ಹುಸಿಯ ನೆಲವ ದಿಟಗೊಳಿಸುವರೇ ಡಿ ಕೆ ಶಿವಕುಮಾರ್?

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಡಿ.ಕೆ. ಶಿವಕುಮಾರ್‍‌ ಅವರ ಸರ್ಕಾರ ತುಳು ಭಾಷೆಗೆ ಅಧಿಕೃತ ಎರಡನೇ ಭಾಷೆಯ ಸ್ಥಾನಮಾನದ ಜೊತೆಗೆ, ಪ್ರಾದೇಶಿಕ ಅಭಿವೃದ್ಧಿಗೆ ಬೃಹತ್‌ ಪ್ಯಾಕೇಜನ್ನೂ ಘೋಷಿಸಿದೆ.  ಮೀಡಿಯಾಗಳಲ್ಲಿ ಇದು ದೊಡ್ಡ ಚರ್ಚೆಯಾಯ್ತು. ಆಗಲೇಬೇಕಿದ್ದ ಸಂಗತಿ. ಯಾಕೆಂದ್ರೆ, ಕರ್ನಾಟಕದ ಇಡೀ ಆಡಳಿತಾಸಕ್ತಿ ದಕ್ಷಿಣ ತುದಿಯ ಬೆಂಗಳೂರಿನಲ್ಲಿ ಜಮೆಗೊಂಡಿರುವುದು ಪ್ರಾದೇಶಿಕ ಅಸಮಾನತೆಗಿರುವ ಹಲವು ಕಾರಣಗಳಲ್ಲಿ ಒಂದು. ಇದನ್ನು ತೊಡೆಯಲು, ಸರ್ಕಾರವೊಂದು ಹೀಗೆ ರಾಜ್ಯದ ಉದ್ದಗಲವನ್ನು ಎಡತಾಕುವುದು ಒಳ್ಳೆಯ ಬೆಳವಣಿಗೆ. ದೇಶದ ಚುಕ್ಕಾಣಿ ದಿಲ್ಲಿಯಲ್ಲಿ ಸಾಂದ್ರಗೊಂಡು, ದಕ್ಷಿಣವೂ ಒಳಗೊಂಡಂತೆ ಹಿಂದಿಯೇತರ ರಾಜ್ಯಗಳು ರಾಜಕೀಯ ನಿರ್ಲಕ್ಷ್ಯಕ್ಕೆ ತುತ್ತಾಗಿರೋದು ತೊಲಗಬೇಕೆಂದರೆ ಕೇಂದ್ರದಲ್ಲೂ ಇಂತಹ ಪ್ರಯತ್ನಗಳು ನಡೆಯಬೇಕಿದೆ.

ಆದರೆ ಪ್ರಶ್ನೆ ಇರೋದು, ಡಿ.ಕೆ. ಶಿವಕುಮಾರ್‍‌ ನೇತೃತ್ವದ ಈ ಸಂಪುಟ ಸಭೆಗೆ ನಿಜಕ್ಕೂ ಇಂಥಾ ಕಾಳಜಿ ಇತ್ತಾ? ಅನ್ನೋದು.

ಸಿಎಂ ಶಿವಕುಮಾರ್‍‌ ಅವರ ಪ್ರಚಾರಪ್ರಿಯ ವೈಖರಿ ನೋಡಿದವರಿಗೆ ಇದೊಂದು ಪಿ.ಆರ್. ಗಿಮಿಕ್‌ನಂತೆ ಕಾಣಿಸಬಹುದು. ಅದನ್ನವರು ಹಾಗೆ ಬಳಸಿಕೊಂಡಿದ್ದೂ ನಿಜ. ಆದರೆ ಅದನ್ನೂ ಮೀರಿದ ಒಂದು ಸ್ಪಷ್ಟ ರಾಜಕೀಯ ಲೆಕ್ಕಾಚಾರ ಈ ಸಭೆಯ ಹಿಂದಿದೆ. ಮಂಗಳೂರು, ಅರ್ಥಾತ್‌ ಕರಾವಳಿ ಭಾಗವು ಕರ್ನಾಟಕದ ಮಟ್ಟಿಗೆ ಕೋಮುವಾದದ ಪ್ರಯೋಗಶಾಲೆಯಾಗಿದೆ. ಕೋಮುವಾದದ ಫಲಾನುಭವಿಯಾದ ಬಿಜೆಪಿ ಪಕ್ಷವು ಮುಂಬೈ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆಯಾದರೂ, ಈ ಎರಡು ಪ್ರಾಬಲ್ಯದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಲಿಂಗಾಯತರು ನಿರ್ಣಾಯಕವಾಗಿರುವ ಮುಂಬೈ-ಕರ್ನಾಟಕ ಹಾಗೂ ಮಧ್ಯಕರ್ನಾಟಕದಲ್ಲಿ ಬಿಜೆಪಿ ಬಲ ಸಾಧಿಸಿದ್ದು ಯಡಿಯೂರಪ್ಪನವರ ಜಾತಿ ಆಧಾರಿತ ನಾಯಕತ್ವದ ಕಾರಣಕ್ಕೆ. ಅದನ್ನು ಬಳಸಿಕೊಂಡು ಇತ್ತೀಚೆಗೆ ತನ್ನ ಮತೀಯವಾದವನ್ನು ಅಲ್ಲಿ ಪಸರಿಸಲು ಸಂಘ ಪರಿವಾರ ಯತ್ನಿಸುತ್ತಿದೆ.

