ಕೃಷಿ ಮತ್ತು ಪ್ರೇಮದ ಬಿಕ್ಕಟ್ಟುಗಳ ನಡುವೆ ನರಳುವ ‘ಪ್ರೇಮದ ಊರಲಿ’

“ಪ್ರೇಕ್ಷಕರಿಗೆ ನಿಮ್ಮ ವಿಚಾರವನ್ನು ಹೇಳಲು ಎಂದಿಗೂ ಪ್ರಯತ್ನಿಸಬೇಡಿ; ಅದು ಕೃತಜ್ಞತೆಯಿಲ್ಲದ ಅರ್ಥಹೀನ ಕೆಲಸ. ಜೀವನವನ್ನು ತೋರಿಸಿ; ಅದನ್ನು ಅರ್ಥಮಾಡಿಕೊಳ್ಳುವ ಮಾರ್ಗವನ್ನು ಪ್ರೇಕ್ಷಕರು ತಮ್ಮೊಳಗೇ ಕಂಡುಕೊಳ್ಳುತ್ತಾರೆ” ರಷ್ಯಾದ ಖ್ಯಾತ ಸಿನಿಮಾ ನಿರ್ದೇಶಕ ಆಂಡ್ಯ್ರೇ ತಾರ್ಕೋವ್ಸ್ಕಿ ಒಂದು ಕಡೆ ಸಿನಿಮಾದ ಉದ್ದೇಶದ ಕುರಿತು ಹೀಗೆ ಹೇಳ್ತಾರೆ. ಇದರರ್ಥ, ನಿರ್ದೇಶಕ ಸಿನಿಮಾವನ್ನು ಬಳಸಿಕೊಂಡು ಉಪದೇಶ ನೀಡಲು ಮುಂದಾಗಬಾರದು. ಅಂದರೆ ತಾನು ಯಾವ ವಿಚಾರವನ್ನು ಹೇಳಲು ಬಯಸುತ್ತಿರುವನೋ, ಆ ವಿಚಾರವನ್ನು ಪ್ರೇಕ್ಷಕರು ಗ್ರಹಿಸಿ ಮನವರಿಕೆ ಮಾಡಿಕೊಳ್ಳುವಂತೆ ಕಥೆಯನ್ನೂ, ದೃಶ್ಯಗಳನ್ನೂ, ಪಾತ್ರಗಳನ್ನೂ ಬದುಕಿಸುತ್ತಾ ಸಾಗಬೇಕು. ಇತ್ತೀಚಿಗೆ ಅಚ್ಚರಿಯ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಕುರಿತು ಬರೆಯಬೇಕೆನ್ನುವಾಗ ಆಂಡ್ಯ್ರೇ ಮಾತುಗಳು ವಿಮರ್ಶೆಯ ಚೌಕಟ್ಟುಗಳಾಗಿ ನಿಲ್ಲುತ್ತಿವೆ.

ಈ ಸಿನಿಮಾ ಗೆದ್ದಾಗಿದೆ. ಬಾಕ್ಸ್‌ ಆಫೀಸ್‌ ಗಳಿಕೆಯೇ ಗೆಲುವಿನ ಮಾನದಂಡವಾಗಿರುವ ಕಾಲದಲ್ಲಿ, ಕೆಲವೇ ಕೋಟಿ ಹೂಡಿಕೆಯಲ್ಲಿ 50 ಕೋಟಿಗೂ ಹೆಚ್ಚು ಗಳಿಸಿರುವುದು ಅದರ ಯಶಸ್ಸನ್ನು ಖಾತ್ರಿಪಡಿಸುತ್ತದೆ. ಅಬ್ಬರದ ಪ್ರಚಾರ, ಸ್ಟಾರ್‌ ನಟರ ಇಮೇಜು, ಪ್ಯಾನ್‌ ಇಂಡಿಯಾ ಪರಿಕಲ್ಪನೆ ಯಾವುದೂ ಇಲ್ಲದೆ ಜನರನ್ನು ಕುಟುಂಬ ಸಮೇತರಾಗಿ ಥಿಯೇಟರಿಗೆ ಕರೆತಂದಿರುವ ಸಿನಿಮಾ ತಂಡವನ್ನು ಮೆಚ್ಚಲೇಬೇಕು.

ಆದರೆ ಒಂದು ಸಿನಿಮಾ ಎಂದರೆ ಹೂಡಿದ ಹಣ, ಗಳಿಸಿದ ಲಾಭಗಳ ನಡುವಿನ ಬ್ಯಾಲೆನ್ಸ್‌ಶೀಟ್‌ ಮಾತ್ರ ಅಲ್ಲ. ಪ್ರೇಕ್ಷಕರು ತಮ್ಮೊಳಗೆ ಏನನ್ನು ಕಂಡುಕೊಳ್ಳುವಂತೆ ಪ್ರೇರೇಪಿಸುತ್ತದೆ ಎನ್ನುವುದು ತುಂಬಾ ಮುಖ್ಯ. ಆಂಡ್ಯ್ರೇ ತಾರ್ಕೋವ್ಸ್ಕಿಯ ಮಾತುಗಳು ಮುಖ್ಯವಾಗುವುದೇ ಈ ಆಯಾಮದಿಂದ. ಯಾಕೆಂದರೆ ಸಿನಿಮಾದ ಕಥೆ, ಸಂಭಾಷಣೆಗಳು, ದೃಶ್ಯಗಳ ಕಟ್ಟುವಿಕೆ ನೇರವಾಗಿ ಏನನ್ನು ಧ್ವನಿಸುತ್ತವೆ ಎಂಬುದಕ್ಕಿಂತ ಸಿನಿಮಾ ಸುಪ್ತವಾಗಿ ಯಾವ ಕಂಡುಕೊಳ್ಳುವಿಕೆಯತ್ತ ಪ್ರೇಕ್ಷಕರನ್ನು ಮುಖಮಾಡಿ ನಿಲ್ಲಿಸುತ್ತದೆ ಎಂಬುದು ಪ್ರಧಾನವಾಗಬೇಕು. ಸಿನಿಮಾ ತಂತ್ರಜ್ಞನ ಮುಂದಿರುವ ಸವಾಲು ಇದು. ತಾನು ಹೇಳಬೇಕೆಂದಿರುವ ವಿಚಾರವನ್ನು ಹೇಳದೆಯೇ ಪ್ರೇಕ್ಷಕನಿಗೆ ಮನವರಿಕೆ ಮಾಡಿಕೊಡುವುದು. ಇದನ್ನೇ ಖ್ಯಾತ ಸಿನಿಮಾ ನಿರ್ದೇಶಕ ಸತ್ಯಜಿತ್‌ ರೇ, “ಪ್ರೇಕ್ಷಕನ ಗಮನಕ್ಕೆ ಬಾರದಂತೆ ದೃಶ್ಯ ತಾಂತ್ರಿಕತೆಯನ್ನು ಸಂಯೋಜಿಸುವುದೇ ಅತಿದೊಡ್ಡ ಸಿನಿಮಾ ತಂತ್ರ” ಎನ್ನುತ್ತಾರೆ. ಅಂದರೆ, ಪರದೆಯ ಮೇಲೆ ಚಲಿಸುವ ದೃಶ್ಯಗಳು ನಮಗೆ ಬೋಧಿಸುತ್ತಾ ಕೂರಬಾರದು, ಅವುಗಳ ಪಾಡಿಗೆ ಅವು ಚಲಿಸಿದಂತೆ ನೋಡುಗ ತನ್ನ ಒಳನೋಟದಿಂದ ಆಶಯವನ್ನು ಗ್ರಹಿಸಬೇಕು. ನೋಡುಗನ ಗ್ರಹಿಕೆಯನ್ನು ಹಿಗ್ಗಿಸುವಂತೆ ಮಾಡುವುದು, ರಂಜನೆಯ ಹೊರತಾಗಿ ಸಿನಿಮಾ ಸಾಧಿಸಬೇಕಾದ ಮತ್ತೊಂದು ಗುರಿ. ಯಶಸ್ವಿ ಚಿತ್ರವಾಗಿಯೂ ‘ಪ್ರೇಮದ ಊರಲಿ’ ಸಿನಿಮಾ ಇಂಥಾ ವಿಚಾರದಲ್ಲಿ ಒಂದಷ್ಟು ಕೊರತೆಗಳ ಕಾರಣಕ್ಕೆ ನರಳಿದಂತೆ ಕಂಡುಬರುತ್ತೆ.

