ಸದನದ ಎರಡು ಸ್ವಾರಸ್ಯಕರ ಘಟನೆಗಳ ಸುತ್ತ….

ಕಸ್ತೂರಿ ರಂಗನ್‌ ವರದಿ ಮತ್ತು ಬರ ಪರಿಸ್ಥಿತಿಯ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಅಧಿವೇಶನದಲ್ಲಿ ನಡೆದ ಎರಡು ಸ್ವಾರಸ್ಯಕರ ಘಟನೆಗಳು ತಮ್ಮ ತಮಾಷೆಯ ಗಡಿಯಾಚೆಗೂ ಕುತೂಹಲಕಾರಿ ಎನಿಸುತ್ತವೆ. ಮೊದಲನೆಯದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಮತ್ತು ಬಿಜೆಪಿಯ ಸಿ ಟಿ ರವಿ ಅವರ ನಡುವೆ ನಡೆದಂತದ್ದು. ಇನ್ನೊಂದು, ಕಾಂಗ್ರೆಸ್‌ನೊಳಗಿನ ಅಧಿಕಾರ ಬದಲಾವಣೆಯ ಕುರಿತು ವಿಪಕ್ಷ ನಾಯಕ ಅಶೋಕ್‌ ಹೇಳಿದ ‘ಅಂತೆಕಂತೆ’ ಕಥೆ!

ಪರಿಷತ್‌ ಚರ್ಚೆಯಲ್ಲಿ ಕಸ್ತೂರಿ ರಂಗನ್‌ ವರದಿಯ ಬಗ್ಗೆ ವಿವರಿಸುತ್ತಿದ್ದ ಮುಖ್ಯಮಂತ್ರಿಗಳು ಇದ್ದಕ್ಕಿದ್ದಂತೆ ಕೃಷಿಯಲ್ಲಿ ಆಧುನೀಕರಣದ ಬಗ್ಗೆ ಹೊರಳಿಕೊಂಡರು. ಅಲ್ಲಿ ಡ್ರೋನ್‌ಗಳನ್ನು ಬಳಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದರು. ಡ್ರೋನ್‌ ಹೆಸರು ಎತ್ತುತ್ತಿದ್ದಂತೆಯೇ ಅದ್ಯಾಕೊ ಮುಖ್ಯಮಂತ್ರಿಗಳಿಗೆ ರಾಜಕಾರಣದ ನೆನಪಾಯ್ತು. ಕೂಡಲೇ ಸಿ.ಟಿ. ರವಿಯವರ ಕಾಲೆಳೆಯುತ್ತಾ, “ಡ್ರೋನ್‌ ಬಳಸಿ ಸಿ ಟಿ ರವಿಯನ್ನು ನಮ್ಮತ್ತ ಎತ್ತಾಕಿಕೊಳ್ಳಲು ನೋಡುತ್ತಿದ್ದೇನೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಅಂದರು. ಸದನದ ಚರ್ಚೆಗಳಲ್ಲಿ ಇಂಥಾ ಹಾಸ್ಯ ಪ್ರವೃತ್ತಿ ಹೊಸದೇನೂ ಅಲ್ಲ. ದಿವಂಗತ ಜೆ.ಎಚ್. ಪಟೇಲರು ಇದ್ದ ಕಾಲದಲ್ಲಿ ಸದನ ಬಿಸಿಯೇರುತ್ತಿದ್ದಕ್ಕಿಂತ ನಗೆಗಡಲಲ್ಲಿ ತೇಲಾಡುತ್ತಿದ್ದುದೇ ಹೆಚ್ಚು. ಸ್ವತಃ ಪಟೇಲರೆ ಸದನದಲ್ಲಿ ತನ್ನ ಹಾಸ್ಯಪ್ರವೃತ್ತಿಯ ಬಗ್ಗೆ ‘ಹಾಸ್ಯವೇ ನನ್ನ ಉಸಿರು’ ಎಂದು ಭಾಷಣ ಮಾಡಿದ್ದುಂಟು.

