ಮುಖ್ಯಮಂತ್ರಿ ಹುದ್ದೆಯನ್ನು ಮಾಪನವಾಗಿಟ್ಟುಕೊಂಡು ಕರ್ನಾಟಕ ರಾಜಕಾರಣದಲ್ಲಿ ಜಾತಿ ಪ್ರಾಬಲ್ಯವನ್ನು ನಿರ್ಧರಿಸುವುದಾದರೆ, ಸಿಂಹಪಾಲು ಲಿಂಗಾಯತ ಸಮುದಾಯದ್ದು. ಒಟ್ಟು ಒಂಬತ್ತು ಮುಖ್ಯಮಂತ್ರಿಗಳು 28 ವರ್ಷಗಳ ಸುದೀರ್ಘ ಅವಧಿಗೆ ಸಿಎಂ ಹುದ್ದೆಯನ್ನು ಅಲಂಕರಿಸಿದ್ದರು. ಕಾಂಗ್ರೆಸ್, ಜನತಾದಳ, ಬಿಜೆಪಿ ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ. ಇವತ್ತಿಗೂ ಮುಂಬೈ ಕರ್ನಾಟಕ ಸೀಮೆ ಮತ್ತು ಮಧ್ಯ ಕರ್ನಾಟಕದಲ್ಲಿ ಲಿಂಗಾಯತರೆ ನಿರ್ಣಾಯಕ. ಪ್ರಸ್ತುತ ಅಸೆಂಬ್ಲಿಯಲ್ಲಿ (2023ರ ಚುನಾವಣೆಯ ನಂತರ) ಮೂರು ಪಕ್ಷಗಳಿಂದ ಒಟ್ಟು 56 ಲಿಂಗಾಯತ ಶಾಸಕರು ಸದನದಲ್ಲಿದ್ದಾರೆ. ಅತಿ ಹೆಚ್ಚು ಲಿಂಗಾಯತ ಶಾಸಕರು ಗೆದ್ದಿರೋದು ಕಾಂಗ್ರೆಸ್ ಪಕ್ಷದಿಂದ (34). ಚುನಾವಣಾ ರಾಜಕಾರಣ ಮಾತ್ರವಲ್ಲದೆ, ಮಠಗಳ ಕೇಂದ್ರಿತ `ಪ್ರಭಾವ ರಾಜಕಾರಣ’ದಲ್ಲೂ ಲಿಂಗಾಯತ ಸಮುದಾಯ ಮುಂದಿದೆ.
ಇಷ್ಟೆಲ್ಲ ಪ್ರಭಾವಿ ಹಿನ್ನೆಲೆ ಇರುವ ಈ ಸಮುದಾಯ ಕಳೆದ ಜೂನ್ನಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ರಾಜಕೀಯವಾಗಿ ಮಂಕಾಗುತ್ತಿರುವರೇ? ಎಂಬ ಚರ್ಚೆ ಈಗ ಹರಿದಾಡುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಏಳು ಲಿಂಗಾಯತ ಸಚಿವರಿದ್ದಾರೆ. ಒಕ್ಕಲಿಗ ಸಚಿವರಿಗಿಂತಲೂ ಒಂದು ಜಾಸ್ತಿ. ಹೀಗಿರುವಾಗ ಲಿಂಗಾಯತರು ಮಂಕಾಗಿದ್ದಾರೆ ಎಂದು ಹೇಗೆ ಹೇಳುತ್ತೀರಿ? ಅಂತ ನೀವು ಕೇಳಬಹುದು. ಈ ವಿಶ್ಲೇಷಣೆಯ ಆಳಕ್ಕಿಳಿದು ನೋಡುವ ಮುನ್ನ ಒಂದು ಸಂಗತಿ ಸ್ಪಷ್ಟಪಡಿಸಿಕೊಳ್ಳೋಣ. ರಾಜಕೀಯ ಪ್ರಭಾವ ಎನ್ನುವುದು ಕೇವಲ ಅಂಕಿಸಂಖ್ಯಿಯ ಮೇಲೆ ಅವಲಂಭಿತವಾಗಿರುವುದಿಲ್ಲ. ರಾಜಕೀಯ ನಿರ್ಧಾರಗಳಲ್ಲಿ ಯಾರ ಧ್ವನಿಗೆ ಹೆಚ್ಚು ಅವಕಾಶ, ಆದ್ಯತೆ ಮತ್ತು ಮಹತ್ವ ಲಭ್ಯವಾಗುತ್ತಿದೆ ಎನ್ನುವುದರ ಮೇಲೆ ನಿಂತಿರುತ್ತದೆ. ಸಂಖ್ಯೆಯೇ ಅಂತಿಮವಾಗುವುದಾದರೆ, ಈ ಸಂಪುಟದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರರೂ ಒಳಗೊಂಡಂತೆ ಏಳು ದಲಿತ ಸಚಿವರಿದ್ದಾರೆ. ಆದಾಗ್ಯೂ ಈ ರಾಜ್ಯದಲ್ಲಿ ದಲಿತರು ಯಾವುದೇ ಸಂಪುಟದಲ್ಲಿ ತಮ್ಮ ಸ್ವತಂತ್ರ ಧ್ವನಿಯನ್ನು ದಾಖಲಿಸಲು ನಮ್ಮ ರಾಜಕೀಯ ವ್ಯವಸ್ಥೆ ಅವಕಾಶ ಕೊಟ್ಟಿದ್ದುಂಟೇ? ಅಹಿಂದ ಇಮೇಜಿನ ಸಿದ್ದರಾಮಯ್ಯನವರ ಸರ್ಕಾರದಲ್ಲೆ ಜಾತಿಗಣತಿಯ ಸ್ವೀಕಾರಕ್ಕೆ ಎಷ್ಟೆಲ್ಲ ಸರ್ಕಸ್ಸು ಮಾಡಬೇಕಾಯ್ತು. ಒಳಮೀಸಲಾತಿ ಅನುಷ್ಟಾನಕ್ಕೆ ಏನೆಲ್ಲಾ ಅಡ್ಡಿಗಳನ್ನು ಹಾಯಬೇಕಾಯ್ತು. ಹಾಗಾಗಿ ರಾಜಕಾರಣದಲ್ಲಿ ಅವಕಾಶ ಪ್ರಾತಿನಿಧ್ಯವೇ ಬೇರೆ; ಸ್ವತಂತ ಧ್ವನಿ-ಪ್ರಭಾವದ ರಾಜಕಾರಣವೇ ಬೇರೆ.
ಇದ್ದ ಮೂವರಲ್ಲಿ….

ಪ್ರಸ್ತುತ ರಾಜಕಾರಣದಲ್ಲಿ ಲಿಂಗಾಯತರು ಮಂಕಾಗಿರುವರೇ? ಎನ್ನುವ ಪ್ರಶ್ನೆ ಈ ಆಯಾಮದಿಂದ ಮುಖ್ಯವಾಗುತ್ತದೆ. ಈ ಪ್ರಶ್ನೆ ಮುನ್ನೆಲೆಗೆ ಬರಲು ಮುಖ್ಯ ಕಾರಣ, ರಾಜ್ಯದಲ್ಲಿ ಒಕ್ಕಲಿಗ ನಾಯಕರ ಮೇಲುಗೈ ಜೋರಾಗುತ್ತಿರುವುದು; ಮತ್ತು, ಆ ಕಾರಣಕ್ಕಾಗಿಯೇ ಅವರ ನಡುವೆ ಪೈಪೋಟಿ ವಿಪರೀತಗೊಳ್ಳುತ್ತಿರುವುದು. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದವರು. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ವಿಪಕ್ಷ ನಾಯಕ ಸ್ಥಾನದಲ್ಲಿರುವ ಆರ್ ಅಶೋಕ್ ಕೂಡಾ ಅದೇ ಸಮುದಾಯ. ಇನ್ನು ಡಿ.ಕೆ. ಶಿವಕುಮಾರ್ ಅವರ ಪ್ರಾಬಲ್ಯಕ್ಕೆ ಪ್ರತಿಸ್ಪರ್ಧೆ ಒಡ್ಡಲು ಟೊಂಕಕಟ್ಟಿ ನಿಂತಿರುವ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೂಡಾ ಒಕ್ಕಲಿಗರು. ಕೇವಲ ಆಯಕಟ್ಟಿನ ಹುದ್ದೆಗಳನ್ನು ಹೊಂದಿರುವುದು ಮಾತ್ರವಲ್ಲದೆ, ಭವಿಷ್ಯದ ಅಧಿಕಾರಕ್ಕಾಗಿ ಹಕ್ಕು ಚಲಾಯಿಸುವ ವಿಚಾರದಲ್ಲೂ ಇವರ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. 