ಹಳಿತಪ್ಪಿದ ರೈಲು ಅಪಘಾತವಾಗಲೇಬೇಕು…. ಕನ್ನಡ ಸಿನಿಮಾಸಾಹಿತ್ಯ ಕೂಡಾ!!

ಈಗೀಗ ಸಿನಿಮಾಕ್ಕಾಗಿ, ಕಥೆಗಾಗಿ ಸಾಹಿತ್ಯಗಳನ್ನು ಬರೆಯುವುದಕ್ಕಿಂತ ಏನನ್ನು ಬರೆದರೆ ರೀಲ್ಸ್‌ ಲೋಕದಲ್ಲಿ ವೈರಲ್‌ ಆಗುತ್ತದೆ, ಟ್ರೆಂಡಿಂಗ್‌ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿದ್ದಿಗೆ ಬಿದ್ದು ಹಾಡುಗಳನ್ನು ಹಡೆಯಲಾಗುತ್ತಿದೆ.

ಒಮ್ಮೆ ಪುನೀತ್‌ ರಾಜ್‌ಕುಮಾರ್ ಅವರ ಹೊಸ ಸಿನಿಮಾದ ಟೈಟಲ್‌ ಚರ್ಚೆ ನಡೆಯುತ್ತಿತ್ತು.  ಜೋಗಿ ಸಿನಿಮಾದ ಯಶಸ್ಸಿನ ಕಾರಣಕ್ಕೆ ಪ್ರೇಮ್‌ಗೆ ನಿರ್ದೇಶನದ ಹೊಣೆ ವಹಿಸಿದ್ದರು. ಕಥೆಯನ್ನೇನೋ ರಾಜ್‌ ಕುಟುಂಬ ಒಪ್ಪಿತ್ತು, ಆದರೆ ಪ್ರೇಮ್‌ ಸೂಚಿಸಿದ ಟೈಟಲ್‌ ಬಗ್ಗೆ ಅವರಿಗೆ ಅಪಸ್ವರವಿತ್ತು. ಪರಮ ಪ್ರಚಾರಪ್ರಿಯನಾದ ಪ್ರೇಮ್‌ ಅದಾಗಲೇ ಸಿನಿಮಾಗೆ `ಪೋಲಿ’ ಎಂದು ಹೆಸರಿಟ್ಟು, ಪತ್ರಿಕೆಗಳಲ್ಲಿ ಜಾಹೀರಾತೂ ಪ್ರಕಟವಾಗುವಂತೆ ನೋಡಿಕೊಂಡಿದ್ದ. ಆ ಟೈಟಲ್‌ಗೆ ಅಭಿಮಾನಿಗಳಲ್ಲೂ ಅಪಸ್ವರ ಕೇಳಿಬಂದಿತ್ತು. ಪಾರ್ವತಮ್ಮನವರಿಗೆ ಟೈಟಲ್‌ ಸುತಾರಾಂ ಇಷ್ಟವಿರಲಿಲ್ಲ.

