- ಗಿರೀಶ್ ತಾಳಿಕಟ್ಟೆ
ಕತೆಗಳು ಕನ್ನಡಕಗಳಿದ್ದಂತೆ; ಅವು ಹೊಸದೇನನ್ನೂ ನಮಗೆ ತೋರಿಸುವುದಿಲ್ಲ, ಆದರೆ ನಮ್ಮ ಸುತ್ತ ಈಗಾಗಲೇ ಇರುವ ಸಮಾಜವನ್ನೇ ಸ್ಪಷ್ಟವಾಗಿ ಅರಿಯಲು ನೆರವು ನೀಡುತ್ತವೆ. ಅಂದರೆ ಕತೆಗಳು ಕತೆಗಾರನ ಸೃಷ್ಟಿಯಲ್ಲ, ಕತೆಗಾರನ ಹುಡುಕಾಟಕ್ಕೆ ದಕ್ಕುವ ನೋಟಗಳು. ಪ್ರತಿಯೊಬ್ಬರ ನೋಟಗಳು ಅವರು ಬೆಳೆದು ಬಂದ ಪರಿಸರ, ಹಾದುಬಂದ ಅನುಭವಗಳು, ಆ ಅನುಭವಗಳಲ್ಲಿನ ಯಾತನೆ-ತಲ್ಲಣಗಳಿಗೆ ತಕ್ಕಂತೆ ಭಿನ್ನವಾಗಿರುತ್ತವೆ. ಹಾಗಾಗಿ ಒಂದೇ ಸಮಾಜದಲ್ಲಿ, ಒಂದೇ ಕಾಲಘಟ್ಟದಲ್ಲಿ, ಸಮಾನ ಸಂದರ್ಭದ ಸುತ್ತ ಭಿನ್ನ ಕತೆಗಳು ಅರಳಲು ಸಾಧ್ಯವಾಗಿದೆ. ನೋಟಗಳಲ್ಲಿ ಭಿನ್ನತೆಯಿದ್ದಾಗ, ಕತೆಗಳ ಚಲನೆಯಲ್ಲೂ ಭಿನ್ನತೆಗಳಿರುವುದು ಸಹಜ. ಆದರೆ ಕತೆಯೊಂದರ ಮೌಲ್ಯವನ್ನು ಅಳೆಯುವಾಗ ನಮಗೆ ಮುಖ್ಯವಾಗಬೇಕಾದದ್ದು ಚಲನೆಯ ವೇಗದಲ್ಲಿನ ಭಿನ್ನತೆಯಲ್ಲ; ಬದಲಿಗೆ, ಅದು ಚಲಿಸುತ್ತಿರುವ ದಿಕ್ಕು.
ಕತೆಗಳು ಸಮಾಜವನ್ನು ಅರಿಯುವಲ್ಲಿ ನಮಗೆ ಸ್ಪಷ್ಟತೆಯನ್ನು ತಂದುಕೊಡುವ ಜವಾಬ್ಧಾರಿ ಹೊತ್ತಿರುವುದರಿಂದ ಅವುಗಳ ಚಲನೆಯ ದಿಕ್ಕು ಮುಮ್ಮುಖನಾಗಿ ಅಥವಾ ಮೇಲ್ಮುಖನಾಗಿ ಇರಬೇಕೆ ಹೊರತು, ಹಿಮ್ಮುಖನಾಗಿ ಅಥವಾ ಕೆಳಮುಖನಾಗಿ ಇರಬಾರದು. ಉದಾಹರಣೆಗೆ ಭಾರತದ ಸಮಾಜವನ್ನೇ ಪರಿಗಣಿಸಿದಾಗ ಜಾತಿ, ಲಿಂಗ, ಭೌಗೋಳಿಕತೆ, ಆರ್ಥಿಕತೆಯ ಆಯಾಮಗಳಲ್ಲಿ ಅಸಮಾನತೆ ಮತ್ತು ಶೋಷಣೆ ಆಳವಾಗಿ ಬೇರುಬಿಟ್ಟಿದೆ. ಈ ಎಲ್ಲಾ ಆಯಾಮಗಳ ಕಟ್ಟಕಡೆಯ ಅಥವಾ ತಲಸ್ಪರ್ಶಿ ಸಮೂಹಗಳ ಸಂವೇದನೆಯನ್ನು ಅಂತರ್ಗತಗೊಂಡು ಅರಳುವ ಕತೆಗಳು ಸಹಜವಾಗಿಯೇ ಮುಮ್ಮುಖನಾಗಿ-ಮೇಲ್ಮುಖನಾಗಿ ಚಲಿಸುವ ಗುಣವನ್ನು ಪಡೆದಿರುತ್ತವೆ. ಇದಕ್ಕೆ ವಿಲೋಮವಾಗಿ, ಇಂಥಾ ಅಸಮಾನತೆ ಹಾಗೂ ಶೋಷಣೆಗಳನ್ನು ಸ್ಥಾಯಿಗೊಳಿಸುವ ಕತೆಗಳು ಹಿಂಚಲನೆಯನ್ನು ಪ್ರಚೋದಿಸುತ್ತಿರುತ್ತವೆ.
