ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ನಿರೂಪಿತವಾಗಿರುವ ಸೀತಾಪರಿತ್ಯಾಗದ ಈ ಪ್ರಸಂಗವು ಕೇವಲ ಪೌರಾಣಿಕ ಕಥಾನಕದ ಒಂದು ದಾರುಣ ಘಟನೆಯಾಗಿ ಉಳಿಯದೆ, ಹೆಣ್ಣಿನ ಅಸ್ತಿತ್ವ, ಚಾರಿತ್ರ್ಯ, ದೇಹ, ದಾಂಪತ್ಯ, ಸಾಮಾಜಿಕ ಅಪವಾದ ಮತ್ತು ಪುರುಷಪ್ರಧಾನ ಅಧಿಕಾರದ ಸ್ವರೂಪಗಳನ್ನು ಪ್ರಶ್ನಿಸುವ ವಿಶಾಲವಾದ ಸಾಮಾಜಿಕ ತಾತ್ವಿಕ ನೆಲೆಯನ್ನು ಒದಗಿಸುತ್ತದೆ. ಅಯೋಧ್ಯೆಯ ರಾಜನಾಗಿ ಪಟ್ಟಾಭಿಷಿಕ್ತನಾದ ಬಳಿಕ ಶ್ರೀರಾಮನು ಪ್ರಜಾರಂಜಕನಾಗಿ ರಾಜ್ಯಭಾರ ಮಾಡುತ್ತಿದ್ದ ಸಂದರ್ಭದಲ್ಲಿ ಸೀತೆ ಗರ್ಭಿಣಿಯಾಗುತ್ತಾಳೆ. ಗರ್ಭಿಣಿಯಾಗಿರುವಾಗ ಮುನಿಪತ್ನಿಯರ ಆಶ್ರಮಗಳಿಗೆ ತೆರಳಿ ಅವರನ್ನು ಕಾಣಬೇಕು, ದಾನಧರ್ಮ ಮಾಡಬೇಕು ಎಂಬ ಅವಳ ಹಂಬಲವನ್ನು ಕವಿ ಸಹಜ ಲಕ್ಷಣವಾಗಿ ನಿರೂಪಿಸುತ್ತಾನೆ. ಆದರೆ ಹೆಣ್ಣಿನ ಸಹಜವಾದ ಈ ಬಯಕೆಯೇ ಅವಳ ಬದುಕಿನ ಅತ್ಯಂತ ದಾರುಣ ತಿರುವಿಗೆ ಮುನ್ನುಡಿಯಾಗುತ್ತದೆ. ಸೀತೆಯ ಚಾರಿತ್ರ್ಯ ಕುರಿತು ಪ್ರಜೆಗಳಲ್ಲಿ ಹರಡಿದ ಅಪವಾದದ ಮಾತುಗಳು ರಾಮನ ಕಿವಿಗೆ ಬೀಳುತ್ತವೆ. ಸೀತೆಯ ಮೇಲಿನ ವೈಯಕ್ತಿಕ ನಂಬಿಕೆಗಿಂತ ರಾಜನಾಗಿ ತನ್ನ ಪ್ರತಿಷ್ಠೆ ಮತ್ತು ಲೋಕಾಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ನೀಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅವಳ ಆಶ್ರಮದರ್ಶನದ ಬಯಕೆಯನ್ನು ಈಡೇರಿಸುವ ನೆಪದಲ್ಲಿ ಲಕ್ಷ್ಮಣನೊಂದಿಗೆ ರಥದಲ್ಲಿ ಕಾಡಿಗೆ ಕಳುಹಿಸಲಾಗುತ್ತದೆ. ತನ್ನನ್ನು ಪತಿಯ ಆಜ್ಞೆಯಂತೆ ಮುನಿವನಕ್ಕೆ ಕಳುಹಿಸಲಾಗುತ್ತಿದೆ ಎಂಬ ನಂಬಿಕೆಯಲ್ಲಿ ಸೀತೆ ಪ್ರಯಾಣಿಸುತ್ತಾಳೆ. ಗಂಗೆಯನ್ನು ದಾಟಿ ದಟ್ಟವಾದ ಅರಣ್ಯವನ್ನು ತಲುಪಿದಾಗ ಮಾತ್ರ ಅವಳ ಮುಂದೆ ಕಠೋರವಾದ ಸತ್ಯ ಅನಾವರಣಗೊಳ್ಳುತ್ತದೆ. ರಾಮನ ಆಜ್ಞೆಯನ್ನು ನೆನೆದು ಲಕ್ಷ್ಮಣನು ಕಣ್ಣೀರು ಹಾಕುತ್ತಾನೆ. ಕಾರಣವೇನೆಂದು ಸೀತೆ ಕೇಳಿದಾಗ, ಲೋಕಾಪವಾದದ ಕಾರಣಕ್ಕಾಗಿ ರಾಮನು ಅವಳನ್ನು ಕಾಡಿನಲ್ಲಿ ಪರಿತ್ಯಜಿಸಲು ಆಜ್ಞಾಪಿಸಿದ್ದಾನೆ ಎಂಬ ಸತ್ಯವನ್ನು ಗದ್ಗದಿತ ಕಂಠದಿಂದ ಹೇಳುತ್ತಾನೆ.
