ಅನಂತ್‌ಗೆ ಬಂದ ಪ್ರಶಸ್ತಿ ನಮಗೇಕೆ ಖುಷಿ ತರಲಿಲ್ಲ!

ಭಾರತದ ಸಿನಿಮಾ ರಂಗದ ಅತ್ಯುನ್ನತ ಗೌರವ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನಮ್ಮ ಅನಂತನಾಗ್‌ಗೆ ಸಂದಿದೆ. ಒಬ್ಬ ಕನ್ನಡಿಗನಿಗೆ ಈ ಪ್ರಶಸ್ತಿ ಸಂದುದಕ್ಕೆ ಯಾಕೋ ಖುಷಿ ಪಡಲಾಗುತ್ತಿಲ್ಲ! ಇದಕ್ಕೆ ಕಾರಣ ಅನಂತನಾಗರ ನಡವಳಿಕೆ ಇರಬಹುದು. ಸಿನಿಮಾ ವ್ಯಕ್ತಿಯಾಗಿ ಮಾತ್ರವಲ್ಲದೆ, ರಾಜಕಾರಣದಲ್ಲೂ ಹೆಜ್ಜೆ ಮೂಡಿಸಿದ್ದ ಅನಂತನಾಗ್‌ಗೆ ಅವರದೇ ಆದ ರಾಜಕೀಯ ನಿಲುವುಗಳು ಇರುವುದನ್ನು ನಾವು ಆಕ್ಷೇಪಿಸಲಾಗದು. ಆದರೆ ನಿಲುವಿಗೂ, ಚಮಚಾಗಿರಿಗೂ ತೆಳುವಾದ ಗೆರೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಆ ಗೆರೆಯನ್ನು ಅನಂತ್‌ ದಾಟಿ ಹೋಗಬಹುದೆಂದು ನಾವ್ಯಾರೂ ಊಹಿಸಿರಲಿಲ್ಲ. ಅಷ್ಟು ಮಾತ್ರ ಪ್ರಜ್ಞಾವಂತಿಕೆ ಅವರಲ್ಲಿದೆ ಎಂಬ ಕಾರಣಕ್ಕೆ ಈ ಮೊದಲು ಅನಂತ್‌ ನಮ್ಮೆಲ್ಲರ ಮೆಚ್ಚುಗೆ ಗೌರವ ಪಡೆದ ನಟರಾಗಿದ್ದರು. ಲಂಕೇಶ್‌ ಕೂಡ ಅನಂತ್‌ರ ಅಭಿನಯವನ್ನು ಮೆಚ್ಚಿದ್ದರು.

ಯಾವ ದೃಶ್ಯದಲ್ಲೂ ಅತಿ ಮಾಡದೆ ನಿಂತಲ್ಲಿ ಸಂಭಾಷಣೆ ಹೇಳಿ ಮುಗಿಸುವ ಈ ನಟ ಒಂಥರದಲ್ಲಿ ಸಾಮಾಜಿಕ ನಟ. ತನ್ನ ಸಹಜ ಮಾತುಗಳಿಂದಲೇ ಜನಮನ ಗೆದ್ದಾತ. ನಟನೆಗಾಗಿ ಕಷ್ಟಪಟ್ಟಿದ್ದಿಲ್ಲ. ಅನಂತನಾಗ್‌ ತರ ನಟಿಸಿದ್ದಾದರೆ, ಎಷ್ಟು ಸಿನಿಮಾದಲ್ಲಾದರೂ ನಟಿಸಬಹುದು. ಹೊಡೆದಾಟ, ಬಡಿದಾಟ, ಹುಲಿ ಕರಡಿಯ ಜೊತೆ ಹೋರಾಟ ಇದಾವುದೂ ಇಲ್ಲದೆ ಮಾತಿನ ಮಲ್ಲನಾಗಿ ನಟಿಸಿದ ಅನಂತ್‌ ಮಧ್ಯಮ ವರ್ಗದ ಪ್ರೇಕ್ಷಕರಿಗೆ ಇಷ್ಟವಾದ ನಟ.

