ದಾವಣಗೆರೆಯ ಕಮ್ಯುನಿಸ್ಟ್ ಚಳವಳಿಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಈ ಚಳವಳಿಗೆ ದಿಟ್ಟ ನಾಯಕತ್ವ ನೀಡಿದವರು ಕಾಮ್ರೇಡ್ ಪಂಪಾಪತಿ. ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಆವರಗೆರೆಯ ಕಾಮ್ರೇಡ್ ಶೇಖರಪ್ಪ ಮತ್ತು ದಾವಣಗೆರೆಯ ಕಾಮ್ರೇಡ್ ಸುರೇಶ್. ವಯಸ್ಸಿನಲ್ಲಷ್ಟೇ ಅಲ್ಲ, ಎಡಪಂಥೀಯ ಚಿಂತನೆ ಮತ್ತು ಕಾರ್ಮಿಕ ವರ್ಗದ ವಿಮೋಚನೆಯ ಕನಸಿನಲ್ಲೂ ಈ ಮೂವರೂ ಸಮಕಾಲೀನರು. ಆದರೆ ಚಳವಳಿಯಲ್ಲಿ ಅವರವರ ಪಾತ್ರಗಳು ವಿಭಿನ್ನವಾಗಿದ್ದವು. ಪಂಪಾಪತಿ ಕಾರ್ಮಿಕರನ್ನು ಸಂಘಟಿಸುವುದರಲ್ಲಿ ನಿಪುಣರಾಗಿದ್ದರೆ, ಶೇಖರಪ್ಪ ಕ್ರಾಂತಿಕಾರಿ ಭಾಷಣಕಾರರಾಗಿದ್ದರು. ಸುರೇಶ್ ಅವರದ್ದು ಬರವಣಿಗೆಯ ಶಕ್ತಿ. ಅವರು ಬರೆದ ಕರಪತ್ರಗಳು ಕಾರ್ಮಿಕರನ್ನು ಮಾತ್ರವಲ್ಲ, ದಾವಣಗೆರೆಯ ನಾಗರಿಕರನ್ನೂ ಚಳವಳಿಯತ್ತ ಸೆಳೆಯುತ್ತಿದ್ದವು. ಅವುಗಳಲ್ಲಿದ್ದ ಕ್ರಾಂತಿಕಾರಿ ಭಾಷೆ ಮಾತ್ರ ಮಿಲ್ ಮಾಲಕರಿಗೆ ಜೀರ್ಣಿಸಿಕೊಳ್ಳಲಾಗದ ಕಹಿಯಾಗಿತ್ತು.
ಆವರಗೆರೆ ನೀರಾವರಿ ಕೃಷಿಭೂಮಿಯ ಪ್ರದೇಶ. ಶೇಖರಪ್ಪನವರ ಕುಟುಂಬ ಮಧ್ಯಮ ವರ್ಗಕ್ಕೆ ಸೇರಿತ್ತು. ಅವರ ಸಹೋದರರು ಹತ್ತಿ ಗಿರಣಿಗಳಲ್ಲಿ ಕಾರ್ಮಿಕರಾಗಿದ್ದರು. ಶೇಖರಪ್ಪನವರ ವೈಯಕ್ತಿಕ ಬದುಕು ಐಷಾರಾಮಿಯಾಗಿರಲಿಲ್ಲ; ಆದರೆ ಅವರ ಬದುಕಿನ ಬಹುಪಾಲು ಕಾರ್ಮಿಕರ ಹೋರಾಟಕ್ಕೇ ಮೀಸಲಾಗಿತ್ತು. ಪಂಪಾಪತಿ, ಸುರೇಶ್ ಮತ್ತು ಶೇಖರಪ್ಪ—ಈ ಮೂವರು ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗಿಂತ ಸಂಘಟನೆಗೆ ಆದ್ಯತೆ ನೀಡಿದರು. ದಾವಣಗೆರೆಯ ಮಿಲ್ಲುಗಳಲ್ಲಿ AITUC ನೇತೃತ್ವದ ಕಾರ್ಮಿಕ ಸಂಘಟನೆಯನ್ನು ಕಮ್ಯುನಿಸ್ಟ್ ಸೈದ್ಧಾಂತಿಕ ನೆಲೆಯಲ್ಲಿ ಕಟ್ಟಲು ತಮ್ಮ ಬದುಕನ್ನೇ ಸಮರ್ಪಿಸಿಕೊಂಡರು. ಬೆಂಗಳೂರಿನಿಂದ ಆಗಾಗ ಬರುತ್ತಿದ್ದ ವಕೀಲರಾದ ಎಂ.ಎಸ್. ಕೃಷ್ಣನ್ ಮತ್ತು ನರಸಿಂಹನ್ ಅವರು ಕಾರ್ಮಿಕ ಸಂಘಟನೆ ಹಾಗೂ ಪಕ್ಷದ ಸೈದ್ಧಾಂತಿಕ ತಿಳಿವಳಿಕೆಯನ್ನು ಗಟ್ಟಿಗೊಳಿಸುತ್ತಿದ್ದರು.
ಆ ಕಾಲದ ದಾವಣಗೆರೆಯ ಹತ್ತಿ ಮತ್ತು ಜಿನ್ನಿಂಗ್ ಮಿಲ್ಲುಗಳಲ್ಲಿ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಎಲ್ಲ ಮಿಲ್ಲುಗಳಲ್ಲೂ ಒಂದೇ ರೀತಿಯ ಸಂಬಳವಿರಲಿಲ್ಲ. ದುಡಿಯುವ ಅವಧಿಗೆ ನಿಗದಿಯಿರಲಿಲ್ಲ. ಕಾರ್ಮಿಕರಿಗೆ ಗೌರವಯುತ ಕೆಲಸದ ವಾತಾವರಣವಾಗಲಿ, ಶ್ರಮಕ್ಕೆ ತಕ್ಕ ಪ್ರತಿಫಲವಾಗಲಿ ಖಚಿತವಾಗಿರಲಿಲ್ಲ. ಕಾನೂನುಬದ್ಧ ಕಾರ್ಮಿಕ ಹಕ್ಕುಗಳು ಕಾಗದದಲ್ಲಿದ್ದರೂ, ಮಿಲ್ಗಳೊಳಗೆ ಅವುಗಳ ರಕ್ಷಣೆಯಿರಲಿಲ್ಲ. ಕಾರ್ಮಿಕರನ್ನು ಸ್ವತಂತ್ರ ಮನುಷ್ಯರಂತೆ ನೋಡುವುದಕ್ಕಿಂತ ಮಾಲಕರ ಅಧೀನದಲ್ಲಿ ದುಡಿಯಬೇಕಾದ ಆಳುಗಳಂತೆ ಕಾಣುವ ಮನಸ್ಥಿತಿ ಜೀವಂತವಾಗಿತ್ತು.
ಈ ಶೋಷಣೆಯ ವಿರುದ್ಧ ಕಾರ್ಮಿಕರನ್ನು ಸಂಘಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಕಮ್ಯುನಿಸ್ಟ್ ಸಂಘಟನೆಯ ಪ್ರಭಾವವನ್ನು ತಡೆಯಲು ಮಿಲ್ ಮಾಲಕರು ತಮ್ಮ ಬೆಂಬಲಿಗ ಕಾರ್ಮಿಕರನ್ನೇ ಬಳಸಿಕೊಂಡು ಪ್ರತ್ಯೇಕ ಪಡೆಗಳನ್ನು ಬೆಳೆಸಿದ್ದರು. ಹೆಸರಿನಲ್ಲಿ ಕಾರ್ಮಿಕರಾಗಿದ್ದ ಅವರು, ವಾಸ್ತವದಲ್ಲಿ ಸಂಘಟಿತ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುವ ಸಾಧನಗಳಾಗಿದ್ದರು. ಇಂತಹ ಪಡೆಗಳಲ್ಲಿ ಮಹಿಳೆಯರೂ ಇದ್ದರು ಎಂಬುದು ಗಮನಾರ್ಹ. ಒಂದೆಡೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುತ್ತಿದ್ದರೆ, ಮತ್ತೊಂದೆಡೆ ಅವರನ್ನು ವಿಭಜಿಸಿ ಬೆದರಿಸುವ ಪ್ರಯತ್ನಗಳು ನಡೆಯುತ್ತಿದ್ದವು.