ನಿರ್ದೇಶಕ ಮನೋಜ್ ಕುಮಾರ್ ಸೆನ್ಸಿಬಲ್‌ ಅನ್ನಬಹುದಾದ ಕಥೆಯನ್ನು ಸಾಧ್ಯವಾದಷ್ಟು ಸೆನ್ಸಿಬಲ್‌ ಆಗಿ ಕಟ್ಟಿಕೊಡುವ ಪ್ರಯತ್ನ ಮಾಡಿರುವುದೇನೊ ನಿಜ. ಆದರೆ ಆದರ್ಶ ಎನ್ನುವುದು ಯಾವತ್ತೂ ಏಕಪಥದಲ್ಲಿ ಸಾಗುವಂತದ್ದಲ್ಲ. ಮುಂದಕ್ಕೆ ಚಲಿಸುತ್ತಲೇ, ಇಕ್ಕೆಲಗಳನ್ನು ಆವರಿಸಿಕೊಂಡು ಕದಲುವಂತದ್ದು. ಈ ಸಿನಿಮಾದಲ್ಲಿ ನಿರ್ದೇಶಕರು ತಾವು ಅಂದುಕೊಂಡ ಆಶಯದ ಮೇಲೆ ಒತ್ತುಕೊಡುವ ಧಾವಂತದಲ್ಲಿ; ಆ ಆಶಯದ ಇಕ್ಕೆಲಗಳ ವಿಸ್ತಾರಗಳನ್ನು ನಿರ್ಲಕ್ಷಿಸಿ, ಉಪದೇಶದ ರೂಪದಲ್ಲಿ ಹೇಳುತ್ತಾ ಸಾಗಿಬಿಡುತ್ತಾರೆ. ನಿರ್ದೇಶಕರು ಹೀಗೆ ಕಟ್ಟುಬಿದ್ದಿರುವುದು ಒಂದರ್ಥದಲ್ಲಿ ಜನರನ್ನು ಆಕರ್ಷಿಸುವಲ್ಲಿ ಆ ಸಿನಿಮಾದ ಬಲವೂ ಹೌದು; ಅದೇ ಸಮಯದಲ್ಲಿ ನಿರ್ದೇಶಕ ಆಂಡ್ಯ್ರೇ ತಾರ್ಕೋವ್ಸ್ಕಿ ಆಯಾಮದಿಂದ ನೋಡಿದಾಗ, ಸಿನಿಮಾ ಸೌಂದರ್ಯವನ್ನು ಸವಿಯಲು ಇರುವ ಮಿತಿಯೂ ಹೌದು!

`ಪ್ರೇಮದ ಊರಲಿ’ ಸಿನಿಮಾದ ಹೆಸರೇ ನಮಗೆ ಎರಡು ಸಂಗತಿಗಳನ್ನು ಹೇಳುತ್ತದೆ. ಮೊದಲನೆಯದು ಇದು ಪ್ರೇಮದ ಸುತ್ತ ಹೆಣೆದುಕೊಂಡ ಕಥನ. ಎರಡನೆಯದು, ಇದು ಹಳೆಯ ಕಾಲದ ಬಗ್ಗೆ ಸೆಳೆತ ಇರಿಸಿಕೊಂಡ (ಹೆಸರು ಹಳೆ ಕಾಲದ ಸಿನಿಮಾದಂತಿದೆ ಎಂಬ ಅಭಿಪ್ರಾಯ ಪರಿಗಣಿಸಿದಾಗ) ಸಿನಿಮಾ. ಪಾತ್ರಗಳು, ದೃಶ್ಯಗಳು, ಕಥೆ, ಇವತ್ತಿನ ಕಾಲವನ್ನು ಪ್ರತಿನಿಧಿಸುತ್ತವಾದರೂ, ಕಥೆಯ ಆಶಯವನ್ನು ಸಮಗ್ರವಾಗಿ ಇಣುಕಿದಾಗ ‘ಮರಳಿ ಹಳ್ಳಿಗೆ’, ‘ಮರಳಿ ಬಾಂಧವ್ಯದ ಗೂಡಿಗೆ’ ಎನ್ನುವ ಆದರ್ಶವನ್ನು ಇದು ಹೊತ್ತಿದೆ. ಈ ಎರಡು ಸಂಗತಿಗಳೆ ಜನರನ್ನು ಥಿಯೇಟರಿನತ್ತ ನುಗ್ಗಿಬರುವಂತೆ ಮಾಡುತ್ತಿವೆ. ಯಾಕೆಂದರೆ, ಪ್ರೇಮ ಮತ್ತು ಬೇರು (ಹೆತ್ತವರ ಬಾಂಧವ್ಯ) ಇವೆರಡರ ಬಗ್ಗೆ ನಾವು ಜನರನ್ನು ಸುಲಭವಾಗಿ ಆರ್ದ್ರಗೊಳಿಸಬಹುದು. ಬದುಕಿಗೆ ಇವುಗಳ ಅಗತ್ಯವನ್ನು ನಾವು ನಿರಾಕರಿಸಲು ಸಾಧ್ಯವಿಲ್ಲ. ನಾವು ಎಷ್ಟೇ ಯಾಂತ್ರಿಕ ಬದುಕಿನಲ್ಲಿ ಸಿಲುಕಬಹುದು, ಎಷ್ಟೇ ವ್ಯಾವಹಾರಿಕವಾಗಿ ಬದುಕಬಹುದು, ಎಷ್ಟೇ ಪ್ರಾಕ್ಟಿಕಲ್‌ ಆಗಿ ಯೋಚಿಸಬಹುದು, ಎಷ್ಟೇ  rational ಆಗಿ ವಾದಿಸಬಹುದು, ಆದರೆ ಪ್ರೇಮ ಮತ್ತು ಬಾಂಧವ್ಯದ ವಿಚಾರಕ್ಕೆ ಬಂದಾಗ emotional ಆಗಿಯೇ react ಮಾಡುತ್ತೇವೆ. ಹಾಗೆ ರಿಯಾಕ್ಟ್‌ ಮಾಡಲು, ಅವುಗಳ ಮೌಲ್ಯ ನಮಗೆ ತಿಳಿದಿದೆ ಎನ್ನುವುದಕ್ಕಿಂತ; ಆ ಎರಡು ವಿಚಾರಗಳಲ್ಲಿ ಭಾವನಾತ್ಮಕವಾಗಿ ಸ್ಪಂದಿಸಲೇಬೆಕೆನ್ನುವ ಸಾಮಾಜಿಕ ಪರಿಧಿಗೆ ನಾವೆಲ್ಲ ಬದ್ಧರಾಗಲು ಯತ್ನಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಪರಿಧಿ ಶಿಥಿಲಗೊಳ್ಳುತ್ತಿದೆ. ಪರಿಕಲ್ಪನೆಗಳಾಗಿ ಪ್ರೇಮ ಮತ್ತು ಬಾಂಧವ್ಯಗಳನ್ನು ಗೌರವಿಸಿದರೂ, ನಮ್ಮ ನಡವಳಿಕೆಗಳ ವಿಚಾರಕ್ಕೆ ಬಂದಾಗ ಸಾಮಾಜಿಕ ಪರಿಧಿಯನ್ನು ಮರೆತು ವರ್ತಿಸುತ್ತಿದ್ದೇವೆ. ಪ್ರೇಮಿಗಳು ತಮ್ಮ ಪ್ರಿಯಕರ/ಪ್ರೇಯಸಿಯನ್ನು ತುಂಡರಿಸಿ ಹಾಕಿದ್ದು, ಗಂಡ ಹೆಂಡತಿಯನ್ನು ಕೊಂದಿದ್ದು, ತಂದೆ ಮಗಳ ಮೇಲೆ ಅತ್ಯಾಚಾರ ಮಾಡಿದ್ದು, ಹೆತ್ತಮಗಳೆ ಅಪ್ಪ-ಅಮ್ಮನನ್ನು ಕೊಂದಿದ್ದು, ಅಮ್ಮನೇ ತನ್ನ ಕಂದಮ್ಮನ ಉಸಿರು ನಿಲ್ಲಿಸಿದ್ದು ಹೀಗೆ ಕೌಟುಂಬಿಕ ಸಂಬಂಧಗಳು ಅಕ್ಷರಶಃ ರಕ್ತಪಾತದಿಂದ ಬೆಚ್ಚಿಬೀಳುತ್ತಿವೆ. ಇಂಥಾ ಸಮಯದಲ್ಲಿ ನಿರ್ದೇಶಕನಿಗೆ ಪ್ರೇಮ, ಬಾಂಧವ್ಯ, ಹಳ್ಳಿ ಬದುಕು, ಕೃಷಿಕ ಜೀವನದ ಬಗ್ಗೆ ಜನರಿಗೆ ಒಂದಷ್ಟು ಆದರ್ಶಗಳನ್ನು ಹೇಳಬೇಕೆಂದು ಅನ್ನಿಸಿರುವುದರ ಮಟ್ಟಿಗೆ ಅವರ ಸೆನ್ಸಿಬಿಲಿಟಿಯನ್ನು ಸ್ವಾಗತಿಸಬಹುದು.