ಆದರೆ ಕರಾವಳಿಯಲ್ಲಿನ ಪ್ರಾಬಲ್ಯ ಇಂತಹ ಜಾತಿ ಅಥವಾ ವ್ಯಕ್ತಿ ಕೇಂದ್ರಿತವಾದುದಲ್ಲ. ಇಲ್ಲಿ ಮತೀಯ ಕೋಮುವಾದವೇ ಅಡಿಪಾಯ. ಅದನ್ನು ಬಳಸಿಕೊಂಡು ಪ್ರಬಲ ಜಾತಿಗಳನ್ನು ತೆಕ್ಕೆಗೆ ತೆಗೆದುಕೊಳ್ಳಲಾಗಿದೆ. ಅಲ್ಲಿ, ಜಾತಿಯನ್ನು ಬಳಸಿಕೊಂಡು ಕೋಮುವಾದವನ್ನು ಹಬ್ಬಿಸಲಾಗುತ್ತಿದ್ದರೆ, ಇಲ್ಲಿ ಕೋಮುವಾದವನ್ನು ಬೆಳೆಸಿಕೊಂಡು ಜಾತಿಗಳನ್ನು ಆಕ್ರಮಿಸಿಕೊಳ್ಳಲಾಗಿದೆ. ಇವೆರಡರ ಪೈಕಿ ಕೋಮುವಾದಿಗಳ ವಿಸ್ತರಣೆಗೆ ಸುಲಭದ ಮತ್ತು ಪರಿಣಾಮಕಾರಿ ದಾರಿ, ಎರಡನೆಯ ಬಗೆಯದ್ದು. ಅಂದರೆ, ಕರಾವಳಿ ಮಾಡೆಲ್‌! ಯಾಕೆಂದರೆ ಇಲ್ಲಿ ಬಲಾಢ್ಯ ಜಾತಿಯನ್ನು ಓಲೈಸುವ ಅಥವಾ ಒಬ್ಬ ನಾಯಕನನ್ನು ಅವಲಂಬಿಸುವ ಅನಿವಾರ್ಯತೆ ಇರುವುದಿಲ್ಲ. ಆ ಕಾರಣಕ್ಕೆ ಕರಾವಳಿಯ ಮಾಡೆಲ್‌ ಕೋಮುವಾದಿಗಳಿಗೆ ಅತ್ಯಂತ ಪ್ರಿಯವಾಯ್ತು. ಇಡೀ ರಾಜ್ಯಕ್ಕೆ ಮತೀಯವಾದವನ್ನು ಪಸರಿಸಲು ಅದನ್ನು ಲ್ಯಾಬ್‌ ರೀತಿ ಮಾಡಿಕೊಂಡರು.

ಮುಳ್ಳನ್ನು ಮುಳ್ಳಿನಿಂದ ತೆಗೆವ ಯತ್ನ!