ಕನ್ನಡ ಚಿತ್ರರಂಗ ನಾಯಕ ನಟರ ಕೊರತೆ ಎದುರಿಸುತ್ತಿದ್ದ ಕಾಲದಲ್ಲಿ ಕಾಣಿಸಿಕೊಂಡ ಅನಂತ್‌ ಸಾಹಸಿಂಹ, ಪ್ರಣಯರಾಜ ಇದಾವುದೂ ಆಗದೆ ಸಹಜಾಭಿನಯದಿಂದ ಜನಮನ ಗೆದ್ದರು. ಅಲ್ಲದೇ ತಮ್ಮ ಅಭಿಮಾನಿ ಸಂಘವಿರಬಾರದೆಂದರು. ಒಪ್ಪಿಕೊಂಡ ಸಿನಿಮಾಕ್ಕೆ ಸಂಭಾವನೆ ಪಡೆದು ಜೋಪಾನವಾಗಿ ಮಡದಿ ಗಾಯಿತ್ರಿಯವರ ಕೈಗೆ ಕೊಟ್ಟುಬಂದು, ಅಭಿನಯಿಸಿ ಹೋಗುತ್ತಿದ್ದರು. ಅನಂತ್‌ ಅಭಿನಯಿಸುವ ಚಿತ್ರದ ಸೆಟ್‌ಗೆ ಬಂದಾಗ ಜನ ಮುಗಿಬೀಳುವ ಸನ್ನಿವೇಶಗಳಿರಲಿಲ್ಲ. ಜನ ಜಂಗುಳಿಯಿರುತ್ತಿರಲಿಲ್ಲ. ಒಂಥರದ ನಿರ್ಜನ ಜಾಗದಲ್ಲಿ ನಟಿಸಿ ಹೋಗುತ್ತಿದ್ದ ಅನಂತ್‌ ನಮ್ಮೆಲ್ಲರ ನೆಚ್ಚಿನ ನಟರಾಗಿದ್ದರು.

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ರಾಜಕಾರಣಕ್ಕೆ ಬಂದ ಅನಂತ್‌, ಹೆಗಡೆಯವರ ಪರ ಇಡೀ ನಾಡನ್ನು ತಿರುಗಿ, ಆಗ ತಾನೇ ಬಿಡುಗಡೆಯಾಗಿದ್ದ ಬೆಂಕಿಬಲೆ ಚಿತ್ರದ ಹಾಡುಗಳನ್ನು ಹೇಳಿ, ಜನತಾ ಪಕ್ಷಕ್ಕೆ ಜನಗಳ ಓಟು ಬೀಳುವಂತೆ ಮಾಡುವಲ್ಲಿ ಸಣ್ಣ ಪಾತ್ರ ವಹಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಜೆ ಎಚ್ ಪಟೇಲರು ಮುಖ್ಯಮಂತ್ರಿಗಳಾದಾಗ ನಗರಾಭಿವೃದ್ಧಿ ಸಚಿವರನ್ನಾಗಿ ಮಾಡಿದರು. ತುಂಬಾ ಕೆಲಸವಿದ್ದ ಈ ಖಾತೆಯನ್ನು ಅನಂತ್‌, ಪಟೇಲರೊಡನೆ ಸಂಜೆಗೋಷ್ಠಿಯಲ್ಲೆ ಕಳೆದರು. ಕೊನೆಗೆ ಖಾತೆಯೇ ಇಲ್ಲದ ಮಂತ್ರಿಯೂ ಆಗಿದ್ದರು.

