ತೆಲುಗಿನ ‘ಕೊಂಗು’ ಪದದ ಕನ್ನಡ ರೂಪ ಸೆರಗು. ಜುಪಾಕ ಸುಭದ್ರ ಅವರ ‘ಕೊಂಗು’ ಕವಿತೆ ದಲಿತ ಮಹಿಳೆಯ ಬದುಕನ್ನು ಸೆರಗಿನ ರೂಪಕದ ಮೂಲಕ ನಿರೂಪಿಸಿರುವ ಮಹತ್ವದ ಕಾವ್ಯಪ್ರಯತ್ನ. ಇಲ್ಲಿ ಸೆರಗು ಉಡುಪಿನ ಒಂದು ಭಾಗವಾಗಿ ಉಳಿಯದೆ, ಹಸಿವು, ಕೃಷಿ ದುಡಿಮೆ, ಕುಟುಂಬದ ಆರೈಕೆ, ದೈಹಿಕ ಆಯಾಸ, ಸಾಮಾಜಿಕ ಅಧಿಕಾರ ಮತ್ತು ಹೆಣ್ಣಿನ ಸ್ವಾಭಿಮಾನದ ಅರ್ಥಗಳನ್ನು ಹೊತ್ತುಕೊಂಡಿದೆ. ಕವಯಿತ್ರಿ ಸೆರಗನ್ನು ಕಾವ್ಯದ ಕೇಂದ್ರವಾಗಿಟ್ಟುಕೊಂಡು, ಅದರ ಸುತ್ತ ರೂಪುಗೊಂಡಿರುವ ಬದುಕಿನ ಅನೇಕ ಪದರಗಳನ್ನು ತೆರೆದಿಡುತ್ತಾರೆ. ಈ ಕವಿತೆಯ ವೈಚಾರಿಕ ಮಹತ್ವವನ್ನು ಅರಿಯಲು ಸೆರಗನ್ನು ಸಾಂಸ್ಕೃತಿಕ ಸಂಕೇತವಾಗಿ ನೋಡುವುದರ ಜೊತೆಗೆ, ಜಾತಿ ಮತ್ತು ವರ್ಗ ಸಂಬಂಧಗಳೊಳಗೆ ದುಡಿಯುವ ಹೆಣ್ಣಿನ ಅನುಭವದ ನೆಲೆಯಿಂದಲೂ ಪರಿಶೀಲಿಸಲು ಈ ಕವಿತೆ ಒತ್ತಾಯಿಸುತ್ತದೆ.
ಕವಿತೆಯ ಆರಂಭದಲ್ಲಿಯೇ ಕವಯಿತ್ರಿ ಸೆರಗಿನ ಸಾಮಾಜಿಕ ಅರ್ಥವನ್ನು ಮರುನಿರ್ಧರಿಸುತ್ತಾರೆ.
“ಸೆರಗು ನನ್ನ ಎದೆಯ ಮೇಲೆ ಕಾವಲು ಕಾಯುವ
ಹರಕು ಬಟ್ಟೆಯ ತುಂಡಲ್ಲ...”
ಈ ಸಾಲುಗಳಲ್ಲಿ ಸೆರಗಿನ ಭೌತಿಕ ಸ್ವರೂಪಕ್ಕಿಂತ ಅದರ ಬದುಕಿನ ಸಂಬಂಧ ಮುಖ್ಯವಾಗುತ್ತದೆ. ಹರಕು ಬಟ್ಟೆಯೆಂಬ ನೋಟವು ವಸ್ತುವಿನ ಹೊರಮೈಯನ್ನು ಗುರುತಿಸಿದರೆ, ಕವಯಿತ್ರಿಯ ದೃಷ್ಟಿ ಅದರೊಳಗೆ ಸಂಗ್ರಹವಾಗಿರುವ ಶ್ರಮದ ಇತಿಹಾಸವನ್ನು ಗುರುತಿಸುತ್ತದೆ. ಸೆರಗು ಹೆಣ್ಣಿನ ದೇಹದೊಂದಿಗೆ ನಿಕಟ ಸಂಬಂಧ ಹೊಂದಿರುವ ವಸ್ತು. ಆದರೆ ಈ ಕವಿತೆಯಲ್ಲಿ ಅದು ದೇಹವನ್ನು ಮುಚ್ಚುವ ಉಡುಪಿನ ಮಿತಿಯನ್ನು ದಾಟಿ, ಬದುಕಿನ ಅಗತ್ಯಗಳನ್ನು ಪೂರೈಸುವ ಸಾಧನವಾಗಿ ವಿಸ್ತರಿಸುತ್ತದೆ. ವಸ್ತುವಿನ ಅರ್ಥವನ್ನು ನಿರ್ಧರಿಸುವುದು ಅದರ ಮಾರುಕಟ್ಟೆ ಬೆಲೆಯೋ ಸಾಮಾಜಿಕ ಸ್ಥಾನಮಾನವೋ ಆಗಿರದೆ, ಅದು ದುಡಿಯುವ ಮನುಷ್ಯನ ಬದುಕಿನಲ್ಲಿ ವಹಿಸುವ ಪಾತ್ರ ಮುಖ್ಯ ಎಂಬ ಅರಿವು ಇಲ್ಲಿ ವ್ಯಕ್ತವಾಗುತ್ತದೆ.
ಈ ಆರಂಭಿಕ ನಿಲುವು ದಲಿತ ಸ್ತ್ರೀವಾದಿ ಓದಿಗೆ ನಿರ್ದಿಷ್ಟವಾದ ನೆಲೆಯನ್ನು ಒದಗಿಸುತ್ತದೆ. ಸಮಾಜದ ಶ್ರೇಣೀಕರಣದಲ್ಲಿ ಕೆಲವು ವಸ್ತುಗಳು, ವೃತ್ತಿಗಳು ಮತ್ತು ಬದುಕಿನ ವಿಧಾನಗಳು ಗೌರವದ ಸಂಕೇತಗಳಾಗಿ ಕಾಣಿಸಿಕೊಂಡರೆ, ಕೃಷಿ ಕೂಲಿ ಮತ್ತು ದೈಹಿಕ ಶ್ರಮಕ್ಕೆ ಸಂಬಂಧಿಸಿದ ಬದುಕು ಬಹುಪಾಲು ಕೆಳಸ್ತರದ ಸ್ಥಾನವನ್ನು ಪಡೆಯುತ್ತದೆ. ಕವಯಿತ್ರಿ ಈ ಮೌಲ್ಯಕ್ರಮವನ್ನು ಸೆರಗಿನ ಮೂಲಕ ಮರುಪರಿಶೀಲಿಸುತ್ತಾರೆ. ಬದುಕನ್ನು ಉಳಿಸುವ ಶ್ರಮವೇ ಘನತೆಯ ಮೂಲ ಎಂಬ ಅರ್ಥ ಕವಿತೆಯ ರೂಪಕದಲ್ಲಿ ನೆಲೆಗೊಳ್ಳುತ್ತದೆ. ಹೀಗಾಗಿ ಸೆರಗಿನ ಗೌರವವು ಅದರ ಅಲಂಕಾರಿಕ ಗುಣದಿಂದ ಹುಟ್ಟುವುದಿಲ್ಲ. ಅದು ಹಸಿವು ನೀಗಿಸುವ, ದುಡಿಮೆಗೆ ನೆರವಾಗುವ ಮತ್ತು ಕುಟುಂಬದ ಬದುಕನ್ನು ಹೊತ್ತು ಸಾಗುವ ಸಾಮರ್ಥ್ಯದಿಂದ ರೂಪುಗೊಳ್ಳುತ್ತದೆ.