ಈ ಪ್ರಸಂಗವೇ ಸೀತೆಯ ಆತ್ಮನಿಂದನೆಯ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಮುಖ್ಯವಾದ ನೆಲೆಯನ್ನು ನಿರ್ಮಿಸುತ್ತದೆ. “ಕರುಣಾಳು ರಾಘವನಲ್ಲಿ ತಪ್ಪಿಲ್ಲ, ಎನ್ನೊಳು ಅಪರಾಧಮುಂಟು” ಎಂಬ ಅವಳ ಮಾತು ಈ ಘಟನೆಯಿಂದ ಪ್ರತ್ಯೇಕವಾಗಿ ಅರ್ಥವಾಗುವುದಿಲ್ಲ. ಅವಳ ಮೇಲೆ ಯಾವುದೇ ನೇರ ಅಪರಾಧ ಸಾಬೀತಾಗದಿದ್ದರೂ, ಸಮಾಜದ ಅಪವಾದ ಅವಳ ಬದುಕಿನ ಮೇಲೆ ತೀರ್ಪಾಗಿ ಬೀಳುತ್ತದೆ. ಇನ್ನೂ ಮುಖ್ಯವಾಗಿ, ಆ ತೀರ್ಪನ್ನು ಸೀತೆ ಕ್ರಮೇಣ ತನ್ನೊಳಗೆ ಸ್ವೀಕರಿಸಿಕೊಳ್ಳುವ ಸ್ಥಿತಿಗೆ ಬರುತ್ತಾಳೆ. ಹೀಗಾಗಿ “ನನ್ನಲ್ಲೇ ಅಪರಾಧವಿದೆ” ಎಂಬ ಅವಳ ಮಾತು ವೈಯಕ್ತಿಕ ಆತ್ಮನಿಂದನೆಯಷ್ಟೇ ಅಲ್ಲ. ಸಮಾಜದ ನೈತಿಕ ತೀರ್ಪು ಹೇಗೆ ಹೆಣ್ಣಿನ ಅಂತರಂಗದ ಆತ್ಮತೀರ್ಪಾಗಿ ಪರಿವರ್ತಿತವಾಗುತ್ತದೆ ಎಂಬುದರ ಗಂಭೀರ ಸೂಚನೆಯಾಗಿದೆ.
ಪೌರಾಣಿಕ ಕಥಾಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸಿ ಓದಿದರೆ ಸೀತೆಯ ದುಃಖ, ರಾಘವನಿಂದ ದೂರವಾಗುವ ಅವಳ ಅಸಹಾಯಕತೆ ಮತ್ತು ಲಕ್ಷ್ಮಣನ ಕರುಣಾಭಾವ ಇಷ್ಟರಲ್ಲಿಯೇ ಅದರ ಅರ್ಥವ್ಯಾಪ್ತಿ ನಿಂತುಹೋಗುತ್ತದೆ. ಆದರೆ ವರ್ತಮಾನದ ಸಾಮಾಜಿಕ ವಾಸ್ತವದ ಎದುರು ನಿಲ್ಲಿಸಿ ಈ ಸಾಲುಗಳನ್ನು ಪುನರ್ವಾಚಿಸಿದಾಗ, ಇಲ್ಲಿ ಕೇಳಿಸಿಕೊಳ್ಳುವುದು ಕೇವಲ ಸೀತೆಯ ಕಂಠವಲ್ಲ. ಶತಮಾನಗಳಿಂದ ತನ್ನ ಮೇಲೆ ನಡೆದ ಅನ್ಯಾಯಕ್ಕೆ ತಾನೇ ಕಾರಣವೆಂದು ನಂಬುವಂತೆ ಮಾಡಲ್ಪಟ್ಟ ಅಸಂಖ್ಯಾತ ಹೆಣ್ಣುಮಕ್ಕಳ ಮೌನಸ್ವರವೂ ಹೌದು. ಈ ಕಾರಣದಿಂದಲೇ “ಕರುಣಾಳು ರಾಘವನಲ್ಲಿ ತಪ್ಪಿಲ್ಲ, ಎನ್ನೊಳು ಅಪರಾಧಮುಂಟು” ಎಂಬ ಸೀತೆಯ ಘೋಷಣೆ ಇಂದಿನ ಓದುಗರ ಮುಂದೆ ಅತ್ಯಂತ ತೀಕ್ಷ್ಣವಾದ ನೈತಿಕ ಪ್ರಶ್ನೆಯಾಗಿ ನಿಂತುಕೊಳ್ಳುತ್ತದೆ.
