷಣಗಳಲ್ಲಿ ವ್ಯಕ್ತವಾಗುವುದಿಲ್ಲ. ಸಣ್ಣ ಕೋಣೆ ಮತ್ತು ಐಷಾರಾಮಿ ಹೋಟೆಲ್, ಚಹಾ ಮತ್ತು ಮದ್ಯ, ನಿರುದ್ಯೋಗ ಮತ್ತು ಸಂಪತ್ತಿನ ನಡುವಿನ ವೈರುಧ್ಯಗಳಲ್ಲಿ ಕಾಣಿಸುತ್ತದೆ. ಹೀಗಾಗಿ ಚಿತ್ರದ ಮೌನ ಕೇವಲ ತಾಂತ್ರಿಕ ಪ್ರಯೋಗವಲ್ಲ; ಸಮಾಜದಲ್ಲಿ ಧ್ವನಿಯಿಲ್ಲದ ವರ್ಗದ ಬದುಕಿನ ರೂಪಕವೂ ಹೌದು.
ಇದೇ ಮಾನವೀಯ ದೃಷ್ಟಿ ಸಿಂಗೀತಂ ಅವರ ಇತರ ಚಿತ್ರಗಳಲ್ಲಿಯೂ ಕಾಣುತ್ತದೆ. ಅಪೂರ್ವ ಸಹೋದರಂಗಳ್ ಚಿತ್ರದಲ್ಲಿ ದೈಹಿಕ ಭಿನ್ನತೆಯಾಚೆಗೆ ವ್ಯಕ್ತಿಯ ಸಾಮರ್ಥ್ಯವನ್ನು ಗುರುತಿಸಿದರೆ, ಮಗಳೀರ್ ಮಟ್ಟುಂ ಚಿತ್ರದಲ್ಲಿ ಹಾಸ್ಯದ ಮೂಲಕ ಅಸಮಾನತೆಯನ್ನು ಪ್ರಶ್ನಿಸುತ್ತಾರೆ. ಅವರ ಪಾತ್ರಗಳು ಕೇವಲ ಸಂತ್ರಸ್ತರಲ್ಲ; ಸೀಮಿತ ಅವಕಾಶಗಳ ನಡುವೆಯೂ ದಾರಿ ಹುಡುಕುವವರು.
ಅವರ ಕನ್ನಡದ ಸಿನಿಮಾಗಳು ಕೂಡಾ ಇದೇ ಸಮಾಜವಾದಿ ಆಶಯಗಳನ್ನು ಪ್ರತಿನಿಧಿಸುತ್ತಿದ್ದವು. ರಾಜ್ ಕುಟುಂಬಕ್ಕಂತೂ ಶ್ರೀನಿವಾಸ್ ನಿಧಿಯಂತಿದ್ದರು. ಅವರು ಕನ್ನಡಕ್ಕೆ ಪ್ರಥಮವಾಗಿ ಬಂದು ತೆಗೆದ ಹಾಲುಜೇನು ನಿಜಕ್ಕೂ ಹಾಲು ಜೇನನ್ನೆ ಹರಿಸಿತು. ಆನಂತರ ಅವರು ತೆಗೆದ ಅಷ್ಟೂ ಚಿತ್ರಗಳು ಹೊಸ ದಾಖಲೆಯನ್ನೆ ನಿರ್ಮಿಸಿವೆ. ಚಲಿಸುವ ಮೋಡವಂತೂ ಒಂದು ಐತಿಹಾಸಿಕ ಘಟನೆಯಂತಿದೆ. ರಾಜ್ ಬೇಕಾದಷ್ಟು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರೂ ಸಿಂಗೀತಂ ಶ್ರೀನಿವಾಸ್ ಮತ್ತು ರಾಜ್ ಸಮಾಗಮಗೊಂಡು ತಯಾರಾದ ಸಿನಿಮಾಗಳ ತಾಜಾತನವೇ ವಿಭಿನ್ನ. ರಾಜ್ಕುಮಾರ್ ಅವರ ತಾರಾಪ್ರಭಾವವನ್ನು ಸಿಂಗೀತಂ ಸಾಮಾನ್ಯ ಮನುಷ್ಯನ ಸಂಕಟಗಳಿಗೆ ಧ್ವನಿಯಾಗಲು ಬಳಸುತ್ತಾರೆ. ಅವರ ಪಾತ್ರಗಳು ಅಸಾಧಾರಣ ನಾಯಕರಲ್ಲ; ಹಣಕ್ಕಾಗಿ, ಕುಟುಂಬಕ್ಕಾಗಿ ಮತ್ತು ಗೌರವಕ್ಕಾಗಿ ಹೋರಾಡುವ ನಮ್ಮ ಸುತ್ತಲಿನ ಮನುಷ್ಯರು. ಹಾಲು ಜೇನು ಸಿನಿಮಾದ ದುಃಖ ಮತ್ತು ಭಾಗ್ಯದ ಲಕ್ಷ್ಮೀ ಬಾರಮ್ಮ ಚಿತ್ರದ ನಗುವಿನ ಹಿಂದೆ ‘ಹಣದ ಕೊರತೆ ಮನುಷ್ಯನ ಆಯ್ಕೆಗಳನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಲ್ಲದು’ ಎಂಬ ಸಾಮಾನ್ಯ ಎಳೆ ಅಡಗಿಕೊಂಡಿದೆ.
ಸಿಂಗೀತಂ ಅವರ ಸಿನಿಮಾಗಳ ವಿಶೇಷತೆ ಇದು. ಅವರು ದೊಡ್ಡ ಸಾಮಾಜಿಕ ಸಮಸ್ಯೆಗಳನ್ನು ಸಾಮಾನ್ಯ ಮನುಷ್ಯನ ಸಣ್ಣಸಣ್ಣ ಸಂಕಟಗಳ ಮೂಲಕ ತೆರೆದಿಡುತ್ತಾರೆ. ಅವರ ಕ್ಯಾಮೆರಾ ಆ ಮನುಷ್ಯನ ಕುರಿತು ತೀರ್ಪು ನೀಡದೆ, ಅವನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಆ ನಗುವಿನ ಹಿಂದೆಯೇ ಆರ್ಥಿಕ ಅಸಮಾನತೆ, ಮಧ್ಯಮವರ್ಗದ ಅಭದ್ರತೆ ಮತ್ತು ಹಣದ ಆಧಾರದ ಮೇಲೆ ಮಣೆ ಹಾಕುವ ಸಮಾಜದ ವ್ಯಂಗ್ಯ ಕಾಣಿಸುತ್ತದೆ.
ಹಾಲು ಜೇನು ಮೇಲ್ನೋಟಕ್ಕೆ ದುರಂತ ಪ್ರೇಮಕಥೆ. ರಂಗನ ಪತ್ನಿ ಕಮಲೆಗೆ ರಕ್ತದ ಕ್ಯಾನ್ಸರ್ ಇರುವುದು ತಿಳಿದಾಗ, ಆಕೆಯ ಚಿಕಿತ್ಸೆಗೆ ತನ್ನ ಉಳಿತಾಯವನ್ನೆಲ್ಲ ಖರ್ಚು ಮಾಡುವ ರಂಗನ ಬದುಕು ಅಸ್ಥಿರವಾಗುತ್ತದೆ. ಇಲ್ಲಿ ದುರಂತ ಕೇವಲ ಪತ್ನಿಯನ್ನು ಕಳೆದುಕೊಳ್ಳುವ ಭಯವಲ್ಲ; ಅನಾರೋಗ್ಯದ ಎದುರು ಮಧ್ಯಮವರ್ಗದ ಆರ್ಥಿಕ ಅಸಹಾಯಕತೆ. ಪ್ರೀತಿ ಎಷ್ಟೇ ಗಾಢವಾಗಿದ್ದರೂ ಚಿಕಿತ್ಸೆ ಕೊಡಿಸಲು ಹಣ ಬೇಕು. ಆ ಹಣವಿಲ್ಲದಾಗ ಮನುಷ್ಯ ತನ್ನ ಮಿತಿಗಳನ್ನು ಮೀರಿ ಪರಿಹಾರ ಹುಡುಕಬೇಕಾಗುತ್ತದೆ. ಹೀಗಾಗಿ ಸಿಂಗೀತಂ ಪ್ರೀತಿಯನ್ನು ಭಾವನೆಯಾಗಿ ಮಾತ್ರವಲ್ಲ, ಹಣ ಮತ್ತು ಬದುಕಿನ ಭದ್ರತೆಯೊಂದಿಗೆ ಬೆಸೆದ ವಾಸ್ತವವಾಗಿ ಚಿತ್ರಿಸುತ್ತಾರೆ.
