ಜಂತರ್ ಮಂತರ್: ಅಧಿಕಾರಬಲ ಮಣಿಸಬಹುದೇ ಜನಬಲವಾ?

ದೆಹಲಿಯ ಬೀದಿಗಳಲ್ಲಿ ಈಗ ರೂಪುಗೊಳ್ಳುತ್ತಿರುವ ಪ್ರತಿಭಟನೆಯನ್ನು ಮತ್ತೊಂದು ರಾಜಕೀಯ ಧರಣಿ ಎಂದು ತಳ್ಳಿಹಾಕುವುದು ಕಷ್ಟವಾಗತೊಡಗಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ರದ್ದುಗೊಳಿಸುವ ಬೇಡಿಕೆ ಮತ್ತು ಮತಗಳ್ಳತನದ ಆರೋಪಗಳ ತನಿಖೆಗೆ ಒತ್ತಾಯ ಮೊದಲಾದ ಈ ಬೇಡಿಕೆಗಳ ಸುತ್ತ ವಿದ್ಯಾರ್ಥಿಗಳು, ಯುವಜನರು, ಪ್ರತಿಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಒಂದಾಗುತ್ತಿವೆ.

ಜನರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ನಿರ್ಧರಿಸುವ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿದರೆ, ಚುನಾವಣೆಯಲ್ಲಿ ಗೆದ್ದ ಸರ್ಕಾರದ ಪ್ರಜಾಸಮ್ಮತತೆಯನ್ನು ಹೇಗೆ ಅಳೆಯಬೇಕು? ಇದು, ಪ್ರತಿಭಟನೆಯ ಕೇಂದ್ರದಲ್ಲಿರುವ ಒಂದು ಮೂಲಭೂತ ಪ್ರಶ್ನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಪ್ರಾಬಲ್ಯಕ್ಕೆ ಒಗ್ಗಿಕೊಂಡಿರುವ ದೇಶದಲ್ಲಿ, ಅವರ ಸರ್ಕಾರದ ವಿರುದ್ಧ ಇಂತಹ ಪ್ರತಿರೋಧ ರೂಪುಗೊಳ್ಳುವುದು ರಾಜಕೀಯವಾಗಿ ಮಹತ್ವದ್ದಾಗಿದೆ. ಪ್ರತಿಭಟನೆಯಿಂದ ಸರ್ಕಾರ ನಿಜಕ್ಕೂ ನಡುಗಿದೆಯೇ? ಎಂದು ನಿರ್ಧರಿಸುವಾಗ, ಕೇವಲ ಅಲ್ಲಿ ಕೂಗಿಬರುತ್ತಿರುವ ಘೋಷಣೆಗಳನ್ನಷ್ಟೇ ಪರಿಗಣಿಸಿದರೆ ಸಾಲದು, ಸರ್ಕಾರದ ಪ್ರತಿಕ್ರಿಯೆಯ ಸ್ವರೂಪವನ್ನೂ ಗಮನಿಸಬೇಕು.

ಪ್ರತಿಭಟನಾಕಾರರ ಬೇಡಿಕೆ ಸ್ಪಷ್ಟವಾಗಿದೆ. ಆದರೆ ಆ ಬೇಡಿಕೆಯನ್ನು ಮುಖಾಮುಖಿಯಾಗುವಲ್ಲಿ ಸರ್ಕಾರ ಅನುಸರಿಸುತ್ತಿರುವ ಕ್ರಮಗಳು ಸರ್ಕಾರದ ಪರಿಸ್ಥಿತಿಯನ್ನು ತೆರೆದಿಡುತ್ತಿವೆ. ಪ್ರತಿಭಟನಾಕಾರರನ್ನು ತಡೆಯಲು ರೈಲು ಮತ್ತು ಮೆಟ್ರೋ ಸೇವೆಗಳ ರದ್ದತಿ, ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ನಿಗಾ, ಪ್ರತಿಭಟನಾಕಾರರ ಬಂಧನ ಹಾಗೂ ನಿರ್ಬಂಧಾಜ್ಞೆಗಳಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿವರಗಳು ದೃಢಪಟ್ಟರೆ, ಅವು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯಾಗಿ ಉಳಿಯುವುದಿಲ್ಲ, ನಾಗರಿಕರ ಪ್ರತಿಭಟಿಸುವ ಹಕ್ಕಿನ ಕುರಿತ ಚರ್ಚೆಯನ್ನೂ ಹುಟ್ಟುಹಾಕುತ್ತವೆ. ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಆದರೆ ಆ ಹೆಸರಿನಲ್ಲಿ ಶಾಂತಿಯುತ ಪ್ರತಿಭಟನೆಯನ್ನೇ ದಮನಗೊಳಿಸಲು ಮುಂದಾದರೆ, ಕಾನೂನು ಸುವ್ಯವಸ್ಥೆಯ ಹೊಣೆ ಮತ್ತು ರಾಜಕೀಯ ವಿರೋಧವನ್ನು ಹತ್ತಿಕ್ಕುವ ಕ್ರಮಗಳ ನಡುವಿನ ಅಂತರ ಅಳಿಸಿಹೋಗುತ್ತದೆ.