ಇದನ್ನು ಕೌಂಟರ್‍‌ ಮಾಡಬೇಕಿದ್ದ ಕಾಂಗ್ರೆಸ್‌ ಕಂಪ್ಲೀಟಾಗಿ ಕೈಚೆಲ್ಲಿ ಕೂತಿತು. ದೇಶದಲ್ಲಿ ನಿತ್ರಾಣ ಸ್ಥಿತಿಗೆ ತಲುಪಿದ ನಂತರ ಈಗ ಅದು ಈ ಕುರಿತು ಯೋಚಿಸುತ್ತಿರುವಂತಿದೆ. ಕರ್ನಾಟಕವನ್ನು ಉಳಿಸಿಕೊಳ್ಳಬೇಕೆಂದರೆ, ಕೋಮುವಾದಿಗಳನ್ನು ಕೌಂಟರ್‍‌ ಮಾಡುವ ದುಬಾರಿ ಪ್ರಯೋಗಗಳಿಗೆ ಮುಂದಾಗಲೇಬೇಕು. ಆದರೆ ಹೇಗೆ?

ಹೇಗೆ? ಎನ್ನುವ ಹೈಕಮಾಂಡ್‌ನ ಈ ಪ್ರಶ್ನೆಯೆ ಸದ್ಯಕ್ಕೆ ಡಿ.ಕೆ. ಶಿವಕುಮಾರ್‍‌ ಅವರಿಗೆ ದೊಡ್ಡ ವರದಾನ. ಕೋಮುವಾದಿ ಶಕ್ತಿಗಳು ಯಾವುದನ್ನೆಲ್ಲ ತಮ್ಮ ಬಲ ಮಾಡಿಕೊಂಡಿವೆಯೋ, ಅವುಗಳ ಮೇಲೆ ನಾವು ಕೂಡಾ ಕ್ಲೇಮ್‌ ಸಾಧಿಸಲು ಮುಂದಾಗಬೇಕು ಎನ್ನುವುದು ಡಿ.ಕೆ. ಶಿವಕುಮಾರ್‍‌ ಅವರ ಸ್ಟ್ರಾಟಜಿಯಿದ್ದಂತಿದೆ. ಅವರ ವೈಖರಿಗಳನ್ನು ಗಮನಿಸಿದಾಗ ಹಾಗನ್ನಿಸುತ್ತದೆ. ಹಿಂದೂ ಧರ್ಮವನ್ನು ಕೋಮುವಾದಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ; ಸರಿ, ನಾವು ಕೂಡಾ ಹಿಂದೂ ಧರ್ಮವನ್ನು ಕ್ಲೇಮ್‌ ಮಾಡೋಣ! ಟೆಂಪಲ್‌ ರನ್‌, ಮಠಾಧಿಪತಿಗಳ ಓಲೈಕೆ, ಕುಂಭಸ್ನಾನ, ಧಾರ್ಮಿಕ ವೇಷಭೂಷಣ, ಕಾವೇರಿ ಆರತಿ ಮೊದಲಾದವು ಸರದಿಗಟ್ಟಿದವು. ಸೋಷಿಯಲ್‌ ಮೀಡಿಯಾದ ಮೂಲಕ ಅವರು ಯುವಜನರನ್ನು ಕೈವಶ ಮಾಡಿಕೊಂಡಿದ್ದಾರೆ; ಸರಿ, ನಾವು ಕೂಡಾ ಸೋಷಿಯಲ್‌ ಮೀಡಿಯಾ ಕ್ರೇಜ್‌ ಹುಟ್ಟುಹಾಕೋಣ! ಯುವಕರನ್ನು ಸೆಳೆಯಲು ಭಾರತ್‌ ಜೋಡೊ ಸಂಘಗಳಿಗೆ ಜನ್ಮ, ಸೋಷಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಷರ್‍‌ಗಳ ಭೇಟಿ ನಡೆದವು. ಅವರು ಸಿನಿಮಾ- ನಟನಟಿಯರನ್ನು ಬಳಸಿಕೊಂಡು ಜನರಿಗೆ ಹತ್ತಿರವಾಗುತ್ತಿದ್ದಾರೆ; ಸರಿ, ನಾವೂ ಸಿನಿಮಾ ಕ್ಷೇತ್ರವನ್ನು ಬಳಸಿಕೊಳ್ಳೋಣ! ರಿಷಬ್‌ ಶೆಟ್ಟಿಯಂತಹ ಬಲಪಂಥೀಯ ಒಲವಿರುವ ನಟನಿಗೆ ರಾಯಭಾರಿ ಪಟ್ಟ, ನಟ ರವಿಚಂದ್ರನ್‌ ರಿಗೆ ಎಮ್‌ ಎಲ್ ಸಿ ಚರ್ಚೆ ಹುಟ್ಟಿಕೊಂಡವು. ಅವರು ಮೋದಿಯವರನ್ನು ಹಿಂದೂ ಐಕಾನ್‌, ಬಲಿಷ್ಠ ನಾಯಕ ಎಂದು ಬಿಂಬಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ; ಸರಿ, ನಾವೂ ಹಿಂದೂ ಐಕಾನ್‌ ಮಾಡೆಲ್‌ ಪಾಲಿಸೋಣ! ಪಿ.ಆರ್‍‌. ಪ್ರಚಾರದ ವೈಖರಿಯಲ್ಲಿ ಮೋದಿಯವರನ್ನೇ ನಕಲು ಮಾಡಿದ್ದಾಯ್ತು. ಅವರು ಕರಾವಳಿಯನ್ನು ತಮ್ಮ ಕೋಮುವಾದದ ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ; ಸರಿ, ನಾವೂ ಆ ಪ್ರಯೋಗ ಶಾಲೆಯನ್ನು ಟಾರ್ಗೆಟ್‌ ಮಾಡಿಕೊಂಡು ಅವರಿಗೆ ಬಿಸಿ ಮುಟ್ಟಿಸೋಣ…..

