ಸಿದ್ದು-ಸತೀಶ್ ಮುನಿಸು: ಡಿಕೆಶಿ ಆಟಕ್ಕೆ ಅಹಿಂದ ಛಿದ್ರ!?

ಎತ್ತಿಂದೆತ್ತ ನೋಡಿದರೂ ಅಹಿಂದ ಮತ್ತೆ ಪುಟಿದು ನಿಲ್ಲುವ ಸಾಧ್ಯತೆ ಸದ್ಯಕ್ಕಂತೂ ಕ್ಷೀಣ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಇದು ಹೊಸದೇನಲ್ಲ. ಪರ್ಯಾಯ ಮತ್ತು ಜನಪರ ಎನಿಸಿಕೊಳ್ಳಬಹುದಾದ ಚಿಗುರುಗಳೆಲ್ಲ, ಹುಟ್ಟುಹಾಕಿದವರ ಕಣ್ಮುಂದೆಯೇ ತೊಟ್ಟುಕಳಚಿ ಬೀಳುತ್ತಾ ಬಂದಿವೆ. ರೈತ ಚಳವಳಿ, ದಲಿತ ಚಳವಳಿ, ಪ್ರಗತಿಪರ, ಬಂಡಾಯದ ಯತ್ನಗಳೆಲ್ಲವೂ ಆಯಾ ಪೀಳಿಗೆಯ ಅವಧಿಯಲ್ಲೇ ಸಡಿಲಗೊಳ್ಳುತ್ತಾ ಬಂದಿದ್ದನ್ನು ಕಂಡಿದ್ದೇವೆ. ಈ ರೂಢಿ ಈಗ ಅಹಿಂದದ ವಿಚಾರದಲ್ಲೂ ಮುಂದುವರೆದಂತೆ ಕಾಣುತ್ತೆ. ಆರ್ ಎಲ್ ಜಾಲಪ್ಪನವರ ಆಸರೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ, ಜೆಡಿಎಸ್‌ ನಾಯಕತ್ವಗಳ ವಿರುದ್ಧ ಬಂಡೆದ್ದ ಸಿದ್ದರಾಮಯ್ಯನವರ ಪ್ರವೇಶದ ನಂತರ ಅದೊಂದು ರಾಜಕೀಯ ಶಕ್ತಿಯಾಗಿ ರೂಪು ತಳೆದಿದ್ದು ಇತಿಹಾಸ.

ಸಿದ್ದರಾಮಯ್ಯನವರ ತರುವಾಯ ಅಹಿಂದದ ಭವಿಷ್ಯವೇನು? ಅದರ ನಾಯಕತ್ವವನ್ನು ಯಾರು ಸಮರ್ಥವಾಗಿ ಮುಂದೊಯ್ಯಬಲ್ಲರು? ಎಂಬೆಲ್ಲ ಪ್ರಶ್ನೆಗಳು ಇಷ್ಟುದಿನ ಕಾಡುತ್ತಿದ್ದವು. ಆದರೆ ಈಗ, ಸ್ವತಃ ಸಿದ್ದರಾಮಯ್ಯನವರ ಕಣ್ಮುಂದೆಯೇ ಅಹಿಂದ ವಿಘಟನೆಯಾಗುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟ ತನ್ನ ರಜತ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಸಮಾವೇಶವು ಅಹಿಂದದ ಒಗ್ಗಟ್ಟನ್ನು ಸಾರುವ ಬದಲು, ಒಡಕನ್ನು ಪ್ರದರ್ಶಿಸಿದೆ. 2004ರಲ್ಲಿ ಹಾವೇರಿಯಲ್ಲಿ ನಡೆದಿದ್ದ ಸಮಾವೇಶ ಅಹಿಂದದ ಪುನಶ್ಚೇತನಕ್ಕೆ ಮುನ್ನುಡಿ ಬರೆದಂತಿದ್ದರೆ, ಬೆಂಗಳೂರಿನ ಈ ಸಮಾವೇಶ ಹೆಚ್ಚೂಕಮ್ಮಿ ಅಹಿಂದ ಪತನದ ಬೆನ್ನುಡಿಯಂತಿತ್ತು.