ಕಥಾ ಸಾಹಿತ್ಯದಲ್ಲಿ ದಲಿತ ಸಂವೇದನೆ, ಸ್ತ್ರೀ-ಸಂವೇದನೆಯ ಗುಣಗಳು ಮುಖ್ಯವಾಗುವುದೇ ಈ ಕಾರಣಕ್ಕೆ. ತಳಸ್ಪರ್ಶಿಯಿಂದ ಶುರುವಾಗುವ ಈ ಸಂವೇದನೆಗಳು ಕತೆಗಳ ದಿಕ್ಕನ್ನು ಮೇಲ್ಮುಖನಾಗಿ ಕೊಂಡೊಯ್ಯುವ ಮೂಲಕ ಪ್ರಗತಿಶೀಲ, ಪ್ರಜ್ಞಾವಂತಿಕೆಯ ಸಮಾಜವನ್ನು ನಿರ್ಮಿಸಲು ನೆರವಾಗುತ್ತವೆ. ಈ ಎರಡೂ ಬಗೆಯ ಸಂವೇದನೆಯನ್ನು ಒಳಗೊಂಡ ಕತೆಗಳ ಸಂಕಲನವೇ ‘ತೆಲುಗಿನ ನೀಳ್ಗತೆಗಳು’ ಕೃತಿ.
ಕತೆಗಾರ ಪ್ರೊ. ಕೊರಕೊಲು ಈನೋಚ್ ಅವರು ಅವಿಭಜಿತ ಆಂದ್ರದ ಕುಗ್ರಾಮವೊಂದರ ದಲಿತ (ಮಾದಿಗ) ಕುಟುಂಬದಲ್ಲಿ ಹುಟ್ಟಿಬೆಳೆದವರು. ಸ್ವಾತಂತ್ಯ್ರಪೂರ್ವದಲ್ಲಿ ದಲಿತ ಕುಟುಂಬಗಳು ಏನೆಲ್ಲಾ ಸಂಕಟ, ಅವಮಾನಗಳನ್ನು ಕಂಡುಂಡು ಬದುಕುತ್ತಿದ್ದವೋ ಅಂತಹ ವಾತಾವರಣದಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ಸ್ವಾತಂತ್ಯ್ರ ಸಿಕ್ಕನಂತರ ಈ ಪರಿಸ್ಥಿತಿ ಹಠಾತ್ತನೆ ಬದಲಾಗಲಿಲ್ಲ. ಈಗಲೂ ಬದಲಾಗಿಲ್ಲ ಅನ್ನುವುದು ಬೇರೆಯ ಮಾತು. ಈನೋಚ್ ಅವರೊಳಗಿನ ಕತೆಗಾರ ನೋಡುತ್ತಾ ಬೆಳೆದದ್ದು ಇಂತಹ ನೋಟಗಳನ್ನು. ಹಾಗಾಗಿ ಅವರ ಕತೆಗಳಲ್ಲಿ ಜಾತಿವ್ಯವಸ್ಥೆಯ ಕ್ರೌರ್ಯ, ಶ್ರಮಿಕರ ಬದುಕಿನ ಯಾತನೆ, ಶೋಷಣೆಯ ವಿರುದ್ಧದ ಬಂಡಾಯ, ಬಂಡಾಯಕ್ಕೆ ಎರಗುವ ದುರಂತಮಯ ಅಂತ್ಯ, ಮನುಷ್ಯ ಸಂಬಂಧದ ತೊಳಲಾಟ, ನೈತಿಕತೆಯ ಜಿಜ್ಞಾಸೆಗಳು ಓದುಗರನ್ನು ತಡೆದುನಿಲ್ಲಿಸಿ ಆತ್ಮವಿಮರ್ಶೆಗೆ ಉದ್ದೀಪಿಸುತ್ತವೆ.