ಇದೇ ಆರ್ಥಿಕ ಅಸ್ಥಿರತೆ ಭಾಗ್ಯದ ಲಕ್ಷ್ಮೀ ಬಾರಮ್ಮ ಚಿತ್ರದಲ್ಲಿ ದುರಂತದ ಬದಲು ಹಾಸ್ಯದ ರೂಪ ಪಡೆಯುತ್ತದೆ. ಹಣ ಸಂಪಾದಿಸಿ ಸಹೋದರಿಯರನ್ನು ಸುಖವಾಗಿ ನೋಡಿಕೊಳ್ಳಬೇಕೆಂಬ ಪಾಂಡುರಂಗನ ಆಸೆ ಮತ್ತು ಸಾಮಾಜಿಕ ಒತ್ತಡಗಳಿಂದ ತಪ್ಪಿಸಿಕೊಳ್ಳುವ ಹಂಬಲ ಅವನನ್ನು ಪಾರ್ವತಿಯೊಂದಿಗೆ ಗಂಡ–ಹೆಂಡತಿಯಂತೆ ನಟಿಸುವ ಸಾಹಸಕ್ಕೆ ಕರೆದೊಯ್ಯುತ್ತವೆ. ಈ ಸುಳ್ಳಿನ ಹಿಂದೆ ಕೇವಲ ಹಾಸ್ಯವಿಲ್ಲ; ಅವಕಾಶಗಳ ಕೊರತೆಯೂ ಗೋಚರಿಸುತ್ತದೆ. ಹಣವಿದ್ದವನಿಗೆ ಗೌರವ, ಇಲ್ಲದವನಿಗೆ ನಿರ್ಲಕ್ಷ್ಯ ತೋರುವ ಸಮಾಜವನ್ನು ಚಿತ್ರದ ಶೀರ್ಷಿಕೆ ಗೀತೆಯೂ ವ್ಯಂಗ್ಯವಾಗಿ ಹಿಡಿದಿಡುತ್ತದೆ. ಮನುಷ್ಯ ನಿಜವಾಗಿ ಯಾರು ಎಂಬುದಕ್ಕಿಂತ, ಅವನು ಯಾರಂತೆ ಕಾಣುತ್ತಾನೆ ಎಂಬುದೇ ಮುಖ್ಯವಾಗುವ ವ್ಯವಸ್ಥೆಯನ್ನು ಸಿಂಗೀತಂ ನಗುವಿನ ಮೂಲಕ ಪ್ರಶ್ನಿಸುತ್ತಾರೆ.