ಅಹಿಂದ ನಾಯಕತ್ವಗಳ ನಡುವೆ ಗೊಂದಲಗಳು ಹೊಗೆಯಾಡುತ್ತಿರುವ ಈ ಸಂದರ್ಭದಲ್ಲಿ ಇಂತದ್ದೊಂದು ಸಮಾವೇಶದ ಅವಶ್ಯಕತೆ ಇತ್ತೆ? ಒಡಕು ಜಾಹೀರಾದರೆ ಅಹಿಂದ ಅವಲಂಬಿತ ಸಮುದಾಯಗಳನ್ನು ಕಾಡುವ ಅನಾಥ ಪ್ರಜ್ಞೆ ಎಂತದ್ದು? ರಾಜಕೀಯ ಮತ್ತು ಸಾಂಸ್ಕೃತಿಕ ವಿರೋಧಿಗಳಿಗೆ ಇದರಿಂದ ಆಗಬಹುದಾದ ಲಾಭ ಏನು? ಎಂಬ ಯಾವ ಕಾಳಜಿಗಳೂ ಇಲ್ಲದೆ, ಪ್ರಸ್ತುತ political silence ಅನ್ನು break ಮಾಡುವ ಧಾವಂತವಷ್ಟೇ ಮುಖ್ಯವಾಗಿದ್ದ ಆ ಸಮಾವೇಶವು ಅಹಿಂದಕ್ಕೆ ದೊಡ್ಡ ಹಿನ್ನಡೆ ತಂದಿತ್ತಿದೆ. ಸತೀಶ್‌ ಜಾರಕಿಹೊಳಿ ಮತ್ತು ಎಚ್ ಸಿ ಮಹದೇವಪ್ಪ ತರಹದ ಸಿದ್ದರಾಮಯ್ಯನವರ ಅತ್ಯಾಪ್ತರು ಮತ್ತು ಅಹಿಂದ ಸಂಘಟನೆಯ ಎರಡನೇ ಸಾಲಿನ ನಾಯಕರುಗಳ ಅನುಪಸ್ಥಿತಿ ಹುಟ್ಟುಹಾಕಿರುವ ಪ್ರಶ್ನೆಗಳು ವಿರೋಧಿಗಳಿಗೆ ಭರ್ಜರಿ ಅವಕಾಶ ತೆರೆದಿಟ್ಟಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇ.ಡಿ. ತಂಡವು ಅಬಕಾರಿ ಹಗರಣದ ನೆಪದಲ್ಲಿ ಸತೀಶ್‌ ಜಾರಕಿಹೊಳಿಯವರ ಮೇಲೆ ನಡೆಸಿರುವ ದಾಳಿ ಕೂಡಾ ಈ ಹಿನ್ನೆಲೆಯಲ್ಲಿ ಕಾಕತಾಳೀಯವಲ್ಲ. ಅಹಿಂದ ನಾಯಕರ ನಡುವಿನ ಗೊಂದಲಗಳನ್ನು ಭುಗಿಲೇಳಿಸುವ ಒಂದು ವ್ಯವಸ್ಥಿತ ತಂತ್ರದಂತೆ ಭಾಸವಾಗುತ್ತಿದೆ.

ಅಹಿಂದದ ವಿಘಟನೆಗೆ ಕಾರಣ ಯಾರು?

ಸಿದ್ದರಾಮಯ್ಯನವರು ಮತ್ತು ಸತೀಶ್‌ ಜಾರಕಿಹೊಳಿಯವರ ನಡುವಿನ ಮನಸ್ತಾಪ ಈಗ ಜಗಜ್ಜಾಹೀರು. ಹೊರಗಡೆ ಚರ್ಚೆಯಾಗುತ್ತಿರುವ ತೀವ್ರತೆಯಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಇದೆಯೋ, ಇಲ್ಲವೋ ಗೊತ್ತಿಲ್ಲ; ಆದರೆ, ಸಾರ್ವಜನಿಕ ಬದುಕಿನಲ್ಲಿರುವ ಇಂತಹ ವ್ಯಕ್ತಿಗಳ ಕುರಿತು ಹೊರಗಡೆ ನಡೆಯುವ ಚರ್ಚೆಗಳು, ಒಳಗಿನ ವಾತಾವರಣವನ್ನು ಕಹಿಗೊಳಿಸುವಷ್ಟು ಪ್ರಭಾವಶಾಲಿಯಾಗಿರುತ್ತವೆ ಎಂಬುದನ್ನು ಮರೆಯಬಾರದು. ಅದನ್ನು ತಿಳಿಗೊಳಿಸುವ ಪ್ರಯತ್ನ ಈ ಇಬ್ಬರಿಂದ ನಡೆಯದಿರುವುದು ಸಂಶಯಗಳನ್ನು ಇನ್ನಷ್ಟು ವಿಕೋಪದತ್ತ ಕೊಂಡೊಯ್ಯುತ್ತಿದೆ. ಸಿದ್ದು ಅಭಿಮಾನಿಗಳು ಇದಕ್ಕಾಗಿ ಜಾರಕಿಹೊಳಿಯವರನ್ನು ದೂರುತ್ತಿದ್ದರೆ, ಸತೀಶ್‌ ಅಭಿಮಾನಿಗಳು ಸಿದ್ದರಾಮಯ್ಯನವರನ್ನೇ ಆರೋಪಿಯಾಗಿಸುವ ಯತ್ನದಲ್ಲಿದ್ದಾರೆ. ಅಹಿಂದಕ್ಕೆ ಇದಕ್ಕಿಂತ ದೊಡ್ಡ ಹಿನ್ನಡೆ ಬೇಕಾ?