ಕಾರ್ಮಿಕರ ಬೇಡಿಕೆಗಳು ಅತಿರೇಕದ್ದಾಗಿರಲಿಲ್ಲ. ಎಲ್ಲ ಮಿಲ್ಲುಗಳಲ್ಲೂ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು, ದುಡಿಮೆಗೆ ತಕ್ಕ ಸಂಬಳ ನೀಡಬೇಕು, ಎಂಟು ಗಂಟೆಗಳ ಕೆಲಸದ ಅವಧಿ ನಿಗದಿಪಡಿಸಬೇಕು ಮತ್ತು ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು. ಇವುಗಳನ್ನು ಜಾರಿಗೆ ತರಲು ಟ್ರೇಡ್ ಯೂನಿಯನ್ ನಾಯಕರು ಮಿಲ್ಗಳ ಆಡಳಿತ ಮಂಡಳಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಸಾಮಾನ್ಯವಾಗಿ ಇಂತಹ ಮಾತುಕತೆಗಳಲ್ಲಿ ಬೇಡಿಕೆಗಳು ಒಪ್ಪಂದವಾಗಿ ಜಾರಿಯಾದರೆ ಮುಷ್ಕರದ ಅಗತ್ಯವೇ ಇರುವುದಿಲ್ಲ. ಆದರೆ ದಾವಣಗೆರೆಯ ಮಾಲಕರ ಧೋರಣೆ ಬೇರೆಯೇ ಆಗಿತ್ತು. ಕಾರ್ಮಿಕರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು, ತಮ್ಮ ಆರ್ಥಿಕ ಹಿತಾಸಕ್ತಿಯನ್ನೇ ಮುಖ್ಯವೆಂದು ಭಾವಿಸಿದರು. ಮಾತುಕತೆಗಳು ಫಲ ನೀಡದಾಗ, ಕಾರ್ಮಿಕರ ಅಸಮಾಧಾನ ಬೀದಿಗಿಳಿಯುವ ಹೋರಾಟವಾಗಿ ರೂಪುಗೊಂಡಿತು.

ಅದು ಸಣ್ಣಪುಟ್ಟ ಕಾರ್ಮಿಕ ವಿವಾದವಾಗಿರಲಿಲ್ಲ. ದಾವಣಗೆರೆಯ ಹತ್ತಾರು ಮಿಲ್ಲುಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಕಾರ್ಮಿಕರ ಬದುಕಿಗೆ ಸಂಬಂಧಿಸಿದ ಹೋರಾಟವಾಗಿತ್ತು. ಅಂದಾಜು ಹತ್ತು ಸಾವಿರ ಕಾರ್ಮಿಕರು ಒಂದೇ ಧ್ವನಿಯಲ್ಲಿ ಬೀದಿಗಿಳಿದರೆ, ಅಂದಿನ ದಾವಣಗೆರೆಯೇ ನಡುಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಬಸವರಾಜ ಪೇಟೆ, ಗಾಂಧಿನಗರ, ಆರೇರಟ್ಟಿ, ಹೊಂಡದ ಸರ್ಕಲ್, ವಿನೋಬನಗರ, ಬಂದೂರು ಕ್ಯಾಂಪ್, ನಿಟುವಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಕಾರ್ಮಿಕರು ಮಿಲ್ಲುಗಳಿಗೆ ಬರುತ್ತಿದ್ದರು. ಆಗ ದಾವಣಗೆರೆ ಇಂದಿನಂತೆ ವಿಸ್ತಾರಗೊಂಡ ನಗರವಾಗಿರಲಿಲ್ಲ; ಪುರಸಭೆಯ ಹಂತದಲ್ಲಿದ್ದ ಈ ಊರಿನ ಬದುಕಿನ ನಾಡಿಮಿಡಿತವೇ ಮಿಲ್ಲುಗಳಾಗಿದ್ದವು. ಹೀಗಾಗಿ ಕಾರ್ಮಿಕರ ಒಗ್ಗಟ್ಟು ಕೇವಲ ಕಾರ್ಖಾನೆಗಳೊಳಗಿನ ಶಕ್ತಿಯಾಗಿರಲಿಲ್ಲ. ಅದು ಇಡೀ ನಗರದ ಸಾಮಾಜಿಕ ಬದುಕನ್ನು ಅಲುಗಾಡಿಸಬಲ್ಲ ಸಾಮರ್ಥ್ಯ ಹೊಂದಿತ್ತು.