ಚರ್ಚೆಯ ದಿನ ಪಾರ್ವತಮ್ಮನವರು ಔಪಚಾರಿಕವಾಗಿ ಕೇಳಿದರು “ಈ ಸಿನಿಮಾಗೆ ಏನು ಹೆಸರು ಫೈನಲ್‌ ಮಾಡಿದೀರಿ ಪ್ರೇಮ್‌?”. ಅವರ ಅಸಮಾಧಾನದ ಸುಳಿವು ಹಿಡಿದಿದ್ದ ಪ್ರೇಮ್‌, ಶತಾಯಗತಾಯ ಪಾರ್ವತಮ್ಮನವರನ್ನು ಒಪ್ಪಿಸಲು “ಪೋಲಿ ಅನ್ನೋ ಹೆಸರನ್ನೆ ಫೈನಲ್‌ ಮಾಡಿದೀನಮ್ಮಾ, ಹೊಸ ಜನರೇಷನ್ನಿನವರ ಟ್ರೆಂಡ್‌ ಕ್ಯಾಚ್‌ ಮಾಡಬಹುದು” ಅಂದನಂತೆ. ಸ್ವಲ್ಪ ಹೊತ್ತು ಯೋಚಿಸಿದ ಪಾರ್ವತಮ್ಮನವರು, “ಅದೆಲ್ಲಾ ಸರಿ, ಆದ್ರೆ ಹೆಸರು ಯಾಕೋ ಸರಿ ಕಾಣ್ತಿಲ್ಲ. ನಮ್ಮ ಫ್ಯಾಮಿಲಿಯ ಸಿನಿಮಾ ನೋಡಲಿಕ್ಕೆ ಬಂದವರಿಗೆ ಚಿತ್ರದಲ್ಲಿ ಮನರಂಜನೆ, ಮೆಸೇಜು ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ಮುಜುಗರ ಮಾತ್ರ ಆಗಬಾರದು. ಥಿಯೇಟರಿಗೆ ಬಂದು ಆ ಸಿನಿಮಾ ನೋಡಿ ಹೋಗುತ್ತಿರುವ ಒಂದು ತುಂಬು ಕುಟುಂಬವನ್ನು ಯಾರಾದ್ರೂ ‘ಯಾವ ಸಿನಿಮಾಗೆ ಹೋಗಿದ್ದ್ರಿ?’ ಅಂತ ಕೇಳಿದರೆ, ಅವರು ‘ಪೋಲಿ ಸಿನಿಮಾಗೆ ಹೋಗಿದ್ವಿ’ ಅಂತ ಹೇಳೋದಕ್ಕೆ ಎಷ್ಟು ಮುಜುಗರ ಆಗುತ್ತೆ. ಬೇಡ, ಬೇರೆ ಹೆಸರನ್ನ ಯೋಚ್ನೆ ಮಾಡಿ” ಎಂದು ಕಡ್ಡಿತುಂಡು ಮಾಡಿದರಂತೆ. ಕೊನೆಗೆ ‘ರಾಜ್‌’ ಎಂಬ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಯ್ತು.

ಇವತ್ತು ನಾವೇನು ನೀಲಿಚಿತ್ರಗಳು ಅಥವಾ ಅಡಲ್ಟ್‌ ರೇಟೆಡ್‌ ಸಿನಿಮಾಗಳು ಅಂತ ಕರೆಯುತ್ತೇವೋ, ಅಂತಹ ಸಿನಿಮಾಗಳಿಗೆ ಆ ಕಾಲದ ದೇಸಿ ಭಾಷೆಯಲ್ಲಿ ಪೋಲಿ ಸಿನಿಮಾ ಅಂತ ಕರೆಯುತ್ತಿದ್ದರು. ಅದನ್ನು ಗ್ರಹಿಸಿಯೇ ಪಾರ್ವತಮ್ಮನವರು ಹಾಗೆ ಹೇಳಿದ್ದರು.

ಆ ಸಿನಿಮಾ ಬಿಡುಗಡೆಯಾದದ್ದು 2009ರಲ್ಲಿ. ಅದಕ್ಕು ಒಂದು ವರ್ಷ ಹಿಂದೆ ಈ ಮಾತುಕತೆ ನಡೆದಿರಬಹುದು. ಅಂದರೆ ಪಾರ್ವತಮ್ಮನವರು ಮತ್ತು ಪ್ರೇಮ್‌ ನಡುವೆ ನಡೆದ ಆ ಚರ್ಚೆ ಕೇವಲ ಒಂದು ಸಿನಿಮಾ ಟೈಟಲ್‌ಗೆ ಸೀಮಿತವಾಗಿ ನಮಗೆ ಗೋಚರಿಸುವುದಿಲ್ಲ, ಬದಲಿಗೆ ಹೊಸತನ ಮತ್ತು ಟ್ರೆಂಡ್ ಹೆಸರಿನಲ್ಲಿ ಕನ್ನಡ ಸಿನಿಮಾರಂಗ  ತನ್ನ ಸಾಹಿತ್ಯಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದ ಕ್ಷೋಭೆಯನ್ನು ಕಾಣಿಸುತ್ತದೆ. ಇಲ್ಲಿ ಪಾರ್ವತಮ್ಮನವರು ಸಿನಿಮೋದ್ಯಮದ ಎಚ್ಚರ ಮತ್ತು ಹೊಣೆಗಾರಿಕೆಗಳನ್ನು ಪ್ರತಿನಿಧಿಸಿದರೆ, ಪ್ರೇಮ್‌ ಇಂಡಸ್ಟ್ರಿಯ ತುರ್ತುಖ್ಯಾತಿ ಮತ್ತು ಪ್ರಚಾರಭೋಗದ ಬೆನ್ನುಬೀಳುವಿಕೆಯನ್ನು ಪ್ರತಿನಿಧಿಸುತ್ತಾನೆ. ಈಗ ಅದೇ ಪ್ರೇಮ್‌ ಬರೆದಿರುವ `ಸರ್ಸೆ ಸರ್ಸೆ ಸೆರಗು ಸರ್ಸೆ….’ ಎಂಬ ಹಾಡೊಂದು ಅಪಾರ ವಿವಾದಕ್ಕೀಡಾಗಿದೆ.