2028ರ ಚುನಾವಣೆಗು ಕಾಂಗ್ರೆಸಿನ ಸಿಎಂ ಅಭ್ಯರ್ಥಿಯಾಗುವ ಮಹತ್ವಾಕಾಂಕ್ಷೆಯನ್ನು ಡಿ ಕೆ ಶಿವಕುಮಾರ್ ಸ್ಪಷ್ಟವಾಗಿ ದಾಖಲಿಸುತ್ತಿದ್ದಾರೆ. ಬಿಜೆಪಿ ಜೊತೆ ಮೈತ್ರಿಯಲ್ಲಿದ್ದರು ಕೂಡಾ, ಕುಮಾರಸ್ವಾಮಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಆ ಕಾರಣಕ್ಕೆ, ಕೇಂದ್ರ ಮಂತ್ರಿಗಿರಿಗಿಂತ ರಾಜ್ಯ ರಾಜಕಾರಣದಲ್ಲೆ ಹೆಚ್ಚು ಸಕ್ರಿಯವಾಗಿದ್ದಾರೆ. ತಮ್ಮ ಕುಟುಂಬವನ್ನು ಈಗ ಸಿಲುಕಿರುವ ಹಲವು ಸಂಕಟಗಳಿಂದ ಹೊರತರಬೇಕೆಂದರೆ ಅವರಿಗೆ ರಾಜ್ಯದಲ್ಲಿ ಅಧಿಕಾರ ಅತ್ಯಗತ್ಯ. ಅಲ್ಲದೇ, ಡಿ.ಕೆ ಸೋದರರು ಪ್ರಭಾವಿಗಳಾದರೆ, ತಮ್ಮ ಒಕ್ಕಲಿಗ ಓಟ್ಬ್ಯಾಂಕ್ ಕೈತಪ್ಪಬಹುದೆನ್ನುವ ಆತಂಕವೂ ಅವರನ್ನು ಸಕ್ರಿಯಗೊಳಿಸಿದೆ. ಇವರಿಬ್ಬರಿಗೆ ಹೋಲಿಸಿದರೆ ಆರ್. ಅಶೋಕ್ ಪೇಲವವೆನಿಸುವುದು ನಿಜವಾದರೂ, ವಿಪಕ್ಷ ನಾಯಕನ ಹುದ್ದೆಯಿಂದಾಗಿ ಮೀಡಿಯಾಗಳಲ್ಲಿ ಸ್ಪೇಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ವಿಪಕ್ಷ ನಾಯಕರಾದವರಿಗೆ ಸಿಎಂ ಹುದ್ದೆ ಒಲಿದು ಬಂದಿರುವ ಹಳೆಯ ಇತಿಹಾಸ ಅವರಲ್ಲಿ ಆಸೆಯನ್ನು ಜೀವಂತವಿರಿಸಿರಬಹುದು.
ಒಕ್ಕಲಿಗ ನಾಯಕರ ಈ ತ್ರಿವಳಿ ಪೈಪೋಟಿಯ ನಡುವೆ ಲಿಂಗಾಯತರ ಮೌನ ಎದ್ದು ಕಾಣುತ್ತಿದೆ. ಮೊದಲಿನಿಂದಲೂ ರಾಜ್ಯ ರಾಜಕಾರಣದಿ ಹಕ್ಕು ಸಾಧಿಸುವ ವಿಚಾರದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರ ನಡುವೆ ಸ್ಪರ್ಧೆ ನಡೆಯುತ್ತಲೇ ಬಂದಿದೆ. ಇದುವರೆಗೆ ಒಂಬತ್ತು ಲಿಂಗಾಯತ ಮುಖ್ಯಮಂತ್ರಿಗಳು ಆಗಿಹೋಗಿದ್ದರೆ, ಒಕ್ಕಲಿಗ ಸಮುದಾಯದಿಂದ ಎಂಟು ಜನ ಸಿಎಂಗಳನ್ನು ಕಾಣಬಹುದು. ಇದು ಈ ಎರಡೂ ಸಮುದಾಯಗಳ ನಡುವಿನ ಪೈಪೋಟಿಗೆ ಸಾಕ್ಷಿ. ಇಂಥಾ ಹಿನ್ನೆಲೆಯಲ್ಲಿ, ಈಗಿನ ಮೂರೂ ಪಕ್ಷಗಳಲ್ಲಿ ಒಕ್ಕಲಿಗ ನಾಯಕರು ಮುಂಚೂಣಿಯಲ್ಲಿ ನಿಂತರೆಂದ ಮೇಲೆ ಲಿಂಗಾಯತರ ಪ್ರಭಾವದ ಬಗ್ಗೆ ಪ್ರಶ್ನೆ ಏಳುವುದು ಸಹಜ.