ಈಗ ಬರುತ್ತಿರುವ ಸುದ್ದಿಗಳ ಪ್ರಕಾರ ದೆಹಲಿಯ ಆಟೋ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವವರಿಗೆ ಉಚಿತವಾಗಿ ನೆರವಾಗುತ್ತಿದ್ದಾರೆ. ಸರ್ಕಾರದ ನಿರ್ಬಂಧಗಳ ನಡುವೆಯೂ ಜನಸಾಮಾನ್ಯರು ಪರಸ್ಪರ ನೆರವಾಗುತ್ತಿರುವುದು ಏನನ್ನು ತೋರಿಸುತ್ತದೆ? ಇದು ಕೇವಲ ರಾಜಕೀಯ ಹೋರಾಟವಾಗಿ ಉಳಿದಿಲ್ಲ, ಜನ ಚಳವಳಿಯಾಗಿ ಜೀವಂತವಾಗುತ್ತಿದೆ ಎಂಬುದನ್ನು ಸಾಬೀತು ಮಾಡುತ್ತದೆ.

ಸರ್ಕಾರದ ನಿರ್ಬಂಧಗಳ ಕುರಿತು ನ್ಯಾಯಾಲಯದ ಪ್ರತಿಕ್ರಿಯೆಯೂ ಇಲ್ಲಿ ಮುಖ್ಯವಾಗಿದೆ. ದೆಹಲಿ ಮೇಲಿನ ಸರ್ಕಾರದ ನಿರ್ಬಂಧಗಳನ್ನು ಪ್ರಶ್ನಿಸುವಾಗ ನ್ಯಾಯಾಲಯವು “ನೊಣ ಕೊಲ್ಲಲು ಸುತ್ತಿಗೆ ಬಳಸುವುದಿಲ್ಲ” ಎಂಬರ್ಥದ ತೀಕ್ಷ್ಣ ಮಾತು ಬಳಸಿದೆ. ಭಾರತವು 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಕಂಡಿದೆ. ಆ ಅವಧಿಯ ಸೆನ್ಸಾರ್, ರಾಜಕೀಯ ಬಂಧನಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ನಿರ್ಬಂಧಗಳು ದೇಶದ ಪ್ರಜಾಪ್ರಭುತ್ವದ ನೆನಪಿನ ಮೇಲೆ ಆಳವಾದ ಗಾಯವನ್ನು ಉಳಿಸಿಹೋಗಿವೆ. ಇವತ್ತು ಘೋಷಿತ ತುರ್ತು ಪರಿಸ್ಥಿತಿ ಇಲ್ಲ. ಆದರೆ ಪ್ರತಿಭಟನೆಗಳನ್ನು ಹತ್ತಿಕ್ಕುವ ನಿರ್ಬಂಧಗಳು ಹೆಚ್ಚೂಕಮ್ಮಿ ಹಳೆಯ ಗಾಯಗಳನ್ನೆ ನೆನಪಿಸುವಂತಿವೆ.