ಕವಿತೆಯ ಮುಂದಿನ ಸಾಲುಗಳು ಸೆರಗು ಮತ್ತು ಹಸಿವಿನ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುತ್ತವೆ.
ನನ್ನ ಹಸಿವನ್ನೇ ಗಂಟು ಕಟ್ಟಿಕೊಂಡು,
ನನ್ನ ಹೊಟ್ಟೆಗೆ ಕಾವಲಾಗುವ
ಮೈಸಮ್ಮನಂತೆ ನಿಂತುಕೊಳ್ಳುತ್ತದೆ.”
ಹಸಿವು ಇಲ್ಲಿ ವ್ಯಕ್ತಿಯ ದೈಹಿಕ ಅಗತ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಸೂಚಕವಾಗಿಯೂ ಕಾಣಿಸಿಕೊಳ್ಳುತ್ತದೆ. ಹಸಿವನ್ನು ಎದುರಿಸುವುದು ಆಹಾರವನ್ನು ಪಡೆಯುವ ಪ್ರಶ್ನೆಯಷ್ಟೇ ಅಲ್ಲ ಅದಕ್ಕೆ ಸಂಬಂಧಿಸಿದ ದುಡಿಮೆ, ಆದಾಯ, ಸಂಪನ್ಮೂಲಗಳ ಲಭ್ಯತೆ ಮತ್ತು ಕುಟುಂಬದ ನಿರ್ವಹಣೆಯ ಪ್ರಶ್ನೆಯೂ ಹೌದು. ಗ್ರಾಮೀಣ ಬಡ ಹೆಣ್ಣಿನ ಬದುಕಿನಲ್ಲಿ ಆಹಾರ ಸಂಪಾದಿಸುವುದು, ದೊರೆತ ಆಹಾರವನ್ನು ಉಳಿಸುವುದು ಮತ್ತು ಕುಟುಂಬದ ಅಗತ್ಯಗಳಿಗೆ ತಕ್ಕಂತೆ ಅದನ್ನು ಹಂಚುವುದು ದೈನಂದಿನ ಹೊಣೆಗಾರಿಕೆಗಳಾಗಿವೆ. ಸೆರಗು ಹಸಿವನ್ನು ಗಂಟು ಕಟ್ಟಿಕೊಳ್ಳುತ್ತದೆ ಎಂಬ ರೂಪಕವು ಈ ಹೊಣೆಗಾರಿಕೆಯ ಭೌತಿಕತೆಯನ್ನು ಕಾವ್ಯದಲ್ಲಿ ದೃಶ್ಯಗೊಳಿಸುತ್ತದೆ. ಸೆರಗನ್ನು ಮೈಸಮ್ಮನಿಗೆ ಹೋಲಿಸುವುದು ಜನಪದ ಸಾಂಸ್ಕೃತಿಕ ನೆನಪಿನೊಂದಿಗೆ ಸಂಬಂಧ ಹೊಂದಿದೆ. ಗ್ರಾಮೀಣ ಬದುಕಿನಲ್ಲಿ ಮೈಸಮ್ಮ ರಕ್ಷಣೆ ಮತ್ತು ನಂಬಿಕೆಯ ಸಂಕೇತವಾಗಿ ಕಾಣಿಸಿಕೊಳ್ಳುತ್ತಾಳೆ. ಕವಯಿತ್ರಿ ಈ ಜನಪದ ಸಂಕೇತವನ್ನು ಹೆಣ್ಣಿನ ದಿನನಿತ್ಯದ ಬದುಕಿನೊಂದಿಗೆ ಬೆಸೆಯುತ್ತಾರೆ. ಹಸಿವಿನ ಎದುರು ಕಾವಲು ನಿಲ್ಲುವ ಶಕ್ತಿ ದೂರದ ಅಮೂರ್ತ ಲೋಕದಲ್ಲಿ ನೆಲೆಸದೆ, ಹೆಣ್ಣಿನ ಬದುಕಿಗೆ ನಿಕಟವಾದ ಸೆರಗಿನಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈ ರೂಪಕದಲ್ಲಿ ಜನಪದ ನಂಬಿಕೆ, ಹೆಣ್ಣಿನ ಶ್ರಮ ಮತ್ತು ಬದುಕಿನ ವಾಸ್ತವ ಒಂದಾಗುತ್ತವೆ. ದಲಿತ ಮಹಿಳೆಯ ಸಾಂಸ್ಕೃತಿಕ ಅನುಭವವನ್ನು ಅದರದೇ ಆದ ನೆಲೆಯಿಂದ ಅರ್ಥೈಸುವ ಸಾಧ್ಯತೆಯೂ ಇಲ್ಲಿ ತೆರೆದುಕೊಳ್ಳುತ್ತದೆ.
ಕವಿತೆಯಲ್ಲಿ ಶ್ರಮದ ಚಿತ್ರಣ ಈ ಅನುಭವವನ್ನು ಮತ್ತಷ್ಟು ಗಾಢಗೊಳಿಸುತ್ತದೆ.
“ಕೂಲಿ ಕೆಲಸದಲ್ಲಿ ನಾನೇ ಬೆವರ ಕಾಲುವೆಯಾದಾಗ,
ಮಗುವಿನಂತೆ ನನ್ನ ಮೈಗೆ ಅಂಟಿಕೊಳ್ಳುತ್ತದೆ.”