ಬಹುಶಃ ಕೌಟುಂಬಿಕ ಹತ್ಯಾ ಸರಣಿಗಳನ್ನು ಕಂಡು ಹೌಹಾರಿದ್ದ ಜನರಿಗೆ ತಂದೆ-ಮಗನ ಬಾಂಧವ್ಯ, ಗಂಡ-ಹೆಂಡತಿ ನಡುವಿನ ಪ್ರೇಮದ ನಂಬಿಕೆಯ ಕಥೆ ತುಸು ನೆಮ್ಮದಿ ನೀಡಿರುವುದೇ ಸಿನಿಮಾದ ಗೆಲುವಿನ ಗುಟ್ಟಾಗಿರಬಹುದು. ಆದರೆ ಈ ಮೌಲ್ಯಗಳನ್ನು ಹೇಳಿ ಪ್ರೇಕ್ಷಕರನ್ನು ಮೆಚ್ಚಿಸಿಬಿಡುವ ನಿರ್ದೇಶಕನ ಧಾವಂತವು ಸಿನಿಮಾಕ್ಕಿದ್ದ ಇನ್ನಷ್ಟು ವಿಸ್ತಾರದ ಸಾಧ್ಯತೆಗೆ ತಡೆಯೊಡ್ಡಿದೆ. ಉದಾಹರಣೆಗೆ ಗಂಡ-ಹೆಂಡತಿ ನಡುವಿನ ಪ್ರೇಮದ ಸಂಬಂಧವನ್ನೇ ತೆಗೆದುಕೊಳ್ಳೋಣ. ಪ್ರೇಮದಲ್ಲಿ ಪರಸ್ಪರ ನಂಬಿಕೆಯೇ ಬುನಾದಿ ಎನ್ನುವುದನ್ನು ಸಿನಿಮಾ ಒತ್ತಿ ಹೇಳುತ್ತದೆ. ಸಲ್ಲದ ಶಂಕೆಗಳು ಪ್ರೇಮದ ಸರೋವರನ್ನು ಹೇಗೆ ಬರಡಾಗಿಸುತ್ತದೆ ಎಂಬುದು ನಿರ್ದೇಶಕರ ಕಾಳಜಿ. ಅದಕ್ಕಾಗಿ, ಗಂಡ ನಡುಬೀದಿಯಲ್ಲಿ ತನ್ನ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಷ್ಟರ ಮಟ್ಟಿಗೆ ಸಮಾಜದ ಲಿಂಗತಾರತಮ್ಯದ ಕಟ್ಟಳೆಗಳನ್ನು ಒಡೆದು ಇಷ್ಟವಾಗುತ್ತಾರೆ. ಸಿನಿಮಾದ ಎರಡು ಸಂಭಾಷಣೆಗಳು ನಿರ್ದೇಶಕರ ಆಶಯವನ್ನು ನೇರವಾಗಿ ಸಾರುತ್ತವೆ. ಭಗ್ನ ಪ್ರೇಮದ ನಾಯಕಿ ತನ್ನ ತಲೆಗೂದಲನ್ನು ಕತ್ತರಿಸಿಕೊಂಡು ನಾಯಕ ಮುಂದೆ ನಿಂತು ಹೇಳುವ ಮಾತು, ‘ಇಷ್ಟು ದಿನ ನನ್ನ ಸಂಗಾತಿ ಏನಾಗಿದ್ದರು ಅನ್ನೋದಕ್ಕಿಂತ ಇನ್ನು ಮುಂದೆ ನಮ್ಮ ಜೊತೆ ಹೇಗಿರುತ್ತಾರೆ ಅನ್ನೋದು ಮುಖ್ಯ’. ಇದು ಪ್ರೇಮ ಮತ್ತು ದಾಂಪತ್ಯವನ್ನು ನಿರೂಪಿಸುವಾಗ ಅತ್ಯಂತ ವಿಶಾಲವಾದ ಮಾತು. ನಾಯಕ ತನ್ನ ಹೆಂಡತಿಯ ಶೀಲದ ಮೇಲೆ ಶಂಕೆ ಪಟ್ಟು ಕೊರಗುತ್ತಿರುವ ಮತ್ತೊಂದು ದೃಶ್ಯದಲ್ಲಿ, ಅವಳ ಶೀಲದ ಪಾವಿತ್ಯ್ರತೆಯನ್ನು ಸಮರ್ಥಿಸಲು ಬರುವ ಅವಳ ಗೆಳತಿಗೆ ಹೀಗೆ ಹೇಳ್ತಾನೆ, ‘ಮೂರನೇ ವ್ಯಕ್ತಿಯ ಮಾತು ಕೇಳಿ ಹೆಂಡತಿ ಮೇಲೆ ಅನುಮಾನ ಪಟ್ಟೆ, ಈಗ ಮತ್ತೊಬ್ಬ ವ್ಯಕ್ತಿಯ ಮಾತು ಕೇಳಿ ಹೆಂಡತಿಯ ಮೇಲೆ ನಂಬಿಕೆ ಹುಟ್ಟುವುದು ಬೇಡ. ನಂಬಿಕೆ ಎನ್ನುವುದು ಬೇರೆಯವರ ಮಾತಿನಿಂದ ಹುಟ್ಟುವುದಾಗಲಿ, ಅಳಿಯುವುದಾಗಲಿ ಆಗಬಾರದು. ಹಾಗಾಗಿ ನನ್ನ ಹೆಂಡತಿಯನ್ನು ನಾನು ನಂಬಿ ಪ್ರೇಮಿಸುತ್ತೇನೆ, ನೀವು ಹೇಳುವ ಸಮರ್ಥನೆಗಳನ್ನು ಕೇಳಿ ಅವಳನ್ನು ಪ್ರೇಮಿಸುವುದು ಬೇಡ.’ ನಾಯಕನ ಈ ಪಾಪ ನಿವೇದನೆ ಸಿನಿಮಾದ ಅತ್ಯಂತ ತೂಕದ ಭಾಗ. ಹೀಗೆ ಶೀಲ ಮತ್ತು ನಂಬಿಕೆಯನ್ನು ತಕ್ಕಡಿಯಲ್ಲಿಡುವ ನಿರ್ದೇಶಕ, ನಂಬಿಕೆಯನ್ನು ಹಿರಿದಾಗಿಸಿ, ಶೀಲವನ್ನು ಕಿರಿದಾಗಿಸುತ್ತಾರೆ. ಆದರೆ, ಸಿನಿಮಾದ ಬಹುದೊಡ್ಡ ದ್ವಂದ್ವ ಇರುವುದೇ ಇಲ್ಲಿ.