ಆ ನಿಟ್ಟಿಗಷ್ಟೇ ಆತುಕೊಂಡು ನೋಡುವುದಾದರೆ ಮುಖ್ಯಮಂತ್ರಿಗಳ ಡ್ರೋನ್‌ ಹೇಳಿಕೆ ಕೂಡಾ ಒಂದು ಸಾಂದರ್ಭಿಕ ಚಟಾಕಿ ಎಂದುಕೊಳ್ಳೋಣ. ಆದರೆ ಅದಕ್ಕೆ ಪ್ರತಿಯಾಗಿ ಛಲವಾದಿ ನಾರಾಯಣಸ್ವಾಮಿಯವರು ‘ಸಿ ಟಿ ರವಿಯವರನ್ನೇ ಯಾಕೆ ಎತ್ತಿಕೊಳ್ತೀರಿ?” ಎಂದು ಕೇಳಿದ್ದಕ್ಕೆ (ನಮ್ಮನ್ನೂ ಎತ್ತಿಕೊಳ್ಳಿ ಎಂದು ಗೋಗರೆಯಲಿಲ್ಲವಷ್ಟೆ) ಸಿಎಂ ಕೊಟ್ಟ ಉತ್ತರವಿದೆಯಲ್ಲ ಅದು ಕುತೂಹಲಕಾರಿಯಾಗಿದೆ. “ಅವರು ಸಿಂಹಸ್ವಪ್ನ, ಘರ್ಜಿಸುತ್ತಾ ಮಾತನಾಡ್ತಾರೆ, ಅದಕ್ಕೇ ಇತ್ತ ಕಡೆ ಎತ್ತಾಕಿಕೊಳ್ಳಬೇಕು ಅಂದ್ಕೊಡಿದೀನಿ” ಎಂದು ಮತ್ತೊಂದು ಚಟಾಕಿ ಹಾರಿಸಿದರು. ಸಿ.ಟಿ. ರವಿಯವರ ಸಿಂಹಸ್ವಪ್ನ, ಘರ್ಜನೆಗಳೆಲ್ಲ ಯಾವುದಕ್ಕೆ ಸೀಮಿತಗೊಂಡವು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಬಾಬಾ ಬುಡನ್‌ಗಿರಿ ವಿವಾದದವನ್ನು ಉಸಿರಾಡುತ್ತಾ ಪ್ರವರ್ಧಮಾನಕ್ಕೆ ಬಂದ ರವಿಯವರಿಗೆ ಕೋಮುದ್ವೇಷವು ಅನಿವಾರ್ಯ ಸರಕು. ಅದಿಲ್ಲದೆ ಹೋದರೆ ಅವರ ರಾಜಕೀಯ ಇರುವಿಕೆಯೇ ಕುಸಿದುಬೀಳುತ್ತೆ. ಇದು ಅವರಿಗೂ ಗೊತ್ತು, ಜನರಿಗೂ ಗೊತ್ತು. ಡಿ.ಕೆ. ಶಿವಕುಮಾರರಿಗೂ ಗೊತ್ತು.

