ಹತ್ತು ದಿನಗಳ ಕಾಲ ಕುಟುಂಬ ಸಮೇತ ಅಮೆರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಒಂದು ಕುತೂಹಲ ಹುಟ್ಟಿಸಿ ಹೋಗಿದ್ದರು. “ತಾನು ಸೆಪ್ಟೆಂಬರ್ 11ರಂದು ವಾಪಾಸ್ ಬಂದ ನಂತರ, ಇಡೀ ದೇಶವೇ ಬೆಚ್ಚಿಬೀಳುವಂತಹ ಸ್ಫೋಟಕ ವಿಚಾರವನ್ನು ಹೊರೆಗೆಳೆಯುತ್ತೇನೆ, ಕಾಯ್ತಾ ಇರಿ” ಎಂದಿದ್ದರು. ಆದರೆ ಪ್ರವಾಸದಿಂದ ಮರಳಿ ನಾಲ್ಕೈದು ದಿನಗಳು ಕಳೆದುಹೋಗಿವೆ. ಸ್ಪೋಟಕ ಸುದ್ದಿಯೂ ಇಲ್ಲ; ದೇಶವೂ ಬೆಚ್ಚಿ ಬೀಳಲಿಲ್ಲ! ಮಾಧ್ಯಮದವರು ಕೆದಕಿ ಕೇಳಿದ್ದಕ್ಕೆ, “ವಿಜಯದಶಮಿಗೆ ಯುದ್ದ ಆರಂಭವಾಗಲಿದೆ” ಎನ್ನುವ ಮೂಲಕ ಸೆಪ್ಟೆಂಬರ್ ಸ್ಪೋಟಕವನ್ನು ಅಕ್ಟೋಬರ್ಗೆ ಮುಂದೂಡಿದ್ದಾರೆ.
ರಾಜಕೀಯ ಆರೋಪದ ವಿಚಾರಕ್ಕೆ ಬಂದಾಗ ಕುಮಾರಸ್ವಾಮಿಯವರನ್ನು ಅವರ ವಿರೋಧಿಗಳು ಹಿಟ್ ಅಂಡ್ ರನ್ ಆಸಾಮಿ ಎಂದು ಲೇವಡಿ ಮಾಡುವುದುಂಟು. ಆದರೆ ವಿರೋಧ ಪಕ್ಷವಾಗಿ, ಆಡಳಿತ ಸರ್ಕಾರದ ವೈಖರಿ ಮೇಲೆ ಮುಗಿಬೀಳುವುದರಲ್ಲಿ ಬಿಜೆಪಿಗಿಂತಲೂ ಕುಮಾರಸ್ವಾಮಿಯವರು ಹೆಚ್ಚು ವೃತ್ತಿಪರರು. ಕೈಯಲ್ಲಿ ಒಂದಷ್ಟು ದಾಖಲೆಗಳನ್ನು ಹಿಡಿದುಕೊಂಡೇ ಪತ್ರಿಕಾಗೋಷ್ಠಿಗೆ ಬರುತ್ತಾರೆ. ಅವುಗಳನ್ನು ಕನ್ವಿನ್ಸಿಂಗ್ ಆಗಿ ಪ್ರೆಸೆಂಟ್ ಮಾಡುವಲ್ಲೂ ಅವರು ನಿಷ್ಣಾತರು. ಬಹುಶಃ, ಅವರ ತಂದೆ ದೇವೇಗೌಡರಿಂದ ಬಂದ ಬಳುವಳಿ ಇರಬಹುದು. ತಮಗೆ ಅಧಿಕಾರವಿದ್ದ ಸಂದರ್ಭದಲ್ಲಿ ಸರ್ಕಾರಿ ಕಾರ್ಯಾಂಗದ ಆಯಕಟ್ಟಿನ ಜಾಗದಲ್ಲಿ ತಮ್ಮ ನಿಷ್ಠರನ್ನು ಪ್ರತಿಷ್ಠಾಪಿಸಿರುವ ದೇವೇಗೌಡರ ಕಾರ್ಯತಂತ್ರ, ಇಂತಹ ದಾಖಲೆಗಳನ್ನು ಒದಗಿಸುವಲ್ಲಿ ಅವರ ನೆರವಿಗೆ ಬರುತ್ತದೆ ಎನ್ನಲಾಗುತ್ತೆ.