ಸೀತೆಯ ಈ ಮಾತಿನಲ್ಲಿರುವ ಮೂಲ ವೈರುಧ್ಯವನ್ನು ಮೊದಲು ಗುರುತಿಸಬೇಕು. ಅನ್ಯಾಯಕ್ಕೆ ಒಳಗಾದವಳು ತಾನೇ ತನ್ನನ್ನು ಅಪರಾಧಿಯೆಂದು ಘೋಷಿಸಿಕೊಳ್ಳುತ್ತಾಳೆ. ಅಧಿಕಾರದ ಸ್ಥಾನದಲ್ಲಿರುವ ಪುರುಷನು ಮಾತ್ರ ದೋಷಮುಕ್ತನಾಗುತ್ತಾನೆ. ಇದು ಒಂದು ಪೌರಾಣಿಕ ಸಂದರ್ಭದ ಮನೋವ್ಯಾಪಾರವೆಂದು ಮಾತ್ರ ಹೇಳಿ ಮುಗಿಸಲಾಗದು. ಇದೇ ಮನೋವ್ಯವಸ್ಥೆ ವರ್ತಮಾನದಲ್ಲಿಯೂ ಅನೇಕ ರೂಪಗಳಲ್ಲಿ ಜೀವಂತವಾಗಿದೆ. ಹೆಣ್ಣಿನ ಮೇಲೆ ಹಿಂಸೆ ನಡೆದಾಗ “ಅವಳು ಎಲ್ಲಿದ್ದಳು?”, “ಏನು ಧರಿಸಿದ್ದಳು?”, “ಯಾರೊಂದಿಗೆ ಹೋಗಿದ್ದಳು?”, “ಏಕೆ ವಿರೋಧಿಸಲಿಲ್ಲ?”, “ಅವಳ ನಡೆನುಡಿ ಹೇಗಿತ್ತು?” ಎಂಬ ಪ್ರಶ್ನೆಗಳು ಮೊದಲು ಎದ್ದರೆ, ಹಿಂಸೆಗೈದವನ ಹೊಣೆಗಾರಿಕೆ ನಂತರದ ಪ್ರಶ್ನೆಯಾಗುತ್ತದೆ. ಈ ಪ್ರಶ್ನೆಗಳ ಹಿಂದೆ ಕಾರ್ಯನಿರ್ವಹಿಸುವ ನೈತಿಕ ತರ್ಕ ಒಂದೇ, ಅನ್ಯಾಯಕ್ಕೆ ಒಳಗಾದ ಹೆಣ್ಣೇ ತನ್ನ ಅನ್ಯಾಯಕ್ಕೆ ಕಾರಣಳಾಗಿರಬೇಕು. ಸೀತೆಯ ಆತ್ಮನಿಂದನೆಯಲ್ಲಿರುವ ಪಿತೃಪ್ರಧಾನ ತರ್ಕದ ಸಮಕಾಲೀನ ಪ್ರತಿಧ್ವನಿ ಇದೇ.

“ಕಡುಪಾತಕಂ ಗೈದು ಪೆಣ್ಣಾಗಿ ಸಂಭವಿಸಿದ” ಎಂಬ ಭಾವನೆ ಅತ್ಯಂತ ಗಂಭೀರವಾದ ತಾತ್ವಿಕ ಕೇಂದ್ರ. ಹೆಣ್ಣಾಗಿ ಹುಟ್ಟುವುದನ್ನೇ ಹಿಂದಿನ ಪಾಪದ ಫಲವೆಂದು ಪರಿಗಣಿಸುವ ಮನೋಭಾವವು ಕೇವಲ ಧಾರ್ಮಿಕ ಕಲ್ಪನೆಯಲ್ಲ; ಅದು ಸಾಮಾಜಿಕ ಅಧಿಕಾರದ ಭಾಷೆಯೂ ಹೌದು. ಹೆಣ್ಣಿನ ಜನ್ಮವನ್ನು ಪಾಪಫಲವೆಂದು ನಿರೂಪಿಸಿದ ಕ್ಷಣದಿಂದಲೇ ಅವಳ ಅಸ್ತಿತ್ವಕ್ಕೆ ಒಂದು ಪೂರ್ವನಿರ್ಧರಿತ ಅಪರಾಧಬೋಧವನ್ನು ಅಂಟಿಸಲಾಗುತ್ತದೆ. ಅವಳು ಹುಟ್ಟುವ ಮೊದಲೇ ಅವಳ ಮೇಲೆ ನೈತಿಕ ತೀರ್ಪು ನೀಡಲ್ಪಡುತ್ತದೆ. ಅವಳು ತನ್ನ ಜೀವನವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವ ವ್ಯಕ್ತಿಯಾಗುವುದಕ್ಕಿಂತ, ಯಾರಾದರೂ ಒಬ್ಬರ ಮಗಳು, ಪತ್ನಿ, ತಾಯಿ ಅಥವಾ ಕುಟುಂಬದ ಗೌರವದ ಪ್ರತಿನಿಧಿಯಾಗಿಯೇ ಪರಿಗಣಿಸಲ್ಪಡುತ್ತಾಳೆ. ಹೀಗಾಗಿ ಸೀತೆಯ ಮಾತು ವ್ಯಕ್ತಿಗತ ಆತ್ಮನಿಂದನೆಯಂತೆ ಕಾಣಿಸಿಕೊಂಡರೂ ಅದರ ಆಳದಲ್ಲಿ ಹೆಣ್ಣಿನ ಅಸ್ತಿತ್ವವನ್ನೇ ಅನುಮಾನಕ್ಕೆ ಒಳಪಡಿಸುವ ಪಿತೃಪ್ರಧಾನ ಸಂಸ್ಕೃತಿಯ ದೀರ್ಘ ಇತಿಹಾಸವಿದೆ.
ವರ್ತಮಾನವನ್ನು ಎದುರುನಿಲ್ಲಿಸಿ ನೋಡಿದಾಗ ಈ ಪ್ರಶ್ನೆ ಇನ್ನಷ್ಟು ತೀವ್ರವಾಗುತ್ತದೆ. ಹೆಣ್ಣಾಗಿ ಹುಟ್ಟಿರುವುದೇ ಅಪರಾಧವಾದರೆ, ಆ ಅಪರಾಧದ ಕಾನೂನು ಯಾರದು? ಆ ನೈತಿಕತೆಯನ್ನು ರಚಿಸಿದವರು ಯಾರು? ಅದರ ಶಿಕ್ಷೆಯನ್ನು ಅನುಭವಿಸುವವರು ಮಾತ್ರ ಏಕೆ ಹೆಣ್ಣು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಪಿತೃಪ್ರಧಾನ ಸಮಾಜದ ಅಧಿಕಾರರಚನೆ ಸ್ಪಷ್ಟವಾಗುತ್ತದೆ. ಹೆಣ್ಣಿನ ದೇಹವನ್ನು ನಿಯಂತ್ರಿಸುವುದು, ಅವಳ ಲೈಂಗಿಕತೆಯನ್ನು ನಿಯಮಿಸುವುದು, ಅವಳ ಚಲನವಲನಕ್ಕೆ ಮಿತಿ ವಿಧಿಸುವುದು, ಅವಳ ಆಯ್ಕೆಗಳನ್ನು ಕುಟುಂಬದ ಗೌರವದ ಹೆಸರಿನಲ್ಲಿ ನಿರ್ಬಂಧಿಸುವುದು ಬೇರೆಬೇರೆ ಘಟನೆಗಳಲ್ಲ, ಹೆಣ್ಣಿನ ಸ್ವಾಯತ್ತತೆಯನ್ನು ನಿಯಂತ್ರಿಸುವ ಒಂದೇ ಸಾಮಾಜಿಕ ತರ್ಕದ ವಿಭಿನ್ನ ರೂಪಗಳು.