‘ಬೆವರ ಕಾಲುವೆ’ ಎಂಬ ರೂಪಕ ಹೆಣ್ಣಿನ ದೈಹಿಕ ಶ್ರಮದ ನಿರಂತರತೆಯನ್ನು ಸೂಚಿಸುತ್ತದೆ. ಕಾಲುವೆ ನೀರನ್ನು ಹೊತ್ತು ಸಾಗುವಂತೆ ಹೆಣ್ಣಿನ ದೇಹ ಬೆವರನ್ನು ಹೊತ್ತು ಸಾಗುತ್ತದೆ. ಇಲ್ಲಿ ಬೆವರು ಉತ್ಪಾದನೆಯ ಪ್ರಕ್ರಿಯೆಯ ಗುರುತು. ಕೃಷಿ ಕೆಲಸದಲ್ಲಿ ಹೆಣ್ಣಿನ ದೇಹವು ಮಣ್ಣು, ಬಿಸಿಲು, ನೀರು ಮತ್ತು ಬೆಳೆಗಳೊಂದಿಗೆ ನೇರ ಸಂಬಂಧ ಹೊಂದುತ್ತದೆ. ಆಕೆಯ ದುಡಿಮೆಯಿಂದ ಕೃಷಿ ಉತ್ಪಾದನೆ ಸಾಧ್ಯವಾಗುತ್ತದೆ. ಆದರೂ ಈ ಶ್ರಮಕ್ಕೆ ದೊರೆಯುವ ಆರ್ಥಿಕ ಪ್ರತಿಫಲ ಮತ್ತು ಸಾಮಾಜಿಕ ಮಾನ್ಯತೆಗಳ ಪ್ರಶ್ನೆ ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ. ಕವಿತೆ ಹೆಣ್ಣಿನ ಶ್ರಮವನ್ನು ದೃಶ್ಯಗೊಳಿಸುವ ಮೂಲಕ ಉತ್ಪಾದನೆಯ ಹಿಂದೆ ಇರುವ ದೇಹಾಧಾರಿತ ಪರಿಶ್ರಮವನ್ನು ಮುಂಚೂಣಿಗೆ ತರುತ್ತದೆ. ಇಲ್ಲಿ ದಲಿತ ಸ್ತ್ರೀವಾದಿ ವಿಶ್ಲೇಷಣೆ ವರ್ಗಾಧಾರಿತ ಶ್ರಮದ ಪ್ರಶ್ನೆಯನ್ನು ಜಾತಿ ಮತ್ತು ಲಿಂಗದ ನೆಲೆಯೊಂದಿಗೆ ಸಂಯೋಜಿಸುತ್ತದೆ. ಕೂಲಿ ಕಾರ್ಮಿಕಳಾಗಿ ಹೊಲದಲ್ಲಿ ದುಡಿಯುವ ಹೆಣ್ಣಿನ ಅನುಭವವನ್ನು ಕೇವಲ ಆರ್ಥಿಕ ಶೋಷಣೆಯ ಚೌಕಟ್ಟಿನಲ್ಲಿ ಅರ್ಥೈಸಿದರೆ, ಅವಳ ಸಾಮಾಜಿಕ ಸ್ಥಾನಮಾನ ಮತ್ತು ಲಿಂಗಾಧಾರಿತ ಹೊಣೆಗಾರಿಕೆಗಳ ಪ್ರಭಾವ ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಅದೇ ರೀತಿ ಹೆಣ್ಣಿನ ಅನುಭವವನ್ನು ಪಿತೃಸತ್ತೆಯ ಪ್ರಶ್ನೆಗೆ ಮಾತ್ರ ಸೀಮಿತಗೊಳಿಸಿದರೆ, ಅವಳ ದುಡಿಮೆಯ ಸ್ವರೂಪ, ಕೂಲಿ ಮತ್ತು ಸಂಪನ್ಮೂಲಗಳ ಹಂಚಿಕೆಯ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತವೆ. ಜಾತಿ, ವರ್ಗ ಮತ್ತು ಲಿಂಗಗಳ ಪರಸ್ಪರ ಸಂಬಂಧದೊಳಗೆ ರೂಪುಗೊಳ್ಳುವ ಈ ಬದುಕನ್ನು ಸೆರಗಿನ ರೂಪಕ ಸಮಗ್ರವಾಗಿ ಹಿಡಿದಿಡುತ್ತದೆ.
ಸೆರಗು ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಸಾಗಣೆಯೊಂದಿಗೂ ಸಂಬಂಧ ಹೊಂದುತ್ತದೆ.
“ಗಡ್ಡೆ ಗೆಣಸುಗಳಿಗೆ, ಕಾಳು ಕಡ್ಡಿಗಳಿಗೆ,
ಕಿರಾಣಿ ಸಾಮಾನುಗಳಿಗೆ,
ಚುಕ್ಕೆಗಳ ಒಡಲಲ್ಲಿ ಬಚ್ಚಿಟ್ಟ ಚಂದಿರನಂತೆ
ನನ್ನ ತಲೆಯ ಮೇಲಿನ ಮೂಟೆಯಾಗಿ ಮಿನುಗುತ್ತದೆ.”
ಈ ಚಿತ್ರಣವು ಹೆಣ್ಣಿನ ಆರ್ಥಿಕ ನಿರ್ವಹಣೆಯ ಸೂಕ್ಷ್ಮ ಆಯಾಮಗಳನ್ನು ಅನಾವರಣಗೊಳಿಸುತ್ತದೆ. ದಿನವಿಡೀ ದುಡಿದು ಮನೆ ಸೇರುವಾಗ ದಾರಿ ಬಯಲುಗಳಲ್ಲಿ ಆಹಾರ ಉತ್ಪನ್ನಗಳನ್ನು ಹುಡುಕುವ, ಹೊಲ ಗದ್ದೆಗಳಲ್ಲಿ ದುಡಿಯುವ ನೆಲದಲ್ಲಿ ಹಾಗೂ ದುಡಿಮೆಯಿಂದ ದೊರೆತ ವಸ್ತುಗಳನ್ನು ಸಂಗ್ರಹಿಸುವುದು, ಸಾಗಿಸುವುದು ಮತ್ತು ಮನೆಯ ಅಗತ್ಯಗಳಿಗೆ ಹೊಂದಿಸುವುದು ಅವಳ ದೈನಂದಿನ ಜೀವನದ ಭಾಗ. ಸೆರಗು ಇಲ್ಲಿ ಶ್ರಮದ ಫಲವನ್ನು ಹೊತ್ತು ಸಾಗುವ ಪಾತ್ರ ವಹಿಸುತ್ತದೆ. ಚಂದಿರ ಮತ್ತು ನಕ್ಷತ್ರಗಳ ರೂಪಕವು ಈ ಸಾಮಾನ್ಯ ದೃಶ್ಯಕ್ಕೆ ಕಾವ್ಯಾತ್ಮಕ ವಿಶಾಲತೆಯನ್ನು ನೀಡುತ್ತದೆ. ಕೃಷಿ ಉತ್ಪನ್ನಗಳ ಮೂಟೆಯಲ್ಲಿಯೂ ಸೌಂದರ್ಯವಿದೆ ಎಂಬ ದೃಷ್ಟಿ, ಸೌಂದರ್ಯದ ಕಲ್ಪನೆಯನ್ನು ಅಲಂಕಾರ ಮತ್ತು ಶ್ರೀಮಂತಿಕೆಯ ಮಿತಿಯಿಂದ ಹೊರತರುತ್ತದೆ. ಬದುಕನ್ನು ಪೋಷಿಸುವ ದುಡಿಮೆಯಲ್ಲಿಯೇ ಸೌಂದರ್ಯವನ್ನು ಗುರುತಿಸುವ ಈ ನಿಲುವು ಕವಿತೆಯ ಸೌಂದರ್ಯಪ್ರಜ್ಞೆಯ ವೈಶಿಷ್ಟ್ಯವಾಗಿದೆ.
