ಮಲೆನಾಡು ಎಂದರೆ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಪ್ರಕೃತಿಯ ಮಡಿಲಲ್ಲಿ ಅರಳಿರುವ ಜೀವವೈವಿಧ್ಯದ ತಾಣ, ಹಸಿರಿನ ಉಸಿರು, ನದಿಗಳ ನಿನಾದ ಮತ್ತು ಮನುಷ್ಯ ಹಾಗೂ ಪರಿಸರದ ನಡುವಿನ ಅವಿನಾಭಾವ ಸಂಬಂಧದ ಪ್ರತೀಕ. ಮಂಜು ಮುಸುಕಿದ ಬೆಟ್ಟಗಳು, ಹಸಿರು ಹೊದ್ದ ಕಾಡುಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಸದಾ ತೇವದಿಂದ ಕೂಡಿರುವ ಮಣ್ಣಿನ ಸೊಗಡು ಮಲೆನಾಡಿನ ಸೌಂದರ್ಯವನ್ನು ಲೋಕವಿಖ್ಯಾತಿಗೊಳಿಸಿದೆ.
ಜಗತ್ತಿನ ಅತ್ಯಂತ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳು ಮಲೆನಾಡಿನ ಹೆಮ್ಮೆಯ ಜೊತೆಗೆ ಇಡೀ ದಕ್ಷಿಣ ಭಾರತದ ಪರಿಸರ ವ್ಯವಸ್ಥೆಯ ಜೀವನಾಡಿ. ಶರಾವತಿ, ತುಂಗಭದ್ರೆ, ಕಾವೇರಿ, ನೇತ್ರಾವತಿ ಸೇರಿದಂತೆ ಹತ್ತಾರು ನದಿಗಳಿಗೆ ಜೀವ ತುಂಬುವ ಈ ಪರ್ವತ ಶ್ರೇಣಿಗಳು ಅಸಂಖ್ಯಾತ ಸಸ್ಯ, ಪ್ರಾಣಿ, ಪಕ್ಷಿ ಮತ್ತು ಜಲಚರ ಪ್ರಭೇದಗಳಿಗೆ ಆಶ್ರಯ ನೀಡಿವೆ. ಮಳೆ, ಮಣ್ಣು, ನೀರು ಮತ್ತು ಅರಣ್ಯದ ನಡುವಿನ ನೈಸರ್ಗಿಕ ಸಂಬಂಧವನ್ನು ಕಾಪಾಡಿಕೊಂಡಿರುವ ಪಶ್ಚಿಮ ಘಟ್ಟಗಳು ನಮ್ಮ ಮುಂದಿನ ತಲೆಮಾರುಗಳಿಗೆ ನಾವು ಉಳಿಸಬೇಕಾದ ಅಮೂಲ್ಯ ನೈಸರ್ಗಿಕ ಸಂಪತ್ತು.
ಇಂತಹ ಪ್ರಕೃತಿಯ ಮಡಿಲಲ್ಲಿ ಬದುಕುತ್ತಿರುವ ಮಲೆನಾಡಿನ ಜನರಿಗೆ ಪರಿಸರ ಸಂರಕ್ಷಣೆ ಎನ್ನುವುದು ಇಂದು ನಿನ್ನೆಯ ಪಾಠವಲ್ಲ. ಅದು ಅವರ ಬದುಕಿನ ಅವಿಭಾಜ್ಯ ಅಂಗ. ನೂರಾರು ವರ್ಷಗಳಿಂದ ಇಲ್ಲಿನ ಜನರು ಕಾಡು, ಬೆಟ್ಟ, ನದಿ, ಹಳ್ಳ, ಕೆರೆ ಮತ್ತು ಕೃಷಿಭೂಮಿಯೊಂದಿಗೆ ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಪ್ರಕೃತಿಯನ್ನು ಗೆಲ್ಲಬೇಕಾದ ಶತ್ರುವೆಂದು ಅವರು ಎಂದೂ ಭಾವಿಸಿಲ್ಲ, ಬದಲಾಗಿ ಬದುಕಿಗೆ ಆಸರೆಯಾಗಿರುವ ತಾಯಿಯಂತೆ ಗೌರವಿಸಿದ್ದಾರೆ.