ಕೈ ಪಾಳೆಯದ ಕಥೆ
ಜೆಡಿಎಸ್ ಪಕ್ಷದಲ್ಲಿ, ದೇವೇಗೌಡರ ಕುಟುಂಬದವರನ್ನು ಹೊರತುಪಡಿಸಿ ಒಕ್ಕಲಿಗ ಸಮುದಾಯದ ಬೇರೆಯವರಿಗೇ ಅವಕಾಶ ಸಿಗುವುದು ದುಸ್ಥರ. ಅಂತದ್ದರಲ್ಲಿ ಆ ಪಕ್ಷದಲ್ಲಿ ಲಿಂಗಾಯತರ ಪ್ರಭಾವವನ್ನು ನಿರೀಕ್ಷಿಸುವುದು ವ್ಯರ್ಥ. ಇನ್ನುಳಿದದ್ದು ಕಾಂಗ್ರೆಸ್ ಮತ್ತು ಬಿಜೆಪಿ. ಇಲ್ಲಿ ಲಿಂಗಾಯತರು ತಮ್ಮ ಪ್ರಭಾವ ಬೀರಲು ಅವಕಾಶವಿದೆ. ಆದರೆ ಈ ಎರಡು ಪಕ್ಷಗಳಲ್ಲಿ ಸದ್ಯದ ವಾತಾವರಣ ಹೇಗಿದೆ ಅನ್ನೋದು ನಮ್ಮ ಪ್ರಶ್ನೆಯ ಧಾತು.
ಹಾಗೆ ನೋಡಿದರೆ, 1990ರಲ್ಲಿ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ನಂತರ ಕಾಂಗ್ರೆಸ್ ಪಕ್ಷದಿಂದ ಇದುವರೆಗೆ ಯಾರೂ ಲಿಂಗಾಯತ ಸಿಎಂಗಳಾಗಿ ಆಯ್ಕೆಯಾಗಿಲ್ಲ. ಆದಾಗ್ಯೂ, ಸರ್ಕಾರದ ಮೇಲೆ ಪ್ರಭಾವ ಬೀರುವಲ್ಲಿ ಮತ್ತು ತಮ್ಮ ಪರ ಧ್ವನಿ ದಾಖಲಿಸುವಲ್ಲಿ ಲಿಂಗಾಯತ ನಾಯಕರುಗಳು ಯಶಸ್ವಿಯಾಗುತ್ತಲೇ ಬಂದಿದ್ದರು. ಅಹಿಂದ ಸಮೀಕರಣದಲ್ಲಿ ಅಧಿಕಾರಕ್ಕೇರಿದ ಸಿದ್ದರಾಮಯ್ಯನವರು ಕುರುಬ ಸಮುದಾಯಕ್ಕೆ ಸೇರಿದವರಾದರೂ, ಲಿಂಗಾಯತ ಸಮುದಾಯದ ಒಲವು ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಸಚಿವ ಸಂಪುಟಗಳಲ್ಲಿ ಎಂ ಬಿ ಪಾಟೀಲ್, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ಈಶ್ವರ್ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ, ಶರಣಪ್ರಕಾಶ್ ಪಾಟೀಲ್, ದಿವಂಗತ ಮಹದೇವ್ ಪ್ರಸಾದ್, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ್ ಹುಕ್ಕೇರಿ ಮೊದಲಾದ ನಾಯಕರಿಗೆ ಅವಕಾಶ ಕೊಟ್ಟಿದ್ದು ಮಾತ್ರವಲ್ಲ, ಅವರ ಜೊತೆ ಸೌಹಾರ್ದಯುತ ಸಂಬಂಧವನ್ನೂ ಉಳಿಸಿಕೊಂಡಿದ್ದರು.

ಸಿದ್ದರಾಮಯ್ಯನವರಿಗಿದ್ದ ಮಾಸ್ ಇಮೇಜ್ ಹಾಗೂ ಅನುಭವದ ಕಾರಣಕ್ಕೆ ಅವರು ಕೂಡಾ ಗೌರವ ತೋರುತ್ತಿದ್ದರು. ಬಸವಣ್ಣನವರ ತತ್ವ ಆದರ್ಶಗಳಲ್ಲಿ ಸಿದ್ದರಾಮಯ್ಯನವರಿಗಿದ್ದ ಒಲವು ಸಹ ಲಿಂಗಾಯತರ ನಡುವೆ ಸಿದ್ದರಾಮಯ್ಯನವರು ಜನಪ್ರಿಯರಾಗಲು ಕಾರಣವಾಗಿತ್ತು. ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದು ಮತ್ತು ಬಸವಣ್ಣನನ್ನು ನಾಡಿನ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು ಸಿದ್ದರಾಮಯ್ಯನವರು ಅನ್ನೋದು ಇಲ್ಲಿ ಉಲ್ಲೇಖಾರ್ಹ. 2018ರ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆದಾಗ್ಯೂ ಸಿದ್ದರಾಮಯ್ಯನವರ ವರ್ಚಸ್ಸು ಲಿಂಗಾಯತ ನಾಯಕರು ಮತ್ತು ಮಠಾಧೀಶರ ನಡುವೆ ಹಿಗ್ಗುತ್ತಲೇ ಬಂದಿದೆ. ಲಿಂಗಾಯತ ಮಠಾಧೀಶರು ಒಟ್ಟಾಗಿ ಸಿದ್ದರಾಮಯ್ಯನವರನ್ನು ಸನ್ಮಾನಿಸಿದ್ದು ಇದಕ್ಕೆ ಸಾಕ್ಷಿ. ಲಿಂಗಾಯತರ ವಿಚಾರದಲ್ಲಿ ಇಂತಹ ನಡೆ ಹೊಸ ವಿದ್ಯಮಾನವಲ್ಲ. ಈ ಹಿಂದೆ ಎಂಬತ್ತರ ದಶಕದಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೇರಿದ ರಾಮಕೃಷ್ಣ ಹೆಗಡೆಯವರನ್ನು ಕೂಡಾ ಲಿಂಗಾಯತರು ಇದೇ ರೀತಿ ಸ್ವೀಕರಿಸಿದ್ದಿದೆ. ಹೆಗಡೆಯವರ ವಿರುದ್ಧ ದೇವೇಗೌಡರು ಅಸಮಾಧಾನಗೊಳ್ಳಲು ಅವರಿಗೆ ಲಿಂಗಾಯತರಿಂದ ಸಿಕ್ಕ ಈ ಬಲವೂ ಒಂದು ಕಾರಣ.
ಆದರೆ ಡಿ ಕೆ ಶಿವಕುಮಾರ್ ಅವರು ಸಿಎಂ ಸ್ಥಾನಕ್ಕೇರಿದ ನಂತರ ಇದೆಲ್ಲವೂ ಬದಲಾಗಿದೆ. ಮುಖ್ಯವಾಗಿ, ಸಿದ್ದರಾಮಯ್ಯನವರ ಅವಧಿಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದ ಸಚಿವ ಎಂ ಬಿ ಪಾಟೀಲ್ ಫುಲ್ ಸೈಲೆಂಟಾಗಿದ್ದಾರೆ. ಸರ್ಕಾರದ ಸಮರ್ಥನೆಯಲ್ಲಿ ಅವರು ಮೊದಲಿನಷ್ಟು ಆಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಅವರಿಗೆ ಇವೆರಡೂ ಲಭಿಸಲಿಲ್ಲ. ಇದ್ದುದರಲ್ಲಿ ಈಶ್ವರ್ ಖಂಡ್ರೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊರತುಪಡಿಸಿದರೆ, ಬೇರಾವ ಲಿಂಗಾಯತ ಸಚಿವರು ಸರ್ಕಾರದ ಭಾಗವಾಗಿ ಗೋಚರಿಸುತ್ತಿಲ್ಲ. ಲೇಟೆಸ್ಟಾಗಿ, ಸಿಎಂ ನೇತೃತ್ವದಲ್ಲಿ ಚುನಾವಣಾ ಆಯುಕ್ತರ ಕಚೇರಿ ಮುಂದೆ ನಡೆದ ಸಂಪುಟ ಸಚಿವರ ಧರಣಿಯಲ್ಲಿ ಎಂ ಬಿ ಪಾಟೀಲ್, ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಈಶ್ವರ್ ಖಂಡ್ರೆ ಮೊದಲಾದ ಲಿಂಗಾಯತ ಸಚಿವರ ಅನುಪಸ್ಥಿತಿ ಗಮನಾರ್ಹದ್ದು. ಯಾಕೆಂದರೆ, ಅದು ಪೂರ್ವ ನಿರ್ಧರಿತ ಧರಣಿಯಾಗಿರಲಿಲ್ಲ. ನಡೆಯಬೇಕಿದ್ದ ಸಂಪುಟ ಸಭೆಯನ್ನು ರದ್ದು ಮಾಡಿ, ಅದೇ ಸಮಯದಲ್ಲಿ ದಿಢೀರ್ ನಡೆಸಲಾದ ಧರಣಿ. ಸಂಪುಟ ಸಭೆಗೆ ಭಾಗವಹಿಸಲೆಂದು ಬಂದವರೆಲ್ಲ ಧರಣಿಯಲ್ಲಿ ಭಾಗವಹಿಸಿದರು. ಅಲ್ಲಿ ಎಂ ಬಿ ಪಾಟೀಲ್ ಇರಲಿಲ್ಲ ಎಂದರೆ, ಅವರು ಪೂರ್ವ ನಿರ್ಧರಿತ ಸಂಪುಟ ಸಭೆಯಿಂದಲೂ ದೂರ ಉಳಿದಿದ್ದರು ಎಂಬುದು ಅರ್ಥವಾಗುತ್ತೆ. ಅನುಭವಿ ಮತ್ತು ಪ್ರಭಾವಿ ಸಚಿವರಾಗಿ, ಸಂಪುಟ ಸಭೆಯಿಂದ ಹೊರಗುಳಿಯುತ್ತಾರೆ ಎಂದರೆ ಏನರ್ಥ?