ನಿಜ ಹೇಳಬೇಕೆಂದರೆ 90ರ ದಶಕದ ಅಂತ್ಯದಲ್ಲೇ ಕನ್ನಡ ಸಿನಿಮಾ ಸಾಹಿತ್ಯದ ಅವಸಾನ ಸಣ್ಣಗೆ ಶುರುವಾಗಿತ್ತು. ಸಾಹಿತ್ಯಕ್ಕೆ ಟ್ಯೂನ್‌ ಹಾಕುವ ಕಾಲಘಟ್ಟ ಕಳೆದು, ಟ್ಯೂನ್‌ಗೆ ಪದಬಂಧದ ರೀತಿಯಲ್ಲಿ ಸಾಹಿತ್ಯ ಬರೆಯುವ `ಹೊಸತನ(?)’ ಎಂದು ಶುರುವಾಯ್ತೋ ಅಂದೇ ಸಿನಿಮಾದಲ್ಲಿ ಸಾಹಿತ್ಯ ಸೃಜನಶೀಲತೆ ಹೊರಬಸಿಯಲು ಆರಂಭಿಸಿತ್ತು. ಆದರೆ ಯಾವುದೇ ವಿಚಾರದಲ್ಲಿ ಪಲ್ಲಟ ಎನ್ನುವುದು ರಾತ್ರೋರಾತ್ರಿ ಘಟಿಸುವಂತದ್ದಲ್ಲ. ಹಿಂದಿನ ಪ್ರಭಾವವನ್ನು ಹಂತಹಂತವಾಗಿ ಕಳಚಿಕೊಂಡು, ಹೊಸಬಗೆಯ ರೂಪವನ್ನು ನಿಧಾನಕ್ಕೆ ಧರಿಸುತ್ತಾ ಸಾಗಬೇಕಾಗುತ್ತದೆ. ಹಾಗಾಗಿ 2000ನೇ ಇಸವಿಯವರೆಗೂ ಒಂದಿಷ್ಟು ಸಹ್ಯ ಸಾಹಿತ್ಯಕ್ಕೆ ಅಲ್ಲಿ ಜಾಗವಿತ್ತು. ಆದರೆ ಆನಂತರ ‘ಹೊಸತನ’, `ಟ್ರೆಂಡ್’, `ಕ್ಯಾಚಿ’ ಹೆಸರಿನಲ್ಲಿ ನಡೆದಿದ್ದೆಲ್ಲವೂ ಸಿನಿಸಾಹಿತ್ಯದ ಅಪ್ಪಟ ಅಧಃಪತನ! ಅದೀಗ ಪ್ರೇಮನ `ಸರ್ಸೆ ಸರ್ಸೆ ಸೆರಗು ಸರ್ಸೆ….’ ಅನ್ನುವಲ್ಲಿಗೆ ಬಂದು ತಲುಪಿದೆ.