ಕಾಡಿನ ನಡುವೆ ಬದುಕು ಕಟ್ಟಿಕೊಂಡರೂ ಕಾಡನ್ನು ಸಂಪೂರ್ಣವಾಗಿ ನಾಶ ಮಾಡದೆ, ತಮ್ಮ ಅಗತ್ಯಗಳಿಗೆ ತಕ್ಕಂತೆ ಸಂಪನ್ಮೂಲಗಳನ್ನು ಬಳಸಿಕೊಂಡು, ಮುಂದಿನ ಪೀಳಿಗೆಗೂ ಅವು ಉಳಿಯುವಂತೆ ನೋಡಿಕೊಂಡಿದ್ದಾರೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಅರಣ್ಯಾಧಾರಿತ ಬದುಕಿನ ನಡುವೆ ಒಂದು ಸಹಜ ಸಮತೋಲನವನ್ನು ಕಾಪಾಡಿಕೊಂಡಿದ್ದಾರೆ. ಪರಿಸರ ಸಂರಕ್ಷಣೆಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳನ್ನಾಗಲಿ, ಕಾನೂನುಗಳನ್ನಾಗಲಿ ಓದದಿದ್ದರೂ ಪ್ರಕೃತಿಯ ಮೌಲ್ಯವನ್ನು ತಮ್ಮ ಅನುಭವದಿಂದ ಅರಿತುಕೊಂಡ ಜನರಿವರು. ಆದರೆ ಇಂತಹ ಜನರ ಬದುಕಿನ ಮೇಲೆ ಆಗಾಗ್ಗೆ ಬುಸುಗುಟ್ಟುತ್ತಾ ಆತಂಕ ಸೃಷ್ಟಿಸುತ್ತಿರುವ ಹಾವಿನಂತಿರುವುದೇ ಕಸ್ತೂರಿ ರಂಗನ್ ವರದಿ.

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಉದ್ದೇಶದಿಂದ ರೂಪಿಸಲಾದ ಈ ವರದಿಯ ಆಶಯವನ್ನು ಯಾರೂ ಪ್ರಶ್ನಿಸಬೇಕಿಲ್ಲ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತ್ಯಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಅಲ್ಲಿನ ಜನರ ಬದುಕು, ಜೀವನೋಪಾಯ, ಕೃಷಿ ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನೇ ಸಂಕಷ್ಟಕ್ಕೆ ಸಿಲುಕಿಸುವ ನಿಯಮಗಳನ್ನು ರೂಪಿಸುವುದು ಎಷ್ಟು ಸಮಂಜಸ? ಕಾಡನ್ನು ಉಳಿಸುವ ಉದ್ದೇಶದಲ್ಲಿ ಕಾಡಿನೊಂದಿಗೆ ಬದುಕುತ್ತಿರುವ ಜನರನ್ನೇ ಸಮಸ್ಯೆಯೆಂದು ಪರಿಗಣಿಸುವುದು ಯಾವ ನ್ಯಾಯ?
ಮಲೆನಾಡಿನ ಜನರ ಪಾಲಿಗೆ ಕಸ್ತೂರಿ ರಂಗನ್ ವರದಿ ಒಂದು ನಿರಂತರ ಆತಂಕದ ಸಂಕೇತವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ಗಡಿಗಳನ್ನು ಗುರುತಿಸುವ ಪ್ರಕ್ರಿಯೆಯಿಂದ ಹಿಡಿದು ಕೃಷಿ ಚಟುವಟಿಕೆಗಳು, ಮನೆ ನಿರ್ಮಾಣ, ರಸ್ತೆ, ಮೂಲಸೌಕರ್ಯ ಮತ್ತು ಸ್ಥಳೀಯ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಬಂಧಗಳವರೆಗೆ ಹಲವು ಆತಂಕಗಳು ಜನರನ್ನು ಕಾಡುತ್ತಿವೆ. ಪ್ರತಿ ಬಾರಿ ವರದಿಯ ಅನುಷ್ಠಾನದ ಚರ್ಚೆ ಮುನ್ನೆಲೆಗೆ ಬಂದಾಗಲೂ ತಮ್ಮ ಬದುಕು ಮತ್ತು ಭವಿಷ್ಯದ ಬಗ್ಗೆ ಜನರು ಆತಂಕಿತರಾಗುವಂತಾಗಿದೆ.