ಹಾಗಾಗಿ ಕುಮಾರಸ್ವಾಮಿಯವರು ಅಮೆರಿಕಾದಿಂದ ಬಂದ ನಂತರ ಸ್ಪೋಟಕ ಸುದ್ದಿ ಬಿಚ್ಚಿಡ್ತೀನಿ ಎಂದಾಗ, ಅದು ಸ್ಪೋಟಕವಲ್ಲದಿದ್ದರೂ ಕಡೇಪಕ್ಷ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ವಿಚಾರ ಆಗಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಕುಮಾರಸ್ವಾಮಿಯವರ ಕಡೆಯಿಂದ ಬಂದದ್ದು “ಸೂಕ್ತ ಸಮಯ ಬರಲಿ” ಎಂಬ ನೀರಸ ಪ್ರತಿಕ್ರಿಯೆ.
ಯಾಕೆ? ಏನಾಯ್ತು?
ಕುಮಾರಸ್ವಾಮಿಯವರನ್ನು ಈ ಪರಿ ಸೈಲೆಂಟಾಗಿಸಿದ್ದು, ಮತ್ತ್ಯಾರೂ ಅಲ್ಲ; ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿ ಸಿಎಂ ಡಿ.ಕೆ. ಶಿವಕುಮಾರ್ ಅವರು!
ಈಗಿನ ಕಾಲದ ರಾಜಕಾರಣಕ್ಕೆ ಬೇಕಾದ ಚಾಣಾಕ್ಷ ತಂತ್ರಗಾರಿಕೆಗಳನ್ನು ಕರಗತ ಮಾಡಿಕೊಂಡಿರುವ ಡಿ.ಕೆ.ಶಿವಕುಮಾರ್ ‘ಕಾಂಗ್ರೆಸ್ನ ಅಮಿತ್ ಶಾ’ ಅಂತಲೇ ಅವರ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಾರೆ. ಚುನಾವಣೆ ಗೆಲ್ಲುವುದಿರಲಿ, ಎದುರಾಳಿಗಳಿಗೆ ಶಾಕ್ ಕೊಟ್ಟು ಮಟ್ಟಹಾಕುವುದಿರಲಿ, ಅಂದುಕೊಂಡ ಕಾರ್ಯ ಸಾಧಿಸಿಕೊಳ್ಳುವುದಾಗಿರಲಿ ಎಲ್ಲದರಲ್ಲೂ ಅವರು ಒಂದು ಪಕ್ಕಾ ಪ್ಲ್ಯಾನ್ ಇಟ್ಟುಕೊಂಡೇ ಅಖಾಡಕ್ಕಿಳಿಯುತ್ತಾರೆ. ಇಲ್ಲವೆಂದಾಗಿದ್ದರೆ, ಸಿದ್ದರಾಮಯ್ಯನಂತಹ ಮಾಸ್ಲೀಡರ್ ಮತ್ತು ಸ್ವತಃ ರಾಹುಲ್ ಗಾಂಧಿಯವರ ಬೆಂಬಲವಿದ್ದ ವ್ಯಕ್ತಿಯನ್ನು ಯಾವ ತಕರಾರೂ ಇಲ್ಲದೆ ಸಿಎಂ ಗಾದಿಯಿಂದ ಕೆಳಗಿಳಿಸಿ ತಾವು ಆಸೀನರಾಗಲು ಸಾಧ್ಯವಾಗುತ್ತಿರಲಿಲ್ಲ! ಯಾರು ಏನೇ ಹೇಳಲಿ, ಇದು ಡಿ.ಕೆ. ಶಿವಕುಮಾರ್ ಅವರಿಗಿರುವ political strength and Commitment!!