ಸಂಭಾಷಣೆ ಹಾಗೂ ಕಥೆಯ ನೇರ ನಿರೂಪಣೆಯಲ್ಲಿ ಶೀಲಕ್ಕಿಂತ ನಂಬಿಕೆ ದೊಡ್ಡದು ಎನ್ನುವ ಕ್ರಾಂತಿಕಾರಿ ಸಂದೇಶ ಬೋಧಿಸುವ ನಿರ್ದೇಶಕರು; ಮತ್ತೊಂದು ಕಡೆ, ಸೀತೆಯ ಕಾಲದಿಂದಲೂ ಹೆಣ್ಣಿನ ವೇದನೆಗೆ ಯಾವ ‘ಶೀಲ’ ಎಂಬ ಚೌಕಟ್ಟು ಕಾರಣವೋ, ಆ ಶೀಲವನ್ನು ಕಾಪಾಡಿಕೊಂಡು, ಗಂಡನಿಗೆ ಸಮರ್ಪಿಸುವುದು ಹೆಣ್ಣಿನ ಹೆಗಲಮೇಲಿರುವ ಅತಿದೊಡ್ಡ ಜವಾಬ್ದಾರಿ ಎನ್ನುವ ಬಂಡೆಯನ್ನು ಹೊರಿಸಿಬಿಡುತ್ತಾರೆ. ಈ ವಾದ ಅರಿವಾಗಬೇಕೆಂದರೆ, `ಶೀಲ’ ಎನ್ನುವ ಸಾಮಾಜಿಕ ಹಿನ್ನೆಲೆಯನ್ನು ನಾವಿಲ್ಲಿ ಸ್ವಲ್ಪ ವಿವರವಾಗಿ ಅರ್ಥ ಮಾಡಿಕೊಳ್ಳಬೇಕು.  ಈ ಸಮಾಜ ಗಂಡಿಗೂ ಶೀಲವನ್ನು ಬೋಧಿಸುತ್ತದಾದರೂ, ಹೆಣ್ಣಿನಷ್ಟು ಕಟ್ಟುನಿಟ್ಟುಗೊಳಿಸುವುದಿಲ್ಲ. ಗಂಡಿನ ಪಾಲಿಗೆ ಶೀಲವನ್ನು ನೈತಿಕ ಆಯ್ಕೆಯಾಗಿ ಉಳಿಸಿದರೆ, ಹೆಣ್ಣಿನ ವಿಚಾರದಲ್ಲಿ `ಶೀಲ’ವನ್ನು ಆಕೆಯ ಅಸ್ತಿತ್ವದ ಮೂಲ ಧಾತುವಾಗಿ ಅಂತರ್ಗತಗೊಳಿಸಲಾಗಿದೆ. ಶೀಲದ ಹೊರೆಯಿಲ್ಲದೆ ಗಂಡು ಓಡುವ ವೇಗಕ್ಕೆ ಸಮನಾಗಿ ಓಡದಂತೆ ಹೆಣ್ಣಿಗೆ ಶೀಲವನ್ನು ಕಡ್ಡಾಯಗೊಳಿಸಿ, ಆಕೆಯ ಚಲನೆಗಳಿಗೆ, ಕನಸುಗಳಿಗೆ ಬಂಧನ ಹೇರಲಾಗಿದೆ. ಶೀಲ ಹೆಣ್ಣಿಗೆಷ್ಟು ಮುಖ್ಯವೋ, ಗಂಡಿಗೂ ಅಷ್ಟೇ ಮುಖ್ಯವಾಗಬೇಕಿತ್ತು; ಅಥವಾ, ಶೀಲದ ವಿಚಾರದಲ್ಲಿ ಗಂಡಿಗೆಷ್ಟು ಸಡಿಲಿಕೆ ಉಂಟೋ, ಹೆಣ್ಣಿಗೂ ಅಷ್ಟೇ ಸಡಿಲಿಕೆ ಇರಬೇಕಿತ್ತು. ಆದರೆ ಇಲ್ಲಿರುವ ತಾರತಮ್ಯವೇ ‘ಶೀಲ’ ಎಂಬುದನ್ನು ಸಾರ್ವತ್ರಿಕ ನೈತಿಕ ಮಾನದಂಡವಾಗಿಸುವ ಬದಲು, ಹೆಣ್ಣಿನ ಮೇಲಿನ ಶೋಷಣೆಗೆ ದಾಳವಾಗಿಸುತ್ತದೆ. ಶೀಲ ಕಳೆದುಕೊಂಡ ಗಂಡು ಈ ಸಮಾಜದಲ್ಲಿ ಆರಾಮಾಗಿ ಬದುಕುಬಹುದು; ಆದರೆ, ಶೀಲ ಕಳೆದುಕೊಂಡ ಹೆಣ್ಣು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವೇ `ಸೂಳೆ’ ಎಂಬ ತಿರಸ್ಕಾರದಲ್ಲಿ ಬದುಕಬೇಕು. ಸಿನಿಮಾದ ಶೀಲಹೀನ (ಮದುವೆಯಾಗಿದ್ದರೂ ವ್ಯಭಿಚಾರದಲ್ಲಿ ನಿರತ) ಗಂಡು ಪಾತ್ರವೊಂದು ಶಂಕೆಗೊಳಪಟ್ಟ ನಾಯಕಿಯನ್ನು `ಸೂಳೆ’ ಎಂದು ಕರೆಯುವುದೇ ಶೀಲದ ಕುರಿತು ಗಂಡಿಗೂ, ಹೆಣ್ಣಿಗೂ ಹೇಗೆ ಭಿನ್ನಗ್ರಹಿಕೆಯನ್ನು ಸಮಾಜದಲ್ಲಿ ಸ್ಥಾಪಿಸಿದೆ ಎನ್ನುವುದನ್ನು ಹೇಳುತ್ತದೆ. ತಾವೇ ಸಂಯೋಜಿಸಿದ ಈ ದೃಶ್ಯ ಹೇಳುವ ಲಿಂಗ ತಾರತಮ್ಯದ ಪಾಠಕ್ಕೆ ಕಿವಿಯಾನಿಸುವಲ್ಲಿ ನಿರ್ದೇಶಕರು ಸೋತುಹೋಗಿದ್ದಾರೆ.