ಪ್ರಕೃತಿಯೊಂದಿಗೆ ತಲೆಮಾರುಗಳಿಂದ ಬದುಕುತ್ತಿರುವ ರೈತರು, ಕೃಷಿಕರು, ಸಣ್ಣ ಹಿಡುವಳಿದಾರರು ಮತ್ತು ಗ್ರಾಮೀಣ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರ ಬದುಕಿನ ವಾಸ್ತವಗಳನ್ನು ಅರ್ಥಮಾಡಿಕೊಳ್ಳದೆ ರೂಪಿಸುವ ಯಾವುದೇ ನಿಯಮಗಳು ಜನಪರವಾಗಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದುಕನ್ನೇ ನಿರ್ಬಂಧಿಸುವ ಕ್ರಮಗಳು ಸಂರಕ್ಷಣೆಯ ಉದ್ದೇಶವನ್ನೇ ಪ್ರಶ್ನಿಸುವಂತಿವೆ. ಜನರ ಸಹಭಾಗಿತ್ವವಿಲ್ಲದ ಸಂರಕ್ಷಣೆಯ ಪ್ರಯತ್ನಗಳು ಅಂತಿಮವಾಗಿ ಜನವಿರೋಧಿ ಮತ್ತು ಜೀವವಿರೋಧಿ ಸ್ವರೂಪ ಪಡೆದುಕೊಳ್ಳುವ ಅಪಾಯವಿದೆ.
ಕಸ್ತೂರಿ ರಂಗನ್ ವರದಿಯ ಪರವಾಗಿ ಮಾತನಾಡುವವರು ಪರಿಸರ ಸಂರಕ್ಷಣೆಯ ಅಗತ್ಯವನ್ನು ಮುಂದಿಡುತ್ತಾರೆ. ಆದರೆ ಪರಿಸರ ಸಂರಕ್ಷಣೆ ಎಂದರೆ ಕೇವಲ ಕೆಲವು ಪ್ರದೇಶಗಳಿಗೆ ನಿರ್ಬಂಧ ವಿಧಿಸುವುದಲ್ಲ. ಅರಣ್ಯ ನಾಶಕ್ಕೆ ಕಾರಣವಾಗುವ ಬೃಹತ್ ಯೋಜನೆಗಳು, ಗಣಿಗಾರಿಕೆ, ಅತಿಯಾದ ವಾಣಿಜ್ಯ ಚಟುವಟಿಕೆಗಳು ಮತ್ತು ಪರಿಸರದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಸರ್ಕಾರಿ ಹಾಗೂ ಖಾಸಗಿ ಯೋಜನೆಗಳ ಬಗ್ಗೆಯೂ ಅಷ್ಟೇ ಕಠಿಣ ನಿಲುವು ಇರಬೇಕು. ಸಂರಕ್ಷಣೆಯ ಹೊಣೆಗಾರಿಕೆ ಸಾಮಾನ್ಯ ರೈತರು ಮತ್ತು ಗ್ರಾಮೀಣ ಜನರ ಮೇಲಷ್ಟೇ ಬೀಳಬಾರದು.