ಸೆರಗು ದೇಹದ ಆಯಾಸ, ಕಣ್ಣೀರು ಮತ್ತು ವಿಶ್ರಾಂತಿಯ ಅನುಭವಗಳಿಗೂ ಸಾಕ್ಷಿಯಾಗುತ್ತದೆ. ಹೊಲ ಮತ್ತು ಗದ್ದೆಗಳಲ್ಲಿ ದುಡಿದು ಸುಸ್ತಾದಾಗ ಅದು ಬಟ್ಟೆಯಾಗಿ ಆಸರೆಯಾಗುತ್ತದೆ. ದುಃಖದ ಸಂದರ್ಭದಲ್ಲಿ ಮಕ್ಕಳನ್ನು ಹತ್ತಿರಕ್ಕೆ ಸೆಳೆದು ಅಪ್ಪಿಕೊಳ್ಳುವ ಮಡಿಲಾಗುತ್ತದೆ. ಹೀಗೆ ಸೆರಗು ದುಡಿಮೆಯ ಸಾಧನವಾಗಿಯೂ ಭಾವನಾತ್ಮಕ ಆಸರೆಯಾಗಿಯೂ ಕಾಣಿಸಿಕೊಳ್ಳುತ್ತದೆ. ಈ ಎರಡೂ ಆಯಾಮಗಳು ಹೆಣ್ಣಿನ ಬದುಕಿನಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ. ದೈಹಿಕ ಶ್ರಮ ಮತ್ತು ಆರೈಕೆಯ ಶ್ರಮ ಒಂದೇ ದಿನಚರಿಯೊಳಗೆ ನಿರಂತರವಾಗಿ ಬೆಸೆದುಕೊಂಡಿರುತ್ತವೆ. ಕವಿತೆಯಲ್ಲಿನ ಕಣ್ಣೀರಿನ ಚಿತ್ರಣ ಈ ಸಂಬಂಧವನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತದೆ. ಇತರರ ದುಃಖವನ್ನು ಒರೆಸುವ, ಮಕ್ಕಳನ್ನು ಸಮಾಧಾನಪಡಿಸುವ ಮತ್ತು ಕುಟುಂಬದ ಅಗತ್ಯಗಳನ್ನು ನಿಭಾಯಿಸುವ ಅವಳೇ ತನ್ನ ದುಃಖವನ್ನು ಹೊತ್ತು ಸಾಗುತ್ತಾಳೆ. ಈ ಎಲ್ಲದಕ್ಕೂ ಜೊತೆಯಾಗಿ ನಿಲ್ಲುವುದು ಅವಳ ಸೆರಗು. ಈ ಚಿತ್ರಣದಲ್ಲಿ ಹೆಣ್ಣಿನ ಭಾವನಾತ್ಮಕ ಬದುಕು ಸಾಮಾಜಿಕ ಹೊಣೆಗಾರಿಕೆಗಳೊಂದಿಗೆ ಸಂಬಂಧ ಹೊಂದುತ್ತದೆ. ಆರೈಕೆಯನ್ನು ಹೆಣ್ಣಿನ ಸಹಜ ಗುಣವೆಂದು ಮಾತ್ರ ಗ್ರಹಿಸುವ ಬದಲು, ಅದರ ಹಿಂದೆ ಇರುವ ಸಮಯ, ಶ್ರಮ ಮತ್ತು ಭಾವನಾತ್ಮಕ ಹೊಣೆಗಾರಿಕೆಯನ್ನು ಗುರುತಿಸುವುದು ಮುಖ್ಯ. ದಲಿತ ಸ್ತ್ರೀವಾದಿ ದೃಷ್ಟಿಕೋನವು ಈ ಕಾಣದ ಶ್ರಮವನ್ನು ಸಾಮಾಜಿಕ ವಿಶ್ಲೇಷಣೆಯ ಭಾಗವಾಗಿಸುತ್ತದೆ.
ಉಮಾ ಚಕ್ರವರ್ತಿ ಅವರ Gendering Caste Through a Feminist Lens ಕೃತಿಯು ಜಾತಿ ವ್ಯವಸ್ಥೆ ಮತ್ತು ಪಿತೃಸತ್ತೆಯ ನಡುವಿನ ಸಂಬಂಧವನ್ನು ತಿಳಿಸುತ್ತದೆ. ಜಾತಿಯ ನಿರಂತರತೆಯಲ್ಲಿ ಹೆಣ್ಣಿನ ದೇಹ, ವಿವಾಹ, ಲೈಂಗಿಕತೆ ಮತ್ತು ಕುಟುಂಬದ ಮೇಲಿನ ಸಾಮಾಜಿಕ ನಿಯಂತ್ರಣ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಅವರ ಅಧ್ಯಯನದ ಮುಖ್ಯ ಆಯಾಮ. ಈ ಸೈದ್ಧಾಂತಿಕ ನೆಲೆಯಿಂದ ‘ಕೊಂಗು’ ಕವಿತೆಯನ್ನು ಓದಿದಾಗ, ಸೆರಗು ಕೇವಲ ರಕ್ಷಣೆ ಮತ್ತು ಆರೈಕೆಯ ವಸ್ತುವಾಗಿ ಉಳಿಯುವುದಿಲ್ಲ. ಅದು ಹೆಣ್ಣಿನ ದೇಹದ ಸುತ್ತ ರೂಪುಗೊಳ್ಳುವ ಸಾಮಾಜಿಕ ನಿಯಮಗಳು ಮತ್ತು ಅಧಿಕಾರ ಸಂಬಂಧಗಳನ್ನೂ ಸೂಚಿಸುತ್ತದೆ. ಹೆಣ್ಣಿನ ಉಡುಪಿನ ಅರ್ಥವನ್ನು ನಿರ್ಧರಿಸುವ ಸಾಮಾಜಿಕ ದೃಷ್ಟಿ ಮತ್ತು ತನ್ನ ಬದುಕಿನ ಅನುಭವದಿಂದ ಸೆರಗಿಗೆ ನೀಡುವ ಅರ್ಥ ಹೆಣ್ಣಿನ ದೃಷ್ಟಿ ಇಲ್ಲಿ ಮುಖಾಮುಖಿಯಾಗುತ್ತವೆ.

ಈ ಸಂಘರ್ಷವನ್ನು ಕವಯಿತ್ರಿ ಕುಟುಂಬದೊಳಗಿನ ಅಧಿಕಾರ ಸಂಬಂಧಗಳ ಮೂಲಕವೂ ವ್ಯಕ್ತಪಡಿಸುತ್ತಾರೆ.
“ಪತಿಯ ಕೋಪ ತಾಪಗಳಿಗೂ
ಕೈಯಲ್ಲಿನ ಬೆಣ್ಣೆಯ ಮುದ್ದೆಯಂತೆ
ನನಗಿಂತ ಮುಂಚೆಯೇ ಸಿಕ್ಕಿಬೀಳುತ್ತದೆ.”
ಈ ಸಾಲುಗಳಲ್ಲಿ ಸೆರಗು ಹೆಣ್ಣಿನ ದೇಹದೊಂದಿಗೆ ನಿಕಟವಾಗಿ ಸಂಬಂಧಿಸಿರುವುದರಿಂದ, ಕುಟುಂಬದೊಳಗಿನ ಕೋಪ ಮತ್ತು ಅಧಿಕಾರದ ಸಂದರ್ಭಗಳಲ್ಲಿಯೂ ಅದು ಮೊದಲಿಗೆ ಎದುರಾಗುವ ವಸ್ತುವಾಗುತ್ತದೆ. ಮುಂದಿನ ಸಾಲುಗಳಲ್ಲಿ ಕವಯಿತ್ರಿ ಈ ಅನುಭವವನ್ನು ಇನ್ನಷ್ಟು ವಿಸ್ತರಿಸುತ್ತಾರೆ.
“ಮನೆಯೊಳಗಾಗಲಿ, ಮನೆಯಾಚೆಯಾಗಲಿ,
ಬಂತವಾಗಲಿ, ದೌರ್ಜನ್ಯವಾಗಲಿ,
ಮೊದಲು ಸಿಲುಕುವುದು ನನ್ನ ಸೆರಗಿನ...”