ಅಂತವರನ್ನು ಎತ್ತಾಕಿಕೊಂಡು ಬಂದು, ಜಾತ್ಯತೀತ ತತ್ವದ ನೆಲೆಗಟ್ಟಿನ ಕಾಂಗ್ರೆಸ್‌ ಪಕ್ಷ ಕಟ್ಟುವೆ ಎನ್ನುವ ಶಿವಕುಮಾರರ ಮಾತು ತಮಾಷೆಯದ್ದಾದರೂ, ತಳ್ಳಿಹಾಕುವಂತದ್ದಲ್ಲ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಡಿ ಕೆ ಶಿವಕುಮಾರ್ ಅವರ ರಾಜಕೀಯ ವೈಖರಿ ನೋಡಿದರೆ, ಅವರು ಮೋದಿ-ಶಾ ಶೈಲಿಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲವರ್ಧನೆಗೊಳಿಸಬೇಕು ಎಂದು ಹೊರಟಂತಿದೆ. ಆ ಶೈಲಿಗಳ ಪೈಕಿ ಆಪರೇಷನ್‌ ಕಮಲವೂ ಒಂದು. ಸಿದ್ದಾಂತದ ಯಾವ ಹಂಗೂ ಇಲ್ಲದೆ, ಅಧಿಕಾರ ಗಿಟ್ಟಿಸಿಕೊಳ್ಳುವುದು ಮತ್ತು ಉಳಿಸಿಕೊಳ್ಳುವುದಷ್ಟೇ ಆಪರೇಷನ್‌ ತಂತ್ರಗಾರಿಕೆಯ ಅಜೆಂಡಾ. ಈಗ ಅದೇ ತಂತ್ರವನ್ನು ಕಾಂಗ್ರೆಸಿನ ಡಿ.ಕೆ. ಶಿವಕುಮಾರರೂ ಬಳಸುವುದಾದರೆ ಅತ್ತ ಕಡೆಯಿಂದ ಕಾಲುಜಾರಿ ಬರಲು ಸಿ.ಟಿ ರವಿ ಮಾತ್ರ ಅಲ್ಲ, ಅನಂತ್‌ ಕುಮಾರ್ ಹೆಗಡೆ, ಯತ್ನಾಳ್, ಪ್ರತಾಪ್‌ ಸಿಂಹ ಎಂಬಿತ್ಯಾದಿ ಸಿಂಹಸ್ವಪ್ನ(?)ಗಳೆಲ್ಲ ಲಭ್ಯವಿದ್ದಾರೆ. ಯಾಕೆಂದರೆ ಅವರೆಲ್ಲ ಅಲ್ಲೀಗ ಮೂಲೆಗುಂಪಿಗೆ ತುತ್ತಾಗಿರುವ ನಾಯಕರು. ಶಿವಕುಮಾರ್‍‌ ಮನಸ್ಸು ಮಾಡಿದರೆ, ಅವರನ್ನೆಲ್ಲ ಎತ್ತಿಕೊಳ್ಳಲು ಡ್ರೋನ್‌ ಕೂಡಾ ಬೇಕಾಗಿಲ್ಲ. ಒಂದು ಕಣ್ಸನ್ನೆ ಸಾಕು!

ಅಂದಹಾಗೆ, ಡಿ ಕೆ ಶಿವಕುಮಾರ್‍‌ ಈ ರೀತಿ ಪಕ್ಷ ಕಟ್ಟಲು ಹೊರಟರೆ ಅಚ್ಚರಿ ಪಡುವಂತೆಯೂ ಇಲ್ಲ. ಇತ್ತೀಚೆಗೆ ಮೃದು ಹಿಂದೂತ್ವದೆಡೆಗೆ ಅವರ ಅಪ್ರೋಚ್‌ ಮತ್ತು ಬಿಜೆಪಿ ನಾಯಕರೆಡೆಗೆ ಅವರ ಸಾಫ್ಟ್‌ ಕಾರ್ನರ್‍‌ಗಳನ್ನು ನೋಡಿದಾಗ ಸದನದ ಈ ತಮಾಷೆ ಮಾತು ಬೇರೆಯದ್ದೆ ಮುಖಚಹರೆ ತೋರಿಸುತ್ತದೆ. ಶಿವಕುಮಾರ್‍‌ ಇಷ್ಟೆಲ್ಲ ಕಾಲೆಳೆದ ತರುವಾಯ ಸಿ ಟಿ ರವಿ ಸುಮ್ಮನಿರುವರೇ, “ನಿಮ್ಮ ಮೂಲ ಯಾವುದು ಅನ್ನೋದು ಗೊತ್ತಿದೆ. ನೀವೇ ಈ ಕಡೆ ಬಂದರೆ ಎತ್ತಾಕಿಕೊಳ್ಳುವ ಸಮಸ್ಯೆ ಇರುವುದಿಲ್ಲ” ಎನ್ನುತ್ತಾ ಮೂಲಕ್ಕೇ ಕೈಹಾಕಿದರು. ಸದನದಲ್ಲಿ ನಿಂತು  ಡಿ ಕೆ ಶಿವಕುಮಾರ್ ನಮಸ್ತೆ ಸದಾವತ್ಸಲೆ ಸಂಘಗೀತೆ ಹಾಡುವುದಕ್ಕು ಮುನ್ನ ‘ನಾನೂ ಶಾಖೆಗಳಿಗೆ ಹೋಗಿಬಂದವನು’ ಎಂದು ಹೇಳಿದ್ದ ಮಾತು, ರವಿಯವರು ಉಲ್ಲೇಖಿಸಿದ `ಮೂಲಕ್ಕೆ’ ಹೊಂದಿಕೊಳ್ಳುತ್ತದೆ. ಅದಾದ ಮೇಲೆ, ಡಿ ಕೆ ಶಿವಕುಮಾರ್ ನಕ್ಕು ಸುಮ್ಮನಾದರು.