ಎಚ್ಡಿಕೆ ಸೈಲೆಂಟಾಗಿಸಿದ ದಾಳ ಯಾವುದು?
ಬಿಡದಿ ಟೌನ್ಶಿಪ್ ವಿಚಾರದಲ್ಲಿ ಕುಮಾರಸ್ವಾಮಿಯವರ ಪ್ರತಿರೋಧದಿಂದ ಕೊಂಚ ಹಿನ್ನಡೆ ಅನುಭವಿಸಿದ ನಂತರ, ಡಿ.ಕೆ. ಶಿವಕುಮಾರ್ ಅವರು ಎಚ್ಡಿಕೆ ಪ್ರತಿ ನಡೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಯಾವಾಗ ಅವರು ಅಮೆರಿಕಾ ಪ್ರವಾಸಕ್ಕು ಮುನ್ನ `ಸ್ಪೋಟಕ ಸುದ್ದಿ’ಯ ಸುಳಿವು ಕೊಟ್ಟು ಹೋದರೋ, ಆಗ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಅದನ್ನು ನೆಗ್ಲೆಕ್ಟ್ ಮಾಡುವಂತೆ ಇರಲಿಲ್ಲ. ಆ ಸುದ್ದಿಯ ಸ್ಪೋಟಕದ ತೀವ್ರತೆ ಎಷ್ಟು ಕ್ಷೀಣದ್ದೇ ಆಗಿರಲಿ; ಈಗಾಗಲೇ ಸಚಿವ ನಾಗೇಂದ್ರ ರಾಜೀನಾಮೆ, ಕೆಪಿಎಸ್ಸಿ ಹಗರಣ, ಬಿಜೆಪಿ ಪಾದಯಾತ್ರೆಯಿಂದ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರವನ್ನು ಮತ್ತೊಂದು ಅನಗತ್ಯ ಚರ್ಚೆಗೆ ಕುಮಾರಸ್ವಾಮಿಯವರ ಆರೋಪ ಸಿಲುಕಿಸುವ ಸಾಧ್ಯತೆ ಇತ್ತು. ಮುಖ್ಯವಾಗಿ, ಬೆಂಗಳೂರು ಹೊರವಲಯದ ಅಪಾರ ಭೂ ಅತಿಕ್ರಮಣಕ್ಕೆ ಕಾರಣವಾಗಿರುವ ನೈಸ್ ಕಂಪನಿಯನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರು ಖರೀದಿಸಲು ಮುಂದಾಗಿದ್ದಾರೆ ಎಂದು ಆರೋಪಗೈದಿದ್ದ ಕುಮಾರಸ್ವಾಮಿಯವರು ಆ ಕುರಿತು ಮತ್ತಷ್ಟು ನಿಖರ ದಾಖಲೆಗಳನ್ನು ಹೊರಗೆಡವಿ ನೇರವಾಗಿ ಮುಖ್ಯಮಂತ್ರಿಯನ್ನು ಪೇಚಿಗೆ ಸಿಲುಕಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಪ್ರಕರಣ ಯಾವುದೇ ಆಗಿರಲಿ, ಎಚ್ಡಿಕೆ ಆರೋಪ ಮಾಡಿದ್ದರೆ ಅದು ಹೊಸ ಸರ್ಕಾರಕ್ಕೆ ಹೊಸ ತಲೆನೋವು ತರುತ್ತಿದ್ದುದು ಮಾತ್ರ ಸತ್ಯ.
ಯಾವ ಕಾರಣಕ್ಕೂ ಅಂತಹ ಅವಕಾಶ ಕೊಡದಿರುವುದು ಸರ್ಕಾರದ ಮುಖ್ಯಸ್ಥನಾಗಿ ಡಿ.ಕೆ. ಶಿವಕುಮಾರ್ ಅವರ ಮುಂದಿದ್ದ ಅನಿವಾರ್ಯ ಆಯ್ಕೆ. ಆಗ ಉರುಳಿದ್ದೇ ಪ್ರಜ್ವಲ್ ರೇವಣ್ಣ ಎಂಬ ದಾಳ! ಲೈಂಗಿಕ ದೌರ್ಜನ್ಯ ಆರೋಪಗಳ ಕಾರಣಕ್ಕೆ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಾಣಾಧೀನ ಬಂಧಿಯಾಗಿರುವ ಪ್ರಜ್ವಲ್ ರೇವಣ್ಣ, ಬಂಧೀಖಾನೆಯ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ ಫೋನ್ ಮೊದಲಾದ ಐಷಾರಾಮಿ ಸೌಕರ್ಯ ಪಡೆಯುತ್ತಿರುವ ಸುದ್ದಿ ಕೆಲ ದಿನಗಳ ಹಿಂದೆಯೇ ಬೆಳಕಿಗೆ ಬಂದಿತ್ತು. ಅದು ಆಲ್ಮೋಸ್ಟ್ ತಣ್ಣಗೂ ಆಗಿತ್ತು. ಆದರೆ ಯಾವಾಗ ಕುಮಾರಸ್ವಾಮಿಯವರು ದೇಶವೇ ಬೆಚ್ಚಿಬೀಳುವಂತ ಸುದ್ದಿ ಹೊರಹಾಕ್ತೀನಿ ಅಂದರೋ, ಅದೇ ಸಮಯಕ್ಕೆ ಸರಿಯಾಗಿ ಪ್ರಜ್ವಲ್ ಕೇಸು ಮತ್ತೆ ಮುನ್ನೆಲೆಗೆ ಬಂತು!

ಕುಮಾರಸ್ವಾಮಿಯವರಿನ್ನೂ ಅಮೆರಿಕಾದಲ್ಲಿದ್ದಾಗಲೇ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಬಳಸಿದ ಕೇಸಿನ ತನಿಖೆಗೆ ಚುರುಕು ನೀಡಲಾಯ್ತು. ಮೀಡಿಯಾಗಳಲ್ಲಿ ಸುದ್ದಿಗಳು ರಾರಾಜಿಸಿದವು. “ನಾನು ಮಾಜಿ ಸಂಸದ, ಮಾಜಿ ಪ್ರಧಾನಿಯ ಮೊಮ್ಮಗ, ನನ್ನನ್ನೇ ಪ್ರಶ್ನೆ ಮಾಡ್ತೀರಾ?” ಎಂದು ಪ್ರಜ್ವಲ್ ಪೊಲೀಸಿನವರಿಗೇ ಧಮಕಿ ಹಾಕಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಜೊತೆಗೆ, ಪ್ರಜ್ವಲ್ ಮೊಬೈಲಿನಲ್ಲಿ ಅಶ್ಲೀಲ ವೀಡಿಯೊಗಳು ಸಿಕ್ಕಿವೆ, ಜೈಲಿನ ಟೀವಿಯಲ್ಲೇ ಪೆನ್ಡ್ರೈವ್ ಕನೆಕ್ಟ್ ಮಾಡಿ ಅಶ್ಲೀಲ ವೀಡಿಯೋ ನೋಡ್ತಾರೆ ಎನ್ನುವ unconfirmed ಸುದ್ದಿಗಳು ಫ್ಲ್ಯಾಶ್ ಆದವು. ಆ ಮೂಲಕ ಜನ ಬಹುಪಾಲು ಮರೆತು ಹೋಗಿದ್ದ ಪ್ರಜ್ವಲ್ ರೇವಣ್ಣ ಮೇಲಿನ ಹಳೆಯ ಲೈಂಗಿಕ ಆರೋಪಗಳೆಲ್ಲ, ಮೊಬೈಸ್ ಕೇಸಿನ ಕಾರಣಕ್ಕೆ ಮತ್ತೆ ರಂಗು ಪಡೆದವು.