ಈ ಚಿತ್ರಣವು ಹೆಣ್ಣಿನ ದೇಹದ ಮೇಲಿನ ಸಾಮಾಜಿಕ ನಿಯಂತ್ರಣದ ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತದೆ. ಸೆರಗು ಮಹಿಳೆಯ ಬದುಕಿಗೆ ಆಸರೆಯಾಗುವ ವಸ್ತುವಾಗಿದ್ದರೂ, ಮಹಿಳೆಯ ದೇಹ ಕುರಿತು ಸಮಾಜ ಹೊಂದಿರುವ ಅಧಿಕಾರದ ಕಲ್ಪನೆಗಳೊಂದಿಗೆ ಅದಕ್ಕೆ ಸಂಬಂಧವಿದೆ. ಉಡುಪು, ಗೌರವ ಮತ್ತು ಅವಳ ಸಾಮಾಜಿಕ ಸ್ಥಾನಮಾನಗಳ ನಡುವೆ ನಿರ್ಮಿಸಲಾದ ಸಂಬಂಧವನ್ನು ಈ ಸಾಲುಗಳು ಪ್ರಶ್ನಿಸುತ್ತವೆ. ಅವಳ ಘನತೆಯನ್ನು ಅವಳ ಉಡುಪಿನ ಆಧಾರದ ಮೇಲೆ ಅಳೆಯುವ ದೃಷ್ಟಿಗೆ ಬದಲಾಗಿ, ಅವಳ ಬದುಕಿನ ಅನುಭವ, ದುಡಿಮೆ ಮತ್ತು ಸ್ವಾಯತ್ತತೆಯನ್ನು ಗೌರವಿಸುವ ದೃಷ್ಟಿಯ ಅಗತ್ಯವನ್ನು ಕವಿತೆ ಸೂಚಿಸುತ್ತದೆ. ಶರ್ಮಿಳಾ ರೇಗೆ ಅವರ “Dalit Women Talk Differently” ಪ್ರಬಂಧವು ದಲಿತ ಮಹಿಳೆಯರ ಅನುಭವ ಮತ್ತು ಜ್ಞಾನವನ್ನು ಸ್ತ್ರೀವಾದಿ ಚಿಂತನೆಯ ಸ್ವತಂತ್ರ ನೆಲೆಯಾಗಿ ಪರಿಗಣಿಸುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಈ ದೃಷ್ಟಿಯಿಂದ ‘ಕೊಂಗು’ ಕವಿತೆಯ ಮಹತ್ವ, ದಲಿತ ಮಹಿಳೆಯ ಬದುಕನ್ನು ಹೊರಗಿನಿಂದ ವ್ಯಾಖ್ಯಾನಿಸುವ ಬದಲು ಅವಳದೇ ಅನುಭವವನ್ನು ವಿಶ್ಲೇಷಣೆಯ ಕೇಂದ್ರವಾಗಿಸುವುದರಲ್ಲಿ ನೆಲೆಸಿದೆ. ಇಲ್ಲಿ ಮಹಿಳೆಯ ದೇಹ, ಶ್ರಮ, ಭಾಷೆ ಮತ್ತು ಸಾಂಸ್ಕೃತಿಕ ನೆನಪುಗಳು ಜ್ಞಾನವನ್ನು ರೂಪಿಸುವ ಮೂಲಗಳಾಗಿವೆ. ಹೊಲದಲ್ಲಿ ದುಡಿಯುವ ದೇಹಕ್ಕೆ ಮಣ್ಣಿನ ಪರಿಚಯವಿದೆ, ಕುಟುಂಬದ ಅಗತ್ಯಗಳನ್ನು ನಿರ್ವಹಿಸುವ ಅವಳಿಗೆ ಸಂಪನ್ಮೂಲಗಳ ಮೌಲ್ಯದ ಅರಿವಿದೆ. ಮಕ್ಕಳನ್ನು ಆರೈಕೆ ಮಾಡುವ ಅನುಭವವು ಭಾವನಾತ್ಮಕ ಶ್ರಮದ ತಿಳಿವಳಿಕೆಯನ್ನು ನೀಡುತ್ತದೆ. ಈ ಅನುಭವಗಳು ವೈಯಕ್ತಿಕ ಬದುಕಿನ ಸಂಗತಿಗಳಾಗಿ ಉಳಿಯದೆ, ಸಾಮಾಜಿಕ ಸಂಬಂಧಗಳನ್ನು ಅರ್ಥೈಸುವ ಜ್ಞಾನವಾಗಿ ರೂಪುಗೊಳ್ಳುತ್ತವೆ.
ಕವಿತೆಯ ಮತ್ತೊಂದು ಗಮನಾರ್ಹ ಆಯಾಮ ಅದರ ಪ್ರಾದೇಶಿಕ ಭಾಷೆ. ತೆಲಂಗಾಣದ ಗ್ರಾಮೀಣ ತೆಲುಗಿನ ಪದಪ್ರಯೋಗ, ಕೃಷಿ ಬದುಕಿನ ಪರಿಚಿತ ವಸ್ತುಗಳು ಮತ್ತು ಜನಪದ ಸಂಸ್ಕೃತಿಯ ಸಂಕೇತಗಳು ಕವಿತೆಗೆ ಜೀವಂತಿಕೆಯನ್ನು ನೀಡುತ್ತವೆ. ಭಾಷೆಯ ಈ ರೂಪವು ಕವಿತೆಯ ವಿಷಯಕ್ಕೆ ಹೊರಗಿನಿಂದ ಸೇರಿಸಿದ ಅಲಂಕಾರವಲ್ಲ. ಅದು ಹೆಣ್ಣಿನ ಬದುಕಿನ ಅನುಭವವನ್ನು ರೂಪಿಸುವ ಸಾಂಸ್ಕೃತಿಕ ನೆಲೆ. ಪ್ರಾದೇಶಿಕ ಮಾತಿನ ಮೂಲಕ ಕವಯಿತ್ರಿ ಕೃಷಿ ಕಾರ್ಮಿಕ ಮಹಿಳೆಯ ಬದುಕನ್ನು ಅದರದೇ ಭಾಷಿಕ ಲಯದಲ್ಲಿ ದಾಖಲಿಸುತ್ತಾರೆ. ಇದರಿಂದ ಸಾಹಿತ್ಯಿಕ ಅಭಿವ್ಯಕ್ತಿಯ ಮಾನ್ಯತೆ ಕುರಿತು ಪ್ರಶ್ನೆಯೂ ಉದ್ಭವಿಸುತ್ತದೆ. ಯಾವ ಭಾಷೆಯನ್ನು ಸಾಹಿತ್ಯಕ್ಕೆ ಯೋಗ್ಯವೆಂದು ಪರಿಗಣಿಸಲಾಗುತ್ತದೆ, ಯಾರ ಮಾತು ಸಾಹಿತ್ಯದ ಭಾಷೆಯಾಗುತ್ತದೆ ಮತ್ತು ಯಾವ ಅನುಭವಗಳು ಕಾವ್ಯದ ಕೇಂದ್ರಕ್ಕೆ ಬರುತ್ತವೆ ಎಂಬ ಪ್ರಶ್ನೆಗಳು ಭಾಷೆಯ ರಾಜಕಾರಣದೊಂದಿಗೆ ಸಂಬಂಧ ಹೊಂದಿವೆ. ‘ಕೊಂಗು’ ಈ ರಾಜಕಾರಣದೊಳಗೆ ಪ್ರಾದೇಶಿಕ ಮಹಿಳಾ ಅನುಭವಕ್ಕೆ ಸಾಹಿತ್ಯಿಕ ಸ್ಥಾನ ನೀಡುತ್ತದೆ.