ಡಿ ಕೆ ಶಿವಕುಮಾರ್ ಅವರ ಈ ವೈಖರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಕನ್ವಿನ್ಸ್‌ ಆದಂತೆ ಕಾಣುತ್ತಿದೆ. ಕೋಮುವಾದವನ್ನು parallel ಧಾರ್ಮಿಕವಾದದ ಮೂಲಕ ಮಣಿಸುವ ಈ ಸ್ಟ್ರಾಟಜಿ ಚುನಾವಣಾ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಎಷ್ಟು ಮಾತ್ರ ಲಾಭ ತರಬಲ್ಲದೋ ಗೊತ್ತಿಲ್ಲ; ಆದರೆ, ವೈಯಕ್ತಿಕವಾಗಿ ಡಿ ಕೆ ಶಿವಕುಮಾರ್‍‌ ಅವರಿಗೆ ಅಪಾರ ಲಾಭ ತಂದುಕೊಡುತ್ತಿದೆ. ಕೋಮುವಾದಿ ರಾಜಕಾರಣಕ್ಕೆ ಹಿನ್ನಡೆ ಉಂಟು ಮಾಡಬೇಕೆನ್ನುವ ಕಾಂಗ್ರೆಸ್‌ ಅನಿವಾರ್ಯತೆ ವೈಯಕ್ತಿಕ ವರ್ಚಸ್ಸು ಹಿಗ್ಗಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಮೇಲೆ ವಿವರಿಸಿದ ಇಂಥಾ ಯತ್ನಗಳ ಮೂಲಕ ಕೋಮುವಾದಿಗಳಿಗೆ ತಾನು ಕೌಂಟರ್‍‌ ಸೆಟ್‌ ಮಾಡುತ್ತಿದ್ದೇನೆ ಎಂಬ ಹುಸಿ ನೆಲವನ್ನು ಹುಟ್ಟುಹಾಕಿ, ಅದರ ಮೇಲೆ ಹೈಕಮಾಂಡ್‌ ನಾಯಕರನ್ನೂ, ಕಾಂಗ್ರೆಸ್‌ ಕಾರ್ಯಕರ್ತರನ್ನೂ ನಿಲ್ಲಿಸಿ ಇಂಪ್ರೆಸ್‌ ಮಾಡುತ್ತಿದ್ದಾರೆ.