ಓಕೆ ಇರಲಿ ಬಿಡಿ, ರಾಜಕಾರಣಿಗಳೂ ನಮ್ಮಂತೆಯೆ ಮನುಷ್ಯರು. ಹಾಗಾಗಿ ಆ ಪ್ರಸಂಗವನ್ನು ಶುದ್ಧ ತಮಾಷೆಯೆಂದೇ ಸದ್ಯಕ್ಕೆ ಪರಿಗಣಿಸಿಬಿಡೋಣ.

ಆದರೆ, ಎರಡನೇ ಸ್ವಾರಸ್ಯದ ವೃತ್ತಾಂತ ತುಸು ಗಂಭೀರದ್ದು. ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿದ್ದು ಹೇಗೆ? ಅನ್ನೋ ಕಥೆಯನ್ನು ವಿಪಕ್ಷ ನಾಯಕ ಆರ್‍ ಅಶೋಕ್‌ ತಮ್ಮದೇ ಶೈಲಿಯಲ್ಲಿ ಹೇಳುತ್ತಾ ಹೋದರು. “ದಿಲ್ಲಿಯಲ್ಲಿ ರಾಹುಲ್‌ ಗಾಂಧಿಯವರನ್ನು ಸಿದ್ರಾಮಯ್ಯ ಭೇಟಿಯಾದಾಗ, ಅವರು ರಾಜೀನಾಮೆ ಕೊಡುವಂತೆ ಕೇಳಿದ್ರಂತೆ; ಅದಕ್ಕೆ ಸಿದ್ರಾಮಯ್ಯ ಶಾಸಕರ ಅಭಿಪ್ರಾಯ ಕೇಳ್ತೀನಿ ಅಂದ್ರಂತೆ; ಆಗ ರಾಹುಲ್‌ ಗಾಂಧಿ ಒಂದು ಚೀಟಿ ತೆಗೆದು ಮುಂದಿಟ್ಟರಂತೆ; ಅದರಲ್ಲಿ ಶಾಸಕರ ಸಹಿಗಳು ಇದ್ದವಂತೆ; ಮೊದಲನೇ ಸಹಿ, ಇತ್ತೀಚೆಗೆ ಸಿಕ್ಕಾಕಿಕೊಂಡ ಆ ವ್ಯಕ್ತಿಯದ್ದಂತೆ; ಸಿದ್ರಾಮಯ್ಯ ನಂಬಿದ ವ್ಯಕ್ತಿಯಿಂದಲೇ ಮೋಸ ಹೋದ್ರಂತೆ….” ಇದಿಷ್ಟು ಅಶೋಕ್ ಅವರ ಮಾತಿನ ಸಾರಾಂಶ. ಇದರಲ್ಲಿ ಹೊಸದೇನೂ ಇಲ್ಲ. ಸಿದ್ರಾಮಯ್ಯನವರು ರಾಜೀನಾಮೆ ಕೊಟ್ಟಾಗಿನಿಂದ ಇಂತದ್ದೊಂದು ಅಂತೆಕಂತೆ ಸುದ್ದಿ ಹರಿದಾಡುತ್ತಲೇ ಇದೆ. ಅಶೋಕ್‌ ಕೂಡಾ ತಮ್ಮ ಪ್ರತಿ ಮಾತಿನ ಕೊನೆಗೆ `ಅಂತೆ’ ಅನ್ನೋದನ್ನು ಸೇರಿಸಿಕೊಂಡೇ ಹೇಳಿದರು. ಹಾಗೆ ಹೇಳುವ ಮುನ್ನ, ತಾನು ಅವರಿಗೆ ಆಪ್ತನಾಗಿರೋದ್ರಿಂದ ತನಗೆ ನಂಬಿಕಾರ್ಹ ಮೂಲಗಳಿಂದ ಮಾಹಿತಿ ಬಂದಿದೆ ಎಂಬ ಅಥೆಂಟಿಸಿಟಿ ಉತ್ಪಾದಿಸಿಕೊಳ್ಳಲೂ ಯತ್ನಿಸಿದರು.