ಕವಿತೆಯ ಕೊನೆಯ ಭಾಗದಲ್ಲಿ ಸೆರಗು ಕೃಷಿ ದುಡಿಮೆಯೊಂದಿಗೆ ಸಂಪೂರ್ಣವಾಗಿ ಬೆಸೆದುಕೊಳ್ಳುತ್ತದೆ.
“ನನ್ನ ಸೆರಗಿನ ಪಲ್ಲು
ಸೊಂಟಕ್ಕೆ ನಾಗರದಂತೆ ಸುತ್ತಿಕೊಂಡಾಗಲೇ
ನಾಟಿ, ಕೊಯ್ಲು, ಕಳೆ ಕೀಳುವ, ಕಣದುಡಿಮೆ,
ಕೆಲಸಗಳೂ ಹಾಡುಗಳೂ ಜೀವ ಪಡೆಯುತ್ತವೆ.”
ಸೆರಗನ್ನು ಸೊಂಟಕ್ಕೆ ಬಿಗಿದುಕೊಂಡು ಕೃಷಿ ಕೆಲಸಕ್ಕೆ ದೇಹವನ್ನು ಸಿದ್ಧಗೊಳಿಸುವುದು ದೈನಂದಿನ ಕ್ರಮ. ಈ ಸರಳ ಕ್ರಿಯೆಗೆ ಕವಯಿತ್ರಿ ಉತ್ಪಾದನೆ, ಚಲನೆ ಮತ್ತು ಸೃಜನಶೀಲತೆಯ ಅರ್ಥ ನೀಡುತ್ತಾರೆ. ನಾಟಿ, ಕೊಯ್ಲು, ಕಳೆ ಕೀಳುವಿಕೆ ಮತ್ತು ಕಣದ ಕೆಲಸಗಳು ಕೃಷಿಯ ವಿವಿಧ ಹಂತಗಳಾಗಿವೆ. ಈ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯ ದೈಹಿಕ ಶ್ರಮ ಅಡಕವಾಗಿದೆ. ಕೆಲಸಗಳೊಂದಿಗೆ ಹಾಡುಗಳನ್ನೂ ಉಲ್ಲೇಖಿಸುವುದು ಗಮನಾರ್ಹ. ಶ್ರಮ ಮತ್ತು ಸಂಸ್ಕೃತಿ ಇಲ್ಲಿ ಪರಸ್ಪರ ಸಂಬಂಧ ಹೊಂದಿವೆ. ದುಡಿಮೆಯ ನಡುವೆ ಹಾಡು ಹುಟ್ಟುತ್ತದೆ. ಹಾಡಿನ ಮೂಲಕ ದುಡಿಮೆಗೆ ಲಯ, ನೆನಪು ಮತ್ತು ಸಮುದಾಯದ ಅನುಭವ ಸೇರುತ್ತವೆ. ಇಲ್ಲಿ ಕವಿತೆ ಮಹಿಳೆಯನ್ನು ದುಡಿಮೆಯ ಬಲಿಪಶುವಾಗಿ ಚಿತ್ರಿಸುವುದಿಲ್ಲ. ಅವಳು ಕೆಲಸ ಮಾಡುವವಳು, ಕುಟುಂಬವನ್ನು ನಿರ್ವಹಿಸುವವಳು, ಸಾಂಸ್ಕೃತಿಕ ನೆನಪುಗಳನ್ನು ಹೊತ್ತವಳು ಮತ್ತು ತನ್ನ ಬದುಕಿನ ಅರ್ಥವನ್ನು ರೂಪಿಸುವವಳು. ಆಕೆಯ ಅನುಭವದಲ್ಲಿ ನೋವು ಮತ್ತು ಆಯಾಸಗಳ ಜೊತೆಗೆ ಕೌಶಲ್ಯ, ಜ್ಞಾನ, ಸೃಜನಶೀಲತೆ ಮತ್ತು ಸ್ವಾಭಿಮಾನವೂ ಇವೆ. ದಲಿತ ಸ್ತ್ರೀವಾದಿ ಓದು ಈ ಎಲ್ಲ ಆಯಾಮಗಳನ್ನು ಒಟ್ಟಾಗಿ ಗುರುತಿಸುವ ಮೂಲಕ ಮಹಿಳೆಯ ಬದುಕನ್ನು ಏಕಮುಖ ಚಿತ್ರಣದಿಂದ ಹೊರತರುತ್ತದೆ.
ಕವಿತೆಯ ಅಂತ್ಯದಲ್ಲಿ ಕವಯಿತ್ರಿ ಸೆರಗನ್ನು ಬದುಕಿನ ಹಾದಿಯುದ್ದಕ್ಕೂ ಜೊತೆಯಾಗಿ ಬಂದ ಸಂಗಾತಿಯಾಗಿ ಕಾಣಿಸುತ್ತಾರೆ. ಕೆಲಸ, ಹಾಡು, ಆಪತ್ತು ಮತ್ತು ಸಂಪತ್ತು ಬದುಕಿನ ವಿವಿಧ ಸಂದರ್ಭಗಳಲ್ಲಿಯೂ ಸೆರಗು ಮಹಿಳೆಯೊಂದಿಗೆ ಬೆಸೆದುಕೊಂಡಿದೆ. ಮಣ್ಣಿನ ಪಸೆ ಅದರ ಮೇಲೆ ಅಂಟಿಕೊಳ್ಳುತ್ತದೆ ಎಂಬ ಚಿತ್ರಣ, ದುಡಿಮೆಯ ಗುರುತುಗಳನ್ನು ದೇಹ ಮತ್ತು ವಸ್ತುವಿನ ಮೇಲೆ ಉಳಿಯುವ ಅನುಭವಗಳಾಗಿ ತೋರಿಸುತ್ತದೆ. ಈ ಮಣ್ಣಿನ ಗುರುತುಗಳು ಬದುಕಿನ ಹಾದಿಯಲ್ಲಿ ಸಂಗ್ರಹವಾದ ಅನುಭವಗಳಾಗಿ ರೂಪಿಸುತ್ತದೆ.
ಅದೇ ಸಂದರ್ಭದಲ್ಲಿ ಕವಯಿತ್ರಿ ಒಂದು ನಿರ್ಣಾಯಕ ಪ್ರಶ್ನೆಯನ್ನು ಮುಂದಿಡುತ್ತಾರೆ:
“ನನ್ನ ಮಣ್ಣಿನ ಸೆರಗು ದುಡಿಮೆಯಲ್ಲಿ, ಹಾಡಿನಲ್ಲಿ, ಆಪತ್ತಿನಲ್ಲಿ, ಸಂಪತ್ತಿನಲ್ಲಿ,
ನನ್ನ ಕಾಲಿಗೆ ಅಂಟಿದ ಮಣ್ಣಿನ ಕೊಳೆಯಂತೆ
ನನಗಂಟಿಕೊಂಡು ನನ್ನ ಬದುಕಿನ ಹಾದಿಯುದ್ದಕ್ಕೂ ನನ್ನೊಂದಿಗೆ ನಡೆದ
ನನ್ನ ಹರಿದ ಸೆರಗಿನ ಪಲ್ಲು..
ಎದೆಯ ಮೇಲೆ ನೆಮ್ಮದಿಯಾಗಿ ಒರಗುವ ಗಳಿಗೆ ಯಾವುದು?”