ನಿಜ ಹೇಳಬೇಕೆಂದರೆ, ಈ ಒಡಕಿನ ಮೂಲ ಬೀಜ ಹುದುಗಿರುವುದು ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಗಾದಿಯ ಕನಸಿನಲ್ಲಿ. ಇವತ್ತಿನ ಮಟ್ಟಿಗೆ ರಾಜಕಾರಣ ಎನ್ನುವುದೇ ಅಧಿಕಾರ ಕೇಂದ್ರಿತವಾದುದು. ಹಾಗಾಗಿ ಅಧಿಕಾರ ಪಡೆಯಲೋಸುಗ, ರಾಜಕೀಯ ಪಡಸಾಲೆಗೆ ಸೀಮಿತಗೊಂಡಂತೆ ನಡೆಸುವ ತಂತ್ರಗಾರಿಕೆಗಳನ್ನು ತಪ್ಪು ಎಂದು ಹೇಳಲಾಗದು. ಆ ಆಯಾಮದಲ್ಲಿ ಡಿ. ಕೆ. ಶಿವಕುಮಾರ್‍‌ ಅವರು ಸಿಎಂ ಆಗಲು ನಡೆಸಿದ ಯಾವ ಪ್ರಯತ್ನಗಳೂ ತಪ್ಪಲ್ಲ. ಆದರೆ, ಅಂತಹ ಪ್ರಯತ್ನಗಳಿಗಾಗಿ, ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದಿದ್ದ ಅಹಿಂದದಂತಹ ಸಂಘಟನೆಗಳನ್ನು ಬಲಿಪಶು ಮಾಡಲು ಮುಂದಾಗಿದ್ದು ಯಾರು? ಎಂಬುದು ಇಲ್ಲಿ ಗಂಭೀರ ಪ್ರಶ್ನೆ.

ಡಿ.ಕೆ. ಶಿವಕುಮಾರ್‍‌ ಅವರು ಆಗಿಂದಾಗ್ಗೆ “ಪಯತ್ನ ಫಲ ಕೊಡದಿದ್ದರೂ, ಪ್ರಾರ್ಥನೆ ಕೈಬಿಡುವುದಿಲ್ಲ” ಎಂದು ಹೇಳುತ್ತಿರುತ್ತಾರೆ. ವಿಪರೀತ ದೈವಭಕ್ತರಾದ ಅವರು ಬಾಯ್ಮಾತಲ್ಲಿ ಪ್ರಾರ್ಥನೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಂತೆ ಕಂಡರೂ, ಸಿಎಂ ಕುರ್ಚಿಗಾಗಿ ಪ್ರಯತ್ನಕ್ಕೇ ಹೆಚ್ಚು ಒತ್ತು ನೀಡುತ್ತಾ ಬಂದಿದ್ದರು. ಆರಂಭದಲ್ಲಿ ಅವರಿಗೆ ಸಂಖ್ಯಾಬಲದ ಕಾರಣಕ್ಕೆ ಹಿನ್ನಡೆಯಾಗಿದ್ದೂ ದಿಟ. ಅಧಿಕಾರ ಹಂಚಿಕೆಯ ಬಗ್ಗೆ ಪದೇಪದೇ ಪ್ರಸ್ತಾಪಿಸಲು ಮುಂದಾದ ಒಂದು ಹಂತದಲ್ಲಿ ಸ್ವತಃ ಎಐಸಿಸಿ ಅಧ್ಯಕ್ಷರಾದ ಖರ್ಗೆಯವರು “ಮೊದಲು ನಿಮ್ಮ ಪರ ಶಾಸಕರ ಸಹಿ ಸಂಗ್ರಹಿಸಿ ತನ್ನಿ, ಆಮೇಲೆ ನಾವೇ ಸಿದ್ದರಾಮಯ್ಯನವರ ಬಳಿ ಮಾತನಾಡುತ್ತೇವೆ” ಎಂದು ಹೇಳಿ ಕಳಿಸಿದ್ದರು. ಸಿದ್ದರಾಮಯ್ಯನವರಿಗೆ ಎದುರಾಗಿ ತಾನು ಶಾಸಕರನ್ನು ಒಗ್ಗೂಡಿಸಲು ಸಾಧ್ಯವಿಲ್ಲ ಎಂದರಿತ ಶಿವಕುಮಾರ್‍‌ ಅವರು, ಸಿದ್ದರಾಮಯ್ಯನವರ ಒಂದೊಂದೇ ರೆಕ್ಕೆಗಳನ್ನು ಕತ್ತರಿಸಿ ಅವರನ್ನು ದುರ್ಬಲಗೊಳಿಸುವ ಯತ್ನಕ್ಕೆ ಮುಂದಾದರು. ಅದರ ಮೊದಲ ಬಲಿ, ಕೆ ಎನ್‌ ರಾಜಣ್ಣ. ಕಟ್ಟಕಡೆಗೆ ಅವರು ಟಾರ್ಗೆಟ್‌ ಮಾಡಿಕೊಂಡಿದ್ದು ಸತೀಶ್‌ ಜಾರಕಿಹೊಳಿ!

ನಂಬರ್‍‌ ಮೂವತ್ತೇಳು!