ಸೀತೆಯ “ಒಡಲಂ ಪೊರೆವುದು ಎನ್ನೊಳು ಅಪರಾಧಮುಂಟು” ಎಂಬ ಮಾತು ಈ ಹಿನ್ನೆಲೆಯಲ್ಲಿ ದೇಹದ ರಾಜಕಾರಣದ ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತದೆ. ಹೆಣ್ಣಿನ ದೇಹ ಅವಳ ಸ್ವಂತ ಅಸ್ತಿತ್ವದ ಅಂಗವಾಗಿರದೆ, ಕುಟುಂಬದ ಮಾನ, ಪತಿಯ ಪ್ರತಿಷ್ಠೆ, ಕುಲದ ಶುದ್ಧತೆ ಮತ್ತು ಸಮಾಜದ ನೈತಿಕತೆಯ ವಾಹಕವಾಗಿ ಪರಿಗಣಿಸಲ್ಪಟ್ಟಾಗ ಹೆಣ್ಣಿನ ದೇಹದ ಮೇಲೆ ಅವಳ ಹಕ್ಕು ಕುಗ್ಗುತ್ತದೆ. ಇಂದಿಗೂ ಹೆಣ್ಣಿನ ದೇಹದ ಕುರಿತು ತೀರ್ಪು ನೀಡುವ ಸಾಮಾಜಿಕ ದೃಷ್ಟಿ ಅನೇಕ ಸಂದರ್ಭಗಳಲ್ಲಿ ಅವಳ ವ್ಯಕ್ತಿತ್ವವನ್ನೇ ನಿರ್ಧರಿಸುತ್ತದೆ. ದೇಹದ ಮೇಲೆ ನಿಯಂತ್ರಣ ಸಾಧಿಸುವುದು ಅಂತಿಮವಾಗಿ ವ್ಯಕ್ತಿತ್ವದ ಮೇಲೆ ನಿಯಂತ್ರಣ ಸಾಧಿಸುವುದೇ ಆಗುತ್ತದೆ. ಸೀತೆಯ ದೇಹವನ್ನು ಅವಳ ಅಪರಾಧದ ಮೂಲವೆಂದು ಕಾಣುವ ಮನೋಭಾವವನ್ನು ಇಂದಿನ ಮಹಿಳಾ ಚಿಂತನೆಯ ಬೆಳಕಿನಲ್ಲಿ ಪ್ರಶ್ನಿಸುವುದು ಅತ್ಯಗತ್ಯ.
ಇಲ್ಲಿ ಮತ್ತೊಂದು ಸೂಕ್ಷ್ಮವಾದ ಸಂಗತಿಯಿದೆ. ಸೀತೆ ರಾಘವನನ್ನು “ಕರುಣಾಳು” ಎಂದು ಕರೆಯುತ್ತಾಳೆ. ಈ ಮಾತಿನಲ್ಲಿ ಪಿತೃಪ್ರಧಾನ ಸಂಬಂಧದ ಸ್ವರೂಪ ಅಡಗಿದೆ. ಪುರುಷನು ಕರುಣೆ ತೋರಿಸುವವನು; ಹೆಣ್ಣು ಕರುಣೆಯನ್ನು ಸ್ವೀಕರಿಸುವವಳು. ಪುರುಷನು ನಿರ್ಣಯಿಸುವವನು, ಹೆಣ್ಣು ನಿರ್ಣಯಕ್ಕೆ ಒಳಗಾಗುವವಳು. ಪುರುಷನು ನ್ಯಾಯದ ಮಾನದಂಡವನ್ನು ರೂಪಿಸುವವನು. ಹೆಣ್ಣು ಆ ಮಾನದಂಡದ ಮುಂದೆ ತನ್ನನ್ನು ಸಮರ್ಥಿಸಿಕೊಳ್ಳಬೇಕಾದವಳು. ಆದರೆ ಮಹಿಳಾ ತಾತ್ವಿಕ ದೃಷ್ಟಿಯಲ್ಲಿ ಹೆಣ್ಣಿಗೆ ಕರುಣೆಗಿಂತ ಮುಖ್ಯವಾದುದು ನ್ಯಾಯ, ಸಮಾನತೆ, ಸ್ವಾಯತ್ತತೆ ಮತ್ತು ಗೌರವ. ಕರುಣೆ ಅಧಿಕಾರದ ಸಂಬಂಧವನ್ನು ಉಳಿಸಬಹುದು. ಸಮಾನತೆ ಮಾತ್ರ ಅದನ್ನು ಪರಿವರ್ತಿಸುತ್ತದೆ.