ಶೀಲ ಗಂಡಿಗೂ ಮುಖ್ಯ, ಆದರೆ ಹೆಣ್ಣಿಗೆ ಅನಿವಾರ್ಯ ಎನ್ನುವ ಅಸಮಾನತೆಯೆ ಶೀಲದ ಸುತ್ತ ಅಡಗಿರುವ ಸಾಮಾಜಿಕ ಸಂಚು. ಇದರ ಸಿಕ್ಕುಗಳಿಗೆ ನಾವು ಕೈಹಾಕುವಾಗ ಎಷ್ಟು ಸೆನ್ಸಿಬಲ್‌ ಆಗಿದ್ದರೂ ಸಾಲದು. ಇವತ್ತಿನ ಮಟ್ಟಿಗೆ ಶೀಲವನ್ನು ನಾವು ಸಾರಾಸಗಟಾಗಿ ತಳ್ಳಿಹಾಕಲು ಸಾಧ್ಯವಿಲ್ಲವಾದರೂ, ಈ ತಾರತಮ್ಯದ ಸಂಚನ್ನು ಪುಷ್ಟೀಕರಿಸುವ ತಪ್ಪನ್ನಂತೂ ಮಾಡಬಾರದು. ಆದರೆ ನಿರ್ದೇಶಕರು, ದಾಂಪತ್ಯ ಪ್ರೇಮದಲ್ಲಿ ನಾಯಕನಿಗೆ ನ್ಯಾಯ ಒದಗಿಸುವ ಸಾಮಾಜಿಕ ಒತ್ತಡಕ್ಕೆ ಸಿಲುಕಿ, ವಿವಾಹಪೂರ್ವ ಪ್ರೀತಿಯಲ್ಲಿ ಪ್ರಿಯಕರನ ಜೊತೆಗೆ ನಾಯಕಿ ತನ್ನ ಶೀಲ ಕಾಪಿಟ್ಟುಕೊಳ್ಳುವ ಸನ್ನಿವೇಶವನ್ನು ದಾಖಲಿಸುತ್ತಾರೆ. ಅಂದರೆ, ಗಂಡುಹೆಣ್ಣಿಗೆ ಸಮಾನ ನ್ಯಾಯವಾಗಬೇಕಿದ್ದ ಶೀಲ, ತಾರತಮ್ಯದ ಸಂಕೀರ್ಣ ಸಂಚಾಗಿರುವುದನ್ನೂ ಸಿನಿಮಾ ಅನುಮೋದಿಸುತ್ತದೆ. ಹೆಣ್ಣು ಶೀಲವಂತೆಯಾಗಿ ಉಳಿಯುವುದೇ ಗಂಡನಿಗೆ ಆಕೆ ತೋರಿಸಬೇಕಿರುವ ನಿಯತ್ತು ಎಂದು ಸಿನಿಮಾದ ಆರಂಭದಲ್ಲಿಯೇ ಹೇಳಿಸಿಬಿಡುವ ನಿರ್ದೇಶಕರು, ನಂತರದಲ್ಲಿ ‘ಅವರು ಮೊದಲು ಏನಾಗಿದ್ದರು ಅನ್ನುವುದಕ್ಕಿಂತ ಈಗ ನಮ್ಮ ಜೊತೆ ಹೇಗಿದ್ದಾರೆ ಅನ್ನುವುದು ಮುಖ್ಯ’ ಎನ್ನುವ ಸಂಭಾಷಣೆಯನ್ನು ಹೇಳಿಸಿದರೆ, ಅದಕ್ಕೆ ಅರ್ಥ ಬರುವುದೇ?

ಹಾಗಂತ, ಮದುವೆಗೆ ಮುಂಚೆ ಹೆಣ್ಣಿಗಾಗಲಿ, ಗಂಡಿಗಾಗಲಿ ಶೀಲವನ್ನು ಕಳೆದುಕೊಳ್ಳುವ ಸ್ವೇಚ್ಛೆಯನ್ನು ನೀಡಬೇಕು ಎಂಬುದು ಈ ವಾದದ ಉದ್ದೇಶವಲ್ಲ. ಅದಕ್ಕಿನ್ನೂ ನಮ್ಮ ಸಮಾಜ ಪಕ್ವಗೊಂಡಿಲ್ಲ. ಹಾಗೆ ನೋಡಿದರೆ, ‘ಶೀಲ’ ಎಂಬುದರ ನಿಜಾರ್ಥವೇನು? ಅದು ಕೇವಲ ದೇಹಕ್ಕೆ ಸಂಬಂಧಿಸಿದ್ದೇ? ವ್ಯಕ್ತಿತ್ವವನ್ನೂ ಆವರಿಸಿದ್ದೇ? ಎಂಬ ಸಂಗತಿಗಳನ್ನೇ ನಾವಿನ್ನು ನಿರ್ಧರಿಸಿಕೊಳ್ಳಲಾಗಿಲ್ಲ. ಹೀಗಿರುವಾಗ ತಾರತಮ್ಯದ ಸಾಮಾಜಿಕ ಸಂಚಿನ ಭಾಗವಾದ ಶೀಲವನ್ನು ಒಂದುಕಡೆ ಎತ್ತಿಹಿಡಿದು, ಇನ್ನೊಂದು ಕಡೆ ಅದನ್ನು ನಂಬಿಕೆಯ ಮುಂದೆ ನಗಣ್ಯೀಕರಿಸುವುದು ಪ್ರಗತಿಪರ ಆದರ್ಶ ಎನಿಸಿಕೊಳ್ಳುವುದಕ್ಕಿಂತ ದ್ವಂದ್ವ ಎನಿಸಿಕೊಳ್ಳುತ್ತದೆ. ಈ ದ್ವಂದ್ವವನ್ನು ಮೀರುವಲ್ಲಿ ಸಿನಿಮಾ ಮುಗ್ಗರಿಸಿದೆ. ಬಹುಶಃ ನಿರ್ದೇಶಕರಿಗೆ ವೈಚಾರಿಕ ವಿಸ್ತಾರಕ್ಕಿಂತ ತಾವು ಹೇಳಬಯಸಿರುವ ಆದರ್ಶವನ್ನು ಜನ ಸ್ವೀಕರಿಸುವಂತೆ ಮಾಡಿಬಿಡುವುದೇ ಮುಖ್ಯವಾಗಿದ್ದರಿಂದ ಸಮಾಜದ ನಿರೀಕ್ಷೆಗೆ ವಿರುದ್ಧವಾಗಿ ಚಲಿಸುವ ಧೈರ್ಯದಿಂದ ಹಿಂದೆ ಸರಿದಿದ್ದಾರೆ. ಈ ಸವಾಲನ್ನು ಇನ್ನೊಂದಷ್ಟು ಸೆನ್ಸಿಬಲ್‌ ಆಗಿ ನಿಭಾಯಿಸುವ ಅವಕಾಶವನ್ನು ಎಕ್ಸ್‌ಪ್ಲೋರ್‍‌ ಮಾಡಿದ್ದಿದ್ದರೆ, ಸಿನಿಮಾ ಇಂತಹ ಗಹನವಾದ ದ್ವಂದ್ವಕ್ಕೆ ಈಡಾಗುತ್ತಿರಲಿಲ್ಲ. ಈ ದ್ವಂದ್ವದಿಂದಾಗಿ ನಿರ್ದೇಶಕರು ಹೇಳಬಯಸಿದ, ಶೀಲಕ್ಕಿಂತ ದಾಂಪತ್ಯ ನಂಬಿಕೆ ಮುಖ್ಯ ಎನ್ನುವ ಸಂದೇಶ, ಸಿನಿಮಾ ಕತೆಯಿಂದ ಆಚೆ ಬಂದು ಸಾರ್ವತ್ರಿಕಗೊಳ್ಳುವ ಬದಲು, ಮದುವೆಗೆ ಮುಂಚೆ ಶೀಲ ಕಾಪಾಡಿಕೊಂಡ ಆ ನಿರ್ದಿಷ್ಟ ನಾಯಕಿಗಷ್ಟೇ ಅನ್ವಯವಾಗುವ ನಿಯಮವಾಗಿ ಸಿನಿಮಾದೊಳಗೇ ಉಳಿದುಬಿಡುತ್ತದೆ.

