ಪ್ರಜಾಪ್ರಭುತ್ವದಲ್ಲಿ ಯಾವುದೇ ಸಮುದಾಯದ ರಾಜಕೀಯ ಶಕ್ತಿ ಕೇವಲ ಆ ಸಮುದಾಯದ ಜನಸಂಖ್ಯೆಯಿಂದಷ್ಟೇ ನಿರ್ಧಾರವಾಗುವುದಿಲ್ಲ. ಆ ಸಮುದಾಯದ ರಾಜಕೀಯ ಜಾಗೃತಿ, ಸಂಘಟನಾ ಸಾಮರ್ಥ್ಯ, ನಾಯಕತ್ವದ ಗುಣಮಟ್ಟ ಮತ್ತು ಸಾರ್ವಜನಿಕ ನೀತಿಗಳ ಕುರಿತ ಸ್ಪಷ್ಟ ದೃಷ್ಟಿಕೋನವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ರಾಜಕೀಯ ನಾಯಕತ್ವದ ಕುರಿತು ಗಂಭೀರವಾದ ಆತ್ಮವಿಮರ್ಶೆಯ ಅಗತ್ಯವಿದೆ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಮುಸ್ಲಿಮರ ಸಂಖ್ಯೆ 17.22 ಕೋಟಿಗೂ ಅಧಿಕವಾಗಿದ್ದು, ದೇಶದ ಒಟ್ಟು ಜನಸಂಖ್ಯೆಯ ಶೇ.14.2ರಷ್ಟಿದೆ. ಇಲ್ಲಿ ಪ್ರಶ್ನೆಯಿರುವುದು ಈ ಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರ ರಾಜಕೀಯ ಪ್ರತಿನಿಧಿತ್ವ ಇದೆಯೇ ಎಂಬುದು. 2024ರ ಅಂಕಿಅಂಶವನ್ನು ನೋಡಿದರೆ ಇಲ್ಲ ಎಂಬ ಉತ್ತರ ಸ್ಪಷ್ಟವಾಗಿ ಲಭಿಸುತ್ತದೆ. 2024ರ ಲೋಕಸಭೆಯಲ್ಲಿ ಆಯ್ಕೆಯಾದ ಮುಸ್ಲಿಂ ಸಂಸದರ ಸಂಖ್ಯೆ ಕೇವಲ 24. ಒಟ್ಟು 543 ಸದಸ್ಯರ ಲೋಕಸಭೆಯಲ್ಲಿ ಇದು ಶೇ.4.4ರಷ್ಟು ಮಾತ್ರ. ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿನಿಧಿತ್ವವಿದ್ದರೆ ಸುಮಾರು 77 ಸಂಸದರು ಇರಬೇಕಾಗುತ್ತಿತ್ತು. ಅಂದರೆ ಸುಮಾರು 53 ಸ್ಥಾನಗಳಷ್ಟು ವ್ಯತ್ಯಾಸವಿದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, 1980ರಲ್ಲಿ ಲೋಕಸಭೆಯಲ್ಲಿ 49 ಮುಸ್ಲಿಂ ಸಂಸದರು ಇದ್ದರು. 2024ರಲ್ಲಿ ಆ ಸಂಖ್ಯೆ 24ಕ್ಕೆ ಇಳಿದಿದೆ. ನಾಲ್ಕು ದಶಕಗಳಲ್ಲಿ ಮುಸ್ಲಿಂ ಸಂಸದರ ಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಕುಸಿತವಾಗಿದೆ. ಅಂದರೆ, ಈ ನಾಲ್ಕು ದಶಕಗಳ ಅವಧಿಯಲ್ಲಿ ಮುಸ್ಲಿಮರ ರಾಜಕೀಯ ಪ್ರಜ್ಞೆಯ ಕುಸಿತವಾಗಿದೆಯೇ ಅಥವಾ ಅವರ ಅವಕಾಶಗಳನ್ನು ಪ್ರಜ್ಞಾಪೂರ್ವಕವಾಗಿ ಕಸಿದುಕೊಳ್ಳಲಾಗುತ್ತಿದೆಯೇ ಅಥವಾ ಹಿಂದಿನ ಮುಸ್ಲಿಮ್ ನಾಯಕರುಗಳು ಉತ್ತರಾಧಿಕಾರಿಗಳನ್ನು ಬೆಳೆಸುವಲ್ಲಿ ವಿಫಲರಾಗಿದ್ದಾರೆಯೇ ಎಂಬ ದಿಕ್ಕಿನಲ್ಲಿ ಚರ್ಚೆಗಳು ನಡೆಯಬೇಕಾಗಿದೆ.