ಈ ಕಾರಣದಿಂದಲೇ ರಾಘವನಲ್ಲಿ ತಪ್ಪಿಲ್ಲ ಎಂಬ ಸೀತೆಯ ಮಾತನ್ನು ನೇರವಾದ ಸತ್ಯವಾಕ್ಯವೆಂದು ಸ್ವೀಕರಿಸುವ ಬದಲು, ಅದನ್ನು ಪಿತೃಪ್ರಧಾನ ನೈತಿಕತೆಯ ಆಂತರಿಕ ಅಭಿವ್ಯಕ್ತಿಯಾಗಿ ಓದುವುದು ಹೆಚ್ಚು ಅರ್ಥಪೂರ್ಣ. ಸಮಾಜ ನಿರಂತರವಾಗಿ ಹೆಣ್ಣಿಗೆ, ನಿನ್ನಿಂದಲೇ ಸಮಸ್ಯೆ ಉಂಟಾಯಿತು ಎಂದು ಹೇಳುತ್ತಾ ಬಂದರೆ, ಒಂದು ಹಂತದಲ್ಲಿ ಹೆಣ್ಣು ತನ್ನನ್ನೇ ಅದೇ ದೃಷ್ಟಿಯಿಂದ ನೋಡುವ ಸ್ಥಿತಿಗೆ ಬರುತ್ತಾಳೆ. ಹೊರಗಿನ ಅಧಿಕಾರವು ಒಳಗಿನ ಆತ್ಮತೀರ್ಪಾಗಿ ಪರಿವರ್ತನೆಯಾಗುತ್ತದೆ. ಆಗ ಅವಳನ್ನು ನಿಯಂತ್ರಿಸಲು ಹೊರಗಿನಿಂದ ಬಲಪ್ರಯೋಗ ಮಾಡುವ ಅಗತ್ಯವೇ ಇರುವುದಿಲ್ಲ. ಅವಳ ಮನಸ್ಸಿನೊಳಗೇ ಒಂದು ಕಾವಲುಗಾರನನ್ನು ಸಮಾಜ ನಿರ್ಮಿಸಿರುತ್ತದೆ. ಸೀತೆಯ ಆತ್ಮನಿಂದನೆ ಈ ಮನೋವೈಜ್ಞಾನಿಕ ಅಧಿಕಾರದ ಅತ್ಯಂತ ಪರಿಣಾಮಕಾರಿ ಸಾಹಿತ್ಯಿಕ ರೂಪಕವಾಗಿದೆ.
ಸೀತೆಯ ಮಾತು ಸಂಪೂರ್ಣ ಆತ್ಮವಿಲೀನದಲ್ಲಿ ಅಂತ್ಯಗೊಳ್ಳುವುದಿಲ್ಲ. ‘ಸಾಕು, ಇಲ್ಲಿರಲ್ ಬೇಡ, ನೀನು ನಡೆ ಪೋಗು’.. ಎನ್ನುವ ಕ್ಷಣದಲ್ಲಿ ಅವಳ ಧ್ವನಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸುತ್ತದೆ. ಇಲ್ಲಿಯವರೆಗೆ ತನ್ನನ್ನೇ ಅಪರಾಧಿಯೆಂದು ಕಂಡಿದ್ದ ಸೀತೆ, ಕನಿಷ್ಠ ತನ್ನ ಬದುಕಿನ ಸಂಬಂಧದ ಗಡಿಯನ್ನು ತಾನೇ ನಿರ್ಧರಿಸುವ ಸ್ಥಿತಿಗೆ ಬರುತ್ತಾಳೆ. ‘ಸಾಕು..’ ಎನ್ನುವುದು ಕೇವಲ ದುಃಖದ ಉದ್ಗಾರವಲ್ಲ. ಅದು ಸಹನೆಯ ಮಿತಿಯನ್ನು ಗುರುತಿಸುವ ಭಾಷೆ. ‘ನಡೆ ಪೋಗು”’ಎನ್ನುವುದು ನಿರ್ಣಯದ ಭಾಷೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ವಿಧಿಸಲ್ಪಟ್ಟ ಪಾತ್ರವು ನಿರಂತರವಾಗಿ ಸಹಿಸುವುದು, ಕ್ಷಮಿಸುವುದು, ಕಾಯುವುದು ಮತ್ತು ಪುರುಷನ ನಿರ್ಧಾರವನ್ನು ಅಂಗೀಕರಿಸುವುದಾಗಿದ್ದರೆ, ಇಲ್ಲಿ ಸೀತೆ ಸಂಬಂಧದ ಅಂತ್ಯವನ್ನು ಉಚ್ಚರಿಸುವ ನೈತಿಕ ಅಧಿಕಾರವನ್ನು ತನ್ನದಾಗಿಸಿಕೊಳ್ಳುತ್ತಾಳೆ.