ಇನ್ನು ದಾಂಪತ್ಯವನ್ನು ಇಷ್ಟೆಲ್ಲ ಪವಿತ್ರೀಕರಿಸುವ ನಿರ್ದೇಶಕರು, ಈ ದಾಂಪತ್ಯಕ್ಕೆ ಅಡಿಪಾಯವಾದ ‘ಮದುವೆ’ ಎಂಬ ಸಾಂಸ್ಥಿಕ ರಚನೆಯನ್ನು ನಿರೂಪಿಸುವಲ್ಲೂ ಇದೇ ರೀತಿಯ ದ್ವಂದ್ವದಿಂದ ತೊಳಲಾಡಿದ್ದಾರೆ. ದಾಂಪತ್ಯದ ಅತಿಮುಖ್ಯ ಧಾತು ಪರಸ್ಪರ ನಂಬಿಕೆ. ಆ ನಂಬಿಕೆ ಬಲಗೊಳ್ಳಬೇಕೆಂದರೆ, ಗಂಡು-ಹೆಣ್ಣಿನ ನಡುವೆ ಪರಸ್ಪರ ಪರಿಚಯ, ವ್ಯಕ್ತಿತ್ವಗಳ ಬಗ್ಗೆ ಅರಿವುಪೂರ್ಣ ಸ್ವೀಕಾರಗಳು ಮದುವೆಗು ಮೊದಲೇ ಮೈದಳೆಯಬೇಕು. ಆದರೆ ಇದಕ್ಕೆಲ್ಲ ಅವಕಾಶ ಕೊಡದೆ, ಮದುವೆಯಾಗಬೇಕಿದ್ದ ಗಂಡು ಕಲ್ಯಾಣ ಮಂಟಪದಲ್ಲಿ ಹೆಣ್ಣನ್ನು ಬಿಟ್ಟು ಓಡಿಹೋದ; ಅದರಿಂದ ಹೆಣ್ಣಿನ ಜೀವನ ಹಾಳಾಗುತ್ತದೆ; ಹಾಗಾಗಿ ಹೆಣ್ಣಿಗೆ ಗಂಡು ಯಾರೆಂದು, ಗಂಡಿಗೆ ಹೆಣ್ಣು ಯಾರೆಂದು ಕೂಡಾ ತಿಳಿಯದ ಅಂಧಕಾರದಲ್ಲಿ ಹಿರಿಯರ ಬಲವಂತಕ್ಕೆ ನಾಯಕನೊಂದಿಗೆ ಮದುವೆ ಮಾಡಿಸುವ ಸನ್ನಿವೇಶ ನಿರ್ಮಿಸುತ್ತಾರೆ. ನಿರ್ದೇಶಕನ ಅಂಕೆಯಲ್ಲಿರುವ ಸಿನಿಮಾವಾಗಿರುವ ಕಾರಣಕ್ಕೆ, ಹಾಗೆ ಅಪರಿಚಿತರಾಗಿ ಮದುವೆಯಾಗುವ ನಾಯಕ-ನಾಯಕಿ ಅಕಸ್ಮಾತ್ತಾಗಿ ಇಷ್ಟಪಟ್ಟವರೇ ಆಗಿರುತ್ತಾರೆ; ಆದರೆ ಇಂತಹ ಪ್ರಾಕ್ಟಿಕಲ್‌ ಸಾಧ್ಯತೆ ನಿಜ ಜೀವನದಲ್ಲಿ ಸಾಧ್ಯವೇ?. ಮದುವೆ ಎಂಬ ದಾಂಪತ್ಯದ ಅಡಿಪಾಯವನ್ನೆ ಹೀಗೆ ಅಪರಿಚಿತ, ಅವಿಶ್ವಾಸಾತ್ಮಕ ವಾತಾವರಣದಲ್ಲಿ ಪ್ರೋತ್ಸಾಹಿಸುವ ನಿರ್ದೇಶಕರು, ಅಂತಹ ಮದುವೆಗಳಲ್ಲಿ ನಂಬಿಕೆಯನ್ನು, ಶೀಲವನ್ನು ಚರ್ಚಿಸಲು ಮುಂದಾಗುವುದು ಒನ್ಸ್‌ ಎಗೇನ್‌ ರಮಣೀಯ ಸಿನಿಮಾವಾಗಿ ಸೀಮಿತಗೊಳ್ಳುತ್ತದೆಯೆ ವಿನಾ, ಸಾರ್ವತ್ರಿಕ ಸಂದೇಶವಾಗಿ ಹೊರಹೊಮ್ಮುವಲ್ಲಿ ಸೋತುಹೋಗುತ್ತದೆ. ಜನ ಒಂದು ಸಿನಿಮಾವನ್ನು, ದೃಶ್ಯವನ್ನು ಇಷ್ಟಪಡುವುದೇ ಬೇರೆ; ಅನುಸರಿಸುವುದೇ ಬೇರೆ. ಇಷ್ಟಪಡಲು ಜನರ ಮನಸ್ಸಿಗೆ ಆ ಕ್ಷಣಕ್ಕೆ ಖುಷಿ ನೀಡುವಂತೆ ದೃಶ್ಯ ಸಂಯೋಜನೆ, ಸಂಭಾಷಣೆಗಳು ಇದ್ದರೆ ಸಾಕು. ಆದರೆ ಅದನ್ನು ಅನುಸರಿಸುವ ಸಂದೇಶವಾಗಿಸಬೇಕಾದರೆ, ಇಡೀ ದೃಶ್ಯದ ಹಿಂದೆ ಲಾಜಿಕ್‌, ಪ್ರಾಕ್ಟಿಕಾಲಿಟಿ ಇರಬೇಕಾಗುತ್ತದೆ. ನಿರ್ದೇಶಕರಾದವರು ಅದನ್ನು ಮರೆಯಬಾರದು.

ಇನ್ನು, ಹಳ್ಳಿಯ ಬದುಕು ಅಥವಾ ಕೃಷಿ ಜೀವನವನ್ನು ಹೇಳುವಾಗಲೂ ನಿರ್ದೇಶಕರು ಇಂತದ್ದೇ ಉಪದೇಶದ ವೇಗದಲ್ಲಿ ಕಳೆದುಹೋಗಿದ್ದಾರೆ. ಓದಿದವರು ಹಳ್ಳಿಗಳನ್ನು ತೊರೆಯುತ್ತಿದ್ದಾರೆ, ಕೃಷಿಯನ್ನು ಅವಲಂಬಿಸಿದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವೇದನೆಗಳ ಜೊತೆಗೆ ಪಟ್ಟಣದಲ್ಲಿ ಇರುವವರು ಮತ್ತೆ ಹಳ್ಳಿಯ ಕಡೆಗೆ ಮರಳಬೇಕು ಎಂಬ ರಮಣೀಯ ಮತ್ತು ಮನಸ್ಸಿಗೆ ಮುದನೀಡುವಂತಹ ಉಪದೇಶಗಳನ್ನು ಸಿನಿಮಾ ದಾಟಿಸುತ್ತದೆ. ಹಾಗೆ ಹಳ್ಳಿಯತ್ತ ಮತ್ತೆ ಜನರನ್ನು ಆಕರ್ಷಿಸಲು ಗ್ರಾಮೀಣ ಬದುಕನ್ನು romantisize ಮಾಡುವ ಭರಾಟೆಯಲ್ಲಿ ಹಳ್ಳಿಬದುಕಿನ ಸಂಕಟಗಳನ್ನು ಮುಚ್ಚಿಟ್ಟುಬಿಡುತ್ತಾರೆ.