ಸತೀಶ್‌ ಜಾರಕಿಹೊಳಿಯವರು ಸಿದ್ದರಾಮಯ್ಯನವರಿಗೆ ಆಪ್ತರು ಮಾತ್ರವಲ್ಲ, ಅವರ ರಾಜಕೀಯ ಬಲವೂ ಹೌದು. ಬೆಳಗಾವಿ ರಾಜಕಾರಣದಲ್ಲಿನ ಹಸ್ತಕ್ಷೇಪ ಮತ್ತು ಸಿದ್ದರಾಮಯ್ಯನವರಿಗೆ ಪ್ರತಿಸ್ಪರ್ಧಿಯಾಗುವ ಯತ್ನಗಳ ಕಾರಣಕ್ಕೆ ಸತೀಶ್‌ ಜಾರಕಿಹೊಳಿಯವರು ಡಿ.ಕೆ.ಶಿವಕುಮಾರ್ ಅವರನ್ನೂ ಮುಲಾಜಿಲ್ಲದೆ ಎದುರು ಹಾಕಿಕೊಳ್ಳುತ್ತಾ ಬಂದಿದ್ದರು. ಹಾಗಾಗಿ, ಡಿ.ಕೆ. ಶಿವಕುಮಾರ್‍‌, ಸತೀಶ್‌ ಅವರನ್ನು ಸೆಳೆಯಲು ಯತ್ನಿಸುತ್ತಿರುವ ಬಗ್ಗೆ ರಾಜಕೀಯ ವಲಯದಲ್ಲಿ ಗಾಳಿಸುದ್ದಿಗಳು ಹರಿದಾಡಿದಾಗ ಯಾರು ಕೂಡಾ ಗಂಭೀರವಾಗಿ ಪರಿಗಣಿಸಲಿಲ್ಲ.

ಆದರೆ ರಾಜಕಾರಣ ಎನ್ನುವುದು ಅನಿರೀಕ್ಷಿತ ತಿರುವುಗಳ ಹೆದ್ದಾರಿ. ಆ ದಾರಿಯ ಅಂತಿಮ ಗುರಿ ಅಧಿಕಾರ! ಸತೀಶ್‌ ಜಾರಕಿಹೊಳಿಯವರು ಸಿದ್ರಾಮಯ್ಯನವರ ಕಟ್ಟಾ ಬೆಂಬಲಿಗ ಎನ್ನುವುದು ಎಷ್ಟು ಸತ್ಯವೋ, ಅವರೊಳಗೊಬ್ಬ ರಾಜಕೀಯ ಮಹತ್ವಾಕಾಂಕ್ಷಿ ಇರುವುದು ಕೂಡಾ ಅಷ್ಟೇ ಸತ್ಯ. ಅದು ಸಹಜವೂ ಹೌದು! ರಾಜ್ಯ ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಎಂದರೆ, ಅದನ್ನು ಸಿಎಂ ಹುದ್ದೆ ಅಂತಲೇ ಪರಿಗಣಿಸಬೇಕಾಗುತ್ತದೆ. ಸಿದ್ದರಾಮಯ್ಯನವರ ನಂತರದಲ್ಲಿ ಅಹಿಂದ ಬಲದ ಮೇಲೆ ತಾನು ಸಿಎಂ ಆಗಬೇಕೆನ್ನುವ ಆಸೆ ಸತೀಶ್‌ ಅವರಿಗೆ ಇದ್ದಿರುವುದರಲ್ಲಿ ಅಚ್ಚರಿಯಿಲ್ಲ. ಹಾಗೆ ನೋಡಿದರೆ, ಸಿದ್ರಾಮಯ್ಯನವರ ನಂತರ ಅಹಿಂದದ ಚುಕ್ಕಾಣಿ ಹಿಡಿಯಲು ಮತ್ತು ಅದರ ಬಲದ ಮೇಲೆ ಮುಖ್ಯಮಂತ್ರಿಯಾಗಲು ಸತೀಶ್ ಅವರು ಸೈದ್ದಾಂತಿಕವಾಗಿಯೂ ಅತ್ಯಂತ ಸಮರ್ಥ ವ್ಯಕ್ತಿ. ಸಿದ್ದರಾಮಯ್ಯನವರಂತೆಯೇ ಜನಪರ ಆಡಳಿತ ವೈಖರಿಯ ಕಾಳಜಿಯೂ ಅವರಲ್ಲಿದೆ. ಆದಾಗ್ಯೂ ಅವರಿಗೆ ಒಂದಷ್ಟು ವಾಸ್ತವಿಕ ಅಡ್ಡಿಗಳಿದ್ದವು. ಸಿದ್ರಾಮಯ್ಯ ಮತ್ತು ಅಹಿಂದದ ಬಲವಿದ್ದರೂ ಡಿ.