ಈ ಅಂಶವೇ ಇಂದಿನ ಓದಿನಲ್ಲಿ ವಿಶೇಷ ಮಹತ್ವ ಪಡೆಯುತ್ತದೆ. ಹೆಣ್ಣಿನ ಮುಕ್ತಿಯನ್ನು ಕೇವಲ ಪುರುಷನ ದಯೆ ಅಥವಾ ಉದಾರತೆಯಲ್ಲಿ ಹುಡುಕಲಾಗದು. ಅವಳ ಮುಕ್ತಿ ಅವಳದೇ ನಿರ್ಣಯಾಧಿಕಾರದಲ್ಲಿ ನೆಲೆಗೊಂಡಿದೆ. ಅವಳ ಬದುಕಿನ ಕುರಿತು ಅಂತಿಮ ಮಾತು ಹೇಳುವ ಹಕ್ಕು ಅವಳಿಗೇ ಇರಬೇಕು. ಸಂಬಂಧದಲ್ಲಿರುವುದು ಅಥವಾ ಸಂಬಂಧದಿಂದ ಹೊರಬರುವುದು, ಒಪ್ಪಿಕೊಳ್ಳುವುದು ಅಥವಾ ನಿರಾಕರಿಸುವುದು, ತನ್ನ ದೇಹದ ಕುರಿತು ನಿರ್ಧರಿಸುವುದು, ತನ್ನ ಭವಿಷ್ಯವನ್ನು ಆಯ್ಕೆಮಾಡುವುದು, ಇವೆಲ್ಲವೂ ಹೆಣ್ಣಿನ ವ್ಯಕ್ತಿತ್ವದ ಮೂಲಭೂತ ಸ್ವಾಯತ್ತತೆಯ ಭಾಗಗಳು. ಈ ದೃಷ್ಟಿಯಿಂದ ಸೀತೆಯ ‘ಸಾಕು..’ ವರ್ತಮಾನದ ಮಹಿಳಾ ಸ್ವಾಯತ್ತತೆಯ ಪ್ರಶ್ನೆಯೊಂದಿಗೆ ನೇರವಾಗಿ ಸಂವಾದಿಸುತ್ತದೆ.
ಸೀತೆಯ ಕಣ್ಣೀರು ಈ ನಿರ್ಣಯವನ್ನು ಸರಳ ವಿಜಯಗಾಥೆಯನ್ನಾಗಿ ಮಾಡುವುದಿಲ್ಲ. ‘ಕಂಬನಿಗಳಂ ಮಿಡಿದು ಆರ್ತೆಯಾಗಿರಲ್..’ ಎಂಬ ಚಿತ್ರಣವು ಸ್ವಾತಂತ್ರ್ಯ ಮತ್ತು ನೋವು ಪರಸ್ಪರ ವಿರೋಧಿಗಳಲ್ಲ ಎಂಬ ಸತ್ಯವನ್ನು ಸೂಚಿಸುತ್ತದೆ. ಒಂದು ಸಂಬಂಧದಿಂದ ಹೊರಬರುವ ನಿರ್ಧಾರ ತೆಗೆದುಕೊಳ್ಳುವ ಹೆಣ್ಣಿಗೆ ನೋವಾಗಬಹುದು. ತನ್ನನ್ನು ತಾನು ರಕ್ಷಿಸಿಕೊಳ್ಳುವ ನಿರ್ಧಾರದಲ್ಲಿಯೂ ಕಣ್ಣೀರು ಇರಬಹುದು. ಕಣ್ಣೀರು ದುರ್ಬಲತೆಯ ಪ್ರಮಾಣವಲ್ಲ. ತನ್ನ ಬದುಕಿನ ಮೇಲೆ ಹಕ್ಕು ಸಾಧಿಸುವ ವ್ಯಕ್ತಿಯ ಮನಸ್ಸಿನ ಸಂಕೀರ್ಣತೆಯ ಅಭಿವ್ಯಕ್ತಿ ಅದು. ಸೀತೆಯ ಕಣ್ಣೀರನ್ನು ಕೇವಲ ದೀನತೆಯ ಸಂಕೇತವಾಗಿ ಓದುವುದು ಅವಳ ಅನುಭವದ ಆಳವನ್ನು ಕುಗ್ಗಿಸುವುದು.
ವರ್ತಮಾನದಲ್ಲಿ ಮಹಿಳೆಯರು ಎದುರಿಸುವ ಅನೇಕ ಸಂಕಟಗಳಲ್ಲಿಯೂ ಇದೇ ವೈರುಧ್ಯ ಕಾಣುತ್ತದೆ. ಸ್ವತಂತ್ರವಾಗಿ ಬದುಕಲು ಬಯಸಿದರೆ ಅವಳನ್ನು ಸ್ವಾರ್ಥಿ ಎಂದು ಕರೆಯಲಾಗುತ್ತದೆ. ಮೌನವಾಗಿದ್ದರೆ ದುರ್ಬಲಳೆಂದು ಕರೆಯಲಾಗುತ್ತದೆ. ಪ್ರತಿಭಟಿಸಿದರೆ ಅತಿರೇಕಿ ಎಂದು ಕರೆಯಲಾಗುತ್ತದೆ. ಪ್ರಶ್ನಿಸಿದರೆ ಸಂಸ್ಕಾರಹೀನಳೆಂದು ಕರೆಯಲಾಗುತ್ತದೆ. ಅಂದರೆ ಹೆಣ್ಣಿಗೆ ಸಮಾಜ ರೂಪಿಸಿರುವ ಬಹುತೇಕ ಪಾತ್ರಗಳಲ್ಲಿ ಅವಳ ಸ್ವಾಯತ್ತತೆಗೆ ಸಂಪೂರ್ಣ ಸ್ಥಳವಿಲ್ಲ. ಸೀತೆಯ ಪುರಾತನ ಕಂಬನಿಯೂ ಇಂದಿನ ಮಹಿಳೆಯ ಆತ್ಮಸಂಘರ್ಷವೂ ಈ ಕಾರಣದಿಂದ ಒಂದೇ ದೀರ್ಘ ಸಾಮಾಜಿಕ ಅನುಭವದ ಎರಡು ಕಾಲಘಟ್ಟಗಳಾಗಿ ಕಾಣಿಸಿಕೊಳ್ಳುತ್ತವೆ.