ಈ ಸಾಲುಗಳಲ್ಲಿ ತನ್ನ ಕಷ್ಟ ಸುಖಗಳ ಒಡನಾಡಿಯಾದ, ಹರಿದ ತನ್ನ ಮಣ್ಣಿನ ಸೆರಗಿನ (ಬಡತನ ಅಥವಾ ಕಟ್ಟಪಟ್ಟು ದುಡಿಯುವ ಬದುಕಿನ ಸಂಕೇತ) ಜೊತೆಗಿನ ಒಡನಾಟವನ್ನು ನೆನೆಯುತ್ತಾ, ಅದು ತನ್ನ ಎದೆಗೆ ಆಸರೆಯಾಗುವ ಆ ಸುಂದರ ಕ್ಷಣ ಯಾವುದೆಂದು ಭಾವನಾತ್ಮಕವಾಗಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯು ಕವಿತೆಯ ವೈಚಾರಿಕ ಕೇಂದ್ರವನ್ನು ಸ್ಪಷ್ಟಪಡಿಸುತ್ತದೆ. ಇತರರ ಬದುಕಿಗೆ ಆಸರೆಯಾಗುವ ಮಹಿಳೆಗೆ ತನ್ನದೇ ಬದುಕಿನಲ್ಲಿ ವಿಶ್ರಾಂತಿ ಮತ್ತು ಆರೈಕೆ ದೊರೆಯುವ ಅವಕಾಶ ಯಾವಾಗ ಎಂಬುದು ಇದರ ಮೂಲ ಆಶಯ. ಮಹಿಳೆಯ ಶ್ರಮದ ಸಾಮಾಜಿಕ ಮೌಲ್ಯವನ್ನು ಗುರುತಿಸುವುದರ ಜೊತೆಗೆ, ಆ ಶ್ರಮವನ್ನು ಹೊರುವ ಮಹಿಳೆಯ ಬದುಕಿನ ಗುಣಮಟ್ಟವನ್ನೂ ಪ್ರಶ್ನಿಸುವ ದೃಷ್ಟಿ ಇಲ್ಲಿ ವ್ಯಕ್ತವಾಗುತ್ತದೆ. ಮಹಿಳೆಯ ಕೊಡುಗೆಯನ್ನು ಕೊಂಡಾಡುವುದಷ್ಟೇ ಸಾಕಾಗುವುದಿಲ್ಲ, ಆಕೆಯ ಸಮಯ, ದೇಹ, ವಿಶ್ರಾಂತಿ ಮತ್ತು ಸ್ವಂತ ಬದುಕಿನ ಹಕ್ಕುಗಳನ್ನೂ ಸಾಮಾಜಿಕ ನ್ಯಾಯದ ಚರ್ಚೆಯ ಭಾಗವಾಗಿಸಬೇಕು.
ಕವಿತೆಯ ಅಂತಿಮ ಸಾಲುಗಳು ಈ ಸ್ವಾಭಿಮಾನದ ಧ್ವನಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸುತ್ತವೆ.
“ದುಡಿಮೆಯ ಭಾರ ಹೊತ್ತು ಸಾಗುವ ನನ್ನ ಬೆವರ ಸೆರಗು
ಎದೆಯ ಮೇಲೆ ಕಾವಲು ಕಾಯುವ ಹರಕು ಬಟ್ಟೆಯ ತುಂಡಲ್ಲ,
ಎದೆಯ ಮೇಲೆ ಬಂದು ಕೂರುವ ಕಲ್ಲುಬಂಡೆಯಲ್ಲ.”
ಈ ಸಾಲುಗಳಲ್ಲಿ ಸೆರಗಿನ ಅರ್ಥವನ್ನು ಕವಯಿತ್ರಿ ಎರಡು ಸಾಮಾಜಿಕ ದೃಷ್ಟಿಗಳ ನಡುವೆ ಸ್ಥಾಪಿಸುತ್ತಾರೆ. ಒಂದು ದೃಷ್ಟಿ ಅದನ್ನು ಹರಕು ಬಟ್ಟೆಯೆಂದು ಅಥವಾ ಭಾರವೆಂದು ಕಾಣುತ್ತದೆ. ಇನ್ನೊಂದು ದೃಷ್ಟಿ ಅದರೊಳಗೆ ದುಡಿಮೆ, ಆರೈಕೆ ಮತ್ತು ಬದುಕಿನ ಅನುಭವವನ್ನು ಗುರುತಿಸುತ್ತದೆ. ಸೆರಗು ಅವಳ ಬದುಕಿನೊಂದಿಗೆ ಹೊಂದಿರುವ ಸಂಬಂಧವನ್ನು ಅರಿಯದೆ ಅದರ ಮೌಲ್ಯವನ್ನು ನಿರ್ಧರಿಸುವ ಸಾಮಾಜಿಕ ಮನೋಭಾವವನ್ನು ಕವಿತೆ ಪ್ರಶ್ನಿಸುತ್ತದೆ. ಮಹಿಳೆಯ ಅನುಭವಕ್ಕೆ ಅರ್ಥ ನೀಡುವ ಅಧಿಕಾರ ಮಹಿಳೆಯದೇ ಆಗಿರಬೇಕು ಎಂಬ ಸ್ವಾಭಿಮಾನದ ನಿಲುವು ಇಲ್ಲಿ ರೂಪುಗೊಳ್ಳುತ್ತದೆ.
“ಬೀದಿ ಬದಿಯ ನಿಂದೆಗೆ
ನನ್ನ ಬದುಕನ್ನು ಹೇಗೆ ಬಲಿಕೊಡಲಿ?
ಕಿಡಿ ಹೊತ್ತಿದ ಬೆಂಕಿಯಂತೆ
ನಾನಿನ್ನು ಎಲ್ಲಿಗೆ ಹೋಗಲಿ?”