ಪರಿಧಿ-ಕೋಶಕೇಂದ್ರದ ತಾಳಮೇಳ

ಆದರೆ, ರಾಜಕಾರಣವನ್ನೂ ಮೀರಿ ಸೈದ್ದಾಂತಿಕ ಆಯಾಮಯವನ್ನು ಹೊಂದಿರುವ ತತ್ವ ಸಂಘರ್ಷದಲ್ಲಿ ಡಿ ಕೆ ಶಿವಕುಮಾರ್ ಅವರ ಈ ಸಾಫ್ಟ್‌ ಅಥವಾ ಸೆಮಿ ಹಿಂದೂತ್ವ ವೈಖರಿ ಯಶ ಕಾಣಬಹುದೇ? ಖಂಡಿತ ಸಾಧ್ಯವಿಲ್ಲ. ಹಾಗಿದ್ದಿದ್ದರೆ ಮಹಾರಾಷ್ಟ್ರದ ಶಿವಸೇನೆ ಪಕ್ಷ ಬಿಜೆಪಿಗೆ ಆಹುತಿಯಾಗುತ್ತಿರಲಿಲ್ಲ. ಯಾಕೆಂದರೆ ಸಂಘ ಪರಿವಾರವು ಧರ್ಮದ ಸುತ್ತ ರಾಜಕಾರಣ ನಡೆಸುತ್ತಿಲ್ಲ; ತಮ್ಮ ಸುತ್ತ ಧರ್ಮವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಧರ್ಮದ ಪರಿಧಿಯ ದಾಟಿ ಒಳಹೋದರೆ, ಅವರಲ್ಲಿ ಹಿಂದೂ ಧರ್ಮಕ್ಕೆ ಯಾವುದೇ ಬೆಲೆ ಇಲ್ಲ; ವೈದಿಕ ಮನುವಾದ ಅವರ ಕೋಶಕೇಂದ್ರ. ಈ ಕೋಶಕೇಂದ್ರ ಮತ್ತು ಪರಿಧಿ ಎರಡೂ ಪರಸ್ಪರ ಪೂರಕವಾಗಿರುವುದು ಅವರ ದೊಡ್ಡ ಬಲ. ಆದರೆ ಕಾಂಗ್ರೆಸ್‌ನ ಕೋಶಕೇಂದ್ರ ಮನುವಾದವಲ್ಲ, ಜಾತ್ಯತೀತ ವಾದ; ಪ್ರಜಾಪ್ರಭುತ್ವ ವಾದ (ಕಡೇಪಕ್ಷ, ಸಂಪೂರ್ಣವಲ್ಲದಿದ್ದರೂ ಅವುಗಳಿಗೆ ಹತ್ತಿರದ ವಾದಗಳು). ಇಂಥಾ ಕೋಶಕೇಂದ್ರದ ಸುತ್ತ ನೀವು ಧಾರ್ಮಿಕತೆಯನ್ನು ಪರಿಧಿಯಾಗಿಸಿಕೊಂಡರೆ, ತಾಳಮೇಳ ಸಾಧ್ಯವಾಗದೆ ಆ ಮಾಡೆಲ್‌ ಕುಸಿದುಹೋಗುತ್ತದೆ.

ಉದಾಹರಣೆಗೆ, ಕರಾವಳಿ ಸಂಪುಟ ಸಭೆಯ ವಿಚಾರವನ್ನೇ ತೆಗೆದುಕೊಳ್ಳೋಣ. ತುಳು ಭಾಷೆಗೆ ಸ್ಥಾನಮಾನ ಬೇಕೆಂದಾಗಲಿ, ಅಥವಾ ಅಭಿವೃದ್ಧಿಗೆ ಅನುದಾನದ ಪ್ಯಾಕೇಜ್‌ ಬೇಕೆಂದಾಗಲಿ ಅಲ್ಲಿನ ಜನ ಕೋಮುವಾದಿಗಳನ್ನು ಅಪ್ಪಿಕೊಳ್ಳಲಿಲ್ಲ. ಯಾಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಕರಾವಳಿ ಜಿಲ್ಲೆಗಳು ಬೇರೆ ಜಿಲ್ಲೆಗಳಿಗಿಂತ ಬಹಳಷ್ಟು ಮುಂದಿವೆ. 2025-26ರ ಆರ್ಥಿಕ ಸಮೀಕ್ಷೆಯ ಪ್ರಕಾರ  ಬೆಂಗಳೂರು ನಗರವನ್ನು (₹8,55,960) ಹೊರತುಪಡಿಸಿದರೆ, ವಾರ್ಷಿಕ ತಲಾದಾಯ ಗಳಿಕೆಯಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವುದು, ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ (₹6,26,279) ಮತ್ತು ಉಡುಪಿ (₹6,00,683)! ಇಂತಲ್ಲಿ ನೀವು ಅನುದಾನದ ಅಭಿವೃದ್ಧಿಯ ಮೂಲಕ ಕೋಮುವಾದಿ ಅಪಪ್ರಚಾರವನ್ನು ಮಣಿಸಲು ಸಾಧ್ಯವೇ?