ಈ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯ ಕೇವಲ ಪ್ರಮುಖ ರಾಜಕೀಯ ಪಕ್ಷಗಳನ್ನು ಹೊಣೆಮಾಡಿ ಕೈತೊಳೆದುಕೊಳ್ಳುವುದು ಸಾಕಾಗುವುದಿಲ್ಲ. ಮುಸ್ಲಿಂ ಸಮಾಜವೂ ತನ್ನೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ನಾವು ಎಂತಹ ನಾಯಕತ್ವವನ್ನು ಬೆಳೆಸುತ್ತಿದ್ದೇವೆ? ನಮ್ಮ ನಾಯಕರು ಮುಂದಿನ ಪೀಳಿಗೆಗೆ ಯಾವ ರಾಜಕೀಯ ಆದರ್ಶವನ್ನು ಬಿಟ್ಟು ಹೋಗುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.
ರಾಜಕೀಯ ನಾಯಕತ್ವವೆಂದರೆ ಚುನಾವಣೆಯ ಸಂದರ್ಭದಲ್ಲಿ ಜನರ ಮುಂದೆ ಕಾಣಿಸಿಕೊಳ್ಳುವುದು ಮಾತ್ರವಲ್ಲ. ಜನರ ಸಮಸ್ಯೆಗಳನ್ನು ಅಧ್ಯಯನ ಮಾಡುವುದು, ಅವುಗಳ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಸರ್ಕಾರದ ಮುಂದೆ ಅಂಕಿಅಂಶಗಳೊಂದಿಗೆ ಸಮುದಾಯದ ಸಮಸ್ಯೆಗಳನ್ನು ಮಂಡಿಸುವುದು ಮತ್ತು ಪರಿಹಾರಕ್ಕಾಗಿ ನಿರಂತರವಾಗಿ ಕೆಲಸ ಮಾಡುವುದು ನಿಜವಾದ ನಾಯಕತ್ವ.

ಇತಿಹಾಸದಲ್ಲಿಯೇ ಇದಕ್ಕೆ ಉತ್ತಮ ಭಾರತೀಯ ಉದಾಹರಣೆಗಳಿವೆ. ಸರ್ ಸಯ್ಯದ್ ಅಹ್ಮದ್ ಖಾನ್ ಅವರು ಮುಸ್ಲಿಂ ಸಮಾಜದ ಹಿಂದುಳಿಯುವಿಕೆಗೆ ಪರಿಹಾರವನ್ನು ಕೇವಲ ರಾಜಕೀಯದಲ್ಲಿ ಹುಡುಕಲಿಲ್ಲ. ಶಿಕ್ಷಣವೇ ಸಮುದಾಯದ ಭವಿಷ್ಯವನ್ನು ಬದಲಿಸಬಲ್ಲದು ಎಂದು ನಂಬಿ ಅಲಿಗಢ್ ಚಳವಳಿಗೆ ಬುನಾದಿ ಹಾಕಿದರು. ರಾಜಕೀಯವಾಗಿ ಬಲಿಷ್ಠ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಜ್ಞಾನ ಮತ್ತು ಸಾಮರ್ಥ್ಯ ಹೊಂದಿದ ಪೀಳಿಗೆಯನ್ನು ನಿರ್ಮಿಸಬೇಕು ಎಂದು ಅವರು ತಮ್ಮ ಕೆಲಸದ ಮೂಲಕವೇ ತೋರಿಸಿಕೊಟ್ಟಿದ್ದಾರೆ.
ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ನಾಯಕತ್ವವೂ ಮತ್ತೊಂದು ಮಹತ್ವದ ಮಾದರಿ. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಸ್ವಾತಂತ್ರ್ಯಾನಂತರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಶಿಕ್ಷಣವನ್ನು ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವೆಂದು ಪರಿಗಣಿಸಿದರು. ಅವರ ರಾಜಕೀಯ ದೃಷ್ಟಿ ಕೇವಲ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಸೀಮಿತವಾಗಿರದೆ, ಭಾರತದ ಭವಿಷ್ಯದೊಂದಿಗೆ ಬೆಸೆದುಕೊಂಡಿತ್ತು.
ಇಂದಿನ ಮುಸ್ಲಿಂ ರಾಜಕೀಯಕ್ಕೂ ಇಂತಹ ದೀರ್ಘಕಾಲೀನ ದೃಷ್ಟಿಕೋನ ಅಗತ್ಯ. ಯುವಕರಿಗೆ ಸಂವಿಧಾನ, ಕಾನೂನು, ಅರ್ಥಶಾಸ್ತ್ರ, ಆಡಳಿತ, ಬಜೆಟ್ ಮತ್ತು ಸಾರ್ವಜನಿಕ ನೀತಿಗಳ ಕುರಿತು ರಾಜಕೀಯ ತರಬೇತಿ ನೀಡಬೇಕು. ಪಂಚಾಯಿತಿ, ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಂದಲೇ ನಾಯಕತ್ವ ಬೆಳೆಸಬೇಕು.
ಬಹಳ ಮುಖ್ಯವಾಗಿ, ಮುಸ್ಲಿಂ ರಾಜಕೀಯವು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಮೀರಿ ನೀತಿ ಆಧಾರಿತ ರಾಜಕೀಯದತ್ತ ಸಾಗಬೇಕು. ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯ, ಕೌಶಲ್ಯಾಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಕುರಿತು ಸ್ಪಷ್ಟವಾದ ಕಾರ್ಯಯೋಜನೆ ಹೊಂದಿರಬೇಕು. ಇತರ ಸಮುದಾಯಗಳೊಂದಿಗೆ ವಿಶ್ವಾಸ ಮತ್ತು ಸಂವಾದವನ್ನು ಬೆಳೆಸುವ ರಾಜಕೀಯ ಭಾಷೆಯೂ ಅಗತ್ಯ.
ಇಲ್ಲಿ ಇನ್ನೊಂದು ಪ್ರಶ್ನೆಯೆಂದರೆ, ನಮಗೆ ಸಿಕ್ಕಿರುವ ಸೀಮಿತ ಅವಕಾಶಗಳನ್ನು ಜನರ ಬದುಕು ಬದಲಿಸಲು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ? ಮುಂದಿನ ಹತ್ತು ವರ್ಷಗಳಿಗೆ ಎಷ್ಟು ಹೊಸ ನಾಯಕರನ್ನು ತಯಾರಿಸುತ್ತಿದ್ದೇವೆ? ಈ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಸಮುದಾಯ ಕಂಡುಕೊಳ್ಳದೆ ಮುಂದಿನ ಪೀಳಿಗೆಯನ್ನು ರೂಪಿಸುವುದು ಕಷ್ಟವಾಗಬಹುದು.
ಹಾಗೆಯೇ, ಇಂದು ಕೇವಲ ರಾಜಕೀಯ ಪಕ್ಷಗಳ ಮತದಾರರಾಗಿರುವ ಮುಸ್ಲಿಮ್ ಸಮುದಾಯವನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸಲು ಸಂಘಟನೆ ಬೇಕು. ಸಂಘಟನೆಯನ್ನು ಪರಿಣಾಮಕಾರಿ ಪ್ರತಿನಿಧಿತ್ವವನ್ನಾಗಿ ಪರಿವರ್ತಿಸಲು ಸಮರ್ಥ ನಾಯಕತ್ವ ಬೇಕು. ಆ ನಾಯಕತ್ವವನ್ನು ದೀರ್ಘಕಾಲೀನ ಸಾಮಾಜಿಕ ಬದಲಾವಣೆಯ ಶಕ್ತಿಯನ್ನಾಗಿ ಮಾಡಲು ಶಿಕ್ಷಣ, ಅಧ್ಯಯನ, ಪ್ರಾಮಾಣಿಕತೆ ಮತ್ತು ದೂರದೃಷ್ಟಿ ಬೇಕು.
ಮುಸ್ಲಿಮರನ್ನು ತೋರಿಸಿ ಒಂದು ರಾಜಕೀಯ ಸಿದ್ದಾಂತದವರು ಧರ್ಮದ್ವೇಷದ ತಮ್ಮ ವೋಟ್‌ಬ್ಯಾಂಕ್ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅಂತವರನ್ನು ತೋರಿಸಿ ಇನ್ನೊಂದು ರಾಜಕೀಯ ಸಿದ್ದಾಂತದವರು ಮುಸ್ಲಿಮರನ್ನೆ ತಮ್ಮ ವೋಟ್‌ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಇಂತಹ ಹೆದರಿಕೆ, ಬೆದರಿಕೆಗಳ ರಾಜಕಾರಣಗಳನ್ನು ನಿಭಾಯಿಸಿಕೊಂಡು ನಿಟ್ಟುಸಿರು ಬಿಡುವಷ್ಟಕ್ಕೇ ಮುಸ್ಲಿಮ್ ಸಮುದಾಯದ ಯೋಚನಾ ಲಹರಿ ಸ್ಥಗಿತಗೊಂಡಿದೆ. ಇಂತಹ ರಾಜಕೀಯ ಸ್ಥಗಿತತೆಯಿಂದಾಗಿ ಸಮುದಾಯ ಇವತ್ತು ಎಸ್.ಐ.ಆರ್ ಎನ್ನುವ ಬಹುದೊಡ್ಡ ಆತಂಕವನ್ನು ಎದುರಿಸಬೇಕಾಗಿದೆ. ಈಗಲಾದರೂ ಸ್ಥಗಿತತೆಯನ್ನು ತೊರೆದು ಬರುವುದು ಸಮುದಾಯದ ಮುಂದಿರುವ ತುರ್ತು. ಶಿಕ್ಷಣ, ದೂರದೃಷ್ಟಿ ಮತ್ತು ಸಾಂವಿಧಾನಿಕ ಅವಕಾಶಗಳ ಸದ್ಭಳಕೆಗೆ ಒತ್ತು ನೀಡುವುದು ಮಾತ್ರವೇ ಹೊಸ ಚಲನೆಯನ್ನು ತಂದುಕೊಡಬಲ್ಲದು. ಅಂತಹ ಚಲನೆಗೆ ಕಾರಣವಾಗಬಲ್ಲಂತಹ ರಾಜಕೀಯ ನಾಯಕತ್ವಗಳು ಆಯಾ ಸಮುದಾಯಗಳ ನಿಜವಾದ ಪ್ರತಿನಿಧಿತ್ವ ಪಡೆಯುತ್ತವೆ. ಒಂದು ಸಮುದಾಯವಾಗಿ ಮುಸ್ಲಿಮ್ ಬದುಕುಗಳು ಅಂತಹ ನಿಜನಾಯಕತ್ವಗಳ ನಿರೀಕ್ಷೆಯಲ್ಲಿದೆ. ಮುಸ್ಲಿಂ ನಾಯಕರಾಗಲು ಹಂಬಲಿಸುತ್ತಿರುವವರು ಈ ನಿರೀಕ್ಷೆಯನ್ನು ಅರ್ಥ ಮಾಡಿಕೊಳ್ಳುವರೇ?

- ಸ್ವಾಲಿ ತೋಡಾರ್
ಲೇಖಕರು ಮುಸ್ಲಿಂ ಸಮುದಾಯ ಸಂವೇದನಾಶೀಲ ಕವಿ, ಕತೆಗಾರ ಮತ್ತು ಅನುವಾದಕ. ‘ಇಶಾರ’ ಪಾಕ್ಷಿಕ ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ರೂಮಿ ಕತೆಗಳು’ ಅವರ ಇತ್ತೀಚೆಗೆ ಪ್ರಕಟವಾದ ಕೃತಿ. ಇವರ ಸಾಹಿತ್ಯ ಕೃಷಿಗೆ ಸುನ್ನಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