ಈಗೀಗ ಸಿನಿಮಾಕ್ಕಾಗಿ, ಕಥೆಗಾಗಿ ಸಾಹಿತ್ಯಗಳನ್ನು ಬರೆಯುವುದಕ್ಕಿಂತ ಏನನ್ನು ಬರೆದರೆ ರೀಲ್ಸ್‌ ಲೋಕದಲ್ಲಿ ವೈರಲ್‌ ಆಗುತ್ತದೆ, ಟ್ರೆಂಡಿಂಗ್‌ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿದ್ದಿಗೆ ಬಿದ್ದು ಹಾಡುಗಳನ್ನು ಹಡೆಯಲಾಗುತ್ತಿದೆ. ಇದು ಕೇವಲ ಗೀತರಚನೆಕಾರರ ತಪ್ಪು ಅಂತ ಹೇಳಲಿಕ್ಕಾಗದು. ಒಂದು ಸಿನಿಮಾದ ಯಶಸ್ಸಿಗೆ ಹೇಗೆ ಇಡೀ ಸಿನಿಮಾದ ಯೂನಿಟ್‌ನ ಪ್ರತಿಯೊಬ್ಬರ ಪಾಲುದಾರಿಕೆ ಇರುತ್ತದೋ, ಹಾಗೆಯೇ ಸಿನಿಮಾಸಾಹಿತ್ಯದ ಈ ಅಧಃಪತನದಲ್ಲು ಸಮಸ್ತ ಸಿನಿಮೋದ್ಯಮದ ಪಾಲು ಇದೆ. ಸಿನಿಮಾಸಕ್ತರಲ್ಲದವರು ನಿರ್ಮಾಪಕರುಗಳಾದಾಗ, ತೆವಲುಗಳಿಗಾಗಿ ನಿರ್ದೇಶಕರುಗಳು ಹುಟ್ಟಿಕೊಂಡಾಗ, ಫ್ಯಾಂಟಸಿಯ ಭ್ರಮಾಲೋಕಕ್ಕೆ ಮಾರುಹೋಗಿ ಕಾಸುಸುರಿದು ನಟರಾಗಲು ಹವಣಿಸುತ್ತಿರುವಾಗ, ಚಪಲಗಳು ವೃತ್ತಿಘನತೆಯನ್ನು ಹಾಳುಗೆಡವಿದಾಗ, ಎಲ್ಲಕ್ಕಿಂತ ಮುಖ್ಯವಾಗಿ ಸಿನಿಮಾವೊಂದರ ಕಸುವನ್ನು ಅದರ ಬಾಕ್ಸ್‌ ಆಫೀಸ್‌ ಗಳಿಕೆಯೇ ಅಂತಿಮವಾಗಿ ನಿರ್ಧರಿಸುವ ಸ್ಥಿತಿಗೆ ತಲುಪಿದಾಗ ಇಂಥಾ ಅಪಘಾತಗಳು ಸಂಭವಿಸದೆ ಬೇರೆ ದಾರಿ ಇಲ್ಲ.

ಹಾಗಾದರೆ ಹೊಸತನಗಳಿಗೆ ಪ್ರೋತ್ಸಾಹ ಸಿಗಬಾರದೆ? ಈ ಪ್ರಶ್ನೆಯೂ ನಮಗೆ ಮುಖ್ಯವಾಗಬೇಕು. ಅಷ್ಟಕ್ಕೂ, ಹೊಸತನ ಎಂದರೆ ಏನು? ಯಾವುದೇ ಕ್ಷೇತ್ರದಲ್ಲಿ ಹೊಸತನ ಎನ್ನುವುದು ಆ ಕ್ಷೇತ್ರದ ಮೂಲ ಧಾತುವನ್ನು ಹೊಸ ವಿಸ್ತಾರಕ್ಕೆ ಹಿಗ್ಗಿಸುವ ಪ್ರಯೋಗಗಳಾಗಿರಬೇಕೆ ಹೊರತು, ಮೂಲ ಧಾತುವನ್ನೆ ಹೊಸಕಿ ಹಾಕುವಂತಿರಬಾರದು. ಸಿನಿಮಾ ಒಳಗೊಂಡಂತೆ ಯಾವುದೇ ಕಲಾಪ್ರಾಕಾರಗಳ ಧಾತು ಏನು? ಆರ್ಥಿಕವಾಗಿ ಒಂದು ಸದೃಢ ವೃತ್ತಿಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಮನರಂಜನೆ ಮತ್ತು ಸಾಮಾಜಿಕ ಹೊಣೆಗಾರಿಕೆಗಳು ಕೂಡಾ ಕಲೆಗಳ ಧಾತುಗಳಾಗಿರುತ್ತವೆ. ಇವುಗಳ ನಡುವೆ ಸಂತುಲನೆ ಕಾಪಾಡಿಕೊಂಡು, ಇವುಗಳನ್ನು ಉದ್ದೀಪಿಸುವಂತಹ ಯಾವುದೇ ಯತ್ನಗಳನ್ನು ನಾವು ಹೊಸತನ ಎನ್ನಬಹುದು. ಆದರೆ ಆ ಮೂಲಧಾತುಗಳನ್ನೇ ಧ್ವಂಸಗೊಳಿಸುವಂತಹ ವಿಕೃತಿಗಳನ್ನು ಹೊಸತನ ಎನ್ನಲು ಸಾಧ್ಯವೇ? ಅಂತಹ ಹೊಸತನಗಳು ಲಘು ಮನರಂಜನೆಯನ್ನೇನೊ ನೀಡಬಹುದು, ಹಣ-ಖ್ಯಾತಿಯನ್ನೂ ತಂದುಕೊಡಬಲ್ಲವು, ಆದರೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲವೇ? ಹೊಣೆಗಾರಿಕೆಯನ್ನು ಕಳಚಿಕೊಂಡ ಹೊಸತನದಿಂದ ಏನು ಪ್ರಯೋಜನ?