ಡಿ ಕೆ ಶಿವಕುಮಾರ್ ಅವರ ಏಕವ್ಯಕ್ತಿ ಕೇಂದ್ರಿತ ಶೈಲಿಯ ಆಡಳಿತ ಹಲವು ಹಿರಿಯ ಮತ್ತು ಪ್ರಭಾವಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಎಚ್. ಕೆ ಪಾಟೀಲರು ಬರ ಘೋಷಣೆಯ ಅಸಮಾಧಾನದಲ್ಲಿ ರಾಜೀನಾಮೆಯ ಮಾತಾಡಿದ್ದು ಸಹ ಇದೇ ಕಾರಣಕ್ಕೆ ಎನ್ನಲಾಗ್ತಿದೆ. ಸಿಎಂ ಹೊರತುಪಡಿಸಿದರೆ, ಆರೆಸ್ಸೆಸ್ ವಿರುದ್ಧದ ಸೈದ್ದಾಂತಿಕ ಟೀಕೆಗಳ ಕಾರಣದಿಂದಾಗಿ ಪ್ರಿಯಾಂಕ್ ಖರ್ಗೆ ಮತ್ತು ಮೀಡಿಯಾ ಪ್ರೆಸೆನ್ಸ್ ಬಗ್ಗೆ ಕಾಳಜಿವಹಿಸುವ ಕೃಷ್ಣ ಬೈರೇಗೌಡರು ಮಾತ್ರ ತಕ್ಕಮಟ್ಟಿಗೆ ಮಾಧ್ಯಮಗಳ ಕವರೇಜ್ ದಕ್ಕಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಇಡೀ ಸರ್ಕಾರದ ಪ್ರಚಾರ ಬಿಂಧು ಶಿವಕುಮಾರ್ ಮಾತ್ರ! ಹಾಗೆ ನೋಡಿದರೆ, ತಮ್ಮ ಅನುಭವ ಮತ್ತು ಹಿರಿತನ ಬಳಸಿಕೊಂಡು ಡಾ.ಜಿ. ಪರಮೇಶ್ವರರು ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಬರ ಪರಿಶೀಲನೆ, ಪರಿಹಾರಕ್ಕಾಗಿ ಕೇಂದ್ರದೊಂದಿಗೆ ಪತ್ರ ವ್ಯವಹಾರ, ಶಾಸಕರ ಜೊತೆ ಸಂಪರ್ಕ… ಹೀಗೆ ಪರಮೇಶ್ವರ್ ಕಾರ್ಯಶೀಲರಾಗಿದ್ದಾರೆ. ಆದರೆ, ಯಥಾ ಪ್ರಕಾರ ಮೀಡಿಯಾ ಮತ್ತು ಪ್ರಚಾರಗಳಿಂದ, ಹಾಗೂ ಆ ಮೂಲಕ ಎರಗಬಹುದಾದ ಟೀಕೆಗಳಿಂದ ದೂರವೇ ಉಳಿಯಬಯಸುವ ಅವರು ತಮ್ಮ ಕೆಲಸಗಳನ್ನು ಸುಪ್ತವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಸಿಎಂ ಪ್ರಚಾರ ವೈಖರಿಗೆ ಅವರು ಸ್ಪರ್ಧೆಯೊಡ್ಡುತ್ತಿಲ್ಲ. ಒಟ್ಟಿನಲ್ಲಿ ಡಿ ಕೆ ಶಿವಕುಮಾರರ ಪಿ ಆರ್ ಶೈಲಿಯ ರಾಜಕಾರಣ, ಬೇರೆಲ್ಲರನ್ನು ಗೌಣವಾಗಿಸಿರುವುದು ಸತ್ಯ. ಆ ಗೌಣತೆಯಲ್ಲಿ ಪ್ರಧಾನವಾಗಿ ಎದ್ದು ಕಾಣುವುದು ಲಿಂಗಾಯತ ನಾಯಕರ ಅನುಪಸ್ಥಿತಿ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಡಿ ಕೆ ಶಿವಕುಮಾರ್ ಅವರ ಭಾಷಣವನ್ನು ಉದ್ದೇಶಪೂರ್ವಕವಾಗಿ ಕತ್ತರಿಸಿ, ‘ಲಿಂಗಾಯತ ಮಠಗಳಿಗೆ ಸೇರಿದವರು ನನ್ನ ಸೇವೆ ಮಾಡಬೇಕು. ಆಗ ಮಾತ್ರ ನಿಮಗೆ ಶಾಂತಿ, ಮುಕ್ತಿ ಸಿಗಲಿದೆ’ ಎಂಬರ್ಥದ ಕ್ಲಿಪ್ಪಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಕೂಡಾ, ಈ ಸರ್ಕಾರದಲ್ಲಿ ಎದ್ದುಗಾಣುತ್ತಿರುವ ಲಿಂಗಾಯತರ ನಿರ್ಲಕ್ಷ್ಯವನ್ನು ವಿರೋಧಿಗಳು ಎನ್ಕ್ಯಾಶ್ ಮಾಡಿಕೊಳ್ಳುವ ಭಾಗ ಎನ್ನಲಾಗ್ತಿದೆ.