ಕೆ. ಶಿವಕುಮಾರ್‍‌ ಅವರನ್ನು ಓವರ್‍‌ ಟೇಕ್‌ ಮಾಡಿ ಸತೀಶ್‌ ಅವರು ಸಿಎಂ ಆಗುವುದು ಕಷ್ಟದ ಮಾತಿತ್ತು. ಸ್ವತಃ ಡಿ.ಕೆ. ಶಿವಕುಮಾರ್ ಅವರಿಗಿದ್ದ ಸಿಎಂ ಹುದ್ದೆಯ ತುಡಿತ ಮತ್ತು ಪಕ್ಷನಿಷ್ಠೆಯ ಕಾರಣಕ್ಕೆ ಅವರ ಬಗ್ಗೆ ಸೋನಿಯಾ ಗಾಂಧಿಯವರಿಗಿದ್ದ ಅನುಕಂಪ ಅವರಿಗಿದ್ದ ದೊಡ್ಡ ಶಕ್ತಿ. ಡಿ.ಕೆ. ಶಿವಕುಮಾರ್ ಅವರು ಒಮ್ಮೆಯಾದರೂ ಸಿಎಂ ಹುದ್ದೆ ಅಲಂಕರಿಸಿ ಇಳಿಯದ ಹೊರತು, ಸತೀಶ್‌ ಅವರಿಗೆ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಯ ಸ್ಥಾನ ಒದಗಿಬರುವ ಸಾಧ್ಯತೆ ಖಂಡಿತ ಇರಲಿಲ್ಲ. ಶಿವಕುಮಾರ್‍‌ ಎಷ್ಟು ಬೇಗ ಸಿಎಂ ಆಗುವರೋ, ಅಷ್ಟು ಸತೀಶ್‌ ಅವರ ಸಿಎಂ ಹಾದಿ ಸುಗಮವಾಗಲಿತ್ತು. ಒಂದುವೇಳೆ, ಈ ಅವಧಿಯಲ್ಲಿ ಡಿ.ಕೆ. ಸಿಎಂ ಆಗದೆ, 2028ರ ಚುನಾವಣೆಯ ನಂತರ ಸಿಎಂ ಹುದ್ದೆಗೆ ಹಕ್ಕು ಸಾಧಿಸುವಂತಾದರೆ, ಸತೀಶ್‌ ಅಥವಾ ಬೇರಾವುದೇ ಕಾಂಗ್ರೆಸ್‌ ನಾಯಕರ ಸಿಎಂ ಕನಸು ಮತ್ತಷ್ಟು ಮುಂದೆಹೋಗಲಿತ್ತು. ಈಗ ಸಿದ್ದರಾಮಯ್ಯನವರು ಐದು ವರ್ಷ ಪೂರ್ಣಗೊಳಿಸಿ,  ಅಕಸ್ಮಾತ್‌ 2028ಕ್ಕೆ ಕಾಂಗ್ರೆಸ್ ಸರ್ಕಾರವೇ ಬಂದು, ಡಿ.ಕೆ. ಶಿವಕುಮಾರ್ ಅವರು ಸಿಎಂ ಆದರು ಅಂತಿಟ್ಟುಕೊಳ್ಳಿ, ಆಗ ಐದು ವರ್ಷ ಪೂರ್ಣಗೊಳಿಸುವವರೆಗೆ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಯಾರಿಗಾದರೂ ಕಷ್ಟವಾಗುತ್ತಿತ್ತು. ಯಾಕೆಂದರೆ, ಸಿದ್ದರಾಮಯ್ಯನವರು ಎರಡು ಅವಧಿಗೆ ಪೂರ್ಣಾವಧಿ ಸಿಎಂ ಆದ ವಾದವನ್ನು ಅವರು ಬಳಸಿಕೊಳ್ಳುತ್ತಿದ್ದರು. ಈ ಅವಧಿಯಲ್ಲೇ ಡಿ.ಕೆ. ಶಿವಕುಮಾರ್‍‌ ಸಿಎಂ ಆಗಿಹೋದರೆ, 2028ರ ವೇಳೆಗೆ ಬೇರೆಯವರಿಗೆ ಅವಕಾಶಗಳು ಮುಕ್ತವಾಗಲಿದ್ದವು.  ಬಹುಶಃ ಇದು ಸತೀಶ್‌ ಜಾರಕಿಹೊಳಿಯವರಿಗೂ ಮನವರಿಕೆಯಾಗಿರಬಹುದು. ಅಥವಾ ಡಿ.ಕೆ. ಶಿವಕುಮಾರರೇ ಮನವರಿಕೆ ಮಾಡಿಕೊಟ್ಟಿರಲೂಬಹುದು.