ಹಸಿವು ಜನರನ್ನು ಒಂದೆಡೆ ಸೇರಿಸಬಹುದು; ಆದರೆ ಹತ್ತು ಸಾವಿರ ಕಾರ್ಮಿಕರನ್ನು ಒಂದೇ ಸೈದ್ಧಾಂತಿಕ ನೆಲೆಯಲ್ಲಿ ಸಂಘಟಿಸಿ, ಅವರ ಒಗ್ಗಟ್ಟನ್ನು ಉಳಿಸಿಕೊಂಡು, ದೀರ್ಘಕಾಲದ ಹೋರಾಟಕ್ಕೆ ಸಜ್ಜುಗೊಳಿಸುವುದು ಅಸಾಧಾರಣ ಸಂಘಟನಾ ಸಾಮರ್ಥ್ಯವನ್ನು ಬೇಡುತ್ತದೆ. ಪಂಪಾಪತಿ, ಸುರೇಶ್ ಮತ್ತು ಶೇಖರಪ್ಪ ಈ ಕಠಿಣ ಜವಾಬ್ದಾರಿಯನ್ನು ಹೊತ್ತಿದ್ದರು. ಮಿಲ್ಲುಗಳ ಗೇಟ್ಗಳ ಬಳಿ ನಿರಂತರವಾಗಿ ಸಭೆಗಳು ನಡೆಯುತ್ತಿದ್ದವು. ಬೆಂಗಳೂರಿನಿಂದ ಬರುತ್ತಿದ್ದ AITUC ನಾಯಕರು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ, ಹೋರಾಟದ ಸಿದ್ಧತೆಯನ್ನು ಬಲಪಡಿಸುತ್ತಿದ್ದರು. ಚಳವಳಿ ಎಷ್ಟು ದಿನ ಮುಂದುವರಿದರೂ ಕಾರ್ಮಿಕರ ಒಗ್ಗಟ್ಟು ಕುಸಿಯದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು. ಆದರೆ ಕಾರ್ಮಿಕರ ಶಕ್ತಿ ಹೆಚ್ಚಿದಂತೆ ಮಾಲಕರ ಪ್ರತಿರೋಧವೂ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳತೊಡಗಿತು.
ಕಾರ್ಮಿಕರ ಬೇಡಿಕೆಗಳು ಕಾನೂನುಬದ್ಧವಾಗಿದ್ದರೂ, ಸರಕಾರ ಅವರ ಪರವಾಗಿ ನಿಲ್ಲಲಿಲ್ಲ ಎಂಬುದು ಈ ಇತಿಹಾಸದ ಕರಾಳ ಮುಖ. ಮಾಲಕರ ಹಿತಾಸಕ್ತಿಗೆ ಮನ್ನಣೆ ನೀಡಿದ ಆಡಳಿತ ವ್ಯವಸ್ಥೆ, ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕಡೆಗಣಿಸಿತು. ಮತ್ತೊಂದೆಡೆ, ಚಳವಳಿಯನ್ನು ದಮನಿಸಲು ಮಿಲ್ ಆಡಳಿತ ಮಂಡಳಿಗಳು ಹಿಂಸೆಯ ಮಾರ್ಗವನ್ನು ಆರಿಸಿಕೊಂಡವು. ಕಾರ್ಮಿಕರ ನಾಯಕತ್ವವನ್ನೇ ನಾಶಮಾಡಿದರೆ ಇಡೀ ಹೋರಾಟ ಕುಸಿಯುತ್ತದೆ ಎಂಬ ಲೆಕ್ಕಾಚಾರ ಅವರದಾಗಿತ್ತು. ಸಾವಿರಾರು ಕಾರ್ಮಿಕರನ್ನು ಎದುರಿಸುವ ಬದಲು, ಅವರ ಹಿಂದೆ ನಿಂತಿದ್ದ ಪಂಪಾಪತಿ, ಸುರೇಶ್ ಮತ್ತು ಶೇಖರಪ್ಪ ಅವರನ್ನು ಗುರಿಯಾಗಿಸಿಕೊಂಡರು.
ಅಂತಹ ಅಪಾಯದ ಸೂಚನೆಗಳು ಕಾಣಿಸತೊಡಗಿದ್ದವು. ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತದ ಬಗ್ಗೆ ಕಾಮ್ರೇಡ್ ರಾಮಚಂದ್ರಪ್ಪ ಆನಗೋಡು ಅವರು ಪಂಪಾಪತಿ, ಸುರೇಶ್ ಮತ್ತು ಶೇಖರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದರು. ಆ ದಿನ ದಾವಣಗೆರೆಯ ಪುಣೆ–ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಚಳವಳಿಯ ಮುಂದಿನ ಕಾರ್ಯತಂತ್ರದ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ನಿರಂತರ ಮಾತುಕತೆಯಿಂದ ಬಳಲಿದ ಪಂಪಾಪತಿ, ಗಾಂಧಿ ಸರ್ಕಲ್ ಬಳಿಯ ಸರ್ಕಲ್ ರೆಸ್ಟೋರೆಂಟ್ಗೆ ತೆರಳಿದರು. ಸುರೇಶ್ ಮತ್ತು ಶೇಖರಪ್ಪ ಮಾತ್ರ ಕೆಲಸದ ನಿಮಿತ್ತ ಮತ್ತೆ ಪಕ್ಷದ ಕಚೇರಿಗೆ ಮರಳಿ ಚಳವಳಿಯ ಸಿದ್ಧತೆಯಲ್ಲಿ ತೊಡಗಿಕೊಂಡರು.
ಹೊರಗಿನ ವಾತಾವರಣದಲ್ಲಿ ಅಪಾಯದ ಮುನ್ಸೂಚನೆಗಳು ದಟ್ಟವಾಗುತ್ತಿದ್ದರೂ, ಕಚೇರಿಯೊಳಗಿದ್ದ ಅವರಿಗೆ ಮುಂದಿನ ಕ್ಷಣಗಳಲ್ಲಿ ಏನಾಗಲಿದೆ ಎಂಬ ಅರಿವಿರಲಿಲ್ಲ. ಇದ್ದಕ್ಕಿದ್ದಂತೆ ಮಿಲ್ ಮಾಲಕರ ಬೆಂಬಲಿಗರೆಂದು ಹೇಳಲಾಗುತ್ತಿದ್ದ ಗೂಂಡಾಗಳು ಪಕ್ಷದ ಕಚೇರಿಗೆ ನುಗ್ಗಿದರು. ಬಂದವರು ಅನೇಕರು; ಒಳಗಿದ್ದವರು ಕೆಲವೇ ಜನ. ಅವರ ಗುರಿ ಸ್ಪಷ್ಟವಾಗಿತ್ತು—ಪಂಪಾಪತಿ, ಸುರೇಶ್ ಮತ್ತು ಶೇಖರಪ್ಪ. ಆದರೆ ಅಲ್ಲಿ ಸಿಕ್ಕವರು ಸುರೇಶ್ ಮತ್ತು ಶೇಖರಪ್ಪ ಮಾತ್ರ. ಶಸ್ತ್ರಸಜ್ಜಿತರಾಗಿ ಬಂದಿದ್ದ ದಾಳಿಕೋರರ ಎದುರು ಇಬ್ಬರೂ ನಿಶಸ್ತ್ರರಾಗಿದ್ದರು. ದಾಳಿ ಕ್ಷಣಾರ್ಧದಲ್ಲಿ ಭೀಕರ ಸ್ವರೂಪ ಪಡೆದುಕೊಂಡಿತು. ಸುರೇಶ್ ಮತ್ತು ಶೇಖರಪ್ಪ ಅವರ ಜೀವವನ್ನು ಕಸಿದುಕೊಂಡ ದಾಳಿಕೋರರು, ಪಂಪಾಪತಿಯವರಿಗಾಗಿ ಹುಡುಕುತ್ತ ಅಲ್ಲಿಂದ ಹೊರಟರು.