ಕೊನೆಯಲ್ಲಿ ಲಕ್ಷ್ಮಣನು ‘ಆ ವಿಪಿನದ ಅಭಿಮಾನಿಗಳ್ಗೆ..’ ಮಾತನಾಡುವುದು ಅತ್ಯಂತ ಸಂಕೇತಾತ್ಮಕ. ಮಾನವ ಸಮಾಜದ ನೈತಿಕ ವ್ಯವಸ್ಥೆ ಸೀತೆಗೆ ಆಶ್ರಯ ನೀಡದ ಸಂದರ್ಭದಲ್ಲಿ ಕಾಡು ಅವಳ ಸಾಕ್ಷಿಯಾಗುತ್ತದೆ. ಇದು ಪ್ರಕೃತಿಯ ರೊಮ್ಯಾಂಟಿಕ್ ಚಿತ್ರಣಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಂದಿದೆ. ನಾಗರಿಕತೆ ಎಂದು ಕರೆದುಕೊಳ್ಳುವ ಮಾನವ ವ್ಯವಸ್ಥೆಯೇ ಅನ್ಯಾಯವನ್ನು ನ್ಯಾಯವೆಂದು ಘೋಷಿಸಿದಾಗ, ವಿಪಿನ ಒಂದು ಪರ್ಯಾಯ ನೈತಿಕ ಲೋಕದ ರೂಪಕವಾಗುತ್ತದೆ. ಕಾಡು ಇಲ್ಲಿ ಹೊರಹಾಕಲ್ಪಟ್ಟ ಹೆಣ್ಣಿಗೆ ಸ್ಥಳ ನೀಡುವ ಅಂಚಿನ ಪ್ರದೇಶ. ಸಮಾಜದಿಂದ ಹೊರದೂಡಲ್ಪಟ್ಟವಳಿಗೆ ಪ್ರಕೃತಿ ಸಾಕ್ಷಿಯಾಗುತ್ತದೆ ಎಂಬ ಕಲ್ಪನೆ, ಪಿತೃಪ್ರಧಾನ ಸಾಮಾಜಿಕ ನಿಯಮಗಳ ಹೊರಗೆ ಮತ್ತೊಂದು ಬದುಕಿನ ಸಾಧ್ಯತೆಯನ್ನು ಸೂಚಿಸುತ್ತದೆ.
ಇಂದಿನ ಸಂದರ್ಭದಲ್ಲಿ ಈ ಸನ್ನಿವೇಶವನ್ನು ಓದುವಾಗ, ಸೀತೆಯ ಪ್ರಶ್ನೆ ಕೇವಲ ಸೀತೆಯದ್ದಾಗಿರುವುದಿಲ್ಲ. ಅದು ತನ್ನ ಮೇಲೆ ನಡೆದ ಅನ್ಯಾಯಕ್ಕೆ ತಾನೇ ಕಾರಣವೆಂದು ನಂಬುವಂತೆ ಮಾಡಲ್ಪಟ್ಟ ಪ್ರತಿಯೊಬ್ಬ ಹೆಣ್ಣಿನ ಪ್ರಶ್ನೆಯಾಗುತ್ತದೆ. ಅವಳ ದೇಹವನ್ನು ಅವಳ ವಿರುದ್ಧ ಸಾಕ್ಷಿಯನ್ನಾಗಿ ಮಾಡಿದಾಗ, ಅವಳ ಧ್ವನಿಯನ್ನು ಅವಳ ವ್ಯಕ್ತಿತ್ವದ ವಿರುದ್ಧ ಬಳಸಿದಾಗ, ಅವಳ ಮೌನವನ್ನು ಒಪ್ಪಿಗೆಯೆಂದು ವ್ಯಾಖ್ಯಾನಿಸಿದಾಗ, ಅವಳ ಪ್ರತಿರೋಧವನ್ನು ಅಪರಾಧವೆಂದು ಘೋಷಿಸಿದಾಗ, ಸೀತೆಯ ಕಂಬನಿ ಮತ್ತೆ ವರ್ತಮಾನದೊಳಗೆ ಕೇಳಿಸುತ್ತದೆ.
ಈ ಪದ್ಯಭಾಗವನ್ನು ಹೆಣ್ಣಿನ ದೃಷ್ಟಿಯಿಂದ ಪುನರ್ವಾಚಿಸುವಾಗ ಸೀತೆಯನ್ನು ಕೇವಲ ಕರುಣೆಗೆ ಅರ್ಹಳಾದ ಪತಿವ್ರತೆಯಾಗಿ ನೋಡುವ ದೃಷ್ಟಿಯಿಂದ ಹೊರಬರಬೇಕಾಗುತ್ತದೆ. ಅವಳು ತನ್ನ ಕಾಲದ ನೈತಿಕ ವ್ಯವಸ್ಥೆಯೊಳಗೆ ಸಿಲುಕಿಕೊಂಡಿದ್ದರೂ, ಅವಳ ಮಾತುಗಳು ಆ ವ್ಯವಸ್ಥೆಯ ಆಂತರಿಕ ವೈರುಧ್ಯಗಳನ್ನು ಬಯಲಿಗೆಳೆಯುತ್ತವೆ. ಹೆಣ್ಣಾಗಿ ಹುಟ್ಟಿದ್ದೇ ಅಪರಾಧ ಎನ್ನುವ ಅವಳ ಆತ್ಮನಿಂದನೆ ಪಿತೃಪ್ರಧಾನ ಸಮಾಜದ ಆರೋಪಪತ್ರವಾಗಿದ್ದರೆ, ‘ಸಾಕು, ನೀನು ನಡೆ ಪೋಗು’ ಎನ್ನುವ ಅವಳ ಮಾತು ಅದೇ ಆರೋಪಪತ್ರದ ವಿರುದ್ಧ ಮೂಡುವ ಮೊದಲ ಸ್ವಯಂನಿರ್ಣಯದ ಸಹಿಯಾಗಿದೆ.