ಡಿ.ಕೆ. ಶಿವಕುಮಾರ್‍ ಮತ್ತು ಸತೀಶ್‌ ಜಾರಕಿಹೊಳಿಯವರ ನಡುವೆ ಆಗಿಂದಾಗ್ಗೆ ನಡೆದ ಭೇಟಿಗಳು ಇಂಥಾ ಗುಮಾನಿಗಳನ್ನು ಹುಟ್ಟುಹಾಕುತ್ತಿರುವ ವೇಳೆಯಲ್ಲೆ ಸಿದ್ದರಾಮಯ್ಯನವರ ವಿರುದ್ಧ ಸತೀಶ್‌ ಅವರು ಮೂವತ್ತೇಳು ಶಾಸಕರ  ಸಹಿ ಸಂಗ್ರಹಿಸಿದ್ದಾರೆ ಎಂಬ ವದಂತಿಗಳು ಹಬ್ಬಿದವು. ಜಾರಕಿಹೊಳಿಯವರು ಈಗಾಗಲೇ ಅಂತಹ ವದಂತಿಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಆದರೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟಾಗ ಸತೀಶ್‌ ಅವರ ಸಹಜ ಪ್ರತಿಕ್ರಿಯೆಗಳು ಮತ್ತು ಹೊಸ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿಗಾಗಿ ಅವರು ಪಟ್ಟು ಹಿಡಿದಿದ್ದು ಜನರಲ್ಲಿ ಗುಮಾನಿಗಳನ್ನಂತೂ ಮೂಡಿಸಿವೆ.  ಈಗ ಯಾರೇ ಕೆಪಿಸಿಸಿ ಅಧ್ಯಕ್ಷರಾಗಿ, ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ, ಸಿಎಂ ಸ್ಥಾನಕ್ಕೆ ಹಕ್ಕು ಮಂಡಿಸಲು ಇತರರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಡಿ.ಕೆ. ಶಿವಕುಮಾರ್‍‌ ಅವರು 2023ರ ಫಲಿತಾಂಶದ ನಂತರ ಸಿಎಂ ಹುದ್ದೆಗೆ ಹಕ್ಕು ಮಂಡಿಸಿದ್ದೇ ಆ ಬಲದಲ್ಲಿ. ಬಹುಶಃ, ಹೊಸ ಸರ್ಕಾರದಲ್ಲಿ ಪ್ರಭಾವಿ ಖಾತೆಯ ಜೊತೆಗೆ ತನ್ನಿಂದ ತೆರವಾಗುವ ಕೆಪಿಸಿಸಿ ಅಧ್ಯಕ್ಷಗಿರಿಗೂ ಹೈಕಮಾಂಡ್‌ ಬಳಿ ಶಿಫಾರಸ್ಸು ಮಾಡುವುದಾಗಿ ಡಿ.ಕೆ. ಶಿವಕುಮಾರ್‍‌, ಸತೀಶ್‌ ಅವರ ಮನವೊಲಿಸಿದ್ದರೇ? ಇದು ಕಾಣದ ಊಹೆಯಷ್ಟೆ!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯ ತಮ್ಮ ಈ ಅವಧಿಯಲ್ಲಿ ಆಪ್ತರ ಬಗ್ಗೆ ಹೆಚ್ಚು ಕೇರ್‍‌ ತೆಗೆದುಕೊಳ್ಳುತ್ತಿಲ್ಲ ಎಂಬ ಮಾತುಗಳು ಆರಂಭದಿಂದಲೂ ಕೇಳಿಬರುತ್ತಿದ್ದವು. ಕೆ.ಎನ್‌. ರಾಜಣ್ಣನಂತಹ ತಮ್ಮ ಹಾರ್ಡ್‌ಕೋರ್‍‌ ಅನುಯಾಯಿಯನ್ನು ಸಚಿವ ಸ್ಥಾನದಿಂದ ವಜಾ ಮಾಡುವಾಗಲೂ, ಸಿದ್ದರಾಮಯ್ಯನವರು ಸಣ್ಣದೊಂದು ಪ್ರತಿರೋಧ ತೋರಲಿಲ್ಲ. ಎಸ್‌.ಐ.ಆರ್ ಕುರಿತ ಹೇಳಿಕೆ ನೆಪವಾಗಿತ್ತಾದರೂ, ಸಿದ್ದು ಪರವಾಗಿ ಡಿ.ಕೆ. ವಿರುದ್ಧ ಖಡಕ್‌ ವಕಾಲತ್ತು ವಹಿಸಿಕೊಂಡು ಬಂದಿದ್ದೇ ಅವರನ್ನು ಮಟ್ಟಹಾಕಲು ಪ್ರಧಾನ ಕಾರಣ ಎನ್ನುವುದು ನಗ್ನ ಸತ್ಯ. ಅಷ್ಟಾದರೂ ಅವರನ್ನು ರಕ್ಷಿಸಿಕೊಳ್ಳಲು ಸಿದ್ದರಾಮಯ್ಯನವರು ಮುಂದಾಗಲಿಲ್ಲ. ಸಿದ್ದರಾಮಯ್ಯನವರ ಇಂತಹ ನಿರ್ಲಕ್ಷ್ಯದ ವರ್ತನೆ ಸತೀಶ್‌ ಅವರ ವಿಚಾರದಲ್ಲೂ ನಡೆದಿತ್ತೇ? ಅದರಿಂದ ಬೇಸತ್ತು, ಸತೀಶ್‌ ಅವರು ಸಿದ್ದರಾಮಯ್ಯನವರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದರೇ? ಅದನ್ನು ಡಿ.ಕೆ. ಶಿವಕುಮಾರ್‍‌ ಅವರು ತಮ್ಮ ಕಾರ್ಯಸಾಧನೆಗೆ ಎನ್‌ಕ್ಯಾಷ್‌ ಮಾಡಿಕೊಂಡರೇ? ಇಂತಹ `ರೇ’ಗಳಿಗೆ ರಾಜಕಾರಣದಲ್ಲಿ ಪ್ರಾಮಾಣಿಕ ಉತ್ತರ ಸಿಗುವುದು, ಅವರೆಲ್ಲ ನಿವೃತ್ತರಾಗಿ ತಮ್ಮತಮ್ಮ ಆತ್ಮಕತೆಗಳನ್ನು ಬರೆದುಕೊಂಡಾಗಷ್ಟೆ!