ಮುಂದೆ ನಡೆದ ಚುನಾವಣೆಯಲ್ಲಿ ಜನ ಮನೆಗೆ ಕಳಿಸಿದರು. ಇದಕ್ಕೆ ಉತ್ತರವಾಗಿ ಅನಂತ್‌ ‘ರಾಜಕಾರಣ ನಮ್ಮಂತವರಿಗಲ್ಲ’ ಎಂದರು. ಪಟೇಲರ ಸರಕಾರವನ್ನು ಹತ್ತಿರದಿಂದ ನೋಡಿದ ಬಾಲಸುಬ್ರಹ್ಮಣ್ಯ ಎಂಬ ಮುಖ್ಯ ಕಾರ್ಯದರ್ಶಿ ಅನಂತನಾಗರ ತೇಜೋವಧೆಯಾಗುವಂತಹ ಅಭಿಪ್ರಾಯಗಳನ್ನು ಈಚೆಗೆ ವ್ಯಕ್ತ ಮಾಡಿದ್ದುಂಟು. ಪಟೇಲರ ಫ್ರೆಂಡ್‌ ಎಂದಮೇಲೆ ಇವುಗಳನ್ನು ತಳ್ಳಿಹಾಕುವುದೂ ಕಷ್ಟ.

ಅದೇನೆ ಇರಲಿ, ಅನಂತ್‌ ಇತ್ತೀಚೆಗೆ ಮೋದಿಯನ್ನು ಹೊಗಳಿ ಬುದ್ದಿಜೀವಿ ವಲಯವನ್ನು ಬೆಚ್ಚಿಬೀಳಿಸಿದರು. ‘ಕಳೆದ 30 ವರ್ಷಗಳಿಂದ ಮೋದಿಯನ್ನು ಗಮನಿಸಿದ್ದೇನೆ ಅವರೊಬ್ಬ ಮಹಾನಾಯಕ. ಪ್ರಶಸ್ತಿ ಬರುವುದಕ್ಕು ಮೊದಲೇ ಅಭಿನಂದಿಸಿ ಫೋನ್‌ ಮಾಡಿದರು’ ಎಂದು ತಮ್ಮ ಜನ್ಮ ಸಾರ್ಥಕವಾದಂತೆ ಪ್ರತಿಕ್ರಿಯಿಸಿದ್ದಾರೆ. ಲಂಕೇಶ್‌ ಎದುರು ಕೂತು ಮಹಾ ಸಮಾಜವಾದಿಗಳಂತೆ ಮಾತನಾಡಿದ ಹಲವಾರು ಜನರನ್ನು ನೋಡಿದ್ದೇನೆ. ಲಂಕೇಶರೇ ಮೆಚ್ಚಿದ್ದ ಅವರ ಇಬ್ಬರು ವರದಿಗಾರರು ರೆಡ್ಡಿ-ರಾಮುಲು ಬಳಿ ಮಂತ್ಲಿ ಸಂಭಾವನೆಗೆ ಸೇರಿಕೊಂಡಿದ್ದನ್ನು ನೋಡಿರುವಾಗ ಇನ್ನು ಅನಂತನಾಗ್‌ ಬಿಜೆಪಿಯವರನ್ನು ಮೀರಿಸುವಂತೆ ಹೊಗಳಿದ್ದು ನಮಗೇನು ಆಶ್ಚರ್ಯ ತಂದಿಲ್ಲ. ಬಹುಶಃ ಲಂಕೇಶ್‌ ಇದ್ದಿದ್ದರೆ ಮಾತಿನ ವರಸೆ ಬದಲಾಗುತ್ತಿದ್ದವೇನೊ.