ಈ ನೋಟ ಪುಷ್ಪಕ ವಿಮಾನದಲ್ಲೂ ಕಾಣುತ್ತದೆ. ಅಲ್ಲಿ ನಿರುದ್ಯೋಗಿ ಯುವಕ ಶ್ರೀಮಂತನ ವೇಷ ಧರಿಸುತ್ತಾನೆ; ಇಲ್ಲಿ ಪಾಂಡುರಂಗ ಮತ್ತು ಪಾರ್ವತಿ ತಮ್ಮ ಸಾಮಾಜಿಕ ಸ್ಥಿತಿಯನ್ನು ಮೀರಲು ನಟನೆಗೆ ಮೊರೆಹೋಗುತ್ತಾರೆ. ಎರಡೂ ಚಿತ್ರಗಳಲ್ಲಿ ಗುರುತು ಒಂದು ರೀತಿಯ ಕರೆನ್ಸಿಯಾಗುತ್ತದೆ. ಬದುಕಿನಲ್ಲಿ ಅವಕಾಶ ಪಡೆಯಲು ಕೆಲವೊಮ್ಮೆ ಮನುಷ್ಯ ತನ್ನ ನಿಜವಾದ ಗುರುತನ್ನೇ ಮರೆಮಾಚಬೇಕಾಗುತ್ತದೆ.
ಈ ಚಿತ್ರಗಳ ಮತ್ತೊಂದು ಮುಖ್ಯ ಆಯಾಮ ಕುಟುಂಬದ ಹೊಣೆಗಾರಿಕೆ. ಹಾಲು ಜೇನುನಲ್ಲಿ ಪತ್ನಿಯ ಚಿಕಿತ್ಸೆಗೆ ಉಳಿತಾಯ ವ್ಯಯಿಸುವ ರಂಗನಾಗಲಿ, ಭಾಗ್ಯದ ಲಕ್ಷ್ಮೀ ಬಾರಮ್ಮನಲ್ಲಿ ಸಹೋದರಿಯರ ಭವಿಷ್ಯಕ್ಕಾಗಿ ಹಣ ಸಂಪಾದಿಸಲು ಬಯಸುವ ಪಾಂಡುರಂಗನಾಗಲಿ, ಅವರ ನಿರ್ಧಾರಗಳು ವೈಯಕ್ತಿಕ ಆಸೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ಮಧ್ಯಮವರ್ಗದಲ್ಲಿ ಒಬ್ಬನ ಆದಾಯ ಇಡೀ ಕುಟುಂಬದ ಭದ್ರತೆಯೊಂದಿಗೆ ಬೆಸೆದುಕೊಂಡಿರುತ್ತದೆ. ಹೀಗಾಗಿ ಅನಾರೋಗ್ಯ ಮತ್ತು ನಿರುದ್ಯೋಗ ಒಬ್ಬ ವ್ಯಕ್ತಿಯ ಸಂಕಟವಾಗಿ ಉಳಿಯದೆ ಕುಟುಂಬದ ಬದುಕನ್ನೇ ಅಲುಗಾಡಿಸುತ್ತವೆ.
ಶ್ರೀನಿವಾಸ್ ಚಿತ್ರರಂಗದ ಚಲನಶೀಲತೆಗೆ ಹೊಂದಿಕೊಂಡ ಪ್ರಯೋಗಶೀಲರಾಗಿದ್ದರು. ಅವರ ಒಂದೊಂದು ಚಿತ್ರವೂ ವಿಭಿನ್ನವಾಗಿದ್ದವು. ಈ ವಿಭಿನ್ನತೆಯ ಅವರ ಪ್ರತಿಭೆ ದಂಗುಬಡಿಸುವಂತದ್ದು. ಸಿನಿಮಾದ ಮೂಲಕ ಸಾಮಾಜಿಕ-ರಾಜಕೀಯ ಸಂದೇಶಗಳನ್ನು ದಾಟಿಸುವ ಅವರು ದೊಡ್ಡ ಕ್ರಾಂತಿಯ ಘೋಷಣೆ ಮಾಡುವುದಿಲ್ಲ; ಅಧಿಕಾರವಂತರಿಗಿಂತ ಅಧಿಕಾರವಿಲ್ಲದವರ ಬದುಕಿನತ್ತ ಕ್ಯಾಮೆರಾ ತಿರುಗಿಸುತ್ತಾರೆ. ಅವರ ನಾಯಕರು ವ್ಯವಸ್ಥೆಯನ್ನು ಬದಲಿಸದಿರಬಹುದು; ಆದರೆ ಅದರ ವಿಚಿತ್ರತೆಗಳ ನಡುವೆ ಬದುಕುವ ತಂತ್ರಗಳನ್ನು ಕಂಡುಕೊಳ್ಳುತ್ತಾರೆ. ಹೀಗಾಗಿ ಅವರ ಸಿನಿಮಾಗಳು ಕೇವಲ ಪ್ರಯೋಗಶೀಲತೆಯ ಚೌಕಟ್ಟಿಗಷ್ಟೆ ಸೀಮಿತವಾಗದೆ, ನಿರುದ್ಯೋಗ, ಆರ್ಥಿಕ ಅಸಮಾನತೆ, ಸಾಮಾಜಿಕ ಗೌರವ ಮತ್ತು ಬದುಕುಳಿಯುವ ಮನುಷ್ಯನ ಬುದ್ಧಿವಂತಿಕೆಯ ಕಥನಗಳಾಗಿ ವಿಸ್ತಾರಗೊಳ್ಳುತ್ತವೆ. ಬಡತನದ ನಡುವೆ ನಗು ಮೂಡಿಸುವ ಅವರ ಚಿತ್ರಗಳು ‘ಈ ಸಮಾಜದಲ್ಲಿ ಬದುಕಲು ಒಬ್ಬ ಸಾಮಾನ್ಯ ಮನುಷ್ಯ ಎಷ್ಟು ದೂರದವರೆಗೆ ತನ್ನನ್ನು ಬದಲಿಸಿಕೊಳ್ಳಬೇಕು?’ ಎಂಬ ಒಂದು ಅಸಹನೀಯ ಪ್ರಶ್ನೆಯನ್ನು ಕೊನೆಗೆ ಉಳಿಸುತ್ತವೆ. ಅದೇ ಅವರ ಗೆಲುವು. ಇಂತಹ ಅದ್ಭುತ ಚಿತ್ರ ಸಾಹಿತಿ, ಲೇಖಕ, ನಿರ್ದೇಶಕ, ನಿರ್ಮಾಪಕ, ಸ್ವರಸಂಯೋಜಕ, ನಟ ಹೀಗೆ ಬಹುಭಾಷಾ ಚಿತ್ರ ಸಾರ್ವಭೌಮನಿಗೆ ದಾದಾ ಸಾಹೇಬ್ ಪ್ರಶಸ್ತಿ ಬರಲೇ ಇಲ್ಲ. ತಮ್ಮ 95ನೇ ವಯಸ್ಸಿನಲ್ಲೂ ಸಿನಿಮಾದ ಕುರಿತು ಧ್ಯಾನಿಸುವಂತಹ ಇಂತಹ ಸಾಧಕರು ನಮ್ಮ ಸರ್ಕಾರಗಳ ಕಣ್ಣಿಗೆ ಬೀಳುವುದಿಲ್ಲ. ಅವರ ಸಿನಿಮಾದ ಪಾತ್ರಗಳು ಅನುಭವಿಸಿದ್ದಕ್ಕಿಂತಲೂ, ಇದು ನಿಜವಾದ ದುರಂತ!

ಲೇಖಕರು ಹಿರಿಯ ಕನ್ನಡ ಸಾಹಿತಿ, ಪತ್ರಕರ್ತ. ಹೆಸರಾಂತ ಲಂಕೇಶ್ ಪತ್ರಿಕೆಯಲ್ಲಿ ಗ್ರಾಮೀಣ ಸೊಗಡಿನ ‘ಕಟ್ಟೆಪುರಾಣ’ ಅಂಕಣದ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದರು. ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಾಳಮಾವನ ಕಡೇದಿನಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