ಕಾಲ ಬದಲಾಗಿದೆ, ಎಲ್ಲವೂ ಸಪಾಟಾಗಿದೆ ಎಂಬ ಭ್ರಮೆಯಲ್ಲಿರುವ ನಮ್ಮನ್ನು ಇಲ್ಲಿನ ಕತೆಗಳು ಮತ್ತೆ ನೆಲಕ್ಕಿಳಿಸಿ ವಾಸ್ತವವನ್ನು ತೋರುತ್ತವೆ. ಲಾರಿ ಚಕ್ರಕ್ಕೆ ಸಿಲುಕಿ ಆಕ್ಸಿಡೆಂಟ್ಗೆ ತುತ್ತಾದರೆ, ಪರಿಹಾರ ರೂಪದಲ್ಲಿ ಒಂದಷ್ಟು ಹಣ ಹಾಗೂ ಚೇತರಿಸಿಕೊಳ್ಳುವವರೆಗೆ ಆಹಾರ ಸಿಗುತ್ತದಲ್ಲಾ ಎಂಬ ಪ್ರಲೋಭೆಯನ್ನು ಒಬ್ಬ ಪುಟ್ಟ ದಲಿತ ಬಾಲಕಿಯಲ್ಲಿ ಹುಟ್ಟಿಸುವ ಹಸಿವು ವ್ಯವಸ್ಥೆಯ ಕ್ರೌರ್ಯವನ್ನು ತೆರೆದಿಡುತ್ತದೆ. ಪಟ್ಟಣದಲ್ಲಿ ತನ್ನ ಜಾತಿಯ ಹಿನ್ನೆಲೆಯನ್ನು `ಸೀಕ್ರೆಟ್’ ಮಾಡಿಟ್ಟು ಬದುಕಬೇಕಾದ ಮಗನ ಅನಿವಾರ್ಯತೆ ಕಂಡು ರೋಸಿಹೋಗುವ ರಾಮಕೋಠಿಗೆ ಜಾತಿಯೆಂಬುದು ಎಂಥಾ ಜೀವಘಾತುಕ ಉಸುಕಿನ ಗುಂಡಿ ಎಂಬುದನ್ನು ಅವನ ಕಾಯಕವೇ ಅರ್ಥ ಮಾಡಿಸುವ ವೇಳೆಗೆ ಎಲ್ಲವೂ ಮುಗಿದುಹೋಗಿರುತ್ತದೆ. ತಲೆಮಾರುಗಳಿಂದ ತಮ್ಮ ಆತ್ಮಾಭಿಮಾನದ ಸಂಕೇತವಾಗಿದ್ದ ತುಂಡು ನೆಲವನ್ನು ವಂಚನೆಯಿಂದ ಕಿತ್ತುಕೊಳ್ಳುವ ಪಾಳೇಗಾರಿಕೆ ವ್ಯವಸ್ಥೆಯ ಮುಂದೆ ಅಸಹಾಯಕನಾಗಿ ನಿಲ್ಲುವ ಕ್ಷೌರಿಕ ನಾಗಲಿಂಗಂನ ಮನದಲ್ಲಿ ಪುಟಿದೇಳುವ ತಲ್ಲಣಗಳು ನಮ್ಮನ್ನು ದಂಗುಬಡಿಸುತ್ತವೆ. ಊರ ಸಾಹುಕಾರನ ದರ್ಪದ ಸಂಕೇತಗಳಾದ ರೇಷ್ಮೆ ಬಟ್ಟೆಗಳನ್ನು ಸುಂಟರಗಾಳಿಯಿಂದ ಜೋಪಾನ ಮಾಡಲು ಅಗಸರ ಗೂಗಾಡು ತನ್ನನ್ನು ತಾನು ಪಣಕ್ಕೊಡ್ಡಿಕೊಳ್ಳುವ ಪರಿ ನಮ್ಮಲ್ಲಿ ಪಾಪಪ್ರಜ್ಞೆ ಬಿತ್ತಿದರೆ, ಕೆಳ ಜಾತಿಯವಳೆಂಬ ಏಕೈಕ ಕಾರಣಕ್ಕೆ ಹಾಡುಹಗಲೇ ತೀರಾ ಸಹಜವೆಂಬಂತೆ ತನ್ನ ಹೆಣ್ತನಕ್ಕೆ ಕೈಹಾಕಿ ಘಾಸಿಗೊಳಿಸುವ ಜಾತಿಕ್ರೌರ್ಯದ ವಿರುದ್ಧ ತಿರುಗಿಬೀಳುವ ಚಿಂದಂಬರನ ಹೆಂಡತಿ ನಮಗೆ ಬಂಡಾಯವನ್ನು ಪರಿಚಯಿಸಿಕೊಡುತ್ತಾಳೆ.
ಇಲ್ಲಿನ ಬಹುಪಾಲು ಕತೆಗಳು ಎಪ್ಪತ್ತು-ಎಂಬತ್ತರ ದಶಕದಲ್ಲಿ ಅರಳಿದಂತವು. ಹಾಗಾಗಿ ಕೆಲವರಿಗೆ ಇವು `ಔಟ್ಡೇಟೆಡ್’ ಎನ್ನಿಸಬಹುದು. ಮೊದಲೇ ಹೇಳಿದಂತೆ, ಕಾಲದ ಜೊತೆ ಎಲ್ಲವೂ ಬದಲಾಗಿದೆ ಎಂಬುದು ನಮ್ಮ ಭ್ರಮೆಯಷ್ಟೆ. ಹಳೆಯ ಸಮಸ್ಯೆಗಳು ಹೊಸ ರೂಪವ ಧರಿಸಿ ನಮ್ಮ ಕಣ್ಣಿಗೆ ಮಣ್ಣೆರಚುತ್ತಿವೆ. ಕಸದ ತೊಟ್ಟಿಯ ಸುತ್ತ ಬಂದು ಬೀಳುವ ಉಂಡೆಲೆಗಳಲ್ಲಿ ಆಯ್ದು ತಿನ್ನುತ್ತಿದ್ದ ಹಸಿವಿನ ಚಿತ್ರಣ ಬದಲಾಗಿದೆ; ಆದರೆ ಮಕ್ಕಳ ಹಸಿವು ನೀಗಿಸಲು ತನ್ನ ತಲೆಗೂದಲನ್ನೇ ಕತ್ತರಿಸಿ ಮಾರಾಟಕ್ಕಿಟ್ಟ ತಾಯಿಯ ಚಿತ್ರಣವನ್ನು ಅದು ಪಡೆದುಕೊಂಡಿದೆ. ಮಲಹೊರುವ ಮಾನವ ಪದ್ಧತಿ ರದ್ದಾಗಿದೆ; ಆದರೆ ಸೆಪ್ಟಿಕ್ ಟ್ಯಾಂಕ್ಗಳಲ್ಲಿ ಉಸಿರುಗಟ್ಟಿ ಜೀವತೆರುತ್ತಿರುವ ಶೋಷಿತರ ನಿದರ್ಶನಗಳು ನಿಂತಿಲ್ಲ. ಅಗಸರ ಗೂಗಾಡು, ಕ್ಷೌರಿಕರ ನಾಗಲಿಂಗಂಗಳು ಲಾಂಡ್ರಿ-ಸಲೂನುಗಳೆಂಬ ಹೊಸಜಗತ್ತಿನ ಚಕ್ರವ್ಯೂಹದಲ್ಲಿ ನರಳಾಟ ಮುಂದುವರೆಸಿದ್ದಾರೆ. ಚಿದಂಬರನಂತವರಿಗೆ ಜಾತಿದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆ ಇದೆಯಾದರೂ; ದೇವಸ್ಥಾನ ಪ್ರವೇಶಿಸಿದ್ದಕ್ಕೆ, ಕುದುರೆ ಏರಿ ಮದುವೆ ದಿಬ್ಬಣ ಬಂದಿದ್ದಕ್ಕೆ, ಒಳ್ಳೆಯ ಬಟ್ಟೆ ಹಾಕಿದ್ದಕ್ಕೆ ಹಲ್ಲೆಗಳಿಗೆ ತುತ್ತಾಗುವುದು ತಪ್ಪಿಲ್ಲ. ಬಂಡಾಯದ ಹೊರತಾಗಿಯೂ ಚಿದಂಬರನ ಹೆಂಡತಿ, ಅಕ್ಕ-ತಂಗಿಯರ ಮಾನಗಳು ಅತ್ಯಾಚಾರದ ಅಂಗಡಿಯಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿವೆ. ಹೀಗೆ ಸಮಸ್ಯೆಗಳು ಹೊಸ ರೂಪದಲ್ಲಿ ಉಸಿರಾಡುತ್ತಿರುವಾಗ, ಅವುಗಳಿಗೆ ಆತುಕೊಂಡಂತೆ ಅರಳಿದ ಕತೆಗಳು `ಔಟ್ಡೇಟೆಡ್’ ಆಗಲು ಸಾಧ್ಯವೇ?
ಶೋಷಣೆಯ ಅನಾವರಣದ ಜೊತೆಜೊತೆಗೆ ಇಲ್ಲಿನ ಕೆಲವು ಕತೆಗಳು ಮನುಷ್ಯನೊಳಗಿನ ನೈತಿಕತೆಯ ಜಿಜ್ಞಾಸೆಯನ್ನೂ ತೆರೆದಿಡುತ್ತವೆ. ತನ್ನ ಶಿಷ್ಯಂದಿರಿಗೆ ಉನ್ನತ ಆದರ್ಶಗಳನ್ನು ಕಲಿಸಿ, ಬೆಳೆಸುವ ಮೇಷ್ಟ್ರು ತನ್ನದೇ ಶಿಷ್ಯನ ಮುಂದೆ ಆದರ್ಶವನ್ನು ಬಲಿಕೊಡುವ ಒತ್ತಡಕ್ಕೆ ಸಿಲುಕುವ ಕ್ಷಮಾಯಾಚನೆಯ ಕತೆಯು ಎಲ್ಲ ಕಾಲಕ್ಕೂ ಸಲ್ಲುವಂತದ್ದು. ಅದೇರೀತಿ, ನಾಟಕ ಕಲಾವಿದೆಯ ಮೋಹಕ್ಕೆ ಸಿಲುಕಿ ಬಾಣಂತಿ ಹೆಂಡತಿಯನ್ನು ತೊರೆದುಹೋಗಿದ್ದ ಹೊಸಮನೆಯ ಛಲಮಯ್ಯ ತನ್ನ ವೃದ್ದಾಪ್ಯದಲ್ಲಿ ವಾಪಾಸು ಬಂದಾಗ, ಅವನೂ ಸೇರಿದಂತೆ ಕುಟುಂಬದ ಒಬ್ಬೊಬ್ಬ ಸದಸ್ಯರು ಒಂದೊಂದು ತೆರನಾಗಿ ಅನುಭವಿಸುವ ಸಂತಸ, ಸಂಕಟಗಳ ತಾಕಲಾಟ ಕೂಡಾ ನಮ್ಮೊಳಗೆ ಹಲವು ಪ್ರಶ್ನೆಗಳನ್ನು ಕಡೆಯುತ್ತದೆ.