ಆ ಹೊತ್ತಿಗೆ ಪಂಪಾಪತಿ ಅಶೋಕ ರಸ್ತೆಯಲ್ಲಿದ್ದ ಮಿನಿ ಕಾಮತ್ ಹೋಟೆಲಿನಲ್ಲಿ ಕಾಮತ್ ಅವರೊಂದಿಗೆ ಮಾತನಾಡುತ್ತಿದ್ದರು. ಅವರ ಸುಳಿವು ಸಿಕ್ಕ ಕೂಡಲೇ ದಾಳಿಕೋರರು ಅಲ್ಲಿಗೂ ನುಗ್ಗಿದರು. ಅಶೋಕ ರಸ್ತೆಯೇ ಬೆಚ್ಚಿಬಿದ್ದಂತಾಯಿತು. ಹೋಟೆಲಿನೊಳಗೆ ದಾಂಧಲೆ ನಡೆಸಿ, ಪಂಪಾಪತಿಯವರನ್ನು ಹುಡುಕತೊಡಗಿದರು. ಪ್ರಾಣ ಉಳಿಸಿಕೊಳ್ಳಲು ಅವರು ಹೋಟೆಲಿನ ಅಡುಗೆಮನೆಯೊಳಗೆ ನುಗ್ಗಿದರು. ಅಷ್ಟರಲ್ಲಿ ದಾಳಿಕೋರನೊಬ್ಬ ಬೀಸಿದ ಹರಿತವಾದ ಆಯುಧವೋ, ಕಬ್ಬಿಣದ ರಾಡೋ ಅವರ ತಲೆಗೆ ಬಲವಾದ ಪೆಟ್ಟು ನೀಡಿತು. ಪಂಪಾಪತಿ ನೆಲಕ್ಕುರುಳಿದರು.
ಮುಂದೆ ನಡೆದದ್ದು ಈ ಘಟನೆಯ ಅತ್ಯಂತ ನಾಟಕೀಯ ಭಾಗ. ದಾಳಿಕೋರರ ಕಣ್ಣಿಗೆ ಪಂಪಾಪತಿಯವರ ತಲೆಯಿಂದ ಬಿಳಿ ಬಣ್ಣದ ವಸ್ತು ಹೊರಬಂದಂತೆ ಕಂಡಿತು. ಅದು ಮೆದುಳಿನ ಭಾಗವೆಂದು ಭಾವಿಸಿದ ಅವರು, ತಮ್ಮ ಕೆಲಸ ಮುಗಿದಿದೆ, ಪಂಪಾಪತಿ ಸತ್ತು ಹೋಗಿದ್ದಾರೆ ಎಂದುಕೊಂಡರು. ಆದರೆ ಅದು ಮೆದುಳಲ್ಲ! ಹೋಟೆಲಿನಲ್ಲಿ ಇಡ್ಲಿ ಹಿಟ್ಟನ್ನು ರುಬ್ಬುತ್ತಿದ್ದ ಅಡುಗೆಯವನೊಬ್ಬ, ಪಂಪಾಪತಿಯವರ ತಲೆಯ ಮೇಲೆ ಹಿಟ್ಟನ್ನು ಸುರಿದಿದ್ದ. ರಕ್ತಮಿಶ್ರಿತ ಹಿಟ್ಟು, ಅವರಿಗೆ ಮೆದುಳಿನಂತೆ ಕಂಡಿತ್ತು. ನಿಜಹೇಳಬೇಕೆಂದರೆ, ಆ ಹಿಟ್ಟು ಮೆತ್ತಿಕೊಂಡಿದ್ದರಿಂದಲೇ ಪಂಪಾಪತಿಯವರಿಗೆ ರಕ್ತಸ್ರಾವ ಸ್ವಲ್ಪ ಕಡಿಮೆಯಾಗಿ ಅವರ ಪ್ರಾಣ ಉಳಿದಿತ್ತು. ಕೊನೆಗೂ ಅವರು ಸಾವಿನ ದವಡೆಯಿಂದ ಪಾರಾದರು. ಆದರೆ ಪಕ್ಷದ ಕಚೇರಿಯಲ್ಲಿ ಸುರೇಶ್ ಮತ್ತು ಶೇಖರಪ್ಪ ಪ್ರಾಣ ಕಳೆದುಕೊಂಡಿದ್ದರು.