ಅರವತ್ತರ ದಶಕದಲ್ಲಿ ಡಾ. ರಾಜ್‌ಕುಮಾರ್‍‌ ಅವರ ಜೇಮ್ಸ್‌ ಬಾಂಡ್‌ ಶೈಲಿಯ ಸರಣಿ ಚಿತ್ರಗಳು ಶುರುವಾದವು. ಜೇಡರ ಬಲೆ, ಗೋವಾದಲ್ಲಿ ಸಿಐಡಿ 999, ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿಐಡಿ 999, ಆಪರೇಷನ್‌ ಡೈಮಂಡ್ ರಾಕೆಟ್‌ ಹೀಗೆ ಸಾಲುಸಾಲು ಚಿತ್ರಗಳು ಬಂದವು. ಎಲ್ಲವೂ ಸೂಪರ್‍‌ ಹಿಟ್‌ ಸಿನಿಮಾಗಳು. ಸಹಜವಾಗಿಯೇ ಸಿನಿಮಾದಲ್ಲಿ ಪಾಶ್ಚಾತ್ಯ ಪ್ರಭಾವ ಢಾಳಾಗಿ ಕಾಣುತ್ತಿತ್ತು. ಆದರೆ, ಒಮ್ಮೆ ಒಬ್ಬರು ಹಿತೈಷಿಗಳು ರಾಜ್‌ ಅವರ ಬಳಿ ಮಾತಾಡುತ್ತಾ, “ನೀವು ನಾಡಿನ ಜನರಿಗೆ ಮಾದರಿಯಾಗಿದ್ದೀರಿ. ನಿಮ್ಮನ್ನು ದೈವದಂತೆ ನೋಡುವ ಕುಟುಂಬಗಳು ಚಿತ್ರಮಂದಿರಕ್ಕೆ ಬರುತ್ತವೆ. ವಿದೇಶಿ ಬಾಂಡ್‌ ಶೈಲಿಯಲ್ಲಿ ಅರೆಬರೆ ಉಡುಗೆಯಲ್ಲಿ ಹೆಣ್ಣುಮಕ್ಕಳನ್ನು ಪ್ರದರ್ಶನ ಮಾಡೋದು, ಅವರ ಜೊತೆ ನೀವು ಲೀಲಾಜಾಲವಾಗಿ ನಟಿಸೋದು ನೋಡುವುದಕ್ಕೆ ಕಷ್ಟವಾಗುತ್ತದೆ” ಎಂದು ತಕರಾರು ಮುಂದಿಟ್ಟರು. ಅದೇ ಕೊನೆ, ರಾಜ್‌ ಮತ್ತೊಂದು ಬಾಂಡ್‌ ಸಿನಿಮಾ ಮಾಡಲಿಲ್ಲ. ಆಪರೇಷನ್‌ ಡೈಮಂಡ್ ರಾಕೆಟ್‌ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ “ಮತ್ತೆ ಭೇಟಿಯಾಗೋಣ ಆಪರೇಷನ್ ಗೋಲ್ಡನ್ ಗ್ಯಾಂಗ್‌ನಲ್ಲಿ” ಎಂಬ ಘೋಷಣೆಯನ್ನೂ ಮಾಡಲಾಗಿತ್ತು. ಆದರೆ ಆ ಸಿನಿಮಾಕ್ಕೆ ರಾಜ್‌ಕುಮಾರ್‍‌ ಮುಂದಾಗಲೇ ಇಲ್ಲ. ಒಂದೆಡೆ ಬಂಗಾರದ ಮನುಷ್ಯದಂತಹ ಸಿನಿಮಾಗಳ ಮೂಲಕ ಒಂದು ಆದರ್ಶವಾಗಿ ರೂಪುಗೊಳ್ಳುತ್ತಿದ್ದ ರಾಜ್‌ರಿಗೆ ಆ ಕ್ಷಣಕ್ಕೆ ತನ್ನ ಸಾಮಾಜಿಕ ಹೊಣೆಗಾರಿಕೆಯ ಮನನವಾಗಿರಬಹುದು. ಆ ಬಾಂಡ್‌ ಸಿನಿಮಾಗಳು ಕನ್ನಡಕ್ಕೆ ಹೊಸತನದ ಮೂಲಕ ಅಪಾರ ಯಶಸ್ಸನ್ನು ತಂದುಕೊಡುತ್ತಿದ್ದರೂ ಅವರು ಅವುಗಳಿಂದ ದೂರ ಸರಿದರು.