ಕಮಲದೊಳಗಿನ ವ್ಯಥೆ
ಇನ್ನು ಬಿಜೆಪಿಯಲ್ಲೂ ಲಿಂಗಾಯತರ ಪ್ರಭಾವ ಅತಂತ್ರಕ್ಕೆ ಸಿಲುಕಿದೆ. ಹಾಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಯಡಿಯೂರಪ್ಪನವರ ಮಗ ವಿಜಯೇಂದ್ರ ಇರುವುದೇನೊ ಸರಿ. ಆದರೆ ಲಿಂಗಾಯತ ಸಮುದಾಯ ಅವರನ್ನು ತಂದೆ ಯಡಿಯೂರಪ್ಪನಂತೆ ಪೂರ್ಣಪ್ರಮಾಣದ ಸಮುದಾಯ ನಾಯಕನನ್ನಾಗಿ ಇನ್ನೂ ಒಪ್ಪಿಕೊಂಡಿಲ್ಲ. ಅದೇ ಸಮುದಾಯದ ಯತ್ನಾಳ್ ಬಂಡಾಯವೆದ್ದಿರುವುದು ವಿಜಯೇಂದ್ರ ಪಾಲಿಗೆ ದೊಡ್ಡ ಅಡ್ಡಿ. ಅಲ್ಲದೇ, ಅಧ್ಯಕ್ಷ ಹುದ್ದೆಯಿಂದ ವಿಜಯೇಂದ್ರರನ್ನು ಪದಚ್ಯುತಿಗೊಳಿಸಲು ಪಕ್ಷದೊಳಗೆ ಆಗಿಂದಾಗ್ಗೆ ತಂತ್ರಗಾರಿಕೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ವೈರಲ್ ಆದ, ಸದಾನಂದ ಗೌಡರದ್ದು ಎನ್ನಲಾದ ಆಡಿಯೊ ತುಣುಕೊಂದು ಇದಕ್ಕೆ ಸಾಕ್ಷಿ. ‘ತಕ್ಷಣಕ್ಕೇ ಕಿತ್ತು ಹಾಕಿ ಲಿಂಗಾಯತರ ವಿರೋಧ ಕಟ್ಟಿಕೊಳ್ಳುವುದಕ್ಕಿಂತ, ಮೂರು ತಿಂಗಳ ನಂತರ ತೆಗೆದುಹಾಕಿ(ವಿಜಯೇಂದ್ರರನ್ನು)’ ಎಂದು ಹೈಕಮಾಂಡ್ ನಾಯಕರೊಬ್ಬರ ಜೊತೆ ಇಂಗ್ಲಿಷಿನಲ್ಲಿ ನಡೆಸಲಾದ ಸಂಭಾಷಣೆ ಅದು. ಅದು ಸುಳ್ಳೋ, ನಿಜವೋ ಬೇರೆ ಸಂಗತಿ. ಆದರೆ, ತಮಗಿಂತಲೂ ತುಂಬಾ ಚಿಕ್ಕ ವಯಸ್ಸಿನ, ಅನನುಭವಿ ವಿಜಯೇಂದ್ರಗೆ ಚುಕ್ಕಾಣಿ ನೀಡಿರುವುದು ಬಹಳಷ್ಟು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿರುವುದು ಸತ್ಯ. ಆ ಹಿರಿಯ ನಾಯಕರಲ್ಲಿ ಲಿಂಗಾಯತ ಸಮುದಾಯದವರೂ ಉಂಟು!