ಕೂಸು ಬಡವಾಯ್ತು!

ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾದಂತೆ, ಸಿದ್ದು-ಸತೀಶ್‌ ನಡುವಿನ ಮನಸ್ತಾಪದ ನಡುವೆ ಈಗ ಅಹಿಂದ ಸಂಘಟನೆಯೇ ತನ್ನ ಬಲ ಕಳೆದುಕೊಳ್ಳುತ್ತಿದೆ. ಅಹಿಂದ ಕೇವಲ ಒಂದು ರಾಜಕೀಯ ಮೆಟ್ಟಿಲಾಗಿರಲಿಲ್ಲ. ಪ್ರಬಲ ಜಾತಿಗಳೇ ರಾಜಕೀಯ ಅಧಿಕಾರವನ್ನು ಉಣ್ಣುತ್ತಾ ಬಂದ, ಮತ್ತು ಆ ಅಧಿಕಾರದ ಲಾಭ ಪಡೆದು ಶೋಷಿತರ ಏಳ್ಗೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದಕ್ಕೆ ಹುಟ್ಟಿಕೊಂಡ ಪ್ರತಿರೋಧದ ಭರವಸೆಯಾಗಿತ್ತು. ಅಹಿಂದದ ಬಲದಲ್ಲಿ ಸಿದ್ದರಾಮಯ್ಯನವರು ರಾಜಕೀಯ ಉನ್ನತಿಗಳನ್ನು ತಲುಪುತ್ತಾ ಬಂದದ್ದು ದಿಟವಾದರೂ, ಹಾಗೆ ಸಿಕ್ಕ ಅಧಿಕಾರವನ್ನು ತಕ್ಕಮಟ್ಟಿಗೆ ಈ ಸಮುದಾಯಗಳ ಪ್ರಾತಿನಿಧ್ಯಕ್ಕೆ ಬಳಸುತ್ತಾ ಬಂದರು. ಅವರು ಮಾಡಬಹುದಾಗಿದ್ದ, ಮಾಡದೇ ಉಳಿಸಿದ ಅಹಿಂದ ಏಳ್ಗೆಯ ಕೆಲಸಗಳು ಸಾಕಷ್ಟು ಇವೆಯಾದರೂ ಅಹಿಂದ ಆಸರೆಯ ಸಿದ್ದರಾಮಯ್ಯನವರ ಬದಲು, ಯಥಾ ಪ್ರಕಾರ ಬೇರಾವುದೇ ಬಲಾಢ್ಯ ಸಮುದಾಯಗಳ ನಾಯಕರು ಸಿಎಂ ಆಗಿದ್ದಿದ್ದರೆ, ಈಗ ಆಗಿರುವ ಕೆಲಸಗಳೂ ಆಗುತ್ತಿರಲಿಲ್ಲ. ಇಲ್ಲಿ ಸಿದ್ದರಾಮಯ್ಯ ಎಂದರೆ ಕೇವಲ ಸಿದ್ದರಾಮಯ್ಯನವರು ಮಾತ್ರ ಅಲ್ಲ, ಅಹಿಂದಕ್ಕೆ ಶಕ್ತಿಯಾಗಿ ಆವರಿಸಿಕೊಂಡಿದ್ದ ಅವರ ಸಮಸ್ತ ಆಪ್ತ ಬಲ.

ಈಗ ಆ ಆಪ್ತ ಬಲವು ಛಿದ್ರಗೊಂಡಿದೆ. ವೈಯಕ್ತಿಕ ಪ್ರತಿಷ್ಠೆಗಳ ಕಾಳಗದಲ್ಲಿ ಅಹಿಂದದ ಒಟ್ಟಾರೆ ಆಶಯ, ಭವಿಷ್ಯಗಳು ಅದನ್ನು ಕಟ್ಟಿದವರಿಗೇ ಬೇಡವಾಗಿವೆ. ಇಂಥಾ ಸಂದರ್ಭದಲ್ಲಿ ಬೇರೆಯವರನ್ನು ದೂಷಿಸಿ ಪ್ರಯೋಜನವಿಲ್ಲ. ಅಹಿಂದ ಗಟ್ಟಿಗೊಳ್ಳಲು ಜೆಡಿಎಸ್‌ ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳ ಮೂಲಕ ಪ್ರೇರಣೆ ಒದಗಿಸಿದ್ದು ದೇವೇಗೌಡರು. ಹಾಗಂತ ಅವರಿಗೆ ಅಹಿಂದದ ಹುಟ್ಟಿನ ಕ್ರೆಡಿಟ್‌ ಕೊಡಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಈಗ ಅಹಿಂದದ ಪತನಕ್ಕೆ ಡಿ.ಕೆ. ಶಿವಕುಮಾರರನ್ನೋ ಅಥವಾ ಮತ್ತ್ಯಾರೋ ಹೊರಗಿನವರನ್ನು ದೂರುವುದೂ ಅಸಂಬದ್ಧ. All Is Fair in Love and War ಎನ್ನುವಂತೆ, ರಾಜಕಾರಣದಲ್ಲಿ ಅಧಿಕಾರ ಪಡೆಯಲು ನಡೆಸುವ ತಂತ್ರಗಳೆಲ್ಲವೂ ಈಗ ಮಾನ್ಯ! ಆದರೆ ಅಹಿಂದದ ಅವನತಿ ಪ್ರಸ್ತುತ ರಾಜಕಾರಣವನ್ನೂ ಮೀರಿ ಕಾಡುವಂತಹ ಆತಂಕ. ಅದರ ಬಗ್ಗೆ ಒಳಗಿನವರಿಗೇ ಕಾಳಜಿ ಇಲ್ಲವೆಂದ ಮೇಲೆ ಹೊರಗಿನವರನ್ನು ಹೊಣೆಯಾಗಿಸುವುದು ತರವೇ? ಈಗ ಸತೀಶ್‌ ಅವರ ಮೇಲೆ ನಡೆದಿರುವ ಇ.ಡಿ. ದಾಳಿಯು ಈಗಾಗಲೇ ಇರುವ ಮನಸ್ತಾಪಗಳನ್ನು ಇನ್ನಷ್ಟು ಆಳಗೊಳಿಸುವ ಸಾಧ್ಯತೆಯಿದೆ. ಸಡಿಲಗೊಂಡಿರುವ ಅಹಿಂದ ಬಂಧವನ್ನು ಶಾಶ್ವತವಾಗಿ ಒಡೆದುಹಾಕಬೇಕೆಂದೇ ಈ ಇ.ಡಿ. ದಾಳಿಯನ್ನು ಆಯೋಜಿಸಿದ್ದರೂ ಅಚ್ಚರಿಯಿಲ್ಲ. ನಾವು ನಿಂತ ನೆಲೆ ಸಡಿಲಗೊಂಡಾಗ, ಎದುರಾಳಿಗಳು ನಮ್ಮ ಮೇಲೆ ಹೇಗೆಲ್ಲಾ ವಿಜೃಂಭಿಸುತ್ತಾರೋ ಅದೆಲ್ಲವೂ ಇನ್ನುಮುಂದೆ ಸಾಧ್ಯ.