ಸ್ಥಳೀಯ ಬಂಡವಾಳಿಗರು ಮತ್ತು ಪಟ್ಟಭದ್ರ ಧಾರ್ಮಿಕ ಮುಖಂಡರ ಲಾಭಾಪೇಕ್ಷೆಯನ್ನು ಧರ್ಮ ಎನ್ನುವ ಭಾವನೆಯ ಜೊತೆಗೆ ಬೆಸೆದು, ಜನರ ನಡುವೆ ದ್ವೇಷವನ್ನು ಕೆರಳಿಸಿದ ಪಕ್ಕಾ ವ್ಯಾವಹಾರಿಕ ತಂತ್ರಗಾರಿಕೆಗೆ ಬಲಿಯಾಗಿ ಜನ ಕೋಮುವಾದವನ್ನು ಅಪ್ಪಿಕೊಂಡಿದ್ದಾರೆ. ಕೋಮುವಾದವನ್ನು ಕಿತ್ತೊಗೆಯಬೇಕೆಂದರೆ, ಈ ಸಂಗತಿಗಳನ್ನೆ ಟಾರ್ಗೆಟ್‌ ಮಾಡಿಕೊಳ್ಳಬೇಕಾಗುತ್ತದೆ. ಇದು ಎರಡು ರೀತಿಯಿಂದ ಮಾತ್ರ ಸಾಧ್ಯ. ಮೊದಲನೆಯದು, ಅವರಿಗೆ ತದ್ವಿರುದ್ಧವಾಗಿ ಜಾತ್ಯತೀತ ಮೌಲ್ಯಗಳನ್ನು ಪ್ರಚುರಪಡಿಸಿ ಜನರನ್ನು ಜಾಗೃತವಾಗಿಸುವುದು. ಎರಡನೆಯದು, ಅವರ ಮಾರ್ಗಗಳನ್ನು ಅವರಿಗಿಂತಲೂ ಅತ್ಯುಗ್ರವಾಗಿ ಅನುಸರಿಸಿ, ಜನರನ್ನು ಮತ್ತಷ್ಟು ಉನ್ಮತ್ತಗೊಳಿಸಿ, ತಮ್ಮ ತೆಕ್ಕೆಗೆ ತೆಗೆದುಕೊಳ್ಳೋದು. ಒನ್ಸ್‌ ಎಗೇನ್‌, ಈಗಾಗಲೇ ಹೇಳಿದಂತೆ ಕಾಂಗ್ರೆಸಿನ ಸೈದ್ದಾಂತಿಕ ಕೋಶಕೇಂದ್ರ ಎರಡನೇ ಮಾರ್ಗದ ಜೊತೆ ತಾಳಮೇಳಗೊಳ್ಳುವುದಿಲ್ಲ. ಇವೆರಡನ್ನೂ ಬಿಟ್ಟು ಮೂರನೇ ಸಾಫ್ಟ್‌ ಅಥವಾ ಸೆಮಿ ಧಾರ್ಮಿಕ ವಾದಕ್ಕೆ ಅರ್ಥವಿಲ್ಲ. ರುಚಿಯಾದ ವಿಷ ತಿನ್ನುವುದಕ್ಕೆ ಒಗ್ಗಿ ಹೋದವರಿಗೆ ನೀವು, ಅದಕ್ಕಿಂತಲೂ ರುಚಿಯಾದ ವಿಷ ಕೊಟ್ಟರೆ ಮಾತ್ರ ಸ್ವೀಕರಿಸುತ್ತಾರೆ. ಕಡಿಮೆ ರುಚಿಯ ವಿಷವನ್ನೇಕೆ ಅವರು ಒಪ್ಪಿ, ನಿಮ್ಮ ಹಿಂದೆ ಬರುತ್ತಾರೆ? ಜನರ ಮೇಲೆ ಮೋದಿಯವರ ಪ್ರಭಾವ ಕುಗ್ಗಿಸಬೇಕೆಂದರೆ, ಅವರ ಮತೀಯವಾದಕ್ಕೆ ತದ್ವಿರುದ್ಧವಾಗಿ ರಾಹುಲ್‌ ಗಾಂಧಿಯವರಂತೆ ಪ್ರೀತಿಯ ಅಂಗಡಿ ತೆರೆದು ಕೂರಬೇಕು. ಅದು ಸ್ವಲ್ಪ ತ್ರಾಸಿನ, ಆದರೆ ಸರಿಯಾದ ಮಾರ್ಗ. ಇಲ್ಲವೆಂದಾದರೆ, ಮೋದಿಯವರಿಗಿಂತಲೂ ತೀಕ್ಷ್ಣ ಧಾರ್ಮಿಕ ವಾದಿಯಾಗಬೇಕು. ಇದು ಸುಲಭದ, ಆದರೆ ಕಾಂಗ್ರೆಸಿನ ಐಡಿಯಾಲಜಿಗೆ ಒಗ್ಗದ ಮಾರ್ಗ. ಇವೆರಡರ ನಡುವಿನ ಡಿ.ಕೆ.ಶಿವಕುಮಾರ್ ಅವರ ಸಾಫ್ಟ್‌-ಸೆಮಿ ವಾದ ಕೆಲಸಕ್ಕೆ ಬಾರದು.