ಇಲ್ಲಿ ಆಘಾತಗೊಳ್ಳಬೇಕಿರೋದು, ಅಂತೆಕಂತೆ ಸುದ್ದಿಯೊಂದನ್ನು ಅಶೋಕ್‌ ಅವರು ಸದನದಲ್ಲಿ ಪ್ರಸ್ತಾಪಿಸಿ ದಾಖಲಾಗುವಂತೆ ಮಾಡಿದ್ದಕ್ಕಲ್ಲ. ಅವರು ತಮ್ಮ ಪಕ್ಷದೊಳಗಿನ ಆಂತರಿಕ ಸಂಗತಿಯನ್ನು, ಹೀಗೆ ಊಹಾಪೋಹದ ಅಂತೆಕಂತೆಯಾಗಿ ಹೇಳುತ್ತಿದ್ದರೆ ಆಡಳಿತ ಪಕ್ಷದವರು ತಣ್ಣಗೆ ಕೂತು ಕೇಳಿಸಿಕೊಳ್ಳುತ್ತಿದ್ದರು! ತಮ್ಮ ಪಕ್ಷದ ಆಂತರಿಕ ಸಂಗತಿಯೊಂದನ್ನು ಯಾವುದೇ ಪುರಾವೆಯಿಲ್ಲದೆ, ಹೀಗೆ ಸದನದಲ್ಲಿ ವಿಪಕ್ಷ ನಾಯಕ ಹೇಳಲು ಮುಂದಾದಾಗ ಅದರ ವಿರುದ್ಧ ಮುಗಿಬೀಳಬೇಕಿದ್ದ ಕಾಂಗ್ರೆಸಿನವರ ಆ ಮೌನ ಏನು ಹೇಳುತ್ತೆ? ಆ ಅಂತೆಕಂತೆಯ ಕತೆಗೆ ತಮ್ಮ ಮೌನ ಸಮ್ಮತಿ ಸೂಚಿಸಿದರೇ? ಹಾದಿಬೀದಿಯ ಕತೆಯೊಂದು ಸದನದ ಚರ್ಚೆಯಲ್ಲಿ ಅಧಿಕೃತವಾಗಿ ಕಡತ ಸೇರುತ್ತಿದ್ದರೆ, ಕಾಂಗ್ರೆಸ್‌ ನಾಯಕರು ಚಕಾರವೆತ್ತಲಿಲ್ಲ. ಸಿದ್ದರಾಮಯ್ಯನವರ ರಾಜೀನಾಮೆ ಪ್ರಸಂಗ ಮಾತ್ರವಲ್ಲದೆ, ಕಾಂಗ್ರೆಸ್‌ ನಾಯಕತ್ವಗಳ ಮೇಲೆ ಅಪನಂಬುಗೆ ಮೂಡಿಸಬಹುದಾದ ಈ ಹೇಳಿಕೆಯಿಂದ ತಮಗೆ ಮುಂದಾಗುವ ಡ್ಯಾಮೇಜ್‌ ಎಂತದ್ದೆಂಬ ಅರಿವು ಅವರಿಗಿರಲಿಲ್ಲವೋ, ಅಥವಾ ಅಷ್ಟೊಂದು ನಿರ್ಲಕ್ಷ್ಯವೋ? ಅಥವಾ ವಿಶೇಷ ಅಧಿವೇಶನದ ಚರ್ಚೆ ಉದ್ದೇಶಿತ ವಿಚಾರಗಳನ್ನು ಬಿಟ್ಟು ಬೇರೆ ಕಡೆ ಡೈವರ್ಟ್ ಆಗಬಾರದೆನ್ನುವ ಅಪರೂಪದ ದಿವ್ಯ ಸಂಕಲ್ಪವೋ?