ಈ ಸಮಯದಲ್ಲಿ ಅನಂತನಾಗ್‌ರನ್ನು ಗಮನಿಸಿದರೆ, ಹಿಂದೆ ಬುದ್ದಿಜೀವಿಯಂತೆ ಬದುಕಿದ್ದು ಕೂಡಾ ಯಾವುದೋ ಸಿನಿಮಾದ ಸೋಗಲಾಡಿ ಪಾತ್ರದ ನಟನೆಯಂತೆ ಭಾಸವಾಗುತ್ತದೆ. ಏಕೆಂದರೆ, ಇವರ ಮೆಚ್ಚಿನ ಪ್ರಧಾನಿ ನಮಗೂ ಮೆಚ್ಚುಗೆಯೆ, ಆದರೆ ವ್ಯಕ್ತಿಯಾಗಿ ಭಯಾನಕ ಪ್ರವೃತ್ತಿಯವರು. ಉದಾಹರಣೆಗೆ, ಈ ದೇಶ ಕಂಡ ಕೆಲವು ಭಯಂಕರ ದೃಶ್ಯಗಳಿಗೆ ಮೋದಿ ಇನ್ನೂ ಪ್ರತಿಕ್ರಿಯಿಸಿಲ್ಲ. ಅದರಲ್ಲಿ ಮೊದಲನೆಯದಾಗಿ ನಮಗೆ ಅನ್ನ ಕೊಡುವ ರೈತ ಪ್ರತಿಭಟನೆಗಾಗಿ ಬರುವಾಗ ಅವರ ದಾರಿಗೆ ಮುಳ್ಳು ಹರಡಿ, ಕಂದಕ ತೋಡಿ, ತಂತಿಬೇಲಿ ಹಾಕಿದ್ದಲ್ಲದೇ ಒಂದು ವರ್ಷ ರೈತರು ಪ್ರತಿಭಟಿಸಿ 750 ಜನ ಅಸುನೀಗಿದಾಗ ಮೋದಿ ಪ್ರತಿಕ್ರಿಯಿಸಲಿಲ್ಲ. ಸಿದ್ದೇಶ್ವರ ಸ್ವಾಮಿ, ಶಿವಮೊಗ್ಗ ಸುಬ್ಬಣ್ಣ ತೀರಿಕೊಂಡಾಗ ಆ ಕುಟುಂಬಗಳಿಗೆ ಸಾಂತ್ವನ ಹೇಳುವ ಸೌಜನ್ಯ ಪ್ರದರ್ಶಿಸುವ ಮೋದಿಗೆ ಪ್ರಧಾನಿಯಾಗಿ ರೈತರ ಪ್ರತಿಭಟನೆಗೆ ಪ್ರತಿಕ್ರಿಯಿಸುವುದು ಹೊಣೆಗಾರಿಕೆಯಾಗಿರಲಿಲ್ಲವೇ?

ನಮ್ಮ ಮಹಾಭಾರತದಲ್ಲಿ ಕೌರವನ ಸಭಾಂಗಣದಲ್ಲಿ ದ್ರೌಪದಿ ಸೀರೆ ಎಳೆದಾಡಿದ ಪ್ರಸಂಗವಿದೆ. ಮಹಾಕಾವ್ಯದ ಅತಿ ಪ್ರಧಾನ ವಸ್ತು ಅದು. ಅದೇರೀತಿ, ಮಣಿಪುರದಲ್ಲಿ ಹೆಣ್ಣುಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿದರು. ಸಾರ್ವಜನಿಕವಾಗಿ ಆ ಹೆಣ್ಣುಮಕ್ಕಳ ಮರ್ಮಾಂಗ ಮುಟ್ಟಿದರು. ಈ ದೇಶವನ್ನು ದಂಗುಬಡಿಸಿದ ಆ ದೃಶ್ಯಕ್ಕೆ ಪ್ರಧಾನಿಯಾಗಲಿ, ಗೃಹಸಚಿವರಾಗಲಿ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಲಿಲ್ಲ. ಇಂತಹ ಒಂದು ಡಜನ್‌ ಕಾರಣಗಳನ್ನು ಕೊಡಬಹುದು.