ನೀಳ್ಗತೆಗಳನ್ನು ಓದಲು ಬೇಕಾದ ತಾಳ್ಮೆ, ಕತೆಗಳ ಅಂತರಾಳಕ್ಕೆ ಇಳಿಯಲು ಬೇಕಾದ ತನ್ಮಯತೆ ಮತ್ತು ಸಮಾಜವನ್ನು ಆಳಕ್ಕಿಳಿದು ಅರ್ಥ ಮಾಡಿಕೊಳ್ಳಲು ಬೇಕಾದ ಆಸಕ್ತಿಗಳು ಇದ್ದವರಿಗೆ ಈ ಸಂಕಲನದ ಕತೆಗಳು ಹೊಸ ಅನುಭವ ಕೊಡುವುದರಲ್ಲಿ ಸಂಶಯವಿಲ್ಲ. ಕೃತಿಯ ಈ ಶ್ರೇಯ ಮೂಲ ಕತೆಗಾರರಿಗೆ ಮಾತ್ರವಲ್ಲದೆ ಕನ್ನಡಕ್ಕೆ ಅನುವಾದಿಸಿ ತಂದ ಶ್ರೀ ಸೊಂದಲಗೆರೆ ಲಕ್ಷ್ಮೀಪತಿಯವರಿಗೂ ಸಲ್ಲುತ್ತದೆ. ಎಲ್ಲಿಯೂ ಅನ್ಯಭಾಷಾ ಕತೆಗಳು ಅನ್ನಿಸಿಕೊಳ್ಳದೆ, ಇಲ್ಲಿಯದೇ ಮಣ್ಣಿನ ಕತೆಗಳೇನೊ ಎನ್ನುವಷ್ಟರ ಮಟ್ಟಿಗೆ ಕತೆಗಳನ್ನು ಅವರು ಆಪ್ತವಾಗಿ ಕನ್ನಡಗೊಳಿಸಿದ್ದಾರೆ. ಮೂಲತಃ ಪ್ರಕಾಶಕರಾದರೂ, ಅನುವಾದದಲ್ಲಿ ವಿಶೇಷ ಮುತುವರ್ಜಿ ತೋರುತ್ತಾ ಬಂದಿರುವ ಲಕ್ಷ್ಮೀಪತಿಯವರ ಈ ಸಂಕಲನ ಕೂಡಾ ಅವರ ಹಿಂದಿನ ಅನುವಾದಿತ ಕೃತಿಗಳಂತೆ ಓದುಗರನ್ನು ಸೆಳೆಯುತ್ತವೆ.

ಕೃತಿ: ತೆಲುಗಿನ ನೀಳ್ಗತೆಗಳು
ಮೂಲ ಕಥೆಗಾರ: ಪ್ರೊ. ಕೊರಕೊಲು ಈನೋಚ್
ಅನುವಾದ: ಸೊಂದಲಗೆರೆ ಲಕ್ಷ್ಮೀಪತಿ
ಪ್ರಕಾಶನ: ಕಾವ್ಯಕಲಾ ಪ್ರಕಾಶನ
ಬೆಲೆ: ರೂ. 350
ಕೃತಿಗಾಗಿ ಸಂಪರ್ಕಿಸಿ: 86949 12860