ಸೀತೆಯ ಕಥೆಯನ್ನು ಇಂದು ಎದುರು ನಿಲ್ಲಿಸಿ, ಸೀತೆ ಏಕೆ ಇಷ್ಟು ಸಹಿಸಿದಳು? ಅದಕ್ಕಿಂತ ಮುಖ್ಯವಾದ ಪ್ರಶ್ನೆ, ಒಬ್ಬ ಹೆಣ್ಣಿಗೆ ಇಷ್ಟು ಸಹಿಸಬೇಕಾದ ಪರಿಸ್ಥಿತಿಯನ್ನು ಯಾವ ಸಾಮಾಜಿಕ ನೈತಿಕತೆ ನಿರ್ಮಿಸಿತು?ಎಂಬುದು. ಹಾಗೆಯೇ , ಸೀತೆಯ ತಪ್ಪೇನು? ಎಂಬ ಪ್ರಶ್ನೆಯ ಬದಲು ಹೆಣ್ಣಿನ ಅಸ್ತಿತ್ವವನ್ನೇ ತಪ್ಪೆಂದು ನಿರ್ಧರಿಸುವ ಅಧಿಕಾರ ಯಾರದು? ಎಂದು ಕೇಳಬೇಕಾಗುತ್ತದೆ.
ಈ ಪ್ರಶ್ನೆಗಳಲ್ಲಿಯೇ ಈ ಪದ್ಯಭಾಗದ ಆಧುನಿಕತೆ ನೆಲೆಗೊಂಡಿದೆ. ಸೀತೆಯ ದುರಂತವು ಕೇವಲ ಭೂತಕಾಲದ ದುರಂತವಲ್ಲ, ಹೆಣ್ಣಿನ ಅಸ್ತಿತ್ವವನ್ನು ಇನ್ನೂ ಸಂಬಂಧ, ಕುಟುಂಬ, ಗೌರವ ಮತ್ತು ಪುರುಷನ ನಿರ್ಣಯಗಳ ಮೂಲಕ ಅಳೆಯುವ ಪ್ರತಿಯೊಂದು ವರ್ತಮಾನದ ಕ್ಷಣದಲ್ಲೂ ಅದು ಹೊಸ ರೂಪದಲ್ಲಿ ಪುನರಾವರ್ತನೆಯಾಗುತ್ತದೆ. ಆದ್ದರಿಂದ ಸೀತೆಯ ‘ಸಾಕು’ ಎಂಬ ಒಂದು ಪದವು ಇಂದಿನ ಹೆಣ್ಣಿನ ಸ್ವಾಯತ್ತತೆಯ ಘೋಷಣೆಯಾಗಿ ಕೇಳಿಸಿಕೊಳ್ಳುತ್ತದೆ. ಅವಳ ಕಣ್ಣೀರು ಕೇವಲ ಸೋಲಿನ ಸಂಕೇತವಲ್ಲ, ಅದು ನ್ಯಾಯದ ಬೇಡಿಕೆಯ ಸಾಕ್ಷಿ. ಅವಳ ಆತ್ಮನಿಂದನೆ ಅವಳ ಅಪರಾಧದ ಸಾಬೀತಲ್ಲ. ಪಿತೃಪ್ರಧಾನ ವ್ಯವಸ್ಥೆ ಹೆಣ್ಣಿನ ಮನಸ್ಸಿನೊಳಗೆ ಹೇಗೆ ನೆಲೆಸಿದೆ ಎಂಬುದರ ಸಾಕ್ಷಿ. ಮತ್ತು ಅವಳ ಹೆಣ್ಣತ್ವ ಅಪರಾಧವಲ್ಲ, ಅಸ್ತಿತ್ವದ ಸ್ವಾಭಾವಿಕ ಹಕ್ಕು.

ಲೇಖಕರು ಬೋಧನೆ, ಸಂಶೋಧನೆ, ಶಾಸನಗಳ ಅಧ್ಯಯನ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭಾವಂತರು. ಮಹಿಳಾ ಸಾಹಿತ್ಯ, ಪರಂಪರೆ, ಸಾಮಾಜಿಕ ಚೌಕಟ್ಟು ಮತ್ತು ಸ್ತ್ರೀ ಅಸ್ತಿತ್ವದ ಪ್ರಶ್ನೆಗಳ ಕುರಿತ ಅಧ್ಯಯನ ಇವರ ಆಸಕ್ತಿ. ವಿಶ್ವಮಾನವ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದಾರೆ. ‘ಕಂಬಾಲ್ಪಲ್ಲಿ ಕಿಚ್ಚು’, ‘ಕ್ರಾಂತೀಯ ರೆಕ್ಕೆ ಬಿರಿದಾಗ’, ‘ಸಂಯುಕ್ತ ನಿಧಿ’, ‘ಕದಳಿ ಕಸ್ತೂರಿ’, ‘ಸಂಪ್ರದಾಯ ಮತ್ತು ವಿಮೋಚನೆ’, ‘ಸರಸ ಸಾಹಿತ್ಯ ವರದೇವತೆ’, ‘ಬೀದಿ ಬದಿ ವ್ಯಾಪಾರ ಕ್ಷೇತ್ರದಲ್ಲಿ ಮಹಿಳೆ’ ಮೊದಲದವು ಇವರ ಪ್ರಕಟಿತ ಕೃತಿಗಳು.