ಅಂದಹಾಗೆ, ಅಹಿಂದದ ಪತನವೆಂದರೆ ಶೋಷಿತ-ನಿರ್ಲಕ್ಷಿತ ಸಮುದಾಯಗಳ ಹೋರಾಟದ ಒಟ್ಟಾರೆ ಅಂತ್ಯವಲ್ಲ. ತಮ್ಮ ಹಕ್ಕು, ಘನತೆ, ಪ್ರಾತಿನಿಧ್ಯಗಳಿಗಾಗಿ ಆ ಸಮುದಾಯಗಳ ಹೋರಾಟ ನಿಂತರವಾಗಿ ನಡೆಯುತ್ತಲೇ ಬಂದಿದೆ. ಬುದ್ದ, ಬಸವಣ್ಣನವರ ಕಾಲದಿಂದ ಬಾಬಾ ಸಾಹೇಬರವರೆಗೆ ಕಾಲಕಾಲಕ್ಕೆ ಆ ಸಮುದಾಯಗಳು ಬೇರೆಬೇರೆ ವೇದಿಕೆಗಳ ಮೂಲಕ ಒಗ್ಗೂಡಿ ಪ್ರತಿರೋಧಿಸಿವೆ. ಅದು ಮುಂದಕ್ಕೂ ಮುಂದುವರೆಯುತ್ತದೆ, ಬೇರೊಂದು ಹೆಸರಿನಿಂದ, ಹಾಗೂ ಬೇರೊಂದು ನಾಯಕತ್ವಗಳ ಮುಂಚೂಣಿಯಲ್ಲಿ. ಆದರೆ ನಮ್ಮ ಕಾಲಘಟ್ಟದಲ್ಲಿ ಆ ಪ್ರತಿರೋಧ ಅಥವಾ ಜಾಗೃತಿ ಅಹಿಂದದ ರೂಪ ಧರಿಸಿತ್ತು. ಕೊಟ್ಟವರಿಂದಲೇ ಆ ರೂಪ ಕಳಾಹೀನಗೊಳ್ಳುತ್ತಿದೆಯಷ್ಟೆ. ಇಲ್ಲಿ ಗೆದ್ದಿದ್ದು ಯಾರು? ಎನ್ನುವುದಕ್ಕಿಂತ ಸೋತಿದ್ದು ಯಾರು? ಎಂಬ ಪ್ರಶ್ನೆ ಕೇಳಿಕೊಂಡರೆ ಕೇವಲ ತಳಸಮುದಾಯಗಳ ನಾಯಕತ್ವಗಳು ಮಾತ್ರವಲ್ಲ, ಸ್ವತಃ ಕಾಂಗ್ರೆಸ್‌ ಪಕ್ಷ ದಿಗಿಲುಗೊಳ್ಳಬೇಕಾಗುತ್ತದೆ. 2028ರ ಚುನಾವಣೆಗೆ ಹೀಗೆ ದಿಗಿಲುಗೊಂಡ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವ ಹೊರೆ ಡಿ.ಕೆ.ಶಿವಕುಮಾರ್‍‌ ಅವರ ಹೆಗಲೇರಲಿದೆ. ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾಲವಿನ್ನೂ ಮಿಂಚಿಲ್ಲ ಎಂಬುದೊಂದೆ ಈಗ ಉಳಿದಿರುವ ಭರವಸೆ.

ಮಾಚಯ್ಯ ಎಂ ಹಿಪ್ಪರಿಗಿ
ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು

Leave a Reply

Your email address will not be published. Required fields are marked *