ಅನಂತನಾಗ್‌ ಬಗ್ಗೆ ಯೋಚಿಸುತ್ತಾ ಲಂಕೇಶರು ಬರೆದ ದೂಬಾಯಿ ಪಾದ್ರಿ (ಫಾದರ್ ಅಬೇ ದುಬೋಯಿಸ್) ನೆನಪಿಗೆ ಬಂದರು. ಟಿಪ್ಪೂ ಕಾಲದಲ್ಲಿ ಫ್ರಾನ್ಸ್‌ನಿಂದ ಮೈಸೂರಿಗೆ ಬಂದ ಈ ಪಾದ್ರಿಯ ಉದ್ದೇಶ ಮತಾಂತರ ಮಾಡುವುದಾಗಿತ್ತು. ಆದರೆ ಇಲ್ಲಿ ಜಾತಿ ಅಸ್ಪೃಷ್ಯತೆ, ಮೂಢನಂಬಿಕೆ, ಅಸಮಾನತೆಯ ಕಾರಣಕ್ಕೆ ಪಶು ಪಕ್ಷಿ ಪ್ರಾಣಿಗಳಿಗೂ ಕಡೆಯಾಗಿ ಬದುಕುತ್ತಿರುವ ಮನುಷ್ಯರ ಧಾರುಣ ಜೀವನ ನೋಡಿ ದಂಗುಬಡಿದು ಹೋಗುತ್ತಾರೆ. ಕೊನೆಗೆ ತನ್ನ ಸ್ವದೇಶಕ್ಕೆ ಮರಳಿ, “Hindu Manners, Customs and Ceremonies” ಎಂಬ ಕೃತಿಯ ಮೂಲಕ ಇಲ್ಲಿನ ಆಚಾರ, ರೂಢಿಗಳು, ಮೌಢ್ಯಗಳು, ಶೋಷಣೆಗಳ ಬಗ್ಗೆ ಬೆಳಕು ಚೆಲ್ಲುತ್ತಾನೆ. ದೂಬಾಯಿ ಪಾದ್ರಿಗೆ ಕಂಡ ದೃಶ್ಯ ನಮ್ಮ ಕನ್ನಡದ ಲೇಖಕರಿಗೆ ಏಕೆ ಕಾಣಲಿಲ್ಲ ಎಂದು ಲಂಕೇಶ್ ಪ್ರಶ್ನಿಸುತ್ತಾರೆ.

ಹಾಗೆಯೇ ನಮ್ಮಂತಹ ಹುಲು ಮಾನವರಿಗೆ ಕಾಣುವ ಮೋದಿ ನಡವಳಿಕೆ ಈ ಅನಂತನಾಗ್‌ಗೆ ಏಕೆ ಕಾಣಲಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಬೇಕಿದೆ. ಫಾಲ್ಕೆ ಪ್ರಶಸ್ತಿಯಲ್ಲ, ಆಸ್ಕರ್‍‌ ಬಂದರೂ ನಮಗ್ಯಾವ ಸಂಭ್ರಮವನ್ನೂ ತಾರದಷ್ಟು ದೂರಕ್ಕೆ ಅನಂತ್‌ ಹೋಗಿದ್ದಾರೆ. ಆದರೂ ಅನಂತ್‌ ಒಳ್ಳೆಯ ನಟ!

  • ಬಿ ಚಂದ್ರೇಗೌಡ

ಲೇಖಕರು ಹಿರಿಯ ಕನ್ನಡ ಸಾಹಿತಿ, ಪತ್ರಕರ್ತ. ಹೆಸರಾಂತ ಲಂಕೇಶ್‌ ಪತ್ರಿಕೆಯಲ್ಲಿ ಗ್ರಾಮೀಣ ಸೊಗಡಿನ ‘ಕಟ್ಟೆಪುರಾಣ’ ಅಂಕಣದ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದರು. ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಾಳಮಾವನ ಕಡೇದಿನಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

Disclaimer: ನ್ಯೂಸ್ ಫೋಕಸ್.ಇನ್ ಪೋರ್ಟಲ್ ವೈವಿಧ್ಯಮಯ ಅಭಿಪ್ರಾಯಗಳಿಗೆ ಅವಕಾಶ ನೀಡುತ್ತದೆ. ಇಲ್ಲಿ ಅತಿಥಿ ಬರಹಗಾರರು ಅಥವಾ ಅಂಕಣಕಾರರು ವ್ಯಕ್ತಪಡಿಸುವ ಅನಿಸಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಅವುಗಳಿಗೆ ಸಂಪಾದಕೀಯ ಮಂಡಳಿಯ ಸಮ್ಮತಿ ಇದೆ ಎಂದರ್ಥವಲ್ಲ.

Leave a Reply

Your email address will not be published. Required fields are marked *