ದಾವಣಗೆರೆಯ ಕಾರ್ಮಿಕ ಚಳವಳಿಯ ಈ ಘಟನೆ ಕೇವಲ ಮೂವರು ಕಮ್ಯುನಿಸ್ಟ್ ನಾಯಕರ ಕಥೆಯಲ್ಲ. ಸಾವಿರಾರು ಕಾರ್ಮಿಕರ ಹಕ್ಕುಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರ ತ್ಯಾಗ, ಸಂಘಟಿತ ಕಾರ್ಮಿಕ ಶಕ್ತಿಯ ಬಗ್ಗೆ ಬಂಡವಾಳಶಾಹಿ ವ್ಯವಸ್ಥೆ ಹೊಂದಿದ್ದ ಭಯ, ಮತ್ತು ಆ ಶಕ್ತಿಯನ್ನು ಹತ್ತಿಕ್ಕಲು ಬಳಸಿದ ಹಿಂಸೆಯ ಕಥೆಯೂ ಹೌದು. ಪಂಪಾಪತಿ ಬದುಕುಳಿದರೂ, ಸುರೇಶ್ ಮತ್ತು ಶೇಖರಪ್ಪ ಅವರ ಜೀವಗಳು ಮರಳಿ ಬರಲಿಲ್ಲ. ಅವರ ಸಾವು ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಅಳಿಸಲಾಗದ ಗಾಯವಾಗಿ ಉಳಿಯಿತು.

ಲೇಖಕರು ಹಿರಿಯ ಪತ್ರಕರ್ತರು ಮತ್ತು ಕಾದಂಬರಿಕಾರರು. ಲಂಕೇಶ್ ಪತ್ರಿಕೆಯಲ್ಲಿ ಗುರುತಿಸಿಕೊಂಡ ಅವರು ನಂತರ ದಾವಣಗೆರೆಯಿಂದ ತಮ್ಮದೇ ಸಂಪಾದಕತ್ವದಲ್ಲಿ ಪ್ರಜಾಕೂಗು ಎಂಬ ಸ್ವತಂತ್ರ ಪತ್ರಿಕೆಯನ್ನು ಹೊರತರುತ್ತಿದ್ದರು. ದಂಗೆಯೆದ್ದವರು, ಗರ್ಭಗುಡಿ, ಮುಖ ಮತ್ತು ಮುಖವಾಡಗಳು, ಮೌನದ ಸನ್ನಿಧಿಯಲ್ಲಿ, ಮತ್ತೊಂದು ನೋಟೀಸು, ಪ್ರತಿಕ್ರಿಯೆ ಇವರ ಪ್ರಮುಖ ಕೃತಿಗಳು.

ಇವರು ದಾವಣಗೆರೆಯ ಕಮ್ಯುನಿಸ್ಟ್ ಚಳುವಳಿಯ ಕ್ರಾಂತಿಯ ಸಿಡಿಲುಗಳು ಈ ಮೂರು ಜನ ಸುಖದೇವ್ ರಾಜ್ಗುರು ಭಗತ್ ಸಿಂಗ್ ಅವರಂತೆ ಕಾರ್ಯನಿರ್ವಹಿಸಿದ್ದಾರೆ ನಮ್ಮ ಮುಂದಿನ ಯುವಕರಿಗೆ ವಿದ್ಯಾರ್ಥಿಗಳ ನಾಯಕರಿಗೆ ಸ್ಪೂರ್ತಿಯಾಗಿದ್ದಾರೆ ಲಾಲ್ ಸಲಾಂ ಕಾಮ್ರೆಡ್