ಸಾರ್ವಜನಿಕ ಅವಹೇಳನದ ಎದುರು ತನ್ನ ಬದುಕನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಸಾಮಾಜಿಕ ತೀರ್ಪಿನ ವಿರುದ್ಧ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ಹೋರಾಟ ವ್ಯಕ್ತವಾಗುತ್ತದೆ. ಕವಿತೆಯ ಕೊನೆಯ ಧ್ವನಿಯಲ್ಲಿ ವೈಯಕ್ತಿಕ ನೋವು ಸಾಮಾಜಿಕ ಪ್ರಶ್ನೆಯಾಗಿ ವಿಸ್ತರಿಸುತ್ತದೆ. ಮಹಿಳೆಯ ಬದುಕಿನ ಮೌಲ್ಯವನ್ನು ಅವಳ ಉಡುಪು, ಸಾಮಾಜಿಕ ಸ್ಥಾನಮಾನ ಅಥವಾ ಇತರರ ತೀರ್ಪುಗಳಿಂದ ನಿರ್ಧರಿಸುವ ಮನೋಭಾವಕ್ಕೆ ಬದಲಾಗಿ, ಅವಳ ದುಡಿಮೆ ಮತ್ತು ಅನುಭವದ ಘನತೆಯನ್ನು ಗುರುತಿಸುವ ದೃಷ್ಟಿಯ ಅಗತ್ಯ ಇಲ್ಲಿ ಒತ್ತಿಹೇಳಲ್ಪಡುತ್ತದೆ. ಒಟ್ಟಿನಲ್ಲಿ, ‘ಕೊಂಗು’ ಕವಿತೆಯ ದಲಿತ ಸ್ತ್ರೀವಾದಿ ಮಹತ್ವವು ಸೆರಗನ್ನು ಮಹಿಳೆಯ ಬದುಕಿನ ಸಮಗ್ರ ರೂಪಕವನ್ನಾಗಿ ರೂಪಿಸುವುದರಲ್ಲಿ ನೆಲೆಸಿದೆ. ಹಸಿವು, ಕೃಷಿ ಶ್ರಮ, ಮನೆಯ ಆರೈಕೆ, ದೈಹಿಕ ಆಯಾಸ, ಭಾಷಿಕ ಅಸ್ಮಿತೆ ಮತ್ತು ಸಾಮಾಜಿಕ ಅಧಿಕಾರ ಇವೆಲ್ಲವೂ ಈ ರೂಪಕದೊಳಗೆ ಪರಸ್ಪರ ಸಂಬಂಧ ಹೊಂದುತ್ತವೆ. ಕವಯಿತ್ರಿ ದಲಿತ ಹೆಣ್ಣಿನ ಬದುಕನ್ನು ಹೊರಗಿನಿಂದ ವ್ಯಾಖ್ಯಾನಿಸುವ ದೃಷ್ಟಿಗೆ ಬದಲಾಗಿ, ಅವಳದೇ ಅನುಭವವನ್ನು ಜ್ಞಾನ ಮತ್ತು ಸಾಹಿತ್ಯದ ಕೇಂದ್ರವಾಗಿಸುತ್ತಾರೆ. ಇದರಿಂದ ಸೆರಗು ಒಂದು ವಸ್ತುವಿನ ಮಿತಿಯನ್ನು ದಾಟಿ, ಶ್ರಮದ ಇತಿಹಾಸ, ದೇಹದ ನೆನಪು ಮತ್ತು ಸ್ವಾಭಿಮಾನದ ಸಂಕೇತವಾಗಿ ರೂಪುಗೊಳ್ಳುತ್ತದೆ.
ಈ ಕವಿತೆಯ ಅಂತಿಮ ಮಹತ್ವ ಸೆರಗನ್ನು ಪವಿತ್ರಗೊಳಿಸುವುದರಲ್ಲಿ ಅಥವಾ ಹೆಣ್ಣಿನ ಸಹನಶೀಲತೆಯನ್ನು ಕೊಂಡಾಡುವುದರಲ್ಲಿ ನೆಲೆಸಿಲ್ಲ, ಸೆರಗಿನೊಂದಿಗೆ ಬೆಸೆದುಕೊಂಡ ದುಡಿಯುವ ಹೆಣ್ಣಿನ ಶ್ರಮಜೀವನಲ್ಲಿದೆ ಎಂಬುದು ತಿಳಿಸುತ್ತದೆ. ಹೆಣ್ಣಿನ ದುಡಿಮೆಗೆ ಸಾಮಾಜಿಕ ಮಾನ್ಯತೆ, ಅವಳ ಅನುಭವಕ್ಕೆ ಜ್ಞಾನದ ಸ್ಥಾನಮಾನ ಮತ್ತು ಅವಳ ಬದುಕಿಗೆ ಘನತೆಯ ಹಕ್ಕು ದೊರೆಯಬೇಕೆಂಬ ಪ್ರಶ್ನೆಯನ್ನು ಅದು ಮುನ್ನೆಲೆಗೆ ತರುತ್ತದೆ. ಶರ್ಮಿಳಾ ರೇಗೆ ಅವರ ದಲಿತ ಸ್ತ್ರೀವಾದಿ ನಿಲುವು ಮತ್ತು ಉಮಾ ಚಕ್ರವರ್ತಿ ಅವರ ಜಾತಿ-ಪಿತೃಸತ್ತೆಯ ವಿಶ್ಲೇಷಣೆಯೊಂದಿಗೆ ಸಂವಾದಕ್ಕೆ ತರುವುದಾದರೆ, ‘ಕೊಂಗು’ ಕವಿತೆ ಅನುಭವ, ದೇಹ ಮತ್ತು ಶ್ರಮಗಳ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಓದುವ ಸಾಹಿತ್ಯಿಕ ವಿಧಾನವನ್ನು ಒದಗಿಸುತ್ತದೆ. ಸೆರಗಿನೊಳಗೆ ಸಂಗ್ರಹವಾಗಿರುವುದು ದಲಿತ ಮಹಿಳೆಯ ದಿನನಿತ್ಯದ ಬದುಕಿನ ಜಾತಿ, ವರ್ಗ ಮತ್ತು ಲಿಂಗ ಸಂಬಂಧಗಳ ನಡುವೆ ತನ್ನ ಘನತೆಯನ್ನು ರೂಪಿಸಿಕೊಳ್ಳುವ ದುಡಿಯುವ ಇತಿಹಾಸ.

ಲೇಖಕರು ಬೋಧನೆ, ಸಂಶೋಧನೆ, ಶಾಸನಗಳ ಅಧ್ಯಯನ, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭಾವಂತರು. ಮಹಿಳಾ ಸಾಹಿತ್ಯ, ಪರಂಪರೆ, ಸಾಮಾಜಿಕ ಚೌಕಟ್ಟು ಮತ್ತು ಸ್ತ್ರೀ ಅಸ್ತಿತ್ವದ ಪ್ರಶ್ನೆಗಳ ಕುರಿತ ಅಧ್ಯಯನ ಇವರ ಆಸಕ್ತಿ. ವಿಶ್ವಮಾನವ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದಾರೆ. ‘ಕಂಬಾಲ್ಪಲ್ಲಿ ಕಿಚ್ಚು’, ‘ಕ್ರಾಂತೀಯ ರೆಕ್ಕೆ ಬಿರಿದಾಗ’, ‘ಸಂಯುಕ್ತ ನಿಧಿ’, ‘ಕದಳಿ ಕಸ್ತೂರಿ’, ‘ಸಂಪ್ರದಾಯ ಮತ್ತು ವಿಮೋಚನೆ’, ‘ಸರಸ ಸಾಹಿತ್ಯ ವರದೇವತೆ’, ‘ಬೀದಿ ಬದಿ ವ್ಯಾಪಾರ ಕ್ಷೇತ್ರದಲ್ಲಿ ಮಹಿಳೆ’ ಮೊದಲದವು ಇವರ ಪ್ರಕಟಿತ ಕೃತಿಗಳು.

ಸೆರಗು …
ಅದ್ಬುತ ಅರ್ಥವ್ಯಾಪ್ತಿಯ ಕವಿತೆ.
ದುಡಿದು ಬದುಕುವ ಶ್ರಮಜೀವಿ ಹೆಣ್ಮಕ್ಕಳ ಜೀವ ಕಾವ್ಯ ಇಲ್ಲಿ ತೆರೆದುಕೊಂಡೊದೆ.
ಪ್ರತಿ ಶಬ್ದವೂ ನೋವಿನ ಹಾಡಾಗಿ,
ನೋವಲ್ಲೂ ಕನಸು ಕೆಚ್ಚು ಕಾಣುವ ಜೀವಪರ ನಿಲುವಿನ ಬದುಕು ಸೆರಗಿನೊಂದಿಗೆ ಹರಡಿದೆ.
ವಿಶ್ಲೇಷಣೆ ಸಹ ಅರಿವನ್ನು ವಿಸ್ತರಿಸುತ್ತದೆ.