ಹಾಗಂತ ಡಿ ಕೆ ಶಿವಕುಮಾರ್ ಅವರ ಸರ್ಕಾರದ ಈ ಯತ್ನವನ್ನು ಒಂದೇ ಏಟಿಗೆ ನಿರರ್ಥಕ ಎಂದು ತಳ್ಳಿಹಾಕಲಾಗದು. ಅಕಸ್ಮಾತ್‌, ಕೋಮುವಾದವನ್ನು ಸರಿಯಾದ ರೀತಿಯಲ್ಲೆ ಮುಖಾಮುಖಿಯಾಗುವ ಯೋಜನೆ ಕಾಂಗ್ರೆಸ್‌ಗೆ ಇದ್ದು, ಸಂಪೂರ್ಣ ದೃವೀಕರಣಕ್ಕೆ ತುತ್ತಾದ ಜನಸಮುದಾಯದ ನಡುವೆ ಆರಂಭಿಕ ಪ್ರವೇಶಿಕೆ ಅಥವಾ acceptance ಗಳಿಸುವ ಉದ್ದೇಶಕ್ಕಷ್ಟೆ ಇಂತಹ ಪ್ರಯೋಗಗಳು ಸೀಮಿತವಾಗಿದ್ದರೆ (ಇದ್ದರೆ!) ಮುಂದೆ ಭರವಸೆಯನ್ನು ನಿರೀಕ್ಷಿಸಬಹುದು. ಕೋಮುವಾದಿ ಪ್ರಭಾವದ ವಿರುದ್ಧ ತಾನು ಕೌಂಟರ್‍‌ ಸೆಟ್‌ ಮಾಡುತ್ತಿದ್ದೇನೆ ಎಂಬ ಹುಸಿ ನೆಲವನ್ನು ಡಿ ಕೆ ಶಿವಕುಮಾರ್‍‌ ದಿಟ ನೆಲೆಯಾಗಿ ಪರಿವರ್ತಿಸಲು ಈ ಪ್ರಯೋಗಗಳು ಆಸರೆಯಾಗಬಲ್ಲವು. ಆದರೆ ಅವರ ಇಡೀ ರಾಜಕೀಯ ಆದ್ಯತೆಗಳು ಮತ್ತು ಸೈದ್ದಾಂತಿಕ ವಾಲಿಕೆಗಳನ್ನು ಗಮನಿಸಿದಾಗ, ಅಂಥಾ ಸಾಧ್ಯತೆ ತುಂಬಾ ಕ್ಷೀಣ. ಹಾಗೇನಾದರು ಆದಲ್ಲಿ, ಅದರ ದೊಡ್ಡ ನಷ್ಟ ಅನುಭವಿಸುವುದು ಕಾಂಗ್ರೆಸ್‌ ಪಕ್ಷ. ಯಾಕೆಂದರೆ, ಈ ಪ್ರಯೋಗಕ್ಕಾಗಿ ಅದು ಶಿವಕುಮಾರರಿಗೆ ಫ್ರೀ ಹ್ಯಾಂಡ್‌ ಕೊಟ್ಟು ಪಣಕ್ಕಿಟ್ಟಿರುವುದು ತನ್ನ ಅಹಿಂದ ವೋಟ್‌ ಬ್ಯಾಂಕ್‌ ಮತ್ತು ಜಾತ್ಯತೀತ ತತ್ವವನ್ನು!

  • ಮಾಚಯ್ಯ ಎಂ ಹಿಪ್ಪರಿಗಿ

Disclaimer: ನ್ಯೂಸ್ ಫೋಕಸ್.ಇನ್ ಪೋರ್ಟಲ್ ವೈವಿಧ್ಯಮಯ ಅಭಿಪ್ರಾಯಗಳಿಗೆ ಅವಕಾಶ ನೀಡುತ್ತದೆ. ಇಲ್ಲಿ ಅತಿಥಿ ಬರಹಗಾರರು ಅಥವಾ ಅಂಕಣಕಾರರು ವ್ಯಕ್ತಪಡಿಸುವ ಅನಿಸಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಅವುಗಳಿಗೆ ಸಂಪಾದಕೀಯ ಮಂಡಳಿಯ ಸಮ್ಮತಿ ಇದೆ ಎಂದರ್ಥವಲ್ಲ.