ಪಕ್ಷದೊಳಗೆ ಇಂತಹ ಪ್ರಯತ್ನಗಳು ನಡೆಯುತ್ತಿರೋದರಿಂದ, ತನ್ನ ಸ್ಥಾನ ಭದ್ರ ಮಾಡಿಕೊಳ್ಳುವುದಕ್ಕೆಂದೆ ವಿಜಯೇಂದ್ರ ಪಾದಯಾತ್ರೆ ಪೊಲಿಟಿಕ್ಸ್ ಮೊರೆ ಹೋಗಿದ್ದಾರೆ ಎನ್ನಲಾಗ್ತಿದೆ. ಅಲ್ಲಿಯೂ ಹಿರಿಯ ನಾಯಕರು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿಲ್ಲ. ಅಶೋಕ್ ಅರ್ಧಕ್ಕೇ ನಿರ್ಗಮಿಸಿದರೆ, ಇನ್ನುಳಿದ ಹಿರಿಯ ನಾಯಕರು ಸಮಾರೋಪದ ವೇದಿಕೆಗಷ್ಟೆ ಸೀಮಿತವಾದರು. ರೆಡ್ಡಿ, ರಾಮುಲು ಮೊದಲಾದ ಬಳ್ಳಾರಿ ರಾಜಕಾರಣಿಗಳನ್ನು ಬಿಟ್ಟರೆ ವಿಜಯೇಂದ್ರ ಏಕಾಂಗಿಯಂತೆ ಕಂಡುಬಂದರು. ಕಾಕತಾಳೀಯವೆಂದರೆ, ವಿಜಯೇಂದ್ರ ಪದಚ್ಯುತಿಯ ಕುರಿತು ನಡೆದ ಮಾತುಕತೆಯ ಆ ಆಡಿಯೊದಲ್ಲಿ ಯಾರ ಧ್ವನಿ ಎಂದು ಆರೋಪಿಸಲಾಗುತ್ತಿದೆಯೋ, ಆ ಸದಾನಂದ ಗೌಡರು ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರು!
ರಾಜಕಾರಣದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರು ನಡೆಯಬಹುದು. ಹಾಗಾಗಿ ಒಕ್ಕಲಿಗ ನಾಯಕರು ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಲಿಂಗಾಯತ ನಾಯಕತ್ವಗಳು ಸಂಪೂರ್ಣ ಮೂಲೆಗುಂಪಾಗಿದ್ದಾರೋ? ಇಲ್ಲವೋ? ಎನ್ನುವುದಕ್ಕಿಂತ, ಪ್ರಬಲ ಸಮುದಾಯವೊಂದರ ಇಂತಹ ಸಾಂದರ್ಭಿಕ ಸ್ತಬ್ಧತೆಯು ಮುಂಬರುವ ದಿನಗಳ ರಾಜಕಾರಣವನ್ನು ಕುತೂಹಲದಿಂದ ನೋಡುವಂತೆ ಮಾಡಿದೆ. ಅದೇನೆ ಇರಲಿ, ಒಂದಂತೂ ಸತ್ಯ. ಮದಗಜಗಳು ಕಾಳಗಕ್ಕಿಳಿದರೆ, ಮಣ್ಣುಪಾಲಾಗುವುದು ಅವುಗಳ ಪ್ರತಿಷ್ಠೆ ಮಾತ್ರವಲ್ಲ, ಅಕ್ಕಪಕ್ಕದ ಅಮಾಯಕ ತರುಲತೆಗಳು ಕೂಡಾ! ಅಂತಹ ಮದಗಜ ಕಾಳಗವನ್ನು ಇಷ್ಟುದಿನ ನ್ಯೂಟ್ರಲ್ ಮಾಡಿಟ್ಟಿದ್ದು ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ‘ಇನ್ಕ್ಲ್ಯೂಸಿವ್’ ರಾಜಕಾರಣ. ಕರ್ನಾಟಕದಲ್ಲಿ ಆ ಶಕೆ, ಈ ಅವಧಿಯ ಮಟ್ಟಿಗೆ ಮುಗಿದಂತೆ ತೋರುತ್ತೆ.
- ಮಾಚಯ್ಯ ಎಂ ಹಿಪ್ಪರಿಗಿ

ಹವ್ಯಾಸಿ ಬರವಣಿಗೆ ಮೂಲಕ ಪತ್ರಿಕೋದ್ಯಮ ಮತ್ತು ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯವರೆಗೆ ವಿಸ್ತರಿಸಿಕೊಂಡಿರುವ ಲೇಖಕರು ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಷಯಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಡುವಂತವರು. ಹಲವು ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳ ವೆಬ್ ಆವೃತ್ತಿಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದ್ದು, ತಮ್ಮ ಮೊನಚು ಬರವಣಿಗೆ ಶೈಲಿ ಹಾಗೂ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಓದುಗರ ಗಮನ ಸೆಳೆದಿದ್ದಾರೆ.