ಕಲಾಮಾಧ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ರಸಿಕತೆ ಮತ್ತು ವಿಕೃತಿಗಳ ನಡುವೆ; ಹೆಣ್ಣಿನ ಸೌಂದರ್ಯೋಪಾಸನೆ ಮತ್ತು ಹೆಣ್ಣಿನ ಸೌಂದರ್ಯ ಶೋಷಣೆಯ ನಡುವೆ; ಆಕ್ರೋಶ ಮತ್ತು ಕ್ರೌರ್ಯದ ನಡುವೆ; ಪ್ರಚಾರ ಮತ್ತು ಪ್ರೊಪಾಗ್ಯಾಂಡಾ ನಡುವೆ ಇರುವ ವ್ಯತ್ಯಾಸವನ್ನು ಗ್ರಹಿಸುವ ಶಕ್ತಿ ಇರಬೇಕಾಗುತ್ತದೆ. ಆಗ ಮಾತ್ರ ಸಾಮಾಜಿಕ ಹೊಣೆಗಾರಿಕೆಯ ಮಹತ್ವ ಅರ್ಥವಾಗುತ್ತದೆ. ಹಾಗೆ ಅರ್ಥವಾದಾಗ ಇಲ್ಲಿನ ಮಣ್ಣಿನ ಕಥೆಗಳು ಹುಟ್ಟಿಕೊಳ್ಳುತ್ತವೆ; ಇಲ್ಲಿನ ಬದುಕುಗಳು ಅನಾವರಣಗೊಳ್ಳುತ್ತವೆ; ಸಾಹಿತ್ಯ-ಸಂಭಾಷಣೆ-ನಿರೂಪಣೆಗಳು ದೇಸೀ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಸಂವೇದನಾಶೀಲ ಪ್ರತಿಭಾವಂತರಿಗೆ ಅವಕಾಶ ಸಿಕ್ಕರೆ ಇವಿಷ್ಟನ್ನೂ ಹೊಸತನದ ಪ್ರಯೋಗಗಳ ಮೂಲಕವೆ ಮಾಡಿತೋರಿಸಬಲ್ಲರು. ಪಕ್ಕದ ತಮಿಳು, ಮಲಯಾಳಂ ಸಿನಿಮಾರಂಗಗಳು ಇದಕ್ಕೆ ಸಾಕ್ಷಿ. ಆದರೂ, ಕಾಸ್ಟಿಂಗ್‌ ಕೌಚ್‌, ಮೀ-ಟೂ ಪ್ರಕರಣಗಳನ್ನು ಕಂಡಾಗ ಸಾರ್ವತ್ರಿಕ ಸಿನಿಮಾರಂಗದ ಮೌಲ್ಯಗಳ ಪತನ ದಂಗುಬಡಿಸುತ್ತದೆ. ಹೆಣ್ಣಿನ ಅಸ್ಮಿತೆಯ ಬಗ್ಗೆ ಈ ಸಿನಿಮಾ ಜನ ತಳೆದಿರುವ ಅಸೂಕ್ಷ್ಮ ನಿಲುವುಗಳೆ `ಹೊಸತನ’, `ಟ್ರೆಂಡ್’, `ಕ್ಯಾಚಿ’ ಹೆಸರಿನಲ್ಲಿ ಪ್ರೇಮ್‌ನ ವಿಕೃತಿಯ ಹಾಡುಗಳಾಗಿ ಹೊರಬರುತ್ತಿವೆ. ಹಳಿತಪ್ಪಿದ ರೈಲು ಅಪಘಾತವಾಗಲೇಬೇಕಲ್ಲವೇ!