ಚುನಾವಣಾ ಆಯೋಗದ ಮೇಲಿನ ವಿಶ್ವಾಸ

ಈ ಪ್ರತಿಭಟನೆಯ ಕೇಂದ್ರಬಿಂಧು ಜ್ಞಾನೇಶ್ ಕುಮಾರ್! ಅವರ ನೇಮಕಾತಿಯಿಂದ ಶುರುವಾಗಿ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ಎದ್ದಿರುವ ಆಕ್ಷೇಪಗಳು ವಿವಾದದ ಭಾಗವಾಗಿವೆ. ವಿರೋಧ ಪಕ್ಷಗಳ ಆರೋಪದ ಪ್ರಕಾರ, ಚುನಾವಣಾ ಆಯೋಗದ ಕ್ರಮಗಳು ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಸಾಗುತ್ತಿವೆ. ಕರ್ನಾಟಕದಲ್ಲೆ ಇತ್ತೀಚೆಗೆ ಹೊರಬರುತ್ತಿರುವ ಫಾರ್ಮ್ 7ರ ದುರುಪಯೋಗದ ಘಟನೆಗಳು ಇದಕ್ಕೆ ಸಾಕ್ಷಿ ಎನ್ನಬಹುದು. ಚುನಾವಣಾ ಆಯೋಗವು ಯಾವುದೇ ಒಂದು ಪಕ್ಷದ ಸಂಸ್ಥೆಯಲ್ಲ. ಅದು ಈ ನೆಲದ ಸಂವಿಧಾನಕ್ಕೆ, ಕಾನೂನಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾದ ಪ್ರಜೆಗಳ ವಿಶ್ವಾಸಕ್ಕೆ ಬದ್ಧವಾಗಿರಬೇಕು. ಅಕಸ್ಮಾತ್ ಆಯೋಗದ ವರ್ತನೆ, ಪ್ರಕ್ರಿಯೆಗಳ ಬಗ್ಗೆ ಸಾರ್ವಜನಿಕವಾಗಿ ಅನುಮಾನಗಳು ಹೆಚ್ಚಾದಾಗ, ಅವುಗಳಿಗೆ ಸ್ಪಷ್ಟನೆ ನೀಡುವುದು ಅದರ ಕರ್ತವ್ಯ. ಆದರೆ ಚುನಾವಣಾ ಆಯೋಗದಿಂದ ಅಂತಹ ಹೊಣೆಗಾರಿಕೆ ಕಂಡುಬರುತ್ತಿಲ್ಲ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಭದ್ರತೆಯಲ್ಲಿದ್ದ ಮತಯಂತ್ರಗಳ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಅವಘಡ ಆಕಸ್ಮಿಕವಾಗಿಯೂ ಕಾಣಿಸಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆದರೆ ಆ ಘಟನೆಯ ಕುರಿತು ಆಯೋಗದಿಂದ ಬರಬೇಕಿದ್ದ ಸ್ಪಷ್ಟಣೆಗಳಲ್ಲಿ ಜನ ವಿಶ್ವಾಸವನ್ನು ನೋಡಲು ಬಯಸುತ್ತಾರೋ ವಿನಾ ಆಕಸ್ಮಿಕ ಹಾರಿಕೆಯನ್ನಲ್ಲ. ಸಮರ್ಪಕ ಉತ್ತರ ಸಿಗದಿದ್ದರೆ ಸಾರ್ವಜನಿಕ ಅನುಮಾನಗಳು ಹೆಚ್ಚಾಗುವುದು ಸಹಜ.

ಅಧಿಕಾರದ ಬಲವೋ, ಜನರ ವಿಶ್ವಾಸವೋ?

ಚುನಾವಣೆಯಲ್ಲಿ ಗೆಲ್ಲುವುದು ಒಂದು ಸಂಗತಿಯಾದರೆ,  ಆ ಗೆಲುವಿನ ನಂತರವೂ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಇನ್ನೊಂದು ಸಂಗತಿ. ಚುನಾವಣಾ ಆಯೋಗದ ಮೇಲೆ ಆರೋಪಗಳು ದಟ್ಟವಾದಂತೆ ಚುನಾವಣೆಯ ಗೆಲುವುಗಳೂ ಗುಮಾನಿಗೆ ತುತ್ತಾಗುತ್ತಿವೆ. ಈಗ ಸರ್ಕಾರ ದಮನಕಾರಿ ನಿರ್ಬಂಧಗಳ ಮೂಲಕ ಜನರ ಪ್ರತಿಭಟನೆಯ ಹಕ್ಕನ್ನೂ ನಿಯಂತ್ರಿಸಲು ಮುಂದಾದರೆ ಸರ್ಕಾರದ ಮೇಲಿನ ಜನರ ವಿಶ್ವಾಸವೂ ಪ್ರಶ್ನೆಗೀಡಾಗುತ್ತದೆ.