ಇನ್ನೊಂದೆಡೆ, ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವ ಸರ್ಕಾರಗಳ ಇಲಾಖೆಗಳೇ ಮಲೆನಾಡಿನ ಪರಿಸರಕ್ಕೆ ಹಾನಿ ಮಾಡುತ್ತಿರುವ ಹಲವು ಉದಾಹರಣೆಗಳಿವೆ. ಅಕೇಶಿಯಾ ನಡುತೋಪುಗಳ ಹೆಸರಿನಲ್ಲಿ ನೈಸರ್ಗಿಕ ಅರಣ್ಯ ಪ್ರದೇಶಗಳ ಸ್ವರೂಪವನ್ನೇ ಬದಲಾಯಿಸುವ ಪ್ರಯತ್ನಗಳು ನಡೆದಿವೆ. ಸ್ಥಳೀಯ ಹವಾಮಾನ, ಮಣ್ಣಿನ ಗುಣ, ಜಲಮೂಲಗಳು ಮತ್ತು ಜೀವವೈವಿಧ್ಯಕ್ಕೆ ಹೊಂದಿಕೊಳ್ಳುವ ನೈಸರ್ಗಿಕ ಸಸ್ಯಸಂಪತ್ತಿನ ಬದಲಿಗೆ ಏಕಜಾತಿಯ ವಾಣಿಜ್ಯ ಮರಗಳ ನೆಡುತೋಪುಗಳನ್ನು ಬೆಳೆಸುವುದು ಪರಿಸರ ಸಂರಕ್ಷಣೆಯಲ್ಲ. ಸ್ಥಳೀಯ ಸಸ್ಯವರ್ಗ, ಪ್ರಾಣಿ-ಪಕ್ಷಿಗಳ ಆವಾಸಸ್ಥಾನ ಮತ್ತು ಮಣ್ಣಿನ ನೈಸರ್ಗಿಕ ಗುಣಧರ್ಮಗಳ ಮೇಲೆ ಇಂತಹ ನೆಡುತೋಪುಗಳು ಬೀರುವ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಒಂದು ಕಡೆ ಜನರಿಗೆ ಕಾಡು ಉಳಿಸುವ ಪಾಠ ಹೇಳುತ್ತಾ, ಇನ್ನೊಂದು ಕಡೆ ಇಲಾಖೆಗಳೇ ನೈಸರ್ಗಿಕ ಪರಿಸರದ ಸಮತೋಲನಕ್ಕೆ ಕೊಡಲಿಯೇಟು ನೀಡುವುದು ಯಾವ ರೀತಿಯ ಪರಿಸರ ಕಾಳಜಿ?

ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಗಳು ಕೈಗೊಳ್ಳುತ್ತಿರುವ ಹಲವು ಯೋಜನೆಗಳೂ ಪಶ್ಚಿಮ ಘಟ್ಟಗಳ ಪರಿಸರಕ್ಕೆ ಸವಾಲಾಗಿವೆ. ಬೃಹತ್ ಅಣೆಕಟ್ಟುಗಳು, ರಸ್ತೆ ಮತ್ತು ರೈಲು ಮಾರ್ಗಗಳ ವಿಸ್ತರಣೆ, ಗಣಿಗಾರಿಕೆ, ಮರಳು ಗಣಿಗಾರಿಕೆ, ಅರಣ್ಯ ಪ್ರದೇಶಗಳ ಒತ್ತುವರಿ ಹಾಗೂ ಬೃಹತ್ ನಿರ್ಮಾಣ ಯೋಜನೆಗಳು ಪರಿಸರದ ಮೇಲೆ ಒತ್ತಡ ಹೇರುತ್ತಿವೆ. ಇಂತಹ ಯೋಜನೆಗಳ ಅನುಷ್ಠಾನದಲ್ಲಿ ಪರಿಸರದ ದೀರ್ಘಕಾಲೀನ ಪರಿಣಾಮಗಳಿಗಿಂತ ತಾತ್ಕಾಲಿಕ ಆರ್ಥಿಕ ಮತ್ತು ರಾಜಕೀಯ ಲಾಭಗಳಿಗೆ ಆದ್ಯತೆ ನೀಡುವ ಪ್ರವೃತ್ತಿ ಆತಂಕಕಾರಿಯಾಗಿದೆ. ಅಭಿವೃದ್ಧಿ ಅಗತ್ಯವೇ ಸರಿ, ಆದರೆ ಪ್ರಕೃತಿಯನ್ನೇ ಬಲಿಕೊಟ್ಟು ಸಾಧಿಸುವ ಅಭಿವೃದ್ಧಿ ಅಂತಿಮವಾಗಿ ಮನುಷ್ಯನ ಬದುಕನ್ನೇ ಸಂಕಷ್ಟಕ್ಕೆ ದೂಡುತ್ತದೆ ಎನ್ನುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಕೇರಳಂನ ವಯನಾಡು ಭಾಗದಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಭೂಕುಸಿತ ಸಾಕ್ಷಿಯಾಗಿದೆ.