ಇವತ್ತು ಕೃಷಿ ಲಾಭದಾಯಕ ಉದ್ಯಮ ಅಲ್ಲದೇ ಇರುವುದರಿಂದ; ಪಾಶ್ಚಾತ್ಯ ಕೃಷಿ ಚಟುವಟಿಕೆಗಳಿಗೆ ಹೋಲಿಸಿದರೆ ಭಾರತದಲ್ಲಿ ಆಧುನಿಕತೆ ಇನ್ನೂ ವ್ಯಾಪಕಗೊಳ್ಳದೆ ಇರುವುದರಿಂದ; ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಕ ಲೋಪಗಳು ತುಂಬಿರುವುದರಿಂದ ಕೃಷಿಯನ್ನು ಅವಲಂಬಿಸುತ್ತಿರುವವರ ಬದುಕು ದಿನೇದಿನೆ ದುಸ್ಥರವಾಗುತ್ತಿದೆ. ಇತ್ತೀಚಿನ ಎನ್‌ಸಿಆರ್‍‌ಬಿ ಅಂಕಿಅಂಶ ಗಮನಿಸಿದರೆ ವರ್ಷಕ್ಕೆ 10 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಷನಲ್‌ ಸ್ಟ್ಯಾಟಿಸ್ಟಿಕಲ್‌ ಆಫೀಸ್‌ (ಎನ್‌ಎಸ್‌ಒ) ಸಮೀಕ್ಷೆ ಪ್ರಕಾರ, ಒಂದು ತಿಂಗಳಿಗೆ ಭಾರತದ ರೈತ ಕುಟುಂಬವೊಂದರ ಸರಾಸರಿ ಆದಾಯ ₹10,218. ಆದರೆ ಅಮೆರಿಕಾದ ರೈತ ಕುಟುಂಬದ ಆದಾಯ ತಿಂಗಳಿಗೆ ₹8,21,984! ಅಸಮಾನ ಭೂ ಹಿಡುವಳಿಯ ಸಮಸ್ಯೆಯಿಂದ ಮೊದಲ್ಗೊಂಡು, ಸರ್ಕಾರದ ನಿರ್ಲಕ್ಷ್ಯ ನೀತಿಗಳ ವರೆಗೆ ಹಲವು ಸಮಸ್ಯೆಗಳು ಭಾರತದ ರೈತರ ಈ ಧಾರುಣ ಸ್ಥಿತಿಗೆ ಕಾರಣ. ಮಳೆ ಮಾತ್ರವೇ ಭಾರತೀಯ ರೈತನ ನಿಜವಾದ ಸಮಸ್ಯೆಯಲ್ಲ. ಕೃಷಿ ಇಷ್ಟು ತ್ರಾಸದಾಯಕ ಮತ್ತು ಕಂಟಕಪ್ರಾಯವಾಗಿ ಸಾಗುತ್ತಿರುವುದರಿಂದಲೇ ಇಲ್ಲಿನ ರೈತರು ತಮ್ಮ ಮಕ್ಕಳು ಬೇರೆ ರೀತಿಯ ಬದುಕು ಕಟ್ಟಿಕೊಳ್ಳಲಿ ಎಂದು ಹಂಬಲಿಸುತ್ತಾರೆ.

ರೈತನನ್ನು ಅನ್ನದಾತ, ದೇಶದ ಬೆನ್ನೆಲುಬು, ನೇಗಿಲಯೋಗಿ, ಮಣ್ಣಿನ ಮಗ ಅಂತ ಭಾವನಾತ್ಮಕವಾಗಿ ಕರೆಯುವುದರಿಂದ ಅವನ ಎದೆ ಉಬ್ಬಬಹುದು, ಅದರೆ ಹೊರೆಗಳ ಕಾರಣಕ್ಕೆ ಸೋತಿರುವ ಹೆಗಲು ನೆಟ್ಟಗಾಗುವುದಿಲ್ಲ. ಇಲ್ಲಿ ನಿಜವಾದ ಸಮಸ್ಯೆ ಕೃಷಿಯಿಂದ ವಿಮುಖವಾಗುತ್ತಿರುವ ಯುವಪೀಳಿಗೆಯವರ ಆಧುನಿಕತೆಯ ಮೋಹದ್ದಲ್ಲ, ಕೃಷಿಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಸರ್ಕಾರಗಳದ್ದು. ಉದಾಹರಣೆಗೆ, ಕೇಂದ್ರ ಸರ್ಕಾರದ 2024ರ ಬಜೆಟ್‌ನಲ್ಲಿ ಕೃಷಿಗೆ ಕಳೆದ ಸಲಕ್ಕಿಂತ ಶೇ. 5.9 ರಷ್ಟು ಹೆಚ್ಚು ಅನುದಾನ ನೀಡಲಾಗಿತ್ತು. ಆದರೆ 2025ರಲ್ಲಿ ಅನುದಾನ ಹೆಚ್ಚಳ ಪ್ರಮಾಣ ಶೇ.4ಕ್ಕೆ ಕುಸಿಯಿತು. 2026ರಲ್ಲಿ ಇದು ಶೇ.2ಕ್ಕೆ ಕುಸಿತ ಕಂಡಿದೆ. ಕೃಷಿಕರು ಬಿಕ್ಕಟ್ಟಿನಲ್ಲಿರುವಾಗ ಹೀಗೆ ಅನುದಾನ ಹೆಚ್ಚಳವನ್ನು ಸರ್ಕಾರಗಳು ವರ್ಷದಿಂದ ವರ್ಷಕ್ಕೆ ಕಡಿತ ಮಾಡಿದರೆ ರೈತಾಪಿ ಬದುಕು ಉದ್ದಾರವಾಗುವುದೆಲ್ಲಿ?