ಪ್ರತಿಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು, ರೈತ ಸಂಘಟನೆಗಳು , ವಿವಿಧ ನಾಗರಿಕ ವೇದಿಕೆಗಳು ಒಗ್ಗಟ್ಟಾಗಿ ಧ್ವನಿ ಎತ್ತುವಾಗ, ಕೇಳಿಸಿಕೊಳ್ಳುವ ಸಂವೇದನೆ ಆಳುವ ಸರ್ಕಾರಗಳಿಗೂ ಇರಬೇಕಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಲಕ್ಷಣ. ನಿರ್ಬಂಧಗಳ ಮೂಲಕ ಪ್ರತಿಭಟನೆಗಳನ್ನು, ಧ್ವನಿಗಳನ್ನು ನಿಯಂತ್ರಿಸಲು ಮುಂದಾದರೆ ಸರ್ಕಾರಕ್ಕೆ ತಾತ್ಕಾಲಿಕ ಗೆಲುವು ಸಿಕ್ಕಂತೆ ಭಾಸವಾಗಬಹುದು. ಆದರೆ ಅದು ಸಾಮಾಜಿಕ ವ್ಯವಸ್ಥೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಅದರ ಬದಲು ಚುನಾವಣಾ ಪ್ರಕ್ರಿಯೆಯ ಕುರಿತು ಎದ್ದಿರುವ ಅನುಮಾನಗಳಿಗೆ ಪಾರದರ್ಶಕ ಉತ್ತರ ನೀಡಿ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಬಲಪಡಿಸುವತ್ತ ಸರ್ಕಾರ ಮುಂದಾಗಬೇಕಿತ್ತು. ರಾಜಕೀಯ ಪರಿಣಾಮಕ್ಕೆ ಹೆದರಿ, ಪ್ರಜಾಪ್ರಭುತ್ವದ ಅಡಿಪಾಯಕ್ಕೇ ಘಾಸಿಗೊಳಿಸುವ ಕೆಲಸವನ್ನು ಯಾವ ಸರ್ಕಾರವೂ ಮಾಡಬಾರದು.

ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಬದಲಾಗುತ್ತವೆ, ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಚುನಾವಣೆಯ ಮೇಲಿನ ವಿಶ್ವಾಸ ಕುಸಿದರೆ, ಅದನ್ನು ಮರುಸ್ಥಾಪಿಸುವುದು ಸುಲಭದ ಕೆಲಸವಲ್ಲ. ಜಂತರ್ ಮಂತರ್‌ನಿಂದ ಕೇಳಿಬರುತ್ತಿರುವ ಧ್ವನಿ ಕೇವಲ ಸರ್ಕಾರದ ವಿರುದ್ಧದ ಘೋಷಣೆಯಲ್ಲ; ಅದು ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಕುರಿತು ನಡೆಯುತ್ತಿರುವ ದೊಡ್ಡ ಚರ್ಚೆ. ಈಗ ಆಳುವವರು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯವಾದ ಸಂಗತಿಯೆಂದರೆ, ಸರ್ಕಾರದ ನಿಜವಾದ ಬಲ ಭಿನ್ನ ಧ್ವನಿಗಳನ್ನು ಮೌನಗೊಳಿಸುವುದರಲ್ಲಿ ಇರುವುದಿಲ್ಲ, ಬದಲಿಗೆ ಅವರ ಪ್ರಶ್ನೆಗಳನ್ನು ದಿಟ್ಟತೆಯಿಂದ ಮುಖಾಮುಖಿಯಾಗಿ,  ವಿಶ್ವಾಸಾರ್ಹ ಉತ್ತರ ನೀಡುವ ಸಾಮರ್ಥ್ಯದಲ್ಲಿರುತ್ತದೆ.

Leave a Reply

Your email address will not be published. Required fields are marked *