ಇಷ್ಟೆಲ್ಲ ಸವಾಲುಗಳು ಮತ್ತು ಒತ್ತಡಗಳ ನಡುವೆಯೂ ಪಶ್ಚಿಮ ಘಟ್ಟಗಳ ಅರಣ್ಯ ಸಂಪತ್ತು ಮತ್ತು ನೈಸರ್ಗಿಕ ಪರಿಸರವನ್ನು ಉಳಿಸುವಲ್ಲಿ ಸ್ಥಳೀಯ ಜನರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ಕಾಡುಗಳ ಅಂಚಿನಲ್ಲಿ ಬದುಕುವ ಜನರೇ ಅನೇಕ ಸಂದರ್ಭಗಳಲ್ಲಿ ಕಾಡಿನ ನಿಜವಾದ ರಕ್ಷಕರಾಗಿದ್ದಾರೆ. ಕಾಡ್ಗಿಚ್ಚು ತಡೆಯುವುದು, ಅಕ್ರಮ ಮರಕಡಿತವನ್ನು ವಿರೋಧಿಸುವುದು, ಜಲಮೂಲಗಳನ್ನು ಸಂರಕ್ಷಿಸುವುದು, ಕೃಷಿಯಲ್ಲಿ ಪರಿಸರಸ್ನೇಹಿ ಪದ್ಧತಿಗಳನ್ನು ಅನುಸರಿಸುವುದು, ಸ್ಥಳೀಯ ಮರಗಿಡಗಳನ್ನು ಬೆಳೆಸುವುದು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಅವರ ಬದುಕಿನ ಭಾಗವಾಗಿದೆ. ಸ್ಥಳೀಯ ಸಮುದಾಯಗಳ ಇಂತಹ ಕಾಳಜಿ ಮತ್ತು ಪ್ರಯತ್ನಗಳು ಪಶ್ಚಿಮ ಘಟ್ಟಗಳ ನೈಸರ್ಗಿಕ ಸಂಪತ್ತನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟಗಳ ಹಲವು ಭಾಗಗಳಲ್ಲಿ ಅರಣ್ಯ ಮತ್ತು ಹಸಿರು ಹೊದಿಕೆಯ ಪುನರುಜ್ಜೀವನಕ್ಕೆ ಸ್ಥಳೀಯರ ಸಹಭಾಗಿತ್ವ, ನೈಸರ್ಗಿಕ ಪುನರುತ್ಪತ್ತಿ ಮತ್ತು ಪರಿಸರ ಜಾಗೃತಿ ನೆರವಾಗಿವೆ. ಇದನ್ನು ಕೇವಲ ಸರ್ಕಾರದ ಯೋಜನೆಗಳ ಸಾಧನೆ ಎಂದು ಬಿಂಬಿಸುವುದಕ್ಕಿಂತ, ಪ್ರಕೃತಿಯೊಂದಿಗೆ ಬದುಕುವ ಜನರ ನಿರಂತರ ಕಾಳಜಿ ಮತ್ತು ಶ್ರಮದ ಫಲವೆಂದು ಗುರುತಿಸುವುದು ಹೆಚ್ಚು ನ್ಯಾಯಯುತವಾದದ್ದು.

ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಕರ್ನಾಟಕದ ಜನರ ಆತಂಕ ಮತ್ತು ಆಕ್ಷೇಪಗಳಿಗೆ ಸ್ಪಂದಿಸಿ ರಾಜ್ಯ ವಿಧಾನಸಭೆಯೂ 2026ರ ಸೆಪ್ಟೆಂಬರ್ನಲ್ಲಿ ವರದಿಯನ್ನು ಈಗಿರುವ ರೂಪದಲ್ಲಿ ಒಪ್ಪಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಸ್ಥಳೀಯ ವಾಸ್ತವಗಳನ್ನು ಪರಿಶೀಲಿಸಲು ಭೌತಿಕ ಸಮೀಕ್ಷೆ ನಡೆಸಿ, ಜನರ ಬದುಕು ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವನ್ನು ಈ ನಿರ್ಣಯ ಮತ್ತೊಮ್ಮೆ ಒತ್ತಿಹೇಳಿದೆ. ಆದರೆ ಉದ್ಯಮಪ್ರೇರಿತ ಅರಣ್ಯನಾಶಕ್ಕೆ ಅನುವಾಗುವಂತೆ ಈ ವಿಳಂಬ ನೀತಿಯನ್ನು ಸರ್ಕಾರಗಳು ಒಂದು ನೆಪವಾಗಿ ಬಳಸಿಕೊಳ್ಳದಿರಲಿ.
ಪಶ್ಚಿಮ ಘಟ್ಟಗಳನ್ನು ಉಳಿಸಬೇಕೆಂಬ ಕಾಳಜಿ ಎಷ್ಟು ಮುಖ್ಯವೋ, ಅಲ್ಲಿನ ಜನರ ಬದುಕನ್ನು ಉಳಿಸಬೇಕೆಂಬ ಕಾಳಜಿಯೂ ಅಷ್ಟೇ ಮುಖ್ಯ. ಪರಿಸರ ಸಂರಕ್ಷಣೆ ಮತ್ತು ಜನರ ಬದುಕು ಪರಸ್ಪರ ವಿರುದ್ಧವಾದ ಸಂಗತಿಗಳಲ್ಲ. ಇವೆರಡೂ ಒಂದಕ್ಕೊಂದು ಪೂರಕವಾಗಿರಬೇಕು. ಪರಿಸರವನ್ನು ಹಾಳುಮಾಡುವ ಬೃಹತ್ ಯೋಜನೆಗಳಿಗೆ ಅವಕಾಶ ನೀಡಿ, ತಲೆಮಾರುಗಳಿಂದ ಪ್ರಕೃತಿಯೊಂದಿಗೆ ಬದುಕುತ್ತಿರುವ ಸಾಮಾನ್ಯ ಜನರ ಮೇಲೆ ನಿರ್ಬಂಧಗಳನ್ನು ಹೇರುವುದು ದ್ವಂದ್ವ ನೀತಿಯಲ್ಲದೆ ಮತ್ತೇನೂ ಅಲ್ಲ.
ಪಶ್ಚಿಮ ಘಟ್ಟಗಳ ನಿಜವಾದ ಸಂರಕ್ಷಕರು ಅಲ್ಲಿನ ಜನರೇ. ಅವರ ಅನುಭವ, ಬದುಕಿನ ಕ್ರಮ, ಸ್ಥಳೀಯ ಜ್ಞಾನ ಮತ್ತು ಪರಿಸರದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಗೌರವಿಸದೆ ಯಾವುದೇ ಸಂರಕ್ಷಣಾ ನೀತಿ ಯಶಸ್ವಿಯಾಗಲು ಸಾಧ್ಯವಿಲ್ಲ. ಜನರನ್ನು ದೂರವಿಟ್ಟು ಕಾಡುಗಳನ್ನು ಉಳಿಸಲಾಗದು. ಬದಲಿಗೆ ಜನರನ್ನೇ ಪರಿಸರ ಸಂರಕ್ಷಣೆಯ ಪಾಲುದಾರರನ್ನಾಗಿ ಮಾಡಬೇಕು. ಅವರ ಬದುಕಿಗೆ ಭದ್ರತೆ ನೀಡಿ, ಪರಿಸರಸ್ನೇಹಿ ಕೃಷಿ ಮತ್ತು ಜೀವನೋಪಾಯಕ್ಕೆ ಉತ್ತೇಜನ ನೀಡಬೇಕು.