ಪ್ರಜ್ವಲ್ ರೇವಣ್ಣ ಕೇಸು ಮುನ್ನೆಲೆಗೆ ಬಂದಷ್ಟೂ ದೇವೇಗೌಡರ ಕುಟುಂಬದ ರಾಜಕಾರಣಕ್ಕೆ ದೊಡ್ಡ ಹಿನ್ನಡೆಯಾಗುವುದು ಶತಃಸಿದ್ದ. ಯಾಕೆಂದರೆ, ಆ ಗಂಭೀರ ಆರೋಪಗಳೇ ಅಂತವು. ಯಾವಾಗ ಕುಮಾರಸ್ವಾಮಿಯವರು ಸ್ಪೋಟಕ ಸುದ್ದಿಯ ಕೌತುಕ ಹುಟ್ಟಿಸಿ, ಅಮೆರಿಕಾದತ್ತ ಹೋದರೋ, ಅವರು ಬರುವುದರೊಳಗಾಗಿ ಪ್ರಜ್ವಲ್ ಕೇಸಿನ ತನಿಖೆ ಮೀಡಿಯಾಗಳಲ್ಲಿ ರಾರಾಜಿಸುವಂತೆ ಮಾಡಲಾಯ್ತು. ಅಕಸ್ಮಾತ್ ಕುಮಾರಸ್ವಾಮಿಯವರು ಮುಂದುವರೆದಿದ್ದೇ ಆದಲ್ಲಿ, ಪ್ರಜ್ವಲ್ ಕೇಸು ಅವರ ಕುಟುಂಬದ ರಾಜಕಾರಣವನ್ನೇ ಮಸುಕಾಗಿಸಲಿದೆ ಎನ್ನುವ ಸಣ್ಣ ಸಂದೇಶವನ್ನು ರವಾನೆ ಮಾಡಲಾಯ್ತು. ಈ ವ್ಯವಸ್ಥಿತ ಪ್ರತಿತಂತ್ರದಿಂದಾಗಿಯೇ ಕುಮಾರಸ್ವಾಮಿಯವರು ಸುದ್ದಿಯನ್ನು ಸ್ಪೋಟಿಸುವ ಬದಲು “ಸೂಕ್ತ ಸಮಯ ಬರಲಿ ನೋಡೋಣ” ಎಂದು ಸ್ಟೆಪ್ಬ್ಯಾಕ್ ಆಗಿದ್ದಾರೆ ಎಂಬ ಸುದ್ದಿಗಳು ಈಗ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಅಂತೂಇಂತೂ ಡಿ.ಕೆ.ಶಿ ಅವರ ಸರ್ಕಾರ ಕುಮಾರಸ್ವಾಮಿಯವರ ಸೆಪ್ಟೆಂಬರ್ ಬಾಂಬ್ನಿಂದ ಸದ್ಯಕ್ಕೆ ಬಚಾವಾದಂತಾಗಿದೆ. ಅಕ್ಟೋಬರ್ನ ವಿಜಯದಶಮಿಗೆ ಅದನ್ನು ಪೋಸ್ಟ್ ಪೋನ್ ಮಾಡಿದಂತೆ ಗೋಚರಿಸುತ್ತದೆಯಾದರೂ, ಪ್ರಜ್ವಲ್ ಪ್ರಕರಣ ಡಿ.ಕೆ. ಸರ್ಕಾರದ ಕೈಯಲ್ಲಿ ದೊಡ್ಡ ಅಸ್ತ್ರವಾಗಿ ಇರುವವರೆಗೆ, ಕುಮಾರಸ್ವಾಮಿಯವರಿಗೆ `ಸ್ಪೋಟಕ ಸುದ್ದಿ’ ಸ್ಪೋಟಿಸುವುದು ಅಷ್ಟು ಸುಲಭವಿಲ್ಲ ಎಂಬುದಂತೂ ಸತ್ಯ. ರಾಜಕಾರಣದಲ್ಲಿ ಸರಿ, ತಪ್ಪುಗಳಗಿಂತ ಹೆಚ್ಚಾಗಿ ತಂತ್ರ-ಪ್ರತಿತಂತ್ರಗಳೇ ಮುಖ್ಯವಾಗುತ್ತವೆ.
- ಮಾಚಯ್ಯ ಎಂ ಹಿಪ್ಪರಿಗಿ