ಪ್ರೇಮ್‌ ಎಂಬ ಅವಿವೇಕಿಯ ತಿಕ್ಕಲುತನದಿಂದ ಇವತ್ತು ಆತ ಮಾತ್ರವಲ್ಲದೆ, ಇಡೀ ಕನ್ನಡ ಸಿನಿಮಾರಂಗ ಮುಜುಗರಕ್ಕೀಡಾಗಿದೆ. ಪ್ಯಾನ್‌ ಇಂಡಿಯಾ ಕ್ಯಾನ್ವಾಸಿನಲ್ಲಿ ತಯಾರಾಗಿರುವ ಆ ಸಿನಿಮಾದ ಈ ವಿವಾದಿತ ಹಾಡು ಹಿಂದಿ ಅವತರಣಿಕೆಯಲ್ಲೂ ಇದೆ, ಇಷ್ಟೇ ಅಸಭ್ಯ ಸಾಹಿತ್ಯದೊಂದಿಗೆ. ಅದನ್ನು ಈಗಾಗಲೇ ಕೇಂದ್ರ ವಾರ್ತಾ ಇಲಾಖೆ ತಡೆಹಿಡಿದಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಈ ಪ್ರೇಮ್‌ನನ್ನು ಹೊರಗಿನ ಜನ ಗುರುತಿಸೋದು ಕನ್ನಡ ಸಿನಿಮಾ ಇಂಡಸ್ಟ್ರಿಯ ವ್ಯಕ್ತಿಯಾಗಿ. ಹಾಗಾಗಿ ಇದು ಕನ್ನಡ ಇಂಡಸ್ಟ್ರಿಗೂ ಅವಮಾನದ ಸಂಗತಿ. ಏನಾದರಾಗಲಿ ಗೆಲ್ಲಲೇಬೇಕು ಎಂಬ ಧಾವಂತಕ್ಕೆ ಬಿದ್ದ ಇಂಥಾ ಸೋಕಾಲ್ಡ್‌ ಪ್ರತಿಭಾವಂತರಿಂದ ಕನ್ನಡಕ್ಕೆ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಷ್ಟೆಲ್ಲ ಮುಜುಗರ! ಕೆಲದಿನಗಳ ಹಿಂದೆ, ಕನ್ನಡ ಮೂಲದ ಪ್ಯಾನ್‌ ಇಂಡಿಯಾ ಸಿನಿಮಾವೊಂದರ ಟೀಸರ್‍‌ ಕೂಡಾ  ತನ್ನ ಹಸಿಬಿಸಿ ದೃಶ್ಯಗಳಿಂದ ಇಂತದೇ ಚರ್ಚೆಗೆ ಈಡಾಗಿತ್ತು. ಅವುಗಳೆಲ್ಲ ಬಾಕ್ಸ್‌ ಆಫೀಸ್‌ ಲೆಕ್ಕಾಚಾರದಲ್ಲಿ ಗೆಲ್ಲಲೂಬಹುದು; ಆದರೆ ಅವುಗಳ ಪರಿಣಾಮದಿಂದ ಮುಂದೊಂದು ದಿನ ಕನ್ನಡದ ಇಂಡಸ್ಟ್ರಿಗೆ ಈ ಬಗೆಯ ಮುಜುಗರಗಳು ತಪ್ಪಿದ್ದಲ್ಲ. `ಸರ್ಸೆ.. ಸರ್ಸೆ…’ ಸಾಹಿತ್ಯ ಅಂತದ್ದಕ್ಕೆ ಒಂದು ಮುನ್ನುಡಿಯಷ್ಟೆ!

Leave a Reply

Your email address will not be published. Required fields are marked *