ಪಶ್ಚಿಮ ಘಟ್ಟಗಳ ಪರಿಸರದ ಜೀವಂತಿಕೆಯನ್ನು ಉಳಿಸುವ ಶಕ್ತಿ ಅಲ್ಲಿನ ಜನರು ಪ್ರಕೃತಿಯೊಂದಿಗೆ ಅಳವಡಿಸಿಕೊಂಡಿರುವ ಸಮತೋಲಿತ ಜೀವನಶೈಲಿಯಲ್ಲಿದೆ. ಅದು ನೂರಾರು ವರ್ಷಗಳ ಅನುಭವದಿಂದ ರೂಪುಗೊಂಡ ಬದುಕಿನ ಪಾಠ. ಯಾವುದೇ ಕಾಯ್ದೆ, ಕಾನೂನು ಅಥವಾ ಸರ್ಕಾರಿ ಅಧಿಸೂಚನೆಗೆ ಈ ಬದುಕಿನ ಜ್ಞಾನವನ್ನು ಬದಲಿಸಲು ಸಾಧ್ಯವಿಲ್ಲ. ಕಾನೂನುಗಳು ಜನರ ಸಹಭಾಗಿತ್ವಕ್ಕೆ ಪೂರಕವಾಗಿರಬೇಕೇ ಹೊರತು ಅವರ ಬದುಕಿಗೆ ಮಾರಕವಾಗಬಾರದು.
ಕಸ್ತೂರಿ ರಂಗನ್ ವರದಿಯಂತಹ ಪ್ರಸ್ತಾವನೆಗಳು ಜನರಲ್ಲಿ ಆತಂಕ ಹುಟ್ಟಿಸುವ ಬುಸುಗುಟ್ಟುವ ಹಾವುಗಳಾಗುವ ಬದಲು, ಜನರ ಬದುಕು ಮತ್ತು ಪ್ರಕೃತಿಯ ನಡುವೆ ಸೇತುವೆ ನಿರ್ಮಿಸುವ ಸಾಧನಗಳಾಗಬೇಕು. ಮಲೆನಾಡಿನ ಜನರನ್ನು ಕಾಡಿನಿಂದ ದೂರವಿಡುವುದಲ್ಲ, ಕಾಡಿನೊಂದಿಗೆ ಅವರ ಬದುಕನ್ನು ಮತ್ತಷ್ಟು ಗಟ್ಟಿಗೊಳಿಸುವುದೇ ನಿಜವಾದ ಪರಿಸರ ಸಂರಕ್ಷಣೆ. ಪಶ್ಚಿಮ ಘಟ್ಟಗಳು ಉಳಿಯಬೇಕಾದರೆ ಅಲ್ಲಿನ ಕಾಡುಗಳಷ್ಟೇ ಅಲ್ಲ, ಕಾಡಿನೊಂದಿಗೆ ಬದುಕುತ್ತಿರುವ ಜನರೂ ಉಳಿಯಬೇಕು ಎಂಬುದನ್ನು ಆಳುವ ವರ್ಗ ಅರಿತು ಮುನ್ನಡೆಯಬೇಕು ಎಂಬುದಷ್ಟೇ ನಮ್ಮ ಈ ಹೊತ್ತಿನ ಆಶಯ.

ಲೇಖಕರು ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯ ಕೊಡಚಾದ್ರಿ ತಪ್ಪಲಿನಲ್ಲಿರುವ ಮುಳುಗಡೆ ಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಇವರು. ಸಾಮಾಜಿಕ ಮಾಧ್ಯಮ ವಿಭಾಗ ನಿರ್ವಹಣೆಯಲ್ಲಿ ಪರಿಣಿತರಾದ ಇವರು ತಾವು ಕಂಡುಂಡ ತನ್ನೂರಿನ ಕಷ್ಟ ನಷ್ಟಗಳನ್ನು ಆಗಾಗ್ಗೆ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಹವ್ಯಾಸಿ ಬರಹಗಾರ ಕೂಡಾ ಹೌದು.