3 thoughts on “ಹುಸಿಯ ನೆಲವ ದಿಟಗೊಳಿಸುವರೇ ಡಿ ಕೆ ಶಿವಕುಮಾರ್?”

  1. ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯನ್ನಾಗಿ ಘೋಷಿಸಿರುವುದು ಒಂದು ಸಾಮಾಜಿಕ ಅಪರಾಧ. ಒಂದು ರಾಜ್ಯಕ್ಕೆ ಒಂದೇ ಅಧಿಕೃತ ಭಾಷೆ. ಸ್ವಾತಂತ್ರ್ಯ ಬಂದ ನಂತರ ರಾಜ್ಯ ವಿಂಗಡಣೆಯಾದದ್ದು ಸಹ ಭಾಷೆಯ ಆಧಾರದ ಮೇಲೆ. ಭಾಷೆ ಸರಳವಾದ ವಿಷಯವಲ್ಲ. ಮಾನವ, ಮಾನವನಾಗಿ ರೂಪಗೊಳ್ಳಲು ಕಾರಣವಾಗಿರುವುದೇ ಭಾಷೆ. ಆದರೆ ರಾಜಕಾರಣದ ಸಂದರ್ಭದಲ್ಲಿ ಭಾಷೆಯನ್ನು ತೀರಾ ಹಗುರವಾಗಿ ಕಂಡು ಮತ್ತೊಂದು ಭಾಷೆಯನ್ನು ಎರಡನೇ ಅಧಿಕೃತ ಭಾಷೆ ಎಂದು ಘೋಷಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಭಾಷೆಯನ್ನು ಅಧಿಕೃತಗೊಳಿಸುವುದು ರಾಜಕೀಯದ ಅಥವಾ ಮತಗಳಿಸುವ ಯೋಜನೆಯಂತೆ ಬಳಸಿಕೊಂಡಿರುವುದು ಶೋಚನಿಯ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನು ಮುಂದೆ ಇದು ಗರಿಬಿಚ್ಚಿಕೊಳ್ಳುತ್ತದೆ. ಸರಕಾರಿ ಕಚೇರಿಗಳಲ್ಲಿ ತುಳು ಕಡ್ಡಾಯಗೊಳಿಸಿ, ಅಂಗಡಿಗಳ ಮುಂದಿನ ಬೋರ್ಡ್ ಗಳಲ್ಲಿ ತುಳು ಕಡ್ಡಾಯ, ಶಾಲೆಗಳಲ್ಲಿ ತುಳು ಮೂರನೇ ಭಾಷೆಯಾಗಿ ಕಡ್ಡಾಯ, ತುಳು ಭಾಷಾ ಉತ್ಸವ, ತುಳು ಸಾಹಿತ್ಯ ಸಮ್ಮೇಳನ, ತುಳು ಧ್ವಜ, ತುಳು ಭಾಷಾ ರಕ್ಷಣಾ ವೇದಿಕೆ, ಹೀಗೆ ಹಲವು ಮಜಲುಗಳಲ್ಲಿ ಬಿಚ್ಚಿಕೊಂಡು ಪ್ರಾಂತೀಯ ಕಲಹಕ್ಕೆ ಕಾರಣವಾಗುತ್ತದೆ. ಜನಾಂಗೀಯ ಕಲಹಕ್ಕಿಂತ ಭಾಷಿಕ ಕಲಹ ತೀವ್ರವಾದ ಸ್ವರೂಪ ಪಡೆದುಕೊಳ್ಳುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಮುಖ್ಯಮಂತ್ರಿಗಳು ತಜ್ಞರ ಸಲಹೆ ಪಡೆಯದೆ ನಿರ್ಣಯ ಕೈಗೊಂಡಿದ್ದು ಅಘಾತಕಾರಿ. ಮುಂದೆ ತುಳು ರಾಜ್ಯದ ಬೇಡಿಕೆ ಮುನ್ನೆಲೆಗೆ ಬಂದು ಕರ್ನಾಟಕ ಎರಡು ಭಾಗವಾದರೂ ಆಶ್ಚರ್ಯವಿಲ್ಲ.

Leave a Reply

Your email address will not be published. Required fields are marked *