ಕೃಷಿ ಅವಲಂಬಿತ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಸಮಸ್ಯೆಗು ಕೂಡಾ ಹೆಣ್ಣೆತ್ತವರ ಕಂಡೀಷನ್‌ಗಳು, ಓದಿದ ಹುಡುಗಿಯವರ ಷರತ್ತುಗಳಷ್ಟೇ ಕಾರಣ ಎಂದುಕೊಳ್ಳುವುದು ಸಮಸ್ಯೆಯನ್ನು ಮೇಲ್ಮಟ್ಟದಲ್ಲಷ್ಟೆ ನೋಡಿದಂತಾಗುತ್ತೆ. ಕೃಷಿ ಎಂಬ ವೃತ್ತಿ ಅಥವಾ ಉದ್ಯಮ ದಿನೇದಿನೇ ಅಭದ್ರತೆಗೆ ತುತ್ತಾಗುತ್ತಿರೋದು ಈ ಸಮಸ್ಯೆಯ ಮೂಲ. ಅದಕ್ಕೆ ಮದ್ದು ಕಂಡುಹಿಡಿಯದೆ, ಏಕಾಏಕಿ ಮದುವೆಗೆ ಹೆಣ್ಣುಕೊಡದ ಹೆಣ್ಣೆತ್ತವರನ್ನು ‘ಖಳ’ರಾಗಿಸುವುದು ಅಥವಾ ಹೆಣ್ಣುಗಳನ್ನೆ ದುರಾಸೆಯವರಂತೆ ಚಿತ್ರಿಸುವುದು ಸಂಕುಚಿತ ದೃಷ್ಟಿಕೋನವಾಗುತ್ತದೆ. ಇನ್ನು ಹಳ್ಳಿಯ ಬದುಕೆಂಬುದು ಕೂಡಾ ಸಿಟಿಯಲ್ಲಿ ಓದಿ, ಬೆಳೆದ ಹುಡುಗಿಯೊಬ್ಬಳು ಸ್ಟೈಲಿಶ್‌ ಆಗಿ ಸೀರೆ ಉಡುವಷ್ಟು ಸಲೀಸಾದುದಲ್ಲ. ಆದರೆ ಸಿನಿಮಾ ನಿರ್ದೇಶಕರು ಗ್ರಾಮೀಣ ಜೀವನವನ್ನು ಅಷ್ಟು ಕಲರ್‍‌ಫುಲ್‌ ಮತ್ತು ರೊಮ್ಯಾಂಟಿಕ್‌ ಆಗಿ ತೋರಿಸಿ, ಹಳ್ಳಿಯತ್ತ ಮರಳಿ ಎಂಬ ರಮ್ಯ ಉಪದೇಶವನ್ನು ನೀಡುತ್ತಾರೆ. ಹಳ್ಳಿಗಳಿಗೆ ಹಸಿರು ಪರಿಸರದ ರಮ್ಯ ನೋಟದ ಜೊತೆಗೆ; ಜಾತಿ ವ್ಯವಸ್ಥೆ, ಆರ್ಥಿಕ ಸಂಕಟಗಳಂತಹ ಹಲವು ಆಯಾಮಗಳೂ ಇರುತ್ತವೆ. ಅವುಗಳನ್ನೆಲ್ಲ ನಿರ್ಲಕ್ಷಿಸಿ ಸಹಜೀಕರಿಸಲು ಸಾಧ್ಯವಿಲ್ಲ. ವಿದೇಶದಲ್ಲಿ ವ್ಯಾಸಂಗ, ಉದ್ಯೋಗ ಮುಗಿಸಿಬಂದ ಒಬ್ಬ ಹೆಣ್ಣನ್ನು ಮದುವೆಯ ಕಾರಣಕ್ಕೆ ಹಳ್ಳಿಯ ಊಟದ ಬುತ್ತಿ ಹೊತ್ತುಕೊಂಡು ಬರುವಂತೆ ರೂಪಾಂತರಿಸಿ ತೋರಿಸಿದಾಗ, ಸಿನಿಮಾ ಪ್ರೇಕ್ಷಕರಿಗೆ ಒಂದಷ್ಟು ರಮ್ಯ ಅನುಭವ ದಕ್ಕಬಹುದು; ಆದರೆ practicalityಗೆ ಜಾಗವಿರಬಲ್ಲದೇ? ದಾಂಪತ್ಯವನ್ನು ಉತ್ತುಂಗಕ್ಕೇರಿಸುವ ಭರಾಟೆಯಲ್ಲಿ ಅವಳ ಓದು, ವ್ಯಾಸಂಗ, ಅನುಭವ, ಕನಸುಗಳೆಲ್ಲ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದಕ್ಕೆ ಸಮರ್ಥನೆಗಳು ಏನುಂಟು?

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಇಡೀ ಸಿನಿಮಾ Nostalgic senseನ (ಗತದ ಮೋಹ) ಚೌಕಟ್ಟಿನಲ್ಲಿ ಸಿಕ್ಕಿಕೊಂಡಿದೆ. ಅಂದರೆ, ಹಳೆಯದೆಲ್ಲವೂ ಸರಿ ಇತ್ತು, ಹಳೆಯದೆಲ್ಲವೂ ಸುಂದರ, ಹೊಸ ಸಮಸ್ಯೆಗಳಿಗೆಲ್ಲ ಹಳೆಯದರಲ್ಲೆ ಪರಿಹಾರವಿದೆ ಎನ್ನುವ ಉಸುಕಿನಲ್ಲಿ ಸಿನಿಮಾ ಹೂತುಹೋಗಿದೆ. ನಿಜ! ಹಳೆಯ ಬದುಕಿನ ರೀತಿಯಲ್ಲಿ ಒಂದಷ್ಟು ಪರಿಹಾರಗಳು ನಮಗೆ ಗೋಚರಿಸಬಹುದು. ಹಾಗೆಂದ ಮಾತ್ರಕ್ಕೆ ಹಳೆಯದೆಲ್ಲವನ್ನು ಸಾರಾಸಗಟು ಸಹಜೀಕರಿಸಿ, ರಮ್ಯಗೊಳಿಸಿ ನೋಡುವುದು ಇಂತಹ ದ್ವಂದ್ವಗಳಿಗೆ ಕಾರಣವಾಗಿಬಿಡುತ್ತೆ.

ಇಷ್ಟೆಲ್ಲ ಮಿತಿಗಳಿದ್ದಾಗ್ಯೂ ಇದೊಂದು ನೋಡಬಹುದಾದ ಸಿನಿಮಾ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾವನ್ನು ರಾಜಕೀಯ ದುರುದ್ದೇಶದ ಟೂಲ್‌ ಆಗಿ ಬಳಸಲಾಗುತ್ತಿದೆ. ಹಿಂಸೆ, ಸುಳ್ಳು, ದ್ವೇಷಗಳನ್ನು ಹರಡುವ ಅಪಾಯಕಾರಿ ಸರಕಾಗಿ ನಮ್ಮ ದುರುಳ ವ್ಯವಸ್ಥೆ ಕೈಗೆತ್ತಿಕೊಂಡಿದೆ. ಆ ಬಗೆಯ ಸಿನಿಮಾಗಳಿಗೆ ವಿಪರೀತ ಎನ್ನುವಷ್ಟು ವ್ಯವಸ್ಥಿತ ಪ್ರಚಾರ ನೀಡಲಾಗುತ್ತಿದೆ. ಅವುಗಳಿಗೆ ಕಣ್ಣಾಗುವ ಪ್ರೇಕ್ಷಕರು ದ್ವೇಷವನ್ನು ಉಸಿರಾಡುವ ಮೃಗಗಳಾಗುತ್ತಿದ್ದಾರೆ. ರಕ್ತಪಾತಗಳು ಸಹಜವಾಗುತ್ತಿವೆ. ಸೌಹಾರ್ದತೆ-ಪ್ರೀತಿ ವಿಶ್ವಾಸಗಳು ಭಗ್ನಗೊಳ್ಳುತ್ತಿವೆ. ಅಂತವುಗಳ ನಡುವೆ ಈ ಸಿನಿಮಾ ತನ್ನ ಮಿತಿಗಳ ಹೊರತಾಗಿಯೂ ಒಂದಷ್ಟು ಉಲ್ಲಾಸವನ್ನು ನೋಡುಗರಿಗೆ ಕೊಟ್ಟು ಕಳಿಸುತ್ತಿದೆ. ಪ್ರೇಮದ ವೈಚಾರಿಕ ಪ್ರಜ್ಞೆಯನ್ನು ಎದೆಗಿಳಿಸುವಲ್ಲಿ ಎಡವಿದರೂ, ಪ್ರಕ್ಷುಬ್ಧ ಮನಸ್ಸುಗಳಿಗೆ ತಂಪೆರೆವ ಮಟ್ಟಿಗೆ ಈ ಕನ್ನಡ ಸಿನಿಮಾದ ಪ್ರಯತ್ನ ನಿಟ್ಟುಸಿರಿಗೆ ಕಾರಣವಾಗುತ್ತದೆ. ಒಳ್ಳೆಯ ಸಿನಿಮಾ ಇನ್ನಷ್ಟು ಒಳ್ಳೆಯದಾಗಬಹುದಿತ್ತು ಎನ್ನುವ ಕಾಳಜಿಯೆ, ಈ ವಿಮರ್ಶೆಯನ್ನು ಹುಳುಕುಗಳ ಪಟ್ಟಿಗೆ ಸೀಮಿತಗೊಳ್ಳುವ ಬದಲು ಇಷ್ಟು ಸುದೀರ್ಘಗೊಳಿಸಿದೆ.

ಗಿರೀಶ್ ತಾಳಿಕಟ್ಟೆ

Leave a Reply

Your email address will not be published. Required fields are marked *