ಅದೇನೆ ಇರಲಿ, ಆರ್ ಅಶೋಕ್‌ ತಮಗರಿವಿಲ್ಲದೇ ತಮ್ಮ ಪಕ್ಷಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ತಾವು ವಿಪಕ್ಷ ನಾಯಕ ಸ್ಥಾನಕ್ಕೇರಿದಾಗಿನಿಂದ ಮುಗ್ಗರಿಸುತ್ತಲೇ ಬಂದಿದ್ದ ಮತ್ತು ಆ ಕಾರಣಕ್ಕೆ ತಮ್ಮದೇ ಸ್ವಪಕ್ಷೀಯರ ಟೀಕೆಗೂ ಗುರಿಯಾಗುತ್ತಿದ್ದ ಅವರು, ಈ ವಿಷಯ ಪ್ರಸ್ತಾಪಿಸಿ, ಕಾಂಗ್ರೆಸಿಗರ ಮೌನ ಉತ್ಪಾದಿಸುವ ಮೂಲಕ ಅನುದ್ದೇಶವಾಗಿ ಗೆದ್ದುಬಿಟ್ಟಿದ್ದಾರೆ!

ಅಂದಹಾಗೆ, ಈ ವಿಶೇಷ ಅಧಿವೇಶನದಲ್ಲಿ ನಡೆದ ಸ್ವಾರಸ್ಯಗಳು ಇವು ಎರಡೇನಾ? ಇಲ್ಲ, ಇನ್ನೂ ಒಂದಿದೆ. ನಮ್ಮ ಘನತೆವೆತ್ತ ಬಿಜೆಪಿ ಶಾಸಕರು ಹಠಕ್ಕೆ ಬಿದ್ದವರಂತೆ, ಮುದ್ರಿತ ಪ್ರತಿಗಳನ್ನು ಕೈಯಲ್ಲಿ ಹಿಡಿದು, ಬಂಕಿಮಚಂದ್ರ ಚಟರ್ಜಿಯವರ ಆತ್ಮ ಅಲ್ಲೋಲಕಲ್ಲೋಲವಾಗುವಂತೆ ‘ತ್ರಾಸು’ಬದ್ದ ವಂದೇ ಮಾತರಂ ಗೀತೆ ಓದಿದ್ದು! ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ನೋಡಿ-ಕೇಳಿಯೇ ಆನಂದಿಸಬೇಕು.

  • ಮಾಚಯ್ಯ ಎಂ ಹಿಪ್ಪರಿಗಿ

Leave a Reply

Your email address will not be published. Required fields are marked *